Saturday, 21st December 2024

ಜೀವನ ಮೌಲ್ಯಗಳಿಗಿಷ್ಟು ಹೊಸತನವಿರಲಿ

ಶಿವಲೀಲಾ ಡೆಂಗಿ

ಹೊಸ ಕ್ಷಣದ ಹೊಸ ದಿನದ ಹೊಸ ವರ್ಷದ ಮುಂಭಾಗದಲ್ಲಿ ನಿಂತಿರುವ ಜಗದ ಜೀವಿಗಳಿಗೆಲ್ಲ ಇಂದು ಹೊಸ ಜೀವನದ ಮುನ್ನುಡಿಯನ್ನು ಬರೆಯುವ ದಿನ. ಮುಂಬಾಗಿಲ ಪರದೆ ಸರಿಸಿ ಒಳ ನಡೆಯುವ ಮುನ್ನ ಒಂದು ಕ್ಷಣ ಹಳೆಯ ದಿನಗಳ ಅನುಭವಗಳಿಗೊಮ್ಮೆ ಹೊಸತನದ ಪುಳಕವನ್ನು ನೀಡಿ ಮುನ್ನಡೆಯೋಣ.

ಸೃಷ್ಟಿಯ ಮನೆಯಲ್ಲಿ ನಿತ್ಯವೂ ಬೆಳಗುವ ಸೂರ್ಯನ ಬೆಳಕಿನಲ್ಲಿ, ತಂಪೆರೆ ಯುವ ಚಂದನ ಬೆಳದಿಂಗಳಲ್ಲಿ, ಬೀಸುವ ಗಾಳಿಯ ಸ್ಪರ್ಶದಲ್ಲಿ, ಮೈದುಂಬಿ ನಿಂತ ಹಸಿರಿನ ಬಸಿರ ಉಸಿರುಗಳಲ್ಲಿ, ಅರಳಿ ನಗುವ ಹೂಗಳಿಗಾಗಿ ಕಾತರಿ ಸುವ ದುಂಬಿ ಗಳಲಿ, ಮುಗಿಲ ಪ್ರತಿಬಿಂಬದಲಿ ಮೊಗತೊಳೆಯುವ ಸ್ವಚ್ಛಂದ ಜಲರಾಶಿಯಲ್ಲಿ, ಪ್ರಕೃತಿಯ ಕಣಕಣದಲ್ಲೂ ಬೆರೆತು ಹೋಗಿರುವ ಜೀವರಾಶಿಗಳು ಹೊಸತನವನ್ನು ಕಾಣಲು ಹಂಬಲಿಸುತ್ತಿವೆ.

ಹೊಸತನವೆಂಬುದು ಪೀಠಿಕೆಯಾದರೆ, ಕಳೆದು ಹೋಗುವ ಹಳೆಯದು ಎಂಬುದು ಉಪಸಂಹಾರವಾಗುತ್ತದೆ. ಪ್ರತಿ ವರ್ಷವೂ ಪೀಠಿಕೆ ಮತ್ತು ಉಪಸಂಹಾರಗಳು ಬಹಳ ಮಹತ್ವದ ಪಾತ್ರವನ್ನು ವಹಿಸುತ್ತವೆ. ಹೊಸತನ ಕ್ಕಾಗಿ ಸದಾ ಹಂಬಲಿಸುವ ಈ ಮನ ಬದುಕಿನ ಮೌಲ್ಯಗಳನ್ನು ಜಾಗೃತ ಗೊಳಿಸುವಲ್ಲಿ ಹೊಸ ಹೆಜ್ಜೆ ಇಡಬೇಕಾಗಿದೆ. ಆಧುನಿಕತೆಯ ಪಂಜರದಲ್ಲಿ ಸಿಲುಕಿ ತನ್ನತನವನ್ನು ಕಳೆದುಕೊಳ್ಳುತ್ತಿರುವ ನಾವುಗಳು ಜೀವನದ ಮೌಲ್ಯಗಳನ್ನು ವೈಭವೀಕರಿಸುತ್ತಿದ್ದೇವೆ.

ಬದುಕಿನ ಒಂದೊಂದು ಅಮೂಲ್ಯವಾದ ಕ್ಷಣಗಳನ್ನು ಹಾಳು ಮಾಡುತ್ತಿದ್ದೇವೆ. ಸಂತೋಷವನ್ನು ಎಂದರಲ್ಲಿ ಹುಡುಕುತ್ತಿದ್ದೇವೆ. ದುಡ್ಡು ಕೊಟ್ಟು ಖರೀದಿಸಲು ಪ್ರಯತ್ನಿಸುತ್ತಿದ್ದೇವೆ. ಸಂತೋಷವನ್ನು ಹುಡುಕಿಕೊಳ್ಳುವ ತರಾತುರಿಯಲ್ಲಿ ಹಾಳು ವ್ಯಸನಗಳಿಗೆ ದಾಸರಾಗುತ್ತಿದ್ದೇವೆ. ತಪ್ಪು ಮೇಲೆ ತಪ್ಪುಗಳನ್ನು ಮಾಡಿ ಪ್ರಾಯಶ್ಚಿತದ ಹೆಸರಿನಲ್ಲಿ ಕಾಣದ ದೇವರಿಗಾಗಿ ಊರೂರು ಅಲೆದಾಡುತ್ತಿದ್ದೇವೆ.

