Friday, 20th September 2024

ಪಾಪು ಪ್ರಪಂಚ ಮೀರಿ ಜಗದಗಲ ವ್ಯಾಪಿಸಿದ ವಿಶ್ವವಾಣಿ

ಸುಪ್ತ ಸಾಗರ

rkbhadti@gmail.com

ಕರ್ನಾಟಕ ಏಕೀಕರಣದ ಹೋರಾಟದಲ್ಲಂತೂ ವಿಶ್ವವಾಣಿಯ ಪಾತ್ರ ಮರೆಯಲಾಗದ್ದು. ಕರ್ನಾಟಕ ಏಕೀಕರಣದ ವೇಳೆ ವಿಶ್ವವಾಣಿ ಜನ ಜಾಗೃತಿ ಮೂಡಿಸುತ್ತಿತ್ತು. ಅಖಂಡ ಕರ್ನಾಟಕದ ಜನರನ್ನು ಒಂದುಗೂಡಿಸಲು ಪ್ರತಿದಿನ ವಿಶೇಷ ಲೇಖನ ವನ್ನು ಪ್ರಕಟಿಸುತ್ತಿತ್ತು. ಪ್ರತಿ ನಿತ್ಯ ೨೮ ಸಾವಿರ ಪ್ರತಿಗಳು ಅಚ್ಚಾಗುತ್ತಿದ್ದವು.

ಇವತ್ತಿಗೆ ಎಂಟು ವರ್ಷಗಳ ಹಿಂದೆ ಪುಟ್ಟದೊಂದು ಆತಂಕದ ನಡುವೆಯೇ, ಅಸೀಮ ಆತ್ಮವಿಶ್ವಾಸ, ಇನ್ನಿಲ್ಲದ ಪುಳಕ, ಕನಸಿಗೆ ರೆಕ್ಕೆ ಕಟ್ಟಿದಂತೆ, ಒಗ್ಗೂಡಿದ ಉತ್ಸಾಹದೊಂದಿಗೆ ‘ಸ್ವಂತ ಮನೆ’ ವಿಶ್ವವಾಣಿಗೆ ರೆಕ್ಕೆ ಕಟ್ಟಲು ಕುಳಿತಿದ್ದೆವು. ಅದಕ್ಕೆ ಬಲತುಂಬಲು ನಾಡಿನಾದ್ಯಂತ ನಿಂತಿರುವ ನಮ್ಮದೇ ಓದುವ ವರ್ಗ ಇತ್ತು. ಜತೆಗೆ ಪತ್ರಿಕೋದ್ಯಮದಲ್ಲಿ ನಮ್ಮ ಸ್ಟ್ರೆಂತ್ ಎನಿಸಿ ಕೊಂಡಿರುವ ವಿಶ್ವೇಶ್ವರ ಭಟ್ ಎಂಬ ಬ್ರಾಂಡ್‌ನೊಳಗಿರುವ ಕ್ರಿಯಾಶೀಲ ಮನಸ್ಸು ಇತ್ತು. ನಂತರದ ಆದ್ಯತೆ ಪತ್ರಿಕೆಯ ಟೈಟಲ್‌ದಾಗಿತು.

ಇದೇ ಸಂದರ್ಭದಲ್ಲಿ ಕನ್ನಡ ಕಟ್ಟಾಳು, ಹೋರಾಟಗಾರ, ನೇರ ನಿಷ್ಠುರ ವಾಗ್ಮಿ ಶ್ರೀ ಪಾಟೀಲ್ ಪುಟ್ಟಪ್ಪನವರ ‘ವಿಶ್ವವಾಣಿ’ಯ ಬಗ್ಗೆಯೂ ಕೇಳಿ ಬಂತು. ಉತ್ತರ ಕರ್ನಾಟಕ ಭಾಗದಲ್ಲಿ ತನ್ನದೇ ಛಾಪು ಮೂಡಿಸಿದ್ದು, ಹಲವು ಕ್ರಾಂತಿಗೆ ಕಾರಣವಾಗಿದ್ದ ೫೯(ಈಗ ೬೪) ವರ್ಷಗಳ ಇತಿಹಾಸ ವನ್ನು ಹೊಂದಿರುವ ‘ವಿಶ್ವವಾಣಿ’. ಈ ಯೋಚನೆಯೇ ನಮ್ಮೊಳಗೆ ಪುಳಕ ಮೂಡಿಸಿತು. ಅವರು ಸಮರ್ಥರೊಬ್ಬರಿಗೆ ಪತ್ರಿಕೆಯ ಹೊಣೆಯನ್ನು ಹಸ್ತಾಂತರಿಸಿ ಪತ್ರಿಕೆಯ ಹೆಸರಿನ ದಿನಗಳನ್ನು ಮರುಕಳಿಸಬೇಕೆಂಬ
ಚಿಂತನೆಯಲ್ಲಿದ್ದರು.

