Friday, 20th September 2024

ಗ್ಯಾಸ್ಟ್ರಿಕ್ ಸಮಸ್ಯೆ – ನಿರ್ಲಕ್ಷ್ಯ ಬೇಡ

ಸ್ವಾಸ್ಥ್ಯ ಸಂಪದ

Yoganna55@gmail.com

‘ಡಾಕ್ಟ್ರೇ ನನಗೆ ಗ್ಯಾಸ್ಟ್ರಿಕ್ ಪ್ರಾಬ್ಲಂ ಇದೆ. ಪ್ರತಿನಿತ್ಯ ಗ್ಯಾಸ್ಟ್ರಿಕ್‌ಗೆ ಮಾತ್ರೆಗಳನ್ನು ನುಂಗ್ಲೇಬೇಕು. ಬಹಳ ಜನ ಡಾಕ್ಟ್ರಹತ್ರ ತೋರಿಸಿ ದ್ದೀನಿ. ವಾಸೀನೇ ಆಗ್ತಾ ಇಲ್ಲ. ಇದಕ್ಕೆ ಪರಿಹಾರಾನೇ ಇಲ್ವೆ?’ ಎಂಬ ಅಳಲಿನೊಂದಿಗೆ ವೈದ್ಯರ ಬಳಿ ಬರುವವರು ನೂರಾರು ಮಂದಿ. ಈ ಅಂಕಣದ ಓದುಗರೊಬ್ಬರು ಹೊಟ್ಟೆ ಹುಣ್ಣಿನ ಬಗ್ಗೆ ಬರೆಯಿರಿ ಎಂದು ಈಮೇಲ್ ಮುಖಾಂತರ ವಿನಂತಿಸಿಕೊಂಡ ಮೇರೆಗೆ ಬರೆಯಲಾದ ಗ್ಯಾಸ್ಟ್ರಿಕ್ ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲುವ ಲೇಖನವಿದು.

ಗ್ಯಾಸ್ಟ್ರಿಕ್ ತೊಂದರೆ ಸಮುದಾಯದಲ್ಲಿ ವ್ಯಾಪಕವಾಗಿ ಕಂಡುಬರುತ್ತಿರುವ ಪ್ರಮುಖ ರೋಗತೊಂದರೆಗಳಲ್ಲೊಂದು. ಸಾಮಾನ್ಯರ ಅರ್ಥದಲ್ಲಿ ಅಜೀರ್ಣ, ತೇಗು, ಎದೆಉರಿ, ಹೊಟ್ಟಿನೋವು, ಊಸು ಇತ್ಯಾದಿ ತೊಂದರೆಗಳೆಲ್ಲವನ್ನೂ ಗ್ಯಾಸ್ಟ್ರಿಕ್ ಸಮಸ್ಯೆಗಳೆಂದು ಪರಿಗಣಿಸಿದರೂ ವೈದ್ಯಕೀಯವಾಗಿ ಜೀರ್ಣಾಂಗ ವ್ಯವಸ್ಥೆಯ ಪ್ರಮುಖ ಭಾಗಗಳಲ್ಲೊಂದಾ ದ ಜಠರ(ಸ್ಟಮಕ್-ಗ್ಯಾಸ್ಟ್ರಿಕ್)ಗೆ ಸಂಬಂಧಿಸಿದ ಅವ್ಯವಸ್ಥೆಗಳು ಗ್ಯಾಸ್ಟ್ರಿಕ್ ಸಮಸ್ಯೆಯ ವ್ಯಾಪ್ತಿಗೆ ಬರುತ್ತವೆ.

ಕೆಲವರು ಮೈಕೈ ನೋವು ಮತ್ತು ದೇಹದಲ್ಲಿ ಕಂತು ಕಂತುಗಳಲ್ಲಿ ಉಂಟಾಗುವ ಅನೈಚ್ಛಿಕ ಚಲನವಲನಗಳನ್ನೂ ಸಹ ಗ್ಯಾಸ್ಟ್ರಿಕ್ ಸಮಸ್ಯೆಯ ವ್ಯಾಪ್ತಿಯಲ್ಲಿ ತಪ್ಪಾಗಿ ಗ್ರಹಿಸುತ್ತಾರೆ ಮತ್ತು ಗ್ಯಾಸ್ ಟ್ರಬಲ್ ಎಂದರೆ ದೇಹದೊಳಗೆ ಅತಿಯಾಗಿ ಅನಿಲ ಉತ್ಪತ್ತಿ ಯಾಗುವುದು ಎಂಬ ತಪ್ಪುಗ್ರಹಿಕೆಯೂ ಅನೇಕರಲ್ಲಿದೆ. ಗ್ಯಾಸ್ಟ್ರಿಕ್ ತೊಂದರೆ ಸೇವಿಸುವ ಆಹಾರ, ದುಶ್ಚಟಗಳು, ಮಾನಸಿಕ ಒತ್ತಡ, ಸೇವಿಸುವ ಔಷಧಗಳು ಮತ್ತು ಪರಿಸರವನ್ನು ಅವಲಂಬಿಸಿದ್ದು, ಬಹು ಅಂಶಗಳಿಂದ ಉಂಟಾಗುವ ಸಮಸ್ಯೆ ಇದಾಗಿದೆ. ಗ್ಯಾಸ್ಟ್ರಿಕ್ ಸಮಸ್ಯೆ ಯು ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ತೊಂದರೆಯಾದುದರಿಂದ ಇದನ್ನು ಅರ್ಥ ಮಾಡಿಕೊಳ್ಳಲು ಜೀರ್ಣಾಂಗ ವ್ಯವಸ್ಥೆ, ಅದರಲ್ಲೂ ಜಠರದ ರಚನೆ ಮತ್ತು ಕಾರ್ಯಗಳನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯ.

