Thursday, 28th November 2024

ಮೌಲ್ಯ ಶಿಕ್ಷಣ ಎಂದರೇನು ? ಅದು ಹೇಗಿರಬೇಕು ?

ಸ್ವಾಸ್ಥ್ಯ ಸಂಪದ

yoganna55@gmail.com

ಆಧುನಿಕ ಸಮಾಜದಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಮೌಲ್ಯಗಳು ಕುಸಿಯುತ್ತಿದ್ದು, ಮನುಷ್ಯ ಸ್ವೇಚ್ಛಾಚಾರದ ಜೀವನಶೈಲಿಗೆ ಈಡಾಗಿ
ಇಡೀ ಸಮುದಾಯವೇ ಅಶಾಂತಿಯಿಂದ ನರಳುತ್ತಿದೆ. ಎಲ್ಲರಿಗೂ ಅದರಲ್ಲೂ ಸಮಾಜದ ನಿರ್ವಹಣೆಯನ್ನು ಹೊತ್ತ ಸರ್ಕಾರಕ್ಕೆ ಇದು ಮನವರಿಕೆಯಾಗಿದ್ದು, ಈ ದುಸ್ಥಿತಿಯಿಂದ ಸಮಾಜವನ್ನು ವಿಮುಕ್ತ ಗೊಳಿಸಿ, ಶಾಂತಿಯುತ ವಾತಾವರಣ ನಿರ್ಮಾಣ ಮಾಡಲು ಮೌಲ್ಯಾ ಧಾರಿತ ಶಿಕ್ಷಣವೊಂದೇ ದಾರಿ ಎಂದು ಅರಿತು ಶಿಕ್ಷಣದಲ್ಲಿ ಮೌಲ್ಯ ಶಿಕ್ಷಣ ವನ್ನು ಜಾರಿಗೆ ತರಬೇಕೆಂದು ಸರಕಾರ ನಿರ್ಧರಿಸಿರುವುದು ಸ್ವಾಗತಾರ್ಹ.

ಮೌಲ್ಯಶಿಕ್ಷಣ ಹಲವಾರು ಆಯಾಮಗಳಿಂದ ಕೂಡಿರುವ ಅಂಚಿಲ್ಲದ ಮಹಾ ಸಾಗರದಷ್ಟು ವಿಸ್ತಾರ ಮತ್ತು ಕ್ಲಿಷ್ಟವಾದುದರಿಂದ ಈ ಬಗ್ಗೆ  ಕಾರ್ಯ ಯೋಜನೆ ಗಳನ್ನು ರೂಪಿಸುವ ಮುನ್ನ ಮೌಲ್ಯ ಶಿಕ್ಷಣ ಎಂದರೇನು ಎಂಬುದರ ಸ್ಪಷ್ಟ ವ್ಯಾಖ್ಯಾನ, ಅದರ ಮಾನದಂಡಗಳು, ಶಿಕ್ಷಣದ ನಾನಾ ಹಂತಗಳಲ್ಲಿ ಬೋಽಸಬೇಕಾದ ಅದರ ಜ್ಞಾನಮಟ್ಟ ಮತ್ತು ಬೋಧನಾ ಕ್ರಮಗಳ ಬಗ್ಗೆ ವ್ಯಾಪಕ ಚರ್ಚೆ ಅತ್ಯವಶ್ಯಕ. ತರಾತುರಿಯಲ್ಲಿ ಜಾರಿಮಾಡುವ ವಿಷಯ ಇದಲ್ಲ. ಈ ಹಿನ್ನೆಲೆಯಲ್ಲಿ ಮೌಲ್ಯ ಶಿಕ್ಷಣದ ಬಗ್ಗೆ
ಬೆಳಕು ಚೆಲ್ಲುವ ಲೇಖನವಿದು.

ಮನುಷ್ಯ ತನ್ನನ್ನು, ತನ್ನ ಜವಾಬ್ದಾರಿಗಳನ್ನು ಮತ್ತು ತಾನು ಬದುಕುವ ಸುತ್ತಮುತ್ತಲಿನ ಎಲ್ಲವುಗಳನ್ನು ವೈಜ್ಞಾನಿಕವಾಗಿ ಅರ್ಥಮಾಡಿಕೊಂಡು, ಅವುಗಳೊಡನೆ ಜೋಡಿಸಿಕೊಂಡು, ನೆಮ್ಮದಿಯಿಂದ ಬದುಕಿ ಸಂತಾನೋತ್ಪತ್ತಿ ಕ್ರಿಯೆಯಿಂದ ತನ್ನ ಸಂತತಿಯನ್ನು ಮುಂದುವರಿಸಿ ಅಂತ್ಯವಾಗುವುದು ಅವನ ಪ್ರಮುಖ ಆದ್ಯ ಕರ್ತವ್ಯ. ಇವುಗಳಿಗೆ ಸಂಬಂಧಿಸಿದ ಜ್ಞಾನ ಪ್ರತಿಯೊಬ್ಬರಿಗೂ ಜನ್ಮದತ್ತವಾಗಿಯೇ ವಂಶವಾಹಿಗಳಲ್ಲಿ ಅಡಗಿದ್ದು, ಇವು ಅವರವರಿಗೆ ಲಭಿಸುವ ಪರಿಸರದ ಪ್ರಭಾವದಿಂದ, ಮಂದಗತಿಯಲ್ಲಿ ಅಥವಾ ತೀವ್ರಗತಿಯಲ್ಲಿ ಪೂರ್ಣವಾಗಿ ಅಥವಾ ಅಪೂರ್ಣವಾಗಿ ಬದುಕಿನಲ್ಲಿ ಅನಾವರಣಗೊಳ್ಳುತ್ತವೆ.