ಹೊಸ ವರ್ಷವನ್ನು ಸಂಭ್ರಮಿಸುವ ತುಡಿತದಲ್ಲಿರುವ ನಾವು ಈ ಎಲ್ಲದಕ್ಕೂ ವಿದಾಯ ಹೇಳಿಬಿಡೋಣವೇ.. ನಮಗಾಗಿ ದೊರಕಿರುವ ಈ ಅಮೂಲ್ಯವಾದ ಜೀವನಕ್ಕೆ ಒಳ್ಳೆಯ ಮೌಲ್ಯಗಳನ್ನು ಧರಿಸೋಣವೇ..ಸದಾ ಸಂತೋಷ ಪಡಬೇಕು, ಖುಷಿಯಿಂದ ಇರಬೇಕು ಎಂದು ಹಂಬಲಿಸುವ ನಾವು ಸಂತೋಷ ಎಂದರೇನು ಮತ್ತು ಖುಷಿ ಎಂದರೇನು ಅನ್ನೋದನ್ನ ನಮ್ಮ ಅನುಭವಕ್ಕೆ ತಂದುಕೊಳ್ಳುವ ಪ್ರಯತ್ನವನ್ನು ಮಾಡಿದಾಗ ಸಂತೋಷ ಮತ್ತು ಖುಷಿಯ ವ್ಯಾಖ್ಯಾನವನ್ನು ನಾವೇ ಬರೆದು ಕೊಳ್ಳಬಹುದು.

ಸ್ನೇಹಿತರೊಂದಿಗೆ ರ್ಬಾ ಗೋ..ಹೋಟೆಲಿಗೊ..ಹೋಗಿ ಕುಡಿದು,ತಿಂದು ಪಾರ್ಟಿ ಮಾಡೋದು ನಮಗೆ ಹೆಚ್ಚಿನ ಸಂತೋಷ ಮತ್ತು ಖುಷಿ ಕೊಡುತ್ತಾ…ಅಥವಾ ಕುಟುಂಬದ ಸಂಬಂಧಗಳೊಂದಿಗೆ, ಭಾಂದವ್ಯಗಳೊಂದಿಗೆ ಬೆರೆತು ನಮ್ಮತನದಲ್ಲಿ ತನ್ನತನವನ್ನು ಕಾಣುವುದು ಖುಷಿ ಕೊಡುತ್ತಾ.. ಇದೆಲ್ಲವೂ ಮಾತಿನಲ್ಲಿ ಹೇಳಿದರೆ ಅಳತೆಗೆ ನಿಲುಕದು ಇದನ್ನು ಅನುಭವಿಸಿ
ನೋಡಬೇಕು ಆಗ ಮಾತ್ರ ಬದುಕಿನ ಸುಂದರ ಕ್ಷಣಗಳನ್ನು ಕಳೆದುಕೊಳ್ಳುತ್ತಿದ್ದೇವೆ ಎಂಬುದು ನಮಗೆ ಅರಿವಾಗಲು ಸಾಧ್ಯ.

ಕುಟುಂಬದಲ್ಲಿ ಎಲ್ಲರೂ ಸಂತೋಷವಾಗಿದ್ದಾರೆ, ಸ್ವತಂತ್ರವಾಗಿದ್ದಾರೆ, ಅವರಿಗೆ ಎಲ್ಲ ಅನುಕೂಲಗಳು ಇವೆ, ಕೆಲಸ ಮಾಡಲು ಆಳುಗಳಿದ್ದಾರೆ.. ಎಂದು ಭಾವಿಸಿ ನಾವು ಕುಟುಂಬವನ್ನು ನಿರ್ಲಕ್ಷ ಮಾಡುತ್ತೇವೆ. ಆದರೆ ಆ ನಿಮ್ಮ ಕುಟುಂಬದಲ್ಲಿ ನೀವು ಹೆಚ್ಚು ಸಂತೋಷದಿಂದಿದ್ದೀರಾ ಅಥವಾ ನಿಮ್ಮ ಕೈ ಕೆಳಗೆ ಕೆಲಸ ಮಾಡುವ ಆಳುಗಳು ಹೆಚ್ಚು ಸಂತೋಷದಿಂದಿದ್ದಾರಾ ಎಂಬುದನ್ನು ಒಮ್ಮೆ ಗ್ರಹಿಸಿ ನೋಡಿ… ನಿಮಗೆ ಆಶ್ಚರ್ಯಕರ ಸಂಗತಿ ಒಂದು ನಿಮ್ಮ ಅರಿವಿಗೆ ಬರುತ್ತದೆ.. ಹೌದು ಸಂತೋಷವೆಂಬುದು
ಅನುಭವಿಸುವುದರಲ್ಲಿದೆ.