ಜೀರ್ಣಾಂಗ ವ್ಯವಸ್ಥೆಯ ರಚನೆ ಮತ್ತು ಕಾರ್ಯ: ಸೇವಿಸಿದ ಆಹಾರ ಜೀರ್ಣವಾಗಿ ರಕ್ತಗತವಾಗುವಂತೆ ರೂಪಿತವಾಗಿರುವ ಜೀರ್ಣಾಂಗ ವ್ಯವಸ್ಥೆಯನ್ನು ‘ಮೇಲು ಜೀರ್ಣಾಂಗ ವ್ಯವಸ್ಥೆ’ (ಬಾಯಿ, ಯೂಸೋಫೇಗಸ್, ಜಠರ ಮತ್ತು ಡೂಯೋಡಿನಂ)
ಮತ್ತು ‘ಕೆಳಭಾಗದ ಜೀರ್ಣಾಂಗ ವ್ಯವಸ್ಥೆ’(ಸಣ್ಣ ಕರುಳು, ದೊಡ್ಡಕರುಳು ಮತ್ತು ಮಲದ್ವಾರ) ಎಂದು ವಿಭಾಗಿಸಲಾಗಿದ್ದು, ಇದು ನಾಳದೋಪಾದಿಯ ಮೃದು ಸ್ನಾಯುವನ್ನೊಳಗೊಂಡ ರಚನೆ. ಮೇಲು ಜೀರ್ಣಾಂಗ ವ್ಯವಸ್ಥೆಯಲ್ಲಿ ಸೇವಿಸಿದ ಆಹಾರ ಜೀರ್ಣ ವಾಗುವ ರೂಪಕ್ಕೆ ಪರಿವರ್ತನೆಯಾಗುತ್ತದೆ. ಕೆಳ ಜೀರ್ಣಾಂಗ ವ್ಯವಸ್ಥೆಯ ಸಣ್ಣಕರುಳಿನಲ್ಲಿ ಆಹಾರಾಂಶಗಳು ರಕ್ತಗತವಾಗುತ್ತವೆ ಮತ್ತು ದೊಡ್ಡಕರುಳಿನಲ್ಲಿ ಮಲೋತ್ಪತ್ತಿಯಾಗಿ ವಿಸರ್ಜಿಸಲ್ಪಡುತ್ತದೆ.

ಜಠರ(ಸ್ಟಮಕ್): ಜಠರ ಮೇಲಿನ ಜೀರ್ಣಾಂಗ ವ್ಯವಸ್ಥೆಯ ಪ್ರಮುಖ ಭಾಗವಾಗಿದ್ದು, ಇದರಲ್ಲಿ ಜಠರರಸ(ಗ್ಯಾಸ್ಟ್ರಿಕ್ ಜ್ಯೂಸ್) ಉತ್ಪತ್ತಿಯಾಗುತ್ತದೆ. ಜಠರರಸದಲ್ಲಿ ಹೈಡ್ರೋ ಕ್ಲೋರಿಕ್ ಆಮ್ಲ, ಪೆಪ್ಸಿನ್ ಮತ್ತು ಮ್ಯೂಕಸ್ ಅಂಶಗಳಿವೆ.  ಹೈಡ್ರೋ ಕ್ಲೋರಿಕ್ ಆಮ್ಲ ಒಳಬರುವ ರೋಗಾಣುಗಳನ್ನು ಕೊಲ್ಲುವುದಲ್ಲದೆ, ಮಾಂಸಾಹಾರ ಮತ್ತು ಗಟ್ಟಿಯಾದ ಆಹಾರ ಪದಾರ್ಥಗಳನ್ನು ಜೀರ್ಣಿಸಲು ಸಹಕಾರಿಯಾಗುತ್ತದೆ. ಪೆಪ್ಸಿನ್ ಪ್ರೋಟಿನ್‌ನನ್ನು ವಿಭಜಿಸುತ್ತದೆ.

