Thursday, 28th November 2024

ಜನಸಾಮಾನ್ಯರಲ್ಲಿ ಅಧ್ಯಾತ್ಮ ಅರಳಿಸಿದ ಶ್ರೀಗಳು

ಸ್ವಾಸ್ಥ್ಯ ಸಂಪದ

yoganna55@gmail.com

ಅಧ್ಯಾತ್ಮವೆಂದರೆ ಮನುಷ್ಯ ತನ್ನ ಹುಟ್ಟಿನ ಮೂಲ ಮತ್ತು ಬದುಕಿನ ಜವಾಬ್ದಾರಿಗಳನ್ನು ಅರ್ಥಮಾಡಿ ಕೊಂಡು, ತನ್ನ ಉಗಮ ಮತ್ತು ವಿಕಾಸಕ್ಕೆ ಕಾರಣವಾದ ಸೃಷ್ಟಿ ಮತ್ತಿತರರೆಲ್ಲರೊಡನೆ ತನ್ನನ್ನು ಸಕಾರಾತ್ಮಕವಾಗಿ ಜೋಡಿಸಿಕೊಂಡು ನೆಮ್ಮದಿಯಿಂದ ಬದುಕುವ ಜ್ಞಾನವನ್ನು ಅರಿತು ಅದನ್ನು ಬದುಕಿನಲ್ಲಿ ಅಳವಡಿಸಿಕೊಂಡು ಬಾಳುವುದು ಎಂದರ್ಥ.

ಅಧ್ಯಾತ್ಮ ಕಟ್ಟುಕತೆಗಳ, ಧಾರ್ಮಿಕ ಕಂದಾಚಾರಗಳ, ಮೂಢನಂಬಿಕೆಗಳ, ಕಣ್ಣಿಗೆ ಕಾಣದ ಸ್ವರ್ಗ, ನರಕ ಲೋಕಗಳ ಪರಿ ಕಲ್ಪನೆಯಲ್ಲ. ವಾಸ್ತವ ಬದುಕಿನಲ್ಲಿ ಸುಂದರವಾದ ಸೃಷ್ಟಿ ಯಲ್ಲಿ ನಮ್ಮನ್ನೂ ಸೃಷ್ಟಿಸಿದ ಸೃಷ್ಟಿಕರ್ತನನ್ನು ಕೃತಜ್ಞ ಭಾವದಿಂದ ಸ್ಮರಿಸುತ್ತ ಸೃಷ್ಟಿಯ ಪೂರ್ವನಿಗದಿತ ಕಾರ್ಯಚಕ್ರಗಳನ್ನು ಮನನಮಾಡಿ ಕೊಂಡು ಅವುಗಳ ಸರಪಣಿ ಸಡಿಲ ವಾಗದಂತೆ ವರ್ತಿಸುತ್ತ ತಾನೂ ನೆಮ್ಮದಿಯಾಗಿ ಬದುಕಿ, ಇತರರನ್ನೂ ನೆಮ್ಮದಿಯಿಂದ ಬದುಕಲು ಸಹಕಾರಿಯಾಗಿ ಬದುಕನ್ನು ಸಂಭ್ರಮಿಸು ವುದೇ ಅಧ್ಯಾತ್ಮ.

ಸೃಷ್ಟಿಯಲ್ಲಿನ ಬೇರೆಲ್ಲವುಗಳು ಸೃಷ್ಟಿಕರ್ತ ಅಪೇಕ್ಷಿಸಿದ ಪೂರ್ವನಿಗದಿತ ಜವಾಬ್ದಾರಿ ಗಳನ್ನು ಸಹಜವಾಗಿ ಯಾವ ಏರುಪೇರು ಗಳಿಲ್ಲದೆ ಕರಾರುವಾಕ್ಕಾಗಿ ಪಾಲಿಸಿಕೊಂಡು ಬರುತ್ತಿವೆ. ಇವುಗಳಿಂದ ಸೃಷ್ಟಿಗಾಗಲಿ, ಮಾನವಕುಲಕ್ಕಾಗಲಿ ಯಾವುದೇ ಬಗೆಯ ಧಕ್ಕೆಯಿಲ್ಲ. ಜಾತಿ ಜಾತಿಗಳ, ಧರ್ಮ ಧರ್ಮಗಳ ನಡುವೆ ವಿಂಗಡಣೆಯಾಗಿ ಪೈಪೋಟಿ ಗಳಿಲ್ಲ. ಜನ್ಮದತ್ತವಾಗಿಯೇ ಅವುಗಳ ಜೀನುಗಳಲ್ಲಿಯೇ ಸಾರ್ವತ್ರಿಕವಾದ ಸಮಗ್ರ ದೃಷ್ಟಿಕೋನ ಅಡಗಿದ್ದು, ಸಾಮರಸ್ಯವಾಗಿ ಬದುಕಿ ಸಂತಾನವನ್ನು ಮುಂದು ವರಿಸುತ್ತವೆ.

