Wednesday, 27th November 2024

ಪ್ರಣಬ್ ಮುಖರ್ಜಿ ನಿಧನ:ಗಣ್ಯರ ಸಂತಾಪ

ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಇನ್ನಿಲ್ಲ ಎಂಬ ಸುದ್ದಿ ತುಂಬಾ ಬೇಸರವಾಗಿದ್ದು, ಅವರ ನಿಧನ ಒಂದು ಯುಗ ಅಂತ್ಯವಾದಂತಾಗಿದೆ. ಭಾರತ ಮಾತೆ ಅತ್ಯುನ್ನತ ಪುತ್ರನನ್ನು ಕಳೆದುಕೊಂಡಿದ್ದಾಳೆ.
 ಭಾರತ ಮಾತೆಯ ಸೇವೆಯನ್ನು ನಿಸ್ವಾರ್ಥ ಭಾವದಿಂದ ಸಲ್ಲಿಸಿದ್ದಾರೆ. ಸಾಂಪ್ರದಾಯಿಕ ಹಾಗೂ ಆಧುನಿಕತೆಯನ್ನು ಮೈಗೂಡಿಸಿಕೊಂಡಿದ್ದ ಭಾರತ ರತ್ನ ಪ್ರಣಬ್‌ ಮುಖರ್ಜಿ ಅವರ 5 ದಶಕಗಳ ಸುದೀರ್ಘವಾದ ಸಾರ್ವಜನಿಕ ಜೀವನ ಜನಪರವಾಗಿತ್ತು. ಪಕ್ಷಾತೀತವಾಗಿ ಎಲ್ಲರಿಗೂ ಸ್ನೇಹಿತರಾಗಿದ್ದರು.
ರಾಷ್ಟಪತಿ ಯಾಗಿದ್ದಾಗ ರಾಷ್ಟ್ರಪತಿ ಭವನವನ್ನು ಜನಸ್ನೇಹಿ ಯಾಗಿಸಿದ್ದು ಪ್ರಣಬ್‌ ದಾ ಅವರ ಹೆಚ್ಚುಗಾರಿಕೆ. ಪ್ರಣಬ್ ಮುಖರ್ಜಿ ಅವರ ಕುಟುಂಬ, ಸ್ನೇಹಿತರು ಹಾಗೂ ನಾಗರಿಕರಿಗೆ ಅವರ ನಿಧನ ತಡೆದುಕೊಳ್ಳುವ ಶಕ್ತಿ ನೀಡಲಿ.
-ರಾಮನಾಥ್ ಕೋವಿಂದ್, ರಾಷ್ಟ್ರಪತಿ
….
ಭಾರತ ರತ್ನ ಶ್ರೀ ಪ್ರಣಬ್ ಮುಖರ್ಜಿ ಅವರ ನಿಧನ ಭಾರತಕ್ಕೆ ದು:ಖ ತಂದಿದೆ. ಅವರು ನಮ್ಮ ರಾಷ್ಟ್ರದ ಅಭಿವೃದ್ಧಿ ಪಥದಲ್ಲಿ ಅಳಿಸಲಾಗದ ಗುರುತು ಹಾಕಿದ್ದಾರೆ. ಶ್ರೇಷ್ಠ ವಿದ್ವಾಂಸ, ಉನ್ನತ ರಾಜಕಾರಣಿ ಮತ್ತು ಎಲ್ಲ ವರ್ಗದ ರಾಜಕಾರಣಿಗಳು ಅವರು.
ರಾಜಕೀಯ ಜೀವನದಲ್ಲಿ ಪ್ರಮುಖವಾಗಿ ಆರ್ಥಿಕ ಮತ್ತು ವಿವಿಧ ಸಚಿವಾಲಯಗಳನ್ನು ನಿರ್ವಹಿಸಿ ಕೊಡುಗೆಗಳನ್ನು ನೀಡಿದ್ದಾರೆ. ಅವರು ಅತ್ಯುತ್ತಮ ಸಂಸದರಾಗಿದ್ದರು, ಯಾವಾಗಲೂ ಸಿದ್ಧರಾಗಿಯೇ ಬರುತ್ತಿದ್ದರು. ಅತ್ಯಂತ ಸ್ಪಷ್ಟವಾಗಿ ಹೇಳುತ್ತಿದ್ದರು. ಪ್ರಣಬ್ ಮುಖರ್ಜಿಯವರು ಭಾರತದ ಅಧ್ಯಕ್ಷರಾಗಿದ್ದ ವೇಳೆ ರಾಷ್ಟ್ರಪತಿ ಭವನವನ್ನು ಸಾಮಾನ್ಯ ನಾಗರಿಕರು ಪ್ರವೇಶಿಸುವಂತೆ ಮಾಡಿದರು. ತಮ್ಮ ನಿವಾಸವನ್ನು ಕಲಿಕೆ, ನಾವೀನ್ಯತೆ, ಸಂಸ್ಕೃತಿ, ವಿಜ್ಞಾನ ಮತ್ತು ಸಾಹಿತ್ಯದ ಕೇಂದ್ರವನ್ನಾಗಿ ಮಾಡಿದರು. ಪ್ರಮುಖ ನೀತಿ ವಿಷಯಗಳಲ್ಲಿ ಅವರು ನೀಡಿದ ಬುದ್ಧಿವಂತ ಸಲಹೆಯನ್ನು ನಾನು ಎಂದಿಗೂ ಮರೆಯುವುದಿಲ್ಲ.
