Sunday, 24th November 2024

ಸಂಸಾರದಲ್ಲಿ ಸ ರಿ ಗ ಮ

ಧಾರಿಣಿ ಮಾಯಾ

ಇಂದು ಹೆಣ್ಣು ದುಡಿಯುವುದರಲ್ಲಿ ಗಂಡಿಗೆ ಸರಿ ಸಮ ಎನಿಸಿದ್ದಾಳೆ. ಅವಳ ಸಾಮರ್ಥ್ಯವನ್ನು ಗುರುತಿಸಿ, ಗಂಡು ಸಮಾನ ಗೌರವ ನೀಡಿದಾಗ, ಸಂತಸ ನೆಮ್ಮದಿ ತುಂಬಿ ತುಳುಕುತ್ತದೆ.

ದುಡಿಮೆಯೇ ಪುರುಷ ಲಕ್ಷಣಂ ಎಂದು ಹಿಂದೆ ಪುರುಷರು ಮಾತ್ರ ದುಡಿದು ಸಂಪಾದಿಸುತ್ತಿದ್ದರು. ಅವರ ಅರ್ಧಾಂಗಿನಿಯರು  ಮನೆಯ ಜವಾಬ್ದಾರಿಗಳನ್ನೆಲ್ಲಾ ಹೊತ್ತು ನಿಭಾಯಿಸುತ್ತಲೇ, ತಮ್ಮ ಗಂಡನಿಗೆ ಬೆಂಬಲವಾಗಿ ನಿಲ್ಲುತ್ತಿದ್ದರು. ಗಂಡಸರ ವ್ಯವಹಾರಕ್ಕೆ ಅವರು ಎಂದೂ ಮೂಗು ತೂರಿಸುತ್ತಿರಲಿಲ್ಲ. ಹಾಗೆಯೇ, ಗಂಡಸರೂ ಕೂಡ ಹೆಂಗಸರ ಅಡುಗೆ ಮನೆ ವಿಚಾರಕ್ಕೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ.

ಗಂಡು ಹೆಣ್ಣಿನ ಸಮಾನತೆ

ಆದರೀಗ ಕಾಲ ಬದಲಾಗಿದೆ. ಗಂಡು-ಹೆಣ್ಣು ಇಬ್ಬರೂ ಸಮಾನರು ಎಂಬ ವಿಚಾರ ಸರ್ವಮಾನ್ಯ ಎನಿಸಿದೆ. ಓದು, ಜ್ಞಾನ, ವಿದ್ಯಾರ್ಹತೆಯಲ್ಲಿ ಹೆಣ್ಣುಮಕ್ಕಳೂ ಮುಂಚೂಣಿಯಲ್ಲಿದ್ದಾರೆ. ಹಲವಾರು ಕ್ಷೇತ್ರಗಳಲ್ಲಿ ಹೆಣ್ಣು ಮಕ್ಕಳದೇ ಮೇಲುಗೈಯಾಗಿ ರುವುದು ಸಂತಸದ ವಿಷಯ ಕೂಡ. ಕೆಲವು ಹೆಣ್ಣುಮಕ್ಕಳು ತಮ್ಮ ಸಂಸಾರದ ರಥ ಓಡಿಸಲು ದುಡಿಯುವ ಅನಿವಾರ್ಯ ವಿರುತ್ತದೆ, ಇನ್ನು ಕೆಲವರು ಮನೆಯಲ್ಲಿ ವೃಥಾ ಕಾಲಹರಣ ಮಾಡಲು ಮನ ಒಪ್ಪದೆ ಟೈಮ್‌ಪಾಸ್‌ಗಾಗಿ ಕೆಲಸಕ್ಕೆ ಹೋಗುವು ದುಂಟು. ಕಾರಣ ಏನೇ ಇರಲಿ, ಹೆಣ್ಣು ಮನೆಯಲ್ಲಿದ್ದರೂ ಸರಿ, ದುಡಿಯಲು ಹೊಸಿಲು ದಾಟಿದರೂ ಸರಿ, ಅವಳ ಬೆನ್ನ ಹಿಂದೆ ಒಂಟೆಯ ಡುಬ್ಬದ ಹಾಗೆ ಸಂಸಾರದ ಜವಾಬ್ದಾರಿ ಇದ್ದೇ ಇರುತ್ತದೆ. ಮನೆಯ ಒಳಗೂ, ಹೊರಗೂ ಸಂಸಾರದ ಸಮತೋಲನ ವನ್ನು ಕಾಪಾಡಿಕೊಳ್ಳುವುದು ಅವಳ ಆದ್ಯತೆಯಾಗಿರುತ್ತದೆ. ಹೆಣ್ಣುಮಕ್ಕಳ ಜೀವನದ ಒಂದೊಂದು ಘಟ್ಟದಲ್ಲೂ ಆಕೆ ದೈಹಿಕ ಹಾಗು ಮಾನಸಿಕವಾಗಿ ಏರುಪೇರುಗಳನ್ನು ಅನುಭವಿಸುತ್ತಿರುತ್ತಾಳೆ.

