ಸ್ವಾಸ್ಥ್ಯ ಸಂಪದ
Yoganna55@gmail.com
ಆಂಟಿಬಯಾಟಿಕ್ಸ್ (ಸೂಕ್ಷ್ಮಜೀವಿ ನಿರೋಧಕ) ಎಂದರೆ ಜೀವಕ್ಕೆ ವಿರೋಧವಾದುದು ಎಂದರ್ಥ. ಸೂಕ್ಷ್ಮಜೀವಿಗಳನ್ನು ಕೊಲ್ಲುವ ಅಥವಾ ಮತ್ತು ಅವುಗಳ ವೃದ್ಧಿಯನ್ನು ನಿಯಂತ್ರಿಸುವ ಔಷಧಗಳಿವು. ಸೂಕ್ಷ್ಮಜೀವಿಗಳಿಂದುಂಟಾಗುವ ಕಾಯಿಲೆ ಗಳನ್ನು ‘ಸೋಂಕುರೋಗಗಳು’(ಇನ್ ಫೆಕ್ಟೀವ್ ಡಿಸೀಸಸ್) ಎನ್ನಲಾ ಗುತ್ತದೆ. ಸೂಕ್ಷ್ಮಜೀವಿಗಳ ಸೋಂಕುರೋಗ ಗಳನ್ನು ನಿಯಂತ್ರಿಸಲು ಅವುಗಳನ್ನು ಕೊಲ್ಲಲು ಅಥವಾ ಅವುಗಳ ವೃದ್ಧಿಯನ್ನು ನಿಯಂತ್ರಿಸಲು ಸೂಕ್ಷ್ಮಜೀವಿ ನಿರೋಧಕ ಔಷಧ ಗಳನ್ನು ಉಪಯೋಗಿಸಲಾಗುತ್ತದೆ.
ಮನುಷ್ಯನ ದೇಹ ಹಲವಾರು ಸೂಕ್ಷ್ಮಜೀವಿಗಳ ದಾಳಿಗೆ ಪ್ರತಿನಿತ್ಯ ತುತ್ತಾಗುವ ಸಾಧ್ಯತೆ ಇರುವುದರಿಂದ ಪ್ರತಿಯೊಬ್ಬರೂ ಈ ಸೋಂಕು ರೋಗಗಳಿಗೆ ಈಡಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆಂಟಿಬಯಾಟಿಕ್ ಗಳು ಭಾರತದಲ್ಲಿ ವೈದ್ಯರ ಸಲಹೆ ಇಲ್ಲದೆ ಔಷಧ ಅಂಗಡಿಗಳಲ್ಲಿ ಸುಲಭವಾಗಿ ದೊರೆಯುವುದರಿಂದ ರೋಗಿಗಳು ಸ್ವಯಂ ಔಷಧ ಮಾಡಿಕೊಂಡು ಹಲವಾರು ಬಗೆಯ ಅವಘಡಗಳಿಗೀಡಾಗುತ್ತಿದ್ದಾರೆ. ದುರುಪಯೋಗವಾಗುತ್ತಿರುವ ಔಷಧಗಳಲ್ಲಿ ಇವು ಪ್ರಮುಖವಾದವು ಗಳಾಗಿವೆ.
ವಿಶ್ವ ಸೂಕ್ಷ್ಮಜೀವಿ ವಿರೋಧಿ ವಾರ
ಆಂಟಿ ಬಯಾಟಿಕ್‌ಗಳ ದುರುಪಯೋಗಗಳಿಂದಾಗುವ ಅನಾಹುತಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ವಿಶ್ವ ಆರೋಗ್ಯ ಸಂಸ್ಥೆ ಪ್ರತಿವರ್ಷ ನವೆಂಬರ್ ೧೮-೨೪ರ ಅವಧಿಯಲ್ಲಿ ‘ವಿಶ್ವ ಸೂಕ್ಷ್ಮಜೀವಿ ವಿರೋಧ ವಾರ’ ಎಂಬ ಶೀರ್ಷಿಕೆಯಡಿ ಯಲ್ಲಿ ಘೋಷಣೆಯನ್ನು ಹೊರಡಿಸಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರತಿವರ್ಷ ಘೋಷಣಾ ವಾಕ್ಯವೊಂದನ್ನು ಹೊರಡಿಸಿ ವರ್ಷವಿಡೀ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ.
ಈ ವರ್ಷದ ಘೋಷಣಾ ವಾಕ್ಯ ‘ಸೂಕ್ಷ್ಮಜೀವಿಗಳ ನಿರೋಧಕತ್ವ’ (ಆಂಟಿಬಯಾಟಿಕ್ ರೆಸಿಸ್ಟೆನ್ಸ್) ಎಂಬುದಾಗಿದೆ. ಈ ಹಿನ್ನೆಲೆ ಯಲ್ಲಿ ಸೂಕ್ಷ್ಮಜೀವಿಗಳು ಎಂದರೇನು? ಅವುಗಳಿಂದುಂಟಾಗುವ ಕಾಯಿಲೆಗಳಾವುವು? ಆಂಟಿಬಯಾಟಿಕ್ ಗಳಾವುವು? ಉಪಯೋಗ ಮತ್ತು ದುರುಪಯೋಗ, ಲಾಭ ಮತ್ತು ಹಾನಿ, ವಹಿಸಬೇಕಾದ ಎಚ್ಚರಿಕೆಗಳು ಇವುಗಳ ಬಗ್ಗೆ ಬೆಳಕು ಚೆಲ್ಲುವ ಲೇಖನವಿದು.
