Friday, 20th September 2024

ಸಾವಿನ ಸನಿಹದಲ್ಲಿ ನಮಗೆ ಶಬ್ದ ಕೇಳಿಸುವುದೇ ?

ವೈದ್ಯ ವೈವಿಧ್ಯ

drhsmohan@gmail.com

ಹೃದಯ ಸ್ತಂಭನಗೊಂಡಾಗ ಅದನ್ನು ಕಾರ್ಡಿಯೋ ಪಲ್ಮನರಿ ರಿಸಸಿಟೇಶನ್ ಮೂಲಕ ಜೀವ ಬರುವಂತೆ ಮಾಡಿದಾಗ ಸಂಬಂಧಪಟ್ಟ ರೋಗಿಯ ಅನುಭವವೇನು? ಎಂಬುದನ್ನು ದಾಖಲಿಸುವುದು ಇದರ ಮುಖ್ಯ ಉದ್ದೇಶ. ಈ ಬಗೆಗೆ ವೈದ್ಯರಲ್ಲಿ ಹಾಗೂ ಆ ತರಹದ ರೋಗಿಗಳಲ್ಲಿ ಚಿತ್ರ ವಿಚಿತ್ರ ಕತೆಗಳು ಹಬ್ಬಿವೆ.

ಜೀವನ ಎಂದರೇನು? ಮನುಷ್ಯ ಜೀವದ ಕೊನೆ ಯಾವಾಗ ? ಇದು ಬಹಳ ಜನರನ್ನು ಬಹಳ ಕಾಲದಿಂದ ಕಾಡಿದ ಪ್ರಶ್ನೆ. ಆದರೆ ಈತ ಒಬ್ಬ ಭಿನ್ನ ವೈದ್ಯ – ಡಾ ಸ್ಯಾಮ್ ಪಾರ್ನಿಯಾ. 1990 ರ ದಶಕದಲ್ಲಿ ಲಂಡನ್ ವಿಶ್ವವಿದ್ಯಾಲಯ ದಲ್ಲಿ ಈತ ತನ್ನ ವೈದ್ಯಕೀಯ ಪದವಿ ಪೂರೈಸುವ ವೇಳೆಯಲ್ಲಿ ಆಸ್ಪತ್ರೆಯಲ್ಲಿ ಕೆಲವು ವೈದ್ಯರು ಹೃದಯಸ್ತಂಭನ (Cardiac Arrest ) ರೋಗಿಯನ್ನು ಬದುಕಿಉಳಿಸಲು ಪ್ರಯತ್ನ ನಡೆಸುತ್ತಿದ್ದರು. ಆಗ ಡಾ ಸ್ಯಾಮ್ ಈ ವಿದ್ಯಮಾನವನ್ನು ಹತ್ತಿರದಿಂದ ವೀಕ್ಷಿಸುತ್ತಿದ್ದ. ವೈದ್ಯರು ಮಾಡುತ್ತಿದ್ದ ಜೀವ ಉಳಿಸುವ ಕ್ರಿಯೆ, ಮಾತನಾಡುತ್ತಿರುವುದು ರೋಗಿಗೆ ಕೇಳಿಸುತ್ತಿದೆಯೇ? ಆತನಿಗೆ ಅರಿವಾಗುತ್ತಿದೆಯೇ ? ಎಂಬ ಬಗ್ಗೆ ಸಂದೇಹ ಮೂಡಿತು.

ನಂತರ ಆತ ಇಂಟೆನ್ಸಿವ್ ಕೇರ್ ಸಿಷಿಯನ್ ಆದ. ಹಾಗೆಯೇ ಎನ್ ವೈ ಯು ಲ್ಯಾಂಗಾನ್ ಆಸ್ಪತ್ರೆಯಲ್ಲಿ ವೈದ್ಯಕೀಯ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಆದ. ಮೊದಲಿನ ಘಟನೆಯ ಬಗ್ಗೆ ಸೂಕ್ತ ಉತ್ತರ ಹುಡುಕಬೇಕು ಎಂಬ ಸಂಕಲ್ಪ ಆತನ ಮನಸ್ಸಿನಲ್ಲಿ ಒಡ ಮೂಡಿತು. ಬಹುಶಃ ಈ ಬಗೆಗಿನ ಸಂಶೋಧನೆ ಒಂದೆರಡು ವರ್ಷಗಳಲ್ಲಿ ಮುಗಿಯಬಹುದು ಎಂದು ಆರಂಭದಲ್ಲಿ ಆತನಿಗೆ ಅನಿಸಿತು. ಆದರೆ ಈಗ 25 ವರ್ಷಗಳ ನಂತರವೂ ಆತ ಆ ಸಂಶೋಧನೆಯಲ್ಲಿಯೇ ಮುಳುಗಿದ್ದಾನೆ. ಅದು ಇನ್ನೂ ಪೂರ್ಣಗೊಂಡಿಲ್ಲ.