ಈ ಜ್ಞಾನವನ್ನು ವ್ಯವಸ್ಥಿತ ತರಬೇತಿಯಿಂದ ಶಿಸ್ತುಬದ್ಧವಾಗಿ ಹಂತಹಂತವಾಗಿ ಅನಾವರಣಗೊಳಿಸುವುದೇ ಶಿಕ್ಷಣ. ಯಾವುದೇ ಜ್ಞಾನ ಎರಡು ಮುಖವೂ ಹರಿತವಾಗಿರುವ ಕತ್ತಿಯಂತಿದ್ದು, ಸಂದರ್ಭಕ್ಕನುಗುಣವಾಗಿ, ಸಕಾರಾತ್ಮಕವಾಗಿ, ಸರ್ವರ
ಹಿತಕ್ಕಾಗಿ ಅದು ಬಳಕೆಯಾಗಬೇಕೇ ವಿನಃ ನಕಾರಾತ್ಮಕವಾಗಿ ಸಮಾಜದ ವಿನಾಶಕ್ಕಲ್ಲ. ಈ ಕಾರಣದಿಂದಾಗಿ ಶಿಕ್ಷಣ, ಬದುಕಿಗೆ ಅವಶ್ಯಕವಿರುವ ಜ್ಞಾನವನ್ನು ಕಲಿಸುವ ಜೊತೆ ಜೊತೆಗೆ ಕಲಿತ ಜ್ಞಾನವನ್ನು ಬದುಕಿನಲ್ಲಿ ಸರ್ವರ ಹಿತಕ್ಕಾಗಿ ಸಕಾರಾತ್ಮಕವಾಗಿ ಅಳವಡಿಸಿಕೊಳ್ಳಲು ಅನುವಾಗುವ ಹಾಗೆ ಷರತ್ತುಬದ್ಧ ನೀತಿಸಂಹಿತೆಗಳನ್ನೂ ಹೊಂದಿರಬೇಕು.

ಜ್ಞಾನ ಅನುಷ್ಠಾನದ ನೀತಿಸಂಹಿತೆಗಳನ್ನೂ ಸಹ ಶಿಕ್ಷಣ ವಿದ್ಯಾರ್ಥಿಗಳಿಗೆ ಕಲಿಸುವಂತಾಗಬೇಕು. ಇಲ್ಲದಿದ್ದಲ್ಲಿ ಗಳಿಸಿದ ಜ್ಞಾನ ನಕಾರಾತ್ಮಕವಾಗಿ ಬಳಕೆಯಾಗಿ ಸಮಾಜದಲ್ಲಿ ಅಶಾಂತಿ ತಲೆದೋರುತ್ತದೆ. ಇಂದಿನ ಸಮಾಜದಲ್ಲಿ ವಿದ್ಯಾವಂತರಲ್ಲಿಯೇ
ಭ್ರಷ್ಟಾಚಾರ, ವ್ಯಭಿಚಾರ, ದುರಾಚಾರ, ಮೋಸ, ವಂಚನೆ, ಸುಳ್ಳು, ಅಪರಾಧ, ಸ್ವಜನ ಪಕ್ಷಪಾತ ಇತ್ಯಾದಿ ಸಮಾಜಘಾತುಕ ಅನೈತಿಕ ಕ್ರಿಯೆಗಳು ಹೆಚ್ಚಾಗಿರುವುದಕ್ಕೆ ನೀತಿ ಸಂಹಿತೆಯಿಲ್ಲದ ಜ್ಞಾನವೇ ಕಾರಣವಾಗಿದೆ.

