ಪರಿಣಿತ ರವಿ
ಬುದ್ಧ ಹೇಳುತ್ತಾನೆ ‘ಅಸಮರ್ಪಕವಾದ ಜನರೊಂದಿಗೆ ನಡೆಯುವುದಕ್ಕಿಂತ ನಾನು ಒಂಟಿಯಾಗಿ ನಡೆಯಲು ಇಚ್ಛಿಸು ತ್ತೇನೆ’ ಎಂದು. ಸದ್ಗುರು ಜಗ್ಗಿ ವಾಸುದೇವ್ ಅವರು ತಮ್ಮ ಒಂದು ಭಾಷಣದಲ್ಲಿ ಹೇಳುತ್ತಾರೆ- ನನಗೆ ಒಂಟಿಯಾಗಿರು ವುದು ಬಹಳ ಇಷ್ಟ. ಅದು ನನ್ನೊಳಗಿನ ಅದ್ಭುತ ಶಕ್ತಿಯನ್ನು ಪರಿಚಯ ಮಾಡಿ ಕೊಡುತ್ತದೆ ಎಂದು. ಹೌದು…ಒಬ್ಬರೇ ಇದ್ದು ಮೌನ ವಾಗಿ ಆಲೋಚಿಸಿದಾಗ ನಮ್ಮ ಮನದಾಳದ ಗೊಂದಲಗಳಿಗೆ ಖಂಡಿತವಾಗಿಯೂ ಪರಿಹಾರ ಸಿಕ್ಕೇ ಸಿಗುತ್ತದೆ. ಆದರೆ ತಾಳ್ಮೆಯಿಂದ ಕುಳಿತು ಯೋಚಿಸುವ ವ್ಯವಧಾನ ನಮ್ಮಲ್ಲಿರುವುದಿಲ್ಲ. ಒಂದು ಸಣ್ಣ ಸಮಸ್ಯೆ ಬಂದರೆ ಸಾಕು, ಜಗತ್ತಿನಲ್ಲಿ ಇದು ನನಗೆ ಮಾತ್ರ ಮೊದಲ ಬಾರಿಗೆ ಬಂದಂತೆ ಆಡುತ್ತಾ ಕಂಡ ಕಂಡವರಲ್ಲಿ ಪರಿಹಾರ ಕೇಳುತ್ತೇವೆ. ಸಮಸ್ಯೆ, ಗೊಂದಲ ಇನ್ನಷ್ಟು ಬಿಗಡಾಯಿಸುತ್ತದೆಯೇ ಹೊರತು ಪರಿಹಾರ ದೂರದ ಮಾತು.
ನಾವು ಮಾನವರು ಸಂಘಜೀವಿಗಳು. ಹಾಗಾಗಿ ಸಂಬಂಧಗಳ ಬಲೆಯೊಳಗೆ ಬೆಸೆಯುತ್ತಾ ಪರಸ್ಪರ ಅರಿತು ಸಹಬಾಳ್ವೆಯ ಬದುಕು ಸಾಗಿಸುತ್ತೇವೆ. ನಮ್ಮ ಸುಖ- ದುಃಖಗಳಲ್ಲಿ, ನೋವು-ನಲಿವುಗಳಲ್ಲಿ, ಸೋಲು-ಗೆಲುವುಗಳಲ್ಲಿ ಯಾರಾದರೂ ಜೊತೆಯಿರ ಬೇಕೆಂದು ಬಯಸುತ್ತೇವೆ. ಸಾಮಾಜಿಕವಾಗಿ ಎಲ್ಲರೊಂದಿಗೆ ಬೆರೆಯುತ್ತಾ ಬೆಳೆಯುತ್ತಾ ಪರಸ್ಪರ ಹೊಂದಾಣಿಕೆ, ಪ್ರೀತಿ, ವಾತ್ಸಲ್ಯದಿಂದ ಬಾಳುತ್ತೇವೆ.
ಪತಿ, ಪತ್ನಿ, ಮಕ್ಕಳು, ಮನೆಯವರು, ರಕ್ತ ಸಂಬಂಧಿಗಳು, ಗೆಳೆಯರು, ಹಿತೈಷಿಗಳು, ಹೀಗೆ ನಮ್ಮ ಬಂಧಗಳ ಬೆಸುಗೆ ಬಾಳಿನುದ್ದಕ್ಕೂ ಗಟ್ಟಿಯಾಗುತ್ತಲೇ ಇರುತ್ತದೆ. ಎಲ್ಲರೂ ನಮ್ಮೊಂದಿಗೆ ಚೆನ್ನಾಗಿದ್ದರೆ ನಾವೇ ಭಾಗ್ಯವಂತರು ಅಂದು ಕೊಳ್ಳುತ್ತೇವೆ. ಅದುವೇ ಸಂತೃಪ್ತ ಜೀವನದ ಕೀಲಿಕೈ ಅನ್ನುವ ಭ್ರಮೆಯಲ್ಲಿರುತ್ತೇವೆ. ಜೇಡನಂತೆ ಬಂಧಗಳ ಬಲೆಯಲ್ಲಿ ಸುತ್ತುತ್ತಾ ಹೊರ ಬರಲಾಗದೆ ಒzಡುತ್ತೇವೆ. ಗಳಿಸಿದ ಬಾಂಧವ್ಯದ ಸವಿಯನ್ನು, ದೊರಕಿಸಿಕೊಂಡ ಸಂಬಂಧಗಳ ಆಪ್ತತತೆಯನ್ನು ಜತನದಿಂದ ಕಾಪಾಡಲು ಪ್ರಯತ್ನಿಸುತ್ತೇವೆ.
