ಅಲೆಮಾರಿಯ ಡೈರಿ
mehandale100@gmail.com
ನಾವು ನೀವೆಲ್ಲ ಇಂಗ್ಲಿಷ್ ಚಲನಚಿತ್ರ ನೋಡುವಾಗ ಕಾಣಿಸುವಂತೆ ತರಹೇವಾರಿ ಸೆಟ್ಟಿಂಗ್ ಹಾಕಿ, ಕುದುರೆ ಓಡಿಸುವುದೇನು,
ಅಲ್ಲಲ್ಲಿ ಕುರಿಗಳ ಬಣ್ಣದ ಅಂಡಿನ ಹಿಂಡು ತೋರಿಸುವುದೇನು, ದೊಡ್ಡ ಗಾತ್ರದ ಗಾಳಿಯಂತ್ರ ಮನೆಯ ಪಕ್ಕದಲ್ಲೆ ಕೆಲವೊಮ್ಮೆ
ಬಾಗಿಲ ಬಳಿಯೇ ತಿರುವುಗುವುದೇನು, ಕುದುರೆ ಓಡಾಡಲೆಂದೇ ಒಂದು ರಿಂಗ್ ರೀತಿಯ ಬೇಲಿ ಹಾಕಿದ ಜಾಗದಲ್ಲಿ ಬಣ್ಣದ ಕುದುರೆ ಟಿವಿಯಿಂದ ಮೆರೆಯುವುದೇನು, ಸಾಲು ಸಾಲಾಗಿ ನಾಯಿಗಳಿಗೂ ಒಂದು ಚೂಪು ಮಾಡಿನ ಮುಗಿಲಿಗೆ ಮುಖ ಮಾಡಿದ ಪುಠಾಣಿ ಅರಮನೆ ಕಟ್ಟಿ ತೋರಿಸುವುದೇನು, ಅದರ ಹಿಂಭಾಗಕ್ಕೆ ಕ್ಯಾಮೆರಾ ಒಯ್ದಾಗ ಉದ್ದಾನು ಉದ್ದದ ಪಟ್ಟಿ ಯಂತೆ ಗೋಚರಿಸುವ, ನಿಗದಿತವಾಗಿ ಎಲ್ಲ ಭತ್ತಗಳೂ ನಾಲ್ಕೇ ಇಂಚು ಬೆಳೆದು ತಲೆ ಎತ್ತಬೇಕು ಎನ್ನುವ ರೀತಿಯಲ್ಲಿ ಅತ್ಯಂತ ಶಿಸ್ತಿನ ಹೊಲವೊಂದನ್ನು ತೋರಿಸುವಾಗ, ಅಲ್ಲೆ ಅಷ್ಟು ದೂರದಲ್ಲಿ ಎತ್ತರದ ಕಟು ಮಸ್ತಾದ ಯಜಮಾನನೊಬ್ಬ ದೊಡ್ಡ ಯಂತ್ರದ ಮೂಲಕ ಅಥವಾ ಟ್ರಾಕ್ಟರ್ ಒಂದನ್ನು ಚಲಾಯಿಸುವ ದೃಶ್ಯ ನೋಡೂವಾಗ ಹೆ.. ಹೆ.. ಇದೆಲ್ಲ ಚಿತ್ರಕ್ಕಾಗಿ ಮಾಡಿದ ಸೆಟ್ಟಿಂಗ್ ಬಿಡಿ, ಎಲ್ಲ ಬಂಡಲ್ ಎಂದುಕೊಂಡಿ ರುತ್ತೇವಲ್ಲ, ಅದೆಲ್ಲ ಸುಳ್ಳು ಮಾಡಿದ್ದು ನನ್ನ ಬ್ರಿಟಿಷ್ ನೆಲದ ಹಳ್ಳಿಗಳ ಭೇಟಿಯ ಸಮಯದಲ್ಲಿ.