ಅಧ್ಯಾತ್ಮ ಜನ್ಮದತ್ತವಾಗಿಯೇ ಅವುಗಳಲ್ಲಿದ್ದು, ಯಾವುದೇ ಬಾಹ್ಯ ಅಂಶಗಳಿಂದ ಅವು ಬದಲಾಗದಿರುವುದರಿಂದ ಅವುಗಳಿಗೆ ಅಧ್ಯಾತ್ಮದ ಬೋಧನೆಯ ಅವಶ್ಯಕತೆ ಇರುವುದೇ ಇಲ್ಲ. ಮನುಷ್ಯ ಮಾತ್ರ ಇದಕ್ಕೆ ಹೊರತಾಗಿ ಸೃಷ್ಟಿಕರ್ತನ ಅಪೇಕ್ಷೆ ಮತ್ತು ನಿಯಮಗಳಿಗೆ ವಿರುದ್ಧವಾಗಿ ವರ್ತಿಸುತ್ತ ತನಗೂ ಮತ್ತು ಸೃಷ್ಟಿಗೂ ಕಂಟಕ ಪ್ರಾಯವಾಗುತ್ತಿದ್ದಾನೆ. ಏಕೆ ಹೀಗಾಯಿತು ಎಂಬುದೇ ಯಕ್ಷಪ್ರಶ್ನೆ. ಚಂಚಲಶೀಲ ಮನಸ್ಸು, ಮರೆತುಹೋದ ಸೃಷ್ಟಿಯ ಅಂತಿಮ ಸತ್ಯಗಳು ಮತ್ತು ಜವಾಬ್ದಾರಿಗಳು, ಭೌತಿಕ ಸುಖದ ದುರಾಸೆಗಳು ಇತ್ಯಾದಿ ಹಲವಾರು ಕಾರಣಗಳಿರ ಬಹುದು.

ಈ ಕಾರಣಗಳಿಂದಾಗಿಯೇ ಪ್ರಪಂಚಾದ್ಯಂತ ಒಗ್ಗಟ್ಟಾಗಿರಬೇಕಾಗಿದ್ದ ಮಾನವಕುಲ ಇಂದು ಧರ್ಮ, ಜಾತಿ, ವರ್ಣ, ಆರ್ಥಿಕ ಅಸಮಾನತೆ, ಮೇಲು-ಕೀಳು ಎಂಬಿತ್ಯಾದಿ ಭ್ರಮೆ ಗಳಿಂದ ಒಡೆದು ಛಿದ್ರ ಛಿದ್ರವಾಗಿ, ತಾ ಮೇಲು ನಾ ಮೇಲು ಎಂದು ಬಡಿದಾಡಿ ಕೊಂಡು ಮಾನವ ಕುಲವೇ ಅಶಾಂತಿಗೀಡಾಗಿರುವುದು ದುರ್ದೈವದ ಸಂಗತಿ. ಈ ಕಾಲಘಟ್ಟದಲ್ಲಿ ಮನುಷ್ಯನಿಗೆ ಅಧ್ಯಾತ್ಮದ ನೈಜ ಅರಿವು ಅತ್ಯವಶ್ಯಕವಾಗಿದೆ. ಅಂತಹ ಅಧ್ಯಾತ್ಮಿಕ ಅರಿವನ್ನು ಜನಸಾಮಾನ್ಯರಲ್ಲಿ ಅರಳಿಸಿ ಬೆಳೆಸುವಲ್ಲಿ ನಾಡಿನಾದ್ಯಂತ ಶ್ರೀಸಿದ್ದೇಶ್ವರರು ಅಗ್ರಗಣ್ಯರಾಗಿದ್ದರು.