Read E-Paper click here
ದಿನದಿಂದ ದಿನಕ್ಕೆ ಸುತ್ತಮುತ್ತಲಿನ ಬಾಂಧವ್ಯಗಳನ್ನು ಸದೃಢಗೊಳಿಸುತ್ತಾ ಸಾಗುತ್ತೇವೆ. ಹೊಸಬರೊಂದಿಗೆ ಆದ ಪರಿಚಯ ವನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತೇವೆ. ಆದರೆ ಅದೊಂದು ದಿನ ಈ ನೆಚ್ಚಿಕೊಂಡ ನಂಟುಗಳೆ ಹುಸಿ ಎಂದು ಮನವರಿಕೆ ಯಾದಾಗ ಕುಸಿದು ಹೋಗುತ್ತೇವೆ. ಇವುಗಳೆಲ್ಲ ಜೀವನವೆಂಬ ನಾಟಕದಲ್ಲಿ ಅವರವರ ಅನುಕೂಲಕ್ಕೆ ತಕ್ಕಂತೆ ಸೃಷ್ಟಿಸಿದ ಪಾತ್ರ ಗಳು ಎಂಬ ತಿಳುವಳಿಕೆ ಮೂಡಿದಾಗ ನಿರಾಶರಾಗುತ್ತೇವೆ. ನಾನಿಲ್ಲಿ ಒಂಟಿ, ನನ್ನ ತಲೆಗೆ ನನ್ನದೇ ಕೈ ಅನ್ನುವ eನೋದಯ ಆದಾಗ ಹತಾಶರಾಗುತ್ತೇವೆ.
‘ಯಾರಿಗೆ ಯಾರುಂಟು ಎರವಿನ ಸಂಸಾರ| ನೀರ ಮೇಲಿನ ಗುಳ್ಳೆ ನಿಜವಲ್ಲ ಹರಿಯೆ’ ಎಂದು ಪುರಂದರ ದಾಸರು ಹೇಳಿರುವುದು ಸದಾ ನೆನಪಿರುತ್ತದೆ. ಈ ಅದ್ಭುತ ಸಾಲು ಗಳನ್ನು ಮೆಚ್ಚಿ ಒಪ್ಪಿಕೊಂಡಿರುವವರೂ ಆಗಿರುತ್ತೇವೆ. ಆದರೂ ಇದರಿಂದ ಹೊರ ಬರಲಾಗದೆ ಒಂಟಿತನವು ಕಾಡಿದಾಗ ಕಂಗಾಲಾಗುತ್ತೇವೆ. ಒಂಟಿತನವೆಂದರೆ ಯಾರೂ ಇಲ್ಲದೇ ಇರುವುದು ಮಾತ್ರ ಅಂದು ಕೊಂಡಿರೇನು? ಖಂಡಿತ ಅಲ್ಲ. ಎಲ್ಲರ ಮಧ್ಯೆ ಇದ್ದುಕೊಂಡೇ ಒಂಟಿತನವನ್ನು ಅನುಭವಿಸುವ ಮಂದಿಯನ್ನು ನಮ್ಮ ಆಸು ಪಾಸು ಕಾಣಬಹುದು.
ಸುತ್ತಮುತ್ತ ಎಲ್ಲವೂ/ರೂ ಇದ್ದರೂ, ಜಗತ್ತಿನ ಎಲ್ಲಾ ಐಷಾರಾಮಗಳನ್ನು ಅನುಭವಿಸು ತ್ತಿದ್ದರೂ ಮನದಾಳದಲ್ಲಿ ಮಾತ್ರ ತಾನು ಒಂಟಿ ಎಂಬ ಭಾವ ಸದಾ ಕಾಡುವವರು ಅದೆಷ್ಟೋ ಜನ ಇದ್ದಾರೆ. ಹಾಗಾಗಿ ಒಂಟಿತನ ಅನ್ನುವುದು ಯಾರೂ ಇಲ್ಲದೆ ಇರುವುದು
ಮಾತ್ರವಲ್ಲ, ಅದೊಂದು ಮನಸ್ಸಿನ ಸ್ಥಿತಿ ಕೂಡಾ ಹೌದು. ನನ್ನ ಮಾತಿಗೆ ಬೆಲೆ ಇಲ್ಲ!: ನಮ್ಮ ಮನೆಯ ಸಮೀಪ ಚಿರಪರಿಚಿತ ರಾದ ನಿವೃತ್ತ ಕಾಲೇಜು ಪ್ರಾಧ್ಯಾಪಕರೊಬ್ಬರಿದ್ದಾರೆ.
ಬಹಳ ಮೇಧಾವಿ. ಪ್ರಬುದ್ಧ ಚಿಂತಕರು. ಇಂಗ್ಲೀಷ್ ಪ್ರಾಧ್ಯಾಪಕರಾದ ಕಾರಣ ಆಂಗ್ಲ ಭಾಷಾ ಸಾಹಿತ್ಯವನ್ನು ಅರೆದು ಕುಡಿದು ಅರಗಿಸಿಕೊಂಡವರು. ನನ್ನದೂ ಅದೇ ವಿಷಯವಾದ ಕಾರಣ ನನಗೆ ಅವರಲ್ಲಿ ವಿಶೇಷ ಗೌರವ. ಅಕಾಡಮಿಕ್ ಸಂಶಯಗಳನ್ನು ಅವರಲ್ಲಿ ಕೇಳಿ ಪರಿಹರಿಸಿಕೊಳ್ಳುತ್ತೇನೆ. ಆದರೆ ಅವರು ಆರಾಧಿಸುವ, ಅನುಸರಿಸುವ ಇಸಂ ಕಾರಣ ಅವರ ಮೂಗಿನ ನೇರಕ್ಕೆ ಮಾತನಾಡುತ್ತಾರೆ, ವಾದಿಸುತ್ತಾರೆ ಎಂಬ ಸಣ್ಣ ಅಸಮಾಧಾನವಿದ್ದರೂ ಅವರಿಗಿರುವ ಮಲಯಾಳ ಹಾಗೂ ಆಂಗ್ಲ ಸಾಹಿತ್ಯದ ಜ್ಞಾನ ಸಂಪತ್ತಿಗೆ ನಾನು ಶರಣು.