ಇತ್ತೀಚಿಗೆ ನವಂಬರ್ ೬ ರಂದು ಅಮೆರಿಕದ ಚಿಕಾಗೋದಲ್ಲಿ ನಡೆದ ಅಮೆರಿಕದ ಹೃದಯ ಅಸೋಸಿಯೇಷನ್‌ನ ವೈeನಿಕ ಸಮಾವೇಶದಲ್ಲಿ ಅವೇರ್‌ನೆಸ್ ಡ್ಯೂರಿಂಗ್ ರಿಸಸಿಟೇಶನ್ – ‘ಎ ಮಲ್ಟಿ ಸೆಂಟರ್ ಸ್ಟಡಿ ಆಫ್ ಕಾನ್ಶಿಯಸ್‌ನೆಸ್ ಅಂಡ್
ಅವೇರ್‌ನೆಸ್ ಇನ್ ಕಾರ್ಡಿಯಾಕ್ ಅರೆಸ್ಟ್’ ಎಂಬ ಪ್ರಬಂಧ ಮಂಡಿಸಿದ. ಈ ಅಧ್ಯಯನದ ಮುಖ್ಯಸ್ಥ ಡಾ ಪಾರ್ನಿಯ ಈ ಸಂಶೋಧನೆ ಕೈಗೊಳ್ಳಲು ಮುಖ್ಯ ಕಾರಣಗಳನ್ನು ವಿಷದೀಕರಿಸಿದ.

ಹೃದಯ ಸ್ತಂಭನಗೊಂಡಾಗ ಅದನ್ನು ಕಾರ್ಡಿಯೋ ಪಲ್ಮನರಿ ರಿಸಸಿಟೇಶನ್ (CPR) ಮೂಲಕ ಜೀವ ಬರುವಂತೆ ಮಾಡಿ ದಾಗ ಸಂಬಂಧಪಟ್ಟ ರೋಗಿಯ ಅನುಭವವೇನು? ಎಂಬುದನ್ನು ದಾಖಲಿಸುವುದು ಇದರ ಮುಖ್ಯಉದ್ದೇಶ. ಈ ಬಗೆಗೆ ವೈದ್ಯರಲ್ಲಿ ಹಾಗೂ ಆ ತರಹದ ರೋಗಿಗಳಲ್ಲಿ ಚಿತ್ರ ವಿಚಿತ್ರ ಕತೆಗಳು ಹಬ್ಬಿವೆ. ವೈeನಿಕವಾಗಿ ಇದರ ಹಿನ್ನೆಲೆ ಏನು? ಎಂದು ತಿಳಿದು ವಸ್ತುಸ್ಥಿತಿಯನ್ನು ದಾಖಲಿಸುವುದು ತಮ್ಮ ಉದ್ದೇಶ ಎಂದು ಅವರು ನುಡಿಯುತ್ತಾರೆ. ಹಲವು ದಶಕಗಳಿಂದ ಜಗತ್ತಿನಾದ್ಯಂತ ಈ ಸ್ಥಿತಿಗೆ ಬಂದು ಪಾರಾದ ಮಿಲಿಯನ್ ಗಟ್ಟಲೆ ಜನರು ತಾವು ಎಚ್ಚರದ ಮೇಲ್ಮಟ್ಟದ ಸ್ಥಿತಿಯಲ್ಲಿದ್ದೇವೆ ಎಂದು ಭಾವಿಸು ತ್ತಾರೆ.

