Friday, 20th September 2024

ಡಯಾಬಿಟಿಸ್‌ನ ಅಂಧತ್ವದಿಂದ ಪಾರಾಗಿ

ವೈದ್ಯ ವೈವಿಧ್ಯ

ಅಕ್ಷಿಪಟಲದ ಕಾಯಿಲೆಗಳಾದ ಡಯಾಬಿಟಿಕ್ ರೆಟಿನೋಪತಿ, ಈಲ್ಸ ಕಾಯಿಲೆ, ಸೆಂಟ್ರಲ್ ಸೀರಸ್ ರೆಟಿನೋಪತಿ, ಅಕ್ಷಿಪಟಲದ ಅಭಿಧಮನಿಯ ಮುಚ್ಚುವಿಕೆ. ಈ ಉಪಕರಣದ ಅನುಕೂಲ – ಶಸ್ತ್ರಕ್ರಿಯೆ ಇಲ್ಲ, ರೋಗಿಯು ಆಸ್ಪತ್ರೆಗೆ ಸೇರುವ ಅಗತ್ಯವಿಲ್ಲ. ಅರಿವಳಿಕೆ ಕೊಡದಿದ್ದರೂ ನೋವು, ವೇದನೆ ಇಲ್ಲ.

ಇತ್ತೀಚಿನ ದಿನಗಳಲ್ಲಿ ಡಯಾಬಿಟಿಸ್ ಕಾಯಿಲೆ ಬಹಳ ಜಾಸ್ತಿಯಾಗುತ್ತಿದೆ. ಅದರಲ್ಲಿಯೂ ಸಣ್ಣ ವಯಸ್ಸಿನವರಲ್ಲಿ ಹೆಚ್ಚಾಗಿ ಕಂಡು ಬರುತ್ತಿರುವುದು ಆತಂಕಕಾರಿ ಬೆಳವಣಿಗೆ. ನಾವು ಎಂಬಿಬಿಎಸ್ ಕಲಿಯುವಾಗ ಅಂದರೆ ೧೯೭೦ರ ದಶಕದಲ್ಲಿ ಡಯಾ ಬಿಟಿಸ್ ೬೦ – ೬೫ ವರ್ಷಗಳ ನಂತರ ಕಾಣಿಸಿಕೊಳ್ಳುತ್ತದೆ ಎಂದು ಕಲಿತಿದ್ದೆವು. ಈಗೀಗ ಬದಲಾದ ವಾತಾವರಣ,
ಆಹಾರ ಪದ್ಧತಿ, ಈಗಿನ ಒತ್ತಡದ ಜೀವನ – ಇವೆಲ್ಲವುಗಳಿಂದ ನಾವು ೨೫ – ೩೦ ವರ್ಷದ ಯುವಕರಲ್ಲಿಯೂ ಡಯಾಬಿಟಿಸ್ ಕಾಯಿಲೆ ನೋಡುತ್ತಿದ್ದೇವೆ.

ಡಯಾಬಿಟಿಸ್ ಕಾಯಿಲೆ ತನ್ನ ಪ್ರಭಾವ ಬೀರಿ ಹೆಚ್ಚು ಹಾನಿ ಉಂಟು ಮಾಡುವ ಅಂಗಗಳಲ್ಲಿ ಕಣ್ಣು ಮುಂಚೂಣಿಯಲ್ಲಿದೆ. ಆದರೆ ದೌರ್ಭಾಗ್ಯದ ಸಂಗತಿ ಎಂದರೆ ಈ ಬಗೆಗೆ ಡಯಾಬಿಟಿಸ್ ರೋಗಿಗಳಿಗೆ ಹೆಚ್ಚು ಅರಿವಿಲ್ಲ. ಅವರಿಗೆ ಸೂಕ್ತ ಮಾರ್ಗ ದರ್ಶನ ಮಾಡಿ ಆಗಾಗ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಸಲಹೆ ಕೊಡಬೇಕಾದ ಕುಟುಂಬ ವೈದ್ಯರು ಹಾಗೂ ಫಿಸಿಷಿಯನ್‌ಗಳು ಸಹಿತ ಎಷ್ಟೋ ಬಾರಿ ನಿರ್ಲಕ್ಷ್ಯ ವಹಿಸಿದ ನಿದರ್ಶನಗಳು ಬಹಳಷ್ಟಿವೆ.