ಅವರ ಮಗ-ಸೊಸೆ ಇಬ್ಬರೂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕರು. ಮಗಳು-ಅಳಿಯ ಇಬ್ಬರೂ ವೈದ್ಯರು. ಇಬ್ಬರು ಮೊಮ್ಮಕ್ಕಳು. ಮಕ್ಕಳು ಅವರವ ರಷ್ಟಕ್ಕೇ ದೂರದ ಪರವೂರದಲ್ಲಿದ್ದು ಬದುಕಿನ ಓಟದಲ್ಲಿ ತಲ್ಲೀನರಾಗಿದ್ದಾರೆ. ಮನೆಯಲ್ಲಿ ಸದ್ಗೃಹಿಣಿಯಾದ ಮಡದಿ ಇzರೆ. ಎಲ್ಲವೂ ಧಾರಳವಾಗಿಯೇ ಇದೆ. ಆದರೂ ಅವರು ಅನ್ನುತ್ತಿದ್ದರು ‘ನನಗೆ ಯಾರೂ ಇಲ್ಲ. ಈಗ ನಾನು ಯಾರಿಗೂ ಬೇಡ. ನನ್ನ ಮಾತಿಗೆ ಬೆಲೆ ಇಲ್ಲ.
ಏನಿದ್ದರೇನು ನನಗೆ ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳಲು ಯಾರೂ ಇಲ್ಲ. ಮಕ್ಕಳು ಅವರವರ ಲೋಕದಲ್ಲಿ ಮುಳುಗಿ ಹೋಗಿದ್ದಾರೆ’ ಎಂದು. ಇವರ ಮಾತು ಕೇಳಿದಾಗ ಮೊದಲು ನನಗೆ ಅಳಬೇಕೋ ನಗಬೇಕೋ ಅನ್ನುವ ಗೊಂದಲ. ನಿಧಾನಕ್ಕೆ ಯೋಚಿಸಿದಾಗ ಎಲ್ಲರೂ/ವೂ ಇದ್ದು ಅವರನ್ನು ಕಾಡುವ ಒಂಟಿತನದ ತೀವ್ರತೆಯ ಪರಿಚಯವಾಯಿತು.
ವಿದ್ಯಾವಂತರಾದ, ಮಹಾನ್ ಜ್ಞಾನಿಯಾದ, ಸರಕಾರಿ ನೌಕರಿಯಿಂದ ನಿವೃತ್ತರಾದ, ಆರ್ಥಿಕವಾಗಿ ಸದೃಢರಾದ ಇಂತಹ
ಪ್ರಾಧ್ಯಾಪಕರಿಗೇ ಈ ಮಟ್ಟದ ಒಂಟಿತನ ಕಾಡುತ್ತದೆ ಎಂದಾದರೆ ಇನ್ನು ಸಾಮಾನ್ಯರ ಪರಿಸ್ಥಿತಿ ಹೇಗಿರಬಹುದು ಅನ್ನುವುದು ಊಹೆಗೂ ನಿಲುಕದ್ದು.
ಕೆಲಸದ ಆಯ್ಕೆ ಹೇಗೆ?: ಇದು ಬದುಕಿನ ಉತ್ತರಾರ್ಧದ ಒಂಟಿತನದ ಬಗೆಯಾದರೆ ಇನ್ನು ಯೌವನದಲ್ಲಿ ಬಂಧಗಳ ಸಲುವಾಗಿ ಏನು ಬೇಕಾದರೂ ಮಾಡಲು ಸಿದ್ಧರಾಗಿರುವ ಬಿಸಿರಕ್ತದ ಇನ್ನೊಂದು ಘಟನೆ ಕೇಳಿ. ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಪ್ಲೇಸ್ಮೆಂಟ್ ಸಲುವಾಗಿ ಪ್ರತಿಷ್ಠಿತ ಕಂಪೆನಿಯವರು ನಮ್ಮ ಕಾಲೇಜಿಗೆ ಬಂದಿದ್ದರು. ಮೊದಲ ಹಂತದ ತರಬೇತಿಯ ತರಗತಿ ಮುಗಿದು, ಮೂರು ಸುತ್ತಿನ ಆಯ್ಕೆ ಪ್ರಕ್ರಿಯೆಯ ಬಳಿಕ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಸೆಲೆಕ್ಟ್ ಆಗಿದ್ದರು. ಅದರಲ್ಲಿ ಆಪ್ತ ಗೆಳೆಯರಿಬ್ಬರಿದ್ದರು. ಒಬ್ಬ ಮಧ್ಯಮ ವರ್ಗದವನಾದರೆ ಇನ್ನೊಬ್ಬ ಶ್ರೀಮಂತ ಮನೆಯವನು.
ಅಂದು ಸಂಜೆ ೫ ಗಂಟೆಯೊಳಗೆ ಕನ್ಸೆಂಟ್ ಇಮೇಲ್ ಕಳಿಸಬೇಕಿತ್ತು. ಮಧ್ಯಮವರ್ಗದವನಲ್ಲಿ ಶ್ರೀಮಂತ ಮನೆಯವನು ಅಂದ ‘ನಾನು ಪದವಿಯ ಫಲಿತಾಂಶ ಬಂದ ಕೂಡಲೇ ಅಬ್ರಾಡ್ಗೆ ಹೋಗುತ್ತೇನೆ. ಹಾಗಾಗಿ ನಾನು ಕನ್ಸೆಂಟ್ ಕೊಡುವುದಿಲ್ಲ ನೀನು ಕೊಡಬೇಡ’ ಎಂದು. ಗೆಳೆಯರ ಮಾತೇ ವೇದವಾಕ್ಯ ಎಂದು ತಿಳಿಯುವ ಹಾಗೂ ಗೆಳೆತನಕ್ಕೆ ಬೇಕಾಗಿ ಏನೂ ಬೇಕಾದರೂ ಮಾಡಲು ತಯಾರಿರುವ ಹಂತ ಅದಾಗಿದ್ದ ಕಾರಣ ‘ಡ್ಯೂಡ್. .ಡನ್. ನೀನಿಲ್ಲದಿದ್ದರೆ ನಾನೂ ಇಲ್ಲ. ನಾನೂ ಕೊಡುವುದಿಲ್ಲ’ ಎಂದ.