‘ಶರಣರ ಬಾಳ ಮರಣದಲ್ಲಿ ನೋಡು’ ಎಂಬ ಪ್ರಾಚೀನ ನಾಣ್ಣುಡಿ ಅದೆಷ್ಟು ಸತ್ಯ ಎಂಬಂಶವನ್ನು ಸಿದ್ದೇಶ್ವರ ಶ್ರೀಗಳ ಅಂತಿಮ ಯಾತ್ರೆಯಲ್ಲಿ ಹರಿದು ಬಂದ ಜನಸಾಗರ ಮತ್ತು ವ್ಯಕ್ತವಾದ ದುಃಖ ದುಮ್ಮಾನಗಳು ಆಧುನಿಕ ಸಮಾಜಕ್ಕೂ ಮತ್ತೊಮ್ಮೆ
ದೃಢಪಡಿಸಿವೆ. ಅಂತಿಮದರ್ಶನಕ್ಕಾಗಿ ದೇಶಾದ್ಯಂತ ದಿಂದ ಪ್ರವಾಹದಂತೆ ಸಂಸಾರಸಮೇತರಾಗಿ, ಜಾತ್ಯತೀತ ಮತ್ತು ಧರ್ಮಾ ತೀತವಾಗಿ ಹರಿದು ಬಂದು ಕಾತರದಿಂದ ಗಂಟೆ ಗಂಟೆಗಳ ಕಾಲ ಕಾದು ವೀಕ್ಷಿಸಿದಾಕ್ಷಣ ಅವರುಗಳ ಮುಖದಲ್ಲಿ ಉಂಟಾಗು ತ್ತಿದ್ದ ದುಃಖತಪ್ತ ಧನ್ಯತಾಭಾವಗಳನ್ನು ಗಮನಿಸಿ ದಾಗ ಜನಮಾನಸದಲ್ಲಿ ಸಿದ್ದೇಶ್ವರರು ಮುದ್ರೆಯೊತ್ತಿದ ಅಧ್ಯಾತ್ಮಿಕ ಚಿಂತನೆಗಳು ಎಷ್ಟು ಗಟ್ಟಿಯಾಗಿ ಬೇರೂರಿದ್ದವು ಎಂಬುದು ಸರ್ವರೂ ಗಮನಿಸಬಹುದಾದ ಭಾವಗಳಾಗಿದ್ದವು.

ಶ್ರೀಗಳ ಪಾರ್ಥಿವ ಶರೀರದ ಅಂತಿಮಯಾತ್ರೆಯ ಮೆರವಣಿಗೆಯ ಕಿಲೋ ಮೀಟರ್‌ಗಳ ಉದ್ದಗಲಕ್ಕೂ ರಸ್ತೆಗಳಲ್ಲಿ ರಂಗೋಲಿ ಗಳನ್ನಿಟ್ಟು ದೈವತಾಭಾವವನ್ನು ಜನಸಾಮಾನ್ಯರು ಪ್ರದರ್ಶಿಸುತ್ತಿದ್ದ ದೃಶ್ಯಾವಳಿ ‘ನಡೆದಾಡುವ ದೇವರೆಂದು’ ಸಿದ್ದೇಶ್ವರರು ಪಡೆದಿದ್ದ ಖ್ಯಾತಿಗೆ ಪುಷ್ಟೀಕರಣ ನೀಡುತ್ತಿತ್ತು. ಅಸಂಖ್ಯಾತ ಋಷಿ ಮುನಿಗಳು, ಸಂತರು, ದಾರ್ಶನಿಕರು, ಮಠಾಧೀಶರು, ತತ್ತ್ವಜ್ಞಾನಿಗಳು ಭಾರತದ ನೆಲದಲ್ಲಿ ಹುಟ್ಟಿದ್ದಾರೆ, ಮಾರ್ಗದರ್ಶನ ಮಾಡಿದ್ದಾರೆ, ಬರೆದಿದ್ದಾರೆ, ಪ್ರವಚನ ಮಾಡಿದ್ದಾರೆ.