ಮೌಲ್ಯ ಶಿಕ್ಷಣ ಎಂದರೇನು?
ಮನುಷ್ಯ, ಮನುಷ್ಯರ ಗುಂಪು ಅಥವಾ ಸಮುದಾಯ ಸರಿಯೆಂದು ನಂಬಿ ಸರ್ವರಿಗೂ ಸರ್ವೋದಯವನ್ನು ಉಂಟು ಮಾಡುತ್ತದೆ ಎಂದು ಅನುಸರಿಸುವ ಜೀವನಶೈಲಿಯ ನೀತಿಸಂಹಿತೆಗಳೇ ಮೌಲ್ಯ. ಮಾನವಕುಲ ಪ್ರಪಂಚಾದ್ಯಂತ ಲಿಂಗ,
ದೇಶ, ಧರ್ಮ, ದೇವರು, ಜಾತಿ, ವರ್ಣ ಮತ್ತು ಆರ್ಥಿಕತೆಗಳ ಆಧಾರದ ಮೇಲೆ ಛಿದ್ರ ಛಿದ್ರವಾಗಿದ್ದು, ಇವುಗಳನ್ನಾಧರಿಸಿಯೇ ಅವರವರು ಸರಿಕಂಡಂತೆ ಅವರುಗಳದೇ ಆದ ವಿಭಿನ್ನ ಮೌಲ್ಯಗಳನ್ನು ಅನುಸರಿಸಲಾಗುತ್ತಿದೆ.

ಇವುಗಳ ಆಧಾರದ ಮೇಲೆ ನಿರ್ಧಾರಿತವಾದ ಮೌಲ್ಯಗಳಲ್ಲಿ ಎಲ್ಲರಿಗೂ ಸರ್ವೋದಯವನ್ನುಂಟುಮಾಡುವ ಮೌಲ್ಯಗಳು ವಿರಳ ಅಥವಾ ಇಲ್ಲವೆಂದೇ ಹೇಳ ಬೇಕು. ಅವರವರ ಅನಿಸಿಕೆಗೆ ತಕ್ಕಂತೆ ನೂರಾರು ದೇವರುಗಳನ್ನು ಸೃಷ್ಟಿಸಿಕೊಂಡಿದ್ದು, ಒಂದೊಂದು ದೇವರಿಗೂ ಅನುಸರಿಸಬೇಕಾದ ಒಂದೊಂದು ಸಾಮಾಜಿಕ ನಡವಳಿಕಾ ಮೌಲ್ಯಗಳನ್ನು ಸೃಷ್ಟಿಸಿಕೊಳ್ಳಲಾಗಿದೆ. ಇವಲ್ಲದೆ ಸೀ ಸಮಾಜ ಪಾಲಿಸಬೇಕಾದ ಮೌಲ್ಯಗಳೇ ಬೇರೆ, ಪುರುಷ ಸಮಾಜ ಪಾಲಿಸಬೇಕಾದ ಮೌಲ್ಯಗಳೇ ಬೇರೆ. ಪುರುಷರಿಗೆ ಸರಿಯೆನ್ನುವ ಮೌಲ್ಯಗಳು ಸೀಯರಿಗೆ ಅಪಥ್ಯ.

ಒಂದು ಧರ್ಮದ, ದೇವರ, ಜಾತಿಯ ಮೌಲ್ಯಗಳು ಮತ್ತೊಂದಕ್ಕೆ ಅಪಥ್ಯ. ಒಂದು ಧರ್ಮಕ್ಕೆ ಅಹಿಂಸೆ ಮೌಲ್ಯವಾದರೆ, ಮತ್ತೊಂದು ಧರ್ಮಕ್ಕೆ ಹಿಂಸೆಯೇ ಮೌಲ್ಯ. ದೇಶ ದೇಶಗಳ ಸಾಮಾಜಿಕ ಮೌಲ್ಯಗಳೂ ವಿಭಿನ್ನ. ಒಂದು ದೇಶದಲ್ಲಿ ಸ್ವೇಚ್ಛಾ ಚಾರದ ಲೈಂಗಿಕತೆ ಅಪಮೌಲ್ಯವೆಂದಾದರೆ, ಮತ್ತೊಂದು ದೇಶದಲ್ಲಿ ಅದೂ ಮೌಲ್ಯವೇ. ಆಹಾರ ಪದ್ಧತಿಗಳೂ ಸಹ
ಮೌಲ್ಯಗಳ ವ್ಯಾಪ್ತಿಯಲ್ಲಿ ಸೇರಿಹೋಗಿವೆ.

ಒಂದು ಧರ್ಮಕ್ಕೆ ಸಸ್ಯಾಹಾರ ಮೌಲ್ಯವಾದರೆ, ಮತ್ತೊಂದು ಧರ್ಮಕ್ಕೆ ಮಾಂಸಾಹಾರ ಮೌಲ್ಯ. ಹೀಗೆ ಸಮಾಜ ದಲ್ಲಿ ಹಾಲಿ ಅನುಸರಿಸುತ್ತಿರುವ ಮೌಲ್ಯಗಳಲ್ಲೂ ನೂರಾರು ಭಿನ್ನತೆಗಳಿದ್ದು, ಇವು ಸಾವಿರಾರು ವರ್ಷಗಳಿಂದ ಆಯಾಯ ಮನುಷ್ಯರಲ್ಲಿ, ಸಮಾಜಗಳಲ್ಲಿ ಬೇರೂರಿದ್ದು, ಈ ಬೇರುಗಳನ್ನು ಕೀಳುವುದು ಸುಲಭ ಸಾಧ್ಯವಲ್ಲ.