ಸೃಷ್ಟಿಯ ಉಗಮದ ವಿಕಾಸದ ಹಾದಿಯಲ್ಲಿ ಸುಮಾರು ೩.೫ ಬಿಲಿಯನ್ ವರ್ಷಗಳ ಹಿಂದೆ ಜೀವಿಗಳು ಭೂಮಿಯ ಮೇಲೆ ಸೃಷ್ಟಿಯಾದವು ಎಂದು ಅಂದಾಜಿಸಲಾಗಿದೆ. ಜೀವಿಗಳ ಬದುಕಿಗೆ ಮತ್ತು ಅವುಗಳ ಸಂತಾನೋತ್ಪತ್ತಿಗೆ ಅವಶ್ಯಕವಾದ
ಎಲ್ಲ ಪೂರಕ ವ್ಯವಸ್ಥೆಗಳು ಸೃಷ್ಟಿಯಾದ ನಂತರವೇ ಜೀವಿಗಳು ಸೃಷ್ಟಿಯಾದುದು ಅಗೋಚರ ಸೃಷ್ಟಿಕರ್ತನ ವೈಜ್ಞಾನಿಕ ದೃಷ್ಟಿಗೆ ಹಿಡಿದ ಕೈಗನ್ನಡಿ. ಸೃಷ್ಟಿಯಲ್ಲಿ ವಿವಿಧ ಬಗೆಯ ಜೀವಿಗಳಿದ್ದು, ಸುಮಾರು ೮.೭ ಮಿಲಿಯನ್ ವಿವಿಧ ಜಾತಿಯ ಸಸ್ಯ ಮತ್ತು ಪ್ರಾಣಿಜೀವಿಗಳಿವೆ ಎಂದು ಇದುವರೆವಿಗೆ ವೈಜ್ಞಾನಿಕವಾಗಿ ಕಂಡುಕೊಳ್ಳಲಾಗಿದೆ.
ಇವುಗಳಲ್ಲಿ ಸುಮಾರು ೧.೩ ಮಿಲಿಯನ್ ಜೀವಿಗಳನ್ನು ಮಾತ್ರ ನಿರ್ದಿಷ್ಟವಾಗಿ ಗುರುತಿಸಲಾಗಿದ್ದು, ಇನ್ನುಳಿದವುಗಳ ಬಗ್ಗೆ ವಿವರವಾಗಿ ಅರ್ಥಮಾಡಿಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ. ಸೃಷ್ಟಿಯಲ್ಲಿರುವ ಜೀವಿಗಳನ್ನು ಬರಿಗಣ್ಣಿಗೆ ಕಾಣುವ ‘ದೊಡ್ಡ ಜೀವಿಗಳು’ (ಮ್ಯಾಕ್ರೋಸ್ಕೋಪಿಕ್ ಆರ್ಗ್ಯಾನಿಸಮ್ಸ್) ಮತ್ತು ಬರಿಗಣ್ಣಿಗೆ ಕಾಣದ ಸೂಕ್ಷ್ಮದರ್ಶಕದಿಂದ ಮಾತ್ರ ಕಾಣುವ ‘ಸೂಕ್ಷ್ಮಜೀವಿಗಳು (ಮೈಕ್ರೋಸ್ಕೋಪಿಕ್ ಆರ್ಗ್ಯಾನಿಸಮ್ಸ್, ಮೈಕ್ರೋಬ್ಸ್) ಎಂದು ವಿಂಗಡಿಸಲಾಗಿದ್ದು, ಭೂಮಿಯ ಮೇಲೆ ಸುಮಾರು ೧ ಟ್ರಿಲಿಯನ್ ವಿವಿಧ ಜಾತಿಯ ಸೂಕ್ಷ್ಮಜೀವಿಗಳಿದ್ದು, ಇವುಗಳಲ್ಲಿ ಶೇ ೯೯ರಷ್ಟನ್ನು ಇನ್ನೂ ಗುರುತಿಸಬೇಕಾಗಿದೆ. ಪರಿಸರ ಮತ್ತು ಭೂಮಿಗಳಲ್ಲಿ ಅಸಂಖ್ಯಾತ ಸೂಕ್ಷ್ಮಜೀವಿಗಳಿವೆ.