ಇಂಗ್ಲೆಂಡ್ ಈಸ್ ಇಂಗ್ಲೆಂಡ್.. ಉಳಿದೇನೆ ಅವರನ್ನು ನಾವು ತೆಗಳಲಿ, ಭಾರತವನ್ನು ಕೊಳ್ಳೆ ಹೊಡೆದವರು ಎನ್ನಿ, ಆದರೆ ಆ ಶಿಸ್ತು ಮತ್ತು ಆ ಪ್ರಾಮಾಣಿಕತೆ ರೂಢಿ ಮಾಡಿಕೊಂಡಿರದಿದ್ದರೆ ಏನೆಂದರೆ ಏನೂ ಟೆಕ್ನಾಲಜಿ, ಇರದೇ ಇದ್ದಾಗಲೂ ಕೇವಲ ತುದಿ ಬುಡ ತಿಳಿಯದ ಸಮುದ್ರ ಮೇಲೆ, ಕೇವಲ ಗಣಿತ ಲೆಕ್ಕಾಚಾರ ನಂಬಿಕೊಂಡು ಬರೀ ಜನ ಮಾತ್ರವಲ್ಲ, ಅಕ್ಷರಶಃ ಯಮಭಾರದ ತೋಪುಗಳನ್ನೂ ಹೇರಿಕೊಂಡು ಬಂದು ಭಾರತದ ಉದ್ದಗಲಕ್ಕೂ ಅವರ ಧ್ವಜ ಹಾರಿಸುವುದಕ್ಕೆ ಸಾಧ್ಯವಿತ್ತಾ..? ಭೂ ಮಂಡಲ ಎಲ್ಲ ಮೂಲೆಗಳನ್ನು ಸವರಿದ ಅಗ್ಗಳಿಕೆ ಏನಾದರೂ ಇದ್ದರೆ ಅದು ಕೇವಲ ಬ್ರಿಟಿಷರದ್ದು.
ಕಾರಣ ಅವರ ಒಂದೇ ಉದ್ದೇಶ, ಒಂದು ಗುರಿಯ ಹಿಂದೆ ಇರುತ್ತಿದ್ದುದು ಒಗ್ಗಟ್ಟು ಮತ್ತು ತಮ್ಮ ನೆಲ ನೆಲೆ ಎನ್ನುವ ಮೂಲ ಭೂತ ಕಲ್ಪನೆ ಉಳಿದೆಲ್ಲ ಅದರೆದುರಿಗೆ ಗೌಣ. ಹಾಗಾಗೆ ಅವರ ಲೆಕ್ಕಾಚಾರದಲ್ಲಿ ಬರೀ ಗಳಿಸಿದ್ದು ಮಾತ್ರವಲ್ಲ ಯಾವ್ಯಾವ ದೇಶದಲ್ಲಿ ಏನೆಲ್ಲ ಅನಾಹುತ ಮಾಡಿದ್ದೇವೆ ಎನ್ನುವ ಮಾಹಿತಿಯನ್ನು ಬರೆದು ಸಾರ್ವಜನಿಕವಾಗಿ ಪ್ರದರ್ಶಿಸುವ ಧಾರ್ಷ್ಟ್ಯತೆ ಉಳಿಸಿಕೊಂಡಿದ್ದಾರೆ.