ಇಡೀ ಪ್ರಪಂಚದಲ್ಲಿಯೇ ಅಧ್ಯಾತ್ಮಿಕ ಜ್ಞಾನಿಗಳು, ಸಾಧುಸಂತರ ಸಂಖ್ಯೆ ಭಾರತದಲ್ಲಿಯೇ ಅತಿ ಹೆಚ್ಚಾಗಿದ್ದು, ಇಡೀ ಪ್ರಪಂಚಕ್ಕೆ ಅಧ್ಯಾತ್ಮಿಕ ಜ್ಞಾನದ ಅರಿವನ್ನು ಪ್ರಪ್ರಥಮವಾಗಿ ಪಸರಿಸಿದ ದೇಶ ಭಾರತ ಎಂಬುದು ನಿರ್ವಿವಾದ. ವಾಲ್ಮೀಕಿ, ವ್ಯಾಸ, ಬುದ್ಧ, ತೀರ್ಥಂಕರರು, ಏಸು, ಪೈಗಂಬರ್, ಆಚಾರ್ಯರುಗಳು, ಬಸವ, ದಾಸರುಗಳು, ಕಬೀರರು, ರಾಮಕೃಷ್ಣ ಪರಮಹಂಸ, ವಿವೇಕಾ ನಂದ, ರಮಣಮಹರ್ಷಿ, ಓಶೋ, ಚಿನ್ಮಯಾನಂದ ಇತ್ಯಾದಿ ಮಹನೀಯರುಗಳು ಅಧ್ಯಾತ್ಮಿಕ ಜ್ಞಾನ ವನ್ನು ಮಾನವಕುಲಕ್ಕೆ
ತಲುಪಿಸುವಲ್ಲಿ ತಮ್ಮದೇ ಆದ ಕಾಣಿಕೆ ನೀಡಿದ್ದಾರೆ.

ಆದರೂ ಸಾಮಾನ್ಯರಿಗೆ ಅರ್ಥವಾಗುವ ಹಾಗೆ ಅವರವರ ಭಾಷೆಗಳಲ್ಲಿಯೇ ಅಧ್ಯಾತ್ಮವನ್ನು ಮನವರಿಕೆ ಮಾಡಿಕೊಟ್ಟು ಬದುಕಿ ನಲ್ಲಿ ಅಧ್ಯಾತ್ಮಿಕ ಚಿಂತನೆಗಳನ್ನು ಅಳವಡಿಸಿಕೊಳ್ಳು ವಂತೆ ಪ್ರಭಾವ ಬೀರಿದವರ ಸಂಖ್ಯೆ ಅತ್ಯಂತ ವಿರಳ. ಅಂತಹ ವಿರಳರಲ್ಲಿ ಸ್ವಾಮಿ ವಿವೇಕಾನಂದರು ಪ್ರಥಮರಾಗಿಯೂ, ಶ್ರೀ ಸಿದ್ದೇಶ್ವರರು ಎರಡನೇ ಯವರಾಗಿ ನಮ್ಮ ಕಣ್ಮುಂದೆ ನಿಲ್ಲುತ್ತಾರೆಂದರೆ ಅತಿಶಯೋಕ್ತಿ ಯಾಗಲಾರದು.

ಸಿದ್ದೇಶ್ವರರು ನೈಜ ಅಧ್ಯಾತ್ಮಿಕ ಚಿಂತನೆಗಳ ಉತ್ತುಂಗ ಶಿಖರದ ಜ್ಞಾನವನ್ನು ತಮ್ಮ ನಿರಂತರ ಅಧ್ಯಯನಶೀಲತೆಯಿಂದ ಅರಗಿಸಿಕೊಂಡಿದ್ದರು. ಜ್ಞಾನದ ತಿರುಳನ್ನು ಚೆನ್ನಾಗಿ ಅರ್ಥಮಾಡಿಕೊಂಡ ವರು ಮಾತ್ರ ಅದನ್ನು ಮತ್ತೊಬ್ಬರಿಗೆ ಅರ್ಥ
ಮಾಡಿಸಬಲ್ಲರು. ತನಗೇ ಪರಿಪೂರ್ಣತೆಯಿಲ್ಲದಾತ ಮತ್ತೊಬ್ಬರಿಗೆ ಹೇಗೆ ತಾನೇ ಅರ್ಥ ಮಾಡಿಸಿಯಾನು? ಸಿದ್ದೇಶ್ವರರು ಅಧ್ಯಾ ತ್ಮಿಕ ಜ್ಞಾನದ ಆಳ ಉದ್ದಗಳೆಲ್ಲವನ್ನೂ ಅರಿತವರಾದುದರಿಂದ ಮತ್ತು ಜನಸಾಮಾನ್ಯನ ಅಧ್ಯಾತ್ಮಿಕ ಉದ್ಧಾರದ ಬಗೆ
ಕಂಕಣಬದ್ಧವಾದ ಅತೀವ ಕಾಳಜಿ ಇದ್ದುದರಿಂದ ಜನಸಾಮಾನ್ಯನ ಆಡುಭಾಷೆಯಲ್ಲಿಯೇ ದೃಷ್ಟಾಂತ ಗಳ ಮೂಲಕ ಅಧ್ಯಾತ್ಮವನ್ನು ಅವಿರತವಾಗಿ ತಮ್ಮ ಬದುಕಿನ ಪೂರ್ಣ ಉಣಬಡಿಸಿದರು, ಅವುಗಳನ್ನು ಜೀರ್ಣಿಸಿಕೊಳ್ಳುವಂತಾಗಿಸಿದರು.