ಆದರೆ ಅವರನ್ನು ಚಿಕಿತ್ಸೆ ಮಾಡುತ್ತಿರುವ ವೈದ್ಯರ ಪ್ರಕಾರ ಅವರು ಆ ಸಂದರ್ಭದಲ್ಲಿ ಎಚ್ಚರದ ಸ್ಥಿತಿಯಲ್ಲಿರುವುದಿಲ್ಲ, ಬದಲಾಗಿ ಸಾವಿನ ಸಮೀಪದಲ್ಲಿರುತ್ತಾರೆ. ಅವರು ಕೈಗೊಂಡ ಈ ಅಧ್ಯಯನದಲ್ಲಿ 567 ಪುರುಷರು ಮತ್ತು ಮಹಿಳೆಯರು – ಹೃದಯ
ಸ್ತಂಭನವಾಗಿ ಅದನ್ನು ನಿವಾರಿಸಲು ಸಿಪಿಆರ್ ಚಿಕಿತ್ಸೆಗೆ ಒಳಗಾದ ಅಮೆರಿಕ ಮತ್ತು ಯುನೈಟೆಡ್ ಕಿಂಗ್ ಡಂನ ೨೫ ನಾನಾ ಆಸ್ಪತ್ರೆಗಳಲ್ಲಿ ಈ ಅಧ್ಯಯನ ಕೈಗೊಳ್ಳಲಾಯಿತು. ರೋಗಿಯ ಹೃದಯ ಬಡಿದುಕೊಳ್ಳುವುದನ್ನು ನಿಲ್ಲಿಸಿದಾಗ (ಸ್ತಂಭನ ವಾದಾಗ ) ವೈದ್ಯರು ಕಾರ್ಡಿಯೋ ಪಲ್ಮನರಿ ರಿಸಸಿಟೇಶನ್ ಕೈಗೊಳ್ಳುವ ಸಂದರ್ಭದಲ್ಲಿ ಸಂಶೋಧಕರು ಈ  ಹಂತದಲ್ಲಿ ಪ್ರವೇಶ ಮಾಡಿ, ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸಬಲ್ಲ ಇಇಜಿ ಯಂತ್ರದಿಂದ ಆ ವ್ಯಕ್ತಿಯ ಮೆದುಳಿನ ಬೇರೆ ಬೇರೆ ಭಾಗಗಳಲ್ಲಿ ಎಲೆಕ್ಟ್ರಿಕಲ್ ಕ್ರಿಯೆಗಳನ್ನು ಮಾನಿಟರ್ ಮಾಡತೊಡಗಿದರು.

ಹಾಗೆಯೇ ಮೆದುಳಿನ ಮೇಲ್ಭಾಗದ ಕಾರ್ಟೆಕ್ಸ್ ಭಾಗದ ಆಮ್ಲಜನಕ ಸೆಚುರೇಷನ್ ಅಂಶವನ್ನು ಅಳೆಯಲು ನಿಯರ್ ಇನ್ ಫ್ರಾರೆಡ್ ಸ್ಪೆಕ್ಟ್ರೋಸ್ಕೋಪಿ (NIRS) ಯನ್ನು ಉಪಯೋಗಿಸಿದರು. ಹಾಗೆಯೇ ವೈದ್ಯರು ಸಿಪಿಆರ್ ಕ್ರಿಯೆ ಕೈಗೊಳ್ಳುತ್ತಿರುವ ಕ್ರಿಯೆಗೆ ಏನೂ ಅಡಚಣೆ ಉಂಟು ಮಾಡದೆ ರೋಗಿಯ ತಲೆಯ ಭಾಗದಲ್ಲಿ ಟ್ಯಾಬ್ಲೆಟ್ ಕಂಪ್ಯೂಟರ್‌ನ ಸಂಪರ್ಕವನ್ನು ಕೊಟ್ಟರು. ಟ್ಯಾಬ್ಲೆಟ್ ಕಂಪ್ಯೂಟರ್‌ಗೆ ಬ್ಲೂ ಟೂಥ್ ಹೆಡ್ ಫೋನ್‌ನ ಸಂಪರ್ಕ ರೋಗಿಯ ಕಿವಿಗಳಿಗೆ ಕೊಟ್ಟರು. ಟ್ಯಾಬ್ಲೆಟ್ ಕಂಪ್ಯೂಟರ್ ಮೊದಲೇ ಸಂಗ್ರಹಿಸಿ ಇಟ್ಟಿದ್ದ 10 ಚಿತ್ರಗಳನ್ನು ಪರದೆಯ ಮೇಲೆ ಮೂಡಿಸಿತು. 5 ನಿಮಿಷಗಳ ನಂತರ ಕಂಪ್ಯೂಟರ್‌ನಿಂದ ಮೊದಲೇ ಧ್ವನಿ ಮುದ್ರಿತವಾದ ಸೇಬು ಪಿಯರ್ಸ್ ಬಾಳೆಹಣ್ಣು ಈ ಶಬ್ದಗಳನ್ನು ಪ್ರತಿ ನಿಮಿಷಕ್ಕೊಮ್ಮೆ ಐದು
ನಿಮಿಷಗಳ ಕಾಲ ಕೇಳಿಸಲಾಯಿತು.

