ಯಶೋ ಬೆಳಗು
yashomathy@gmail.com
ಉತ್ತಮವಾದ ಜೀವನ ನಿರ್ವಹಣೆಗೆ ಹಣ ಅತಿಮುಖ್ಯವಾದ ಅಂಶವೇ ಆದರೂ ಹಣವೇ ಎಲ್ಲವನ್ನೂ ಅಳೆಯುವ ಸಾಧನವಾಗಬಾರದು. ಹಾಗಾದಾಗ ಎಲ್ಲೂ ಕುರುಡು ಕಾಂಚಾಣದ ಆರ್ಭಟವೇ ಹೆಚ್ಚಾಗುತ್ತ ಮೌಲ್ಯಗಳು ತಲೆಮರೆಸಿ ಕೊಳ್ಳುವುದು ಅನಿವಾರ್ಯವಾಗುತ್ತದೆ. ಯಾರೋ ಹಾಗೆ ಮಾಡಿದರು ಎಂದು ನಾವೂ ಹಾಗೇ ಮಾಡುತ್ತಾ ಹೋದರೆ ಅದಕ್ಕೆ ಕೊನೆಯೆಲ್ಲಿ?
ನಮ್ಮ ಬದುಕನ್ನು ನಿರ್ಧರಿಸುವುದು ನಮ್ಮ ಆಯ್ಕೆಗಳು ಮತ್ತು ನಿರ್ಧಾರಗಳು ಅನ್ನುವುದನ್ನು ಬಲವಾಗಿ ನಂಬುವ ನನ್ನ ಒಲವು ಸದಾ ಉತ್ತಮವಾದ ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳೆಡೆಗೇ ಇದ್ದುದರಿಂದ ಆ ದಿಕ್ಕಿನೆಡೆಗೇ ಒಂದೊಂದೇ ಹೆಜ್ಜೆ
ಯನ್ನು ಇಡುತ್ತಾ ಹೋದೆ. ಅದರಿಂದ ಪಡೆದ ಲಾಭಕ್ಕಿಂತ ಹೆಚ್ಚಾಗಿ ಕೈಯಿಂದ ಹಾಕಿ ನಡೆಸಿದ ದಿನಗಳೇ ಹೆಚ್ಚು. ಆದರೂ ಪ್ರತಿಭಾನ್ವಿತರಿಗೆ ಒಂದು ವೇದಿಕೆಯನ್ನು ಕಲ್ಪಿಸಿಕೊಟ್ಟ ತೃಪ್ತಿ ಸದಾ ನನ್ನೊಂದಿಗಿದೆ. ಇತ್ತೀಚೆಗೆ ರವಿಯ ಗೆಳೆಯರಾದ ಜಿ.ಎಚ್. ರಾಘವೇಂದ್ರರ ಕಿರಿಯ ಮಗ ಭರತನೊಂದಿಗೆ ಮಾತನಾಡುತ್ತಿರುವಾಗ ಅಕ್ಕಾ, ನೀನ್ಯಾಕೆ ಒಂದು ಟ್ರಸ್ಟ್ ಮಾಡಬಾರದು? ನೀನು ಮಾಡುತ್ತಿರುವ ಎಲ್ಲ ಕೆಲಸಗಳನ್ನೂ ಅದರ ಮೂಲಕ ಮಾಡಿದರೆ ಇನ್ನೂ ಹೆಚ್ಚಿನ ವಿಸ್ತಾರ ದೊರೆತಂತಾಗುತ್ತದೆ ಎಂದು ಹೇಳಿದಾಗ ಅದರ ನಿಯಮಾವಳಿಗಳನ್ನೆಲ್ಲ ಕೇಳಿ ತಿಳಿದುಕೊಂಡೆ.
