Wednesday, 30th October 2024

ಕರೋನಾ ಟೆಸ್ಟ್ ಸಂಖ್ಯೆ 30 ಸಾವಿರಕ್ಕೆ ಹೆಚ್ಚಳ: ಮಂಜುನಾಥ್ ಪ್ರಸಾದ್

ವಿಶ್ವವಾಣಿ ಸುದ್ದಿಮನೆ
ಬೆಂಗಳೂರು:
ನಗರದಲ್ಲಿ ಜುಲೈ ತಿಂಗಳಿಗೆ ಹೋಲಿಸಿದರೆ ಆಗಸ್ಟ್ ತಿಂಗಳಿನಲ್ಲಿ ಹೆಚ್ಚು ಕೇಸ್ ಬಂದಿದೆ. ಏಕೆಂದರೆ ಅತೀ ಹೆಚ್ಚು ಪರೀಕ್ಷೆ ಮಾಡಿದ್ದು, ದಿನಕ್ಕೆ 3 ಸಾವಿರ ಇದ್ದ ಟೆಸ್ಟ್ ಸಂಖ್ಯೆನ್ನು 30 ಸಾವಿರಕ್ಕೆ ಹೆಚ್ಚಿಸಿದ್ದೇವೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮಾಹಿತಿ ನೀಡಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಕರೋನಾ ನಿರ್ವಹಣೆ ಕುರಿತು ಮಾಹಿತಿ ನೀಡಿದ ಅವರು, ಕಳೆದ ಮೂರು ದಿನಗಳಿಂದ ದಿನಕ್ಕೆ 30 ಸಾವಿರ ಕರೋನಾ ಪರೀಕ್ಷೆ ಮಾಡಿದ್ದೇವೆ. ಪರೀಕ್ಷೆ ಮಾಡಿದ ಸ್ಯಾಂಪಲ್ ನಲ್ಲಿ ಶೇ.10 ರಷ್ಟು ಪಾಸಿಟಿವ್ ಬಂದಿದೆ. ಕಳೆದ 7 ದಿನದಲ್ಲಿ ಅಂಕಿ ಅಂಶದ ಅನ್ವಯ ಆಗಸ್ಟ್ 31ರಂದು 31,961 ಟೆಸ್ಟ್ ಮಾಡಲಾಗಿದೆ. ಆದರೆ ಹೆಚ್ಚುತ್ತಿರುವ ಪ್ರಕರಣಗಳ ಬಗ್ಗೆ ಚಿಂತೆ ಬೇಡ. ಪರೀಕ್ಷೆ ಜಾಸ್ತಿ ಮಾಡಿ ವರದಿ ಸಹ ಅದಕ್ಕೆ ತಕ್ಕಂತೆ ಬಂದಿದೆ ಎಂದು ತಿಳಿಸಿದರು.
ನಗರದ ಕಂಟೈನ್‍ಮೆಂಟ್ ಝೋನ್‍ಗಳ ಬಗ್ಗೆ ಹಲವು ಬದಲಾವಣೆಗಳಾಗಿವೆ.
17,159 ಪ್ರಕರಣಗಳಲ್ಲಿ ಬ್ಯಾರಿಕೇಟ್ ಮಾಡುತ್ತಿಲ್ಲ. ಒಂದೇ ಸ್ಥಳದಲ್ಲಿ 3 ಪ್ರಕಣಗಳಿಗಿಂತ ಹೆಚ್ಚಿದ್ದರೆ ಆ ಸ್ಥಳದಲ್ಲಿ ಮಾತ್ರ ಕಂಟೈನ್‍ಮೆಂಟ್ ಮಾಡುತ್ತಿದ್ದು, 1,018 ಇದೆ. ಅಲ್ಲದೇ ಕರೋನಾ ಸೋಂಕಿತ ವ್ಯಕ್ತಿಯ ಮನೆಯ ಎದುರು ಪೋಸ್ಟರ್ ಕೂಡ ಇರಲ್ಲ. ಅಕ್ಕ ಪಕ್ಕದ ಮನೆಯವರಿಗೆ ಮಾಹಿತಿ ನೀಡುತ್ತೇವೆ. ಸರಕಾರದ ಸೂಚನೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವಿವರಿಸಿದರು.
ಕರೋನಾ ಪರೀಕ್ಷೆಗಳ ಸಂಖ್ಯೆ ಹೆಚ್ಚಳ ಮಾಡಲು ಮಾತ್ರ ಸೂಚನೆ ನೀಡಲಾಗಿದೆ. ಯಾವುದೇ ಟಾರ್ಗೆಟ್ ನೀಡಲ್ಲ. ಸಾರಿ, ಐಎಲ್‍ಐ ಇರುವವರು ಟೆಸ್ಟ್ ಮಾಡಿಸಿಕೊಳ್ಳಿ. 50 ವರ್ಷದ ಮೇಲೆ ಬೇರೆ ಬೇರೆ ಕಾಯಿಲೆ ಇದ್ದವರಿಗೆ ಮಾತ್ರ ಟೆಸ್ಟ್ ಹೆಚ್ಚು ಮಾಡಲಾಗುತ್ತಿದೆ. ಬಿಬಿಎಂಪಿ ಕಂಟೈನ್ಮೆಂಟ್ ಝೋನ್‍ಗಳಲ್ಲಿ ಟಾರ್ಗೆಟ್ ಮಾಡಿ ಮನೆ ಮನೆ ಸರ್ವೆ ಮಾಡಲಾಗುತ್ತಿದೆ. ಇತ್ತ ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಜನರು ಕಡಿಮೆ ಆಗುತ್ತಿದ್ದಾರೆ.
ಈಗ ಶೇ.50 ರಷ್ಟು ಬೆಡ್ ಖಾಲಿ ಇದ್ದು, ಆಸ್ಪತ್ರೆ ಸೇವೆ ಬೇಕಾದವರು ಮಾತ್ರ ಹೋಗುತ್ತಿದ್ದಾರೆ. ಪರಿಣಾಮ ಹೋಂ ಐಸೋಲೇಷನ್ ಪ್ರಕರಣ ಹೆಚ್ಚು ಮಾಡುತ್ತಿದ್ದೇವೆ. ಇದನ್ನು ಕುಶಾಲ ಪೋರ್ಟಲ್ ಮೂಲಕ ಸ್ವತ್ಯ ಎಂಬ ಟೀಂ ಮೂಲಕ ಮಾನಿಟರ್ ಮಾಡಲಾಗುತ್ತದೆ ಎಂದು ತಿಳಿಸಿದರು.