ಆದರೆ ಗೆಳೆಯನಲ್ಲಿ ನಾನು ಹೋಗುವುದಿಲ್ಲ, ನೀನು ಹೋಗಬೇಡ ಎಂದು ಹೇಳಿದವನ ಮನೆಯಲ್ಲಿ ಈಗಾಗಲೇ ವಿದೇಶದಲ್ಲಿರುವ ಅವನ ಅಣ್ಣ ಹೇಳಿದನಂತೆ ರಿಸಲ್ಟ್ ಬಂದ ಕೂಡಲೇ ಅಬ್ರಾಡ್ಗೆ ಬಂದ್ರೆ ಅಷ್ಟೇನೂ ಒಳ್ಳೆಯ ಅವಕಾಶಗಳು ಸಿಗುವುದಿಲ್ಲ. ನೀನು ಓಕೆ ಹೇಳು. ಈಗ ಸಿಕ್ಕಿರುವ ಅವಕಾಶ ಪ್ರತಿಷ್ಠಿತ ಕಂಪೆನಿಯದ ಕಾರಣ ಆರು ತಿಂಗಳೋ, ಒಂದು ವರ್ಷವೋ ಕೆಲಸ ಮಾಡು ಎಂದು. ಸರಿ ಎಂದು ಆತ ಒಪ್ಪಿಗೆ ಇಮೇಲ್ ಕೊನೆಯ ಕ್ಷಣದಲ್ಲಿ ಕಳಿಸಿದ.
ಅದನ್ನು ಹೇಳಲೆಂದು ಗೆಳೆಯನಿಗೆ ಫೋನ್ ಮಾಡಿದ್ದನಂತೆ. ಇವನು ಕಾಲ್ ರಿಸೀವ್ ಮಾಡಲಿಲ್ಲ. ರಾತ್ರಿ ೮ ಗಂಟೆಯ ಹೊತ್ತಿಗೆ
ತಿರುಗಿ ಈತ ಕರೆ ಮಾಡಿದಾಗ ತಿಳಿದದ್ದು ಗೆಳೆಯ ಅದಾಗಲೇ ಒಪ್ಪಿಗೆ ಪತ್ರ ಕಳಿಸಿದ್ದಾನೆ ಎಂದು. ಪಾಪ.. ಈ ಹುಡುಗನಿಗೆ ಆ
ಕೆಲಸ, ಅವಕಾಶ ಎರಡೂ ಅಗತ್ಯವಾಗಿತ್ತು. ಇವನನ್ನೇ ನಂಬಿಕೊಂಡ ತಾಯಿ, ತಂಗಿ ಇದ್ದರು. ಆದರೆ ಗೆಳೆಯನ ಮಾತು ನಂಬಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಮಾಡಿಕೊಂಡ.
ಈ ಎರಡು ಘಟನೆಗಳು ಪರಸ್ಪರ ವಿರುದ್ಧವಾದವುಗಳು. ಮೊದಲನೆಯದರಲ್ಲಿ ಬದುಕಿನ ಎಲ್ಲಾ ಮಜಲುಗಳನ್ನು ಅತ್ಯಂತ ಸಮರ್ಪಕವಾಗಿ ದಾಟಿ ಬಂದ ಹಿರಿಯರೊಬ್ಬರ ಬಾಳಸಂಜೆಯ ಒಂಟಿತನದ ನಿಟ್ಟುಸಿರಾದರೆ, ಎರಡನೆಯದ್ದು ಒಂಟಿತನ ಎಂದರೆ ಏನೆಂದೇ ತಿಳಿಯದ ಬದುಕಲ್ಲಿ ಎದುರಿಸ ಬಹುದಾದ ಸಂಕಷ್ಟಗಳ ಕಲ್ಪನೆಯೇ ಇಲ್ಲದ ಯುವ ಮನಸ್ಸಿನ ಬಾಳಮುಂಜಾನೆಯ ಅಪಕ್ವ ನಿರ್ಧಾರ. ಇಂತಹ ಹಂತಗಳನ್ನು ನಾವೂ ಒಂದಲ್ಲ ಒಂದು ಸಂದರ್ಭದಲ್ಲಿ ದಾಟಿ ಬಂದವರೇ
ಆಗಿರುತ್ತೇವೆ. ಬದುಕಿನ ಒಂದು ಹಂತದಲ್ಲಿ ನೆಚ್ಚಿಕೊಂಡ ನಂಟಿಗಾಗಿ ನಿಯತ್ತಿನಿಂದ ಅದೆಷ್ಟೋ ಕಷ್ಟ-ನಷ್ಟಗಳನ್ನು, ದುಃಖ- ದುಮ್ಮಾನಗಳನ್ನು ಅನುಭವಿಸುತ್ತೇವೆ.
ಅದರ ಆನಂದವನ್ನೂ ಕಾಣುತ್ತೇವೆ. ಆದರೆ ಮುಂದೊಂದು ದಿನ ಕ್ಷಣ ಕ್ಷಣಕ್ಕೂ ಬದಲಾಗುವ ಈ ಜಗತ್ತಿನ ಇಚ್ಛೆಗನುಗುಣವಾಗಿ
ನಡೆಯುವುದಕ್ಕಿಂತ ಮನಸ್ಸಿನ ಇಚ್ಛೆಯನ್ನರಿತು ನಡೆಯುವುದೇ ಸೂಕ್ತವಾದುದು ಎಂಬ ವಿವೇಕೋದಯ ಆಗೇ ಆಗುತ್ತದೆ.
