Sunday, 24th November 2024

ಮೌನ ಎಂಬ ಮಂತ್ರ

ರಶ್ಮಿ ಹೆಗಡೆ, ಮುಂಬೈ

ಮೌನವು ಬಂಗಾರ ಎನ್ನುತ್ತಾರೆ. ಕುಟುಂಬದಲ್ಲಿ ಅಳವಡಿಸಿಕೊಳ್ಳುವ ಸಮಯೋಚಿತ ಮೌನದ ಬೆಲೆ ಬಂಗಾರಕ್ಕಿಂತ ಹೆಚ್ಚು!

ಪತಿ ಪತ್ನಿಯ ನಡುವೆ ಚಿಕ್ಕ ಪುಟ್ಟ ವಿಷಯಕ್ಕೂ ಸದಾ ಜಗಳವಾಗುತ್ತಿತ್ತು. ಸೋಲುವ ಮನಸ್ಸು ಒಬ್ಬರೂ ಮಾಡುತ್ತಿರಲಿಲ್ಲ. ಇದರಿಂದ ಬೇಸತ್ತ ಸೊಸೆ ಒಮ್ಮೆ ಗುರೂಜಿಯವರನ್ನು ಭೇಟಿಯಾಗಿ, ‘‘ಗುರೂಜಿ, ಮನೆಯಲ್ಲಿ ಗಂಡ, ಅತ್ತೆ ಹಾಗೂ ಮಾವನವರ ಜೊತೆ ದಿನವೂ ಜಗಳವಾಗುತ್ತೆ. ಇದರಿಂದ ನನ್ನ ನೆಮ್ಮದಿ ಹಾಳಾಗಿದೆ. ಏನಾದರೂ ಪರಿಹಾರ ಸೂಚಿಸಿ’’ ಎಂದು ತನ್ನ ಕಷ್ಟವನ್ನು ತೋಡಿಗೊಂಡಳು.

‘‘ಮಗೂ, ಒಂದು ಮಡಿಕೆಯಲ್ಲಿ ಪವಿತ್ರ ಜಲವನ್ನು ಕೊಡುತ್ತೇನೆ. ಯಾರಾದರೂ ಕ್ಷುಲ್ಲಕ ಕಾರಣಕ್ಕಾಗಿ ವಾದಕ್ಕಿಳಿದರೆ ಈ ಜಲವನ್ನು ಬಾಯಲ್ಲಿ ತುಂಬಿಕೋ. ಜಗಳ ನಿಂತ ಮೇಲೆ ಆ ನೀರನ್ನು ನುಂಗಿಬಿಡು. ಕ್ರಮೇಣ ಜಗಳ, ಮನಸ್ತಾಪಗಳು ಕ್ಷೀಣಿಸುತ್ತ ಬರುವವು. ಮಡಿಕೆಯಲ್ಲಿನ ಜಲ ಖಾಲಿಯಾದಾಗ ಮತ್ತೆ ನನ್ನನ್ನು ಬಂದು ಕಾಣು’’ ಎಂದು ಒಂದು ಮಡಿಕೆಯಲ್ಲಿ ಪವಿತ್ರಜಲ ವನ್ನು ತುಂಬಿಕೊಟ್ಟು, ಆಶೀರ್ವದಿಸಿ ಕಳುಹಿದರು.

ನೀರು ಮಾಡಿದ ಪವಾಡ

ಗುರೂಜಿ ಹೇಳಿದಂತೆಯೇ ಯಾರಾದರೂ ಬೈದಾಗ, ವಿನಾಕಾರಣ ವಾದಕ್ಕಿಳಿದಾಗ ಆಕೆ ತಕ್ಷಣ ಬಾಯಲ್ಲಿ ನೀರು ತುಂಬಿಕೊಳ್ಳು ತ್ತಿದ್ದಳು. ‘‘ನಾನೇನು ಕಡಿಮೆಯೇ! ಇವರಿಗೆ ನಾನಾರೆಂದು ತೋರಿಸ್ತೀನಿ’’ ಎಂದು ಪ್ರತ್ಯುತ್ತರ ನೀಡುವ ಮನಸ್ಸಾದರೂ ಬಾಯ ಲ್ಲಿಯ ನೀರು ಅದನ್ನು ತಡೆಯುತ್ತಿತ್ತು. ಒಂದೇ ಕೈಯಿಂದ ಚಪ್ಪಾಳೆ ಹೇಗೆ ಸಾಧ್ಯವಿಲ್ಲವೋ ಹಾಗೆಯೇ ಎದುರಿನವರು ಅದೆಷ್ಟು ವಾದಮಾಡಲು ಸಾಧ್ಯ! ಬೈಯುವುದೆಲ್ಲ ನಿಂತ ಮೇಲೆ ನೀರನ್ನು ನುಂಗಿಬಿಡುತ್ತಿದ್ದಳು. ಆಕೆ ಸುಮ್ಮನಿರುತ್ತಿದ್ದಳೇ ಹೊರತು ತುಟಿ ಮಾತ್ರ ಬಿಚ್ಚುತ್ತಿರಲಿಲ್ಲ.