ಸ್ಸಾರಿ ಮತ್ತು ಥ್ಯಾಾಂಕ್ಯೂ

ಇಂದು ಗಂಡ, ಹೆಂಡತಿ ಇಬ್ಬರೂ ಹೊರಗೆ ದುಡಿಯುವುದರಿಂದ, ಗಂಡನು ತನ್ನ ಮಡದಿಗೆ ಮನೆಯ ಕೆಲಸದಲ್ಲಿ ಸ್ವಲ್ಪ ಮಟ್ಟಿ ಗಾದರೂ ಹೆಗಲು ಕೊಟ್ಟು ಸಹಕರಿಸಿದರೆ ಆಕೆಗೆ ನಿರಾಳ. ಇದನ್ನರಿಯದೆ, ಅರ್ಥಮಾಡಿಕೊಳ್ಳದೇ, ಹೆಣ್ಣು ಇರುವುದೇ ಮನೆಕೆಲಸ ಮಾಡಲು ಎಂಬ ಧೋರಣೆ ಹೊಂದಿದರೆ, ಆಗ ಗಂಡನು ತನ್ನ ಮಡದಿಯನ್ನು ಎಂದಿಗೂ ಸುಖಿಯಾಗಿಟ್ಟುಕೊಳ್ಳ ಲಾರ. ಈಗ ನೀವು ಕೇಳಬಹುದು ಹಿಂದಿನ ಕಾಲದಲ್ಲಿ ಗಂಡ- ಹೆಂಡತಿ ಸುಖ, ನೆಮ್ಮದಿಯಿಂದ ಇರುತ್ತಿರಲಿಲ್ಲವೇ ಎಂದು? ಆದರೆ ನಾನು ಮಾತನಾಡುತ್ತಿರುವುದು 21ನೇ ಶತಮಾನದ ದುಡಿಯುವ ಮಹಿಳೆಯ ಬಗ್ಗೆೆ. ಸಂಸಾರ ರಥ ಸುಗಮವಾಗಿ ಸಾಗಲು ಇಬ್ಬರೂ ದುಡಿಯುವುದರಿಂದ ಹೊಂದಾಣಿಕೆ ಮತ್ತು ಅನ್ಯೋನತೆಗೆ ಅವರು ಮೊದಲ ಸ್ಥಾನ ಕೊಡಬೇಕು.