ಸೃಷ್ಟಿಯಲ್ಲಿರುವ ಪ್ರತಿಯೊಂದು ಜೀವಿಗೂ ನಿರ್ದಿಷ್ಟ, ಸಕಾರಾತ್ಮಕ ಜವಾಬ್ದಾರಿಗಳಿದ್ದು, ಪ್ರತಿಯೊಂದು ಸೂಕ್ಷ್ಮ ಜೀವಿಯೂ ತನ್ನ ಪೂರ್ವನಿಗದಿತ ಜವಾಬ್ದಾರಿಗಳನ್ನು ನಿರ್ವಹಿಸುವ ಜೊತೆ ಜೊತೆಗೆ ತಾನೂ ಬದುಕಿ ತನ್ನ ಸಂತಾನೋತ್ಪತ್ತಿಯನ್ನೂ ಮುಂದುವರೆಸುವ ಮೂಲ ಉದ್ದೇಶವನ್ನು ನಿರ್ವಹಿಸುತ್ತದೆ. ಮನುಷ್ಯನಿಗೂ ಸೂಕ್ಷ್ಮಜೀವಿಗಳಿಗೂ ಅವಿನಾಭಾವ ಸಂಬಂಧ ವಿದ್ದು, ಅವನ ಬದುಕಿಗೂ ಸೂಕ್ಷ್ಮಜೀವಿಗಳು ಅತ್ಯವಶ್ಯಕ.
ಮನುಷ್ಯನ ದೇಹದಲ್ಲಿ ಅವನಿಗೆ ಉಪಯೋಗವಾಗುವ ಸುಮಾರು ೩೯ ಟ್ರಿಲಿಯನ್ ಸೂಕ್ಷ್ಮ ಜೀವಿಗಳಿವೆ ಎಂದು ಅಂದಾಜಿಸ ಲಾಗಿದೆ. ಮನುಷ್ಯನ ಚರ್ಮ, ಜೀರ್ಣಾಂಗ, ಮೂತ್ರಾಂಗ, ಸಂತಾನಾಂಗ, ಕಣ್ಣು, ಕಿವಿ ಇತ್ಯಾದಿ ವ್ಯವಸ್ಥೆಗಳಲ್ಲಿ ಇವು ಹರಡಿ ಕೊಂಡಿದ್ದು, ಮನುಷ್ಯನ ದೇಹವನ್ನು ಉಪಯೋಗಿಸಿಕೊಂಡು ತಾವೂ ಬದುಕುವುದಲ್ಲದೆ ಅವು ಉತ್ಪತ್ತಿ ಮಾಡುವ ರಾಸಾಯ ನಿಕ ವಸ್ತುಗಳು ಮನುಷ್ಯನ ದೈನಂದಿನ ಬದುಕಿಗೂ ಅತ್ಯವಶ್ಯಕ. ಮನುಷ್ಯನಿಗೆ ಉಪಯೋಗಕಾರಿಯಾದ ಸೂಕ್ಷ್ಮಜೀವಿ ಗಳನ್ನು ‘ಉಪಯೋಗಕಾರಿ ಸಹಜ ಸೂಕ್ಷ್ಮಜೀವಿಗಳು’ (ನಾರ್ಮಲ್ ಕಮೆನ್ಸಾಲ್ಸ್) ಎನ್ನಲಾಗುತ್ತದೆ.
ಸೂಕ್ಷ್ಮಜೀವಿಗಳ ವಿಧಗಳು
ಮಾನವನಿಗೆ ಹಾನಿಕಾರಕವಾಗಿ ಹೆಚ್ಚಿನ ಪ್ರಮಾಣದಲ್ಲಿ ಕಾಯಿಲೆಗಳುನ್ನುಂಟುಮಾಡುವ ಸೂಕ್ಷ್ಮಜೀವಿಗಳನ್ನು ಪ್ರಧಾನವಾಗಿ ಬ್ಯಾಕ್ಟೀರಿಯಂಗಳು, ವೈರಸ್‌ಗಳು, ಫಂಗಸ್ ಗಳು, ಪ್ರೋಟೋಝೋವಾಗಳೆಂದು ೪ ಗುಂಪುಗಳಾಗಿ ವಿಂಗಡಿಸಲಾಗಿದೆ. ಸೂಕ್ಷ್ಮಜೀವಿಗಳ ಸೋಂಕುಗಳು ದೇಹದ ಯಾವುದೇ ಭಾಗಕ್ಕಾದರೂ ತಗುಲಬಹುದು. ಆದರೆ ಕೆಲವು ಸೂಕ್ಷ್ಮಜೀವಿಗಳು ದೇಹದ ಕೆಲವು ಅಂಗಾಂಗಗಳನ್ನು ಮಾತ್ರ ಸೋಂಕಿಗೀಡು ಮಾಡಿ ಸಂಬಂಧಿಸಿದ ಅಂಗಾಂಗಗಳ ಕಾಯಿಲೆಗಳನ್ನು ಉಂಟು ಮಾಡುತ್ತವೆ. ಉದಾಹರಣೆಗೆ ಪೋಲಿಯೋ ವೈರಸ್ ನರಮಂಡಲವನ್ನು, ಎಚ್‌ಐವಿ ವೈರಸ್ ಬಿಳಿರಕ್ತಕಣ ಗಳನ್ನು ಸೋಂಕಿಗೀಡುಮಾಡುತ್ತವೆ.