ಅಕ್ಷರಶಃ ಸಿನಿಮಾ ಸೆಟ್ಟಿಂಗ್‌ಗಳನ್ನೂ ಯಾಮಾರಿಸುವಷ್ಟು ಚೆಂದದ ಹಳ್ಳಿಗಳನ್ನು ಮತ್ತು ತಂತಮ್ಮ ಊರು ಮನೆಗಳನ್ನು
ಹೊಂದಿರುವ ಇಂಗ್ಲೆಂಡ್ ನೋಡುತ್ತಾ ಸಾಗಿದರೆ, ಅವರನ್ನು ಹಿಡಿದಿಟ್ಟಿರುವ ಒಗ್ಗಟ್ಟು ಮತ್ತು ಶಿಸ್ತಿನ ಅಮಲನ್ನು ಗಮನಿಸಿದರೆ ಒಮ್ಮೆಯಾದರೂ, ಈ ಮಕ್ಕಳು ನಿಜಕ್ಕೂ ರಾಜ್ಯ ಮತ್ತು ದೇಶ ಆಳಲು ಹುಟ್ಟಿದವರೇ ಬಿಡಿ ತಪ್ಪೇನಿಲ್ಲ ಅನ್ನಿಸದೇ ಇರಲಾರದು. ಅದಕ್ಕೆ ಅಷ್ಟು ಸುಲಭಕ್ಕೆ ನಮ್ಮ ಮೇಲೆ ಅಧಿಕಾರ ಚಲಾಯಿಸಿದರು ಎನ್ನಿಸದೆ ಇರಲಾರದಷ್ಟು ಚೆಂದ ಶಿಸ್ತು ಪಾಲಿಸುವ ಮತ್ತು ಅದನ್ನೆ ನಿರ್ವಹಿಸುವ ಊರುಗಳು ಜನರು ಇಂಗ್ಲೆಂಡಿನ ಜೀವಾಳ. ಬಹುಶಃ ಭಾರತದ ಇದ್ದ ಸ್ಥಳಗಳನ್ನೇ ಉದ್ದಾರ ಮಾಡಿ ದ್ದರೂ ನಮ್ಮ ಪ್ರವಾಸೋದ್ಯಮದ ಆದಾಯ ಅದೆಲ್ಲೋ ಇರುತ್ತಿತ್ತು.
ಆದರೆ ಆ ಕನಸು ನಮ್ಮ ಕನವರಿಕೆ ಮಾತ್ರವೇ ಆಗಲಿದೆ. ಕಾರಣ ಏನೇ ಕೊಟ್ಟರೂ ನಮ್ಮದು ಆರಂಭ ಮಾತ್ರ ನಂತರ ನಿರ್ವಹಣೆ ಶೂನ್ಯ. ಅಭಿಮಾನ ಶೂನ್ಯತೆ ಇನ್ನೂ ದೊಡ್ಡ ಶೂನ್ಯ, ಶಿಸ್ತು ದೇವ್ರಾಣೆ ನಮ್ಮ ರಕ್ತದಲ್ಲಿಲ್ಲವೇ ಇಲ್ಲ. ಇರಲಿ ಇಂಗ್ಲೆಂಡನ್ನು ಮತ್ತದರ ಇತರ ದೇಶಗಳನ್ನೂ ತಿಂಗಳೊಪ್ಪತ್ತು ತಿರುಗಿದ್ದಕ್ಕೆ ಈ ರೇಂಜಿಗೆ ಹೊಗಳಬೇಕೆ ಅಥವಾ ಫಿದಾ ಆಗುವ ಅವಶ್ಯಕತೆ ಇಲ್ಲ ಎನ್ನುವವರಿಗೂ ಕೊರತೆ ಇಲ್ಲ. ಸಹಜವೇ ನನಗೂ ಹಾಗೇ ಅನ್ನಿಸುತ್ತಿತ್ತು. ಈ ಪರದೇಶದ ಅಲ್ಲಿನ ಶಿಸ್ತು ಮತ್ತು ನಿಯತ್ತಿನ ಬಗ್ಗೆ ಮಾತಾಡುವಾಗ ನಮ್ಮನ್ನು ಕೀಳಾಗಿಸುತ್ತಿದ್ದಾರಾ..? ಎನ್ನಿಸುತ್ತಿತ್ತು.
ತಪ್ಪೇನಲ್ಲ ಆದರೆ ಆ ನಿಜಾಯಿತಿಗೆ ಒಮ್ಮೆ ನೋಡಿ, ಸಿಕ್ಕ ಮೇಲೆ ಹೀಗೆ ಅನಿಸುವುದು ಕೂಡಾ ಅಷ್ಟೇ ಸಹಜ. ವ್ಯಕ್ತಿ ನೆಲ
ಯಾವುದೇ ಇರಲಿ ಗುಣಕ್ಕೆ, ಗುಣಮಟ್ಟಕ್ಕೆ ಮತ್ಸರ ಯಾಕೆ..? ಅದರಲ್ಲೂ ನಮ್ಮಲ್ಲಿ ಹಳ್ಳಿಗಳೆಂದರೆ ಅಕ್ಷರಶಃ ಕೊಂಪೆಯೇ.
