ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಬಗ್ಗೆ ಒಂದು ಮಾತಿದೆ.
ಯಾರಾದರೂ ಅವರಿಗೆ ಫೋನ್ ಮಾಡಿದರೆ, ಅವರು ‘ಯಸ್, ಮೊಯಿಲಿ ಸ್ಪೀಕಿಂಗ್’ ಅಂತಾರಂತೆ. ಅದು ಮಾತ್ರ ನಿಜ, ಮುಂದೆ ಹೇಳುವುದೆಲ್ಲ ಅಲ್ಲ. ಈ ಮಾತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೂ ಅನ್ವಯ. ಟ್ರಂಪ್ ಬಗ್ಗೆ ಮತ್ತೊಂದು ಮಾತು ಚಾಲ್ತಿಯಲ್ಲಿದೆ. ಅದೇನೆಂದರೆ, ಅವರಿಗೆ ಸುಳ್ಳು ಹೇಳಬೇಕು ಎಂಬ ಇರಾದೆಯೇನೋ ಇಲ್ಲವಂತೆ. ಆದರೆ ಅವರಿಗೆ ಸತ್ಯ ಮತ್ತು ಸುಳ್ಳಿನ ನಡುವಿನ ಅಂತರ ಗೊತ್ತಿಲ್ಲವಂತೆ. ಅವರಿಗೆ ಸತ್ಯ ಹೇಳಿ ಗೊತ್ತಿಲ್ಲ ಮತ್ತು ಅವರು ಸತ್ಯವೇನು ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನವನ್ನೂ ಮಾಡುವುದಿಲ್ಲವಂತೆ.
ನಾನು ಇತ್ತೀಚೆಗೆ ಲಂಡನ್ನಿನ ಖ್ಯಾತ ಪತ್ರಕರ್ತ ಟಾಮ್ ಫಿಲಿಪ್ಸ್ ಬರೆದ Truth : A Brief History of Total Bullshit ಎಂಬ ಪುಸ್ತಕ ಓದುತ್ತಿದ್ದೆ. ಟ್ರಂಪ್ ಅಧಿಕಾರ ಸ್ವೀಕರಿಸಿದ ಮೊದಲ 869 ದಿನಗಳಲ್ಲಿ 10,796 ಸುಳ್ಳು, ತಪ್ಪು ಮಾಹಿತಿ, ದೋಷಪೂರಿತ ಅಂಶ, ನಿಖರವಲ್ಲದ ವಿವರಗಳನ್ನು ನೀಡಿದ್ದರಂತೆ. ಇವನ್ನೆಲ್ಲಾ ಸುಳ್ಳು ಎಂದು ಕರೆಯುವ ಬದಲು ಗೌರವಯುತವಾಗಿ, false or misleading claims G ಎಂದು ಕರೆಯಬಹುದು.
‘ದಿ ವಾಷಿಂಗ್ಟನ್ ಪೋಸ್ಟ್’ ಪತ್ರಿಕೆಯ ಸತ್ಯ- ಶೋಧನೆ ತಂಡ (ಫ್ಯಾಕ್ಟ್ – ಚೆಕಿಂಗ್ ಟೀಮ್) ಟ್ರಂಪ್ ಅವರ ಮಾತುಗಳಿಗೆ ಜರಡಿ ಹಿಡಿದಾಗ, ಈ ಸಂಗತಿಗಳು ಗೊತ್ತಾದವು ಎಂದು ಟಾಮ್ ಫಿಲಿಪ್ಸ್ ಹೇಳಿದ್ದಾರೆ. 2018 ರ ಸೆಪ್ಟೆಂಬರ್ 7 ರಂದು, ಒಂದೇ ದಿನ ಕೇವಲ 125 ನಿಮಿಷಗಳ ಅವಧಿಯಲ್ಲಿ ಟ್ರಂಪ್ 125 ತಪ್ಪು, ಸುಳ್ಳು ಮತ್ತು ಸರಿಯಿಲ್ಲದ ಮಾಹಿತಿಯನ್ನು ನೀಡಿದ್ದರು. ಅಂದರೆ ಪ್ರತಿ ಒಂದು ನಿಮಿಷಕ್ಕೆ ಒಂದು ಸುಳ್ಳು!