ಈ ಅಧ್ಯಯನ ರೂಪಿಸುವಾಗ ಮೆದುಳಿನ ಕ್ರಿಯೆಗಳನ್ನು ಮಾನಿಟರ್ ಮಾಡುವುದಲ್ಲದೆ, ಎಚ್ಚರವಿಲ್ಲದ ಸ್ಥಿತಿಯಲ್ಲಿ ರೋಗಿಯಲ್ಲಿ ಏನಾದರೂ ತಿಳಿವಳಿಕೆಯ ಮಟ್ಟ ಇದೆಯೇ ಎಂಬುದನ್ನು ತಿಳಿಯುವುದೂ ನಮ್ಮ ಉದ್ದೇಶವಾಗಿತ್ತು ಎಂದು ಡಾ.ಪಾರ್ನಿಯ ಅಭಿಪ್ರಾಯ ಪಡುತ್ತಾರೆ. 567 ಜನರಲ್ಲಿ 213 ಜನರಲ್ಲಿ (ಸುಮಾರು ಶೇಕಡ 38) ಅವರ ದೇಹದ ರಕ್ತ ಚಲನೆ
ಆರಂಭವಾಗಲಾರಂಭಿಸಿತು. ಅಂದರೆ ಅವರ ನಾಡಿಮಿಡಿತ 20 ನಿಮಿಷ ಅಥವಾ ಅದಕ್ಕೂ ಹೆಚ್ಚು ಹೊತ್ತು ಬಡಿದುಕೊಳ್ಳಲಾ ರಂಬಿಸಿತು. 53 ಜನರು ಮಾತ್ರ ಅಂದರೆ ಶೇಕಡ ೧೦ಕ್ಕಿಂತ ಕಡಿಮೆ ಈ ಕ್ರಿಯೆಯಿಂದ ಬದುಕಿದರು. ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಹೊಂದಿದರು.

ಈ ೫೩ ವ್ಯಕ್ತಿಗಳಲ್ಲಿ ಅವರ ಆರೋಗ್ಯ ಸ್ಥಿತಿ ಉತ್ತಮಗೊಳ್ಳದೆ ಇದ್ದುದರಿಂದ ಮೇಲಿನ ಸಂಶೋಧಕರಿಗೆ ಅವರನ್ನು ಸಂದರ್ಶನ
ಮಾಡಲು ಸಾಧ್ಯವಾಗಲಿಲ್ಲ. ಉಳಿದ 28 ಜನರನ್ನು ಎರಡರಿಂದ ನಾಲ್ಕು ವಾರಗಳ ನಂತರ ಅವರು ಗುಣವಾದ ಅವಽಯನ್ನು ಗಮನದಲ್ಲಿಟ್ಟುಕೊಂಡು ಸಂದರ್ಶನ ಮಾಡಲಾಯಿತು. ಆರಂಭದಲ್ಲಿ ಸಂಶೋಧಕರು ಹೀಗೆ ಉಳಿದುಕೊಂಡ ವ್ಯಕ್ತಿಗಳ ಮೆದುಳಿನ ಕರ್ತವ್ಯದಲ್ಲಿ ಊನತೆಯನ್ನು ಅಳೆಯಲು ಅಬ್ರಿವಿಯೇಟೆಡ್ ಮೆಂಟಲ್ ಟೆಸ್ಟ್ ಸ್ಕೋರ್ ಎನ್ನುವ ಪರೀಕ್ಷೆ
ನಡೆಸಿ ದರು. ಈ ಪರೀಕ್ಷೆಯಲ್ಲಿ ಆರು ಅಂಕಗಳಿಗಿಂತ ಹೆಚ್ಚು ಅಂಕ ಪಡೆದವರೆಲ್ಲ ಮೊದಲ ಹಂತದ ಸಂದರ್ಶನಕ್ಕೆ ಒಳಪಟ್ಟರು. ಅಂದರೆ ಇವರಲ್ಲಿ ಮೆದುಳಿನ ಸೂಕ್ಷ್ಮ ಸಂವೇದನೆಗಳು ಗಮನಾರ್ಹವಾಗಿ ನಷ್ಟವಾಗಿರಲಿಲ್ಲ.