ಕೆಲವರಿಗೆ ಈ ಸತ್ಯ ಬಹಳ ಬೇಗನೆ, ಇನ್ನು ಕೆಲವರಿಗೆ ಬಹಳ ತಡವಾಗಿ ಅನುಭವಕ್ಕೆ ಬರಬಹುದು. ಬರದೇನೂ ಇರಬಹುದು. ಈ ಕ್ಷಣ ಕ್ಷಣಕ್ಕೂ ಬದಲಾಗುವ ಜಗತ್ತು ಅಂದರೆ ಏನು? ಮರದಲ್ಲಿರುವ ಎಲೆಯ ಹಸುರು ಬಣ್ಣ ಬದಲಾಗಿದೆಯೇ? ಬೇವಿನ ಕಹಿ ಬದಲಾಗಿದೆಯೇ? ಕಬ್ಬಿನ ಸಿಹಿ ಬದಲಾಗಿದೆಯೇ? ಹಣ್ಣಿನ ಸವಿ ಬದಲಾಗಿದೆಯೇ? ಕರಿಮೆಣಸಿನ ಖಾರ ಬದಲಾಗಿದೆಯೇ? ಲಿಂಬೆಯ ಹುಳಿ ಬದಲಾಗಿದೆಯೇ? ಸೂರ್ಯನ ಬೆಳಕು, ಚಂದ್ರನ ಬೆಳದಿಂಗಳು, ಬೀಸುವ ಗಾಳಿ, ಸುರಿವ ಮಳೆ, ಸುಡುವ ಅಗ್ನಿ
ಯಾವುದು? ಯಾವುದು ಬದಲಾಗಿರುವುದು? ಬದಲಾಗಿರುವುದು ಹಾಗೂ ಆಗುತ್ತಲೇ ಇರುವುದು ಕೇವಲ ಮಾನವನ ಸ್ವಭಾವ, ಭಾವನೆಗಳು, ಅವಶ್ಯಕತೆಗಳು, ದೃಷ್ಟಿಕೋನಗಳು, ಚಿಂತನೆಗಳು ಹಾಗೂ ಮನುಷ್ಯತ್ವ.
ನನ್ನನ್ನು ಅತಿಯಾಗಿ ಕಾಡಿದ ಡಿವಿಜಿಯವರ ಮುಕ್ತಕವೊಂದಿದೆ. ಓರ್ವನೇ ನಿಲುವೆ ನೀನುತ್ಕಟದ ಕ್ಷಣಗಳಲಿ ಧರ್ಮ ಸಂಕಟ ಗಳಲಿ ಜೀವ ಸಮರದಲಿ ನಿರ್ವಾಣದೀಕ್ಷೆಯಲಿ ನಿರ್ಯಾಣಘಟ್ಟದಲಿ ನಿರ್ಮಿತ್ರನಿರಲು ಕಲಿ – ಮಂಕುತಿಮ್ಮ! ಬದುಕಿನ ಸಂಕಷ್ಟದ ಹಂತಗಳಲ್ಲಿ, ಧರ್ಮ ಸಂಕಟದ ಪರಿಸ್ಥಿತಿಗಳಲ್ಲಿ, ಜೀವನದ ಹೋರಾಟಗಳಲ್ಲಿ, ಆಧ್ಯಾತ್ಮದ ಸಾಧನೆಗಳಲ್ಲಿ, ಮರಣ ದಲ್ಲಿ, ಅತ್ಯಂತ ಸೂಕ್ತವಾದ ನಿರ್ಧಾರವನ್ನು ತೆಗೆದುಕೊಳ್ಳಬೇಕಾದ ಸಂದರ್ಭಗಳಲ್ಲಿ ನಾವೆಲ್ಲರೂ ಒಂಟಿಯಾಗಿಯೇ ನಿಲ್ಲಬೇಕಾಗುತ್ತದೆ.
ಯಾರಿಂದಲೂ ಏನನ್ನೂ ಅಪೇಕ್ಷಿಸದೇ ನಿರ್ಮಿತ್ರನಾಗಿರಲು ಕಲಿಯಬೇಕು ಎಂದು ಅದ್ಭುತವಾದ ಸಲಹೆಯನ್ನು ನೀಡುತ್ತಾರೆ ಈ ಕಗ್ಗದಲ್ಲಿ ಡಿವಿಜಿಯವರು. ಇದರ ಬಗ್ಗೆ ಆಳವಾಗಿ ಯೋಚಿಸಿದಾಗ ಜೀವನ ದರ್ಶನದ ಅದೆಂತಹ ಅಮೋಘ ಸಾಲುಗಳು ಎಂದು ಮನದಟ್ಟಾಗುತ್ತದೆ. ಬದುಕಿನ ಉತ್ಕಟವಾದ ಕ್ಷಣಗಳಲ್ಲಿ ಹೀಗೆ ಮಾಡಬೇಕೋ, ಹಾಗೆ ಮಾಡಬೇಕೋ, ಅದು ಸರಿಯೋ, ಇದು ಸರಿಯೋ, ಅವರಲ್ಲಿ ಕೇಳಬೇಕೋ, ಇವರಲ್ಲಿ ಕೇಳಬೇಕೋ, ಇದು ತಪ್ಪೋ, ಅದು ತಪ್ಪೋ, ಅವರು ಹೇಳಿದ್ದು ಸರಿಯೋ, ಇವರು ಹೇಳಿದ್ದು ಸರಿಯೋ, ಅನ್ನುವಂತಹ ಗೊಂದಲಗಳು ನಮ್ಮನ್ನು ತೀವ್ರವಾಗಿ ಕಾಡುತ್ತವೆ.
ಎಲ್ಲರ ಬದುಕಿನಲ್ಲಿಯೂ ಅಂತಹ ತುಮುಲಗಳು ಬಂದೇ ಬರುತ್ತವೆ. ಇಂತಹ ಸನ್ನಿವೇಶಗಳಲ್ಲಿ ಸೂಕ್ತವಾದ ನಿರ್ಧಾರಗಳನ್ನು ನಮಗೆ ನಾವೇ ತೆಗೆದುಕೊಳ್ಳಬೇಕಾಗುತ್ತದೆ. ಏಕೆಂದರೆ ನಮ್ಮ ನಿರ್ಧಾರಗಳ ಫಲವನ್ನು ಉಣ್ಣುವವರು ನಾವೇ ಆಗಿರುತ್ತೇವೆ.
ಬುದ್ಧ ಹೇಳುತ್ತಾನೆ ‘ಅಸಮರ್ಪಕವಾದ ಜನರೊಂದಿಗೆ ನಡೆಯುವುದಕ್ಕಿಂತ ನಾನು ಒಂಟಿಯಾಗಿ ನಡೆಯಲು ಇಚ್ಛಿಸುತ್ತೇನೆ’ ಎಂದು. ಸದ್ಗುರು ಜಗ್ಗಿ ವಾಸುದೇವ್ ಅವರು ತಮ್ಮ ಒಂದು ಭಾಷಣದಲ್ಲಿ ಹೇಳುತ್ತಾರೆ- ನನಗೆ ಒಂಟಿಯಾಗಿ ರುವುದು ಬಹಳ ಇಷ್ಟ.