ಅವರ ಸರಳಜೀವನ, ನುಡಿದಂತೆ ನಡೆಯುವ ಬದ್ಧತೆ, ಸರ್ವರ ಉದ್ಧಾರದ ಬಗ್ಗೆ ಅವರಿಗಿದ್ದ ಅದಮ್ಯ ಕಳಕಳಿ, ಎಲ್ಲರನ್ನೂ ಪ್ರೀತಿಸುವ ವಿಶ್ವಮಾನತ್ವ, ನಿರ್ಮೋಹ ಇವೆಲ್ಲ ಗುಣಗಳಿಂದಾಗಿ ಸಿದ್ದೇಶ್ವರರ ವ್ಯಕ್ತಿತ್ವ ಅವರು ಪ್ರಸರಿಸುತ್ತಿದ್ದ ಜ್ಞಾನ  ಕಾರಾರ್ಹ
ಮತ್ತು ಅನುಕರಣೀಯವೆಂದು ಶ್ರೀಸಾಮಾನ್ಯ ನಂಬಿ ಅವರ ಮಾತುಗಳು ಅನುಕರಣೆಯಾಗುತ್ತಿದ್ದವು. ಅನುಕರಣೆಯಾಗುತ್ತಿದ್ದ ಅವರ ಮಾತು ಗಳಿಂದ ಸಾಮಾನ್ಯನ ಸಮಸ್ಯೆಗಳು ದೂರವಾಗುತ್ತಿದ್ದವು. ಬದುಕಿನಲ್ಲಿ ಸಂತೋಷ ಮನೆಮಾಡುತ್ತಿತ್ತು.

ಹೀಗಾಗಿ ಸಿದ್ದೇಶ್ವರರ ಪ್ರಭಾವಳಿಗೆ ಬಂದ ಪ್ರತಿಯೊಬ್ಬರ ಹೃದಯದಲ್ಲಿ ಅವರು ದೇವರಾಗಿ ಪ್ರತಿಷ್ಠಾಪಿತರಾಗುತ್ತಿದ್ದರು. ಅವರ ಬಹುಪಾಲು ಪ್ರವಚನಗಳು ಮನಸ್ಸನ್ನು ಸಕಾರಾತ್ಮಕ ದಿಕ್ಕಿನಲ್ಲಿ ಬೆಳೆಸುವ ಮತ್ತು ನಕಾರಾತ್ಮಕ ದಿಕ್ಕುಗಳಿಂದ ಮನಸ್ಸನ್ನು ವಿಮುಕ್ತಿಗೊಳಿಸುವ ವಿಷಂi ಗಳನ್ನೊಳಗೊಂಡಿರುತ್ತಿದ್ದವು. ಸೂರ್ಯ ಚಂದ್ರ ಮತ್ತು ಭೂಮಿಗಳು ಕೋಟ್ಯಂತರ ವರ್ಷಗಳಿಂದ
ಇದ್ದರೂ ಅವು ಬದಲಾಗಿವೆಯೇ ಎಂದು ಜನಸಾಮಾನ್ಯರನ್ನು ಪ್ರಶ್ನಿಸಿ ಮನುಷ್ಯನ ಮನಸ್ಸು ಮಾತ್ರ ಹೇಗೆ ಬದಲಾಗುತ್ತಿದೆ ಎಂದು ಪ್ರಶ್ನಿಸುತ್ತ, ಮನುಷ್ಯ ಬೇಡವುಗಳಿಗೆ ಮನಸ್ಸನ್ನು ಹೇಗೆ ಅಂಟಿಸಿಕೊಂಡು ದುಃಖತಪ್ತನಾಗುತ್ತಾನೆ ಎಂಬ ವಿಷಯಗಳನ್ನು
ದೃಷ್ಟಾಂತಗಳ ಮುಖಾಂತರ ಮನನ ಮಾಡಿಕೊಟ್ಟು, ಅವುಗಳಿಂದ ವಿಮುಕ್ತಿ ಪಡೆಯುವ ವಿಧಿ ವಿಧಾನಗಳನ್ನು ಸರಳ ಭಾಷೆ ಯಲ್ಲಿ, ಸ್ವಾರಸ್ಯಕರವಾಗಿ ವಿವರಿಸುತ್ತಿದ್ದ ರೀತಿ ಅವರ್ಣನೀಯ.