ಟ್ರಂಪ್ ಅವರೇನಾದರೂ ಸೆಪ್ಟೆಂಬರ್ 7ನ್ನು ‘ಅಂತಾರಾಷ್ಟ್ರೀಯ ಅಪ್ರಾಮಾಣಿಕರ ದಿನ’ ಎಂದು ಭಾವಿಸಿದ್ದರಾ ಗೊತ್ತಿಲ್ಲ ಎಂದು ಆಗ ಲೇವಡಿ ಮಾಡಿದ್ದರು. ಆದರೆ ಸತ್ಯದ ತಲೆ ಮೇಲೆ ಮೊಟಕುವಂತೆ, ಹೆಜ್ಜೆ ಹೆಜ್ಜೆಗೆ ಸುಳ್ಳುಗಳನ್ನು ಹೇಳಿದರು. ತಮಾಷೆಯೆಂದರೆ, ಅದಾಗಿ ಎರಡು ತಿಂಗಳ ನಂತರ, ಉಪಚುನಾವಣೆಯ ಸಂದರ್ಭದಲ್ಲಿ, ಅಂದರೆ 2018ರ ನವೆಂಬರ್ 5ರಂದು ಅಧ್ಯಕ್ಷರು 139 ಸುಳ್ಳುಗಳನ್ನು ಹೇಳಿ ಸಾರ್ವಕಾಲಿಕ ದಾಖಲೆಯನ್ನು ಸ್ಥಾಪಿಸಿದರು. ಟ್ರಂಪ್ ಹೇಳುವ ಯಾವ ಮಾತನ್ನೂ
ನಂಬುವುದು ಕಷ್ಟ. ಅವರಿಗೆ ಸತ್ಯ ಮತ್ತು ಸುಳ್ಳಿನ ನಡುವಿನ ವ್ಯತ್ಯಾಾಸವೇ ಗೊತ್ತಿಲ್ಲ. ಅಲ್ಲದೇ ಎಷ್ಟೋ ಸಲ, ತಾವು ಹೇಳಿದ ಸತ್ಯವನ್ನೇ ಸುಳ್ಳು ಎಂದು ಸಾಬೀತುಪಡಿಸುತ್ತಾರೆ. ಪೊಲಿಟಿಫ್ಯಾಕ್ಟ್ ಡಾಟ್ಕಾಮ್ ವೆಬ್ ಸೈಟ್ 2015, 2017 ಮತ್ತು 2019ರ ‘ವರ್ಷದ ಮಹಾಸುಳ್ಳುಬುರುಕ’ ಪ್ರಶಸ್ತಿಯನ್ನು ಟ್ರಂಪ್ಗೆ ನೀಡಿತ್ತು. ಎರಡು ವರ್ಷಗಳ ಹಿಂದೆ, ಸಿಎನ್ಎನ್ ನಡೆಸಿದ ಸಮೀಕ್ಷೆಯಲ್ಲಿ ಅಮೆರಿಕದ ಶೇ.32 ಮಂದಿ ಮಾತ್ರ ಟ್ರಂಪ್ ಪ್ರಾಮಾಣಿಕ ಎಂದು ಭಾವಿಸಿದ್ದಾರೆ ಎಂದು ಹೇಳಿತ್ತು.
ಆನಂತರ ಪ್ರತಿ ವರ್ಷವೂ, ಈ ಪ್ರಮಾಣ ಕಡಿಮೆಯಾಗುತ್ತಲೇ ಇದೆ. ಈ ಪ್ರಮಾಣ ಜಾಸ್ತಿಯಾಗುವ ಲಕ್ಷಣಗಳಿಲ್ಲ. ಯಾಕೆಂದರೆ, ಒಂದು ವೇಳೆ ಟ್ರಂಪ್ ಸತ್ಯವನ್ನೇ ಹೇಳಿದರೂ ಯಾರೂ ನಂಬುತ್ತಿಲ್ಲ. ಟ್ರಂಪ್ಗೆ ಸತ್ಯ ಅಥವಾ ಪ್ರಾಮಾಣಿಕತೆ ಒಂದು ಮೌಲ್ಯವೇ ಅಲ್ಲ. ಒಂದು ವೇಳೆ ಸುಳ್ಳು ಹೇಳಿದರೆ ಅದು ಮಹಾಪರಾಧವೂ ಅಲ್ಲ. ಅವರ ಪ್ರಕಾರ, ಸುಳ್ಳು ಅಂದರೆ ಸಮಯಪ್ರಜ್ಞೆ. ಆ
ಸಂದರ್ಭದಲ್ಲಿ ಏನೋ ಒಂದು ಸುಳ್ಳು ಹೇಳಿ ಬಚಾವ್ ಆಗುವುದಷ್ಟೇ ಅವರ ಕಾಳಜಿ. ಹೀಗಾಗಿ ಅವರು ಪದೇ ಪದೆ ಸಮಯಪ್ರಜ್ಞೆೆ ಮೆರೆಯುತ್ತಾರೆ. ಒಂದು ವೇಳೆ ಸುಳ್ಳು ಹೇಳಿ ಸಿಕ್ಕಿ ಬಿದ್ದರೂ ಅವರಿಗೆ ಬೇಸರವಿಲ್ಲ. ಹೀಗಾಗಿ ಕ್ಷಮೆಯನ್ನೂ
ಯಾಚಿಸುವುದಿಲ್ಲ. ಬೇರೆಯವರನ್ನು ಸಮಾಧಾನ ಪಡಿಸಲು ಅಥವಾ ಮುಜುಗರದಿಂದ ತಪ್ಪಿಸಿಕೊಳ್ಳಲು ಟ್ರಂಪ್ ಎಂಥಾ ಸುಳ್ಳುಗಳನ್ನಾದರೂ ಹೇಳಲು ಹೇಸದ ವ್ಯಕ್ತಿ ಎಂಬ ಅಪಖ್ಯಾತಿ ಅವರಿಗೆ ಅಂಟಿಕೊಂಡಿದೆ. ಟ್ರಂಪ್ ಮೊಯಿಲಿಯವರನ್ನು ಭೇಟಿಯಾಗಬೇಕಿತ್ತು!