ಅದು ನನ್ನೊಳಗಿನ ಅದ್ಭುತ ಶಕ್ತಿಯನ್ನು ಪರಿಚಯ ಮಾಡಿಕೊಡುತ್ತದೆ ಎಂದು. ಹೌದು…ಒಬ್ಬರೇ ಇದ್ದು ಮೌನವಾಗಿ ಆಲೋಚಿಸಿದಾಗ ನಮ್ಮ ಮನದಾಳದ ಗೊಂದಲಗಳಿಗೆ ಖಂಡಿತವಾಗಿಯೂ ಪರಿಹಾರ ಸಿಕ್ಕೇ ಸಿಗುತ್ತದೆ. ಆದರೆ ತಾಳ್ಮೆಯಿಂದ ಕುಳಿತು ಯೋಚಿಸುವ ವ್ಯವಧಾನ ನಮ್ಮಲ್ಲಿರುವುದಿಲ್ಲ. ಒಂದು ಸಣ್ಣ ಸಮಸ್ಯೆ ಬಂದರೆ ಸಾಕು, ಜಗತ್ತಿನಲ್ಲಿ ಇದು ನನಗೆ ಮಾತ್ರ ಮೊದಲ ಬಾರಿಗೆ ಬಂದಂತೆ ಆಡುತ್ತಾ ಕಂಡ ಕಂಡವರಲ್ಲಿ ಪರಿಹಾರ ಕೇಳುತ್ತೇವೆ. ಸಮಸ್ಯೆ, ಗೊಂದಲ ಇನ್ನಷ್ಟು ಬಿಗಡಾ ಯಿಸುತ್ತದೆಯೇ ಹೊರತು ಪರಿಹಾರ ದೂರದ ಮಾತು.
ಇತ್ತೀಚೆಗೆ ನನ್ನ ಮನಸ್ಸನ್ನು ತೀವ್ರವಾಗಿ ಕಾಡಿದ ಬಹಳ ದುಃಖದ ಘಟನೆಯೊಂದನ್ನು ಇಲ್ಲಿ ಹಂಚಿಕೊಳ್ಳುವುದು ಸೂಕ್ತವೆನಿ ಸುತ್ತದೆ. ನನ್ನ ಸಣ್ಣ ಮಗಳ ತರಗತಿಯಲ್ಲಿ ಕಲಿಯುವ ಒಬ್ಬ ಬುದ್ಧಿವಂತ ವಿದ್ಯಾರ್ಥಿ ಪರೀಕ್ಷೆಯ ಬಳಿಕ ನಾಲ್ಕನೇ ಮಹಡಿ ಯಿಂದ ತನ್ನ ತರಗತಿಗೆ ಗೆಳೆಯರೊಂದಿಗೆ ಹಿಂದಿರುಗುತ್ತಿದ್ದ. ಸಹಪಾಠಿಯ ಪ್ರಶ್ನೆಪತ್ರಿಕೆ ಕೈಯಿಂದ ಹಾರಿ ಸನ್ಶೇಡ್ಗೆ ಬಿತ್ತು. ಅದನ್ನು ತೆಗೆಯಲೆಂದು ಸನ್ ರೂಫ್ ಗೆ ಇಳಿದ.
ಬ್ಯಾನ್ಸ್ ತಪ್ಪಿ ಕೆಳಗೆ ಬಿದ್ದುಬಿಟ್ಟ. ನಾಲ್ಕನೇ ಮಹಡಿಯಿಂದ ನೇರ ನೆಲಕ್ಕೆ ಬಿದ್ದವನ ದೇಹದ ಹೆಚ್ಚಿನ ಅವಯವಗಳು ಡ್ಯಾಮೇಜ್ ಆಗಿದ್ದವು. ಕೂಡಲೇ ಹತ್ತಿರದ ಇದ್ದ ಅದೇ ಶಾಲೆಯವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ೩೬ ದಿನಗಳ ಐಸಿಯು ಒಳಗಿನ ಹೋರಾಟದ ಬಳಿಕ ಕಳೆದ ವಾರ ಮೃತಪಟ್ಟ. ಆ ದಂಪತಿಗೆ ವಿವಾಹವಾಗಿ ಹದಿನಾರು ವರುಷಗಳ ಬಳಿಕ
ಹುಟ್ಟಿದ ಏಕೈಕ ಮಗ ಇವನು.
ಅದೂ ಸಾಲದೆಂಬಂತೆ ಈ ಹುಡುಗನಿಗೆ ಅದೆಷ್ಟೋ ವಿಶೇಷ ಗುಣಗಳು. ತರಗತಿಯಲ್ಲಿ ಯಾವಾಗಲೂ ಕಲಿಕೆಯಲ್ಲಿ ಮೊದಲ ಸ್ಥಾನ. ಎಲ್ಲಿ, ಯಾವ ಸ್ಪರ್ಧೆಯಲ್ಲಿ ಭಾಗವಹಿಸಿದರೂ ಬಹುಮಾನವಿಲ್ಲದೆ ಮರಳಿದ ನೆನಪಿಲ್ಲ. ಶಾಲೆಯ ಕಲಾಪ್ರತಿಭ ಅವಾರ್ಡ್ ಪುರಸ್ಕೃತ. ಅರಳು ಹುರಿದಂತೆ ಮಾತನಾಡುವ ಜಾಣ. ಯಾರಿಗೆ ಯಾವ ಸಹಾಯ ಬೇಕಾದರೂ ಮುಂದು. ಶಿಕ್ಷಕರ
ಅಚ್ಚುಮೆಚ್ಚಿನ ವಿದ್ಯಾರ್ಥಿ. ಆ ತಾಯಿ ನನ್ನ ಗೆಳತಿಯೂ ಆದ ಕಾರಣ ಅವಳ ಹೃದಯವಿದ್ರಾವಕ ವೇದನೆಯನ್ನು ಗ್ರಹಿಸಬ, ಅರ್ಥ ಮಾಡಿಕೊಳ್ಳಬ. ಅಂತಿಮ ಸಂಸ್ಕಾರದಲ್ಲಿ ಜೊತೆಯಿದ್ದು ಕಣ್ಣೀರೇ ಬತ್ತಿ ಹೋಗುವಷ್ಟು ಅತ್ತಿದ್ದೂ ಆಯಿತು.