ಮ್ಯೂಕಸ್ ಜಠರದ ಒಳಮೈಗೆ ಲೇಪನವಾಗಿ ಹೈಡ್ರೋಕ್ಲೋರಿಕ್ ಆಮ್ಲ ಜೀರ್ಣಾಂಗದ ಗೋಡೆಗಳನ್ನು ಸುಡದಂತೆ ರಕ್ಷಿಸುತ್ತದೆ. ಜಠರದಲ್ಲಿ ಆಹಾರ ಜಠರರಸದೊಡನೆ ಮಿಶ್ರಣವಾಗಿ ಆಹಾರ ಚೆನ್ನಾಗಿ ಅರೆಯಲ್ಪಟ್ಟು ಸೇವಿಸಿದ ಆಹಾರವನ್ನು ಅರೆಘನ ವಸ್ತುವನ್ನಾಗಿ ಪರಿವರ್ತಿಸಿ(ಕೈಮ್) ಸಣ್ಣ ಕರುಳಿಗೆ ದೂಡುತ್ತದೆ. ಮೆದುಳಿನ ನರಮಂಡಲ, ಆಹಾರದ ವಾಸನೆ ಮತ್ತು ವಿಧ, ಮಾನಸಿಕ ಒತ್ತಡ ಇವು ಜಠರ ರಸದ ಹೈಡ್ರೋಕ್ಲೋರಿಕ್ ಆಮ್ಲದ ಪ್ರಮಾಣವನ್ನು ನಿಯಂತ್ರಿಸುತ್ತವೆ. ಗ್ಯಾಸ್ಟ್ರಿಕ್ ಸಮಸ್ಯೆಗೆ ಜಠರ ರಸದಲ್ಲಾಗುವ ಏರುಪೇರುಗಳು ಕಾರಣ.

ಗ್ಯಾಸ್ಟ್ರಿಕ್ ಸಮಸ್ಯೆ(ಆಮ್ಲ-ಪೆಪ್ಸಿನ್‌ಗಳ ಕಾಯಿಲೆ) ಎಂದರೇನು?: ಜಠರರಸದಲ್ಲಿ ಹೈಡ್ರೋಕ್ಲೋರಿಕ್ ಆಮ್ಲ, ಮ್ಯೂಕಸ್ ಮತ್ತು ಪೆಪ್ಸಿನ್ ಇವುಗಳ ಪ್ರಮಾಣದಲ್ಲಿ ಒಂದಕ್ಕೊಂದು ನಿರ್ದಿಷ್ಟ ಅನುಪಾತದಲ್ಲಿದ್ದು, ಅಗತ್ಯವಿದ್ದಷ್ಟು ಮಾತ್ರ ಹೈಡ್ರೋ ಕ್ಲೋರಿಕ್ ಆಮ್ಲ ಉತ್ಪತ್ತಿಯಾಗುತ್ತದೆ. ಇವುಗಳ ಅನುಪಾತ ವ್ಯತ್ಯಾಸವಾದಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುತ್ತದೆ. ಆಮ್ಲದ ಪ್ರಮಾಣ ಹೆಚ್ಚಾದಲ್ಲಿ ಮ್ಯೂಕಸ್ ನಿಷ್ಕ್ರಿಯಗೊಂಡು ಜಠರದ ಮ್ಯೂಕಸ್ ಪದರ ಸುಟ್ಟು ಸಣ್ಣ ಸಣ್ಣ ತರಿಚಿಕೆಗಳುಂಟಾಗುತ್ತವೆ. ಇದನ್ನು ಜಠರೂತುರಿ (ಗ್ಯಾಸ್ಟ್ರೈಟಿಸ್) ಎನ್ನಲಾಗುತ್ತದೆ. ಕ್ರಮೇಣ ಅಂತಿಮವಾಗಿ ಜಠರದ ಹುಣ್ಣಾಗುತ್ತದೆ(ಗ್ಯಾಸ್ಟ್ರಿಕ್ ಅಲ್ಸರ್).

