Wednesday, 30th October 2024

ಸರಕಾರಿ ಇಲಾಖೆಯಲ್ಲಿ ನಿಯೋಜನೆ ಅಧಿಕಾರಿಗಳ ದರ್ಬಾರ್​ 

ಬೆಂಗಳೂರು:
ರಾಜ್ಯದ ಸರಕಾರಿ ಇಲಾಖೆಗಳಲ್ಲಿ ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ಅವಧಿ ಮುಗಿದಿದ್ದರೂ ಮಾತೃ ಹುದ್ದೆಗೆ ತೆರಳದೆ ಇನ್ನೂ ಅದೇ ಹುದ್ದೆಗಳಲ್ಲಿ ಮುಂದುವರಿದಿದ್ದಾರೆ.
ರಾಜೀವ್​ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ಆರ್​ಜಿಯುಎಚ್​ಎಸ್​) ಸೇರಿ ವಿವಿಧ ಇಲಾಖೆಗಳಲ್ಲಿ ಅವಧಿ ಮುಗಿದಿದ್ದರೂ ಐದಾರು ವರ್ಷಗಳಿಂದ ಅದೇ ಹುದ್ದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೆಲವರಂತೂ ರಾಜಕೀಯ ಪ್ರಭಾವಿ ಬಳಸಿ ಅದೇ ಹುದ್ದೆಯಲ್ಲಿ ಬಲವಾಗಿ ಬೇರೂರಿರುವ ನಿದರ್ಶನಗಳು ಕೂಡ ಇವೆ.
2013ರ ಸೆಕ್ಷನ್​6 ರನ್ವಯ ನಿಯೋಜನೆ ಮೇರೆಗೆ ನೇಮಿಸಿದ ಅಧಿಕಾರಿಗಳ ಅವಧಿ 3ಗಳಾಗಿದ್ದು, ಅವಧಿ ಮುಗಿದಿರುವ ಅಧಿಕಾರಿಗಳು ಮಾತೃ ಹುದ್ದೆಗೆ ತೆರಳುವಂತೆ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಆದರೂ, ಈ ಆದೇಶ ಧಿಕ್ಕರಿಸಿ ಕೆಲ ಅಧಿಕಾರಿಗಳು ಲಾಭಧಾಯಕ ಹುದ್ದೆಗಳಲ್ಲಿ  ತೊಡಗಿಸಿಕೊಂಡು ಕೋಟ್ಯಂತರ ಹಣ ಮಾಡುತ್ತಿರುವ ಬಗ್ಗೆ ಗಂಭೀರ ಆರೋಪಗಳಿವೆ.
ವೈದ್ಯರೇ ಜಾಸ್ತಿ
ರಾಜೀವ್​ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಯಲ್ಲಿ ನಿಯೋಜನೆ ಮೇರೆಗೆ ಒಟ್ಟು 32 ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ 13 ಅಧಿಕಾರಿಗಳ ಅವಧಿ ಈಗಾಗಲೇ ಮುಗಿದಿದೆ. ಡಾ. ಎಸ್​.ರಿಯಾಜ್​ ಭಾಷಾ, ಡಾ.ಷಣ್ಮುಖಪ್ಪ, ಡಾ.ಎಸ್​.ಟಿ.ಶ್ರೀನಿವಾಸಮೂತಿರ್ ಇತರೆ ಅಧಿಕಾರಿಗಳು ನಿಯೋಜನೆ ಮೇರೆಗೆ ಉಪ ಕುಲಸಚಿವರು ಸೇರಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಆ  ಎಲ್ಲ ಅಧಿಕಾರಿಗಳ ಅವಧಿ ಮುಗಿದಿದೆ. ಅಲ್ಲದೆ, ಇಂಥ ಅಧಿಕಾರಿಗಳು ತಮ್ಮ ಮಾತೃ ಹುದ್ದೆಗಳಲ್ಲಿ ತೆರಳಿ ಕೆಲಸ ಮಾಡುವಂತೆ ತೆರಳುವಂತೆ ಸರಕಾರ ಆದೇಶಿಸಿದ್ದರೂ ಇನ್ನೂ ಹೋಗದಿರುವುದು ದುರದೃಷ್ಟಕರ.
ಒಂದು ಬಾರಿ ಅವಕಾಶ
ಪರಸ್ಪರ ವರ್ಗಾವಣೆ ಹಾಗೂ ನಿಯೋಜನೆ ಸೌಲಭ್ಯವನ್ನು ಸರ್ಕಾರಿ ನೌಕರನ ಸೇವಾವಧಿಯಲ್ಲಿ ಒಂದು   ಬಾರಿ ಮಾತ್ರ ನೀಡಬಹುದು. ಆದರೆ, ಕೆಲವರಂತೂ ರಾಜಕೀಯ ಪ್ರಭಾವ ಬಳಸಿ ತಮಗಿಷ್ಟ ಹುದ್ದೆಗಳಲ್ಲಿ ನಿಯೋಜನೆ ಮಾಡಿಸಿಕೊಳ್ಳುತ್ತಿರುವುದು ದುರದೃಷ್ಟಕರ.
 ಅಲ್ಲದೆ, ಸರಕಾರಿ ನೌಕರರನ್ನು ಒಂದು ಇಲಾಖೆಯಿಂದ ಇನ್ನೊಂದು ಇಲಾಖೆ ನಿಯೋಜನೆ ಮಾಡುವ ಸಂದರ್ಭದಲ್ಲಿ ಮಾತೃ ಇಲಾಖೆಯ ಅನುಮತಿ ಪಡೆಯುವುದು ಕಡ್ಡಾಯವೆಂದು ಸರಕಾರವೇ ತಿಳಿಸಿದೆ. ಆದರೆ, ಇತ್ತೀಚಿನ ಹಲವು ಪ್ರಕರಣಗಳಲ್ಲಿ ನಿಯೋಜನೆ ಮೇರೆಗೆ ವರ್ಗಾಯಿಸುವ ಸಂದರ್ಭದಲ್ಲಿ ಮಾತೃ ಇಲಾಖೆಯು ನಿಯೋಜನೆ ಆದೇಶ ಆಗುವ ಮೊದಲೇ ಕರ್ತವ್ಯದಿಂದ ಬಿಡುಗಡೆಯಾಗುತ್ತಿದ್ದಾರೆ. ಈ ಕ್ರಮದಿಂದ ಸರಕಾರಿ ಕೆಲಸಗಳಿಗೆ ತೊಂದರೆ ಆಗುವುದಲ್ಲದೆ ಸರಕಾರಿ ಬೊಕ್ಕಸಕ್ಕೆ ನಷ್ಟ ಆಗುತ್ತಿದೆ.