Friday, 20th September 2024

ಸರ್ವಪಲ್ಲಿ ರಾಧಾಕೃಷ್ಣನ್‌ರಿಗೂ ಮೈಸೂರಿಗೂ ಅವಿನಾಭಾವ ಸಂಬಂಧ

ಲಕ್ಷ್ಮಿ ಕಿಶೋರ್ ಅರಸ್ ಕೂಡ್ಲೂರು

ತನ್ನಿಮಿ

ಸೆಪ್ಟೆಂಬರ್ 5 ಶಿಕ್ಷಕರ ದಿನಾಚರಣೆ. ಭಾರತ ದೇಶವು ಎಂದೂ ಮರೆಯದಂಥ ಅತ್ಯುತ್ತಮ ವ್ಯಕ್ತಿತ್ವವುಳ್ಳ ತತ್ತ್ವಜ್ಞಾನಿ, ರಾಜನೀತಿ ತಜ್ಞ, ಉಪನ್ಯಾಸಕ, ಶಿಕ್ಷಕ, ಪ್ರಾಧ್ಯಾಪಕ, ಕುಲಪತಿ, ಉಪರಾಷ್ಟ್ರಪತಿ, ರಾಷ್ಟ್ರಪತಿ ಹೀಗೆ ಹಲವು ಬಗೆಯ ಉನ್ನತ ಸ್ಥಾನಗಳು ಅಲಂಕರಿಸಿದ್ದ ಮೇರು ವ್ಯಕ್ತಿತ್ವದ ಮಹಾಪುರುಷರ ಜನ್ಮದಿನ ಅಂದು. ಅವರೇ ನಮ್ಮೆಲ್ಲರ ನೆಚ್ಚಿನ ಶಿಕ್ಷಕ, ಭಾರತ ದೇಶದ ಎರಡನೇ ರಾಷ್ಟ್ರಪತಿ, ಮೊದಲನೇ ಉಪರಾಷ್ಟ್ರಪತಿ, ರಾಜ್ಯ ಸಭೆಯ ಪ್ರಥಮ ಸಭಾಧ್ಯಕ್ಷರಾದ ಭಾರತ ರತ್ನ ಶ್ರೀಸರ್ವಪಲ್ಲಿ ರಾಧಾಕೃಷ್ಣನ್.

ಇವರು ಜನಿಸಿದ್ದು ದಕ್ಷಿಣ ಭಾರತದ ಆಂಧ್ರಪ್ರದೇಶ ಹಾಗೂ ತಮಿಳುನಾಡು ಗಡಿಭಾಗದ ತಿರುತ್ತಣಿ ಎಂಬಲ್ಲಿ. ಕುಗ್ರಾಮದಲ್ಲಿ ಜನಿಸಿದ ಮಗುವೊಂದು ಮುಂದೆ ಭಾರತದ ಅತ್ಯುನ್ನತವಾದ ಪದವಿ ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಿದ ಕಥೆಯ ರೋಚಕ ವಾಗಿದೆ. 1888ರ ಸೆಪ್ಟಂಬರ್ 5ರಂದು ವೀರಸ್ವಾಮಿ ಹಾಗೂ ಸೀತಮ್ಮ ಪುತ್ರರಾಗಿ ಜನಿಸಿದರು. ಇವರ ಮುತ್ತಜ್ಜ ಆಂಧ್ರಪ್ರದೇಶದ ಸರ್ವಪಲ್ಲಿ ಯಿಂದ ತಿರುತ್ತಣಿಗೆ ಬಂದು ನೆಲೆಸಿರುತ್ತಾರೆ. ಹಾಗಾಗಿ ಸರ್ವಪಲ್ಲಿ ಎಂಬುದು ಅವರ ಮೂಲ ನೆಲೆಯ ಹೆಸರಾಗಿದೆ. ವೀರಸ್ವಾಮಿಯವರಿಗೆ ತಮ್ಮ ಮಗ ಆಂಗ್ಲ ಭಾಷೆ ಕಲಿಯುವುದು ಇಷ್ಟವಿರಲಿಲ್ಲ. ಅವರಿಗೆ ತಮ್ಮ ಮಗ ಸಂಸ್ಕೃತ ಅಧ್ಯಯನ ಮಾಡಬೇಕೆಂಬ ಬಯಕೆಯಿತ್ತು.