ಬ್ಯಾಕ್ಟೀರಿಯಂ ಸೋಂಕುರೋಗಗಳು
ಬ್ಯಾಕ್ಟೀರಿಯಂಗಳಲ್ಲಿ ಗ್ರಾಂ ಬಣ್ಣ ಕಟ್ಟಿಕೊಳ್ಳುವ(ಗ್ರಾಂ ಪಾಸಿಟೀವ್) ಮತ್ತು ಗ್ರಾಂ ಬಣ್ಣ ಕಟ್ಟಿಕೊಳ್ಳದ (ಗ್ರಾಂ ನೆಗೆಟಿವ್) ಎಂಬ ಎರಡು ಪ್ರಧಾನ ವಿಧಗಳಿದ್ದು, ಇವೆರಡರಿಂದ ಉತ್ಪತ್ತಿಯಾಗುವ ಕಾಯಿಲೆಗಳು, ಅವುಗಳ ಗಂಭೀರತೆ ಮತ್ತು ಅವುಗಳ ನಿಯಂತ್ರಣಕ್ಕಾಗಿ ಉಪಯೋಗಿಸುವ ಆಂಟಿಬಯಾಟಿಕ್‌ಗಳು ವಿಭಿನ್ನವಾಗಿದ್ದು, ಯಾವ ವಿಧದ ಬ್ಯಾಕ್ಟಿರೀಯಂ ಎಂದು ದೃಢೀಕರಿಸಿಕೊಳ್ಳದೇ ಆಂಟಿಬಯಾಟಿಕ್‌ಗಳನ್ನು ಮನಸೋಇಚ್ಛೆ ಉಪಯೋಗಿಸಬಾರದು.
ಕೆಲವು ಬ್ಯಾಕ್ಟೀರಿಯಂಗಳ ಸೋಂಕು ಗಂಭೀರಪ್ರಮಾಣದ್ದಾಗಿದ್ದು, ಅವುಗಳಿಗೆ ಸೂಕ್ತ ಆಂಟಿಬಯಾಟಿಕ್ಸ್‌ಗಳನ್ನು ಉಪಯೋಗಿ ಸದಿದ್ದಲ್ಲಿ ಮಾರಣಾಂತಿಕ ಪರಿಣಾಮ ಉಂಟಾಗಬಹುದು. ಉದಾಹೆಣೆಗೆ ಕ್ಷಯವನ್ನುಂಟು ಮಾಡುವ ಮೈಕೋ ಬ್ಯಾಕ್ಟರಿಯಂ ಟ್ಯುಬರ್‌ಕ್ಯುಲೋಸಿಸ್, ಧನುರ್ವಾಯುವನ್ನುಂಟು ಮಾಡುವ ಕ್ಲಾಸ್ಟ್ರೀಡಿಯಂ ಪರ್ ಪ್ರಿಂಜನ್ಸ್, ಟೈಫಾಯ್ಡ್ ಉಂಟುಮಾಡುವ ಸಾಲ್ಮೊನೆಲ್ಲಾ ಟೈಫಾಯ್ಡ್ ಇತ್ಯಾದಿ ಬ್ಯಾಕ್ಟೀರಿಯಂಗಳು ತಾವು ಉತ್ಪತ್ತಿ ಮಾಡುವ ವಿಷಮಕ ವಸ್ತು (ಟಾಕ್ಸಿನ್ಸ್)ಗಳಿಂದ ಜೀವಕೋಶಗಳನ್ನು ನಾಶಮಾಡಿ ಕಾಯಿಲೆಯನ್ನುಂಟುಮಾಡುತ್ತವೆ.
ಬ್ಯಾಕ್ಟೀರಿಯಂಗಳನ್ನು ಕೊಲ್ಲುವ ಅಥವಾ ಮತ್ತು ವೃದ್ಧಿಯನ್ನು ಕುಂದಿಸುವ ಆಂಟಿ ಬಯಾಟಿಕ್ ಔಷಧಗಳಿವೆ. ಸೋಂಕು ಯಾವ ಬ್ಯಾಕ್ಟೀರಿ ಯಂನಿಂದ ಉಂಟಾಗಿದೆ ಎಂಬುದನ್ನು ಸೂಕ್ತ ತನಿಖಾ ಪರೀಕ್ಷೆಯಿಂದ ದೃಢೀಕರಿಸಿಕೊಂಡು ಅದಕ್ಕೆ ಅನುಗುಣವಾಗಿ ಸೂಕ್ತ ಸೂಕ್ಷ್ಮಜೀವಿ ನಿರೋಧಕ ಔಷಧವನ್ನು ಉಪಯೋಗಿಸಬೇಕು. ಇಲ್ಲದಿದ್ದಲ್ಲಿ ಕಾಯಿಲೆ ನಿಯಂತ್ರಣಕ್ಕೆ ಬರುವುದಿಲ್ಲ, ಮರುಕಳಿಸುತ್ತವೆ.