ಅಲ್ಲಿಂದ ಆರಂಭಿಸಿ ’ವಿಶ್ವವಾಣಿ’ ನಮ್ಮ ಪರಿಪೂರ್ಣ ‘ಮಾಧ್ಯಮ ಮನೆ’ಯ ಕಲ್ಪನೆ ಮೂರ್ತ ರೂಪ ಕಂಡದ್ದು. ಸೆಪ್ಟೆಂಬರ್ ೮, ೨೦೧೫ರಂದು ತೊಂಬತ್ತಾರು ವರ್ಷದ ಭೀಷ್ಮ ಪಾಟೀಲ್ ಪುಟ್ಟಪ್ಪನವರ ಮನೆಯ ಜಗಲಿಯಲ್ಲಿ ವಿಶ್ವೇಶ್ವರ ಭಟ್ಟರ ರಾಯಭಾರಿಯಾಗಿ ನಾನು, ಸಾಹಿತ್ಯ ಪ್ರಕಾಶನದ ಸುಬ್ಬಣ್ಣ, ಪಾಪು ಪುತ್ರ ಅಶೋಕ್ ಪಾಟೀಲರು, ಪಾಪು ಅಳಿಯಂದಿರಾದ ಡಾ. ಜಿ.ಆರ್.ತಮಗೊಂಡ ಹಾಗೂ ಡಾ.ವಾಲಿ ಸೇರಿದೆವು. ಹಿರಿಯಜ್ಜ ಸ್ವಾತಂತ್ರ ಪೂರ್ವದ ದಿನಗಳನ್ನು ಮೆಲುಕ ತೊಡಗಿದರು.

ಅವತ್ತು ಪಾಪು ಮೆಲುಕಿದ ‘ವಿಶ್ವವಾಣಿ’ ಆರಂಭಗೊಂಡ ದಿನಗಳ ಇತಿಹಾಸವನ್ನು ಅವರದೇ ಮಾತುಗಳಲ್ಲಿ ಇಲ್ಲಿ ನೀಡು ತ್ತಿದ್ದೇನೆ. ಇಂದಿನ ಅಂಕಣಕ್ಕೆ ಅದಕ್ಕಿಂತ ಸೂಕ್ತ ಬರಹ ಇನ್ನೊಂದಿರಲಾರದು.
***

ಪಾಪು ಮಾತನಾಡಲಾರಂಭಿಸಿದರು. ಅದು ನಾನು ಅಮೆರಿಕದಿಂದ ವಾಪಸು ಬಂದ ದಿನಗಳು. ಕ್ಯಾಲಿಫೋರ್ನಿಯಾದಲ್ಲಿ ಪತ್ರಿಕೋದ್ಯಮ ಶಿಕ್ಷಣ ಪಡೆದು ಬಂದ ಹುಮ್ಮಸ್ಸಿನಲ್ಲಿದ್ದೆ. ಪತ್ರಿಕೋದ್ಯಮದಲ್ಲಿ ಇತಿಹಾಸ ಸೃಷ್ಟಿಸಬೇಕೆಂಬ ತುಡಿತವಿತ್ತು. ಇದೇ ಕಾಲಕ್ಕೆ ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ನಾಯಕರು ‘ನವಯುಗ’ ಪತ್ರಿಕೆಯನ್ನು ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಆ ಪತ್ರಿಕೆಯ ಮುಂದಾಳತ್ವವನ್ನು ನನಗೆ ಯಾಕೆ ವಹಿಸಬಾರದು ಎನ್ನುವ ಚರ್ಚೆ ಅವರಲ್ಲಿ ನಡೆದಿತ್ತು.

ಹುಬ್ಬಳ್ಳಿಗೆ ಎಸ್. ನಿಜಲಿಂಗಪ್ಪ ಬಂದ ಸಂದರ್ಭದಲ್ಲಿ, ನನ್ನನ್ನು ಕಾಣಲು ಆಶಿಸಿದ್ದರು. ಅವರ ಇಚ್ಛೆಯಂತೆ ಭೇಟಿಯಾದೆ. ಆಗ ಅವರು, ‘ನವಯುಗ’ ಪತ್ರಿಕೆಯನ್ನು ನಿಮ್ಮ ಮುಂದಾಳತ್ವದಲ್ಲಿ ಮುನ್ನಡೆಸಿಕೊಂಡು ಹೋಗಬೇಕು. ಪತ್ರಿಕೆಗೆ ನೀವೇ ಸರ್ವಾಧಿಕಾರಿ ಎಂದರು. ಉಪಸಂಪಾದಕ, ವರದಿಗಾರ ಎಂಬ ಮೆಟ್ಟಿಲುಗಳಿಲ್ಲದೇ ನೇರವಾಗಿ ಸಂಪಾದಕ ಹುದ್ದೆಯಲ್ಲಿ ಕುಳಿತುಕೊಳ್ಳುವ ಅವಕಾಶ. ಬಹುಶಃ ಇಂಥ ಅವಕಾಶ ಸರಳವಾಗಿ ಮತ್ತಿನ್ಯಾರಿಗೂ ಸಿಗಲಾರದು.

ಆದರೂ ದಿಢೀರ್ ನಿರ್ಧಾರ ಕೈಗೊಳ್ಳದೇ ಈ ಕುರಿತು ಸಾಯಂಕಾಲ ತಿಳಿಸುವುದಾಗಿ ಹೇಳಿ ಸ್ನೇಹಿತ ಎ.ಎಸ್.ಪಾಟೀಲ ಅವರಲ್ಲಿ ಈ ಕುರಿತು ಚರ್ಚಿಸಿದೆ. ಕಾಂಗ್ರೆಸ್ ನಾಯಕರೆಲ್ಲರೂ ಒಮ್ಮತದಿಂದ ಈ ನಿರ್ಣಯ ಕೈಗೊಂಡಿರುವಾಗ, ನಿಜಲಿಂಗಪ್ಪ ನವರ ಆಶಯದಂತೆ ನವಯುಗದ ಸಂಪೂರ್ಣ ಜವಾಬ್ದಾರಿ ಹೊರಲು ನಿರ್ಧರಿಸಿ, ಅವರಿಗೆ ನನ್ನ ನಿರ್ಧಾರ ತಿಳಿಸಿದೆ.