ರಾಧಾಕೃಷ್ಣ ರವರನ್ನು ತಿರುಪತಿಯ ಶಾಲೆಗೆ ಸೇರಿಸುತ್ತಾರೆ. ತಮ್ಮ ಪ್ರೌಢಶಿಕ್ಷಣವನ್ನು ತಿರುಪತಿಯಲ್ಲಿ ಮುಗಿಸಿ, ಪಿ.ಯು ವ್ಯಾಸಂಗಕ್ಕೆ ವೆಲ್ಲೂರಿಗೆ ತೆರಳುತ್ತಾರೆ. ಅಧ್ಯಯನದಲ್ಲಿ ಅಪಾರ ಆಸಕ್ತಿ, ಸ್ಮರಣಶಕ್ತಿ, ಗ್ರಹಿಕಾ ಶಕ್ತಿಯನ್ನು ಯಥೇಚ್ಛ ವಾಗಿ ಹೊಂದಿದ್ದ ರಾಧಾಕೃಷ್ಣರವರು ವಿದ್ಯಾರ್ಥಿವೇತನದಿಂದಲೇ ತತ್ತ್ವಶಾಸ್ತ್ರ ವಿಷಯದಲ್ಲಿ ಬಿ.ಎ. ಪದವಿಯನ್ನು ಪಡೆದುಕೊಂಡು ಉತ್ತಮ ವಿದ್ಯಾರ್ಥಿ ಎನ್ನಿಸಿ ಕೊಂಡರು. ತಮ್ಮ ಇಷ್ಟದ ವಿಷಯವಾದ ತತ್ತ್ವಶಾಸ್ತ್ರ ದಲ್ಲಿ ಎಂ.ಎ ಪದವಿ ಪಡೆದು ಶಿಕ್ಷಣ ಇಲಾಖೆಯ ಉಪ – ಸಹಾಯಕ ನ್‌ಸ್‌‌ಪೆಕ್ಟರ್ ಆಗಿ, ಉಪನ್ಯಾಸಕರಾಗಿ ತಮಿಳುನಾಡು ಹಾಗೂ ಆಂಧ್ರದಲ್ಲಿ ಸೇವೆ ಸಲ್ಲಿಸಿದರು. ಈ ಅವಧಿ ಯಲ್ಲಿ ಸಂಸ್ಕೃತವನ್ನು ಪಂಡಿತರಿಂದ ಕಲಿತರಲ್ಲದೆ ಮಹಾತ್ಮ ಗಾಂಧಿಯವರನ್ನು ಭೇಟಿಯಾಗಿ ರಾಷ್ಟ್ರೀಯ ಚಳುವಳಿಗೆ ಕೈಜೋಡಿಸಿದರು. ತಮ್ಮ ಲೇಖನಗಳ ಮೂಲಕ ಚಳುವಳಿಗಾರರನ್ನು ಹುರಿದುಂಬಿಸಿದರು.

ನೀವೊಬ್ಬರೇ ನಮ್ಮನ್ನು ಒಬ್ಬ ಮನುಷ್ಯನಂತೆ ಕಂಡು ವರ್ತಿಸಿದವರು. ನೀವು ನಮ್ಮನ್ನು ಬಿಟ್ಟು ಹೋಗುತ್ತಿರುವಿರಿ. ನನಗೆ ಇದು ದುಃಖ ನೀಡಿದೆ. ನೀವು ಹೆಚ್ಚುಕಾಲ ಬಾಳಬೇಕೆಂದು ನಮ್ಮ ಆಸೆ. ನಾನು ಹೆಚ್ಚು ಕಾಲ ಬಾಳುವುದಿಲ್ಲ, ಹೀಗೆಂದವರು ರಷ್ಯಾದ ಅಧ್ಯಕ್ಷ ಸ್ಟಾಲಿನ್. ರಷ್ಯಾ ದೇಶದಿಂದ ರಾಧಾಕೃಷ್ಣನ್ ಅವರಿಗೆ ಬೀಳ್ಕೊಡುತ್ತಿದ್ದಾಗ ಹೇಳಿದ ಮನ ಮಿಡಿಯುವ ಮಾತಿದು.

