ವ್ಯಕ್ತಿ ಚಿತ್ರ
ಗ.ನಾ.ಭಟ್ಟ
ನಮ್ಮಲ್ಲಿ ಎಲೆಮರೆಯ ಕಾಯಿಯಂತೆ ಎಂಬ ಮಾತೊಂದು ಇದೆ. ಮರವೊಂದರಲ್ಲಿ ಲಕ್ಷ ಲಕ್ಷ ಎಲೆಗಳಿರುತ್ತವೆ. ಅವುಗಳ ಮಧ್ಯೆ ಅಷ್ಟೋ ಇಷ್ಟೋ ಫಲಗಳು ಬಿಟ್ಟಿರುತ್ತವೆ. ಅವುಗಳಲ್ಲಿ ಕೆಲವು ಗೋಚರಕ್ಕೆ ಬರುತ್ತವೆ. ಮತ್ತೆ ಕೆಲವು ಎಲೆಗಳ ಮಧ್ಯೆ ಮರೆಯಾಗಿಯೇ ಇರುತ್ತವೆ. ಅಂಥವನ್ನು ಕುರಿತೇ ಎಲೆಮರೆಯ ಕಾಯಿಯಂತೆ ಎಂಬ ಗಾದೆ ಹುಟ್ಟಿಕೊಂಡಿದ್ದು. ಮನುಷ್ಯರಲ್ಲೂ ಕೂಡಾ ಕಾಯಕವೇ ಕೈಲಾಸ ಎಂದು ಬಗೆದು ಯಾವ ಪ್ರಚಾರ ಬಯಸದೆ, ಕೀರ್ತಿ ಕಾಮನೆಗೊಳಗಾಗದೆ, ಪ್ರತಿದಿನದ ಪತ್ರಿಕೆಯಲ್ಲೋ, ಟಿವಿಯಲ್ಲೋ, ಕಂಪ್ಯೂಟರ್ ಪರದೆಯ ಮೇಲೋ, ಫೇಸ್ ಬುಕ್ಕಲ್ಲೋ, ಯೂಟ್ಯೂಬಲ್ಲೋ ಇಣುಕದೆ ತಾನಾಯಿತು ತನ್ನ ಕೆಲಸವಾಯಿತು ಎಂದು ಬಗೆದು ಅದರಂತೆ ನಡೆದುಕೊಳ್ಳುವ ಒಂದಿಷ್ಟು ಜನರಿರುತ್ತಾರೆ.
ಅಂಥವರನ್ನು ಕುರಿತೇ ಹೇಳಿದ ಮಾತಿದು. ನಿಜ ಅರ್ಥದಲ್ಲಿ ಇಂಥವರೇ ಸಮಾಜದ ಹೀರೋಗಳು; ಆದರ್ಶ ವ್ಯಕ್ತಿಗಳು. ಆದರೆ ನಾವೆಂತಹ ತಿಳಿಗೇಡಿಗಳೆಂದರೆ- ಏಕಕಾಲಕ್ಕೆ ೫೦ ಜನರನ್ನು ಹೊಡೆದುರುಳಿಸುವಂತೆ ಅಭಿನಯಿಸುವ ಸಿನಿಮಾ ನಟರನ್ನೋ, ಕ್ರಿಕೆಟ್ ಆಟಗಾರರನ್ನೋ, ರಾಜಕೀಯ ಪುಡಾರಿಗಳನ್ನೋ ನಾಯಕರೆಂದು, ಹೀರೋಗಳೆಂದು ಭಾವಿಸಿಬಿಡುತ್ತೇವೆ. ಅಂತಹ ತಿಳಿಗೇಡಿತನ ವನ್ನು ಸ್ವಲ್ಪ ಬದಿಗಿರಿಸಿ, ನಮ್ಮ ಭ್ರಾಮಕ ಪ್ರಪಂಚದ ಪರದೆಯನ್ನು ಸ್ವಲ್ಪ ಸರಿಸಿ ನೋಡುವುದಾದರೆ ನಮಗೆ ನಿಜ ನಾಯಕರು ಕಾಣಸಿಗುತ್ತಾರೆ.
