Sunday, 5th January 2025

ಏಡ್ಸ್ ಜಾಗೃತಿ ಜಾಥಾ 

ಚಿಕ್ಕನಾಯಕನಹಳ್ಳಿ: ಎಚ್ಐವಿ ನಿಯಂತ್ರಣಕ್ಕೆ ಜನರಲ್ಲಿ ಅರಿವು ಮೂಡಿಸುವುದು ಅತ್ಯಗತ್ಯ ಎಂದು ಪ್ರಾಂಶುಪಾಲ ಶಿವಾನಂದ್ ಅಭಿಪ್ರಾಯಪಟ್ಟರು.
ವಿಶ್ವ ಏಡ್ಸ್‌ ದಿನದ ಪ್ರಯುಕ್ತ ಸಾರ್ವಜನಿಕ ಆಸ್ಪತ್ರೆ, ತಾಲೂಕು ಆರೋಗ್ಯಾಧಿಕಾರಿ ಕಚೇರಿ, ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಇವುಗಳ ಸಹಯೋಗದಲ್ಲಿ ಪಟ್ಟಣದಲ್ಲಿ ಆಯೋಜಿಸಿದ್ದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಮುದಾಯದ ಸಹಭಾಗಿತ್ವದಿಂದ ಮಾತ್ರ ಏಡ್ಸ್ ಮುಕ್ತ ಸಮಾಜ ನಿರ್ಮಾಣ ಸಾಧ್ಯ. ಹೆಚ್‌ಐವಿ ಸೋಂಕು ಮಾನವಕುಲಕ್ಕೆ ಬಂದೊದಗಿರುವ ವಿಪತ್ತು. ಇದು ಬರದಂತೆ ತಡೆಯಲು ಲಸಿಕೆ ಇಲ್ಲ. ಪೂರ್ಣಮಟ್ಟದಲ್ಲಿ ಗುಣಪಡಿಸಲು ಔಷಧಿಯೂ ಇಲ್ಲ. ಜನರಲ್ಲಿ ಅರಿವು ಮೂಡಿಸುವುದೊಂದೇ ಸೋಂಕು ತಡೆಗೆ ಇರುವ ಏಕೈಕ ಮಾರ್ಗ ಎಂದರು.
ಕಾಲೇಜು ವಿದ್ಯಾರ್ಥಿಗಳು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಘೋಷಣೆಗಳನ್ನು ಕೂಗಿ ಜಾಗೃತಿ ಮೂಡಿಸಿದರು. ಜನಸಂದಣಿ ಪ್ರದೇಶಗಳಲ್ಲಿ ಎಚ್ಐವಿ ನಿಯಂತ್ರಣ ಹಾಗೂ ಜಾಗೃತಿ ಕುರಿತಾದ ಕರಪತ್ರಗಳನ್ನು ವಿತರಿಸಿದರು.
ಹಿರಿಯ ಆರೋಗ್ಯ ಸುರಕ್ಷಾ ಮೇಲ್ವಿಚಾರಕರಾದ ಎಸ್.ಡಿ. ಶ್ರೀನಿವಾಸ್‌, ಎಸ್‌. ರಂಗನಾಥ್‌, ಫಾರ್ಮಸಿ ಅಧಿಕಾರಿಗಳಾದ ನಿರೂಪ್‌ ರಾವತ್‌, ಆಪ್ತ ಸಮಾಲೋಚಕ ಎಸ್‌. ನವೀನ್‌, ಕ್ಷಯರೋಗ ಮೇಲ್ವಿಚಾರಕರಾದ ಉಮಾಶಂಕರ್‌, ಪ್ರಯೋಗಶಾಲಾ ತಂತ್ರಜ್ಞ   ಜಿ.ಎಸ್. ಮುರಳೀಧರ, ಬಿ. ವಿಜಯ, ಜಯಮ್ಮ, ತುಂಗೇಶ್‌, ರೇಣುಕಮ್ಮ ಇತರರಿದ್ದರು.