ಅನುಭವ ನಮಗೆ ದಕ್ಕುವುದು ಮೌಲ್ಯಗಳನ್ನು ಪ್ರೀತಿಯಿಂದ ನೇವರಿಸಿದಾಗ ಮಾತ್ರ..ಪ್ರತಿಯೊಂದು ಬಾಂಧವ್ಯಗಳ ಜೊತೆಗೂ ನಾವು ಹೆಜ್ಜೆ ಇಡುವಾಗ ಮೌಲ್ಯಗಳಿಗೆ ಹೆಚ್ಚಿನ ಪ್ರಾಶಸ್ತವನ್ನು ನೀಡಬೇಕಾಗುತ್ತದೆ. ಅಂದಾಗ ಮಾತ್ರ ಸಂಬಂಧ ಗಳ ಒಡನಾಟದಲ್ಲಿ ಗಟ್ಟಿತನ ಬರಲು ಸಾಧ್ಯ.. ಅಜ್ಜಿ ತಾತಂದಿರ ಕಾಳಜಿಯನ್ನು.. ಅಪ್ಪ ಅಮ್ಮನ ಮಮತೆಯನ್ನು.. ಸಂಗಾತಿಯ ಇಂಗಿತವನ್ನು.. ಮಕ್ಕಳ ಭಾವನೆಗಳನ್ನು.. ಅಕ್ಕ ತಂಗಿಯರ ಒಡನಾಟವನ್ನು.. ಅಣ್ಣ ತಮ್ಮಂದಿರ ಸಲುಗೆ ಗಳನ್ನು.. ಗೆಳೆಯ ಗೆಳತಿಯರ ಸಾಂಗತ್ಯವನ್ನು ಗೌರವಿಸುವ ಮೌಲ್ಯಗಳನ್ನು ನಾವು ಇಂದು ಉಳಿಸಿಕೊಳ್ಳಬೇಕಾಗಿದೆ.

ಅಂದಾಗ ಮಾತ್ರ ನಮ್ಮ ಮುಂದಿನ ಪೀಳಿಗೆ ಅರ್ಥಯುತವಾದ ಬದುಕನ್ನು ನಡೆಸಲು ಸಾಧ್ಯವಾಗುತ್ತದೆ.. ಸಂತೋಷ ವೆಂಬುದು ಹೊರಗೆಲ್ಲೂ ಇಲ್ಲ. ನಮ್ಮ ಜೊತೆಗಿನ ಬಾಂಧವ್ಯಗಳಲ್ಲಿ ನಾವು ಬೆರೆಯುವ ರೀತಿಯಲ್ಲಿ ಇದೆ ಎಂಬುದನ್ನು ಮನ ಗಂಡಾಗ ಮಾತ್ರ ಅದ್ಭುತವಾದ ಬದುಕು ಎಲ್ಲರೂ ಅನುಭವಿಸಲು ಸಾಧ್ಯವಾಗುವುದು. ಎಲ್ಲಾ ಹುಡುಕಿದೆ ಇಲ್ಲದ ದೇವರ
ಕಲ್ಲು ಮಣ್ಣುಗಳ ಗುಡಿಯೊಳಗೆ ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರುತಿಸುದಾದೆನು ನಮ್ಮೊಳಗೆ ಎಂಬ ಜಿಎಸ್‌ಎಸ್‌ರವರ ಸಾಲುಗಳನ್ನು ನಮ್ಮ ನಿತ್ಯ ಜೀವನದ ಮಂತ್ರವಾಗಿ ಅಳವಡಿಸಿಕೊಂಡಾಗ ಮಾತ್ರ ಬದುಕಿನ ಮೌಲ್ಯಗಳು ಸಂಭ್ರಮಿಸುತ್ತವೆ ಮತ್ತು ಶಾಶ್ವತವಾಗಿ ಉಳಿಯುತ್ತವೆ.

ಹೊಸ ವರ್ಷದ ಹೊಸಿಲಿಗೆ ಜೀವನದ ಮೌಲ್ಯಗಳ ತುಂಬಿಕೊಂಡು ಪಾದಾರ್ಪಣೆ ಮಾಡೋಣ.. ಹೊಸ ಕ್ಷಣ, ಹೊಸ ದಿನ, ಹೊಸ ವರುಷ ಹೊಸ ಹೊಸ ಕನಸುಗಳೊಂದಿಗೆ ಹೆಜ್ಜೆ ಹಾಕಲಿ. ಕನಸುಗಳೆಲ್ಲ ಆರೋಗ್ಯಯುತವಾಗಿರಲಿ ಹಾಗೂ
ಸಾಕಾರ ಗೊಳ್ಳಲಿ ಎಂದು ಹಾರೈಸುತ್ತಾ ಎಲ್ಲಾ ಮನಗಳಿಗೂ ಹೊಸ ವರ್ಷದ ಶುಭಾಶಯಗಳು.

(ಲೇಖಕರು ಕಲಬುರಗಿಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ)