ಸ್ವಾಸ್ಥ್ಯ ಸಂಪದ
yoganna55@gmail.com
ಮನುಷ್ಯ ಸೃಷ್ಟಿಯ ವಿಕಾಸ ಕ್ರಿಯೆಯ ಒಂದು ಹಂತದಲ್ಲಿ ಉದ್ಭವವಾದ ಜೀವಿಯಾದುದರಿಂದ ಪರಿಸರಕ್ಕೂ ಸೃಷ್ಟಿಗೂ ಅವಿನಾಭಾವ ಸಂಬಂಧವಿದೆ. ಸೃಷ್ಟಿಯಲ್ಲಿ ಜರುಗುವ ಎಲ್ಲ ಕ್ರಿಯೆಗಳೂ ಕಂಪ್ಯೂಟರೀಕೃತ ಪೂರ್ವನಿಗದಿತ ಕ್ರಿಯೆಗಳಂತೆ ಜರುಗುತ್ತವೆ. ಮನುಷ್ಯ ಕೈಗೊಳ್ಳುವ ಕಾರ್ಯಗಳ ಪರಿಣಾಮ ದಿಂದಾಗಿ ಸೃಷ್ಟಿಯ ಪೂರ್ವನಿಗದಿತ ಕಾರ್ಯಚಕ್ರಗಳು ಅದಲು ಬದಲಾಗುತ್ತವೆ. ಇದರಿಂದ ಮಾನವನ ಆರೋಗ್ಯದ ಮೇಲೂ ಪರಿಣಾಮಗಳುಂಟಾಗುತ್ತವೆ.
ಋತುಮಾನಗಳು
ಋತುಮಾನಗಳು ಪರಿಸರದಲ್ಲಿ ಕಾಲಾನುಕಾಲಕ್ಕೆ ಜರುಗುವ ಸೃಷ್ಟಿಯ ಉಳಿವಿಗೆ ಅಗತ್ಯ ವಿರುವ ಪೂರ್ವನಿಗದಿತವಾದ ವಿಸ್ಮಯ ಕಾರಿ ಕ್ರಿಯೆಗಳಾಗಿದ್ದು, ಆ ಸಂದರ್ಭಗಳಲ್ಲಾಗುವ ಪರಿಸರದಲ್ಲಿನ ಬದಲಾವಣೆಗಳು ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಮನುಷ್ಯನ ಆರೋಗ್ಯ ನಿಯಂತ್ರಣ ಒಂದು ಸಂಕೀರ್ಣ ವ್ಯವಸ್ಥೆಯಾಗಿದ್ದು, ಋತುಮಾನ ಗಳು ಮತ್ತು ಅವುಗಳಲ್ಲಾ ಗುವ ಏರುಪೇರುಗಳೂ ಅನಾರೋಗ್ಯಕ್ಕೆ ನಾಂದಿಯಾಗಬಹುದು.
ಪರಿಸರದಲ್ಲಿ ಜರಗುವ ಬೇಸಿಗೆಕಾಲ, ಮಳೆಗಾಲ ಮತ್ತು ಚಳಿಗಾಲಗಳು ಪೂರ್ವನಿಗದಿತ ಕ್ರಿಯೆಗಳಾಗಿದ್ದು, ಆಯಾಯ ಕಾಲಕ್ಕೆ ಕರಾರುವಾಕ್ಕಾಗಿ ಅವು ಕಂಪ್ಯೂಟರೀಕೃತ ಕ್ರಿಯೆ ಗಳಂತೆ ಜರುಗುತ್ತಿರುತ್ತವೆ. ಪ್ರತಿಯೊಂದು ಋತುಮಾನದ ಕಾಲದಲ್ಲಿ ಜರುಗುವ ನಿರ್ದಿಷ್ಟ ಬದಲಾವಣೆಗಳು ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಭೂಮಿ, ವಾಯು ಮಂಡಲ, ಜಲಗೋಳ, ಜೀವಗೋಳ ಮತ್ತು ಬಾಹ್ಯಾಕಾಶ ಇವು ಋತುಮಾನಗಳಲ್ಲಾಗುವ ಬದಲಾವಣೆಗಳನ್ನು ನಿಯಂತ್ರಿಸುತ್ತವೆ.