2014 ರಲ್ಲಿ ನಾನು ದೆಹಲಿಗೆ ಹೊಸಬನಾಗಿದ್ದೆ. ಮೊದಲ ದಿನದಿಂದ ಶ್ರೀ ಪ್ರಣಬ್ ಮುಖರ್ಜಿ ಅವರ ಮಾರ್ಗದರ್ಶನ, ಬೆಂಬಲ ಮತ್ತು ಆಶೀರ್ವಾದ ಸಿಕ್ಕಿತ್ತು. ಅವರೊಂದಿಗಿನ ಸಂವಹನ ನನಗೆ ಬಹಳ ಇಷ್ಟವಾಗುತ್ತಿತ್ತು. ಅವರ ಕುಟುಂಬ, ಸ್ನೇಹಿತರು, ಅಭಿಮಾನಿಗಳಿಗೆ ದು:ಖ ಭರಿಸುವ ಶಕ್ತಿ ನೀಡಲಿ. ಓಂ ಶಾಂತಿ.
-ನರೇಂದ್ರ ಮೋದಿ, ಪ್ರಧಾನಮಂತ್ರಿ
……..
ಪ್ರಣಬ್ ಮುಖರ್ಜಿ ಅವರ ನಿಧನದಿಂದ ತೀವ್ರ ನೋವಾಗಿದೆ. ಅವರನ್ನು ಸಮಾಜದ ಎಲ್ಲಾ ವರ್ಗಗಳ ಜನರು ವ್ಯಾಪಕವಾಗಿ ಗೌರವಿಸುತ್ತಿದ್ದರು. ಅವರ ನಿಧನದಿಂದ ವೈಯುಕ್ತಿಕವಾಗಿ ನಷ್ಟವಾಗಿದೆ. ಅವರು ಭಾರತ ಇತಿಹಾಸ, ರಾಜತಾಂತ್ರಿಕತೆ, ಸಾರ್ವಜನಿಕ ನೀತಿ ಮತ್ತು ರಕ್ಷಣೆಯ ಬಗ್ಗೆ ಅಪಾರ ಜ್ಞಾನ ಹೊಂದಿದ್ದರು.
-ರಾಜನಾಥ್ ಸಿಂಗ್, ಕೇಂದ್ರ ರಕ್ಷಣಾ ಸಚಿವ
……
ಮಾಜಿ ರಾಷ್ಟ್ರಪತಿ ಶ್ರೀ ಪ್ರಣಬ್ ಮುಖರ್ಜಿ ಅವರ ನಿಧನದಿಂದ ತೀವ್ರ ದುಃಖತಪ್ತನಾಗಿದ್ದೇನೆ. ಅವರ ಸಾವಿನಿಂದಾಗಿ ಭಾರತ ದೇಶವು ಹಿರಿಯ ರಾಜಕಾರಣಿಯನ್ನು ಕಳೆದುಕೊಂಡಂತಾಗಿದೆ. ಅವರ ಶ್ರಮ, ಶಿಸ್ತು ಮತ್ತು ಸಮರ್ಪಣೆಯ ಭಾವದ ಮೂಲಕ ದೇಶದ ಅತ್ಯುನ್ನತ ಸಾಂವಿಧಾನಿಕ ಸ್ಥಾನವನ್ನು ಪಡೆದುಕೊಳ್ಳವ ಮಟ್ಟಕ್ಕೆ ಏರಿದ್ದರು.
-ವೆಂಕಯ್ಯನಾಯ್ಡು, ಉಪ ರಾಷ್ಟ್ರಪತಿ