Friday, 22nd November 2024

ಅಧಿವೇಶನ: ಅರ್ಥಪೂರ್ಣ ಚರ್ಚೆ ಅಗತ್ಯ

ಇಂದಿನಿಂದ ಬೆಳಗಾವಿಯ ಸುವರ್ಣಸೌಧದಲ್ಲಿ ವಿಧಾನಮಂಡಲದ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಈ ಬಾರಿಯೂ
ಅಧಿವೇಶನವು ಧರಣಿ-ಪ್ರತಿಭಟನೆ, ಬಹಿಷ್ಕಾರಗಳಿಗೆ ತುತ್ತಾಗಿ ಕಾಟಾಚಾರಕ್ಕೆ ನಡೆಯುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಅಧಿವೇಶನವು ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ಜಟಾಪಟಿಗೆ ಸೀಮಿತವಾದರೆ ಅದರಿಂದ ಯಾವ ಪ್ರಯೋಜನವೂ ಇಲ್ಲ. ಉತ್ತಮ ಶಾಸನ ರಚಿಸುವುದು ಸದನದ ಕಲಾಪದ ಪ್ರಮುಖ ಭಾಗ.

ಇದರ ಜತೆಗೆ ಹಲವು ಸಮಸ್ಯೆಗೆ ಪರಿವಾರ ಕಂಡುಕೊಳ್ಳಲು ಅರ್ಥಪೂರ್ಣ ಚರ್ಚೆಯೂ ನಡೆಯಬೇಕು. ಜನರ ಕೋಟ್ಯಂತರ ರೂಪಾಯಿ ತೆರಿಗೆ ಹಣ ಮತ್ತು ಮಾನವಶಕ್ತಿ ವ್ಯಯಿಸಿ ತಯಾರಾಗಿರುವ ಅನೇಕ ಪ್ರಮುಖ ಅಧ್ಯಯನ ವರದಿಗಳು, ತನಿಖಾ ವರದಿಗಳು ರಾಜಕೀಯ ಕಾರಣಗಳಿಗಾಗಿ ಈವರೆಗೂ ಅಧಿವೇಶನದಲ್ಲಿ ಮಂಡನೆಯಾಗಿ ಚರ್ಚಿತವಾಗದೆ ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿವೆ.

ಅವುಗಳ ಕುರಿತು ಗಂಭೀರ, ವ್ಯಾಪಕ ಮತ್ತು ಅರ್ಥಪೂರ್ಣ ಚರ್ಚೆ ಯಾಗಬೇಕಾದ ಅವಶ್ಯಕತೆಯಿದೆ. ಆದರೆ, ಈ ವರದಿಗಳನ್ನು ಸದನದಲ್ಲಿ ಚರ್ಚಿಸದ ಆಡಳಿತ ಮತ್ತು ಪ್ರತಿಪಕ್ಷಗಳ ನೇತಾರರು ಜನರನ್ನು ಮರುಳುಗೊಳಿಸುತ್ತಿದ್ದಾರೆ. ಆದ್ದರಿಂದ ಈ ಅಧಿವೇಶನ ದ್ದಾದರೂ ಅವುಗಳ ಕುರಿತು ಅರ್ಥಗರ್ಭೀತವಾಗಿ ಚರ್ಚಿಸಬೇಕಿದೆ. ಅಲ್ಲದೆ ಈ ಬಾರಿ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ಹಿನ್ನೆಲೆ ಅಧಿವೇಶನದ ಸಂದರ್ಭದಲ್ಲಿ ಬಿಸಿ ವಾತಾವರಣ ಸೃಷ್ಟಿಯಾಗುವ ಸಾಧ್ಯತೆ ಇದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಎರಡೂ ರಾಜ್ಯಗಳ ಮುಖ್ಯಮಂತ್ರಿಗಳನ್ನು ಕರೆಸಿ ಸಂಧಾನ ಸಭೆ ನಡೆಸಿದ್ದರೂ ಮಹಾರಾಷ್ಟ್ರ ಏಕೀಕರಣ ಸಮಿತಿಯು ಅಧಿವೇಶನದ ದಿನವೇ ಬೆಳಗಾವಿಯಲ್ಲಿ ಮಹಾ ಮೇಳಾವ್ ಆಯೋಜಿಸಿದೆ. ಎಂಇಎಸ್ ಕಳೆದ ಐವತ್ತು ವರ್ಷಗಳಿಂದ ಇದೇ ರೀತಿಯ ಪುಂಡಾಟಿಕೆಯಲ್ಲಿ ತೊಡಗಿದೆ. ಗಡಿ ವಿವಾದ ತಾರಕಕ್ಕೇರಿದ ಸಂದರ್ಭದಲ್ಲೆಲ್ಲಾ ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್‌ಗಳಿಗೆ ಹಾನಿ ಉಂಟು ಮಾಡಲಾಗುತ್ತಿದೆ. ಆದ್ದರಿಂದ ಎಂಇಎಸ್ ಪಂಡಾಟಿಕೆಯನ್ನು ನಿಯಂತ್ರಿಸುವ ಕುರಿತು ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರು ಚರ್ಚಿಸಿ, ನಿರ್ಧಾರಕ್ಕೆ ಬರಬೇಕಿದೆ.

ಅಲ್ಲದೆ, ಈಗಾಗಲೇ ಅನೇಕ ಜನಪ್ರತಿನಿಧಿಗಳು ಅಧಿವೇಶನಕ್ಕೆ ಗೈರಾಗುವ ಕುರಿತು ಹೇಳಿಕೆ ನೀಡಿದ್ದಾರೆ. ಆದ್ದರಿಂದ ಅಧಿವೇಶನ ವನ್ನು ಹಗುರಾಗಿ ಪರಿಗಣಿಸದೆ ಎಲ್ಲ ಜನಪ್ರತಿನಿಧಿಗಳು ಹಾಜರಾಗುವ ಮೂಲಕ ಜನರ ತೆರಿಗೆ ಹಣದಲ್ಲಿ ನಡೆಯುವ ಅಧಿವೇಶನ ವನ್ನು ಅರ್ಥಪೂರ್ಣವಾಗಿಸಬೇಕಿದೆ.

Read E-Paper click here