ಪರಿಸರದ ಓಝೋನ್, ಉಷ್ಣತೆ, ಗಾಳಿಯ ತೇವಾಂಶ, ಒತ್ತಡ, ಮಿಥೇನ್, ಕಾರ್ಬನ್ ಡೈ ಆಕ್ಸೈಡ್ನ ಪ್ರಮಾಣ ಇತ್ಯಾದಿಗಳು ಪರಿಸರದ ಸಮತೋಲನವನ್ನು ಏರುಪೇರುಗೊಳಿಸಿ ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಈ ಅಂಶಗಳ ಏರುಪೇರುಗಳಿಂದಲೆ ಋತುಮಾನಗಳುಂಟಾಗುವುದು. ಪ್ರತಿಯೊಂದು ಋತುಮಾನದಲ್ಲಾಗುವ ಸಹಜ ಬದಲಾವಣೆಗಳು ಕೆಲವು ನಿರ್ದಿಷ್ಟ ಕಾಯಿಲೆಗಳಿಗೆ ನಾಂದಿಯಾಗಬಹುದು ಅಥವಾ ಹಾಲಿ ಇರುವ ಕಾಯಿಲೆಗಳನ್ನು ಉಲ್ಬಣಗೊಳಿಸಬಹುದು.
ವಸಂತಕಾಲದಲ್ಲಿ ಅರಳುವ ಹೂವುಗಳ ಪರಾಗಗಳು ಅಸ್ತಮಾವನ್ನು ಪ್ರಚೋದಿಸಬಹುದು. ಋತುಮಾನಗಳಲ್ಲಿ ಕಾಡುವ ರೋಗಗಳ ಬಗ್ಗೆ ಅರಿವು ಮೂಡಿಸಿ ಅವುಗಳಿಂದ ಪಾರಾಗುವ ವಿಧಿ ವಿಧಾನಗಳ ಬಗ್ಗೆ ಜಾಗೃತಿ ಮೂಡಿಸುವ ಲೇಖನವಿದು.
ಹಸಿರು ಮನೆಯ ಪರಿಣಾಮ (ಗ್ರೀನ್ ಹೌಸ್ ಇಫೆಕ್ಟ್) ಸೂರ್ಯ ಮತ್ತು ಭೂಮಿಯ ನಡುವೆ ಓಝೋನ್ ಪದರವಿದ್ದು, ಇದು ಸೂರ್ಯನ ಅಪಾಯಕಾರಿ ಕಿರಣಗಳು ಭೂಮಿಗೆ ಬಾರದಂತೆ ತಡೆಗಟ್ಟುವುದಲ್ಲದೆ ಪರಿಸರದ ಉಷ್ಣತೆಯನ್ನು ನಿಯಂತ್ರಿಸು ವಲ್ಲಿಯೂ ಪ್ರಧಾನ ಪಾತ್ರ ವಹಿಸುತ್ತದೆ. ಸೂರ್ಯನಿಂದ ಹೊರ ಬರುವ ಶಾಖ ಓಝೋನ್ ಪದರದಿಂದ ಕೆಳಮುಖವಾಗಿ ಹಾದು ಗಾಳಿಯಲ್ಲಿರುವ ನೀರಿನ ಆವಿ (ಮೋಡಗಳು) ಕಾರ್ಬನ್ಡೈಆಕ್ಸೈಡ್, ಮಿಥೇನ್ಗಳ ಮೂಲಕ ಹಾದು ಭೂಮಿ ತಲುಪಿ, ಭೂಮಿ ಬಿಸಿಯಾಗಿ ಅಲ್ಲಿಂದ ಪ್ರತಿ-ಲನಗೊಂಡ ಶಾಖ ವಾಪಸ್ಸು ಸೂರ್ಯನೆಡೆಗೆ ಹೋಗುವುದನ್ನು ಈ ಅನಿಲಗಳು ತಡೆದು ಪರಿಸರದ ಉಷ್ಣತೆಯನ್ನು ಏರಿಸುತ್ತವೆಯಾದುದರಿಂದ ಈ ಅನಿಲಗಳ ಪ್ರಮಾಣ ಪರಿಸರದ ಉಷ್ಣತೆಯನ್ನು ನಿಯಂತ್ರಿಸುತ್ತವೆ.