ಪರಿಣಾಮ ಡಯಾಬಿಟಿಸ್‌ನಿಂದ ಕಣ್ಣಿನ ಅಕ್ಷಿಪಟಲಕ್ಕೆ ಬಹಳ ಹಾನಿ ಆದ ನಂತರ ಅಂತಹ ರೋಗಿಗಳು ಕಣ್ಣಿನ ವೈದ್ಯರಲ್ಲಿ ಪರೀಕ್ಷೆಗೆ ಬರುತ್ತಾರೆ. ಆಗ ಅವರ ರೋಗ ಬಹಳ ಮುಂದುವರಿದ ಹಂತದಲ್ಲಿದ್ದು, ಚಿಕಿತ್ಸೆ ಮಾಡಿದರೂ ಹೆಚ್ಚು ಪರಿಣಾಮ ಕಂಡು ಬಾರದ ಸ್ಥಿತಿಯಲ್ಲಿರುತ್ತಾರೆ. ಹಾಗಾಗಿ ೩-೪ ವರ್ಷಕ್ಕಿಂತಲೂ ಹೆಚ್ಚು ಸಮಯ ಡಯಾಬಿಟಿಸ್ ಕಾಯಿಲೆ ಇರುವವರು
ನಿಯಮಿತವಾಗಿ ಕನಿಷ್ಠ ಒಂದು ವರ್ಷಕ್ಕೊಮ್ಮೆಯಾದರೂ ಸೂಕ್ತ ಕಣ್ಣಿನ ವೈದ್ಯರಿಂದ ಪರೀಕ್ಷಿಸಿಕೊಳ್ಳುವುದು ಒಳ್ಳೆಯದು.

ಡಯಾಬಿಟಿಕ್ ರೆಟಿನೋಪತಿ ಅಥವಾ ಮಧುಮೇಹ ಅಕ್ಷಿಪಟಲ ಬೇನೆ: ಡಯಾಬಿಟಿಸ್ ಕಾಯಿಲೆ ಕಣ್ಣಿನ ಮೇಲೆ ಹಲವು ರೀತಿ ಯಲ್ಲಿ ಪರಿಣಾಮ ಬೀರುತ್ತದೆ. ಆದರೆ ಬಹಳ ಮುಖ್ಯವಾದದ್ದು ಡಯಾಬಿಟಿಕ್ ರೆಟಿನೋಪತಿ ಅಥವಾ ಮಧುಮೇಹ ಅಕ್ಷಿಪಟಲ ಬೇನೆ. ಡಯಾಬಿಟಿಸ್ ರೋಗವಿರುವ ಶೇಕಡಾ ೨೫ – ೩೦ ವ್ಯಕ್ತಿಗಳಲ್ಲಿ ಈ ಅಕ್ಷಿಪಟಲ ಬೇನೆ ಕಾಣಿಸಿಕೊಳ್ಳುತ್ತದೆ.
ರೆಟಿನೋಪತಿ ವಯಸ್ಸಾದ ರೋಗಿಗಳಲ್ಲಿ ಮಾತ್ರವಲ್ಲದೆ ಈಗೀಗ ಚಿಕ್ಕ ವಯಸ್ಸಿನಿಂದ ಡಯಾಬಿಟಿಸ್ ಹೊಂದಿರುವವರಲ್ಲಿಯೂ ಕಾಣಿಸಿಕೊಳ್ಳುತ್ತಿದೆ.

ನಮ್ಮ ದೇಶದಲ್ಲಿ ಕಣ್ಣಿನ ಪೊರೆ,ಗ್ಲೊಕೋಮ ಕಾಯಿಲೆಗಳನ್ನು ಹೊರತುಪಡಿಸಿದರೆ ಅಂದತ್ವಕ್ಕೆ ಹೆಚ್ಚಿನ ಕಾರಣ ಈ ಡಯಾಬಿಟಿಕ್ ರೆಟಿನೋಪತಿ. ವಿಶೇಷವಾಗಿ ಇದು ಎರಡು ಕಣ್ಣನ್ನೂ ಏಕಕಾಲದಲ್ಲಿ ಆವರಿಸುವುದರಿಂದ ಎಷ್ಟು ಬೇಗ ಈ ಕಾಯಿಲೆ ಪತ್ತೆ ಹಚ್ಚಿ ಚಿಕಿತ್ಸೆಗೆ ತೊಡಗುತ್ತೇವೆಯೋ ಅಷ್ಟು ಒಳ್ಳೆಯದು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಡಯಾಬಿಟಿಸ್ ಕಾಯಿಲೆಯ ತೀವ್ರತೆಗೂ ಮತ್ತು ಅದರಿಂದ ಉಂಟಾಗುವ ರೆಟಿನೋಪತಿಗೂ ಸಂಬಂಧವಿಲ್ಲದೆ ಇರುವುದು. ಅಲ್ಲದೆ ವಿವಿಧ ಚಿಕಿತ್ಸಾ ಕ್ರಮಗಳಿಂದ ರೋಗವು ಸಂಪೂರ್ಣ ಹತೋಟಿಯಲ್ಲಿದ್ದರೂ ಕೂಡ ರೆಟಿನೋಪತಿ ಕಾಣಿಸಿಕೊಳ್ಳಬಹುದು.