ಈ ಮೊದಲ ಹಂತದ (ಸ್ಟೇಜ್ 1) ಸಂದರ್ಶನದಲ್ಲಿ ಆ ವ್ಯಕ್ತಿಯು ಸಿಪಿಆರ್ ಚಿಕಿತ್ಸೆಗೆ ಒಳಗಾದಾಗ ಆತನ ನೆನಪಿನ ಶಕ್ತಿ ಎಷ್ಟಿತ್ತು ಎಂಬುದನ್ನು ಕಂಡುಕೊಳ್ಳುವ ಬಗೆಗಿನ ಪ್ರಶ್ನೆಗಳು ಇದರಲ್ಲಿದ್ದವು. ೨ನೆಯ ಹಂತದ ಸಂದರ್ಶನದಲ್ಲಿ ಸಂಶೋಧಕರು ಭಿನ್ನ ರೀತಿಯ ಪ್ರಶ್ನೆಗಳನ್ನು ಕೇಳಿದರು. ಹೃದಯ ಸ್ತಂಭನದ ಸಮಯದಲ್ಲಿ ರೋಗಿಗಳ ಅನುಭವದ ಬಗೆಗೆ ಪ್ರಶ್ನೆ ಕೇಳಿದುದೇ
ಅಲ್ಲದೆ ಸಾವಿನ ಸಮೀಪದ ಅನುಭವದ ವಿಚಾರ ವಾಗಿ 16 ಭಿನ್ನ ರೀತಿಯ ಪ್ರಶ್ನೆಗಳಿದ್ದವು. ತಮ್ಮ ಆ ಅನುಭವದಲ್ಲಿ ಶಬ್ದಗಳನ್ನು ಕೇಳಿದ ಅಥವಾ ದೃಶ್ಯಗಳನ್ನು ನೋಡಿದ ಅನುಭವ ತಿಳಿಸಿದವರಿಗೆ ಮೂರನೇ ಹಂತದ ಸಂದರ್ಶನಕ್ಕೆ ಆಯ್ಕೆ ಮಾಡಲಾಯಿತು.

ಈ ೩ನೇ ಹಂತದ ಸಂದರ್ಶನ ಮೊದಲ 2 ಹಂತಗಳಿಗಿಂತ ಸುದೀರ್ಘವಾದದ್ದು ಮತ್ತು ಹೆಚ್ಚಿನ ವಿಷಯಗಳನ್ನು ಒಳಗೊಂಡದ್ದು ಆಗಿತ್ತು. ಇದರಲ್ಲಿ ಸಂದರ್ಶಕರು ಹತ್ತರಲ್ಲಿ ಒಂದು ಚಿತ್ರವನ್ನು ಆಯ್ಕೆಮಾಡಲು ತಿಳಿಸಿದರು. ಹಾಗೆಯೇ
ಅವರಿಗೆ ಹೃದಯ ಸ್ತಂಭನದ ವೇಳೆಯಲ್ಲಿ ಸಿಪಿಆರ್ ಮಾಡಿದಾಗ ಕೇಳಿಸಿದ ಮೂರು ಹಣ್ಣಿನ ಹೆಸರು ಗಳನ್ನು ಹೆಸರಿಸಲು ತಿಳಿಸಿದರು. ಈ ಗುಂಪಿನಲ್ಲಿ ಹೃದಯ ಸ್ತಂಭನಕ್ಕೆ ಒಳಗಾಗಿ ಬದುಕುಳಿದವರ ಸಂಖ್ಯೆ ತುಂಬಾ ಕಡಿಮೆ ಇದ್ದುದರಿಂದ ಹೃದಯ
ಸ್ತಂಭನಕ್ಕೆ ಒಳಗಾದ ಬೇರೆಯ ಸಂದರ್ಭದ ಇನ್ನೂ ಕೆಲವರನ್ನು ಅವರ ಆಗಿನ ಅನುಭವದ ಬಗ್ಗೆ ವಿವರವಾಗಿ ವಿಚಾರಿಸಿ ಆ ವಿವರಗಳನ್ನು ಈ ಗುಂಪಿನವರ ಅನುಭವದ ಜೊತೆಗೆ ಸೇರಿಸಿಕೊಳ್ಳಲಾಯಿತು.