ತಪ್ಪಿ ಕೂಡಾ ನಮ್ಮಲ್ಲಿ ಯಾರೂ ಹಳ್ಳಿಗಳ ಬದುಕನ್ನು ಇಷ್ಟ ಪಡುತ್ತಿಲ್ಲ. ನಾವೆಲ್ಲ ಏನೇ ಜಗತ್ತೆ ಒಂದು ಬೆಸೆದುಕೊಂಡ ಹಳ್ಳಿ
ಎಂದು ಕ್ಯಾಕಿ ಹೊಡೆದರೂ ಜಪ್ಪಯ್ಯ ಎಂದರೂ ಅಲ್ಲಿನ ಹಳ್ಳಿಗೆ ಮತ್ತದರ ಶಿಸ್ತಿಗೆ ಸಾಟಿಯಾಗಲಾರೆವು.
ವೇಲ್ಸ್ ದೇಶದ ಕಾರ್ಡಿಫ್ ನಲ್ಲಿ ಹಲವು ಹಳ್ಳಿಗಳ ಸಾಲುಸಾಲು ಊರುಗಳು ನಮ್ಮನ್ನು ಉದ್ದುದ್ದಕ್ಕೆ ನಡೆಯುವಂತೆ ಮಾಡುತ್ತವೆ. ಕಾರಣ ಒಂದಕ್ಕಿಂತ ಒಂದು ಚೆಂದದ ಮನೆಗಳ ಸಾಲು ಮತ್ತು ರಸ್ತೆಗಳು ಅಲ್ಲದೆ ಅದರ ಶಿಸ್ತು ಎಷ್ಟು ದೂರ ಹೋದರೂ ಮುಗಿಯದ ಸಂಭ್ರಮ. ಅಗಲ ರಸ್ತೆಗಳ ಜತೆಗೆ ಪ್ರತಿ ಮನೆಗೂ ಇರುವ ನಿಯಮ ಬದ್ಧ ಪಾಗಾರ ಸೇರಿದಂತೆ ಪ್ರತಿಯೊಬ್ಬರೂ ಅಂದ ಚೆಂದಕ್ಕಾಗಿ ಮತ್ತು ತಮ್ಮ ಮನೆ ಮಠ ಜಮೀನು ಜಾನುವಾರು, ನಾಯಿ, ಟ್ರಾಕ್ಟರು ಸೇರಿದಂತೆ ಕುರಿಗಳು (ನಮ್ಮ ನಮ್ಮ ಕುರಿಗಳು ಮಿಕ್ಸ್ ಆಗಿ ಬೇರೆಯವರ ಜತೆ ಪಂಚಾಯಿತಿ ಏಕೆ ಬೇಕು ಎಂದು ಅವುಗಳ ಅಂಡಿಗೆ ಕಲರ್ ಕೋಡಿಂಗ್ ರೀತಿ ಬಣ್ಣ ಮೆತ್ತಿರುತ್ತಾರಲ್ಲ ಅದನ್ನೂ ನಿರ್ದಿಷ್ಟ ಟ್ಯಾಗ್ ರೀತಿ ಪ್ರಿಂಟ್ ಹೊಡೆದಂತೆ ಅವುಗಳ ಬುಡಕ್ಕೆ ಸವರಿರುತ್ತಾರಲ್ಲ ಅಬ್ಬಾ ಜನರೇ ಎಂದು ಕೊಂಡೆ. ಅರ್ಥ ಇಷ್ಟೆ ಪ್ರತಿ ಕೆಲಸದಲ್ಲೂ ಒಂದಷ್ಟು ಇರಬೇಕಾದ ಶಿಸ್ತು ಮತ್ತು ನಿಮಯ ಪಾಲನೆ ಅದು) ಹಸು, ಕುದುರೆ ಎಲ್ಲದಕ್ಕೂ ಸಮರ್ಪಕ ಜಾಗ ಮತ್ತು ಆಯಾ ಜಾನುವಾರಿಗೆ ತಕ್ಕಂತೆ ಮೈದಾನ. ಕುದುರೆ ಒಳಗೊಳಗೆ ಓಡಿಕೊಳ್ಳುತ್ತಾ, ತನ್ನ ಆಕ್ಟಿವಿಟಿ ಮಾಡಿಕೊಂಡು ಸುತ್ತಿ ಬರುವಂತೆ ವೃತಾಕಾರದ ರಿಂಗ್ ಇದ್ದರೆ, ನಾಯಿಗೆ ಅದರದ್ದೆ ರೀತಿಯ ಚೆಂದದ ಗೋಪುರದ ಮನೆ ಮುಂದಿನ ತುದಿಗೆ ಕಾಣುತ್ತಿರುತ್ತದೆ.