ಧಾರವಾಡ ಜಿ ನೋಂದಣಾಧಿಕಾರಿ ಎದುರು ಕಾಂಗ್ರೆಸ್ ನಾಯಕರು ಪತ್ರಿಕೆ ಸಂಪಾದಕ, ಪ್ರಕಾಶಕ, ಮುದ್ರಕ ಎಂದು ನನ್ನ ಹೆಸರನ್ನು ಘೋಷಿಸಿದರು. ಪತ್ರಿಕೆಯ ಸಂಪಾದಕನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ ಎಂದು, ಅಂದು ಸಂಪಾದಕೀಯ ಬರೆದೆ. ಈ ಹಿಂದೆ ಇದರ ಸಂಪಾದಕರಾಗಿ ತಿ.ರು. ನೇಸ್ವಿಯವರು ಕಾರ್ಯ ನಿರ್ವಹಿಸುತ್ತಿದ್ದರು. ಇಷ್ಟು ವರ್ಷಗಳ ಕಾಲ ಪತ್ರಿಕೆ
ನಡೆಸಿಕೊಂಡು ಬಂದಿದ್ದಾರೆ ಎಂದು, ಅವರಿಗೆ ಗೌರವ ನೀಡುವ ನಿಟ್ಟಿನಲ್ಲಿ ಕಾರ್ಯ ನಿರ್ವಾಹಕ ಸಂಪಾದಕ ಎಂದು ಅವರ ಹೆಸರನ್ನು ಪತ್ರಿಕೆಯಲ್ಲಿ ಪ್ರಕಟಿಸಿದೆ. ನನ್ನ ಈ ಉದಾರತೆ ಅವರಿಗೆ ಸರಿ ಕಾಣಲಿಲ್ಲ.

ನೀವು ಪ್ರಧಾನ ಸಂಪಾದಕರೆಂದು ಹಾಕಿಕೊಂಡಿದ್ದೀರಿ, ನನ್ನ ಹೆಸರನ್ನು ಕಾರ್ಯ ನಿರ್ವಾಹಕ ಸಂಪಾದಕನೆಂದು ಹಾಕಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇಲ್ಲ ಪತ್ರಿಕೆಯಲ್ಲಿ ಕಾರ್ಯ ನಿರ್ವಾಹಕನ ಸ್ಥಾನವೇ ದೊಡ್ಡದು, ಸಂಪಾದಕನದ್ದಲ್ಲ ಎಂದು ಅವರಿಗೆ ಸಾಕಷ್ಟು ವಿಧದಲ್ಲಿ ಹೇಳಿದೆ. ಕೊನೆಗೆ, ನೀವೇ ಪ್ರಧಾನ ಸಂಪಾದಕರಾಗಿ, ನಾನು ಕಾರ್ಯ ನಿರ್ವಾಹಕ ಸಂಪಾದಕನಾಗುತ್ತೇನೆ ಎಂದು ಹೇಳಿದೆ. ಅವರು ಯಾವುದನ್ನೂ ಒಪ್ಪುವ ಮನಸ್ಥಿತಿಯಲ್ಲಿರಲಿಲ್ಲ.

ಅಲ್ಲಿಂದ ಪ್ರಾರಂಭವಾದ ಅಡೆತಡೆ ನಿರಂತರವಾಗಿ ಮುಂದುವರಿದಿತ್ತು. ದಿನದಿಂದ ದಿನಕ್ಕೆ ನವಯುಗ ಪತ್ರಿಕೆ ಮೇಲೆ ಅಧಿಕಾರ ಚಲಾಯಿಸುವವರೇ ಹೆಚ್ಚಾಗುತ್ತ ಹೋದರು. ಇಂಥ ಸ್ಥಳದಲ್ಲಿ ನಾನಿರಬಾರದೆಂದು ಗಟ್ಟಿ ನಿರ್ಧಾರ ಮಾಡಿ, ‘ನನ್ನ
ಓದುಗರಿಗೆ ಕೊನೆಯ ನಮಸ್ಕಾರ’ ಎಂದು ಸಂಪಾದಕೀಯ ಬರೆದು ಒಂಬತ್ತು ತಿಂಗಳು ಹದಿನೈದನೇ ದಿನಕ್ಕೆ ಹೊರಬಿದ್ದೆ.

ಅಂದಿನಿಂದ ನವಯುಗದ ಸಂಬಂಧ ಮುರಿದು ಬಿತ್ತು. ಸಂಸಾರ ಹೇಗೆ ಎನ್ನುವ ಚಿಂತೆ ಕಾಡುತ್ತಿತ್ತು. ಅಂದು ಅಕ್ಷರಶಃ ಬೀದಿಗೆ ಬಂದು ನಿಂತಿದ್ದೆ. ಸಂಪಾದನೆಯೂ ಇಲ್ಲ, ಈ ಹಿಂದೆ ಗಳಿಸಿದ್ದ ಹಣವೂ ಇಲ್ಲ. ಮತ್ತೆ ಮುಂಬೈಗೆ ಹೋಗಿ ಫ್ರೀ ಪ್ರೆಸ್ ಜರ್ನಲ್ ಸೇರೋಣ ಎಂದುಕೊಂಡೆ. ಹಾಗೆ ಮಾಡಿದರೆ ಅದು ನನ್ನ ಸೋಲು ಎಂದುಕೊಂಡು, ಇಲ್ಲಿಯೇ ಇದ್ದು ಏನಾದರೂ ಸಾಧಿಸ ಬೇಕು ಎಂದು ನಿರ್ಧರಿಸಿದೆ.