ಆಕೆಯ ತಾಳ್ಮೆ ಹಾಗೂ ಹೊಸ ವೈಖರಿ ಕಂಡು ಮನೆಯವರು ತಾವಾಗಿಯೇ ಶಾಂತವಾಗತ್ತಿದ್ದರು. ದಿನಗಳುರುಳಿದಂತೆ ಮನೆಯ ವಾತಾವರಣವೇ ಬದಲಾಯಿತು.‘‘ಇಷ್ಟು ಬೈದರೂ, ಜಗಳವಾಡಿದರೂ ಸೊಸೆ ನನಗೆ ಎದುರಾಡದೆ ಸುಮ್ಮನಿರುತ್ತಾಳೆ. ಅದೆಷ್ಟು ಒಳ್ಳೆಯವಳು, ಶಾಂತಸ್ವಾಭಾವದವಳು ನನ್ನ ಸೊಸೆ ! ನಾನೇ ಆಕೆಯನ್ನು ಕೆಟ್ಟದಾಗಿ ನಡೆಸಿಕೊಂಡೆ’’ ಎಂದು ಸದಾ ಬೈಯುವ ಅತ್ತೆ ಬದಲಾದಳು. ಗಂಡನೂ ಸಹ ತನ್ನನ್ನು ತಾನು ತಿದ್ದಿಕೊಳ್ಳುತ್ತ ಬಂದ. ಕ್ರಮೇಣ ಈಕೆಗೂ ತಾಳ್ಮೆ ಹಾಗೂ ಮೌನ ಅಭ್ಯಾಸ ವಾಗಿ ಹೋಯಿತು. ಮನೆಯಲ್ಲಿ ಹೊಂದಾಣಿಕೆ, ಪ್ರೀತಿ, ವಿಶ್ವಾಸ ನೆಲೆಸತೊಡಗಿತು.  ಪವಿತ್ರ ಜಲ ಅತ್ಯುತ್ತಮವಾಗಿ ಕೆಲಸ ಮಾಡಿದೆಯೆಂದು ಸಂತೋಷದಿಂದ ಖಾಲಿಯಾದ ಮಡಿಕೆಯನ್ನು ತುಂಬಿಸಿಕೊಳ್ಳಲು ಗುರುಗಳಿದ್ದಲ್ಲಿಗೆ ನಡೆದಳು. ‘‘ಗುರೂಜಿ, ನೀವು ಕೊಟ್ಟ ಪವಿತ್ರ ಜಲ ಅದ್ಭುತವಾದ ಪರಿಣಾಮ ನೀಡಿದೆ. ಇನ್ನೊೊಂದು ಮಡಿಕೆಯಲ್ಲೂ ತುಂಬಿಕೊಡಿ, ಮನೆಯಲ್ಲಿ ಮನಸ್ತಾಪವೆಂಬುದೇ ಇರುವುದಿಲ್ಲ’’ ಎಂದು ಬೇಡಿಕೊಂಡಳು.