ರೆಟಿನೋಪತಿಯ ಮುಖ್ಯ ರೋಗಲಕ್ಷಣವೆಂದರೆ ಕಣ್ಣು ನಿಧಾನವಾಗಿ ಮಂಜಾಗುವುದು ಅಥವಾ ದೃಷ್ಟಿ ಕಡಿಮೆಯಾಗುವುದು. ಹೆಚ್ಚಿನ ರೋಗಿಗಳು ಈ ರೀತಿಯ ದೃಷ್ಟಿಯ ಪತನಕ್ಕೆ ದೃಷ್ಟಿ ದೋಷದ ಏರುಪೇರಿರಬಹುದು ಅಥವಾ ಕಣ್ಣಿನ ಪೊರೆ
ಬರುತ್ತಿರಬಹುದು ಎಂದು ಆರಂಭದಲ್ಲಿ ನಿರ್ಲಕ್ಷ್ಯ ಮಾಡುತ್ತಾರೆ. ಹಾಗಾಗಿ ಈ ಕಾಯಿಲೆ ಇರುವವರು ಕಾಯಿಲೆ ಆರಂಭವಾದ ೩ -೪ ವರ್ಷಗಳ ನಂತರ ನಿಯಮಿತವಾಗಿ ಸೂಕ್ತ ನೇತ್ರ ವೈದ್ಯರಲ್ಲಿ ವಿವರವಾಗಿ ಕಣ್ಣು ಪರೀಕ್ಷೆಗೆ ಒಳಗಾಗಬೇಕು.

ಅಲ್ಲದೆ ತಮ್ಮ ಕನ್ನಡಕ ಪರೀಕ್ಷೆಯನ್ನು ಸೂಕ್ತ ನೇತ್ರ ವೈದ್ಯರಲ್ಲಿಯೇ ಮಾಡಿಸಿಕೊಳ್ಳಬೇಕು. ಕನ್ನಡಕದ ಅಂಗಡಿ ಅಥವಾ ಆಪ್ರೋಮೆಟ್ರಿಗಳಲ್ಲಿ ಮಾಡಿಸಿಕೊಳ್ಳಬಾರದು. ಹಾಗೆ ಮಾಡಿದಾಗ ರೆಟಿನೋಪತಿಯನ್ನು ಆರಂಭದಲ್ಲಿಯೇ ಪತ್ತೆ ಹಚ್ಚಲು ಸಾಧ್ಯ. ಆಗ ಚಿಕಿತ್ಸೆಯೂ ಸುಲಭ. ಈ ರೋಗವು ಮುಖ್ಯವಾಗಿ ಆಕ್ಷಿಪಟಲದ ಸಣ್ಣ ರಕ್ತನಾಳಗಳಿಗೆ ತೊಂದರೆಯನ್ನು
ಉಂಟುಮಾಡುತ್ತದೆ. ಈ ಕಾಯಿಲೆ ಕಾಣಿಸಿಕೊಳ್ಳುವ ಹಲವು ಹಂತಗಳಿವೆ.