ಸಂಯುಕ್ತ ಕರ್ನಾಟಕದ ಸಂಪಾದಕರಾಗಿದ್ದ ಮೊಹರೆ ಹಣಮಂತರಾಯರನ್ನು ಅವರ ಕಚೇರಿಯಲ್ಲಿ ಭೇಟಿಯಾದೆ. ನನ್ನ ಸ್ಥಿತಿಯನ್ನು ಅವರಲ್ಲಿ ಹೇಳಿಕೊಂಡೆ. ‘ನೀವ್ಯಾಕೆ ಹೊಸ ವಾರ ಪತ್ರಿಕೆಯನ್ನು ಪ್ರಕಟಿಸಬಾರದು’ ಎಂದು ಹೇಳಿ, ಪತ್ರಿಕೆ ತೆರೆಯಲು ನೈತಿಕ ಬಲ, ಧೈರ್ಯ ಹಾಗೂ ಪ್ರೋತ್ಸಾಹ ನೀಡಿ ಹುರಿದುಂಬಿಸಿದರು. ನಾನು, ‘ನನ್ನ ಲೆಕ್ಕಣಿ ಬಿಟ್ಟರೆ ನನ್ನ ಬಳಿ ಏನೂ ಇಲ್ಲ’ ಎಂದೆ.

ಚಿಂತಸಬೇಡ ದಾರಿ ಸಿಗುತ್ತದೆ ಎಂದರು. ಹುಬ್ಬಳ್ಳಿಯಲ್ಲಿ ವಾಗ್ವಿಲಾಸ ಮುದ್ರಣಾಲಯ ಕಾರ್ಯ ನಿರ್ವಹಿಸದೆ ಮುಚ್ಚಿದ ಸ್ಥಿತಿಯಲ್ಲಿತ್ತು. ಅದರ ಉಸ್ತುವಾರಿ ಯನ್ನು ಭೀಮರಾವ್ ಭಂಡಿವಾಡ ಎನ್ನುವ ವಕೀಲರು ನೋಡಿಕೊಳ್ಳುತ್ತಿದ್ದರು. ೧೫೦೦ ರುಪಾಯಿ ಮುಂಗಡ ನೀಡಬೇಕು, ಹಾಗೂ ಪ್ರತಿ ತಿಂಗಳು ೩೨೫ ರು. ಬಾಡಿಗೆ ಕೊಡಬೇಕು ಎಂದು ನಾಲ್ಕು ವರ್ಷದ ಕರಾರು ಹಾಕಿದರು.

ಪತ್ರಿಕೆ ತೆರೆಯಲು ನನಗೆ ಸಹಾಯ-ಸಹಕಾರ ಮಾಡುವುದಾಗಿ ನನ್ನ ಅನೇಕ ಗೆಳೆಯರು ಆಶ್ವಾಸನೆ ನೀಡಿದ್ದರು. ಅವರಲ್ಲಿ
ಒಂದಿಷ್ಟು ಜನರ ಯಾದಿಯನ್ನು ತಯಾರಿಸಿದೆ. ಬಹುತೇಕರು ಕೈಕೊಟ್ಟರು. ಕೊನೆಗೆ ಇನ್‌ಕಂ ಟ್ಯಾಕ್ಸ್ ಸಲಹೆಗಾರನಾಗಿದ್ದ
ವಿ.ಕೆ. ಪಾಟೀಲ ಎನ್ನುವ ನಂಬಿಕಸ್ಥ ಸ್ನೇಹಿತನನ್ನು ಸಂಪರ್ಕಿಸಲು ಮುಂದಾದೆ. ಅಂದು ಶನಿವಾರ. ಭಂಡಿವಾಡ ವಕೀಲರು
ಗಡುವು ನೀಡಿದ ಕೊನೆಯ ದಿನ. ಸ್ನೇಹಿತ ಪಾಟೀಲನನ್ನು ಭೇಟಿಯಾಗಿ, ವಿಷಯವನ್ನು ಹೇಳಿದೆ.

‘ತುರ್ತಾಗಿ ೧೫೦೦ ರುಪಾಯಿ ಬೇಕಾಗಿದೆ. ಆದರೆ ಯಾವಾಗ ವಾಪಸ್ಸು ಕೊಡುತ್ತೀಯಾ ಎಂದು ಕೇಳಬೇಡ. ಗಂಗಾನದಿ ಯಲ್ಲಿ ಹಣ ಚೆಲ್ಲಿದಂತೆ ಎಂದು ಭಾವಿಸಿ ಹಣ ನೀಡಬೇಕು’ ಎಂದು ಹೇಳಿದೆ. ಮರು ಮಾತನಾಡದೆ ಆತ ಹಣ ತಂದು ಕೊಟ್ಟ.
ಇದು ನನ್ನ ಜೀವನದಲ್ಲಿ ಮರೆಯಲಾದ ಘಟನೆ. ವಕೀಲರಿಗೆ ಹಣ ನೀಡಿ, ಮುದ್ರಣದ ಕೀಲಿ ಕೈ ಪಡೆದೆ. ಮುದ್ರಣಾಲಯ ವಂತೂ ಶೋಚನೀಯ ಸ್ಥಿತಿಯಲ್ಲಿತ್ತು. ವಿದ್ಯುತ್ ಸರಬರಾಜು ಸಹ ಇಲ್ಲವಾಗಿತ್ತು. ಮತ್ತೆ ಮೊಹರೆ ಹಣಮಂತರಾಯರಲ್ಲಿಗೆ ಹೋಗಿ ಪರಿಸ್ಥಿತಿಯನ್ನು ವಿವರಿಸಿದೆ.