ಹೈಡ್ರೋಕ್ಲೋರಿಕ್ ಆಮ್ಲ ಸಹಜ ಪ್ರಮಾಣದಲ್ಲಿದ್ದರೂ, ಮ್ಯೂಕಸ್ ಪ್ರಮಾಣ ಕಡಿಮೆಯಾದಲ್ಲಿ ಹೈಡ್ರೋಕ್ಲೋರಿಕ್ ಆಮ್ಲ ಜಠರವನ್ನು ಸುಟ್ಟು ಅದನ್ನು ಜಖಂಗೊಳಿಸಿ ಗ್ಯಾಸ್ಟ್ರಿಕ್ ಸಮಸ್ಯೆ ಯುಂಟಾಗುತ್ತದೆ. ಪೆಪ್ಸಿನ್ ಪ್ರಮಾಣ ಅಧಿಕವಾದಾಗ ಮ್ಯೂಕಸ್‌ ಅನ್ನು ನಿಷ್ಕ್ರಿಯಗೊಳಿಸಿ ಮ್ಯೂಕಸ್ ಪ್ರಮಾಣವನ್ನು ಕಡಿಮೆಗೊಳಿಸಿ ಗ್ಯಾಸ್ಟ್ರಿಕ್ ತೊಂದರೆಗೆ ಕಾರಣವಾಗುತ್ತದೆ. ಇದು ಆಮ್ಲ ಮತ್ತು ಪೆಪ್ಸಿನ್‌ಗಳ ವ್ಯತ್ಯಾಸಗಳಿಂದುಂಟಾಗುವ ಕಾಯಿಲೆಯಾದುದರಿಂದ ಇದನ್ನು ಆಮ್ಲ ಮತ್ತು ಪೆಪ್ಸಿನ್‌ಗಳ ಕಾಯಿಲೆ
(ಆಸಿಡ್ ಸೆಪ್ಟಿಕ್ ಡಿಸೀಸ್)ಎನ್ನಲಾಗುತ್ತದೆ. ಆಮ್ಲ ಅಧಿಕವಾಗಿರುವ ಜಠರರಸ(ಡುಯೋಡಿನಂ) ಸಣ್ಣ ಕರುಳನ್ನು ಪ್ರವೇಶಿಸಿದಾಗ ಆ ಭಾಗವನ್ನು ಸುಟ್ಟು ಡುಯೋಡಿನಂ (ಡುಯೋಡಿನಂ ಅಲ್ಸರ್) ಉಂಟಾಗುತ್ತದೆ.

ರೋಗ ಲಕ್ಷಣಗಳು: ಬಾಯಿಯಲ್ಲಿ ಜೊಲ್ಲುರಸ ಹೆಚ್ಚಾಗಿ ಉತ್ಪತ್ತಿಯಾಗುವುದು, ಎದೆ ಉರಿ, ಎದೆನೋವು, ಮೇಲು ಭಾಗದ ಹೊಟ್ಟೆನೋವು, ಹಸಿವು ಕಡಿಮೆಯಾಗುವುದು, ತೇಗು, ಹುಳಿ ತೇಗು ಇವು ಪ್ರಮುಖ ರೋಗತೊಂದರೆಗಳು. ಈ ತೊಂದರೆಗಳು ಹಸಿವಾದಾಗ ಖಾಲಿಹೊಟ್ಟೆಯಲ್ಲಿ ಹೆಚ್ಚಾಗುತ್ತವೆ. ಜಠರದಲ್ಲಿ ತೊಂದರೆಗಳಿದ್ದಲ್ಲಿ ಆಹಾರ ಸೇವಿಸಿದ ನಂತರ ತೊಂದರೆಗಳು ಹೆಚ್ಚಾಗುತ್ತವೆ. ಡುಯೋಡಿನಂ ಭಾಗದಲ್ಲಿ ಹುಣ್ಣಿದ್ದಲ್ಲಿ ಆಹಾರ ಸೇವಿಸಿದ ತಕ್ಷಣ ನೋವು ಕಡಿಮೆಯಾಗಿ ಒಂದರಿಂದ ಎರಡು ಗಂಟೆಯ ನಂತರ ನೋವು ಹೆಚ್ಚಾಗುತ್ತದೆ.

ಯೀಸೋಫೇಗಸ್‌ನಲ್ಲಿ ಹುಣ್ಣುಗಳಿದ್ದಲ್ಲಿ ಆಹಾರ ನುಂಗುವಾಗಲೇ ಎದೆ ನೋವು, ಎದೆ ಉರಿ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಹುಣ್ಣಿದ್ದಲ್ಲಿ ರಕ್ತವಾಂತಿಯೂ ಆಗಬಹುದು. ಕೆಲವರಿಗೆ ಮಲಗಿದ ಸ್ಥಿತಿಯಲ್ಲಿ ತೇಗು ಮತ್ತು ಎದೆಉರಿ ಹೆಚ್ಚಾಗಬಹುದು. ಖಾರ, ಸಾಂಬಾರ ಆಹಾರಪದಾರ್ಥಗಳ ಮಸಾಲೆ, ಮಾಂಸಾಹಾರ, ಕರಿದ ಆಹಾರಪದಾರ್ಥಗಳು ಇತ್ಯಾದಿಗಳನ್ನು ಸೇವಿಸಿದಾಗ ರೋಗ ತೊಂದರೆಗಳು ಅಧಿಕವಾಗಬಹುದು.