೧. ಆರಂಭದ ಡಯಾಬಿಟಿಕ್ ರೆಟಿನೋಪತಿ : ಆರಂಭದ ಹಂತದಲ್ಲಿ ಅಕ್ಷಿಪಟಲದ ಸಣ್ಣ ರಕ್ತನಾಳಗಳಲ್ಲಿ ರಕ್ತಸ್ರಾವ ಕಾಣಿಸಿ ಕೊಳ್ಳುತ್ತದೆ. ಮೇಲ್ನೋಟಕ್ಕೆ ಯಾವ ರೋಗ ಲಕ್ಷಣವನ್ನೂ ಉಂಟು ಮಾಡುವುದಿಲ್ಲ. ಕಣ್ಣಿನ ದೃಷ್ಟಿ ಕುಂಠಿತಗೊಳ್ಳುವ ಸಂಭವ ಕಡಿಮೆ. ಹಾಗಾಗಿ ರೋಗಿಗೆ ಈ ಹಂತದಲ್ಲಿ ಕಾಯಿಲೆಯ ಅರಿವು ಇರುವುದಿಲ್ಲ. ನೇತ್ರತಜ್ಞನು ವಿವರವಾಗಿ ಕಣ್ಣಿನ ಅಕ್ಷಿಪಟಲ ಪರೀಕ್ಷಿಸಿದಾಗ ಹಲವು ಲಕ್ಷಣಗಳು ಗೋಚರಿಸುತ್ತವೆ. ಅಕ್ಷಿಪಟಲದಲ್ಲಿ ರಕ್ತಸ್ರಾವದ ಸಣ್ಣ ಸಣ್ಣ ತುಣುಕುಗಳು ಕಾಣಿಸಿಕೊಳ್ಳು ತ್ತವೆ. ಹೆಚ್ಚಿನ ಸಂದರ್ಭ ಇವು ಅಕ್ಷಿಪಟಲದ ಆಳದಲ್ಲಿರುತ್ತವೆ.

ಜತೆಯಲ್ಲಿ ಹಳದಿ ಬಣ್ಣದ ಗಟ್ಟಿ ಒಸರುಗಳು (Hard exudates) ಕಾಣಿಸಿಕೊಳ್ಳುತ್ತವೆ. ಜೊತೆಯಲ್ಲಿ ಅಕ್ಷಿಪಟಲದ ಹಲವು ಭಾಗಗಳಲ್ಲಿ ಬೀಗಿದ ಅಂಶ ಕಾಣಿಸಿಕೊಳ್ಳುತ್ತದೆ. ಈ ಬೀಗುವಿಕೆಯಿಂದ ಅಕ್ಷಿಪಟಲ ಒಂದು ರೀತಿಯಲ್ಲಿ ದಪ್ಪಗಾಗುತ್ತದೆ.

೨. ಡಯಾಬಿಟಿಕ್ ಮ್ಯಾಕ್ಯುಲೋಪತಿ : ನಾವು ನೇರವಾಗಿ ಯಾವುದೇ ವಸ್ತುವನ್ನು ನೋಡುವಾಗ ಅಕ್ಷಿಪಟಲದ ಮಧ್ಯ ಭಾಗವನ್ನು ಹೆಚ್ಚು ಉಪಯೋಗಿಸುತ್ತೇವೆ. ಇದು ಆರೋಗ್ಯವಾಗಿದ್ದರೆ ನಮ್ಮ ದೃಷ್ಟಿ ಸ್ಪಷ್ಟವಾಗಿರುತ್ತದೆ. ಅಕ್ಷಿಪಟಲದ ಮಧ್ಯಭಾಗದ ದೃಷ್ಟಿಯ ಕೇಂದ್ರಕ್ಕೆ ಮ್ಯಾಕ್ಯುಲ ಎನ್ನುತ್ತೇವೆ. ಅಕ್ಷಿಪಟಲಕ್ಕೆ ಹಾನಿ ಮಾಡುವಾಗ ಡಯಾಬಿಟಿಸ್ ಈ ಮಧ್ಯ ಭಾಗಕ್ಕೂ ಗಮನಾರ್ಹವಾಗಿ ಹಾನಿ ಉಂಟು ಮಾಡುತ್ತದೆ.

ಇದನ್ನು ನಾವು ಮ್ಯಾಕುಲೋಪತಿ ಎನ್ನುತ್ತೇವೆ. ದೃಷ್ಟಿಗೆ ಬಹಳ ಮುಖ್ಯವಾದ ಮಧ್ಯಭಾಗವೇ ತೊಂದರೆಗೆ ಒಳಗಾಗುವು ದರಿಂದ ಬಹಳಷ್ಟು ದೃಷ್ಟಿ ಪತನವಾಗುತ್ತದೆ. ಅಂತಹ ವ್ಯಕ್ತಿ ಕಣ್ಣು ಬಹಳಷ್ಟು ಕಾಣುವುದಿಲ್ಲ ಎಂದು ಶೀಘ್ರವಾಗಿ ಕಣ್ಣಿನ
ವೈದ್ಯರಲ್ಲಿ ಬರುತ್ತಾನೆ. ಮುಖ್ಯವಾಗಿ ಸಣ್ಣ ಸಣ್ಣ ಅಕ್ಷರಗಳನ್ನು ಓದಲಾಗುವುದಿಲ್ಲ. ರಸ್ತೆಯ ಟ್ರಾಫಿಕ್ ಸಿಗ್ನಲ್ ಗಳು ಸ್ಪಷ್ಟವಾಗಿ ಕಾಣುವುದಿಲ್ಲ – ಇವು ಆರಂಭಿಕ ತೊಂದರೆಗಳು.