ಹೌದು! ಅವನು ಹೇಳುತ್ತಿರುವುದರಲ್ಲೂ ಸತ್ಯವಿದೆ ಅನ್ನುವುದು ತಿಳಿದಾಗ ಅದರೆಡೆಗೆ ಹೆಚ್ಚಿನ ಗಮನಹರಿಸಲಾರಂಭಿಸಿದೆ. ಹೇಗಿದ್ದರೂ ಸಾಹಿತ್ಯ ಕ್ಷೇತ್ರಕ್ಕೆ ರವಿಯ ಮನೆತನದವರ ಕೊಡಗೆ ಸಾಕಷ್ಟಿದೆ. ಹಾಗೂ ಕಲೆಯ ಹಿನ್ನೆಲೆಯಿಂದ ಬಂದ ನನಗೆ ಅದರೆಡೆಗೆ ಅನನ್ಯ ಗೌರವವಿದೆ. ಹೀಗಾಗಿ ಕೆರೆಯ ನೀರನು ಕೆರೆಗೆ ಚೆಲ್ಲಿ ಎನ್ನುವಂತೆ ‘ರವಿಬೆಳಗೆರೆ ಸಾಹಿತ್ಯ ಹಾಗೂ ಸಾಂಸ್ಕೃತಿಕ ಪರಿಷತ್ತು’ ಅನ್ನುವ ಚಾರಿಟಬಲ್ ಟ್ರಸ್ಟನ್ನು ಮಾಡಿದರೆ ಹೇಗೆ? ಅನ್ನುವ ಆಲೋಚನೆಗೆ ಮೂರ್ತ ರೂಪ ಕೊಟ್ಟವರು ನನ್ನ ಒಡಹುಟ್ಟಿದ ಸಹೋದರಿಯಾದ ಪ್ರಭಾ ಹಾಗೂ ಆಕೆಯ ಪತಿ ಬಾಬು.
ನಿಮ್ಮ ಮಾರ್ಗದರ್ಶನದಲ್ಲಿ, ನಿಮ್ಮೆಲ್ಲ ಕೆಲಸಕಾರ್ಯಗಳಲ್ಲಿ ನಾವು ಸದಾ ಜೊತೆಗಿರುತ್ತೇವೆ ಎಂದು ಹೇಳುತ್ತಾ ಅದಕ್ಕೆ ಪೂರಕ ವಾದ ಜವಾಬ್ದಾರಿಗಳನ್ನು ಹೊತ್ತು ಅದರ ಕೆಲಸಕಾರ್ಯಗಳಲ್ಲಿ ತೊಡಗಿಕೊಂಡು ಅಷ್ಟರಮಟ್ಟಿಗೆ ನನ್ನ ಜವಾಬ್ದಾರಿಯ ಹೊರೆಯನ್ನು ತಗ್ಗಿಸಿದ್ದಾರೆ. ಸಾಹಿತ್ಯ ಹಾಗೂ ಕಲೆಗಳಿಗೆ ಒಂದು ಭದ್ರವಾದ ಬುನಾದಿ ದೊರೆಯಬೇಕೆಂದರೆ ಅದು ಹೆಚ್ಚು ಹೆಚ್ಚು ಜನರನ್ನು ತಲುಪಬೇಕಾಗುತ್ತದೆ. ಏಕಕಾಲದಲ್ಲಿ ಹೆಚ್ಚು ಜನರನ್ನು ತಲುಪುವ ಅತ್ಯುತ್ತಮ ಸಾಧನಗಳೆಂದರೆ ಮಾಧ್ಯಮಗಳು.