ಲೋಕ ಮತ್ತು ಸೃಷ್ಟಿಗಳು ಚೆನ್ನಾಗಿಯೇ ಇವೆ, ಸೃಷ್ಟಿಯಲ್ಲಿ ಯಾವುದೂ ಕೆಟ್ಟದ್ದಿಲ್ಲ, ಮನಸ್ಸು ಅವುಗಳನ್ನು ನೋಡುವ ವಿಭಿನ್ನ ರೀತಿಗಳಿಂದ ನಾನಾ ಮನಸ್ಸುಗಳಿಗೆ ಅವು ವಿಭಿನ್ನವಾಗಿ ಕಾಣುತ್ತವೆ ಎಂಬ ವೈಜ್ಞಾನಿಕ ತತ್ತ್ವವನ್ನು ಅವರು ಸಾಮಾನ್ಯರಿಗೆ
ಅರ್ಥಮಾಡಿಸಿ ಲೋಕ ಮತ್ತು ಸೃಷ್ಟಿಯನ್ನು ಒಳ್ಳೆಯ ದೃಷ್ಟಿಯಿಂದ ನೋಡಿ ಸಂತೋಷ ಪಟ್ಟು ಬದುಕನ್ನು ಸಂಭ್ರಮಿಸುವುದು ಹೇಗೆ ಎಂಬುವುಗಳನ್ನು ಮನನ ಮಾಡಿಕೊಡುವ ಅವರ ಪ್ರವಚನಗಳು ಅನುಕರಣೀಯವಾಗುತ್ತಿದ್ದವು.

ಕನ್ನಡ, ಇಂಗ್ಲಿಷ್, ಹಿಂದಿ, ಸಂಸ್ಕೃತ ಭಾಷೆಗಳಲ್ಲಿ ಪ್ರೌಢಿಮೆಗಳಿಸಿದ್ದ ಶ್ರೀಗಳು ಭಾರತೀಯ ಅಧ್ಯಾತ್ಮಿಕ ಜ್ಞಾನಸಂಪತ್ತಿನ ವೇದ, ಉಪನಿಷತ್ತು, ಭಗವದ್ಗೀತೆ ಮತ್ತಿತರ ಗ್ರಂಥಗಳ ಜತೆಗೆ ಪಾಶ್ಚಿಮಾತ್ಯ ಸಾಹಿತ್ಯ ಮತ್ತು ವಿಜ್ಞಾನ ಸಾಹಿತ್ಯದ ನಾನಾ ಪ್ರಕಾರಗಳನ್ನೂ
ಆಳವಾಗಿ ಅಧ್ಯಯನಮಾಡಿದ್ದರು. ಅವರೇ ಸಂಗ್ರಹಿಸಿರುವ ಸುಮಾರು ೧೫ಸಾವಿರಕ್ಕೂ ಹೆಚ್ಚು ಪುಸ್ತಕಗಳುಳ್ಳ ಗ್ರಂಥಾಲಯ ಅವರ ಅಧ್ಯಯನ ಶೀಲತೆಗೆ ಹಿಡಿದ ಕೈಗನ್ನಡಿ.

ಗಳಿಕೆ ಮಾಡಿಕೊಂಡಿದ್ದ ಸಮಗ್ರ ಜ್ಞಾನಕೋಶವನ್ನು ಭಾರತೀಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯ ಸಂಸಾರಗಳ ಅಂಕು ಡೊಂಕುಗಳನ್ನು ತಿದ್ದಲು ನೀಡುತ್ತಿದ್ದ ಪ್ರವಚನಗಳು ಲಕ್ಷಾಂತರ ಸಂಸಾರಗಳ ಬದುಕನ್ನು ಹಸನುಗೊಳಿಸಿವೆ. ಅಂತಿಮ ಯಾತ್ರೆಯಲ್ಲಿ ರೋದಿಸುತ್ತಿದ್ದ ಜನ ಸ್ತೋಮ ನೀಡುತ್ತಿದ್ದ ಕಾರಣಗಳು ಶ್ರೀಗಳು ಮನೆ ಕೊಟ್ಟರು, ತಮ್ಮ ಮಕ್ಕಳಿಗೆ ಸೀಟು ಕೊಟ್ಟರು, ಹಣ ಕೊಟ್ಟರು, ಅನ್ನ ಕೊಟ್ಟರು ಎಂಬುವುಗಳಾಗಿರಲಿಲ್ಲ.