ಎಂದಿನಂತೆ ಅವರು ಧೈರ್ಯ ತುಂಬಿ ಕಳುಹಿಸಿದರು. ‘ಪಾಟೀಲ ಪುಟ್ಟಪ್ಪ ಒಂದು ವಾರ ಪತ್ರಿಕೆ ಪ್ರಕಟಿಸಲು ಮುಂದಾಗಿದ್ದಾರೆ. ಓದುಗರು ಒಂದು ಸೂಕ್ತವಾದ ಹೆಸರನ್ನು ಸೂಚಿಸಬೇಕು. ಸೂಕ್ತ ಹೆಸರು ಕೊಟ್ಟವರಿಗೆ ೧೦೦ ರುಪಾಯಿಯ ಬಹುಮಾನ’ ಎಂದು ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಮೊಹರೆಯವರು ಜಾಹೀರಾತು ಪ್ರಕಟಿಸಿದರು. ಒಂದು ವಾರದಲ್ಲಿ ಸರಿಸುಮಾರು ೧೦ ಸಾವಿರ ಹೆಸರುಗಳು ಬಂದಿದ್ದವು.

ಸೂಕ್ತವಾದ ಹೆಸರನ್ನು ಆಯ್ಕೆ ಮಾಡಲು ಸಮಿತಿಯೊಂದು ರಚಿಸಿದ್ದೆ. ಜಾಹೀರಾತಿಗೆ ಅಭೂತಪೂರ್ವ ಸ್ಪಂದನೆ ದೊರೆಯಿತು. ಎಲ್ಲ ದಿಕ್ಕಿನಿಂದಲೂ ಏಜೆಂಟರೂ ಠೇವಣಿ ಕಳುಹಿಸಿದರು. ಧೈರ್ಯದಿಂದ ಪ್ರಪಂಚವನ್ನು ಅಚ್ಚೊತ್ತಲು ಯೋಜನೆ ಹಾಕಿಕೊಂಡು, ೧೯೫೪ ಮಾರ್ಚ್ ೧೦ರಂದು ಪತ್ರಿಕೆ ಹೊರಬಂತು. ಪತ್ರಿಕೆ ಪ್ರಕಟವಾದ ವರ್ಷದೊಳಗೆ ಜನಮಾನಸದಲ್ಲಿ ಅಚ್ಚೊತ್ತಿ ಬಿಟ್ಟಿತ್ತು. ನಂತರ ಅದರ ಪ್ರಸಾರ ಸಂಖ್ಯೆ ನಲವತ್ತು ಸಾವಿರದವರೆಗೂ ಬಂದು ತಲುಪಿತ್ತು. ಅದರಲ್ಲಿ ಪತ್ರಿಕೋದ್ಯಮ ಎನ್ನುವ ಆಸಕ್ತಿ ಹಾಗೂ ಅದರಲ್ಲಿರುವ ಅದಮ್ಯ ತುಡಿತದಿಂದಾಗಿಯೇ ‘ವಿಶ್ವವಾಣಿ’ ಜನ್ಮ ತಳೆದದ್ದು.

ದಿನ ಪತ್ರಿಕೆಯೆಂದರೆ ಆನೆ ಸಾಕಿದಂತೆ ಎನ್ನುವುದು ಅರಿವಿದ್ದರೂ, ‘ಪ್ರಪಂಚ’ ವಾರಪತ್ರಿಕೆಯ ಯಶಸ್ವಿಯ ನಡುವೆಯೇ ‘ವಿಶ್ವವಾಣಿ’ ಪರ್ಯಟನೆಗಾಗಿ ದೈನಿಕ ಪ್ರಾರಂಭಿಸಲು ಟೊಂಕ ಕಟ್ಟಿ ಎದ್ದು ನಿಂತೆ. ಹೊಸ ಪತ್ರಿಕೆ ಕಟ್ಟುವ ಹುಮ್ಮಸ್ಸೇನೋ ಇತ್ತು, ಆದರೆ ಅದಕ್ಕೆ ಬೇಕಾದ ಹಣ ಎಲ್ಲಿಂದ ತರುವುದು ಎನ್ನುವ ದಿಕ್ಕು ತೋಚಲಿಲ್ಲ. ನನ್ನ ಹೊಸ ಯೋಜನೆಯನ್ನು ಹಾಗೂ ಎದುರಾದ ಸಂಕಟವನ್ನು ಹೆಂಡತಿಯ ಮುಂದೆ ಹೇಳಿಕೊಂಡೆ. ನನ್ನ ಪ್ರತಿಯೊಂದು ಕಾರ್ಯಕ್ಕೂ ಅವಳೇ ಸೂರ್ತಿಯಾಗಿದ್ದಳು. ‘ನೀವು ಯಾವುದೇ ಕೆಲಸವನ್ನು ಮಾಡುವುದಿದ್ದರೂ ಹಣ ಇಟ್ಟುಕೊಂಡು ಮಾಡಿದ ಉದಾಹರಣೆ ಇದೆಯೇ? ಸುಮ್ಮನೆ
ಹಣಕ್ಕಾಗಿ ನೀವ್ಯಾಕೆ ಚಿಂತೆ ಮಾಡ್ತೀರಿ? ಏನು ಮಾಡಬೇಕೆಂದು ಯೋಚಿಸಿದ್ದೀರೋ, ಅದನ್ನು ಮಾಡಿ. ಹಣ ನಿಮ್ಮನ್ನು
ಹುಡುಕಿಕೊಂಡು ಬರುತ್ತದೆ’ ಆತ್ಮಸ್ಥೈರ್ಯ ತುಂಬಿದ್ದಳು.