ರಾಧಾಕೃಷ್ಣನ್ ಅವರಿಗೆ ಮೈಸೂರಿನ ನಂಟು: ಸರ್ವಪಲ್ಲಿ ರಾಧಾಕೃಷ್ಣನ್ ಅವರಿಗೂ ಮೈಸೂರಿಗೂ ಅವಿನಾಭಾವ ಸಂಬಂಧವಿದೆ. ರಾಧಾಕೃಷ್ಣನ್ ಮೈಸೂರನ್ನು ತಮ್ಮ ಕರ್ಮಭೂಮಿ ಎಂದು ಹೇಳಿಕೊಂಡಿರುವ ನಿದರ್ಶನವಿದೆ. ಯಾವುದೇ ಪ್ರತಿಭಾವಂತ ವ್ಯಕ್ತಿಯ ಮೂಲ ಇತಿಹಾಸ ನೋಡಿದಾಗ ಅದರಲ್ಲಿ ಮೈಸೂರಿನ ನಂಟು ಇದ್ದೇ ಇರುತ್ತದೆ. ಇದಕ್ಕೆ ರಾಧಾಕೃಷ್ಣನ್ ಸಹ ಹೊರತಾಗಿಲ್ಲ. ಇವರು ಸಹ ಹಲವು ವರ್ಷಗಳ ಕಾಲ ಮೈಸೂರಿನಲ್ಲಿ ನೆಲೆಸಿದ್ದರು. ರಾಧಾಕೃಷ್ಣನ್ ಮಹಾರಾಜರ ಕಾಲದಲ್ಲಿ ಮೈಸೂರು ವಿಶ್ವವಿದ್ಯಾಲಯದ ತತ್ತ್ವಶಾಸ್ತ್ರ ವಿಭಾಗದ ಉಪ – ಪ್ರಾಧ್ಯಾಪಕರಾಗಿ ಆಯ್ಕೆಯಾಗುತ್ತಾರೆ. ಮೈಸೂರು ಮಹಾರಾಜ ಕಾಲೇಜಿನ ಉತ್ತಮ ಪ್ರಾಧ್ಯಾಪಕರಾಗಿದ್ದವರು. ವಿದ್ಯಾರ್ಥಿಗಳ ಪ್ರೀತಿಗೆ ಪಾತ್ರವಾಗಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ನಡುವಿನ ಬಾಂಧವ್ಯವನ್ನು ಎತ್ತಿ ಹಿಡಿದ ಮೊದಲಿಗ ರಾಗಿದ್ದರು. ಯಾವಾಗಬೇಕೆಂದರೆ ಅವಾಗ ತಮ್ಮ ಪ್ರಾಧ್ಯಾಪಕತ್ವವನ್ನು ಕಳಚಿ ಯುವಕರಂತೆ ಹಾಸ್ಯ, ವಿನೋದಗಳಿಂದ ವಿದ್ಯಾರ್ಥಿಗಳ ಮನ ತಣಿಸುತ್ತಿದ್ದರು.

ಶಿಕ್ಷಕನೊಬ್ಬನ ಗೌರವವು ಬೋಧನೆಯಿಂದಲೆ ವೃದ್ಧಿಸುತ್ತದೆ. ಜತೆಗೆ ವ್ಯಕ್ತಿತ್ವದ ಸೌಜನ್ಯ, ಸ್ನೇಹಶೀಲತೆ ಎಲ್ಲರ ಗಮನವನ್ನು ಸೆಳೆಯುತ್ತದೆ. ರಾಧಾಕೃಷ್ಣನ್ ಅವರು ಕೋಲ್ಕತಾ ವಿಶ್ವವಿದ್ಯಾಲಯದ ತತ್ತ್ವಶಾಸ್ತ್ರ ಪ್ರಾಧ್ಯಾಪಕರಾಗಿ ನೇಮಕಗೊಂಡಾಗ ಮೈಸೂರಿನಿಂದ ಹೊರಟ ದಿನ ಅವರಿಗೆ ವಿದ್ಯಾರ್ಥಿಗಳು ಕೊಟ್ಟಂಥ ಬೀಳ್ಕೊಡುಗೆ ಯಾವ ಚಕ್ರವರ್ತಿಗೂ ದೊರೆತಿರಲಾರದು. ಅಂದಿನ ವಾತಾವರಣದಲ್ಲಿ ವೈಭವಕ್ಕಿಂತ ಹೆಚ್ಚಾಗಿ ಗುರುವಿನ ಮೇಲಿದ್ದ ಗುರು ಪ್ರೇಮ. ವಿದ್ಯಾರ್ಥಿಗಳು ತಮ್ಮ ಗುರುಭಕ್ತಿಯನ್ನು ಸಮರ್ಪಿಸಿದರು. ಮೈಸೂರಿನ ಮಹಾರಾಜ ಕಾಲೇಜಿನಿಂದ ರೈಲ್ವೆ ನಿಲ್ದಾಣದವರೆಗೂ ರಾಧಾಕೃಷ್ಣನ್ ಅವರನ್ನು ವಿದ್ಯಾರ್ಥಿಗಳು ಪ್ರೀತಿಯಿಂದ ಬಿಳ್ಕೊಟ್ಟರು.