ಈ ಅನಿಲಗಳನ್ನು ‘ಹಸಿರು ಮನೆಯ ಅನಿಲ’ಗಳೆಂದು, ಈ ಪರಿಣಾಮವನ್ನು ‘ಹಸಿರು ಮನೆಯ ಪರಿಣಾಮ’ವೆಂದು ಕರೆಯ ಲಾಗುತ್ತದೆ. ಹಸಿರು ಮನೆಯ ಅನಿಲಗಳು ಪರಿಸರದಲ್ಲಿಲ್ಲದಿದ್ದಲ್ಲಿ ಭೂಮಿಯ ಸಹಜ ಶಾಖ 15 ಸೆಂಟಿಗ್ರೇಡ್ಗೆ ಬದಲಾಗಿ 15
ಸೆಂಟಿಗ್ರೇಡ್ ಆಗುತ್ತದೆ. ಈ ಅನಿಲಗಳ ಪ್ರಮಾಣ ಕಡಿಮೆಯಾದಲ್ಲಿ ಚಳಿಗಾಲವೂ, ಜಾಸ್ತಿಯಾದಲ್ಲಿ ಬೇಸಿಗೆ ಕಾಲವೂ ಉಂಟಾಗು ತ್ತವೆ. ಮಾನವನ ಕ್ರಿಯೆಗಳಿಂದಾಗಿ ಉದಾ: ಪೆಟ್ರೋಲಿಯಂ ಮತ್ತಿತರ ವಸ್ತುಗಳನ್ನು ಉರಿಸುವಿಕೆ, ಕಾರ್ಖಾನೆಗಳಿಂದ ಹೊರ ಬರುವ ಅನಿಲಗಳು ಮತ್ತು ಗಿಡಮರಗಳನ್ನು ಕಡಿಯುವಿಕೆ ಇತ್ಯಾದಿಗಳಿಂದ ಹಸಿರು ಮನೆಯ ಅನಿಲಗಳ ಪ್ರಮಾಣ ಹೆಚ್ಚಾಗಿ ಭೂಮಿಯ ತಾಪಮಾನ ಹೆಚ್ಚಾಗುತ್ತಿದ್ದು, ಇದನ್ನು ‘ಭೂಮಿಯ ಶಾಖ ಏರಿಕೆ’ (ಗ್ಲೋಬಲ್ ವಾರ್ಮಿಂಗ್) ಎನ್ನಲಾ ಗುತ್ತದೆ.
ಇದು ಪೂರ್ವ ನಿಗದಿತ ಋತುಮಾನಗಳನ್ನು ಏರುಪೇರುಗೊಳಿಸಿ ಮಾನವನ ಆರೋಗ್ಯದ ಮೇಲೆ ಮಾರಕ ಪರಿಣಾಮವನ್ನುಂಟು
ಮಾಡುತ್ತದೆ. ಪ್ರಾಣಿಜೀವಿಗಳ ಸಂಖ್ಯೆ ಮತ್ತು ಸಸ್ಯಗಳಿಗಳ ಸಂಖ್ಯೆಗೂ ನಿರ್ದಿಷ್ಟ ಅನುಪಾತ ಅತ್ಯವಶ್ಯಕ. ಪ್ರಾಣಿಗಳಿಂದ ಹೊರ ಸೂಸುವ ವಿಷಮಕಾರಿ ಕಾರ್ಬನ್ಡೈಆಕ್ಸೈಡ್ ಅನ್ನು ಸಸ್ಯಗಳು ಹೀರಿಕೊಂಡು ಮನುಷ್ಯನಿಗೆ ಅವಶ್ಯಕವಾದ ಆಮ್ಲಜನಕ ವನ್ನು ನೀಡುವುದರಿಂದ ಸಸ್ಯ ಮತ್ತು ಪ್ರಾಣಿಗಳ ಸಂಖ್ಯೆಗಳ ನಿರ್ದಿಷ್ಟ ಅನುಪಾತವೂ ಅತ್ಯವಶ್ಯಕ. ಪ್ರಾಣಿಗಳ ಸಂಖ್ಯೆ ಅತಿಯಾಗಿ ಸಸ್ಯಗಳ ಸಂಖ್ಯೆ ಕಡಿಮೆಯಾದಲ್ಲಿ ಜೀವಿ ಜಗತ್ತಿಗೆ ಮಾರಕವಾಗುತ್ತದೆ. ನಿರ್ದಿಷ್ಟ ಭೂ ಪ್ರದೇಶದ ವಿಸ್ತೀರ್ಣದಲ್ಲಿ ನಿರ್ದಿಷ್ಟ ಸಸ್ಯಗಳು ಮತ್ತು ಪ್ರಾಣಿಗಳ ಸಂಖ್ಯೆಗಳನ್ನು ಕಾಪಾಡುವುದು ಅತ್ಯವಶ್ಯಕ.