ಅಂಥವರಲ್ಲಿ ಮಂಗಳೂರು ಗಣೇಶ ಬೀಡಿ ವರ್ಕ್ಸ್ ಮಾಲಿಕ ಡಾ. ಎಂ. ಜಗನ್ನಾಥ ಶೆಣೈ ಒಬ್ಬರು. ಎಂ. ಜಗನ್ನಾಥ ಶೆಣೈ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದವರು. ಇವರ ತಾತ ಬಿ. ಮಾಧವ ಶೆಣೈ ಅವರು ಉದ್ಯೋಗ ಅರಸುತ್ತಾ ಮೈಸೂರಿಗೆ ಬಂದವರು. ಬಿ. ರಾಘವ ಪ್ರಭು ಎಂಬವರೊಂದಿಗೆ ೧೯೩೨ರಲ್ಲಿ ಮೈಸೂರಲ್ಲಿ ಬೀಡಿ ಉದ್ಯಮ ಆರಂಭಿಸಿದರು. ಅದಕ್ಕೂ ಮೊದಲು ಅವರು ಮೈಸೂರು ಅರಮನೆಯ ಬ್ಯಾಂಡ್ ಕಛೇರಿಯಲ್ಲಿ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದರು. ಸ್ವಲ್ಪ ದಿನಗಳವರೆಗೆ ಅವರು ಮೈಸೂರಿನ ಆಗಿನ ಪ್ರತಿಷ್ಠಿತ ಶಾರದಾ ವಿಲಾಸ ಪ್ರೌಢಶಾಲೆ ಯಲ್ಲಿ ಶಿಕ್ಷಕರಾಗಿಯೂ ಕೆಲಸ ಮಾಡಿದ್ದರು.
ಮಾಧವ ಶೆಣೈ ಅವರು ೧೯೬೮ರಲ್ಲಿ ಬೀಡಿ ಉದ್ಯಮದಿಂದ ನಿವೃತ್ತಿ ಹೊಂದಿದಾಗ ಅವರ ವಾರ್ಷಿಕ ಆದಾಯ ೧೨ ಲಕ್ಷ ಇತ್ತು. ೬೦ರ ದಶಕದಲ್ಲಿ ೧೨ ಲಕ್ಷ ಅಂದರೆ ಕಡಿಮೆ ಮೊತ್ತವಲ್ಲ. ಅವರ ಮೊಮ್ಮಗ ಜಗನ್ನಾಥ ಶೆಣೈ ಅವರು- ‘ಆಗಿನ ಕಾಲದಲ್ಲಿ ತೆರಿಗೆಗಳು ಅದರಲ್ಲೂ ಎಸ್ಟೇಟ್ ಸುಂಕ
ತುಂಬಾ ಜಾಸ್ತಿ ಇತ್ತು. ನಮ್ಮ ಸಂಪಾದನೆಯಲ್ಲಿ ಸಂಪಾದನೆ ಗಿಂತ ಹೆಚ್ಚಿನ ಭಾಗ ತೆರಿಗೆ ರೂಪದಲ್ಲಿ ಸೋರಿ ಹೋಗುತ್ತಿತ್ತು. ೧೯೭೫ರ ನಂತರ ಅದು ಇಳಿಮುಖವಾಯಿತು. ನಾವು ತೆರಿಗೆ ಪಾವತಿಸಲು ಹಲವಾರು ವಿತರಕರಿಂದ ಸಾಲ ಪಡೆಯುತ್ತಿದ್ದೆವು” ಎಂದು ಹೇಳುತ್ತಾರೆ.