ವೈರಸ್ ಸೋಂಕು
ವೈರಸ್‌ಗಳು ಅತ್ಯಂತ ಸೂಕ್ಷ್ಮಜೀವಿಗಳಾಗಿದ್ದು, ಸಾಮಾನ್ಯ ಸೂಕ್ಷ್ಮದರ್ಶಕದಿಂದ ವೀಕ್ಷಿಸಲು ಸಾಧ್ಯವಿಲ್ಲ. ಅಲ್ಟ್ರಾ
ಮೈಕ್ರೋಸ್ಕೋಪ್‌ನಿಂದ ಮಾತ್ರ ವೀಕ್ಷಿಸಬಹುದಾಗಿದೆ. ಇವು ಡಿಎನ್‌ಎ(ಡಿಆಕ್ಸ್‌ರೈಬೋನ್ಯೂಕ್ಲಿಕ್‌ಆಸಿಡ್) ಮತ್ತು ಆರ್
ಎನ್‌ಎ (ರೈಬೋನ್ಯೂಕ್ಲಿಕ್‌ಆಸಿಡ್) ಪ್ರೋಟೀನ್‌ಗಳಿಂದ ರಚಿತವಾಗಿದ್ದು, ಅನುಕ್ರಮವಾಗಿ ಡಿಎನ್‌ಎ ಮತ್ತು ಆರ್‌ಎನ್ ಎಲ್ಲಾ
ಎಂಬ ೨ ವಿಧದ ವೈರಸ್‌ಗಳಿವೆ. ವೈರಸ್‌ಗಳು ಬದುಕಿರುವ ಜೀವಕೋಶಗಳ ಒಳಗೆ ಮಾತ್ರ ಬದುಕುತ್ತವೆ.
ಹೊರಗಿದ್ದಲ್ಲಿ ಸಾಯುತ್ತವೆ. ಜೀವಕೋಶಗಳ ಒಳಗೆ ವಂಶವಾಹಿಗಳಲ್ಲಿ ಇವು ಅಡಗುವುದರಿಂದ ಇವುಗಳ ಸೋಂಕನ್ನು ನಿವಾರಿಸಲು ಬಹುಕಷ್ಟ. ವೈರಸ್‌ಗಳನ್ನು ಸಂಪೂರ್ಣವಾಗಿ ಕೊಲೆಮಾಡುವ ಆಂಟಿಬಯಾಟಿಕ್‌ಗಳು ಇನ್ನೂ ಲಭ್ಯವಿಲ್ಲ. ಈ ಕಾರಣ ದಿಂದಾಗಿ ಕೆಲವು ಗಂಭೀರ ಸ್ವರೂಪದ ವೈರಸ್ ಸೋಂಕುಗಳು ಮಾನವಕುಲಕ್ಕೆ ಇನ್ನೂ ಸವಾಲಾಗಿಯೇ ಪರಿಣಮಿ ಸಿವೆ.
ವೈರಸ್‌ಗಳ ವೃದ್ಧಿಯನ್ನು ನಿಯಂತ್ರಿಸುವ ಔಷಧಗಳು ಮಾತ್ರ ಲಭ್ಯ. ಈ ಕಾರಣಕ್ಕಾಗಿ ವೈರಸ್ ಕಾಯಿಲೆಗಳನ್ನು ಸಂಪೂರ್ಣ ವಾಗಿ ವಾಸಿಮಾಡುವುದು ಕಷ್ಟಕರ. ಉದಾ ಏಯ್ಡ್ಸ್‌ಅನ್ನು ಉಂಟುಮಾಡುವ ಹೆಚ್‌ಐವಿ ವೈರಸ್, ಕೋವಿಡ್ ಅನ್ನು
ಉಂಟು ಮಾಡುವ ಕರೋನಾ ವೈರಸ್.
ಫಂಗಸ್(ಶಿಲೀಂಧ್ರ) ಸೋಂಕುಗಳು
ಫಂಗಸ್ ದಾರದಂತಹ, ಹೈ- ಎಂಬ ಕವಲುಗಳುಳ್ಳ ಜಾಲರಿಯಂತಹ ರಚನೆಯುಳ್ಳ (ಮೈಸೀರಿಯಂ) ವಿಶಿಷ್ಟ ಸೂಕ್ಷ್ಮಜೀವಿ. ಇದರಲ್ಲಿ ಹಲವಾರು ವಿಧಗಳಿದ್ದು, ಸಾಮಾನ್ಯವಾಗಿ ಇವು ಮನುಷ್ಯನನ್ನು ಸೋಂಕಿಗೀಡುಮಾಡುವುದಿಲ್ಲ. ನಿರೋಧಕ ವ್ಯವಸ್ಥೆ ಕುಗ್ಗಿದವರಲ್ಲಿ (ಸಕ್ಕರೆಕಾಯಿಲೆ, ಕ್ಷಯ, ಕೋವಿಡ್, ಕ್ಯಾನ್ಸರ್ ಇತ್ಯಾದಿ) ಫಂಗಸ್‌ಗಳ ಸೋಂಕು ಕಾಣಿಸಿಕೊಳ್ಳುತ್ತದೆ. ಚರ್ಮ, ಶ್ವಾಸಕೋಶಗಳು, ಮೆದುಳು, ನರಮಂಡಲ ಸಾಮಾನ್ಯವಾಗಿ ಇದರ ಸೋಂಕಿಗೀಡಾಗುತ್ತವೆ.