ಗಂಡ-ಹೆಂಡತಿ ಅಂದ ಮೇಲೆ ಪ್ರೀತಿ-ಸರಸ-ಜಗಳ ಇದ್ದದ್ದೇ. ಆದರೆ ಜಗಳ-ಕಾದಾಟಗಳು ಮಿತಿಯಲ್ಲಿರಬೇಕು. ಸ್ಸಾರಿ ಮತ್ತು ಥ್ಯಾಾಂಕ್ಯೂ ಎಂಬ ಪದಗಳಿಗೆ ಮಾಂತ್ರಿಕ ಶಕ್ತಿ ಇದೆ.  ಈ ಎರಡೂ ಪದಗಳು ಆಗಾಗ್ಗೆ ಅವರೀರ್ವರ ಮಧ್ಯೆ ವಿನಿಮಯವಾದಾಗ ಮಾತ್ರ ಅವರಲ್ಲಿನ ಅಹಂ ಕಡಿಮೆಯಾಗಿ ಸಂಸಾರ ಸುಸೂತ್ರವಾಗಿ ನಡೆಯಲು ಸಾಧ್ಯ. ಇಲ್ಲವಾದರೆ ಗಂಡ-ಹೆಂಡಿರ ಜಗಳದಲ್ಲಿ ಕೂಸು ಬಡವಾಗುವುದು ಖಂಡಿತ. ಅಪ್ಪ ಅಮ್ಮನ ಗುದ್ದಾಟಕ್ಕೆ ಮಕ್ಕಳು ಮಾನಸಿಕವಾಗಿ ನರಳುತ್ತಾರೆ. ಪ್ರೀತಿಯಿಂದ ವಂಚಿತರಾಗಿ
ಸೊರಗುತ್ತಾರೆ; ಖಿನ್ನತೆಗೊಳಗಾಗುತ್ತಾರೆ. ಅಷ್ಟಕ್ಕೇ ನಿಲ್ಲದೆ, ಇದೆಲ್ಲದರಿಂದ ದೂರ ಸರಿಯಲು ತಪ್ಪು ದಾರಿ ಹಿಡಿದು ದುಶ್ಚಟಗಳಿಗೆ ಬಲಿಯಾಗುವ ಸಾಧ್ಯತೆ ಇರುತ್ತದೆ.

ಬದಲಾದ ಕಾಲಘಟ್ಟ

ಈಗ ಹೆಣ್ಣುಮಕ್ಕಳು ಪುರುಷರು ಹೆಜ್ಜೆ ಇಟ್ಟ ಕ್ಷೇತ್ರಗಳಲ್ಲೆೆಲ್ಲಾ ತಾವೂ ಲಗ್ಗೆ ಇಟ್ಟು ಜಯ ಸಾಧಿಸುತ್ತಿದ್ದಾರೆ. ಅವಳ ಆಶೋತ್ತರ ಗಳಿಗೆ, ಏಳ್ಗೆಗೆ ಅವಳ ಸಂಸಾರ ನಿರಂತರವಾಗಿ ಬೆಂಬಲಿಸಿದಲ್ಲಿ ಅವಳ ಆತ್ಮವಿಶ್ವಾಸ ಮತ್ತಷ್ಟೂ ಹೆಚ್ಚುವುದು. ಇಂದು ಸಾಕಷ್ಟು ಸಂಸಾರಗಳು ತಮ್ಮ ಮನೆಯ ಹೆಣ್ಣುಮಕ್ಕಳ ಆತ್ಮಸ್ಥೈರ್ಯವನ್ನು ಅರ್ಥ ಮಾಡಿಕೊಂಡು ಅದಕ್ಕೆ ಮನ್ನಣೆ ನೀಡುತ್ತಿರುವುದು ಸಂತಸದ ವಿಷಯ. ಸ್ತ್ರೀ ತನ್ನ ಸಾಧನೆಯಿಂದ ನಮ್ಮ ದೇಶದ ಕೀರ್ತಿಯ ಪತಾಕೆಯನ್ನು ಹಾರಿಸುವ ಮಟ್ಟಕ್ಕೆ ಬೆಳೆದು ಪ್ರಪಂಚವೇ ಬೆರಗುಗೊಳ್ಳುವಂತೆ ಮಾಡಬಲ್ಲಳು. ಇವಳ ಸಾಮರ್ಥ್ಯದ ಅರಿವು ಮಾಡಿಕೊಂಡು ಗಂಡ ಹಾಗು ಮನೆಮಂದಿ ಈಕೆಗೆ ಸಾಥ್ ಕೊಟ್ಟರೆ, ಪ್ರತಿ ಮನೆಯ ಸಂಸಾರವೂ ಸ ರಿ ಗ ಮ. ಪ್ರತಿ ಮನೆಯಲ್ಲೂ ಸಾಮರಸ್ಯದ ಸಂಗೀತ.