ಪ್ರಪಂಚ ವಾರಪತ್ರಿಕೆಯ ಕೆಲಸದ ನಡುವೆಯೇ, ವಿಶ್ವವಾಣಿ ಹೊಸ ಪತ್ರಿಕೆಯ ಕನಸನ್ನು ಕಟ್ಟಿಕೊಂಡು ಹಗಲು-ರಾತ್ರಿ
ಯೋಜನೆಯನ್ನು ಸಿದ್ಧಪಡಿಸುತ್ತಿz. ಅಂತೂ ಇಂತು ೧೯೫೯ ಆಗ ೩೧ರಂದು ‘ವಿಶ್ವವಾಣಿ’ಯ ಮೊದಲ ಸಂಚಿಕೆ ಪ್ರಕಟ
ಮಾಡಲು ನಿರ್ಧರಿಸಿz. ಅದರ ಬಿಡುಗಡೆ ಸಮಾರಂಭಕ್ಕೆ ಧಾರವಾಡದ ಮೃತ್ಯುಂಜಯ ಸ್ವಾಮಿಗಳನ್ನು ಆಹ್ವಾನಿಸಲು
ತೀರ್ಮಾನಿಸಿz. ಆ. ೩೧ರ ನಸುಕಿನ ಜಾವ ೫ಕ್ಕೆ ವಿಶ್ವವಾಣಿ ಲೋಕಾರ್ಪಣೆಯಾಗಬೇಕಿತ್ತು.

ಮುನ್ನಾದಿನ ರಾತ್ರಿ ಜೋರಾಗಿ ಮಳೆ ಆರಂಭವಾಗಿತ್ತು. ಆ ಮಳೆಯ ನಡುವೆಯೇ ಸ್ವಾಮಿಗಳನ್ನು ಕರೆತರಲು ಶ್ರೀ ಮಠಕ್ಕೆ ಹೋಗಿದ್ದೆ. ‘ಗುರುಗಳು ಮಲಗಿzರೆ. ಎಷ್ಟೊತ್ತಿಗೆ ಏಳುತ್ತಾರೆ ಎನ್ನುವುದು ಗೊತ್ತಿಲ್ಲ. ಎದ್ದ ಮೇಲೆ, ಪೂಜೆ-ಪುನಸ್ಕಾರಗಳು ಆಗಬೇಕು. ನಿಮ್ಮ ಸಮಯಕ್ಕೆ ಬರಲು ಬಹುಶಃ ಅಸಾಧ್ಯವಾಗಬಹುದೇನೋ?’ ಎಂದು ಕಿರಿ ಸ್ವಾಮಿಗಳು ಹೇಳಿದರು. ನಾನು
ಮೊದಲೇ ನಿರ್ಧರಿಸಿದಂತೆ, ಪತ್ರಿಕೆ ಸ್ವಾಮಿಗಳಿಂದಲೇ ಬಿಡುಗಡೆಯಾಗಬೇಕು.

ಒಂದು ವೇಳೆ ಆಗಿಲ್ಲವೆಂದರೂ ಅವರಿಂದಲೇ ಬಿಡುಗಡೆಯಾಗಿದೆಯೆಂದು ತಿಳಿದುಕೊಳ್ಳುತ್ತೇನೆ ಎಂದು ಕಿರಿ ಸ್ವಾಮಿಗಳಿಗೆ ಹೇಳಿದೆ. ಅಷ್ಟರಲ್ಲಿಯೇ ಮೃತ್ಯುಂಜಯ ಸ್ವಾಮಿಗಳು ಎದ್ದು ಹೊರ ಬಂದರು. ನನಗೆ ರೋಮಾಂಚನವಾಯಿತು. ‘ಪುಟ್ಟಪ್ಪ ಶಿವಯೋಗಿಯನ್ನು ಒಲಿಸಿಕೊಂಡಿದ್ದಾರೆ. ಅವರು ಕರೆದಲ್ಲಿಗೆ ಹೋಗಬೇಕು’ ಎಂದು, ನಸುಕಿನ ಜಾವ ೫ಕ್ಕೆ ಸರಿಯಾಗಿ ‘ವಿಶ್ವವಾಣಿ’ ದೈನಿಕವನ್ನು ತಮ್ಮ ಅಮೃತ ಹಸ್ತದಿಂದ ಲೋಕಾರ್ಪಣೆ ಮಾಡಿದರು.

ಕರ್ನಾಟಕ ಏಕೀಕರಣದ ಹೋರಾಟದಲ್ಲಂತೂ ವಿಶ್ವವಾಣಿಯ ಪಾತ್ರ ಮರೆಯಲಾಗದ್ದು. ಕರ್ನಾಟಕ ಏಕೀಕರಣದ ವೇಳೆ ವಿಶ್ವವಾಣಿ ಜನ ಜಾಗೃತಿ ಮೂಡಿಸುತ್ತಿತ್ತು. ಅಖಂಡ ಕರ್ನಾಟಕದ ಜನರನ್ನು ಒಂದುಗೂಡಿಸಲು ಪ್ರತಿದಿನ ವಿಶೇಷ ಲೇಖನ ವನ್ನು ಪ್ರಕಟಿಸುತ್ತಿತ್ತು. ದಾವಣಗೆರೆ, ಚಿತ್ರದುರ್ಗ, ಬೆಳಗಾವಿ, ವಿಜಯಪುರ, ಬಾಗಲಕೋಟ, ಉತ್ತರ ಕನ್ನಡ, ಹಾವೇರಿ,
ಗದಗ, ಧಾರವಾಡ ಹೀಗೆ ಬಹುತೇಕ ಜಿಗಳಲ್ಲಿ ಪ್ರಸಾರ ಹೊಂದಿತ್ತು. ಪ್ರತಿ ನಿತ್ಯ ೨೮ ಸಾವಿರ ಪ್ರತಿಗಳು ಅಚ್ಚಾಗುತ್ತಿದ್ದವು. ಅದರಗುಂಚಿ ಶಂಕರಗೌಡರು ಏಕೀಕರಣಕ್ಕಾಗಿ ೨೩ ದಿನಗಳ ಕಾಲ ಉಪವಾಸ ಸತ್ಯಾಗ್ರಹ ಮಾಡಿದ್ದರು.