ಮೌಲ್ಯ ಶಿಕ್ಷಣದ ಅಂಶಗಳು
ಮೌಲ್ಯ ಶಿಕ್ಷಣಕ್ಕೆ ಸಂಬಂಧಿಸಿದ ಜ್ಞಾನದ ಅಂಶಗಳು ವೈಯಕ್ತಿಕ ನೆಲೆಯ ಮೌಲ್ಯಗಳು(ಶುಚಿತ್ವ, ಸದೃಢ ದೇಹ ಮತ್ತು ಮನಸ್ಸು, ನಂಬಿಕೆಗಳು, ಆಚಾರ ವಿಚಾರಗಳು, ಧರ್ಮ ಮತ್ತು ದೇವರು, ಆಹಾರ ನಿಯಮಗಳು, ಅಭ್ಯಾಸಗಳು, ಆಸೆಗಳು,
ಸಾಂಸಾರಿಕ ಜವಾಬ್ದಾರಿಗಳು), ಸಾಮಾಜಿಕ ಮೌಲ್ಯಗಳು (ಸಹಕಾರ, ಸಂಘಟನೆ, ಸಾಮಾಜಿಕ ನಡವಳಿಕೆಗಳು, ಜಾತಿ, ಧರ್ಮ ಇತ್ಯಾದಿ), ಆರ್ಥಿಕ ಮೌಲ್ಯಗಳು(ಅವಶ್ಯಕ ಹಣದ ಮಿತಿ, ಭರಿಸಲಾಗುವ ವೆಚ್ಚ ಇತ್ಯಾದಿ), ರಾಜಕೀಯ ಮೌಲ್ಯಗಳು (ನಿಸ್ವಾರ್ಥದ ಸೇವಾ ಮನೋಭಾವ, ತ್ಯಾಗ, ಅಪ್ರತಿಮ ದೇಶಭಕ್ತಿ, ಸಂಘಟನಾಶಕ್ತಿ) ಮತ್ತು ಆಧ್ಯಾತ್ಮಿಕ ಮೌಲ್ಯಗಳು
(ಸೃಷ್ಟಿಕರ್ತನ ಅರಿವು, ಪೂರ್ಣ ಸೃಷ್ಟಿ) ಇವುಗಳಿಗೆ ಸಂಬಂಧಿಸಿದವುಗಳೆಂದು ವರ್ಗೀಕರಿಸಬಹುದಾಗಿದೆ.

ಶಾಂತಿಯುತವಾದ ಸದೃಢ ಸಮಾಜವನ್ನು ನಿರ್ಮಾಣ ಮಾಡಬೇಕಾದಲ್ಲಿ ವೈಯಕ್ತಿಕ ನೆಲೆಯ ಸಕಾರಾತ್ಮಕ ಮೌಲ್ಯಗಳಿಗೆ ಸಂಬಂಽಸಿದ ಜ್ಞಾನವುಳ್ಳ ಶಿಕ್ಷಣಕ್ಕೆ ಬಾಲ್ಯದಿಂದಲೇ ಒತ್ತು ಕೊಟ್ಟು ಕಾರ್ಯೋನ್ಮುಖವಾದಲ್ಲಿ ಇನ್ನಿತರ ಮೌಲ್ಯಗಳು ತಮಗೆ ತಾವೇ ಸರಿದಾರಿಯಲ್ಲಿ ಮೈದಾಳುತ್ತವೆ.

ವೈಯಕ್ತಿಕ ಮೌಲ್ಯಗಳು
ಮನುಷ್ಯ ವೈಜ್ಞಾನಿಕವಾಗಿ ದೇಹ, ಮನಸ್ಸು ಮತ್ತು ಆತ್ಮಗಳನ್ನುಳ್ಳ ಸಂಯುಕ್ತ, ಸಂಘಟನಾಶೀಲ ಅಧ್ಯಾತ್ಮಿಕ ಜೀವಿ. ಸದೃಢವಾದ ಮನುಷ್ಯನನ್ನು ರೂಪಿಸಲು ಈ ಮೂರನ್ನೂ ಸಕಾರಾತ್ಮಕವಾಗಿ ಬೆಳೆಸಿ ವಿಕಸಿಸುವ ಮೌಲ್ಯಗಳ ಅಳವಡಿಕೆ ಅತ್ಯವಶ್ಯಕ. ಇವೆಲ್ಲವುಗಳನ್ನು ಸಾಧಿಸಲು ಮನಸ್ಸೇ ಪ್ರಧಾನವಾದುದರಿಂದ ಅದಕ್ಕೆ ಪ್ರಾರಂಭದಿಂದಲೇ ಸದೃಢ ದೇಹ ನಿರ್ಮಾಣ ಮಾಡಿಕೊಳ್ಳುವ, ಸಕಾರಾತ್ಮಕವಾದ, ಸರ್ವೋದಯದ ಸಮನ್ವಯದ ಪೂರ್ಣದೃಷ್ಟಿಯ, ಮನುಜ ಮತದ ಮತ್ತು ವಿಶ್ವ ಪಥದ ಆಲೋಚನೆಗಳನ್ನು ಬಿತ್ತಿ ಬೆಳೆಸುವ ಸಾಹಿತ್ಯವುಳ್ಳ ಶಿಕ್ಷಣದಿಂದ ಮಾತ್ರ ಇದು ಸಾಧ್ಯ.