ಅದಕ್ಕಾಗಿ ಮಾಧ್ಯಮದ ಮೊರೆ ಹೋಗುವುದು ಅನಿವಾರ್ಯವಾಗಿದೆ. ಜಗತ್ತಿನ ಯಾವುದೇ ಕಲೆ ಅಥವಾ ಮಾಧ್ಯಮಗಳ ಜವಾಬ್ದಾರಿಯೆಂದರೆ ಸಾಮಾಜಿಕ ಪ್ರಜ್ಞೆಯನ್ನು ಉದ್ದೀಪನಗೊಳಿಸುವುದು, ಸಾಮಾಜಿಕ ಕಳಕಳಿಯನ್ನು ಎತ್ತಿ ಹಿಡಿಯುವುದು, ಸಮಾಜ ಪರಿವರ್ತನೆಗೆ ಕೈಗೂಡಿಸುವುದೇ ಹೊರತು ಅದನ್ನು ಇನ್ನಷ್ಟು ಅಧಃಪತನಕ್ಕೆ ತುಳಿಯುವುದಲ್ಲ. ಆದರೆ ವಿಪರ್ಯಾಸ ವೆಂದರೆ ಇತ್ತೀಚೆಗೆ ಎಲ್ಲ ಮಾಧ್ಯಮಗಳೂ, ಎಲ್ಲ ಕಲೆಗಳೂ ಒಂದೇ ನೀತಿಗೆ ಒಳಪಟ್ಟಿವೆ. ಒಂದು ಮಾಧ್ಯಮವೆಂದರೆ, ಒಂದು ಕಲೆಯೆಂದರೆ, ರಂಜನೆಯೂ ಇರಬೇಕು, ಬೋಧನೆಯೂ ಇರಬೇಕು.
ಆದರೆ ಇಂದು ಬೋಧನೆ ಎಂಬುದು ಮರೆಯಾಗಿ ಕೇವಲ ರಂಜನೆಗಷ್ಟೇ ಮಹತ್ವ ಕೊಡುತ್ತಿರುವುದರಿಂದ ಅನೇಕ ಅನಾಹುತ ಗಳನ್ನು ನಾವು ಇಂದಿನ ಸಾಮಾಜಿಕ ಜೀವನದಲ್ಲಿ ನೋಡುತ್ತಿದ್ದೇವೆ. ಸಮಾಜದಲ್ಲಿ ಅನೇಕ ಕಡೆ ಸಾಕಷ್ಟು ಒಳ್ಳೆಯ ಕೆಲಸ-ಕಾರ್ಯಗಳೂ ನಿರಂತರವಾಗಿ ನಡೆಯುತ್ತಿರುತ್ತವೆ. ಆದರೆ ಅದನ್ನು ಚುಟುಕಾಗಿ ತೋರಿಸಿ, ಅಪರಾಧಗಳನ್ನು, ಅನೈತಿಕ ಸಂಬಂಧ ಗಳನ್ನು, ಅಸಂಬದ್ಧ ಹೇಳಿಕೆಗಳನ್ನು ಜನಸಮೂಹ ಮರೆಯಲಾಗದಂತೆ ನಿರಂತರವಾಗಿ ಅದರ ಅವಶೇಷಗಳನ್ನೂ ಬಿಡದಂತೆ ವೈಭವೀಕರಿಸುತ್ತಾ ಕ್ಷಣ ಕಣವೂ ಭಿತ್ತರಿಸುತ್ತಾ ಅಪರಾಧಿ ಮನಸುಗಳಿಗೆ ಇನ್ನಷ್ಟು ಪ್ರಚೋದನೆ ನೀಡುವಲ್ಲಿ ಮೇಲುಗೈ ಸಾಧಿಸು ತ್ತಿವೆ ಎಂದರೆ ತಪ್ಪಾಗಲಾರದೇನೋ? ಯಾರನ್ನೂ ಅತಿಯಾಗಿ ನಂಬಿ ಅಪರಾಧಗಳ ಸುಳಿಯೊಳಗೆ ಸಿಲುಕಿ ಮೋಸ ಹೋಗದಂತೆ ಎಚ್ಚರಿಸುವ ಉದ್ದೇಶದಿಂದ ಪ್ರಸಾರವಾಗುತ್ತಿರುವ ಅತಿಯಾದ ಕ್ರೈಂ ಸ್ಟೋರಿಗಳು ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಮರೆತಿವೆಯಾ? ಅಥವಾ SP ಅನ್ನುವ ಸ್ಪರ್ಧಾತ್ಮಕ ಮಾಯಾಜಿಂಕೆಯ ಬೆನ್ನತ್ತಿ ಮೌಲ್ಯಗಳನ್ನು ಮರೆಯುವುದು ಅನಿವಾರ್ಯ ವಾಗಿದೆಯಾ? ಯಾರ ಹಿಡಿತಕ್ಕೂ ಸಿಗದೆ ದೈತ್ಯಾಕಾರವಾಗಿ ಬೆಳೆಯುತ್ತಿರುವ ಇಂಥಾ ವ್ಯವಸ್ಥೆಗೆ ಅಂಕುಶವಿಡು ವವರ್ಯಾರು? ಉತ್ತರವಾಗಿ ಕಾಲಕ್ಕೆ ತಕ್ಕಂತೆ ನಾವೂ ಬದಲಾಗುವುದು ಅನಿವಾರ್ಯ ಎನ್ನುವ ಮಾತು ಕೇಳಿಬರುತ್ತದಾದರೂ, ಕಾಲ ಬದಲಾಗುತ್ತದೆ ನಿಜ.