ಗುರೂಜಿ ಮುಗುಳುನಗುತ್ತ, ‘‘ಮಗು, ಅದು ಯಾವ ಪವಿತ್ರ ಜಲವೂ ಅಲ್ಲ, ಸಾಮಾನ್ಯವಾದ ನೀರು. ಇನ್ನೊಬ್ಬರು ನಿನ್ನೊೊಂದಿಗೆ
ಜಗಳಕ್ಕಿಳಿದಾಗ, ಶಾಂತವಾಗಿರಲು ಆ ನೀರು ನಿನಗೆ ಸಹಾಯ ಮಾಡಿತಷ್ಟೇ. ತಾಳ್ಮೆ, ಬುದ್ಧಿವಂತಿಕೆ ಹಾಗೂ ಮೌನವೆಂಬ ಶಕ್ತಿ
ನಿನ್ನಲ್ಲಿಯೇ ಇದೆ. ಸರಿಯಾದ ಸಮಯದಲ್ಲಿ ಅವನ್ನು ಉಪಯೋಗಿಸುವುದು ನಿನ್ನ ಕೈಯಲ್ಲಿದೆ’’ ಎಂದರು. ‘‘ಮೌನೇನ ಕಲಹಂ ನಾಸ್ತಿ’’ ಕೆಲವರು ಈ ಸುಭಾಷಿತವನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಿದೆ. ಜೀವನವಿಡೀ ಮಾತು ಕತೆಯಿಲ್ಲದೆ ಮೌನಿಯಾದರೆ ಸಂಸಾರದಲ್ಲಿ ನೆಮ್ಮದಿ ಹೇಗೆ ಸಿಕ್ಕೀತು ಎನ್ನುವವರೂ ಇದ್ದಾರೆ. ಮೌನವೆಂಬುದು ಯುದ್ಧ ತಂತ್ರವಿದ್ದಂತೆ. ಉದ್ವೇೇಗದ ಮಾತಿನ ಚಕಮಕಿಯಲ್ಲಿ ಬುದ್ಧಿವಂತಿಕೆಯಿಂದ ಉಪಯೋಗಿಸಿ ಗೆಲ್ಲುವ ಸಾಧನ ಈ ಮೌನ.

ಅಗತ್ಯವಿದ್ದಾಗ ಮಾತನಾಡಬೇಕು

ಗಂಡ- ಹೆಂಡತಿ, ಅತ್ತೆ -ಸೊಸೆ ಅಥವಾ ಒಡನಾಡಿಗಳು ನಮ್ಮ ತಪ್ಪಿಲ್ಲದಿದ್ದರೂ ಅಪವಾದ ಹೊರಿಸಿ ಜಗಳವಾಡಿದಾಗ ಸುಮ್ಮ ನಿದ್ದು ಸಹಿಸಬೇಕೆಂದಿಲ್ಲ. ಅನ್ಯಾವನ್ನೆಸಗುವುದಕ್ಕಿಿಂತ ದೊಡ್ಡ ಅಪರಾಧ ಅನ್ಯಾಯವನ್ನು ಸಹಿಸುವುದು. ಹಾಗಂತ ಧ್ವನಿ ಯೇರಿಸಿ ಜಗಳಕ್ಕೆ ನಿಲ್ಲಬೇಕೆಂದಿಲ್ಲ. ತಾಳ್ಮೆಯಿಂದ ಜೊತೆ ಕುಳಿತು ಮಾತನಾಡಿದಾಗ ಸಮಸ್ಯೆೆಗೆ ಪರಿಹಾರ ಖಂಡಿತ ಸಿಗಬಲ್ಲದು. ಅದಕ್ಕೂ ಸಾಧ್ಯವಾಗದಿದ್ದಾಗ ತೀಕ್ಷ್ಣವಾದ ನೇರನುಡಿ ಅನಿವಾರ್ಯ.

ಕೆಲವೊಮ್ಮೆ ಹೀಗೂ ಆಗುವುದಿದೆ. ನಾವು ಕಷ್ಟಪಟ್ಟು ಮಾಡಿದ ಅಡುಗೆಯನ್ನು ಮನೆಮಂದಿ ಟೀಕಿಸಿದಾಗ ಮನಸಿಗೆ ನೋವಾಗಿ,
ಕೋಪಬರುವುದು ಸಹಜ. ಆದರೆ ಅದನ್ನೇ ದೊಡ್ಡ ವಿಷಯವನ್ನಾಗಿಸಿ ವಾದಮಾಡುವುದು ತಪ್ಪು. ಅಂಥ ಸಮಯದಲ್ಲಿ
ಸುಮ್ಮನೆ ನಕ್ಕು ಮೌನವಾಗಿರುವುದೇ ವಾಸಿ. ತಪ್ಪು ಮಾಡಿದವರಿಗೆ ತಿದ್ದಿಕೊಳ್ಳುವ ಅವಕಾಶ ಕೊಡುವುದು ಒಳಿತಲ್ಲವೇ! ನಮ್ಮ
ಮೌನವೇ ಎದುರಿಗಿನವರಿಗೆ ಬುದ್ಧಿ ಕಲಿಸುವಂತಿರಬೇಕು. ಅದೆಷ್ಟೋ ಬಾರಿ ಮಾತು ಮಾಡದ ಮ್ಯಾಜಿಕನ್ನು ಮೌನ ಮಾಡಿ
ತೋರಿಸಬಲ್ಲದು.