ಅತೀತ ಅನುಭವಗಳ ನೆನಪು : ಸಂದರ್ಶನಕ್ಕೆ ಒಳಪಟ್ಟ 28 ಜನರಲ್ಲಿ 11 ಜನರು (ಶೇಕಡಾ 39) ಹೃದಯಸ್ತಂಭನದ ಘಟನಾವಳಿ ತಮಗೆ ನೆನಪಿರುವುದಾಗಿ ತಿಳಿಸಿದರು. ಅವರಲ್ಲಿ ಇಬ್ಬರು ತಮಗೆ ಸಿಪಿಆರ್ ಮಾಡುವಾಗ ವೈದ್ಯಕೀಯ ತಜ್ಞರು ಮತ್ತು ಸಿಬ್ಬಂದಿ ವರ್ಗ ತರಾತುರಿಯಲ್ಲಿ ಚಿಕಿತ್ಸೆಯಲ್ಲಿ ತೊಡಗಿಕೊಂಡದ್ದು ಗಮನಕ್ಕೆ ಬಂದಿರುವುದಾಗಿ ತಿಳಿಸಿದರು. ಹಾಗೆಯೇ ಅದರಲ್ಲಿ ಒಬ್ಬರು ಚಿಕಿತ್ಸೆಯ ವೇಳೆಯಲ್ಲಿ ತಮ್ಮ ಎದೆಯ ಮೇಲೆ ಒತ್ತುತ್ತಿರುವ ವಿಜಾರವನ್ನು ತಿಳಿಸಿದರು.

ಸಾವಿನ ಸಮೀಪದ ಮಾಪನದಲ್ಲಿ ಆರು ಅಭ್ಯರ್ಥಿಗಳು ತಮಗೆ ಅತೀತವಾದ ಅಥವಾ ಅತೀಂದ್ರಿಯ ಅನುಭವ ಆದ ಬಗ್ಗೆ ತಿಳಿಸಿದರೆ, ಮೂವರು ಕನಸಿನ ಅನುಭವಗಳ ಬಗ್ಗೆ ವ್ಯಕ್ತಪಡಿಸಿದರು. ಅವರಲ್ಲಿ ಒಬ್ಬರಿಗೆ ಮೀನುಗಾರನ ಹಾಡು ಕೇಳಿದ ರೀತಿಯ ವಿಚಿತ್ರ ಅನುಭವವಾದ ಬಗ್ಗೆ ವರದಿ ಮಾಡಿದರು. ವಿಚಿತ್ರ ಅಂದರೆ ಈ 28 ಜನರಲ್ಲಿ ಆರು ಜನರಿಗೆ ತಾವು ಸಾಯುತ್ತಿರುವ ಅನುಭವವಾಯಿತು ಎಂದು ತಿಳಿಸಿದರೆ, ಒಬ್ಬ ಅಭ್ಯರ್ಥಿ ಮರಣ ಹೊಂದಿದ ತನ್ನ ಅಜ್ಜಿ ತನ್ನ ದೇಹಕ್ಕೆ ಹಿಂತಿರುಗಿ ಹೋಗು ಎಂದು ಹೇಳಿದ ಅನುಭವವಾದ ಬಗ್ಗೆ ವರದಿ ಮಾಡಿದರು.

ಇವೆಲ್ಲ ವ್ಯಕ್ತಿ ಮರಣಶಯ್ಯೆಯಲ್ಲಿರುವಾಗ ಅನುಭವಿಸಿದ ವಿಭಿನ್ನ ಅನುಭವಗಳು. ಇವು ಆಸ್ಪತ್ರೆಯಲ್ಲಿ ರೋಗಿಯ ಅನುಭವಕ್ಕೆ ಬರುವ ಇತರ ಯಾವುದೇ ಅನುಭವಗಳಿಗಿಂತ ಸಂಪೂರ್ಣ ಭಿನ್ನವಾದುದು. ಹಾಗೆಂದು ವ್ಯಕ್ತಿ ಲೋಕ ಬಿಡುವ ಸಮಯದಲ್ಲಿನ ಈ ಅನುಭವಗಳು ಆತನ ಭ್ರಮೆ, ಬ್ರಾಂತಿ (Hallucinations) ಅಲ್ಲ, ಅವು ಆ ವ್ಯಕ್ತಿ ಬೇರೆಯವರನ್ನು ಹಾದಿ ತಪ್ಪಿಸಿಲು ಮಾಡುವ ಮೋಸ, ಕಣ್ ಕಟ್ಟು ವಿದ್ಯೆಯೂ (Illusions) ಅಲ್ಲ ಹಾಗೂ ವ್ಯಕ್ತಿಯ ಮೆದುಳಿನ ಸ್ಥಿತಿ ಭಿನ್ನವಾಗಿರುವ ಆ ಸಂದರ್ಭ ದಲ್ಲಿ ತಪ್ಪು ಕಲ್ಪನೆಯೂ (Delusions) ಅಲ್ಲ.