ಇದಲ್ಲದೆ ಮನುಷ್ಯಜನ್ಯ ಕಾರ್ಯಗಳಿಂದಾಗಿ (ಪೆಟ್ರೋಲಿಯಂ ಸುಡುವಿಕೆ, ವಸ್ತುಗಳ ಸುಡುವಿಕೆ ಇನ್ನಿತರ ಮೂಲಗಳಿಂದ ಬೆಂಕಿ
ಉತ್ಪತ್ತಿ) ಪರಿಸರದಲ್ಲಿ ಅತಿಯಾದ ಕಾರ್ಬನ್ ಡೈ ಆಕ್ಸೈಡ್ ಮತ್ತಿತರ ವಿಷಕಾರಿ ಅನಿಲಗಳ ಪ್ರಮಾಣ ಹೆಚ್ಚಾಗಿ ಋತುಮಾನ ಗಳಲ್ಲಿ ಯೂ ವ್ಯತ್ಯಾಸಗಳುಂಟಾಗುತ್ತವೆ.
ಬೇಸಿಗೆ ಕಾಲದ ಕಾಯಿಲೆಗಳು
ಅತಿಯಾದ ಹಸಿರುಮನೆಯ ಪರಿಣಾಮದಿಂದಾಗಿ ಬೇಸಿಗೆ ಕಾಲದಲ್ಲಿ ಪರಿಸರದ ತಾಪಮಾನ ಹೆಚ್ಚಾಗುವುದರಿಂದ ಬ್ಯಾಕ್ಟೀರಿ ಯಾಗಳ ವೃದ್ಧಿ ಹೆಚ್ಚಾಗಿ ಕಾಲರಾ, ಭೇದಿ, ಟೈಫಾಯಿಡ್, ಮಲೇರಿಯಾ ಇತ್ಯಾದಿ ಸೋಂಕುರೋಗಗಳು ಹೆಚ್ಚಾಗುತ್ತವೆ. ಅತಿಯಾದ ತಾಪಮಾನದಿಂದಾಗಿ ಸುಸ್ತು, ಸಂಕಟ, ಅತಿಯಾದ ಬಾಯಾರಿಕೆ, ಬೆವರುವಿಕೆ, ಚರ್ಮ ಕಪ್ಪು ಬಣ್ಣಕ್ಕೆ ತಿರುಗುವಿಕೆ ಇತ್ಯಾದಿ ತೊಂದರೆಗಳು ಉಂಟಾಗುತ್ತವೆ.
ಅತೀವ ಉಷ್ಣತೆಗೆ ದೇಹವನ್ನು ಒಡ್ಡಿದಾಗ ‘ತಾಪಮಾನದ ಆಘಾತ’ (ಹೀಟ್ ಸ್ಟ್ರೋಕ್) ಉಂಟಾಗಿ ಪ್ರಜ್ಞಾಹೀನತೆಯಾಗಿ,
ಮಾರಣಾಂತಿಕವಾಗಬಹುದು. ಬೇಸಿಗೆ ಕಾಲದಲ್ಲಿ ತೆಳುವಾದ, ಬಿಳಿಯ, ಸಡಿಲವಾದ ಉಡುಪುಗಳನ್ನು ಧರಿಸಬೇಕು. ಹಣ್ಣು
ಹಂಪಲುಗಳನ್ನು ಯಥೇಚ್ಛವಾಗಿ ಸೇವಿಸಬೇಕು. ಹವಾ ನಿಯಂತ್ರಣ ವ್ಯವಸ್ಥೆ ಇದ್ದಲ್ಲಿ ಕ್ಷೇಮಕರ. ಪಾನೀಯಗಳನ್ನು ಹೆಚ್ಚಾಗಿ ಸೇವಿಸಬೇಕು, ಅತಿಯಾದ ಕ್ಯಾಲೋರಿ ಆಹಾರವನ್ನು ಸೇವಿಸಬಾರದು.
ಉದಾ: ಮಾಂಸಾಹಾರ. ಉಷ್ಣತೆ ಹೃದಯದ ಶುದ್ಧ ರಕ್ತನಾಳಗಳನ್ನು ಹಿಗ್ಗಿಸುವುದರಿಂದ ಹೃದ್ರೋಗಿಗಳಿಗೆ ಬೇಸಿಗೆಕಾಲ ಹಿತಕಾರಿ. ಬೇಸಿಗೆ ಕಾಲದಲ್ಲಿ ವಾಯುಮಾಲಿನ್ಯ ಹೆಚ್ಚಾಗುವುದರಿಂದ ವಾಯುಮಾಲಿನ್ಯಾಧಾರಿತ ಕಾಯಿಲೆಗಳು ಉಲ್ಬಣಿಸುತ್ತವೆ.
