Friday, 20th September 2024

ಆನ್‌ಲೈನ್ ಶಿಕ್ಷಣ ವಿದ್ಯಾರ್ಥಿ ಭವಿಷ್ಯಕ್ಕೆ ಎಷ್ಟು ಪೂರಕ?

ಅಭಿಮತ

ಆದರ್ಶ್ ಶೆಟ್ಟಿ ಉಪ್ಪಿನಂಗಡಿ

ಜಗತ್ತಿಗೆ ಅಪ್ಪಳಿಸಿದ ಕರೋನಾ ಕಂಟಕದಿಂದ ಶಿಕ್ಷಣ ಕ್ಷೇತ್ರಕ್ಕೂ ಇದರ ಬಿಸಿ ತಟ್ಟಿದೆ. ಜೂನ್ ತಿಂಗಳಲ್ಲಿ ಆರಂಭವಾಗಬೇಕಿದ್ದ ಶಾಲಾ ಕಾಲೇಜುಗಳ ಬಾಗಿಲು ಬಂದ್ ಆಗಿವೆ. ಆಟದ ಮೈದಾನ, ತರಗತಿ ಕೊಠಡಿಗಳಲ್ಲಿ ನೀರವ ಮೌನ ಆವರಿಸಿವೆ. ಶಾಲಾ ವಾಹನಗಳ ಸಂಚಾರ ಸ್ಥಗಿತಗೊಂಡಿವೆ.

ಶಾಲಾ ವಠಾರದಲ್ಲಿ ಆಟವಾಡಿ ಕುಣಿದು ಕುಪ್ಪಳಿಸಬೇಕಾದ ಮಕ್ಕಳು ಹಳ್ಳಿಗಾಡಿನ ಗದ್ದೆ, ಬಯಲಿನಲ್ಲಿ ಆಟವಾಡಿ ಕೆರೆ ನದಿಗಳಲ್ಲಿ ಈಜಾಡಿ ಸಂಭ್ರಮಿಸುತ್ತಿದ್ದರೆ, ಇತ್ತ ಪ್ರೌಢಾವಸ್ಥೆಗೆ ಬಂದ ಪದವಿ ಮತ್ತು ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹಣ ಸಂಪಾದನೆಗಾಗಿ ಕೂಲಿ ಕೆಲಸಕ್ಕೋ, ಅಂಗಡಿ, ಹೋಟೆಲ್‌ಗಳಲ್ಲಿ ದುಡಿಯುತ್ತಿರುವುದನ್ನು ಕಾಣಬಹುದು.

ಬದುಕು ಅಂದರೇನೆ ಹೀಗೆ ಕಷ್ಟ, ಸುಖ, ಸಿಹಿ, ಕಹಿ ಎಲ್ಲವೂ ಬೆರೆತಾಗ ಮಾತ್ರ ಅದೊಂದು ಪರಿಪೂರ್ಣ ಜೀವನವೆನಿಸಿಕೊಳ್ಳುತ್ತದೆ. ವಿದ್ಯಾರ್ಥಿಗಳಿಗೂ ಜೀವನಾನುಭವವಾಗಬೇಕಿದ್ದರೆ ಎಲ್ಲಾ ಅಭಿರುಚಿ, ಕ್ರೀಡೆ, ದುಡಿಮೆ, ಜನರೊಂದಿಗೆ ಬೆರೆತಾಗ ಮಾತ್ರ ಇದು ಸಿಗಲು ಸಾಧ್ಯ ಮತ್ತು ಜತೆಗೆ ಸಾಮಾನ್ಯ ಜ್ಞಾನವೂ ಲಭಿಸುತ್ತದೆ. ಇವೆಲ್ಲದರ ಮಧ್ಯೆ ಸಾಮಾನ್ಯ ಪಠ್ಯಕ್ರಮಕ್ಕೆ ಪರ್ಯಾಯವಲ್ಲದ ಆನ್‌ಲೈನ್ ಶಿಕ್ಷಣವನ್ನು ಪ್ರಸ್ತುತ ವಿದ್ಯಾರ್ಥಿಗಳಿಗೆ ಬೋಧಿಸಲಾಗುತ್ತಿದೆ.

1ನೇ ತರಗತಿಯಿಂದ 5ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ನಡೆಸಲಾಗುವ ತರಗತಿಗಳು ಆ ಎಳೆಯ ಮಕ್ಕಳ ಕಲಿಕೆಗೆ ಪೂರಕ ವಾಗುವುದು ಬಲು ಕಷ್ಟ. ಭಾರತವು ಕೃಷಿ ಪ್ರಧಾನವಾದ ಹಳ್ಳಿಗಳಿಂದ ಕೂಡಿದ ರಾಷ್ಟ್ರ. ಈಗಲೂ ಅನೇಕ ಕಡೆಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲದ ಹಳ್ಳಿಗಳು ಒಂದೆಡೆಯಾದರೆ, ಅನೇಕ ಕಡೆಗಳಲ್ಲಿ ಸ್ಥಿರವಾದ ಇಂಟರ್ ನೆಟ್ ಸೌಕರ್ಯ ಗಳಿಲ್ಲದೆ, ಮನೆಯೊಳಗೆ ಕರೆಗಳು ಸಿಗದೆ ಹೊರಗಡೆ ಮೊಬೈಲ್ ನೇತಾಡಿಸಿ ಇಡುವ ಪರಿಸ್ಥಿತಿಯಿದೆ.