ಆದರೆ ಮೌಲ್ಯಗಳೆಂದೂ ಬದಲಾಗುವುದಿಲ್ಲ. ಹಾಗೂ ಕಾಲ ಯಾವುದನ್ನೂ ಬದಲಾಯಿಸುವಂತೆ ಹೇಳುವುದೂ ಇಲ್ಲ. ಕಾಲದ
ಜೊತೆಜೊತೆಗೆ ನಮ್ಮ ಮೌಲ್ಯಗಳು ಇನ್ನೂ ಎತ್ತರೆತ್ತರಕ್ಕೇರಬೇಕೇ ಹೊರತು ಪಾತಾಳಕ್ಕಿಳಿಯಬಾರದು. ನಮ್ಮ ಕನ್ನಡದಲ್ಲಿ ಬೇಕಾದಷ್ಟು ಸಾಧಕರಿದ್ದಾರೆ. ಬೇಕಾದಷ್ಟು ಕಾದಂಬರಿಗಳಿವೆ. ಅದನ್ನು ಧಾರಾವಾಹಿಗಳ ಮೂಲಕ ಜನರಿಗೆ ತಲುಪಿಸುವ ಕೆಲಸ ಮಾಧ್ಯಮದ ಮೂಲಕವಾದರೆ ಅದಕ್ಕೊಂದು ಸಾರ್ಥಕತೆ ಸಿಕ್ಕಂತಾಗುತ್ತದೆ. ಆದರೆ ಇಂದಿನ ಧಾರಾವಾಹಿಗಳು ಕತೆ ಮುಗಿದು ಹೋಗಿದ್ದರೂ ಅದರ SP ಚೆನ್ನಾಗಿದ್ದರೆ ಅದಕ್ಕೆ ಇನ್ನಷ್ಟು ಮಸಾಲೆಯನ್ನು ಸೇರಿಸಿ ಸ್ವಾದ ಮುಗಿದು ಹೋದ ನಂತರವೂ ಅಗಿಯುವ ಚ್ಯೂಯಿಂಗ್ ಗಮ್ ನಂತಾಗಿರುತ್ತವೆ.