೯೦ ವರ್ಷಗಳ ಇತಿಹಾಸವಿರುವ ಮಂಗಳೂರು ಗಣೇಶ ಬೀಡಿ ವರ್ಕ್ಸ್ ಈಗಲೂ ಲಾಭದಾಯಕ ಉದ್ಯಮವಾಗಿ ಮುಂದುವರಿದಿದೆ. ಅದರ ಗುಟ್ಟು ಇಷ್ಟೇ! ತಾತ- ಮೊಮ್ಮಕ್ಕಳವರೆಗೆ ಅದೇ ಪ್ರಾಮಾಣಿಕತೆ, ಶಿಸ್ತು, ವೃತ್ತಿಪರತೆ, ನಿರಹಂಕಾರ, ಪರೋಪಕಾರಬುದ್ಧಿ, ದೈವಶ್ರದ್ಧೆ ಮೊದಲಾದ
ಗುಣಗಳು. ನಮ್ಮ ದೇಶದಲ್ಲಿ ಬೀಡಿ-ಸಿಗರೇಟು- ಮದ್ಯಪಾನಗಳನ್ನು ನಿಷೇಧಿಸುವುದರ ಬಗ್ಗೆ ದೊಡ್ಡ ಪ್ರಮಾಣದ ಜಾಹಿರಾತುಗಳೇ ಇವೆ. ಬೀಡಿ-ಸಿಗರೇಟು ಸೇದಿದರೆ ಕ್ಯಾನ್ಸರ್ ಬರುವುದೆಂದೂ, ಹಾರ್ಟ್ ಪ್ರಾಬ್ಲಮ್ ಆಗುವುದೆಂದೂ ಪ್ರಚಾರವಿದೆ. ಅದರ ಬಗ್ಗೆ ಜಗನ್ನಾಥ ಶೆಣೈ ಹಾಗೆ ಗಾಬರಿ ಯಾಗುವ ಅಗತ್ಯವೇ ಇಲ್ಲವೆಂದು ಹೇಳುತ್ತಾರೆ.
ಮೈಸೂರಿನ ಭಾರತ್ ಕ್ಯಾನ್ಸರ್ ಆಸ್ಪತ್ರೆಗೆ ಭೇಟಿಯಿತ್ತು ಅದರ ಸತ್ಯಾಸತ್ಯತೆಯನ್ನು ತಿಳಿದ ಅವರು- ‘ಅಲ್ಲಿ ಕ್ಯಾನ್ಸರ್ ರೋಗಕ್ಕೆ ಬಲಿಯಾದವರು ಶೇ. ೮೦ರಷ್ಟು ಮಹಿಳೆಯರು ಧೂಮಪಾನ ಅಥವಾ ಮದ್ಯಪಾನ ಮಾಡಿದವರಲ್ಲ’ ಎನ್ನುತ್ತಾರೆ. ಹಾನಿಯ ಪರಿಮಾಣ ಗಮನಿಸಿದಲ್ಲಿ ‘ಸಿಗರೇಟ್ ಗಿಂತ ಬೀಡಿ ಉತ್ತಮ. ಬೀಡಿ ತಯಾರಿಸಲು ಬಲಿತ ತಂಬಾಕು ಎಲೆಗಳನ್ನು ಬಳಸುತ್ತಾರೆ. ಅದೇ ಸಿಗರೇಟನ್ನು ತಯಾರಿಸಲು ಇನ್ನೂ ಬಲಿಯದ ಎಳಸಾದ ಎಲೆಗಳನ್ನು ಬಳಸುತ್ತಾರೆ’ ಎಂದು ಹೇಳುತ್ತಾರೆ.
ಇದನ್ನು ಅವರು ‘ತಾವು ಬೀಡಿ ತಯಾರಿಸುವವರು’ ಎಂದು ಸಮರ್ಥಿಸಿಕೊಳ್ಳುವುದಕ್ಕೆ ಹೇಳುವ ಮಾತಲ್ಲ. ವೈಜ್ಞಾನಿಕ ಆಧಾರವನ್ನು ನೀಡಿಯೇ ಹೇಳುತ್ತಾರೆ. ಸಮಾಜಮುಖಿ ಕೆಲಸ: ಈಗಿನ ಹಾಲಿ ಮಾಲಿಕ ಎಂ.ಜಗನ್ನಾಥ ಶೆಣೈ ಅವರ ಸಮಾಜಮುಖೀ ಕೆಲಸಕ್ಕೆ, ಮಾನವ ಕಲ್ಯಾಣಕ್ಕೆ ಸಂಬಂಧಪಟ್ಟ ಸಂಗತಿಗಳು ಹಲವಾರಿವೆ. ಅವರು ಮಾಡಿದ ದಾನ- ಧರ್ಮಗಳಿಗಂತೂ ಲೆಕ್ಕವೇ ಇಲ್ಲ. ಜಗನ್ನಾಥ ಶೆಣೈ ಅವರು ಕುಟುಂಬದ ಮೂರನೆ ತಲೆಮಾರಿನವರು. ಶೆಣೈ ಅವರಿಗೆ ಈಗ ೬೮ ವರ್ಷ. ೨೦-೦೧-೧೯೫೪ರಲ್ಲಿ ಎಂ. ಗೋವಿಂದರಾವ್ ಮತ್ತು ರಮಾಬಾಯಿ ದಂಪತಿಗೆ ೨ನೆಯ ಮಗನಾಗಿ ಹುಟ್ಟಿದರು.