ಮೊದಲನೆ ಹಂತದ ರೆಟಿನೋಪತಿಯಲ್ಲಿ ವಿವರಿಸಿದ ಎಲ್ಲ ಲಕ್ಷಣಗಳೂ ಅಕ್ಷಿಪಟಲದ ಮಧ್ಯಭಾಗ ಮ್ಯಾಕ್ಯುಲದಲ್ಲಿ ಕಾಣಿಸಿ ಕೊಳ್ಳುತ್ತವೆ. ಅಂದರೆ ಸಣ್ಣ ಸಣ್ಣ ರಕ್ತಸ್ರಾವಗಳು, ಹಳದಿಯ ಒಸರುಗಳು – ಇವೆಲ್ಲವೂ ಅಕ್ಷಿಪಟಲದ ಮಧ್ಯ ಭಾಗದಲ್ಲಿ ಕಾಣಿಸಿಕೊಂಡು ಶೀಘ್ರ ದೃಷ್ಟಿಯ ಪತನಕ್ಕೆ ಕಾರಣವಾಗುತ್ತವೆ.

೩. ಪ್ರಿ ಪ್ರೊಲಿ-ರೇಟಿವ್ ಡಯಾಬಿಟಿಕ್ ರೆಟಿನೋಪತಿ : ಇದು ಮುಂದಿನ ಹಂತ. ಅಕ್ಷಿಪಟಲದ ಒಳಗಿನ ಕೆಲವು ಪದರಗಳಲ್ಲಿ ಆಗುವ ಬದಲಾವಣೆಗಳಿಂದ ಕಾಟನ್ ವುಲ್ ಸ್ಪಾಟ್ಸ ಎಂಬ ದೊಡ್ಡ ಪ್ರಮಾಣದ ಹಳದಿ ಬಣ್ಣದ ಒಸರುಗಳು ಅಕ್ಷಿಪಟಲದ ಹಲವೆಡೆ ಕಾಣಿಸಿಕೊಳ್ಳುತ್ತವೆ. ಇದರ ಮುಖ್ಯ ಕಾರಣ ಎಂದರೆ ಕಾಯಿಲೆಯ ತೀವ್ರತೆಯ ಕಾರಣದಿಂದ ಅಕ್ಷಿಪಟಲಕ್ಕೆ ತೀರಾ ಅಗತ್ಯವಾಗಿ ಬೇಕಾದ ಆಮ್ಲಜನಕ ಪೂರೈಕೆಯಾಗದಿರುವುದು. ಪರಿಣಾಮ ಎಂದರೆ ಹೊಸ ರಕ್ತನಾಳಗಳು ನಿಧಾನವಾಗಿ ಹುಟ್ಟಿಕೊಳ್ಳಲು ಆರಂಭವಾಗುತ್ತವೆ.

ಇದು ಅಸಹಜವಾದ ಬೆಳವಣಿಗೆ, ಆರೋಗ್ಯವಂತ ಅಕ್ಷಿಪಟಲಕ್ಕೆ ಪೂರಕವಲ್ಲ. ಜೊತೆಯಲ್ಲಿ ಮಲಿನ ರಕ್ತ ಸಾಗಿಸುವ ಮಲಿನ ರಕ್ತನಾಳಗಳು ಅಥವಾ ಅಭಿದಮನಿಗಳು (Veins) ನಿಧಾನವಾಗಿ ದೊಡ್ಡದಾಗುತ್ತವೆ. ಅವು ಬೇರೆ ಬೇರೆ ಆಕೃತಿ ತಳೆದು ಅಸಹಜ ಬೆಳವಣಿಗೆ ಹೊಂದಲಾರಂಭಿಸುತ್ತವೆ. ಶುದ್ಧ ರಕ್ತನಾಳಗಳು (Arteries) ಸಣ್ಣದಾಗುತ್ತಾ ಬರುತ್ತವೆ. ಈ ಎಲ್ಲಾ ಪರಿವರ್ತನೆಗಳಾಗುತ್ತಿರುವಾಗ ದೊಡ್ಡ ದೊಡ್ಡ ರಕ್ತಸ್ರಾವದ ತುಣುಕುಗಳು ಬಹಳಷ್ಟು ಅಕ್ಷಿಪಟಲದ ತುಂಬಾ ಕಾಣಿಸಿಕೊಳ್ಳಲಾ ರಂಭಿಸುತ್ತವೆ.