ಅಂದು ಸಾರೋಟಿಗೆ ಕುದುರೆ ಕಟ್ಟಿರಲಿಲ್ಲ. ಬದಲಾಗಿ ರಾಧಾಕೃಷ್ಣರು ಕುಳಿತಿದ್ದ ಸಾರೋಟನ್ನು ವಿದ್ಯಾರ್ಥಿಗಳೇ ಎಳೆದು ರೈಲ್ವೆ ನಿಲ್ದಾಣದಲ್ಲಿ ರತ್ನಗಂಬಳಿ ಹಾಸಿ ಅವರು ನಡೆದಾಡುವ ದಾರಿಗೆ ಪುಷ್ಪವೃಷ್ಟಿ ಮಾಡಿ ಜೈಕಾರ ಮೊಳಗಿಸಿದರು. ಅವರಿಗೆ ಕಾಯ್ದಿರಿಸಿದ್ದ ಕಂಪಾರ್ಟ್‌ಮೆಂಟ್ ಅನ್ನು ಭಕ್ತರು ದೇವರಿಗೆ ಸಿಂಗಾರಗೊಳಿಸುವ ದೇವಸ್ಥಾನದಂತೆ ಸಿಂಗಾರಗೊಳಿಸಿದ್ದರು. ಈ ಪ್ರಸಂಗವು ರಾಧಾಕೃಷ್ಣನ್ ಜೀವನದಲ್ಲಿ ಮರೆಯಲಾಗದ ಮಧುರ ಕ್ಷಣವಾಗಿದೆ. ಮೈಸೂರಿನಲ್ಲಿ ಇದ್ದಷ್ಟು ದಿನವನ್ನು ರಾಧಾಕೃಷ್ಣರು ನೆನಪಿಸಿಕೊಂಡು ತಮ್ಮ ಬರಹಗಳಲ್ಲಿ ನಮೂದಿಸಿದ್ದಾರೆ. ಇಲ್ಲಿ ಕಳೆದ ಅವಿಸ್ಮರಣೀಯ ಕ್ಷಣವನ್ನು ಮರೆಯ ಲಾಗದು ಎಂದಿದ್ದಾರೆ. ರಾಧಾಕೃಷ್ಣನ್ ಪ್ರಾಧ್ಯಾಪಕರಾಗಿ ನೆಲೆಸಿದ್ದ ಬಂಗಲೆ ಇಂದಿಗೂ ಸಹ ಸ್ಮಾರಕವಾಗಿದೆ. ಜಯಚಾಮರಾಜ ಒಡೆಯರು ಮೈಸೂರು ವಿಶ್ವವಿದ್ಯಾಲಯದ ಘಟಿಕೋತ್ಸವಕ್ಕೆ ಮುಖ್ಯ ಅತಿಥಿಗಳಾಗಿ ರಾಧಾಕೃಷ್ಣನ್ ಅವರನ್ನು ಆಹ್ವಾನಿಸಿದ್ದರು. ಅವರಿಗೆ ಡಿ.ಲೀಟ್ ಪದವಿಯನ್ನು ನೀಡಿ ಗೌರವಿಸಲಾಗಿದೆ.