ಒಬ್ಬ ಅಣ್ಣ, ಒಬ್ಬ ತಮ್ಮ ಮತ್ತು ಇಬ್ಬರು ಸಹೋದರಿಯರು ಇವರ ಒಡಹುಟ್ಟಿದವರು. ಜಗನ್ನಾಥ ಶೆಣೈ ಅವರ ಬಾಲ್ಯ, ಪ್ರೌಢ, ಕಾಲೇಜು ವಿದ್ಯಾಭ್ಯಾಸಗಳೆಲ್ಲವೂ ಮೈಸೂರಲ್ಲೇ. ಬನುಮಯ್ಯ ಕಾಲೇಜಿನಲ್ಲಿ ಅವರು ಬಿ.ಕಾಮ್. ಪದವಿ ಪಡೆದರು. ಅವರ ತಂದೆ ಚಿಕ್ಕ ವಯಸ್ಸಿನಲ್ಲೇ ನಿಧನರಾದ ಪ್ರಯುಕ್ತ ಮನೆ ಮತ್ತು ಗಣೇಶ ಬೀಡಿ ವರ್ಕ್ಸನ ಸಂಪೂರ್ಣ ಜವಾಬ್ದಾರಿ ಇವರ ಹೆಗಲ ಮೇಲೇ ಬಿತ್ತು. ಜಗನ್ನಾಥ ಶೆಣೈ ಅವರಿಗೆ ರಕ್ತಗತವಾಗಿಯೇ ಬಂದ ಗುಣ ಎಂದರೆ- ಪರೋಪಕಾರಬುದ್ಧಿ. ದೇಹಿ ಎಂದವರಿಗೆ ಇಲ್ಲ ಎಂದು ಹೇಳಿಯೇ ಗೊತ್ತಿಲ್ಲದವರು ಅವರು.
ತೈತ್ತಿ ರೀಯ ಉಪನಿಷತ್ತಿನಲ್ಲಿ ಬರುವ
“ಶ್ರದ್ಧಯಾ ದೇಯಮ್ | ಅಶ್ರದ್ಧಯಾ
ದೇಯಮ್ | ಶ್ರಿಯಾ ದೇಯಮ್ |
ಹ್ರಿಯಾ ದೇಯಮ್ | ಭಿಯಾ
ದೇಯಮ್ | ಸಂವಿದಾ ದೇಯಮ್ |”
ಎಂಬ ಮಾತಿಗೆ ನಿದರ್ಶನರಾದವರು ಅವರು. “ಕೊಡುವುದನ್ನು ಶ್ರದ್ಧೆ ಯಿಂದ, ನಂಬಿಕೆಯಿಂದ ಕೊಡಬೇಕು. ಕೊಟ್ಟ ದುಡ್ಡು ಏನಾಗುತ್ತದೆಯೋ
ಎಂಬ ಅಪನಂಬಿಕೆಯಿಂದ ಕೊಡಬಾರದು. ಕೊಡುವುದನ್ನು ಸದ್ಭಾವದಿಂದಲೇ ಕೊಡಬೇಕು” ಎಂದು ಉಪನಿಷತ್ತು ಹೇಳುತ್ತದೆ.