ಎಲ್ಲಾ ಬೆರಳೆಣಿಕೆಯಷ್ಟು ಧಾರಾವಾಹಿಗಳನ್ನು ಬಿಟ್ಟರೆ ಉಳಿದವುಗಳೆಲ್ಲ ಅತಿಯಾದ ವಿಜೃಂಭಣೆಯೇ. ಒಂದೂ ಜೀವನಕ್ಕೆ ಹತ್ತಿರವಿಲ್ಲ. ಗಟ್ಟಿ ಕತೆಯಾಗಲೀ, ಉತ್ತಮ ಸಂದೇಶವಾಗಲೀ ಇಲ್ಲದೆ, ಎಲ್ಲದರಲ್ಲೂ ಖಳನಾಯಕರದ್ದೇ ಮೆರವಣಿಗೆ. ತಾಂತ್ರಿಕತೆಗೆ ಒತ್ತು ನೀಡುವ ಭರದಲ್ಲಿ ನೈಜತೆ ಮರೆಯಾಗುತ್ತಿದೆ. ಇನ್ನು ಮೊಬೈಲುಗಳು ಜೀವನದ ಅವಿಭಾಜ್ಯ ಅಂಗವೇ
ಆಗಿ ಹೋಗಿರುವಂಥ ಇಂದಿನ ದಿನಗಳಲ್ಲಿ ಸುಲಭವಾಗಿ ಮಕ್ಕಳಿಗೆ ವಯಸ್ಸಿಗೆ ಮೀರಿದ ವಿಷಯಗಳು ಯಾವುದೇ ಅಡೆತಡೆ ಯಿಲ್ಲದೆ ಕಾಣುವಂತಾಗಿರುವುದರಿಂದ ಸಹಜವಾಗಿಯೇ ಅದರತ್ತ ಹೆಚ್ಚು ಕುತೂಹಲ ಮೂಡುತ್ತಾ ರಹಸ್ಯವಾಗಿ ಬೇಡದ ವಿಷಯಗಳೆಡೆಗೆ ಗಮನ ಹರಿಯುತ್ತಾ ತಾವೂ ಅದರ ಒಂದು ಭಾಗವಾಗಿ ಹೋಗುವುದನ್ನು ದಿನನಿತ್ಯದ ಬದುಕಲ್ಲಿ ಕಾಣುತ್ತಿದ್ದೇವೆ.
ಇತ್ತೀಚೆಗೆ ಭೇಟಿಯಾದ ಕಾಲೇಜಿನ ವಿದ್ಯಾರ್ಥಿಯೊಬ್ಬಳು, ಮೇಡಮ್, ನನಗೆ ಎಲ್ಲರ ಮೇಲೂ ವಿಶ್ವಾಸವೇ ಹೊರಟು ಹೋಗಿದೆ.
ನಮ್ಮ ಕಾಲೇಜಿನ ಪ್ರತಿಯೊಬ್ಬ ಹುಡುಗ- ಹುಡುಗಿಯರ ನಡುವೆಯೂ ದೈಹಿಕ ಸಂಬಂಧವಿದೆ. ಕುಡೀತಾರೆ, ಸಿಗರೇಟು ಸೇದುತ್ತಾರೆ. ಅವರ ಜೊತೆ ನಾವು ಗುರುತಿಸಿಕೊಂಡರೆ ನಮ್ಮನ್ನೂ ಅದೇ ದೃಷ್ಟಿಯಿಂದ ನೋಡುತ್ತಾರೆ. ಮುಂದೆ ಯಾವ ರೀತಿಯ ಸಂಗಾತಿಯನ್ನು ಯಾವ ನಂಬಿಕೆಯ ಮೇಲೆ ಆಯ್ಕೆ ಮಾಡಿಕೊಳ್ಳುವುದು ಅನ್ನುವುದೇ ದೊಡ್ಡ ಗೊಂದಲವಾಗಿದೆ. ಮುಂದಿನ
ದಿನಗಳಲ್ಲಿ ಹುಡುಗಿ ಗರ್ಭವತಿಯಾಗಿದ್ದಾಳೆಂದು ತಿಳಿದರೂ ಪೋಷಕರು ಮಕ್ಕಳ ಸಲುವಾಗಿ ಒಪ್ಪಿಕೊಳ್ಳಲೇ ಬೇಕಾದಂತಹ ಅನಿವಾರ್ಯತೆ ಉಂಟಾಗುತ್ತದೆ.