ಆದರೆ ಯಾರೆಷ್ಟೇ ಸಮಾಧಾನ ಮಾಡಿದರೂ, ನೋವಲ್ಲಿ ಜೊತೆಯಿದ್ದೇವೆ ಎಂದರೂ, ಧೈರ್ಯ ತುಂಬಿದರೂ ತನಗೊದಗಿದ ನರಕಯಾತನೆಯನ್ನು ತಾನೇ ಅನುಭವಿಸಬೇಕಲ್ಲದೆ ಬೇರೆ ದಾರಿಯಾದರೂ ಏನಿದೆ? ಆ ತಂದೆತಾಯಿಯ ದುಃಖವನ್ನು ಡಿಕ್ಷನರಿ
ಯಲ್ಲಿರುವ ಯಾವ ಪದಗಳಿಂದ ಸಾಂತ್ವನಗೊಳಿಸಲು ಸಾಧ್ಯ? ವಿಽಯನ್ನು ಹಳಿಯುತ್ತಾ ಅವರಷ್ಟಕ್ಕೆ ಅವರೇ ಸಮಾ
ಧಾನಗೊಳ್ಳಬೇಕೇ ಹೊರತು ಬೇರೆ ಮಾರ್ಗವಿದೆಯೇ? ವಾಸ್ತವವನ್ನು ಅರ್ಥೈಸಿಕೊಂಡು, ಕಟುಸತ್ಯವನ್ನು ಅರಗಿಸಿಕೊಂಡು ಅದಕ್ಕೆ ಹೊಂದಿಕೊಳ್ಳುತ್ತಾ ದಿನಗಳನ್ನು ಕಳೆಯಬೇಕಲ್ಲದೆ ಯಾರಿಂದೇನು ಮಾಡಲಾದೀತು? ಉತ್ಕಟದ ಕ್ಷಣಗಳಲ್ಲಿ ಓರ್ವನೇ ನಿಂತು ಹೋರಾಡಬೇಕೆಂದ ಡಿವಿಜಿಯವರ ಮಾತಿನ ಸಾಕ್ಷಾತ್ಕಾರವಾಗಲು ನನಗೆ ಬೇರೆ ನಿದರ್ಶನ ಬೇಕೇ?
ನಿಮಗೆ ನೀವೇ ಜವಾಬ್ದಾರರು
ಅನ್ಯರ ಸಲಹೆಯ ಮೇರೆಗೆ ನಿರ್ಧಾರ ತೆಗೆದುಕೊಂಡು ಅದು ವಿಫಲವಾದರೆ ಪರರನ್ನು ದೂರುವವರನ್ನೂ, ಹೊಣೆ ಮಾಡು ವವರನ್ನೂ ನಾವು ಕಾಣುತ್ತೇವೆ. ಇಂತಹವರು ‘ಕುಣಿಯಲು ಬಾರದವನು ಅಂಗಳ ಡೊಂಕು’ ಅನ್ನುವವರ ಸಾಲಿಗೆ ಸೇರುತ್ತಾರಷ್ಟೇ. ನಮ್ಮ ನಿರ್ಧಾರಗಳಿಗೆ ನಾವು ಜವಾಬ್ದಾರರೇ ಹೊರತು, ಖಂಡಿತವಾಗಿಯೂ ಬೇರೊಬ್ಬರು ಆಗಲು ಸಾಧ್ಯವಿಲ್ಲ. ಹೇಗೆ ಜವರಾಯನ ಜೊತೆಗಿನ ಅಂತಿಮ ಯಾತ್ರೆಯಲ್ಲಿ ನಾವು ಒಬ್ಬಂಟಿಯಾಗಿರುತ್ತೇವೆಯೋ ಹಾಗೆಯೇ ಬದುಕಿನ ಹೋರಾಟ ಗಳಲ್ಲಿಯೂ ನಿರ್ಮಿತ್ರರಾಗಿದ್ದು ಒಬ್ಬಂಟಿಯಾಗಿ ಹೋರಾಡಬೇಕು ಎಂಬ ಡಿವಿಜಿಯವರ ಬುದ್ದಿಮಾತು ನಮ್ಮನ್ನು ಹಲವಾರು ಬದುಕಿನ ಸಂಕಷ್ಟಗಳಿಂದ, ಸಂಕಟಗಳಿಂದ, ಗೊಂದಲಗಳಿಂದ ಮುಕ್ತವಾಗಿಸದೆ ಖಂಡಿತ ಇರಲಾರದು.
ಒಂಟಿ ಸಾಧಕರು
ಹಾಗೆ ನೋಡಿದರೆ ಮಹಾನ್ ಸಾಧನೆಗೈದ ಸಾಧಕರೆಲ್ಲರೂ ಒಂಟಿಯಾಗಿಯೇ ತಮ್ಮ ಬಾಳಪಥವನ್ನು ಕ್ರಮಿಸಿದವರು. ಒಂಟಿ ಎಂದರೆ ಎಲ್ಲ ಬಂಧಗಳಿಂದ ದೂರ ಸರಿಯುವುದು ಎಂಬರ್ಥವಲ್ಲ. ಎಲ್ಲರೊಂದಿಗೆ ಬೆರೆಯುತ್ತಾ ಎಲ್ಲರೊಳಗೊಂದಾಗಿರುತ್ತಾ ಸದಾ ನಮ್ಮ ಗಮನ ಮಾತ್ರ ಗುರಿಯ ಕಡೆಗೆ, ಒಳಿತಿನ ಕಡೆಗೆ ಇದ್ದರೆ ಅಷ್ಟೇ ಸಾಕು.