ತಮ್ಮ ಬದುಕನ್ನು ಹಸನಾಗಿಸಲು ಸಲಹೆ ನೀಡಿದರು, ಸಾಂತ್ವನ ಹೇಳಿದರು, ಪ್ರೀತಿಸಿದರು ಎಂಬುವುಗಳಾಗಿದ್ದು, ಅವರ ಮಾರ್ಗದರ್ಶನದಿಂದ ನಾವು ಪರಿವರ್ತನೆ ಹೊಂದಿ ಬದುಕಿನಲ್ಲಿ ಶಾಂತಿ ಕಂಡುಕೊಂಡೆವು, ನಮ್ಮ ಪಾಲಿನ ಅಪ್ಪಾಜಿಯಾಗಿ ದ್ದರು, ದೇವರಾಗಿದ್ದರು ಎಂಬ ಅಂತಃಕರಣದ ಮಾತುಗಳು ನೈಜ ಸಂತನೊಬ್ಬನ ಮಾತುಗಳ ಪ್ರಭಾವಕ್ಕಿರುವ ಶಕ್ತಿಯ ಪ್ರತೀಕ ಗಳಾಗಿದ್ದವು. ಹಣ, ಅಧಿಕಾರ, ಸವಲತ್ತುಗಳನ್ನು ಹಂಚಿ ಜನಮಾನಸದಲ್ಲಿ ಉಳಿಯುತ್ತೇವೆ ಎಂಬ ಭ್ರಮಾಧೀನರಾದ ಇನ್ನಿತರ ಸಂತರು, ಮಠಾಧೀಶರುಗಳು, ರಾಜಕಾರಣಿಗಳು, ಸಮಾಜಸೇವಕರುಗಳಿಗೆ ಶ್ರೀಗಳು ಆದರ್ಶನೀಯರು.

ಶ್ರೀಗಳನ್ನು ನಾನು ಪ್ರಥಮವಾಗಿ ಭೇಟಿ ಮಾಡಿದ್ದು ೨೦೧೩ರಲ್ಲಿ ನನ್ನ ಕೃತಿ ಸಮಗ್ರ ಆರೋಗ್ಯ ದರ್ಶನ ಬರೆಯುವ ಸಮಯದಲ್ಲಿ. ಅಧ್ಯಾತ್ಮಿಕ ಆರೋಗ್ಯವನ್ನು ಪ್ರಧಾನವಾಗಿಟ್ಟು ಕೊಂಡು ಬರೆದ ಆ ಗ್ರಂಥಕ್ಕೆ ಶ್ರೀಗಳು ಮುನ್ನುಡಿ ಬರೆದು ಆಶೀರ್ವದಿಸಿದ್ದರು. ಕೃತಿಯ ಬಗ್ಗೆ ಮುಕ್ತಕಂಠದಿಂದ ಪ್ರಶಂಸಿಸಿ, ವೈದ್ಯಕೀಯ ಕ್ಷೇತ್ರಕ್ಕೆ ಅತ್ಯುನ್ನತ ಕೊಡುಗೆ ಎಂದಿದ್ದರು.