ಕಾರಣಗಳು: ಅತಿಯಾದ ಹೈಡ್ರೋಕ್ಲೋರಿಕ್ ಆಮ್ಲ ಏರಿಕೆ ಮತ್ತು ಪೆಪ್ಸಿನ್ ಕಾರ್ಯ ಚುರುಕು ಇದಕ್ಕೆ ಕಾರಣ. ಧೂಮಪಾನ, ಮದ್ಯಪಾನ, ಸಮಯಕ್ಕೆ ಸರಿಯಾಗಿ ಆಹಾರ ಸೇವಿಸದಿರುವಿಕೆ, ಅತಿಯಾದ ಮಾನಸಿಕ ಒತ್ತಡ, ಅತಿಯಾದ ಕಾಫಿ, ಟೀ ಸೇವನೆ,
ಖಾರವಾದ ಸಾಂಬಾರಯುಕ್ತ ಮಸಾಲೆ ಪದಾರ್ಥಗಳು ಮತ್ತು ಮಾಂಸಾಹಾರ ಸೇವನೆ ಈ ಕಾಯಿಲೆ ಯನ್ನು ಉತ್ತೇಜಿಸುತ್ತವೆ. ಕೆಲವರಲ್ಲಿ ಹೆಲಿಕೊ ಬ್ಯಾಕ್ಟಿರೊ ಪೈಲೋರಸ್(ಎಚ್ ಪೈಲೊರಿ) ರೋಗಾಣುವಿನ ಜಠರದ ಸೋಂಕು ಕಾರಣ ಎನ್ನಲಾಗಿದೆ.

ಸ್ಥೂಲಕಾಯ ಇರುವವರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ನೋವುನಿರೋಧಕ ಇತ್ಯಾದಿ ಔಷಧಗಳ ಸೇವನೆಯೂ ಸಹ ಈ ರೋಗ ವನ್ನು ಉತ್ತೇಜಿಸುತ್ತದೆ. ಖಾಲಿ ಹೊಟ್ಟೆಯಲ್ಲಿ ಇನ್ನಿತರ ಔಷಧಗಳನ್ನು ಸೇವಿಸುತ್ತಿರುವವರಲ್ಲಿ ಹಾಗೂ ಬಸಿರಿಯರಲ್ಲೂ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

ಜಠರ-ಯೀಸೊಫೇಗಸ್‌ನ ಹಿಮ್ಮು ಚಿಮ್ಮಿಕೆ (ಗ್ಯಾಸ್ಟ್ರೊ ಯೂಸೋಫೇಜಿಯಲ್ ರಿಫ್ಲೆಕ್ಸ್ ಡಿಸೀಸ್): ಜಠರ ಮತ್ತು ಯೀಸೋಫೇಗಸ್ ಸಂಧಿಸುವ ಸ್ಥಳದಲ್ಲಿರುವ ರಂಧ್ರಬಂಧಕ ಸ್ನಾಯು (ಸ್ಪಿಂಕ್ಟರ್) ನಿಶ್ಚೇತನತೆಯಾಗುವುದರಿಂದ ಜಠರದ
ತುಂಬಿಕೆಗಳು ಯೀಸೋ-ಗಸ್‌ಗೆ ಹಿಮ್ಮುಖವಾಗಿ ಚಿಮ್ಮಿ, ಅಲ್ಲಿ ಆಮ್ಲ ಸುಟ್ಟು ಗಾಯಗಳಾಗುತ್ತವೆ. ತೇಗು, ಎದೆ ಉರಿ, ಮಲಗಿದ ಸ್ಥಿತಿಯಲ್ಲಿ ತೊಂದರೆಗಳು ಹೆಚ್ಚಾಗುವುದು. ಸ್ಥೂಲಕಾಯ ಇರುವವರಲ್ಲಿ ಇದರ ಸಮಸ್ಯೆ ಅಧಿಕ. ಈ ಕಾಯಿಲೆ ಇರುವವರು ಆಹಾರ ಸೇವಿಸಿದ ತಕ್ಷಣ ಮಲಗಬಾರದು.

ಉದಾಸೀನ ಸಲ್ಲದು: ಹೃದಯಾಘಾತ, ಹೃದ್ರೋಗ, ಜಠರದ ಕ್ಯಾನ್ಸರ್, ಹಯಟಸ್ ಹರ್ನಿಯಾ, ಮೂತ್ರಜನಕಾಂಗದ ವಿಫಲತೆ, ಗಾಲ್ ಬ್ಲಾಡರ್ ಮತ್ತು ಈಲಿ ಕಾಯಿಲೆಗಳು, ಅಪೆಂಡಿಕ್ಸ್ ಯೂತುರಿ ಇತ್ಯಾದಿ ಕಾಯಿಲೆಗಳು ಈ ಗ್ಯಾಸ್ಟ್ರಿಕ್ ತೊಂದರೆಗಳಂತೆಯೇ ವ್ಯಕ್ತವಾಗುವುದರಿಂದ ಈ ತೊಂದರೆ ಇರುವವರಲ್ಲಿ ಈ ಗಂಭೀರ ಸ್ವರೂಪದ ಕಾಯಿಲೆಗಳಿಗಾಗಿ ಶೋಧಿಸಬೇಕು. ಇಲ್ಲದಿದ್ದಲ್ಲಿ
ಗ್ಯಾಸ್ಟ್ರಿಕ್ ತೊಂದರೆಯೆಂದು ಉದಾಸೀನ ಮಾಡಿದಲ್ಲಿ ಈ ಗಂಭೀರ ಸ್ವರೂಪದ ಕಾಯಿಲೆಗಳು ಕ್ರಮೇಣ ಉಗ್ರರೂಪ ತಾಳಿ ಮಾರಣಾಂತಿಕವಾಗಬಹುದಾದರಿಂದ ಗ್ಯಾಸ್ಟ್ರಿಕ್ ತೊಂದರೆಗಳನ್ನು ಉದಾಸೀನ ಮಾಡಬಾರದು.