ಸದೃಢ ದೇಹ ನಿರ್ಮಾಣಕ್ಕಾಗಿ ವೈಜ್ಞಾನಿಕವಾದ ಆಹಾರ ನಿಯಮಗಳನ್ನು ಅನುಸರಿಸುವ ಮೌಲ್ಯಗಳ ಅರಿವು ಅತ್ಯವಶ್ಯಕ. ಇಂದು ಸಮಾಜದಲ್ಲಿ ಆಹಾರಕ್ಕೆ ಸಂಬಂಧಿಸಿದಂತೆ ವಿಭಿನ್ನ ಮೌಲ್ಯಗಳಿದ್ದು, ವೈಜ್ಞಾನಿಕ ದೃಷ್ಟಿಯಿಂದ ಕೂಡಿರುವ ಮೌಲ್ಯ ಗಳನ್ನು ಮಾತ್ರ ಮೌಲ್ಯ ಶಿಕ್ಷಣದಲ್ಲಿ ಅಳವಡಿಸಬೇಕು. ಯುವಕರು ಮಾದಕ ವಸ್ತುಗಳು ಮತ್ತಿತರ ದುಶ್ಚಟಗಳ ವ್ಯಸನಕ್ಕೆ ಇಂದು ಅತಿಯಾಗಿ ಬಲಿಯಾಗುತ್ತಿರುವುದರಿಂದ ಈ ಬಗ್ಗೆ ಅರಿವು ಮೂಡಿಸುವ ಶಿಕ್ಷಣವೂ ಸಹ ಮೌಲ್ಯ ಶಿಕ್ಷಣದ ಭಾಗವಾಗ ಬೇಕು. ಬದುಕಿನಲ್ಲಿ ಏನು ಮಾಡಬೇಕು? ಏನು ಮಾಡಬಾರದು ಎಂಬಂಶಗಳನ್ನುಳ್ಳ ವೈಜ್ಞಾನಿಕ ಸಾಹಿತ್ಯವೂ ಸಹ ಮೌಲ್ಯ ಶಿಕ್ಷಣದ ಭಾಗವಾಗಬೇಕು.

ಮನಸ್ಸಿನ ತರಬೇತಿ ಅತ್ಯವಶ್ಯಕ
ಮನಸ್ಸು ಮನುಷ್ಯನನ್ನು ನಿಯಂತ್ರಿಸುವುದರಿಂದ ಅವನು ತೆಗೆದುಕೊಳ್ಳುವ ಎಲ್ಲ ಸಕಾರಾತ್ಮಕ ಮತ್ತು ನಕಾರಾತ್ಮಕ ನಿರ್ಧಾರಗಳು ಮನಸ್ಸಿನಲ್ಲಿ ಉದ್ಭವಿಸುವ ಆಲೋಚನೆಗಳನ್ನು ಅವಲಂಬಿಸಿರುವುದರಿಂದ, ಇವುಗಳಿಗನುಗುಣವಾಗಿ ಕೈಗೊಳ್ಳುವ ಕರ್ಮಗಳಿಂದ ವೈಯಕ್ತಿಕವಾಗಿ ಸುಖ-ದುಃಖಗಳು ಮತ್ತು ಸಾಮಾಜಿಕ ಶಾಂತಿ ಉಂಟಾಗುವುದರಿಂದ ಮನಸ್ಸನ್ನು ಸರಿ ದಿಕ್ಕಿನಲ್ಲಿ ನಿಯಂತ್ರಿಸುವ ಮೌಲ್ಯಗಳ ಪ್ರತಿಷ್ಠಾಪನೆ ಬಾಲ್ಯದಲ್ಲಿಯೇ ಅತ್ಯವಶ್ಯಕ.

ಮನಸ್ಸಿನ ಇರುವಿಕೆ, ಅದರ ಕಾರ್ಯಗಳು, ಭಾವಗಳು(ಸಕಾರಾತ್ಮಕ ಮತ್ತು ನಕಾರಾತ್ಮಕ) ಮತ್ತು ಅದನ್ನು  ಸಕಾರಾತ್ಮಕ ವಾಗಿ ನಿಯಂತ್ರಿಸುವ ವೈಜ್ಞಾನಿಕ ವಿಧಿ ವಿಧಾನಗಳನ್ನುಳ್ಳ ಮಾನಸಿಕ ಆರೋಗ್ಯದ ಶಿಕ್ಷಣ ಮೌಲ್ಯ ಶಿಕ್ಷಣದ ಪ್ರಮುಖ ಭಾಗವಾಗಬೇಕು.