ಹೊಗೆ ಕೊಳವೆ ಇಲ್ಲಿ ಮರೆಯದೇ ಇರಿಸಿಕೊಳ್ಳುತ್ತಾರಲ್ಲದೆ ಅದರಲ್ಲೂ ಕಲಾತ್ಮಕತೆ ಮೆರೆಯಲು ಹೆಚ್ಚುವರಿ ಅವಕಾಶ.
ಕೆಂಪು ಹೆಂಚಿನ ರೀತಿ ಟೈಲ್ಸ್‌ಗಳನ್ನು ಜೋಡಿಸಿ ಕಲಾತ್ಮಕವಾಗಿ ಮನೆಯನ್ನು ಸಿಂಗರಿಸಿ ಅದರ ಪಕ್ಕದಲ್ಲೆ ಅಚ್ಚುಕಟ್ಟಾದ ಸಾಲು ಸಾಲು ಹಸು ಮತ್ತು ವ್ಯವಸಾಯಕ್ಕೆ ಬೇಕಾದ ಯಂತ್ರೋಪಕರಣಗಳಿಗೂ ಸಿನೇಮಾ ಸೆಟ್ಟಿನಲ್ಲಿ ಜೋಡಿಸಿಟ್ಟಂತೆ
ಮನೆಗಳನ್ನು ಕ್ರಮಬದ್ಧವಾಗಿ ನಿರ್ಮಿಸಿರುತ್ತಾರೆ.
ಬಾರ್ಟನ್ ಹಳ್ಳಿಯ ಊರೊಳಗೆ ಹೋದರೆ ಅಗಲವಾಗಿದ್ದ ಕಾಂಪೌಂಡಿನ ಒಳಕ್ಕೆ ನುಗ್ಗಿ ಬಿಡುವ ಹಾಗಾಗಿತ್ತು. ಕೊನೆಯ
ಕ್ಷಣದಲ್ಲಿ ಪಕ್ಕದ ಬೋರ್ಡು ನೋಡಿ ಹೊರಗೆಬಿದ್ದೆ(ಇಲ್ಲಿ ಬೋರ್ಡುಗಳ ಜಾಲ ದೊಡ್ಡದು. ಇದರ ಬಗ್ಗೆನೆ ಒಂದು
ಲೇಖನ ವಾದೀತು. ಮತ್ತೆ ಬರೆಯುತ್ತೇನೆ ಎಂದ ವಿಷಯಗಳ ಸಂಖ್ಯೆ ದೊಡ್ಡದಿದೆ. ಆದರೆ ಖಂಡಿತ ಅವನ್ನೂ ಡೈರಿಗೆ ತರಲೇ
ಬೇಕಿದೆ) ನೋಡಿದರೆ ಅದು ಖಾಸಗಿ ರಸ್ತೆ. ಅಷ್ಟು ಅಗಲ ಮತ್ತು ಉದ್ದಾನು ಉದ್ದದ್ದು ತಿರುಗಲು ನಮ್ಮನ್ನು ಪ್ರಚೋದಿಸಿದ್ದು,
ಕೊನೆಯ ಕ್ಷಣದಲ್ಲಿ ಪಥ ಬದಲಿಸಿ ಇತ್ತ ಬಂದಿದ್ದೆ. ತುಂಬ ನೀಟಾದ ಹುಲ್ಲು ಹಾಸು ಮತ್ತು ಕಾರಂಜಿಗಳ ಸಮೇತ ಮನೆಗಳನ್ನು ಜೋಡಿಸಿಟ್ಟಂತಹ ಹಳ್ಳಿಗಳು ನಮ್ಮ ಮಟ್ಟಿಗೆ ಹಳ್ಳಿಗಳಲ್ಲ.