ದೃಢೀಕರಣ: ಇನ್ನಿತರ ಕಾಯಿಲೆಗಳಿಂದುಂಟಾಗುವ ಹೊಟ್ಟೆನೋವು, ಹೃದಯದ ತೊಂದರೆಗಳು, ಗಾಲ್ ಬ್ಲಾಡರ್ ತೊಂದರೆ ಗಳೂ ಸಹ ಗ್ಯಾಸ್ಟ್ರಿಕ್ ತೊಂದರೆಗಳಂತೆಯೇ ವ್ಯಕ್ತವಾಗುವುದರಿಂದ ಗ್ಯಾಸ್ಟ್ರಿಕ್ ತೊಂದರೆಯೆಂದು ನಿಖರಪಡಿಸಿ ಕೊಳ್ಳುವ ಮುನ್ನ ಈ ಕಾಯಿಲೆಗಳಿಲ್ಲ ಎಂಬುದನ್ನು ದೃಢೀಪಡಿಸಿಕೊಳ್ಳುವುದು ಅತ್ಯವಶ್ಯಕ. ಕೆಲವು ಹೃದಯಾಘಾತದಲ್ಲೂ ಸಹ ಗ್ಯಾಸ್ಟ್ರಿಕ್‌ ನಂತಹ ಸಮಸ್ಯೆಗಳು ಉಂಟಾಗುವುದರಿಂದ ಉದಾಸೀನ ಮಾಡಿದರೆ ಹೃದಯಾಘಾತ ಉಲ್ಬಣಗೊಳ್ಳುವ ಸಾಧ್ಯತೆಗಳಿರುತ್ತವೆ.

ರೋಗತೊಂದರೆಗಳ ಮಾಹಿತಿಯಿಂದಲೇ ಈ ಕಾಯಿಲೆಯನ್ನು ದೃಢಪಡಿಸಿಕೊಳ್ಳಬಹುದಾದರೂ ಮೇಲಿನ ಜೀರ್ಣಾಂಗ ದರ್ಶನ (ಅಪ್ಪರ್ ಗ್ಯಾಸ್ಟ್ರೋ ಎಂಡಾಸ್ಕೋಪಿ) ಪರೀಕ್ಷೆಯಿಂದ ಜಠರವನ್ನು ವೀಕ್ಷಿಸಿ ತರಿಚಿಕೆ, ಗಾಯಗಳು, ಹುಣ್ಣುಗಳು ಇರುವುದನ್ನು ದೃಢೀಕರಿಸಿಕೊಳ್ಳಲಾಗುತ್ತದೆ. ಜಠರರಸದಲ್ಲಿ ಎಚ್ ಪೈಲರೋಸ್ ರೋಗಾಣು ಇರುವುದನ್ನು ಜಠರದ ಬಯಾಪ್ಸಿ ತೆಗೆದು ನಿಖರ ಪಡಿಸಿಕೊಳ್ಳಲಾಗುತ್ತದೆ. ಈ ಪರೀಕ್ಷೆಯನ್ನು ಖಾಲಿಹೊಟ್ಟೆಯಲ್ಲಿ ಮಾಡಲಾಗುತ್ತದೆ. ಉದರ ಭಾಗವನ್ನು ಸ್ಕ್ಯಾನ್ ಮಾಡುವು ದರಿಂದ ಇನ್ನಿತರ ಕಾಯಿಲೆಗಳನ್ನು ದೃಢಪಡಿಸಿಕೊಳ್ಳಬಹುದು. ಹೃದಯದ ಕಾಯಿಲೆಗಳನ್ನು ದೃಢಪಡಿಸಿಕೊಳ್ಳಲು ಇಸಿಜಿ, ಇಕೋ ಕಾರ್ಡಿಯೋಗ್ರಾಂ ಪರೀಕ್ಷೆಗಳು ಅತ್ಯಗತ್ಯ.