ಹುಬ್ಬಳ್ಳಿಯಲ್ಲಿ ಏಕೀಕರಣದ ಹೋರಾಟ ಅಕ್ಷರಶಃ ಬೆಂಕಿಯಂತೆ ಕಾವು ಪಡೆದಿತ್ತು. ಹೋರಾಟದ ಸುದ್ದಿ ಕೇವಲ ವಿಶ್ವವಾಣಿ ಯಲ್ಲಿ ಮಾತ್ರವಲ್ಲದೇ ನ್ಯೂಯಾರ್ಕ್ ಟೈಮ್ಸ್ ನಲ್ಲಿಯೂ ಪ್ರಕಟವಾಗುವಂತಾ ಯಿತು. ವಿಶ್ವ ಮಟ್ಟದಲ್ಲಿ ಏಕೀಕರಣ ಹೋರಾಟದ ಚರ್ಚೆ ನಡೆಯಿತು. ರಾಜ್ಯ ಮಟ್ಟದ ಪತ್ರಿಕೆಗಳು ಲಾಭ, ನಷ್ಟದ ಲೆಕ್ಕಾಚಾರ ಹಾಕಿಕೊಂಡು ಕುಳಿತವು. ಆದರೆ ನಾನು ಮಾತ್ರ ವಿಶ್ವವಾಣಿಯಲ್ಲಿ ನಿರ್ಭಿಡೆಯಿಂದ ಲೇಖನ ಬರೆಯುತ್ತಲೇ ಹೋದೆ. ಈ ಕಾರಣದಿಂದಾಗಿಯೇ ವಿಶ್ವವಾಣಿ ಏಕೀಕರಣ ಹೋರಾಟದ ಕಾಲಕ್ಕೆ ಸೂರ್ತಿಯ ಸೆಲೆಯಾಗಿ ಕಂಡಿತು.

ತುರ್ತು ಪರಿಸ್ಥಿತಿಯಲ್ಲಿ ವಿಶ್ವರೂಪ ಇದಾದ ಬಳಿಕ ವಿಶ್ವವಾಣಿಯ ವಿಶ್ವರೂಪ ನೋಡಲು ಸಿಕ್ಕಿದ್ದು ತುರ್ತು ಪರಿಸ್ಥಿತಿಯ ಕಾಲ. ಇಂದಿರಾ ಗಾಂಽ ಘೋಷಿಸಿದ ತುರ್ತು ಪರಿಸ್ಥಿತಿಯ ವಿರುದ್ಧ ಅಂದು ಯಾವೊಂದು ಪತ್ರಿಕೆಯೂ ವರದಿ ಮಾಡುತ್ತಿರಲಿಲ್ಲ. ಆದರೆ, ವಿಶ್ವವಾಣಿ ಪತ್ರಿಕೆಯಲ್ಲಿ ನಾನು ನಿರ್ಭಿಡೆಯಿಂದ ಸಂಪಾದಕೀಯ ಬರೆಯುತ್ತಿದ್ದೆ. ತುರ್ತು ಪರಿಸ್ಥಿತಿಯ ಸಮಸ್ಯೆಗಳನ್ನು ಜನತೆಯ ಮುಂದೆ ತೆರೆದಿಡುತ್ತಿದ್ದೆ. ಆ ಕುರಿತು ಸಾಕಷ್ಟು ಒತ್ತಡಗಳು ಬಂದರೂ ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ‘ಸ್ವಾತಂತ್ರ್ಯಕ್ಕೋಸ್ಕರ ಸೆರೆಮನೆಗೆ ಹೋದವರನ್ನು, ಸ್ವಾತಂತ್ರ್ಯದ ಹೆಸರಲ್ಲಿ ಸೆರೆಮನೆಗೆ ತಳ್ಳುತ್ತಿದ್ದಾರೆ’ ಎಂಬ ಬರಹದ ಛಾಟಿ ಬೀಸಿ, ಇದರ ಪರಿಣಾಮ ಏನಾಗುವುದೆಂದು ಮುಂದೆ ಕಾಲವೇ ಹೇಳುತ್ತದೆ ಎಂದು ಸಂಪಾದಕೀಯ ಕೊನೆಗೊಳಿಸದ್ದೆ.

ಆಗ ಕೆಲ ರಾಜಕಾರಣಿಗಳು ನನ್ನನ್ನು ಜೈಲಿಗಟ್ಟಲು ಪಿತೂರಿ ನಡೆಸಿದರು. ಆದರೆ ದೇವರಾಜ ಅರಸು ಕುತಂತ್ರಿಗಳ ಆಸೆಗೆ ತಣ್ಣೀರು ಎರಚಿದರು. ವಿಶ್ವವಾಣಿಯ ಬಲದಿಂದಲೇ ಅದೆಷ್ಟೋ ಜನ, ಹೆಸರಿಸುವುದಾದರೆ ನಿಜಲಿಂಗಪ್ಪ, ದೇವರಾಜ ಅರಸು
ಮತ್ತಿತರರು ದೊಡ್ಡ ನಾಯಕರಾಗಿ ಗುರುತಿಸಿಕೊಂಡರು. ಎಸ್. ಬಂಗಾರಪ್ಪನವರಿಗೆ ಮಾತ್ರ ನನ್ನ ಏಳ್ಗೆ ಖುಷಿ ಕೊಡಲಿಲ್ಲ ವೇನೋ. ನಿಜಲಿಂಗಪ್ಪ ಅವರ ಸಹಾಯದಿಂದ ಪುಟ್ಟಪ್ಪ ಮೂರಂತಸ್ತಿನ ಮನೆ, ಆಸ್ತಿ ಪಾಸ್ತಿ ಮಾಡಿಕೊಂಡಿದ್ದಾರೆಂದು ಅಪವಾದ ಹೊರಿಸಿದ್ದರು.