ಶ್ರೀಗಳು ಮಿತಾಹಾರಿ. ನಿರಂತರವಾಗಿ ಶಿಸ್ತುಬದ್ಧವಾದ ಅಧ್ಯಾತ್ಮಿಕ ಜೀವನಶೈಲಿ ಅಳವಡಿಸಿಕೊಂಡವರು. ಸಪೂರ ಶರೀರಿ. ಸದಾ ಹಸನ್ಮುಖಿ. ವ್ಯಾವಹಾರಿಕ ಜಂಜಾಟಗಳಿಂದ ದೂರವಿದ್ದವರು. ಈ ಬಗೆಯ ಸಂತನಿಗೆ ಆಧುನಿಕ ವೈದ್ಯ ವಿಜ್ಞಾನದ ಪ್ರಕಾರ ಯಾವ ಕಾಯಿಲೆಗಳೂ ಬರುವಂತಿಲ್ಲ. ಶತಾಯುಷಿಯಾಗಿಯಾದರೂ ಬದುಕಬೇಕು. ಆದರೆ ಹಾಗಾಗಲಿಲ್ಲ. ಅಂತಿಮದಿನಗಳಲ್ಲಿ
ಪ್ರಾಸ್ಟೇಟ್ ಕ್ಯಾನ್ಸರ್‌ನಿಂದ ಬಳಲಿದರು. ಗೊತ್ತಾದ ಮೇಲೆ ಚಿಕಿತ್ಸೆಯನ್ನು ನಿರಾಕರಿಸಿ ಸಲ್ಲೇಖನ ವ್ರತ ಅನುಸರಿಸಿ ದೇಹತ್ಯಾಗ ಮಾಡಿದರು. ರಾಮಾನುಜರು, ರಾಮಕೃಷ್ಣ ಪರಮಹಂಸರು, ವಿವೇಕಾನಂದರು, ರಮಣಮಹರ್ಷಿಗಳು ಇವರ ಅಂತಿಮ
ದಿನಗಳು ಹೀಗೆಯೇ ಆಗಿವೆ.

ಹುಟ್ಟು ಸಾವುಗಳು ಪೂರ್ವನಿಗದಿತ ಎಂಬುದನ್ನು ಇವು ಪುಷ್ಟೀಕರಿಸುತ್ತವೆಯಲ್ಲವೇ? ಆಸ್ತಿಗಳ ಉತ್ತರದಾಯಕತ್ವಕ್ಕಾಗಿ ಉಯಿಲು ಬರೆಯುವುದು ಸ್ವಾಭಾವಿಕ. ಮಠವಿದ್ದರೂ ಶ್ರೀಗಳು ಅದರ ಟ್ರಸ್ಟಿಯೂ ಅಲ್ಲ, ಉಡುಪಿನಲ್ಲಿ ಕಿಸೆಯಾಗಲಿ, ಬ್ಯಾಂಕಿನ ಖಾತೆಯನ್ನಾಗಲಿ ಹೊಂದಿದವರಲ್ಲ, ಅಪರಿಮಿತವಾದ ಜ್ಞಾನದ ಬ್ಯಾಂಕನ್ನು ಹೊಂದಿದವರಾಗಿದ್ದರು. ಹಾಗಾಗಿ ಜ್ಞಾನದ
ಉಯಿಲನ್ನು ಬರೆದಿಟ್ಟಿದ್ದರು. ಸ್ವತಃ ಲಿಂಗಾಯತ ಕುಟುಂಬದಲ್ಲಿ ಜನಿಸಿದ ಶ್ರೀಗಳಿಗೆ ಬಸವಣ್ಣನ ಪ್ರತಿಮೆಮಾಡಿ, ಅವನ ವಿಚಾರಗಳನ್ನು ದೂರಸರಿಸಿ, ಅವನನ್ನೂ ಜಾತಿ ಧರ್ಮಗಳ ಸಂಕೋಲೆಗೆ ಸಿಲುಕಿಸಿರುವ ಅರಿವಿತ್ತು.

ತಮಗೂ ಹಾಗಾಗಬಾರದೆಂದು ತಮ್ಮ ಸ್ಮಾರಕ ನಿರ್ಮಿಸಬಾರದೆಂದೂ, ‘ನಾನೂ ಇಲ್ಲ ನೀನೂ ಇಲ್ಲ ಯಾರೂ ಇಲ್ಲ ಎಲ್ಲ
ಬಯಲು’ ಎಂಬ ನಿರ್ವಿಕಾರದ ಸಂದೇಶದ ಉಯಿಲನ್ನು ಬರೆದಿಟ್ಟು ಮನುಷ್ಯ ನಿಸರ್ಗದ ಶಿಶು, ಅಂತಿಮವಾಗಿ ಅವನು ಅಲ್ಲಿಯೇ ವಿಲೀನವಾಗಬೇಕೆಂಬ ಅಧ್ಯಾತ್ಮದ ಅಂತಿಮ ಸಂದೇಶವನ್ನು ತಮ್ಮ ಸಾವಿನಲ್ಲಿಯೂ ಸಾರಿ ಹೋದರು.

Read E-Paper click here