ಮಳೆಗಾಲದ ಕಾಯಿಲೆಗಳು
ಮಳೆಗಾಲದಲ್ಲಿ ನೀರು ನಿಲ್ಲುವಿಕೆಯಿಂದಾಗಿ ಸೊಳ್ಳೆಗಳ ಸಂತಾನೋತ್ಪತ್ತಿ ಹೆಚ್ಚಾಗಿ ಸೊಳ್ಳೆಗಳಿಂದ ಹರಡುವ ಡೆಂಗ್ಯೂ, ಚಿಕೂನ್ ಗುನ್ಯ, ಮಲೇರಿಯಾ ಮುಂತಾದ ಕಾಯಿಲೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಮಲಮೂತ್ರಗಳು ಮಳೆ ನೀರಿನಲ್ಲಿ
ಮಿಶ್ರಿತವಾಗಿ ದೇಹವನ್ನು ತಲುಪುವ ಸಾಧ್ಯತೆ ಇರುವುದರಿಂದ ಕರುಳಿನ ಸೋಂಕಿನ ಭೇದಿ, ಟೈಫಾಯಿಡ್, ಕಾಲರಾ, ಲೆಪ್ರೋ ಸ್ಪೈರೋಸಿಸ್, ಜೀರ್ಣಾಂಗದ ಸೋಂಕು, ಜಾಂಡೀಸ್, ವೈರಸ್ ಜ್ವರ ಇತ್ಯಾದಿ ಸೋಂಕು ರೋಗಗಳು ಮಳೆಗಾಲದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ.
ಲೆಪ್ರೋ ಸ್ಪೈರೋಸಿಸ್ ಮತ್ತು ಡೆಂಗ್ಯೂ ಮಾರಣಾಂತಿಕವಾಗಬಹುದು. ಹೊಲ ಗದ್ದೆಗಳಿಗೆ ಸಿಂಪಡಿಸುವ ಕ್ರಿಮಿ ಕೀಟನಾಶಕಗಳು ಮಳೆಯಿಂದಾಗಿ ಕುಡಿಯುವ ನೀರಿನೊಡನೆ ಮಿಶ್ರಿತವಾಗಿ ವಿಷಮತೆಯನ್ನುಂಟು ಮಾಡಬಹುದಾಗಿರುವುದರಿಂದ ಮಳೆಗಾಲ ದಲ್ಲಿ ಶುದ್ಧೀಕರಿಸಿದ ನೀರನ್ನು ಉಪಯೋಗಿಸಬೇಕು. ಸಿಡಿಲು ಮಿಂಚುಗಳಿಂದ ಅನಾಹುತಗಳುಂಟಾಗುವ ಸಾಧ್ಯತೆಯಿರುವು ದರಿಂದ ಮಳೆಗಾಲದಲ್ಲಿ ಹೊರ ಹೋಗಬಾರದು.
ಮಳೆಗಾಲದಲ್ಲಿ ಪರಿಸರದ ಉಷ್ಣತೆ
ಕುಗ್ಗುವುದರಿಂದ ಉಸಿರಾಂಗದ ಕಾಯಿಲೆಗಳು ಉಲ್ಬಣಿಸಬಹುದು. ವಾಯುಮಾಲಿನ್ಯ ಮಳೆಗಾಲದಲ್ಲಿ ಅಪರೂಪ. ಜಲ ಮಾಲಿನ್ಯ ಅತ್ಯಧಿಕ. ಋತುಮಾನಗಳಲ್ಲಿ ವ್ಯಾಪಕವಾಗಿ ಕಂಡುಬರುವ ಕೆಲವು ಕಾಯಿಲೆಗಳನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ.
ಡೆಂಗ್ಯೂ ಏಡಿಸ್ ಏಜಿಪ್ಟೈ ಸೊಳ್ಳೆಯಿಂದ ಹರಡುವ ಮಾರಣಾಂತಿಕವಾಗಬಲ್ಲ ಆರ್ಎನ್ಎ ವಿಧದ ಡೆಂಗ್ಯೂ ವೈರಾಣುವಿ
ನಿಂದುಂಟಾಗುವ ಕಾಯಿಲೆಯಿದು.