ಪ್ರೊಲಿ-ರೇಟಿವ್ ಡಯಾಬಿಟಿಕ್ ರೆಟಿನೋಪತಿ : ಕಾಯಿಲೆಯ ಬಹಳಷ್ಟು ಮುಂದುವರಿದ ಹಂತ. ಈ ಹಂತ ಉಂಟಾಗಲು ಮುಖ್ಯ ಕಾರಣ ಕಾಯಿಲೆಯ ತೀವ್ರತೆಯಿಂದ ಅಕ್ಷಿಪಟಲಕ್ಕೆ ಆಮ್ಲಜನಕ ಪೂರೈಕೆ ಬಹಳಷ್ಟು ಕಡಿಮೆಯಾಗುವುದು.
ನೇತ್ರ ವೈದ್ಯ ಅಕ್ಷಿಪಟಲವನ್ನು ಪರೀಕ್ಷಿಸುವಾಗ ಗೊತ್ತಾಗುವ ಲಕ್ಷಣಗಳು – ಕಣ್ಣಿನ ದೃಷ್ಟಿ ನರವಾದ ಆಪ್ಟಿಕ್ ನರದ ಭಾಗವಾದ ಆಪ್ಟಿಕ್ ಡಿ ಮೇಲೆ ಹೊಸ ಹೊಸ ಅಸಹಜ ರಕ್ತನಾಳಗಳು ಕಾಣಿಸಿಕೊಳ್ಳುತ್ತವೆ.

ಕೆಲವೊಮ್ಮೆ ಈ ಹೊಸ ರಕ್ತನಾಳಗಳು ಆಪ್ಟಿಕ್ ಡಿ ಅಲ್ಲದೆ ಅಕ್ಷಿಪಟಲದ ಬೇರೆ ಬೇರೆ ಭಾಗಗಳಲ್ಲಿ ಸಹ ಬಹಳ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳಬಹುದು. ಈ ರೀತಿಯ ಅಸಹಜ ಹೊಸ ರಕ್ತನಾಳ ಕಾಣಿಸಿಕೊಂಡಷ್ಟು ಕಾಯಿಲೆ ತೀವ್ರವಾಗಿದೆ
ಎಂದರ್ಥ. ಇದನ್ನು ಆದಷ್ಟು ಬೇಗ ಚಿಕಿತ್ಸೆ ಮಾಡಬೇಕು. ಕಣ್ಣಿನ ಮಧುಮೇಹದ ಮುಂದುವರಿದ ಹಂತ ಹಿಂದಿನ ಹಂತಗಳಲ್ಲಿಯೇ ಸೂಕ್ತ ಚಿಕಿತ್ಸೆ ಮಾಡಿದರೆ ಈ ಹಂತವನ್ನು ರೋಗಿಯು ತಲಪುವುದು ಅಪರೂಪ.

ಇದರ ಮುಖ್ಯ ರೋಗಲಕ್ಷಣ ಎಂದರೆ ದೃಷ್ಟಿಯ ಕ್ಷೇತ್ರದಲ್ಲಿ ಅಲ್ಲಲ್ಲಿ ವಿಚಿತ್ರ ರೀತಿಯ ಆಕೃತಿ ಕಾಣಿಸಿಕೊಳ್ಳಬಹುದು. ಮತ್ತು
ಒಮ್ಮಲೇ ಒಂದು ಕಣ್ಣು ದಿಡೀರ್ ಎಂದು ಕಾಣಿಸುವುದೇ ಇಲ್ಲ. ಅಂದರೆ ಆ ಕಣ್ಣಿನಲ್ಲಿ ದಿಡೀರ್ ಅಂಧತ್ವ ಉಂಟಾಗಿದೆ ಎಂದರ್ಥ. ಮುಖ್ಯ ಕಾರಣ ಎಂದರೆ ಕಣ್ಣಿನೊಳಗಿನ ಲೋಳೆಯ ರೀತಿಯ ವಿಟ್ರಿಯಸ್ ನಲ್ಲಿ ರಕ್ತಸ್ರಾವವಾಗಿ ಬೆಳಕು ಒಳ ಹೋಗಿ ನಮಗೆ
ದೃಷ್ಟಿ ಕೊಡುವ ಪಾರದರ್ಶಕ ಮಾಧ್ಯಮಗಳು ಅಪಾರದರ್ಶಕವಾಗಿರುವುದು. ಈ ಹಂತದಲ್ಲಿ ಕೆಲವೊಮ್ಮೆ ಅಕ್ಷಿಪಟಲ ಸರಿಯು ವಿಕೆ (Tractional Retinal detachment) ಉಂಟಾಗುತ್ತದೆ.

