ತಿರುವನಂತಪುರಂ: ಪ್ರಸಾದವಾಗಿ ಸ್ವೀಕರಿಸುವ ಶಬರಿಮಲೆ ಅಯ್ಯಪ್ಪಸ್ವಾಮಿ ಅರವಣ ಪಾಯಸಂ ಪ್ರಸಾದದ ಮಾರಾಟಕ್ಕೆ ಕೇರಳ ಹೈಕೋರ್ಟ್ ನಿಷೇಧ ಹೇರಿದೆ.
ಪ್ರಸಾದವೆಂದು ಸ್ವೀಕರಿಸುತ್ತಿದ್ದ ಅಯ್ಯಪ್ಪಸ್ವಾಮಿ ಪ್ರಸಾದಕ್ಕೆ ಬಳಕೆ ಯಾಗುವ ಏಲಕ್ಕಿಯನ್ನು ತಪಾಸಣೆಗೆ ಒಳಪಡಿಸಿದಾಗ ಅಸುರಕ್ಷಿತ ಕೀಟನಾಶಕದ ಪ್ರಮಾಣವು ಅಪಾಯಕಾರಿ ಮಟ್ಟದಲ್ಲಿರುವುದು ಪತ್ತೆ ಯಾಗಿದೆ. ಈ ಹಿನ್ನೆಲೆ ಕೇರಳ ಹೈಕೋರ್ಟ್ನ ಆದೇಶ ನೀಡಿದ್ದು, ಶಬರಿಮಲೆ ಮೈದಾನದಲ್ಲಿ ಅರವಣ ಪಾಯಸಂ ಮಾರಾಟ ಸಂಪೂರ್ಣ ಸ್ಥಗಿತಗೊಂಡಿದೆ.
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್ಎಸ್ ಎಸ್ಎಐ) ಸಂಶೋಧನೆಗಳ ಆಧಾರದ ಮೇಲೆ ನ್ಯಾಯಾಲಯವು ತಿರುವಾಂಕೂರು ದೇವಸ್ವಂ ಮಂಡಳಿಗೆ (ಟಿಡಿಬಿ) ಪ್ರಸಾದ ಮಾರಾಟ ಮಾಡದಂತೆ ಆದೇಶವನ್ನು ನೀಡಿತು.
ನ್ಯಾಯಮೂರ್ತಿ ಅನಿಲ್ ಕೆ ನರೇಂದ್ರನ್ ಮತ್ತು ನ್ಯಾಯಮೂರ್ತಿ ಪಿ ಜಿ ಅಜಿತ್ಕುಮಾರ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ಆದೇಶ ನೀಡಿತ್ತು.
ಏಲಕ್ಕಿ ಇಲ್ಲದೆ ಪ್ರಸಾದವನ್ನು ತಯಾರಿಸುವುದಕ್ಕೆ ಈ ಆದೇಶವು ಅಡ್ಡಿಯಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
350 ಕೆಜಿ ಅಕ್ಕಿ, ಬೆಲ್ಲದಂತಹ ಪದಾರ್ಥಗಳನ್ನು ಒಳಗೊಂಡಿರುವ ಅರವಣ ಪ್ರಸಾದಕ್ಕೆ 720 ಗ್ರಾಂ ಏಲಕ್ಕಿಯನ್ನು ಮಾತ್ರ ಬಳಸಲಾಗುತ್ತದೆ ಎಂದು ಟಿಡಿಬಿ ವಕೀಲರು ಹೈಕೋರ್ಟ್ಗೆ ತಿಳಿಸಿದ್ದರು.
ಗುರುವಾರದಿಂದಲೇ ಏಲಕ್ಕಿ ರಹಿತ ಅರವಣ ಪ್ರಸಾದ ವಿತರಣೆ ಆರಂಭವಾಗಲಿದೆ ಎಂದು ಟಿಡಿಬಿ ಅಧ್ಯಕ್ಷ ಕೆ.ಅನಂತ ಗೋಪನ್ ಪ್ರಕಟಿಸಿದ್ದಾರೆ.