ಕೂಲಿ ಕೆಲಸ ನಿರ್ವಹಿಸುವ ದಿನಗೂಲಿ ನೌಕರನಿಗೆ ಅಥವಾ ಬಡವರ್ಗದ ಪೋಷಕರಿಗೆ ಆನ್‌ಲೈನ್ ಶಿಕ್ಷಣ ಎಂಬುದು ಕಬ್ಬಿಣದ ಕಡಲೆಯೇ ಸರಿ. ಉಳ್ಳವರು ತಮ್ಮ ಮಕ್ಕಳಿಗೆ ಮೊಬೈಲ್, ಲ್ಯಾಪ್ ಟಾಪ್, ಟ್ಯಾಬ್, ಇಂಟರ್ನೆಟ್ ವ್ಯವಸ್ಥೆ ಮಾಡಿದರೆ, ಬಡ ಹಳ್ಳಿಿ ಪ್ರದೇಶದ ವಿದ್ಯಾಾರ್ಥಿಗಳು ಇಂತಹ ತರಗತಿಯ ಸಂದರ್ಭದಲ್ಲಿ ಎತ್ತರದ ಗುಡ್ಡ ಪ್ರದೇಶಗಳಿಗೆ ತೆರಳಿ ಪಾಠ ಆಲಿಸಬೇಕಾದ, ಆನ್‌ಲೈನ್ ಸಂಪರ್ಕದ ದೃಷ್ಠಿಯಿಂದ ದೂರಪ್ರದೇಶವನ್ನು ಅವಲಂಬಿಸಬೇಕಾದ ಅನಿವಾರ್ಯತೆಯಿದೆ.

ಸರಕಾರ ಆನ್‌ಲೈನ್ ಕ್ಲಾಸ್ ನಿಷೇಧಿಸಿದ್ದರೂ ಖಾಸಗಿ ಶಿಕ್ಷಣ ಸಂಸ್ಥೆಗಳು ಹೈ ಕೋರ್ಟ್ ಮೆಟ್ಟಿಲೇರಿ ಅನುಮತಿ ಪಡೆದಿರುವ ಹಿಂದೆ ಬಹುದೊಡ್ಡ ಲಾಭಿಗಳನ್ನು ಅಲ್ಲಗೆಳೆಯುವಂತಿಲ್ಲ. ಕಳೆದ 5-6 ತಿಂಗಳಿನಿಂದ ಸ್ಥಗಿತಗೊಂಡಿದ್ದ ಪಠ್ಯ ಚಟುವಟಿಕೆಗಳಿಂದ ದೂರವುಳಿದಿದ್ದ ವಿದ್ಯಾಾರ್ಥಿಗಳಿಗೆ ಶಿಕ್ಷಣದ ಸಂಪರ್ಕ ಹಿನ್ನೆಲೆಯಲ್ಲಿ ಪಾಠ, ಹೋಂ ವರ್ಕ್‌ಗಳು ಉತ್ತಮ ನಡೆಯೇ ಸರಿ. ಆದರೆ ಇದೇ ಶಿಕ್ಷಣವನ್ನು ಅಂಕ ಗಳಿಕೆಗೋ, ಸಾಮರ್ಥ್ಯ ಪರೀಕ್ಷೆ ಅಥವಾ ಮುಂದಿನ ತರಗತಿಗೆ ತೇರ್ಗಡೆಗೊಳಿಸಲು ಇದನ್ನು ಮಾನ ದಂಡವಾಗಿಸಬಾರದು.

ದೈನಂದಿನ ತರಗತಿಯಲ್ಲೇ ಕಲಿಯುವಿಕೆಯಲ್ಲಿ ಹಿಂದುಳಿಯುವ ಅಷ್ಟಾಗಿ ಚುರುಕಿರದ ವಿದ್ಯಾರ್ಥಿಗಳು ಆನ್ ಲೈನ್ ಶಿಕ್ಷಣದ ಕಡೆ ಗಮನ ಕೊಡಲು ಹಿಂದೇಟು ಹಾಕುವ ಸಾಧ್ಯತೆಗಳಿರುವುದರಿಂದ ಈ ಶಿಕ್ಷಣದ ಸಾಧಕ ಬಾಧಕಗಳನ್ನು ಅರಿಯುವ ಅವಶ್ಯಕತೆ ಯಿದೆ. ಶಿಕ್ಷಣವೆಂಬುವುದನ್ನು ಸೇವೆಯ ಬದಲು ವ್ಯಾಪಾರ, ಪ್ರತಿಷ್ಠೆಯ ಸರಕನ್ನಾಗಿ ಕಾಣುವ ಮನಸ್ಥಿತಯಿಂದ ಹೊರಬರ ಬೇಕಾಗಿದೆ. ಈ ವ್ಯವಸ್ಥೆಯನ್ನೇ ಪ್ರಧಾನವಾಗಿ ಬಳಸಿದರೆ ವಿದ್ಯಾರ್ಥಿಯ ಶೈಕ್ಷಣಿಕ ಬದುಕಿಗೆ ಮಾರಕವಾಗುವುದಲ್ಲದೆ ಶಿಕ್ಷಣದ ಮೌಲ್ಯವು ಕುಸಿದಂತೆಯೇ ಸರಿ.