ಮಳೆಗಾಲದಲ್ಲಿ ಸೊಳ್ಳೆಗಳು ಜಾಸ್ತಿಯಾಗುವುದರಿಂದ ಸೊಳ್ಳೆ ಕಚ್ಚಿದ ಮೂರರಿಂದ ನಾಲ್ಕು ದಿನಗಳಲ್ಲಿ ದಿಢೀರನೆ ಕಾಣಿಸಿ ಕೊಳ್ಳುವ ಜ್ವರ, ಚಳಿ, ತಲೆನೋವು, ಕಣ್ಣುನೋವು, ಚರ್ಮಗಂಧೆಗಳು, ಕೀಲುನೋವು, ವಾಂತಿ ಇವು ಇದರ ಪ್ರಮುಖ ರೋಗ ಲಕ್ಷಣಗಳು. ಬಿಳಿರಕ್ತಕಣಗಳು ಮತ್ತು ರಕ್ತ ಹೆಪ್ರೋತ್ಪತ್ತಿಕಣಗಳು (ಪ್ಲೇಟ್ಲೆಟ್)ಗಳು ಕಡಿಮೆಯಾಗುತ್ತವೆ. ಪ್ಲೇಟ್ಲೆಟ್ಗಳು ಕಡಿಮೆಯಾಗುವುದರಿಂದ ದೇಹದ ವಿವಿಧ ಭಾಗಗಳಿಂದ ರಕ್ತಸ್ರಾವವಾಗಬಹುದು ಇದನ್ನು ‘ರಕ್ತ ಸ್ರಾವದ ಡೆಂಗ್ಯು ಜ್ವರ’ ಎನ್ನಲಾಗುತ್ತದೆ.
ಕೆಲವರಲ್ಲಿ ರಕ್ತ ಪರಿಚಲನೆಯ ವಿಫಲತೆಯುಂಟಾಗಿ ರಕ್ತಒತ್ತಡ ಕುಸಿತ, ಬೆವರುವಿಕೆ, ಅತೀವ ಸುಸ್ತು ಸಂಕಟಗಳುಂಟಾಗಿ ಸಕಾಲಿಕ ಚಿಕಿತ್ಸೆ ಸಿಗದಿದ್ದಲ್ಲಿ ಮಾರಣಾಂತಿಕವಾಗಬಹುದು. ಇದನ್ನು ‘ಡೆಂಗ್ಯೂ ಆಘಾತದ ಸಿಂಡ್ರೋಮ್’ ಎನ್ನಲಾಗುತ್ತದೆ. ಇದು ತುಂಬಾ ಅಪಾಯಕಾರಿ ವಿಧದ ಡೆಂಗ್ಯೂ. ಕೆಲವೊಮ್ಮೆ ಈಲಿ ಮತ್ತು ಮೂತ್ರಜನಕಾಂಗಗಳ ವಿಫಲತೆಯುಂಟಾಗಿ ಮೆದುಳಿನ ವಿಫಲತೆ ಯುಂಟಾಗಬಹುದು. ಒಬ್ಬೊಬ್ಬರಲ್ಲಿ ಒಂದೊಂದು ಬಗೆಯ ತೀವ್ರದ ಕಾಯಿಲೆ ಉಂಟಾಗಬಹುದು. ಕಾಯಿಲೆ ಎಲ್ಲರಲ್ಲೂ ತೀವ್ರವಾಗಿರುವುದಿಲ್ಲ. ಬಹುಪಾಲರಲ್ಲಿ ಕಾಯಿಲೆ ತನಗೆ ತಾನೇ ವಾಸಿಯಾಗುತ್ತದೆ. ಡೆಂಗ್ಯೂ ವೈರಾಣುಗಳನ್ನು ಕೊಲ್ಲಲು ದೇಹದಲ್ಲಿ ರೋಗನಿರೋಧಕ ವಸ್ತುಗಳು ಉಂಟಾಗುತ್ತವೆ.
ದೇಹದ ನಿರೋಧಕ ವ್ಯವಸ್ಥೆ ಕುಗ್ಗಿದವರಲ್ಲಿ ಕಾಯಿಲೆ ಗಂಭೀರ ಸ್ವರೂಪ ತಾಳುತ್ತದೆ. ಡೆಂಗ್ಯೂ ವೈರಾಣು ನಿರೋಧಕ
ವಸ್ತುಗಳನ್ನು ರಕ್ತದಲ್ಲಿ ಗುರುತಿಸುವುದರಿಂದ ಕಾಯಿಲೆಯನ್ನು ದೃಢೀಕರಿಸಿಕೊಳ್ಳಲಾಗುತ್ತದೆ. ಇದಕ್ಕೆ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಒತ್ತಾಸೆ ಚಿಕಿತ್ಸೆಗಳಾದ ದ್ರವ ನೀಡಿಕೆ, ಪ್ಲೇಟ್ಲೆಟ್ ಸಂಖ್ಯೆ ೧೦,೦೦೦ಕ್ಕೆ ಕಡಿಮೆಯಿದ್ದಲ್ಲಿ ಪ್ಲೇಟ್ಲೆಟ್ಗಳ ನೀಡಿಕೆ, ಇತ್ಯಾದಿ
ಚಿಕಿತ್ಸೆಗಳಿಂದ ಕಾಯಿಲೆ ಸಾಮಾನ್ಯವಾಗಿ ನಿಯಂತ್ರಣಕ್ಕೆ ಬರುತ್ತದೆ.