ವಸುದೈವ ಕುಟುಂಬಕಂ 

ಮನುಷ್ಯ ಸೃಷ್ಟಿಯ ವಿಕಾಸ ಕ್ರಿಯೆಯ ಒಂದು ಹಂತದಲ್ಲಿ ಬಂದವನಾದುದರಿಂದ ಸೃಷ್ಟಿಗೂ ಅವನಿಗೂ ಅವಿನಾಭಾವವಾದ, ಪೂರ್ವನಿಗದಿತವಾದ, ವೈಜ್ಞಾನಿಕವಾದ ಜೋಡಿತ ಸಂಬಂಧವಿದೆ. ಮಾನವನ ಅಸ್ತಿತ್ವ ಈ ಜೋಡಿತ ಕ್ರಿಯೆಯನ್ನು ಬಲಗೊಳಿಸುವುದರಲ್ಲಿದೆ. ಸಡಿಲಗೊಳಿಸಿದಲ್ಲಿ ಅವನ ಅಸ್ತಿತ್ವಕ್ಕೆ ಹಾನಿಯಾಗಲಿದೆ ಎಂಬ ವೈಜ್ಞಾನಿಕ ಸತ್ಯಗಳನ್ನು
ದೃಷ್ಟಾಂತಗಳ ಮೂಲಕ ತಿಳಿಸುವ ಸಾಹಿತ್ಯ ಮೌಲ್ಯ ಶಿಕ್ಷಣದ ಪ್ರಮುಖ ಭಾಗವಾಗಬೇಕು. ಇಡೀ ವಿಶ್ವವೇ ಪ್ರತಿಯೊಬ್ಬ ರೊಡನೆ ವೈಜ್ಞಾನಿಕವಾಗಿ ಜೋಡಿತವಾಗಿದ್ದು, ಪ್ರತಿಯೊಬ್ಬ ತಾನಿರುವಲ್ಲಿ ಮಾಡುವ ವಿಧ್ವಂಸಕ ಕೃತ್ಯಗಳು ಇಡೀ ಸೃಷ್ಟಿಯ ಮೇಲೆ ಪರಿಣಾಮ ಬೀರಿ ತನ್ನ ಅಸ್ತಿತ್ವಕ್ಕೂ ಮಾರಕವಾಗಲಿದೆ ಎಂಬ ಸತ್ಯವನ್ನು ಮನವರಿಕೆ ಮಾಡಿಕೊಡುವ ಸಾಹಿತ್ಯ
ಅತ್ಯವಶ್ಯಕ. ‘ವಸುದೈವ ಕುಟುಂಬಕಂ’ ಎಂಬ ಭಾರತೀಯ ನಾಣ್ಣುಡಿಯ ವೈಜ್ಞಾನಿಕ ಹಿನ್ನೆಲೆಯನ್ನು ಮನದಟ್ಟಾಗುವಂತೆ ಅರ್ಥಮಾಡಿಸುವ ಬೋಧನಾ ಸಾಹಿತ್ಯ ಮೌಲ್ಯಶಿಕ್ಷಣದ ಭಾಗವಾಗಬೇಕು.

ಮಾನವೀಯ ಅಂತಃಕರಣ ಮನುಷ್ಯ ಮೂಲತಃ ಸಂಘಜೀವಿಯಾಗಿದ್ದು, ತಾನು ನೆಮ್ಮದಿಯಿಂದ ಬದುಕಲು, ಮೇಲು ಕೀಳೆಂಬ ಭೇದವಿಲ್ಲದ, ಪರಸ್ಪರ ಪ್ರೀತಿಪೂರ್ವಕವಾದ ಸಂಬಂಧಗಳನ್ನು ಬೆಳೆಸಿಕೊಳ್ಳುವುದರಿಂದ ಮಾತ್ರ ತನಗೂ ನೆಮ್ಮದಿ ಮತ್ತು ಸಮಾಜದಲ್ಲಿಯೂ ಶಾಂತಿ ಲಭಿಸುತ್ತದೆ ಎಂಬ ಸಾಮಾಜಿಕ ಸತ್ಯವನ್ನು ದೃಷ್ಟಾಂತಗಳ ಮೂಲಕ ಮನದಟ್ಟು ಮಾಡುವ ಶಿಕ್ಷಣ ಮೌಲ್ಯ ಶಿಕ್ಷಣದ ಭಾಗವಾಗಬೇಕು. ಆಸೆಗಳು ಮನುಷ್ಯನ ಜೀವನೋತ್ಸಾಹವನ್ನು ವೃದ್ಧಿಸುತ್ತವೆ.