ತಂಗಾಳಿಯಂತಹ ಮಾತು 

ಅವಶ್ಯವಿದ್ದಲ್ಲಿ ಒಂದೊಳ್ಳೆಯ ಮಾತು ತಂಗಾಳಿಯಂತೆ ಮನಸ್ಸಿಗೆ ಹಿತನೀಡುತ್ತದೆ. ಜಗಳದ ಮನಸ್ಸಿದ್ದವನೂ ಕರಗಿ ಬಿಡುತ್ತಾನೆ. ಮಾತನಾಡುವ ರೀತಿ, ಹಾವ ಭಾವ, ಸಮಯ ಸಂಧರ್ಭ ಇವೆಲ್ಲಾ ಮುಖ್ಯ. ಮಾತು ಬೆಳ್ಳಿ, ಮೌನ ಬಂಗಾರ. ಮಾತಿಗಿಂತ ಮಿಗಿಲಾದುದು ಮೌನ. ಕೊಂಕು ನುಡಿ, ಬೈಗುಳ, ವಾಚಾಳಿತನದ ಮಾತುಗಳು ಆಡಿದವರ ಮನಸ್ಸಿಗೆ ಆ ಕ್ಷಣದ ಸಮಾಧಾನ, ಸಂತೋಷ ಕೊಟ್ಟೀತೇ ಹೊರತು ದೀರ್ಘಕಾಲೀನ ನೆಮ್ಮದಿ ಕೊಡಲಾರದು.

ಸಂಸಾರವೆಂದಾಗ ನೂರೆಂಟು ಮಾತುಗಳು ಬಂದು ಹೋಗುತ್ತವೆ. ಮಾತನ್ನು ಬೀಳಲು ಕೊಡದೆ ಅದನ್ನೆೆತ್ತಿ ಮತ್ತೆ ಎಸೆದಾಗ ಎದುರಾಗುವುದು ಮಹಾ ಯುದ್ಧ. ಮನೆಯ ಪ್ರೀತಿಯ ಸದಸ್ಯ ಯೋಚಿಸಿ, ಅಳೆದು, ತೂಗಿ  ಮಾತನಾಡಿದಾಗ ಆ ಮಾತಿಗೆ ಬೆಲೆ
ಹೆಚ್ಚು. ಮನೆಯ ಯಾವುದೇ ಸದಸ್ಯನಾದರೂ ಅಪೇಕ್ಷಿಸುವುದು ಪ್ರೀತಿ, ವಿಶ್ವಾಸ ಹಾಗೂ ಸಾಂತ್ವನ ತುಂಬಿದ ಮಾತುಗಳನ್ನೇ
ಹೊರತು ಅವಹೇಳನ, ಸ್ವಯಂ ಹೊಗಳಿಕೆ, ದ್ವೇೇಷ ಅಸೂಯೆ, ಬೈಗುಳ ಅಲ್ಲ. ಸಿಹಿ ಇದ್ದಲ್ಲಿ ಹೇಗೆ ಇರುವೆಗಳು ಮುತ್ತುವವೋ
ಅದೇ ರೀತಿ ಒಂದು ಕುಟುಂಬದಲ್ಲಿ ಯಾರು ಸೌಮ್ಯವಾಗಿ, ಯಾರ ಮನಸ್ಸಿಗೂ ನೋವನ್ನುಂಟು ಮಾಡದೆ ಮಾತನಾಡುವರೋ
ಅವರನ್ನೇ ಹೆಚ್ಚು ಇಷ್ಟ ಪಡುತ್ತಾರೆ. ಅವರು ನಾವೇ ಯಾಕಾಗಬಾರದು? ಹಾಗೆಂದ ಮಾತ್ರಕ್ಕೆ ಮೌನ ದಡ್ಡತನದ ಪ್ರತೀಕವಲ್ಲ, ಜಾಣ್ಮೆೆಯ ಒಂದು ಮುಖ. ಯಾವುದೇ ವಾದ ಪ್ರತಿವಾದ ಕೆಲಸ ಮಾಡದಿದ್ದಾಗ ಮೌನಕ್ಕೆ ಶರಾಣಾಗುವುದೊಳಿತು.