ಇವುಗಳ ಸೋಂಕನ್ನು ನಿಯಂತ್ರಿಸುವ ಸೂಕ್ಷ್ಮಜೀವಿ ನಿರೋಧಕ ಔಷಧಗಳು ನಿರೀಕ್ಷಿಸಿದ ಸಾಮರ್ಥ್ಯವನ್ನು ಹೊಂದಿಲ್ಲದ
ಕಾರಣ ಇವುಗಳ ಸೋಂಕು ಸಹ ಕೆಲವರಲ್ಲಿ ಗಂಭೀರ ಸ್ವರೂಪ ತಾಳಬಹುದು.
ಪ್ರೋಟೋಝೋವಾಗಳ ಸೋಂಕು
ಏಕಜೀವಕೋಶದ, ಜೀವಕೋಶ ಗೋಡೆಯಿರದ, ಸ್ವತಂತ್ರವಾಗಿ ಜೀವಿಸುವ ಅಥವಾ ಪರಾವಲಂಬಿಯಾಗಿ ಜೀವಿಸುವ
ಸೂಕ್ಷ್ಮಜೀವಿಗಳಿವು. ರಕ್ತ ಭೇದಿಯನ್ನುಂಟುಮಾಡುವ ಅಮೀಬಾ, ಮಲೇರಿಯಾವನ್ನುಂಟುಮಾಡುವ ಪ್ಲಾಸ್ಮೋಡಿಯಂ ಇತ್ಯಾದಿಗಳು ಈ ಗುಂಪುಗಳಿಗೆ ಸೇರಿದವುಗಳಾಗಿವೆ. ಇವುಗಳ ಸೋಂಕನ್ನು ನಿಯಂತ್ರಿಸಲು ಸಮರ್ಥ ಆಂಟಿಬಯಾಟಿಕ್ ಗಳಿವೆ.
ಆಂಟಿಬಯಾಟಿಕ್‌ಗಳು (ಸೂಕ್ಷ್ಮಜೀವಿನಿರೋಧಕಗಳು)
ದೇಹದೊಳಗಿನ ಸೂಕ್ಷ್ಮಜೀವಿಗಳನ್ನು ಕೊಲ್ಲುವ ಔಷಧಗಳಿವು. ಸೂಕ್ಷ್ಮಜೀವಿಯನ್ನಾಧರಿಸಿ ಇವುಗಳನ್ನು ಬ್ಯಾಕ್ಟೀರೀಯಂ ನಿರೋಧಕ, ವೈರಸ್ ನಿರೋಧಕ, ಫಂಗಸ್ ನಿರೋಧಕ ಮತ್ತು ಪ್ರೋಟೋಝೋವಾ ನಿರೋಧಕ ಆಂಟಿಬಯಾಟಿಕ್
ಗಳೆಂದು ವರ್ಗೀಕರಿಸಲಾಗಿದೆ. ಬ್ಯಾಕ್ಟೀರಿಯಂ ನಿರೋಧಕಗಳನ್ನು ಗ್ರಾಂ ಬಣ್ಣ ಕಟ್ಟುವ ಬ್ಯಾಕ್ಟೀರಿಯಾ ನಿರೋಧಕ ಮತ್ತು ಗ್ರಾಂ ಬಣ್ಣ ಕಟ್ಟಿಕೊಳ್ಳದ ಬ್ಯಾಕ್ಟೀರಿಯಾ ನಿರೋಧಕಗಳೆಂದು ಮತ್ತು ಇವೆರಡರ ಮೇಲೂ ಪರಿಣಾಮ ಬೀರುವ ಔಷಧಗಳನ್ನು ವ್ಯಾಪಕ ನಿರೋಧಕ ಆಂಟಿಬಯಾಟಿಕ್ ಗಳೆಂದು ವರ್ಗೀಕರಿಸಲಾಗಿದೆ.
