Friday, 22nd November 2024

ಶೀತಗಾಳಿ ಹೆಚ್ಚಳ : ದೆಹಲಿಯಲ್ಲಿ ಕನಿಷ್ಠ ತಾಪಮಾನ ದಾಖಲು

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತ, ವಾಯವ್ಯ ಭಾರತದ ಬಯಲುಪ್ರದೇಶಗಳಲ್ಲಿ ಶೀತಗಾಳಿ ಹೆಚ್ಚಾಗಿದ್ದು, ದೆಹಲಿಯಲ್ಲಿ ಹಾಲಿ ಋತುವಿನ ಕನಿಷ್ಠ ತಾಪಮಾನ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ದೆಹಲಿಯಲ್ಲಿ ದಟ್ಟ ಮಂಜು ಕವಿದಿರುವ ವಾತಾವರಣ ಇದೆ. ರಾಜಧಾನಿ ಯಲ್ಲಿ ಕೇವಲ ಎರಡು ದಿನಗಳಲ್ಲಿ ಕನಿಷ್ಠ ತಾಪಮಾನವು ಸುಮಾರು ಒಂಬತ್ತು ಡಿಗ್ರಿಗಳಷ್ಟು ಕಡಿಮೆಯಾಗಿದ್ದು, ನಿನ್ನೆ 4.7 ಡಿಗ್ರಿ ಸೆಲ್ಸಿಯಸ್ ಮತ್ತು ಭಾನುವಾರ 10.2 ಡಿಗ್ರಿ ಸೆಲ್ಸಿಯಸ್ ಇತ್ತು. ಜನವರಿ 8 ರಂದು, ನಗರದಲ್ಲಿ ಕನಿಷ್ಠ ತಾಪಮಾನ 1.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು, ಇದು ಇಂದು ಋತುವಿನ ಅತ್ಯಂತ ಕಡಿಮೆ ತಾಪಮಾನವಾಗಿತ್ತು. ಆದರೆ ಇಂದು ಮುಂಜಾನೆ ತಾಪಮಾನವು 1.4ಡಿಗ್ರಿಗೆ ಕುಸಿತ ಕಾಣುವ ಮೂಲಕ ಋತು ವಿನ ಅತ್ಯಂತ ಕಡಿಮೆ ತಾಪಮಾನವಾಗಿ ದಾಖಲಾಗಿದೆ.
ಪಂಜಾಬ್, ಹರಿಯಾಣ ದೆಹಲಿಯಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದ್ದು, ಉತ್ತರಪ್ರದೇಶದ ಗೋರಖ್ಪುರ ಮತ್ತು ಮೀರತ್ನಲ್ಲೂ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಬೆಳಗ್ಗೆಯಿಂದ ರಾಜಸ್ಥಾನ, ಪಂಜಾಬ್, ಹರಿಯಾಣ ಮತ್ತು ದೆಹಲಿಯ ಹಲವು ಭಾಗಗಳಲ್ಲಿ ತೀವ್ರ ಶೀತಗಾಳಿ ಬೀಸುತ್ತಿದೆ.

ಇಲ್ಲಿನ ಥಾರ್ ಮರುಭೂಮಿ ಸಮೀಪದ ಚುರು ಪ್ರದೇಶದಲ್ಲಿ ಮೈನಸ್ 2.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನವಿತ್ತು. ಪಂಜಾಬ್, ಹರಿಯಾಣ, ದೆಹಲಿ, ಉತ್ತರಪ್ರದೇಶದ ನೈರುತ್ಯ ಭಾಗಗಳಲ್ಲಿ ಕನಿಷ್ಠ ತಾಪಮಾನ 3ರಿಂದ 5 ಡಿಗ್ರಿ ಸೆಲ್ಸಿಯಸ್ವರೆಗೆ ಇತ್ತು.