‘ನಿಜಲಿಂಗಪ್ಪ ನವರಿಂದ ನಾನು ಆಸ್ತಿ ಪಡೆದಿದ್ದೇ ಆದಲ್ಲಿ ಅದನ್ನು ನಾನು ಬಂಗಾರಪ್ಪನವರಿಗೆ ನೀಡಲು ಸಿದ್ಧನಿದ್ದೇನೆ.
ನಿಜಲಿಂಗಪ್ಪನವರಿಂದ ಗಳಿಸಿಕೊಂಡಿರುವ ಆಸ್ತಿಯನ್ನು ಬಂಗಾರಪ್ಪ ನನಗೆ ಕೊಡಲು ಸಿದ್ಧರಿದ್ದಾರೆಯೇ’ ಎಂದು ಬಹಿರಂಗ ಕಾರ್ಯಕ್ರಮದಲ್ಲಿ ಸವಾಲು ಹಾಕಿದ್ದೆ. ಆದರೆ ಬಂಗಾರಪ್ಪರಿಂದ ಪ್ರತ್ಯುತ್ತರ ಬರಲಿಲ್ಲ. ನಿಜಲಿಂಗಪ್ಪ ಅಂಥವರಿಂದ ನಾನು ನಯಾಪೈಸೆ ಲಾಭ ಪಡೆಯಲಿಲ್ಲ, ಅವರು ಸಹಾಯ ಮಾಡುವ ಉದಾರತೆಯನ್ನೂ ತೋರಲಿಲ್ಲ ಎನ್ನುವುದು ಬೇರೆ ವಿಷಯ. ಆರ್ಥಿಕ ಒತ್ತಡ ಮಿತಿಮೀರಿದ್ದರಿಂದ ಪತ್ರಿಕೆ ನಡೆಸುವುದು ಕಷ್ಟವಾಗಿತ್ತು.

ನನ್ನ ಬಳಿಯಿದ್ದ ಫಿಯಟ್ ಕಾರು ಮಾರಾಟ ಮಾಡಿದೆ. ಒಂದಷ್ಟು ಸಾಲ ತೀರಿಸಿದೆ. ಆದರೂ ಸಾಲದ ಹೊರೆ ಇಳಿಯಲಿಲ್ಲ. ಸಿಂಡಿಕೇಟ್ ಬ್ಯಾಂಕ್‌ನ ಚೇರಮನ್‌ರಾಗಿದ್ದ ಟಿ.ಎ. ಪೈ ಅವರನ್ನು ಹೋಗಿ ಭೇಟಿ ಮಾಡಿ ಸಹಾಯ ಕೇಳಿದೆ. ಆಗಲೇ ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಕಟಬಾಕಿದಾರನಾಗಿದ್ದರಿಂದ ಸಾಲ ಕೊಡಲಾಗಲಿಲ್ಲ. ಅವರು ನೇರವಾಗಿ ವಿಜಯ ಬ್ಯಾಂಕಿನ ಮುಖ್ಯಸ್ಥರಾಗಿದ್ದ ಸುಂದರರಾಜ ಅವರಿಗೆ ಕರೆ ಮಾಡಿ, ‘ಪುಟ್ಟಪ್ಪನವರಿಗೆ ಸಾಲ ನೀಡಬೇಕು. ಇದಕ್ಕೆ ನಾನು ಸಾಕ್ಷಿದಾರ ’ ಎಂದರು. ಸಾಲ ಮಂಜೂರಾಯಿತು. ಮತ್ತೆ ಪತ್ರಿಕೆ ಹಳಿ ಹತ್ತಿತು.

ಹಾ.ಮಾ. ನಾಯಕರು ವಿಶ್ವವಾಣಿ ಪತ್ರಿಕೆ ನೋಡದೆ ಇದ್ದರೆ ದಿನ ಬೆಳಗಾಗಿದೆ ಎಂದು ಅನಿಸುತ್ತಿರಲಿಲ್ಲ ಎಂದು ಪತ್ರಿಕೆ
ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇಂತಹ ಪತ್ರಿಕೆಯನ್ನು ಇದೀಗ ವಿಶ್ವೇಶ್ವರ ಭಟ್ಟರ ಕೈಗಿತ್ತಿದ್ದೇನೆ. ವಿಶ್ವವಾಣಿಯ
ಛಾಪನ್ನು ಅವರು ಜಗದಗಲಕ್ಕೆ ವ್ಯಾಪಿಸುವಂತೆ ಮಾಡುತ್ತಾರೆನ್ನುವ ವಿಶ್ವಾಸವಿದೆ.
***
ಅವತ್ತು ಪಾಪು ಕೊನೆಯಲ್ಲಿ ಆಡಿದ ಮಾತು ಇವತ್ತು ನಿಜವಾಗಿದೆ. ಅವರಿಟ್ಟಿದ್ದ ವಿಶ್ವಾಸ ನೂರ್ಮಡಿಯಾಗಿದೆ. ಪತ್ರಿಕೆ ಎಂಟು ವರ್ಷಗಳಲ್ಲಿ ಜಗದಗಲ ಓದುಗರನ್ನು ತಲುಪುತ್ತಿದೆ. ಆ ಮೂಲಕ ‘ವಿಶ್ವವಾಣಿ’ ಅನ್ವರ್ಥಗೊಂಡಿದೆ.