ಅತ್ಯುತ್ತಮ ತತ್ತ್ವಶಾಸ್ತ್ರಜ್ಞರು: ರಾಧಾಕೃಷ್ಣನ್ ನಮ್ಮ ದೇಶ ಕಂಡ ಮಹಾತತ್ತ್ವಜ್ಞಾನಿಗಳಲ್ಲಿ ಅಗ್ರಗಣ್ಯರು. ತಮ್ಮ ಜ್ಞಾನ ಪಾಂಡಿತ್ಯದಿಂದ ಪ್ರಸಿದ್ಧ ತತ್ತ್ವಶಾಸ್ತ್ರಜ್ಞರಾಗಿ, ರಾಜನೀತಿಜ್ಞರಾಗಿ ಕಾರ್ಯ ನಿರ್ವಹಿಸಿದವರು. ರಾಧಾಕೃಷ್ಣನ್ ತತ್ತ್ವಶಾಸ್ತ್ರ ಪ್ರಾಧ್ಯಾಪಕರಾಗಿ ತಮಿಳುನಾಡು, ಆಂಧ್ರ, ಮೈಸೂರು, ಕೋಲ್ಕತಾ, ಬನಾರಸ್ ಮುಂತಾದ ವಿಶ್ವವಿದ್ಯಾಲಯಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ರಾಧಾಕೃಷ್ಣನ್ ಕೋಲ್ಕತಾ, ಬನಾರಸ್ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದವರು. ತಮ್ಮ ಬರವಣಿಗೆಯ ಮೂಲಕ ನಮ್ಮ ತತ್ತ್ವಜ್ಞಾನದ ಮಹತ್ವವನ್ನು ಪಾಶ್ಚಾತ್ಯರಿಗೆ ತಿಳಿಸಿದವರು.

ಭಾರತೀಯರನ್ನು ಕೀಳು ಮನೋಭಾವದಲ್ಲಿ ಕಾಣುವ ಅಭಿರುಚಿ ಹೊಂದಿದ್ದ ಪಾಶ್ಚಾತ್ಯರಿಗೆ ಈ ಮೂಲಕ ನಮ್ಮ ತತ್ತ್ವಜ್ಞಾನದ ಹಿರಿಮೆಯನ್ನು ತೋರಿಸಿಕೊಟ್ಟವರು. ಭಾರತದ ಪ್ರತಿನಿಧಿ ಯಾಗಿ ಇಂಗ್ಲೆಂಡ್, ಅಮೆರಿಕ ಮುಂತಾದ ದೇಶಗಳಲ್ಲಿ ಭಾಷಣ ಮಾಡಿ ಎಲ್ಲರ ಮನಸೂರೆ ಗೊಳಿಸಿದವರು. ರಾಧಾಕೃಷ್ಣನ್ ಹಿಂದೂ ಧರ್ಮದ ತತ್ತ್ವಶಾಸ್ತ್ರ ಮತ್ತು ಸಾಹಿತ್ಯವನ್ನೆಲ್ಲ ಅಧ್ಯಯನ
ಮಾಡಿದ್ದರು. ಸ್ವಾಮಿ ವಿವೇಕಾನಂದರ ವಿಚಾರಧಾರೆಯಿಂದ ಆಕರ್ಷಿತರಾಗಿ ಶಿಕ್ಷಣವು ಜೀವನದ ಅವಿಭಾಜ್ಯ ಅಂಗವೆಂದು ತಿಳಿಸಿದವರು. ಹಿಂದೂ ಧರ್ಮ ಹಾಗೂ ವೇದಾಂತ ಅಸತ್ಯ ನುಡಿಯುವುದಿಲ್ಲ, ಭಾರತೀಯರ ಚಿಂತನೆ ಗಳು ನಿಗೂಢವಲ್ಲ ಬದಲಾಗಿ ಜೀವನದ ನಾಡಿಮಿಡಿತ ಗಳನ್ನು ತಿಳಿಸುವುದಾಗಿದೆ ಎಂದು ತಿಳಿಸಿದಂಥ ಮಹಾ ತತ್ತ್ವಜ್ಞಾನಿ ಸರ್ವಪಲ್ಲಿ ರಾಧಾಕೃಷ್ಣನ್.