ಆಸೆಗಳು ಸಹಜ. ಆದರೆ ಯಾವ ಬಗೆಯ ಆಸೆಗಳನ್ನು ಅತಿ ಯಾಗಿಟ್ಟುಕೊಳ್ಳಬೇಕು, ಯಾವ ಬಗೆಯ ಆಸೆಗಳನ್ನು ಮಿತಿಯಾಗಿಟ್ಟುಕೊಳ್ಳಬೇಕು ಎಂಬುದೂ ಸಹ ಮೌಲ್ಯಶಿಕ್ಷಣದ ಭಾಗವಾಗಬೇಕು. ಇನ್ನಿತರನ್ನು ಶೋಷಿಸುವ, ಹಿಂಸಿಸುವ ಆಸೆಗಳಾಗಲಿ, ದುರಾಸೆ ಗಳಾಗಲಿ, ಅತಿ ಆಸೆಗಳಿಂದ ತನಗೂ ನೆಮ್ಮದಿಯಿಲ್ಲ ಮತ್ತು ಸಮಾಜದ ಶಾಂತಿಗೂ ಕಂಟಕಪ್ರಾಯ ಎಂಬ ಅಂಶಗಳನ್ನು ಮನದಟ್ಟು ಮಾಡಿಕೊಡುವ ಸಾಹಿತ್ಯವಿರಬೇಕು.

ಸೃಷ್ಟಿಯಲ್ಲಿನ ಇನ್ನಿತರರನ್ನು ತನ್ನಂತೆಯೇ ಕಾಣುವ, ಇನ್ನಿತರರ ಕಷ್ಟಗಳಿಗೆ ತನ್ನ ಕೈಲಾದಷ್ಟು ಸ್ಪಂದಿಸುವ ಮಾನವೀಯ ಅಂತಃಕರಣದ ವ್ಯಕ್ತಿತ್ವ ನಿರ್ಮಾಣ ಮಾಡುವ ಅಂಶಗಳನ್ನುಳ್ಳ ವಿಚಾರಗಳು ಮೌಲ್ಯ ಶಿಕ್ಷಣದ ಭಾಗವಾಗಬೇಕು. ಜಾತಿ, ಮತ, ಧರ್ಮಗಳನ್ನು ಮೀರಿದ ಇಡೀ ಮಾನವಕುಲ ಮತ್ತು ಸೃಷ್ಟಿಯನ್ನು ಪ್ರೀತಿಸಿ, ಆರಾಧಿಸುವ ಮತ್ತು ಬದುಕಿನ ಅಂತಿಮ ಸತ್ಯಗಳನ್ನು ಮನಸ್ಸಿನಲ್ಲಿ ಪ್ರತಿ ಷ್ಠಾಪನೆ ಮಾಡುವ ಸಾಹಿತ್ಯವುಳ್ಳ ಶಿಕ್ಷಣ ಮಾತ್ರ ನೈಜ ಮೌಲ್ಯ ಶಿಕ್ಷಣವಾಗಿ ಎಲ್ಲರ ಶಾಂತಿಗೆ
ನಾಂದಿಯಾಗಬಲ್ಲದು.

ಕೃತಜ್ಞತೆ ಮನುಷ್ಯ ರೂಢಿಸಿಕೊಳ್ಳಬೇಕಾದ ಮತ್ತೊಂದು ಗುಣ. ನಮ್ಮ ಹುಟ್ಟು ಮತ್ತು ಬೆಳವಣಿಗೆಗೆ ಕಾರಣಕರ್ತರಾದ ತಂದೆ ತಾಯಿಗಳು, ಸೃಷ್ಟಿಕರ್ತ ಮತ್ತು ಸೃಷ್ಟಿ, ನಮ್ಮ ಏಳಿಗೆಗೆ ಸಹಾಯಮಾಡಿದ ಸ್ನೇಹಿತರು ಮತ್ತು ಹಿತೈಷಿಗಳು ಇವರುಗಳ ಬಗ್ಗೆ
ಅತ್ಯಂತ ಕೃತಜ್ಞತಾಭಾವದಿಂದ ಮತ್ತು ಭಕ್ತಿಯಿಂದ ವರ್ತಿಸಬೇಕು. ಸ್ವಾಭಿಮಾನ, ಧೈರ್ಯ, ಸಹನೆ, ಸತ್ಯದ ಪ್ರತಿಪಾದನೆ, ಸಹಕಾರ ಮನೋವೃತ್ತಿ, ಗುರುಹಿರಿಯರ ಬಗ್ಗೆ ಭಕ್ತಿಭಾವ, ದೇಶಪ್ರೇಮ, ಸರ್ವೋದಯಕ್ಕಾಗಿ ತ್ಯಾಗ ಈ ಎಲ್ಲ ಗುಣಗಳನ್ನು
ಬೆಳೆಸುವ ದೃಷ್ಟಾಂತಗಳನ್ನೊಳಗೊಂಡ ಸಾಹಿತ್ಯ ಮೌಲ್ಯ ಶಿಕ್ಷಣದ ಭಾಗವಾಗಬೇಕು. ಈ ಗುಣಗಳನ್ನು ಒಳಗೊಂಡ ವ್ಯಕ್ತಿಗಳ ಜೀವನ ಚಿತ್ರ ಪಠ್ಯದ ಭಾಗವಾಗಬೇಕು.