ಇಲ್ಲದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಹೆದರಿಸುತ್ತಾರೆ…. ಎಂದು ಹೇಳುವಾಗ ಇತ್ತೀಚೆಗೆ ಶಾಲಾ ಮಕ್ಕಳ ಬ್ಯಾಗಿನಲ್ಲಿ ದೊರೆತ ವಸ್ತುಗಳು ನೆನಪಾಗಿ ಪರಿಸ್ಥಿತಿ ಕೈಮೀರಿ ಹೋಗುವ ಮುನ್ನ ಇದಕ್ಕೆ ಸರಕಾರವೇ ಯಾವುದಾದರೂ ಪರಿಹಾರ ಮಾರ್ಗ ವನ್ನು ಕಾನೂನಿನ ಮೂಲಕ ತಂದೊಡ್ಡದೇ ಅನ್ಯಮಾರ್ಗವಿಲ್ಲ ಎನ್ನಿಸಿತು. ಪೋಷಕರೆದುರು, ಶಿಕ್ಷಕರೆದುರು ಮುಗ್ಧರಂತೆ ಕಾಣುವ ಮಕ್ಕಳು ಯಾರ ಗಮನಕ್ಕೂ ಬಾರದಂತೆ ತಮ್ಮದೇ ಆದ ಒಂದು ರಹಸ್ಯ ಲೋಕವನ್ನೇ ಸೃಷ್ಟಿಸಿಕೊಂಡಿರುತ್ತಾರೆ.
ಹೀಗಾಗಿ ನಮ್ಮ ಮಕ್ಕಳು ಹಾಗಲ್ಲ ಅನ್ನುವ ಕುರುಡುನಂಬಿಕೆಯಿಂದ ಹೊರಬಂದು ಹೆಚ್ಚಿನ ಜವಾಬ್ದಾರಿಯಿಂದ ಮಕ್ಕಳ ಬಗ್ಗೆ
ಒಂದು ಎಚ್ಚರಿಕೆಯ ಕಣ್ಣಿಟ್ಟಿರುವುದು ಸದಾ ಒಳಿತು. ಜೊತೆಗೆ ಶಿಕ್ಷಕರೂ ಕೂಡ ಇನ್ನಷ್ಟು ಹೆಚ್ಚಿನ ಜವಾಬ್ದಾರಿಯಿಂದ ಮಕ್ಕಳ ಚಟುವಟಿಕೆಗಳೆಡೆಗೆ ಗಮನವಹಿಸುವುದು ಅನಿವಾರ್ಯವಾಗಿದೆ. ಇಲ್ಲದಿದ್ದರೆ ಮುಂದಿನ ಭವಿಷ್ಯವನ್ನು ಅರಿಯದ ಮಕ್ಕಳು
ವಿನಾಶದಂಚಿಗೆ ತಲುಪುವುದು ಶತಸಿದ್ಧ!
ಇನ್ನು ಕುಡಿತದ ಚಟದಿಂದ ಹಾಳಾಗುತ್ತಿರುವ ಸಂಸಾರಗಳಿಗೆ ಲೆಕ್ಕವೇ ಇಲ್ಲ. ಹಿಂದೆಲ್ಲ ಊರ ಹೊರಗಿದ್ದ ಚಟಗಳು ಇಂದು ನೇರ ಮನೆಯ ಪಡಸಾಲೆಗೇ ಬಂದು ಕುಳಿತಿದೆ. ಇತ್ತೀಚಿಗಿನ ಪ್ರತಿಯೊಂದು ಸಿನೆಮಾದಲ್ಲೂ ಅದನ್ನು ವೈಭವೀಕರಿಸುವ ಹಾಡುಗಳಿಗೂ ಕಮ್ಮಿಯೇನಿಲ್ಲ. ದಿನನಿತ್ಯ ಮಕ್ಕಳೂ ಅದನ್ನೇ ನೋಡುತ್ತಾ ಬೆಳೆಯುವಾಗ ಯಾರಿಗೆ ತಾನೇ ಆದರ್ಶದ ಮಾತುಗಳು ರುಚಿಸಲು ಸಾಧ್ಯ? ನ್ಯಾಯ-ನಿಷ್ಠೆಯಿಂದ ದುಡಿಯುವವರು ಅವಹೇಳನಕ್ಕೊಳಗಾಗುತ್ತಾ ದರ್ಪ-ಅನ್ಯಾಯಗಳ ಮೂಲಕ ಮೆರೆಯುವವರೇ ನಾಯಕರಂತೆ, ದೊರೆಗಳಂತೆ ಬಿಂಬಿತವಾದರೆ ಆ ದಾರಿಯೇ ಸರಿಯೆಂದು ಅರ್ಥೈಸಿಕೊಳ್ಳುತ್ತಾ ಇನ್ನಷ್ಟು ಕ್ರೌರ್ಯ, ಹಿಂಸೆಗಳು
ಹೆಚ್ಚಾಗಲು ಅನುವು ಮಾಡಿಕೊಟ್ಟಂತಾಗುತ್ತದೆ. ಅದನ್ನೆಲ್ಲ ತಡೆಹಿಡಿಯುವ ಸೆನ್ಸಾರ್ ಮಂಡಳಿಗೆ ಕಣ್ಣುಮುಚ್ಚಿ ಕೂರುವ ಅನಿವಾರ್ಯತೆಯೇನಿದೆಯೋ ಕಾಣೆ!