ಕೆಲವು ಆಂಟಿಬಯಾಟಿಕ್‌ಗಳು ಬಾಯಿ ಮೂಲಕ, ಕೆಲವು ಚುಚ್ಚುಮದ್ದು ಮೂಲಕ, ಕೆಲವು ಮುಲಾಮುಗಳಾಗಿ, ಮತ್ತೆ ಕೆಲವು ಎಲ್ಲ ವಿಧಗಳಲ್ಲೂ ಪರಿಣಾಮಕಾರಿಯಾಗಿವೆ. ಆಂಟಿಬಯಾಟಿಕ್‌ಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಯಾವ ವಿಧದ ಸೂಕ್ಷ್ಮ ಜೀವಿ ಸೋಂಕಿಗೆ ಕಾರಣ ಎಂಬುದನ್ನು ಪರೀಕ್ಷೆಗಳಿಂದ ದೃಢೀಕರಿಸಿಕೊಂಡು ಅದಕ್ಕನುಗುಣವಾಗಿ ಔಷಧಗಳನ್ನು ಉಪ ಯೋಗಿಸಬೇಕು. ಒಂದು ಸೂಕ್ಷ್ಮಜೀವಿಯ ಸೋಂಕಿಗೆ ಪರಿಣಾಮಕಾರಿಯಾದ ಔಷಧ ಮತ್ತೊಂದಕ್ಕೆ ಪರಿಣಾಮಕಾರಿ ಯಾಗುವುದಿಲ್ಲ. ವೈದ್ಯರು ಮಾತ್ರ ಇದನ್ನು ನಿರ್ಧರಿಸಲು ಸಾಧ್ಯ. ಮೊಟ್ಟಮೊದಲ ಬಾರಿಗೆ ಮಣ್ಣಿನಲ್ಲಿರುವ ಬ್ಯಾಕ್ಟೀರಿ
ಯಾಗಳಿಂದ ಪೆನ್‌ಸುಲಿನ್ ಆಂಟಿಬಯಾಟಿಕ್‌ಗಳನ್ನು ಕಂಡು ಹಿಡಿಯಲಾಯಿತು. ಈ ಔಷಧಗಳನ್ನು ಪರಿಸರದಲ್ಲಿರುವ
ಸೂಕ್ಷ್ಮಜೀವಿಗಳಿಂದಲೂ, ಮತ್ತೆ ಕೆಲವುಗಳನ್ನು ಆಧುನಿಕ ತಂತ್ರಜ್ಞಾನದಿಂದಲೂ ತಯಾರಿಸಲಾಗುತ್ತಿದೆ. ಇಂದು ಮಾರುಕಟ್ಟೆಯಲ್ಲಿ ಹತ್ತಾರು ವಿಧದ ಆಂಟಿಬಯಾಟಿಕ್‌ಗಳ ಲಭ್ಯವಿವೆ.
ಉಪಯೋಗಗಳು
ಮನುಷ್ಯನಿಗೆ ತಗಲುವ ಬಹುತೇಕ ರೋಗಗಳು ಸೂಕ್ಷ್ಮ ಜೀವಿಗಳಿಂದ ಉಂಟಾದವುಗಳಾಗಿದ್ದು, ಇವುಗಳನ್ನು ನಿಯಂ
ತ್ರಿಸಲು ಆಂಟಿಬಯಾಟಿಕ್‌ಗಳ ಉಪಯೋಗ ಅನಿವಾರ್ಯ. ಮಾರಣಾಂತಿಕ ಸೋಂಕುರೋಗಗಳಾದ ಪ್ಲೇಗ್, ಕ್ಷಯ,
ಹೆಚ್‌ಐವಿ, ಮೆದುಳಿನ ಸೋಂಕು ಇತ್ಯಾದಿ ಸೋಂಕುಗಳನ್ನು ಆಂಟಿಬಯಾಟಿಕ್ ಇಲ್ಲದಿದ್ದರೆ ನಿಯಂತ್ರಿಸಲು ಸಾಧ್ಯವಾಗು
ತ್ತಿರಲಿಲ್ಲ. ಮನುಷ್ಯ ಆಗಿಂದಾಗ್ಗೆ ವಿವಿಧ ಬಗೆಯ ಸೂಕ್ಷ್ಮಜೀವಿಗಳ ಸೋಂಕಿಗೀಡಾಗುವುದರಿಂದ ಪ್ರತಿಯೊಬ್ಬರೂ ಈ ಔಷಧಗಳನ್ನು ಉಪಯೋಗಿಸಿಯೇ ತೀರುತ್ತಾರೆ.
ಇವುಗಳನ್ನು ಉಪಯೋಗಿಸುವಾಗ ಒಂದು ನಿರ್ದಿಷ್ಟ ಸೂಕ್ಷ್ಮಜೀವಿ ಸೋಂಕಿಗೆ ನಿರ್ದಿಷ್ಟ ಆಂಟಿಬಯಾಟಿಕ್ ಅನ್ನು ಪ್ರತಿ ನಿತ್ಯ ನಿರ್ದಿಷ್ಟ ಅವಽಗೆ ತೆಗೆದುಕೊಳ್ಳುವುದು ಅತ್ಯವಶ್ಯಕ. ಪ್ರಾರಂಭಿಸಿದಾಕ್ಷಣ ತೊಂದರೆಗಳು ಕಡಿಮೆಯಾದರೂ ನಿಗದಿತ ಅವಽಗೆ ಮುಂದುವರೆಸಬೇಕು. ಇಲ್ಲದಿದ್ದಲ್ಲಿ ಸೋಂಕು ಮರುಕಳಿಸುತ್ತದೆ. ಕೆಲವು ಔಷಧಗಳನ್ನು ಖಾಲಿ ಹೊಟ್ಟೆಯಲ್ಲಿ, ಕೆಲವನ್ನು ಆಹಾರದ ನಂತರ ಉಪಯೋಗಿಸಬೇಕು. ವ್ಯತ್ಯಾಸವಾದಲ್ಲಿ ಸಾಮರ್ಥ್ಯ ಕುಗ್ಗುತ್ತದೆ. ಔಷಧದ ಪ್ರಮಾಣವನ್ನು ವಯಸ್ಸು, ದೇಹದ ತೂಕ ಮತ್ತು ಸೋಂಕಿನ ಗಂಭೀರತೆಯನ್ನು ಪರಿಗಣಿಸಿ ನಿರ್ಧರಿಸಲಾಗುತ್ತದೆ. ಇವಾವುಗಳನ್ನೂ ಪರಿಗಣಿಸದೆ ಸ್ವೇಚ್ಛಾಚಾರದಿಂದ ಈ ಔಷಧಗಳನ್ನು ಉಪಯೋಗಿಸಿದಲ್ಲಿ ಅನಾಹುತಗಳಾಗುವ ಸಾಧ್ಯತೆಗಳಿವೆ.