ರಕ್ತಸ್ರಾವ ಅತಿಯಾಗಿದ್ದಲ್ಲಿ ರಕ್ತ ನೀಡಬೇಕಾಗುತ್ತದೆ. ಕಾಯಿಲೆಯನ್ನು ಪ್ರಾಥಮಿಕ ಹಂತದಲ್ಲಿ ಗುರುತಿಸಿ ಸೂಕ್ತ ಚಿಕಿತ್ಸೆ ನೀಡಿದಲ್ಲಿ ಸಂಪೂರ್ಣವಾಗಿ ನಿಯಂತ್ರಿಸಬಹುದು. ಆಘಾತ ಹಂತ ತಲುಪಿದಲ್ಲಿ ಗಂಭೀರ ಸ್ವರೂಪತಾಳುತ್ತದೆ. ಸೊಳ್ಳೆಗಳ
ನಿಯಂತ್ರಣ ಮತ್ತು ಸೊಳ್ಳೆಗಳ ಕಡಿತದಿಂದ ದೇಹವನ್ನು ರಕ್ಷಿಸುವುದರಿಂದ ಇದನ್ನು ತಡೆಗಟ್ಟಬಹುದು. ಮನೆ ಸುತ್ತಮುತ್ತ ನೀರು ನಿಲ್ಲುವ ಸ್ಥಳಗಳನ್ನು ತೆರವುಗೊಳಿಸುವುದರಿಂದ ಮತ್ತು ಸೊಳ್ಳೆಗಳನ್ನು ನಿಯಂತ್ರಿಸುವುದರಿಂದ ಈ ಕಾಯಿಲೆಯನ್ನು
ತಡೆಗಟ್ಟಬಹುದು.
ಚಿಕೂನ್ಗುನ್ಯಾ
ಏಡಿಸ್ ಏಜಿಪ್ಟೈ ಸೊಳ್ಳೆಯ ಕಚ್ಚುವಿಕೆಯಿಂದ ಮನುಷ್ಯನಿಗೆ ಹರಡುವ ಚಿಕೂನ್ಗುನ್ಯಾ ವೈರಾಣುವಿನ ಕಾಯಿಲೆಯಿದು.
ಕೀಲುಗಳು ಮತ್ತು ನರಮಂಡಲವನ್ನು ಕಾಯಿಲೆಗೀಡುಮಾಡುವ ಈ ಕಾಯಿಲೆಯಲ್ಲಿ ಜ್ವರ, ಚರ್ಮಗಂಧೆ, ಕೀಲು ನೋವು, ನರಮಂಡಲದ ತೊಂದರೆಗಳು ಕಾಣಿಸಿಕೊಂಡು. ಸಾಮಾನ್ಯವಾಗಿ ಅವು ತಮಗೆ ತಾವೇ ವಾಸಿಯಾಗುತ್ತವೆ. ಕೆಲವರಲ್ಲಿ ಗಂಭೀರ ಸ್ವರೂಪದ ಕೀಲುನೋವು ಮತ್ತು ನರನ್ಯೂನತೆಗಳು ಶಾಶ್ವತವಾಗಿ ಉಳಿದುಕೊಳ್ಳಬಹುದು. ಇದಕ್ಕೆ ಸಮಂಜಸವಾದ ಚಿಕಿತ್ಸೆ ಇಲ್ಲ.
ಚಳಿಗಾಲದ ಕಾಯಿಲೆಗಳು
ಸೂರ್ಯನ ಶಾಖ ಭೂಮಿಗೆ ತಲುಪದಂತಾಗುವ ಅಥವಾ ತಲುಪಿದ ಶಾಖವನ್ನು ಹಿಡಿದಿಟ್ಟುಕೊಳ್ಳಲಾಗದ ಪರಿಸರದ ಬದಲಾವಣೆಗಳಿಂದ ಚಳಿಗಾಲ ಉಂಟಾಗುತ್ತದೆ. ಚಳಿಗಾಲದಲ್ಲಿ ಕೆಲವು ವೈರಾಣುಗಳು ಅತಿಯಾಗಿ ವೃದ್ಧಿಯಾಗುತ್ತವೆ.