ಏನೆಂದರೂ ರಾಮೋಜಿ ಫಿಲ್ಂ ಸಿಟಿ ಅನ್ನಿಸಿಬಿಡುತ್ತವೆ. ಕೇವಲ ಮನೆ ಹೊರಾವರಣ ಮಾತ್ರವಲ್ಲ ಅವರವರ ಮನೆಯ ಹಿಂಭಾಗದ ಹೊಲಗಳು, ಊರಿನ ಕಾಲುದಾರಿಗಳು, ಅದಕ್ಕೆ ಜೋಡಿಸಲಾದ ಟೈಲ್ಸುಗಳು, ನೀರಿನ ಕಾಲುವೆಗಳು, ಅದರಲ್ಲಿ ಹರಿದಾಡುವ ಹಂಸಗಳು ಸೇರಿದಂತೆ ಹೆಸರು ಮುಖ ಮೂತಿ ಗೊತ್ತಿಲ್ಲದ ಕಲರ್ ಕಲರ್ ಪಕ್ಷಿಗಳು, ಇದಂತೂ ನನಗೆ ದೊಡ್ಡ ಸೋಜಿಗ. ಬೇರೆಲ್ಲಾದರೂ ಆಗಿದ್ದರೆ ಮರುದಿನದ ಬೆಳಗಾಗುವ ಹೊತ್ತಿಗೆ ಈ ಹಂಸಗಳು, ನೀರು ಕೋಳಿ ಬಾತು ಕೋಳಿಗಳು ನಾಪತ್ತೆಯಾಗಿ ಚಿಕನ್ ಆಗಿ ಮಸಾಲೆಯಲ್ಲಿ ಸೇರಿ ಹೋಗುತ್ತಿದ್ದವೇನೋ.
ಆದರೆ ಇಲ್ಲಿ ಹಿಂಡುಗಟ್ಟಲೇ ಈ ತುದಿಯಿಂದ ಆ ತುದಿಗೆ ಈಜುತ್ತಾ ಹರಿದಾಡುವ ಅವುಗಳನ್ನು ನೋಡಲು ಮತ್ತು ನೀರಿನ ಕಾಲುವೆಯ ಮೇಲೆ ದಾಟಲು ಒಂದು ಬೈಕಿನ ಮತ್ತು ಸೈಕಲ್ ಸವಾರರಿಗೆ ಅನುಕೂಲವಾಗುವ ರೀತಿಯಲ್ಲಿ ಜೋಡಿಸಲಾದ ಕಮಾನಿನ ಸೇತುವೆಗಳಂತೂ ಥೇಟ್ ಹಳೆಯ ಕಾಲದ ಸಿನೇಮಾ ಹಾಡುಗಳನ್ನು ನೆನಪಿಸುವಂತೆ ಮಾಡಿದ್ದು ಸುಳ್ಳಲ್ಲ.
ಮನೆಯ ಪ್ರತಿ ಗೋಡೆಗಳಿಗೂ ಅಯಾ ವಲಯವಾರು ಲಭ್ಯ ಇರುವ ಬಳ್ಳಿ ಹುಲ್ಲುಗಳನ್ನು ಕಲಾತ್ಮಕವಾಗಿ ಹಬ್ಬಿಸಿ ಅವನ್ನು ಕತ್ತರಿಸುವುದು ಮಾತ್ರ ಅದೇ ರೀತಿಯಲ್ಲಿ ನಿರ್ವಹಣೆ ಮಾಡುವುದಿದೆಯಲ್ಲ, ಅಪಟ್ಟ ಕಲಾ ಕುಸುರಿಯಂತಹ ಕೆಲಸ.