ರಾಷ್ಟ್ರಪತಿಗಳಾಗಿ ರಾಧಾಕೃಷ್ಣನ್: ಸಾಮಾನ್ಯ ಪ್ರಾಧ್ಯಾಪಕರಾಗಿದ್ದವರು ಭಾರತದ ಅತ್ಯುನ್ನತ ಸ್ಥಾನವಾದ ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಿದ ಕೀರ್ತಿ ರಾಧಾಕೃಷ್ಣನ್‌ಗೆ ಸಲ್ಲುತ್ತದೆ. ಬಡಕುಟುಂಬ ದಿಂದ ಜನಿಸಿ ಬಂದು ತನ್ನ ಜ್ಞಾನ
ಕೌಶಲ್ಯ, ಸ್ಮರಣಶಕ್ತಿ ಪ್ರೌಢಿಮೆಯ ಮೂಲಕ ಅತ್ಯುನ್ನತ ಸ್ಥಾನ ಅಲಂಕರಿಸಿದ ಹೆಗ್ಗಳಿಕೆ ಅವರದ್ದು. ರಾಧಾಕೃಷ್ಣನ್ 1948ರಲ್ಲಿ ಮೇಲ್ಮನೆ ಸದಸ್ಯರಾಗಿ ಆಯ್ಕೆಯಾಗುತ್ತಾರೆ. ನಂತರ ರಾಜ್ಯಸಭೆಯ ಪ್ರಥಮ ಸಭಾಧ್ಯಕ್ಷರಾಗುತ್ತಾರೆ.

ಅಷ್ಟೇ ಅಲ್ಲದೆ ಭಾರತ ದೇಶದ ಪ್ರಥಮ ಉಪರಾಷ್ಟ್ರಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಬಾಬು ರಾಜೇಂದ್ರ ಪ್ರಸಾದ್‌ರವರು ನಿರ್ಗಮಿಸಿದ ನಂತರ ದೇಶದ ಎರಡನೇ ರಾಷ್ಟ್ರಪತಿಗಳಾಗುತ್ತಾರೆ. ತಾವು ರಾಷ್ಟ್ರಪತಿಗಳಾಗಿದ್ದ ಸಂದರ್ಭದಲ್ಲಿ ವಿದೇಶಗಳ ಜೊತೆ
ಉತ್ತಮ ಬಾಂಧವ್ಯ ಬೆಸೆದು ಭಾರತವನ್ನು ಜಗಜ್ಜಾಹೀರುಗೊಳಿಸುತ್ತಾರೆ. ರಷ್ಯಾ ಮತ್ತು ಭಾರತ ನಡುವಿನ ಅಭೂತಪೂರ್ವ ಸ್ನೇಹಕ್ಕೆ ಮುನ್ನುಡಿ ಬರೆದವರು ಇದೇ ಸರ್ವಪಲ್ಲಿ ರಾಧಾಕೃಷ್ಣನ್.

ತಮ್ಮ ಅವಿರಮಿತ ಸೇವೆಗೆ ಭಾರತರತ್ನ ಪುರಸ್ಕಾರವನ್ನು ಪಡೆದು ಜನಮಾನಸದಲ್ಲಿ ಅಚ್ಚಳಿಯದೇ ಉಳಿದ ಶಿಕ್ಷಕರಾಗಿದ್ದಾರೆ. ತಮ್ಮ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಬೇಕೆಂದು ತಿಳಿಸಿ ಶಿಕ್ಷಕರಿಗೆ ಗೌರವ ನೀಡುವ ಉದ್ದೇಶದಿಂದ ಗುರುಗಳ ಮಹತ್ವವನ್ನು ಸಾರಿ ಮಹಾ ಗುರುಗಳಾಗಿದ್ದಾರೆ. ನಮಗೆ ಶಿಕ್ಷಣ ನೀಡಿದ ಪ್ರತಿಯೊಬ್ಬ ಗುರುವಿಗೂ ವಂದಿಸುವುದು ನಮ್ಮ ಧರ್ಮವೆಂದು ತಿಳಿಸಿ ಶಿಕ್ಷಕ ರತ್ನರಾಗಿ ಅಜರಾಮರ ವಾಗಿದ್ದಾರೆ. ಎಲ್ಲಾ ಶಿಕ್ಷಕರಿಗೂ ಶಿಕ್ಷಕರ ದಿನದ ಗೌರವ ಪೂರ್ವಕ ಶುಭಾಶಯಗಳು.