ಗಾಳಿಯಲ್ಲಿನ ನೀರಿನಾಂಶ ಹೆಚ್ಚಾಗುತ್ತದೆ. ಪರಿಸರದ ಉಷ್ಣತೆ ಕಡಿಮೆಯಾಗುತ್ತದೆ. ಈ ಪರಿಣಾಮಗಳಿಂದಾಗಿ ಅಸ್ತಮ, ನೆಗಡಿ, ಕೆಮ್ಮ, ಏರು ರಕ್ತಒತ್ತಡ, ಇತ್ಯಾದಿಗಳು ಚಳಿಗಾಲದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಚಳಿಗಾಲದಲ್ಲಿ ಹೃದಯದ ಶುದ್ಧ
ರಕ್ತನಾಳಗಳು ಕುಗ್ಗುವುದರಿಂದ ಹೃದಯಾಘಾತದ ಸಾಧ್ಯತೆ ಹೆಚ್ಚಾಗುತ್ತದೆ.
ಏರು ರಕ್ತ ಒತ್ತಡದ ಸಾಧ್ಯತೆಯೂ ಹೆಚ್ಚು. ಚಳಿಗಾಲ ಹೃದ್ರೋಗಿಗಳಿಗೆ ಹಿತವಲ್ಲ; ಆದುದರಿಂದ ಹೃದ್ರೋಗಿಗಳು ಚಳಿಗೆ ದೇಹ ವನ್ನು ಒಡ್ಡಬಾರದು. ಚಳಿಗಾಲದಲ್ಲಿ ಚರ್ಮ ಮತ್ತು ಉಸಿರಾಟದ ಕಾಯಿಲೆಗಳು ಉಲ್ಬಣಗೊಳ್ಳುತ್ತವೆ. ಸೂರ್ಯನ ಬೆಳಕು ಇಲ್ಲದ ಅಥವಾ ಕಡಿಮೆ ಇರುವ ದೇಶಗಳಲ್ಲಿ ಮನೋರೋಗಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಋತುಮಾನಗಳು ಮನಸ್ಸಿನ ಮೇಲೂ ಪರಿಣಾಮ ಬೀರುವುದರಿಂದ ಅವುಗಳಲ್ಲಾಗುವ ಏರುಪೇರಗಳು ಮನೋರೋಗಕ್ಕೂ ನಾಂದಿಯಾಗಬಹುದು ದಪ್ಪನೆಯ
ಉಡುಪುಗಳಿಂದ ದೇಹವನ್ನು ರಕ್ಷಿಸಬೇಕು.
ಅತಿಯಾದ ಕ್ಯಾಲೋರಿ ಅವಶ್ಯಕವಿರುವುದರಿಂದ ತುಸು ಹೆಚ್ಚು ಕ್ಯಾಲೊರಿ ಪ್ರಮಾಣದ ಸಮತೋಲನ ಆಹಾರ ಸೇವನೆ ಅತ್ಯಗತ್ಯ. ಮಾನವನ ಅತಿಯಾದ ಭೌತಿಕ ಸುಖಾಕರ್ಷಣೆಯ ಹುಚ್ಚಿನಿಂದ ಪರಿಸರದ ಮೇಲೆ ಜರುಗುತ್ತಿರುವ ದೌರ್ಜನ್ಯದಿಂದಾಗಿ ಸೃಷ್ಟಿಯ ಪೂರ್ವನಿಗದಿತ ಕಾರ್ಯಚಕ್ರಗಳು ವ್ಯತ್ಯಾಸಗೊಂಡು ಋತುಮಾನಗಳಲ್ಲೂ ಏರುಪೇರಾಗುತ್ತಿದೆ. ಮನುಷ್ಯ ಇದನ್ನು ಮನಗಂಡು ತನ್ನನ್ನು ಸೃಷ್ಟಿಗೆ ಪೂರಕವಾಗಿ ನಿಯಂತ್ರಿಸಿಕೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೊಸ ಹೊಸ ಆರೋಗ್ಯ ಸಮಸ್ಯೆಗಳು ಉಂಟಾಗಿ ಮಾನವ ಕುಲಕ್ಕೆ ಸವಾಲಾಗುವುದು ಶತಸಿದ್ಧ.
Read E-Paper click here