ಕ್ಯಾನ್ಸರ್ ಹುಣ್ಣು: ಆಮ್ಲ – ಪೆಪ್ಟಿಕ್ ಕಾಯಿಲೆಯಲ್ಲಿ ಯೀಸೋಫೇಗಸ್, ಜಠರ ಮತ್ತು ಡುಯೋಡಿನಂಗಳಲ್ಲುಂಟಾಗುವ ಹುಣ್ಣುಗಳು ಬಹು ಅಪರೂಪವಾಗಿ ಕ್ಯಾನ್ಸರ್ ಹುಣ್ಣುಗಳಾಗಿ ಪರಿವರ್ತನೆ ಹೊಂದುತ್ತವೆ. ಈ ಹುಣ್ಣುಗಳಿರುವವರು ಅವು
ಮಾಯುವವರೆವಿಗೂ ಉದಾಸೀನ ಮಾಡದೆ ಚಿಕಿತ್ಸೆ ತೆಗೆದುಕೊಳ್ಳಬೇಕು. ಆಗಿಂದಾಗ್ಗೆ ಎಂಡಾಸ್ಕೋಪಿಯಿಂದ ಹುಣ್ಣುಗಳನ್ನು ಕ್ಯಾನ್ಸರ್ ಪರಿವರ್ತನೆಗಾಗಿ ವೀಕ್ಷಿಸುತ್ತಿರಬೇಕು. ಅನುಮಾನವಿದ್ದಲ್ಲಿ ಬಯಾಪ್ಸಿ ತೆಗೆದು ದೃಢೀಕರಿಸಿಕೊಳ್ಳಬೇಕು.

ಅವಘಡಗಳು: ಗ್ಯಾಸ್ಟ್ರಿಕ್ ಸಮಸ್ಯೆ ಸಾಮಾನ್ಯವಾಗಿ ಗಂಭೀರ ಸ್ವರೂಪದ ಸಮಸ್ಯೆಗಳನ್ನು ಉಂಟುಮಾಡುವುದಿಲ್ಲ. ಆದರೆ ಕೆಲವರಲ್ಲಿ ಹುಣ್ಣುಗಳು ಂಟಾಗಿ ಅದರಿಂದ ರಕ್ತಸ್ರಾವವಾಗಿ ಮಲ ಕಪ್ಪುಬಣ್ಣದ್ದಾಗಿರುತ್ತದೆ. ಮಲದಲ್ಲಿ ರಕ್ತ ಇರುವುದನ್ನು
ಪರೀಕ್ಷೆಯಿಂದ ದೃಢೀಕರಿಸಿಕೊಳ್ಳಬಹುದು. ಆಮ್ಲ ಪೆಪ್ಟಿಕ್ ಹುಣ್ಣುಗಳು ಅಪರೂಪವಾಗಿ ಕ್ಯಾನ್ಸರ್ ಹುಣ್ಣುಗಳಾಗಿ ಪರಿವರ್ತಿತ ವಾಗಬಹುದು.

ಡುಯೋಡಿನಂ ಹುಣ್ಣಿನ ಆಸುಪಾಸಿನಲ್ಲಿ ನಾರು ಉತ್ಪತ್ತಿಯಾಗಿ ಪೈಲೋರಸ್ ರಂಧ್ರದ (ಪೈಲೋರಸ್ ಟಿನೋಸಿಸ್) ಕಿರಿಕೆ ಉಂಟಾಗಿ ಜಠರದಲ್ಲಿ ಜೀರ್ಣವಾದ ಆಹಾರ ಸಣ್ಣ ಕರುಳಿಗೆ ರವಾನೆಯಾಗಲು ಅಡಚಣೆಯುಂಟಾಗುತ್ತದೆ. ಆಹಾರ ಸೇವಿಸಿದ ೧-೨ಗಂಟೆಗಳ ನಂತರ ವಾಂತಿಯಾಗುತ್ತದೆ.

ಚಿಕಿತ್ಸೆ: ಇದು ಜೀವನಶೈಲಿಯ ಅವ್ಯವಸ್ಥೆಯ ಕಾಯಿಲೆಯಾದುದರಿಂದ ನಿಯಮಿತ ಮಿತ ಖಾರ-ಮಸಾಲೆಯುಕ್ತ ಆಹಾರ ಸೇವನೆ, ಕಾಫಿ-ಟೀ ವರ್ಜನೆ, ಅತಿಯಾದ ಮಾನಸಿಕ ಒತ್ತಡವಿಲ್ಲದ, ದುಶ್ಚಟ ರಹಿತ ಬದುಕು, ದೈನಂದಿನ ವ್ಯಾಯಾಮ ಅತ್ಯಗತ್ಯ. ದಿನಕ್ಕೆ ಕನಿಷ್ಠ ಒಂದೂವರೆಯಿಂದ ಎರಡು ಲೀಟರ್ ನೀರು ಸೇವಿಸಬೇಕು. ಇನ್ನಿತರ ಔಷಧಗಳನ್ನು ಸೇವಿಸುತ್ತಿದ್ದಲ್ಲಿ ಆಹಾರದ ನಂತರ ಸೇವಿಸಬೇಕು.