ಮೌಲ್ಯಯುತ ಶಿಕ್ಷಣಕ್ಕೆ ಸಂಬಂಧಿಸಿದ ವಿಷಯಗಳು, ಅವುಗಳ ವ್ಯಾಪ್ತಿ, ಮಾನದಂಡಗಳು ಇತ್ಯಾದಿಗಳನ್ನು ನಿರ್ಧರಿಸಲು ಸಾಹಿತಿಗಳು, ಸಾಮಾಜಿಕ ತಜ್ಞರು, ಮಾನಸಿಕ ತಜ್ಞರು, ತಜ್ಞವೈದ್ಯರು, ಸಾಮಾಜಿಕ ಚಿಂತಕರು, ಅಧ್ಯಾತ್ಮಿಕ ಚಿಂತಕರನ್ನೊಗೊಂಡ ಸಮಿತಿ ರಚಿಸಿ, ಈ ಬಗ್ಗೆ ವಿಸ್ತತ ಚರ್ಚೆಯಾಗಿ ನಿರ್ಧಾರಕ್ಕೆ ಬರುವುದು ಸೂಕ್ತ. ಮೌಲ್ಯ ಶಿಕ್ಷಣದ
ಅಂಶಗಳು ಸಂವಿಧಾನದ ಅಂಶಗಳಡಿಯಲ್ಲಿರಬೇಕು. ತರಾತುರಿ ಸಲ್ಲದು. ಮೌಲ್ಯಯುತ ವ್ಯಕ್ತಿತ್ವ ಮತ್ತು ಮೌಲ್ಯಯುತ ಸಮಾಜದ ನಿರ್ಮಾಣ ಕೇವಲ ಮೌಲ್ಯಯುತ ಶಿಕ್ಷಣದಿಂದ ಆಗುತ್ತದೆ ಎಂಬುದು ಭ್ರಮೆ. ಅರಗಿಸಿಕೊಂಡ ಮೌಲ್ಯಗಳನ್ನು ಅನುಕರಣೆ ಮಾಡುವವರಿಂದ ಮಾತ್ರ ಇನ್ನಿತರರು ಪ್ರಭಾವಿತರಾಗುತ್ತಾರೆ.

ಅಂತಹ ಉದಾಹರಣೆಗಳು ಮತ್ತು ಅನುಕರಣೀಯ ವ್ಯಕ್ತಿಗಳ ಸಂಖ್ಯೆ ಹೆಚ್ಚಾಗಬೇಕು. ಇಂದು ನಮ್ಮ ಮುಂದೆ ವಿವಿಧ ಕ್ಷೇತ್ರಗಳಲ್ಲಿ ಇಂತಹ ಅನುಕರಣೀಯರು ಎಷ್ಟು ಮಂದಿ ಇದ್ದಾರು?

ರಾಜಕೀಯ ಮೌಲ್ಯಗಳು
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರ ನಡೆಸುವ ರಾಜಕೀಯ ನಾಯಕರುಗಳು, ಅಧಿಕಾರಿಗಳು, ಸಂತರುಗಳು, ಶಿಕ್ಷಣತಜ್ಞರುಗಳು ಇನ್ನಿತರರಿಗೆ ಮಾರ್ಗದರ್ಶಕರಾಗಿ ಕಾಣುತ್ತಾರೆ. ಅವರುಗಳಲ್ಲಿ ಶ್ರೇಷ್ಠಮಟ್ಟದ ಮೌಲ್ಯಗಳನ್ನು ಕಾಣುವಂತಾದರೆ ಮಾತ್ರ ಇನ್ನಿತರರು ಪ್ರಭಾವಿತರಾಗುತ್ತಾರೆ. ಇಂದು ಅಪಮೌಲ್ಯಗಳೇ ಮೌಲ್ಯಗಳಾಗಿ ರಾಜಕೀಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ವಿಜೃಂಭಿಸುತ್ತಿವೆ. ಎಲ್ಲ ಕ್ಷೇತ್ರಗಳೂ ಅಪಮೌಲ್ಯಗಳಿಂದ ವಿಮುಕ್ತಿಗೊಳ್ಳದ ಹೊರತು ಮೌಲ್ಯಶಿಕ್ಷಣದ ಪ್ರಭಾವ ಕೇವಲ ಕಾಗದದ  ಮೇಲೆ ಮಾತ್ರ ಉಳಿಯುತ್ತದೆ. ಈ ನಿಟ್ಟಿನಲ್ಲಿ ಎಲ್ಲಾ ಕ್ಷೇತ್ರಗಳ ಪ್ರತಿಯೊಬ್ಬರೂ ಬದಲಾದರೆ ಮಾತ್ರ ಮೌಲ್ಯ ಶಿಕ್ಷಣಕ್ಕೆ ಅರ್ಥ ಬರುತ್ತದೆ. ಹಾಗಾಗಲಿ ಎಂದು ಆಶಿಸೋಣ.

ಯಥಾ ರಾಜ ತಥಾ ಪ್ರಜಾ!