ಐರಿಸ್ ಅಥವಾ ತಾರಕೆಯ ಮೇಲೆ ಹೊಸ ರಕ್ತನಾಳಗಳು ಹುಟ್ಟಿಕೊಂಡು ನಿಯೋವ್ಯಾಸ್ಕುಲಾರ್ ಗ್ಲೊಕೊಮಾ ಸಹಿತ
ಕಾಣಿಸಿಕೊಳ್ಳಬಹುದು. ಒಟ್ಟಿನಲ್ಲಿ ಇದು ಗಂಭೀರವಾದ ಮುಂದುವರಿದ ಹಂತ, ಚಿಕಿತ್ಸೆ ಮಾಡುವುದು ಕಷ್ಟ, ದೃಷ್ಟಿ ಬರುವ ಸಾಧ್ಯತೆಯೂ ಬಹಳ ಕಡಿಮೆ.

ರೆಟಿನೋಪತಿಯ ಚಿಕಿತ್ಸೆ : ಡಯಾಬಿಟಿಸ್ ಹತೋಟಿಯಲ್ಲಿಡುವುದು, ಆಹಾರದಲ್ಲಿ ಕೊಬ್ಬಿನ ಮತ್ತು ಎಣ್ಣೆಯ ಅಂಶವನ್ನು
ಬಹಳ ಕಡಿಮೆ ಮಾಡುವುದು – ಇವು ಸಾಮಾನ್ಯ ಕ್ರಮಗಳಾದರೆ ನಿರ್ದಿಷ್ಟ ಯಶಸ್ವಿ ಚಿಕಿತ್ಸೆ ಎಂದರೆ ಲೇಸರ್ ಚಿಕಿತ್ಸೆ. ಲೇಸರ್ ಉಪಕರಣದಿಂದ ಲೇಸರ್ ಕಿರಣಗಳನ್ನು ಅಕ್ಷಿಪಟಲಕ್ಕೆ ಹಾಯಿಸುವುದು. ಪರಿಣಾಮ ಎಂದರೆ ಅಕ್ಷಿಪಟಲದಲ್ಲಿ ಹೊಸ ರಕ್ತನಾಳವನ್ನು ಮೆಚ್ಚಿಕೊಳ್ಳುವಂತೆ ಮಾಡುವುದು ಮತ್ತು ರಕ್ತಸುರಿತವನ್ನು ಕಡಿಮೆ ಮಾಡುವುದು.

ರೆಟಿನೋ ಪತಿಯ ಆರಂಭಿಕ ಹಂತಗಳಾದ ಬ್ಯಾಕ್‌ಗ್ರೌಂಡ್ ಡಯಾಬಿಟಿಕ್ ರೆಟಿನೋಪತಿ ಮತ್ತು ಪ್ರಿಪ್ರೊಲಿ-ರೈಟಿವ್ ಡಯಾಬಿಟಿಕ್ ರೆಟಿನೋಪತಿ ಈ ಹಂತಗಳಲ್ಲಿ ಕಾಯಿಲೆ ಗುರುತಿಸಿ ಚಿಕಿತ್ಸೆ ಕೊಟ್ಟರೆ ಅದು ಹೆಚ್ಚು ಪರಿಣಾಮಕಾರಿ. ಇತ್ತೀಚಿನ ಪರಿಣಾಮಕಾರಿ ಮತ್ತೊಂದು ಚಿಕಿತ್ಸೆ – ಕಣ್ಣಿನೊಳಗೇ ಕೊಡುವ ಇಂಜೆಕ್ಷನ್ (Intravitreal injection).