ಕೇವಲ ಬಣ್ಣದ ಮುಖವಾಡಗಳು
ಒಂದು ಮುಖ್ಯವಾದ ವಾಸ್ತವವನ್ನು ಗಮನಿಸಬೇಕು. ಬಿದ್ದಾಗ ಎತ್ತಲು ಬಳಿ ಯಾರೂ ಇಲ್ಲ ಎಂದರಿತಾಗ ಬೀಳದೇ ಇರಲು ಪ್ರಯತ್ನಿಸುತ್ತೇವೆ. ಅತ್ತಾಗ ಕಣ್ಣೀರೊರೆಸಲು ಕರಗಳೇ ಇಲ್ಲದಾಗ ನಾವೇ ಸಂತೈಸಿ ಕೊಳ್ಳುತ್ತೇವೆ. ಸೋತು ನಿಂತಾಗ ಸಾಂತ್ವನ ಗೊಳಿಸಲು ಹೆಗಲೇ ಇಲ್ಲದಾಗ ನಾವೇ ಸಮಾಧಾನಗೊಳ್ಳುತ್ತೇವೆ. ಅಷ್ಟೇಕೆ? ಗೆದ್ದಾಗ, ಏನನ್ನಾದರೂ ಸಾಧಿಸಿದಾಗ ಬೆನ್ನುತಟ್ಟಲು, ಪ್ರೋತ್ಸಾಹಿಸಲು, ಮೆಚ್ಚುಗೆ ವ್ಯಕ್ತಪಡಿಸಲೂ ಯಾರೂ ಇಲ್ಲ ಎಂದರಿತಾಗ ನಮಗೆ ನಾವೇ ಸೂರ್ತಿಯಾಗುತ್ತೇವೆ.
ಈಗಿನ ಪ್ರಸ್ತುತ ಸಮಾಜದಲ್ಲಿ ಈ ಪ್ರೋತ್ಸಾಹ, ಪ್ರಶಂಸೆ, ಬೆಂಬಲ, ಬೆನ್ನುತಟ್ಟುವಿಕೆ, ಇಷ್ಟಪಡುವುದು ಇವೆಲ್ಲವೂ ಕೇವಲ ಕೊಟ್ಟು ಕೊಳ್ಳುವಿಕೆಯ ವ್ಯವಹಾರ ಅಷ್ಟೇ. ಈ ವ್ಯವಹಾರ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ವಾಟ್ಸಪ್, ಇನ್ಸ್ಟಾಗ್ರಾಂ ಗಳಲ್ಲಿ ಅಸಹ್ಯ ಹುಟ್ಟಿಸುವ ರೀತಿ ಕಣ್ಣಿಗೆ ರಾಚುತ್ತಿರುತ್ತವೆ. ಒಂದು ಸಮಯದಲ್ಲಿ ಸುತ್ತಮುತ್ತಲಿನವರಿಗೆ ಬೇಕಾಗಿ ಏನು ಬೇಕಾದರೂ ಮಾಡಲು ಸಿದ್ಧರಿರುವ ನಾವು ನಮ್ಮ ಆಸುಪಾಸು ಹಬ್ಬಿಕೊಂಡಿರುವ ಸಂಬಂಧಗಳೆ ಕೇವಲ ಬಣ್ಣದ ಮುಖವಾಡ ಗಳು ಎಂದರಿತಾಗ ಎಲ್ಲವನ್ನೂ ದೂರ ಮಾಡಿ ಒಂಟಿಯಾಗಿ ನಮ್ಮ ದಾರಿ ನಡೆಯಲು ಆರಂಭಿಸುತ್ತೇವೆ.
ಈ ನಕಲಿ ಬಂಧಗಳೆಲ್ಲ ಮರಕ್ಕೆ ಹತ್ತಿದ ಬಂದಳಿಕೆ ಮರವನ್ನೇ ಕೊಲ್ಲುವಂತೆ ನಮ್ಮನ್ನೇ ದುರ್ಬಲಗೊಳಿಸುತ್ತವೆ ಎಂಬ ಸತ್ಯ ದರ್ಶನವಾದಾಗ ಜೀವನಯಾತ್ರೆಯಲ್ಲಿ ಒಂಟಿಪಥಿಕರಾಗಲು ಬಯಸುತ್ತೇವೆ. ಭಗವದ್ಗೀತೆಯ ಹದಿನೆಂಟನೇ ಅಧ್ಯಾಯದ 49ನೇ ಶ್ಲೋಕವೂ ಅದನ್ನೇ ಹೇಳುತ್ತದೆ. ಆಸಕ್ತ
ಬುದ್ಧಿಸ್ಸರ್ವತ್ರ ಜಿತಾತ್ಮಾ ವಿಗತಸ್ಪೃಹಃ|
ನೈಷ್ಕರ್ಮ್ಯಸಿದ್ಧಿಂ ಪರಮಾಂ ಸಂನ್ಯಾಸೇನಾಧಿಗಚ್ಛತಿ||
ಅಂದರೆ ‘ಯಾವುದರಲ್ಲಿಯೂ ಅತಿ ಮಮತೆಯ ನ್ನಿಡದೆ ಮನಸ್ಸನ್ನು ಬಿಗಿಹಿಡಿದು ಮತ್ತೇನನ್ನೂ ಯಾರಿಂದಲೂ ಬಯಸದೇ ಕರ್ಮಗಳನ್ನು ಮಾಡುವವನು ಉತ್ಕೃಷ್ಟವಾದ ಸ್ಥಿತಿಯನ್ನು ಹೊಂದುತ್ತಾನೆ’ ಎಂದು. ಹಾಗಾಗಿ ಬದುಕಿನಲ್ಲಿ ಎಲ್ಲರೊಂದಿಗಿದ್ದು ಒಂಟಿಯಾಗಿ, ಯಾವ ನೋವುಗಳಿಗೂ ಮಣಿಯದೆ ನಿರ್ಮಿತ್ರರಾಗಿದ್ದು ಮುಂದೆ ಸಾಗುತ್ತಿರಬೇಕು ಅಷ್ಟೇ….!