ಉತ್ತಮವಾದ ಜೀವನ ನಿರ್ವಹಣೆಗೆ ಹಣ ಅತಿ ಮುಖ್ಯವಾದ ಅಂಶವೇ ಆದರೂ ಹಣವೇ ಎಲ್ಲವನ್ನೂ ಅಳೆಯುವ ಸಾಧನ ವಾಗಬಾರದು. ಹಾಗಾದಾಗ ಎಲ್ಲೂ ಕುರುಡು ಕಾಂಚಾಣದ ಆರ್ಭಟವೇ ಹೆಚ್ಚಾಗುತ್ತ ಮೌಲ್ಯಗಳು ತಲೆಮರೆಸಿಕೊಳ್ಳುವುದು ಅನಿವಾರ್ಯವಾಗುತ್ತದೆ. ಯಾರೋ ಹಾಗೆ ಮಾಡಿದರು ಎಂದು ನಾವೂ ಹಾಗೇ ಮಾಡುತ್ತಾ ಹೋದರೆ ಅದಕ್ಕೆ ಕೊನೆಯೆಲ್ಲಿ?
ಅಯ್ಯೋ ಎಂಥಾ ಕಾಲ ಬಂತಪ್ಪಾ ಎಂದು ಕಾಲದ ಮೇಲೆ ಆರೋಪ ಹೊರಿಸುತ್ತಾ ಕೂರುವ ಬದಲು ಕಳೆದು ಹೋಗುತ್ತಿರುವ ಮೌಲ್ಯಗಳನ್ನು ಮತ್ತೆ ಒಂದೊಂದಾಗಿ ಜಾರಿಗೆ ತರುವತ್ತ ಗಮನ ಹರಿಸೋಣ.
ತಪ್ಪಿದ ಹೆಜ್ಜೆಯನ್ನು ಸರಿಪಡಿಸಿಕೊಳ್ಳಲು ನಾವೇ ಮೊದಲು ಮನಸು ಮಾಡಬೇಕು. ಹನಿಹನಿಗೂಡಿದರೇ ಸಾಗರವೆನ್ನುವಂತೆ ನಮ್ಮ ಸುತ್ತಮುತ್ತಲಿನ ಸಮಾಜದೆಡೆಗೆ ಉತ್ತಮ ಚಿಂತನೆಗಳನ್ನು ಹೊಂದುತ್ತಾ, ಉತ್ತಮ ಅಭಿರುಚಿಗಳ ಮೂಲಕ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ, ಸಮಾಜದ ಒಳಿತಿಗೆ ನಮ್ಮದೂ ಒಂದು ಅಳಿಲು ಸೇವೆ ಮಾಡುವಲ್ಲಿ ತೊಡಗಿ ಕೊಳ್ಳೋಣ. ಸಂಕುಚಿತ ಮನಸುಗಳನ್ನು ಕೊಂಚ ವಿಶಾಲಗೊಳಿಸಿಕೊಳ್ಳೋಣ.
Read E-Paper click here