ತೋಟಗಾರಿಕೆ ಮತ್ತು ಹೈನುಗಾರಿಕೆ ಜೊತೆಗೆ ಮನೆಯ ಆಸುಪಾಸಿನಲ್ಲೆಲ್ಲ ಹಸಿರು ಹಬ್ಬಿಸುವ ಅದನ್ನು ವಿವಿಧ ವಿನ್ಯಾಸದಲ್ಲಿ ನಿರ್ವಹಿಸುವುದರ ಜೊತೆಗೆ ಮನೆಯ ಹೊರಾವರಣದ ಗೋಡೆಗಳನ್ನು ವಿವಿಧ ಕಲ್ಲುಗಳಿಂದ ಆವರಿಸಿ ಸಿಂಗರಿಸಿಕೊಂಡಿದ್ದು ನೋಡಿದರೆ ಏನಾದರೂ ಸ್ಪರ್ಧೆ ಇಟ್ಟಿರ್ತಾರೆ ಎಂದು ವಿಚಾರಿಸುವಂತೆ ಮಾಡಿದ್ದು ಇದೆ.
ಎರಡೂ ಕಡೆ ದೂರ ದೂರದವರೆಗೆ ಹರಿಯುವ ನದಿ, ಸ್ವಚ್ಛ ಮತ್ತು ರಭಸ ಮಾತ್ರವಲ್ಲ ದಂಡೆಯ ಮೇಲೆ ಮೀನಿನ ಶಿಕಾರಿಗೆ ಕೂತವರ ನೋಡುವುದೇ ಚೆಂದ. ಅದರಲ್ಲೂ ಬಿಳಿಬಿಳಿ ಅಜ್ಜಿಯರ ಮೀನಿನ ಬೇಟೆ, ಗಲಗಲ ಸದ್ದು ಮಾಡುತ್ತ ಕೊಕ್ಕೆ ಮತ್ತು ದಾರ ಅಲ್ಲಾಡಿಸುವುದನ್ನು ನಾನು ಕಿಂಗ್‌ಹ್ಯಾಮ್ ರೈಲು ನಿಲ್ದಾಣದ ಮೇಲಿನಿಂದ ನೋಡುವಾಗ ಎಷ್ಟು ಚೆಂದ ಇವರ ಜೀವನ ಪ್ರೀತಿ ಅನ್ನಿಸದಿರಲಿಲ್ಲ.
ಕಾರ್ಡಿಫ್ ಪ್ರದೇಶದ, ಮುಖ್ಯ ಲಂಡನ್‌ನಿಂದ ಸುಮಾರು ಎರಡೂವರೆ ಮೂರು ತಾಸು ದೂರ ಇರುವ ಹಳ್ಳಿಗಳ ಸಾಲಿ
ನಲ್ಲಿ ಹಲವು ಇಂಥಾ ಹಳ್ಳಿಗಳನ್ನು ನೋಡುತ್ತಾ ಸಾಗುವಾಗೆಲ್ಲ ಅನಿಸಿದ್ದು ಇದೆ. ಬಹುಶಃ ವೇಲ್ಸ್‌ನ ತುಂಬೆಲ್ಲ ಇಂಥ ಊರುಗಳೇ ಇರಬೇಕು ಎನ್ನಿಸಿದ್ದು, ಇಂಥದ್ದನ್ನೆಲ್ಲ ರಕ್ತಗತವಾಗಿ ಬರದೆ ಇವೆಲ್ಲ ಸಾಧ್ಯವೇ ಎಂದು. ಕಾರಣ ಮೂಲತಃ ನಾನು
ನನ್ನದು ಎನ್ನುವುದರ ಜೊತೆಗೆ ನಾವು ನಮ್ಮದು ಮತ್ತು ಇತರರದ್ದೂ ಚೆನ್ನಾಗಿದ್ದರೆ ಮಾತ್ರ ಇದೆಲ್ಲ ಚೆಂದ ಚೆಂದ ಎನ್ನುವ ಒಳಭಾವವೊಂದರ ಒಗ್ಗಟ್ಟು ಮತ್ತು ಆ ಶಿಸ್ತು ಇಲ್ಲದೆ ಇದೆಲ್ಲ ಅಸಾಧ್ಯ. ಕಾರಣ ಎಲ್ಲ ಮನೆಗಳೂ, ಬೀದಿಗಳೂ, ಅಲ್ಲಲ್ಲಿ ಕೊರೆದಿಟ್ಟ ಕೌತುಕವೇ ಈ ಅಲೆಮಾರಿಗೂ.