ದುಷ್ಪರಿಣಾಮಗಳು
ಇವು ಜೀವವಿರೋಧಿ ಔಷಧಗಳಾದುದರಿಂದ ಮನುಷ್ಯನ ಜೀವಕೋಶಗಳ ಮೇಲೂ ಮತ್ತು ಮನುಷ್ಯನೊಳಗಿರುವ ಸಹಜ ಸೂಕ್ಷ್ಮಜೀವಿಗಳ ಮೇಲೂ ಪರಿಣಾಮಬೀರಿ ಸಹಜ ಆರೋಗ್ಯವನ್ನು ವ್ಯತ್ಯಾಸಗೊಳಿಸುವ ಸಾಧ್ಯತೆ ಇರುವುದರಿಂದ ಅತ್ಯಂತ ಎಚ್ಚರಿಕೆಯಿಂದ ಅನಿವಾರ್ಯವೆಂದಾಗ ಮಾತ್ರ ವೈದ್ಯರ ಸಲಹೆ ಮೇರೆಗೆ ಇವುಗಳನ್ನು ಉಪಯೋಗಿಸಬೇಕು. ನಿಶಕ್ತಿ, ಸುಸ್ತು ಸಂಕಟ, ವಾಂತಿ ಬೇಧಿ, ಹೊಟ್ಟೆನೋವು ಇತ್ಯಾದಿ ಅಡ್ಡ ಪರಿಣಾಮಗಳುಂಟಾಗಬಹುದು. ಸೂಕ್ತರೀತಿಯಲ್ಲಿ ಉಪಯೋಗಿಸ ದಿದ್ದಲ್ಲಿ ಸೂಕ್ಷ್ಮ ಜೀವಿಗಳು ಇವುಗಳಿಗೆ ಪ್ರತಿರೋಧತ್ವವನ್ನು ಒಡ್ಡುವುದರಿಂದ ಇವು ಅಪ್ರಯೋಜಕವಾಗುತ್ತವೆ. ಇವುಗಳ ದುರ್ಬಳಕೆಯಿಂದ ಉಂಟಾಗುತ್ತಿರುವ ಸೂಕ್ಷ್ಮಜೀವಿಗಳ ಪ್ರತಿರೋಧತ್ವ ವೈದ್ಯಕೀಯ ಕ್ಷೇತ್ರಕ್ಕೆ ಸವಾಲಾಗಿ ಪರಿಣಮಿಸಿ ಅಲ್ಪ ಅವಧಿಯಲ್ಲಿಯೇ ಹೊಸ ಹೊಸ ಆಂಟಿಬಯಾಟಿಕ್‌ಗಳ ಅನ್ವೇಷಣೆಗೆ ಕಾರಣವಾಗಿದೆ.
ಲಭ್ಯ ಆಂಟಿಬಯಾಟಿಕ್ ಗಳೆಲ್ಲಕ್ಕೂ ಪ್ರತಿಕ್ರಿಯಿಸದ ಸೋಂಕುಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಮಾನವ ಕುಲಕ್ಕೆ ಮಾರಕವಾಗುತ್ತಿದೆ. ದುರ್ಬಳಕೆಗೆ ಜನಸಾಮಾನ್ಯರೊಬ್ಬರೇ ಕಾರಣವಾಗಿರದೆ ವೈದ್ಯ ಸಮುದಾಯವೂ ಸಹ ಇದಕ್ಕೆ ಕಾರಣವಾಗುತ್ತಿರುವುದು ಆತಂಕಕಾರಿಯಾಗಿದೆ. ವೈದ್ಯರ ಸಲಹೆ ಇಲ್ಲದೆ ಈ ಔಷಧಗಳು ಔಷಧ ಅಂಗಡಿಗಳಲ್ಲಿ ಮಾರಾಟವಾಗುತ್ತಿರುವುದು ಸಹ ಸಮಸ್ಯೆಯ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಸರಕಾರ, ವೈದ್ಯಕೀಯ ಸಮುದಾಯ ಮತ್ತು ಸಮಾಜ ಈ ಬಗ್ಗೆ ಅರಿತು ಆಂಟಿಬಯಾಟಿಕ್‌ಗಳ ದುರ್ಬಳಕೆಯನ್ನು ತಡೆಯದಿದ್ದಲ್ಲಿ ಮಾನವ ಕುಲಕ್ಕೆ ಮಾರಕವಾಗಲಿದೆ.