ಇವು ಮರಣದ ಕ್ಷಣಗಳಲ್ಲಿ ಅಂತಹಾ ವ್ಯಕ್ತಿ ಅನುಭವಿಸುವ ನೈಜ ಅನುಭವಗಳು ಎಂದು ಮುಖ್ಯ ಸಂಶೋಧಕ ಡಾ ಪಾರ್ನಿಯ ಅಭಿಪ್ರಾಯ ಪಡುತ್ತಾರೆ. ಉಳಿದ ಗುಂಪಿನ ಹೃದಯ ಸ್ತಂಭನವಾಗಿ ಉಳಿದವರ ಅನುಭವಗಳಲ್ಲಿ ಮುಖ್ಯವಾಗಿ ೫ ರೀತಿಯ ಅನುಭವಗಳು ಕಂಡು ಬಂದವು. ಕೆಲವರು ಸಿಪಿಆರ್ ಕ್ರಿಯೆಯು ತಮ್ಮ ದೇಹದ ಮೇಲೆ ಮಾಡಿದ ಅನುಭವಗಳನ್ನು ಹಾಗೂ ವೈದ್ಯಕೀಯ ಸಿಬ್ಬಂದಿ ಮಾತನಾಡಿದುದನ್ನು ಸ್ಮರಿಸಿದರು.

ಮತ್ತೆ ಕೆಲವರು ಸಿಪಿಆರ್ ಮಾಡುವಾಗ ತೀವ್ರ ನಿಗಾ ಘಟಕದಲ್ಲಿ ನಡೆಯುತ್ತಿದ್ದ ಕ್ರಿಯೆಗಳ ಬಗ್ಗೆ ನೆನಪಿಸಿದರು. ಕೆಲವರು ತಾವು ಸತ್ತೇ ಬಿಟ್ಟೆವೇನೋ ಎಂದು ಅನಿಸಿದುದನ್ನು ಸ್ಮರಿಸಿದರು. ಮತ್ತೆ ಕೆಲವರು ತಾವು ಯಾವುದೋ ಅಜ್ಞಾತ ಸ್ಥಳಕ್ಕೆ ಹೋಗುತ್ತಿದ್ದೇವೆ ಎಂದೆನಿಸಿತು ಎಂದು ನುಡಿದರು. ಮತ್ತೆ ಕೆಲವರು ತಮ್ಮ ಜೀವನದಲ್ಲಿನ ಘಟನೆಗಳನ್ನು ವಿಮರ್ಶೆಗೆ
ಹಚ್ಚಿದುದಾಗಿ ತಿಳಿಸಿದರು.

ಬಯೋಮಾರ್ಕರ್ಸ್ : 28 ಜನರ ಸಂದರ್ಶನ ಮಾಡಿದಾಗ ಅವರಿಗೆ ಸಿಪಿಆರ್ ಮಾಡಿದಾಗ ತೋರಿಸಿದ ಚಿತ್ರಗಳು ಹಾಗೂ
ದೃಶ್ಯಗಳು ಒಬ್ಬರಿಗೂ ನೆನಪು ಮಾಡಲು ಸಾಧ್ಯವಾಗಲಿಲ್ಲ. ಹಾಗೆಯೇ ಅವರಿಗೆ ಆ ಸಂದರ್ಭದಲ್ಲಿ ಕೇಳಿಸಿದ ಶಬ್ದಗಳೂ ಆನಂತರ ನೆನಪಿಗೆ ಬರಲಿಲ್ಲ. ಮೊದಲು ತೋರಿಸಿದ ೧೦ ಫೋಟೋಗಳಲ್ಲಿ ಯಾವುದನ್ನೂ ಯಾರಿಗೂ ಗುರುತಿಸಲಾಗಲಿಲ್ಲ. 28 ರಲ್ಲಿ ಒಬ್ಬ ವ್ಯಕ್ತಿಗೆ ಮಾತ್ರ ಮೊದಲು ತಿಳಿಸಿದ ಹಣ್ಣಿನ ಹೆಸರನ್ನು ಸರಿಯಾಗಿ ಹೇಳಲು ಸಾಧ್ಯವಾಯಿತು.