ಲೇಸರ್ ಉಪಕರಣ

ಲೇಸರ್ ಎಂದರೆ – Light Amplification by Stimulated Emission of Radiation ಅಂದರೆ ಇದರ ಭಾವಾರ್ಥ- ಪ್ರಚೋದಿತ ವಿಕಿರಣತೆಯ ಬಿಡುಗಡೆಯಿಂದ ಬೆಳಕಿನ ಹೆಚ್ಚಳ. ಸ್ಥೂಲವಾಗಿ ಹೇಳುವುದಾದರೆ ಇದು ಭಾರೀ ಪ್ರಮಾಣದ ಶಕ್ತಿಯನ್ನು ಒಳಗೊಂಡ ಬೆಳಕಿನ ಮೂಲ (ಆಕರ). ಈ ಲೇಸರ್‌ನಲ್ಲಿ ಹಲವು ಬಗೆಯ ಅನಿಲಗಳು ಉಪಯೋ ಗಿಸಲ್ಪಡುತ್ತವೆ. ಆದರೆ ನೇತ್ರ ಚಿಕಿತ್ಸೆಗೆ ಉಪಯೋಗಿಸುವ ಲೇಸರ್ ಉಪಕರಣದಲ್ಲಿ ಆರ್ಗಾನ್ ಅನಿಲವು ಹೆಚ್ಚಾಗಿ ಬಳಕೆ ಯಾಗುತ್ತದೆ. ಇದಕ್ಕೆ ಕಾರಣ ಎಂದರೆ ಅಕ್ಷಿಪಟಲದ ರೋಗಗಳಿಗೆ ಬೇಕಾಗುವ ತರಂಗಾಂತರದ ಕಿರಣಗಳನ್ನು ಇದು ಒದಗಿಸುತ್ತದೆ. ಆರ್ಗಾನ್ ಅಲ್ಲದೆ ಇನ್ನೊಂದು ಜನಪ್ರಿಯ ಲೇಸರ್‌  ಎಂದರೆ ಡೈವೋಡ್ ಲೇಸರ್.

ಮುಖ್ಯ ಉಪಯೋಗಗಳು
ಅಕ್ಷಿಪಟಲದ ಕಾಯಿಲೆಗಳಾದ ಡಯಾಬಿಟಿಕ್ ರೆಟಿನೋಪತಿ, ಈಲ್ಸ ಕಾಯಿಲೆ, ಸೆಂಟ್ರಲ್ ಸೀರಸ್ ರೆಟಿನೋಪತಿ , ಅಕ್ಷಿಪಟಲದ ಅಭಿಧಮನಿಯ ಮುಚ್ಚುವಿಕೆ. ಈ ಉಪಕರಣದ ಅನುಕೂಲ – ಶಸ್ತ್ರಕ್ರಿಯೆ ಇಲ್ಲ, ರೋಗಿಯು ಆಸ್ಪತ್ರೆಗೆ ಸೇರುವ
ಅಗತ್ಯವಿಲ್ಲ. ಅರಿವಳಿಕೆ ಕೊಡದಿದ್ದರೂ ನೋವು, ವೇದನೆ ಇಲ್ಲ. ಅಕ್ಷಿಪಟಲದ ಹೊರ ಭಾಗದಲ್ಲಿರುವ ಆಮ್ಲಜನಕ ಕಡಿಮೆ ಇರುವ ಭಾಗಗಳನ್ನು ಸುಟ್ಟು ಲೇಸರ್ ಕಿರಣಗಳು ಮಧ್ಯ ಭಾಗದ ಅಕ್ಷಿಪಟಲಕ್ಕೆ ಸರಿಯಾದ ರಕ್ತವು ಪೂರೈಕೆ ಆಗುವಂತೆ
ನೋಡಿಕೊಳ್ಳುತ್ತದೆ. ಇದರ ಅರ್ಥ ಎಂದರೆ ಅಕ್ಷಿಪಟಲದ ಆರೋಗ್ಯವನ್ನು ಸಾಧ್ಯವಾದಷ್ಟು ಕಾಪಾಡಿಕೊಂಡು ಹೆಚ್ಚಿನ ದೃಷ್ಟಿ ಉಳಿಸುವುದು.

ಕೊನೆಯ ನುಡಿ: ಡಯಾಬಿಟಿಸ್ ರೋಗಿಗಳು ನಿಯಮಿತವಾಗಿ ಕಣ್ಣು ಪರೀಕ್ಷೆ ಮಾಡಿಸಬೇಕು, ಸಣ್ಣ ವ್ಯತ್ಯಾಸವನ್ನೂ ನಿರ್ಲಕ್ಷಿಸದೇ ಸೂಕ್ತ ನೇತ್ರ ವೈದ್ಯರ ಸಲಹೆ ತೆಗೆದುಕೊಳ್ಳಬೇಕು.