ಹೈಡ್ರೋಕ್ಲೋರಿಕ್ ಆಮ್ಲದ ಉತ್ಪತ್ತಿಯನ್ನು ಕಡಿಮೆ ಮಾಡುವ ಔಷಧಗಳು(ಒಮಿಪ್ರೊಸೊಲ್, ಪೆಂಟಾಪ್ರೋಸಲ್ ಇತ್ಯಾದಿ ಪ್ರೊಟಾನ್ ಪಂಪ್ ನಿಷ್ಕ್ರಿಯಕಗಳು) ಹಾಗೂ ಆಮ್ಲವನ್ನು ನಿಷ್ಕ್ರಿಯಗೊಳಿಸುವ ಔಷಧಗಳು(ಆಂಟಾಸಿಡ್) ಗ್ಯಾಸ್ಟ್ರಿಕ್
ತೊಂದರೆಗಳ ಸಮಸ್ಯೆಯನ್ನು ತಾತ್ಕಾಲಿಕವಾಗಿ ಉಪಶಮನ ಮಾಡುತ್ತವೆ. ಕೆಲವರು ದೀರ್ಘಕಾಲ ಈ ಔಷಧಗಳನ್ನು ಸೇವಿಸ ಬೇಕಾಗಬಹುದು. ಎಚ್ ಪೈಲೋರಿ ಸೋಂಕಾಣು ಇದ್ದಲ್ಲಿ ಅದನ್ನು ವಿಮುಕ್ತಗೊಳಿಸುವ ಔಷಧಗಳು ಅತ್ಯವಶ್ಯಕ.

ಪೈಲೋರಸ್ ಕಿರಿಕೆಯಿದ್ದಲ್ಲಿ ಹುಣ್ಣುಗಳು ಮಾಯದಿದ್ದಲ್ಲಿ ಶಸ್ತ್ರಕ್ರಿಯಾ ಚಿಕಿತ್ಸೆ ಅನಿವಾರ್ಯವಾಗುತ್ತದೆ. ಜಠರ-ಯೂಸೋ ಫೇಗಸ್ ಹಿಮ್ಮುಚಿಮ್ಮಿಕೆ ಔಷಧಗಳಿಂದ ನಿಯಂತ್ರಣಕ್ಕೆ ಬಾರದಿದ್ದಲ್ಲಿ ಶಸ್ತ್ರಕ್ರಿಯೆಯಿಂದ ನ್ಯೂನತೆಗಳನ್ನು ಸರಿಪಡಿಸ ಲಾಗುತ್ತದೆ. ಗ್ಯಾಸ್ಟ್ರಿಕ್ ಸಮಸ್ಯೆ ಆಧುನಿಕ ಸ್ಪರ್ಧಾತ್ಮಕ ಬದುಕಿನ ರೋಗ ಕೊಡುಗೆಯಾಗಿದೆ. ಕಾಲಾನುಕಾಲಕ್ಕೆ ನಿಯಮಿತ ಅವಧಿಯಲ್ಲಿ ಆಹಾರ ಸೇವಿಸದಿರುವುದು, ಜಂಕ್ ಆಹಾರಗಳ ಸೇವನೆ, ಅತಿಯಾದ ಮಾಂಸಾಹಾರ, ಸಂತೃಪ್ತಿಯ ಬದುಕಿಲ್ಲ ದಿರುವುದು, ಮದ್ಯಪಾನ ಮತ್ತು ಧೂಮಪಾನಗಳಿಗೆ ದಾಸರಾಗಿರುವುದು ಇವುಗಳೇ ಗ್ಯಾಸ್ಟ್ರಿಕ್ ತೊಂದರೆ ವ್ಯಾಪಕವಾಗುತ್ತಿರುವು ದಕ್ಕೆ ಪ್ರಮುಖ ಕಾರಣಗಳು.

ಇವುಗಳ ಮುಕ್ತ ಜೀವನಶೈಲಿಯಿಂದ ಮಾತ್ರ ಗ್ಯಾಸ್ಟ್ರಿಕ್ ತೊಂದರೆಯಿಂದ ಪಾರಾಗಲು ಸಾಧ್ಯ. ವಚನಕಾರರು ಬಹಳ ಹಿಂದೆಯೇ ಈ ಬಗ್ಗೆ ಎಚ್ಚರಿಸಿರುವುದು ಗಮನಾರ್ಹ.

ಹಸಿವಿಲ್ಲದುಣಬೇಡ
ಹಸಿದು ಮತ್ತಿರಬೇಡ
ಬಿಸಿಗೂಡಿ ತಂಗಳುಣಬೇಡ
ವೈದ್ಯನ ಬೆಸೆಸಲೇಬೇಡ-ಸರ್ವಜ್ಞ

Read E-Paper click here