ಸಂಸಾರದಲ್ಲಿಯ ಅರ್ಥವಿಲ್ಲದ ವಾದಕ್ಕೆೆ ಮೌನವೇ ಸರಿಯಾದ ಉತ್ತರ. ದಾಂಪತ್ಯ ಜೀವನ ನೆಮ್ಮದಿಯಿಂದಿರಲು, ‘‘ಕಡಿಮೆ
ಮಾತಾಡಿ, ಹೆಚ್ಚು ಆಲಿಸಿ’’ ಎನ್ನುವ ಮಂತ್ರ ಸಾರ್ವಕಾಲಿಕ ಸತ್ಯ.

ಕುಟುಂಬದಲ್ಲಿ ಸಾಮರಸ್ಯ

ಮಾತಿನ ಅವಶ್ಯವಿಲ್ಲದಿದ್ದಲ್ಲಿ ಮೌನವೇ ಸರಿಯಾದ ದಾರಿ.ಕುಟುಂಬವೆಂಬುದು ಕಾಮನಬಿಲ್ಲಿನಲ್ಲಿಯ ವಿವಿಧ ಬಣ್ಣಗಳ ಸಂಗಮವಿದ್ದಂತೆ. ಹೇಗೆ ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಗುವುದೋ ಹಾಗೆಯೇ, ಹಲವು ಮನಸುಗಳು ಸೇರಿ ಒಂದಾದರೇನೇ ಸುಖ, ಶಾಂತಿ ನೆಮ್ಮದಿ. ಸಂಸಾರವೆಂದ ಮೇಲೆ ಸಣ್ಣ ಪುಟ್ಟ ಅಹಿತಕರ ಮಾತು ಬಂದು ಹೋಗುವುದು ಸಹಜ. ರಬ್ಬರಿನಂತೆ ಅದೇ ಮಾತನ್ನು ಎಳೆಯುತ್ತ ಹೋದಲ್ಲಿ ಅಸಮಾಧಾನ, ಜಗಳ, ಮನಸ್ತಾಪ ಹೆಚ್ಚುವುದೇ ಹೊರತು ಕಡಿಮೆಯಾಗದು. ಆಡಿದ ಮಾತಿಗೆ
ಮುಯ್ಯಿಗೆ ಮುಯ್ಯಿ ತೀರಿಸಲು ಹೊರಟರೆ ಅದು ಮುಗಿಯದ ಕತೆ.

ತಿಳಿದೋ ತಿಳಿಯದೆಯೋ ಆಡಿದ ಮಾತನ್ನು ಅಲ್ಲಿಯೇ ಮೊಟುಗೊಳಿಸಿದಾಗ ಪರಿಸ್ಥಿತಿ ವಿಕೋಪಕ್ಕೆ ತೆರಳದು. ಒಂದು ವೇಳೆ ಮನಸ್ಸಿಗೆ ನೋವುಂಟು ಮಾಡುವ ಮಾತು ಕೇಳಿ ಬಂದಲ್ಲಿ ತಾಳ್ಮೆಯಿಂದಿದ್ದು, ಮೌನವಹಿಸಿ ಒಂದು ಕಿವಿಯಲ್ಲಿ ಕೇಳಿ
ಇನ್ನೊಂದು ಕಿವಿಯಿಂದ ಹೊರಹಾಕುವುದೊಳಿತು. ಹಾಗೆಂದ ಮಾತ್ರಕ್ಕೆ ಯಾರಾದರೂ ನಮ್ಮ ಬಗ್ಗೆ ಇಲ್ಲ ಸಲ್ಲದ್ದನ್ನು ಮಾತಾಡಿದಾಗ ಸಹಿಸಿಕೊಂಡು ಸುಮ್ಮನಿರಬೇಕೆಂದಲ್ಲ. ಅಂತಹ ಸಂದರ್ಭದಲ್ಲಿ ಉತ್ತರ ನೀಡುವಾಗಲೂ ತಾಳ್ಮೆ ವಹಿಸಿದರೆ, ತಪ್ಪು ತಿಳಿವಳಿಕೆಯು ತಿಳಿಯಾಗುವುದು, ಸಂಸಾರದಲ್ಲಿ ಸಂತಸ ಮುಂದುವರಿಯುವುದು.