55 ಜನರ ಇ ಇ ಜಿ  ಯಲ್ಲಿ ಗಮನಾರ್ಹವಾದ ಗ್ಯಾಮಾ, ಡೆಲ್ಟಾ, ಥೀಠ, ಆಲಾ ಬೀಟಾ — ಅಲೆಗಳು ಸಿಪಿಆರ್‌ನ 60 ನಿಮಿಷಗಳ ನಂತರ ಕಂಡುಬಂದವು. ಈ ತರಹದ ಮೆದುಳಿನ ಅಲೆಗಳು ಆರೋಗ್ಯವಂತ ವ್ಯಕ್ತಿಯಲ್ಲೂ ಆತ ತನ್ನ ನೆನಪು ಕೆದಕುತ್ತಿರುವಾಗ, ದೀರ್ಘ ಮತ್ತು ಆಳವಾದ ಯೋಚನೆ ಮಾಡುತ್ತಿರುವಾಗ ಕಂಡು ಬರಬಹುದು. ಹೃದಯ ಸ್ತಂಭನಕ್ಕೆ ಸಿಪಿಆರ್ ಚಿಕಿತ್ಸೆ ಮಾಡುತ್ತಿರುವಾಗ ಎಚ್ಚರದಲ್ಲಿರುವಾಗಿನ ಬಯೋ ಮಾರ್ಕಸ್ ಗುರುತಿಸುತ್ತಿರುವುದು ಇದೇ ಮೊಟ್ಟ ಮೊದಲ ಬಾರಿ ಎಂದು ಈ ಅಧ್ಯಯನದ ಸಂಶೋಧಕರು ಅಭಿಪ್ರಾಯ ಪಡುತ್ತಾರೆ. ಈ ಹೃದಯ ಸ್ತಂಭನದಿಂದ ಬದುಕುಳಿದವರಿಗೆ ಸೂಕ್ತ ಮಾನಸಿಕ ತಜ್ಞರ ಸಲಹೆ ಅವಶ್ಯಕತೆ ಇದೆ ಎಂದು ಜಾಗತಿಕ ಮಟ್ಟದಲ್ಲಿ ಹಲವು ವೈದ್ಯರು ಅಭಿಪ್ರಾಯ ಪಡುತ್ತಾರೆ.

ಹೃದಯ ಸ್ತಂಭನದ ನಂತರ ಸಾವಿನ ಅಂಚಿನಲ್ಲಿರುವ ರೋಗಿಗಳ ಅನುಭವಗಳ ಬಗ್ಗೆ ಅವರನ್ನು ಚಿಕಿತ್ಸೆ ಮಾಡುತ್ತಿರುವ ವೈದ್ಯರಿಗೆ ಹಾಗೂ ವೈದ್ಯಕೀಯ ಸಿಬ್ಬಂದಿಗೆ ಈ ಬಗೆಗೆ ಸೂಕ್ತವಾದ ಅರಿವಿರಬೇಕು. ಇದು ಈ ಲೇಖನದ ಒಂದು ಮುಖ್ಯ ಆಶಯ. ಹಾಗಾಗಿ ಈ ಸಮಯದಲ್ಲಿ ಚಿಕಿತ್ಸೆ ಕೊಡುತ್ತಿರುವ ವೈದ್ಯ ಮತ್ತು ವೈದ್ಯಕೀಯ ಸಿಬ್ಬಂದಿ ಈ ಹಂತದ ರೋಗಿಗಳ ಜೊತೆಗೆ ಬಹಳ ನಯ ವಿನಯದಿಂದ ನಡೆದುಕೊಳ್ಳಬೇಕೆಂದು ಹಲವು ಹಿರಿಯ ತಜ್ಞ ವೈದ್ಯರು ಅಭಿಪ್ರಾಯ ಪಡುತ್ತಾರೆ.