ಶ್ರಿಯಾ ದೇಯಮ್ ಅಂದರೆ ತನ್ನ ಐಶ್ವರ್ಯಕ್ಕೆ ತಕ್ಕಂತೆ ದಾನ ಮಾಡಬೇಕು ಎಂದು. ದಿನಂಪ್ರತಿ ಕೋಟ್ಯಂತರ ರು. ಗಳ ವಹಿವಾಟು ಇರುವ ಅವರು ಎಂದೂ ತನ್ನ ಐಶ್ವರ್ಯ, ಸಂಪತ್ತು, ದೌಲತ್ತನ್ನು ಪ್ರದರ್ಶನಕ್ಕೆ ಇಟ್ಟವರಲ್ಲ. ‘ಕೊಡುವುದನ್ನು ಸಂಕೋಚದಿಂದ ಕೊಡಬೇಕು; ಅಬ್ಬರ, ಆಡಂಬರ ಗಳಿಂದ ಕೊಡಬಾರದು’- ಹ್ರಿಯಾ ದೇಯಮ್ ಅನ್ನು ತ್ತದೆ ಉಪನಿಷತ್ತು. ತಾನು ನೀಡುತ್ತಿರುವುದು ದೊಡ್ಡದೇ ಆದರೂ ಅದು ಸಣ್ಣದು ಎಂಬ ವಿನಯಭಾವ ಇರಬೇಕು ಎಂಬುದು ಈ ಉಪನಿಷದ್ವಾಣಿಯ ತಾತ್ಪರ್ಯ.
ಇಂದು ಮೈಸೂರಿನಲ್ಲಿ ನಡೆಯುವ ಅನೇಕ ಸಾಂಸ್ಕೃತಿಕ ಸಂಘ-ಸಂಸ್ಥೆಗಳಿಗೆ ಶೆಣೈ ಅವರು ನೀಡಿದ ಕೊಡುಗೆಯನ್ನು ಗಮನಿಸಿದರೆ ಆಶ್ಚರ್ಯ ವಾಗುತ್ತದೆ. ಇಷ್ಟೊಂದು ದಾನ ಮಾಡುವವರು ನಮ್ಮ ಅಕ್ಕಪಕ್ಕದಲ್ಲೇ ಇದ್ದಾರೆಯೇ ಎಂದು ಮೂಗಿನ ಮೇಲೆ ಬೆರಳಿಡುವಂತಾಗುತ್ತದೆ. ಮೈಸೂರಿನ
ನಾದಬ್ರಹ್ಮ ಸಂಗೀತ ಸಭೆ ಮತ್ತು ವೀಣೆ ಶೇಷಣ್ಣ ಭವನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವವರಿಗೆ ತವರು ಮನೆಯಿದ್ದಂತೆ. ಶೆಣೈ ಅವರು ವೀಣೆ ಶೇಷಣ್ಣ ಭವನದ ಮತ್ತೊಂದು ಕವಲಾಗಿ ಅಥವಾ ವಿಸ್ತಾರವಾಗಿ ಅದರ ಪಕ್ಕ ದಲ್ಲೇ ಒಂದು ಬಯಲು ರಂಗಮಂದಿರ ಕಟ್ಟಿಸಿಕೊಟ್ಟಿದ್ದಾರೆ.
ನಾದಬ್ರಹ್ಮ ಸಂಗೀತ ಸಭೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರ ನಡೆಯುವುದಕ್ಕೆ ತಮ್ಮದೂ ಒಂದು ಯೋಗದಾನವಿರಲಿ ಎಂದು ತಾಯಿಯವರ ಹೆಸರಲ್ಲಿ ದತ್ತಿ ನಿಧಿ ಸ್ಥಾಪಿಸಿದ್ದಾರೆ. ಅದರಿಂದ ವರ್ಷಕ್ಕೆ ಎರಡು ಕಾರ್ಯಕ್ರಮಗಳು ನಡೆಯುತ್ತವೆ. ಇವಲ್ಲದೆ ರಾಗವೈಭವ, ರಾಮಸೇವಾ ಮಂಡಳಿ, ಪ್ರಸನ್ನ ಪಾರ್ವತಿ ಕಲ್ಯಾಣ ಮಂಟಪ, ಗೀತ ಗಾತಾ ಚಲ್ ಮುಂತಾದ ಸಂಸ್ಥೆಗಳಿಗೆ ಯಥೇಚ್ಛವಾಗಿ ದಾನ ಮಾಡಿದ್ದಾರೆ.
ರಂಗಮಂದಿರ: ೨ ವರ್ಷಗಳ ಹಿಂದೆ ರಾಮಕೃಷ್ಣ ನಗರದಲ್ಲಿ ಶೆಣೈ ಅವರ ತಂದೆ-ತಾಯಿಯರ ಹೆಸರಲ್ಲಿ- ರಮಾ ಗೋವಿಂದ ರಂಗಮಂದಿರ ತಲೆಯೆತ್ತಿದೆ. ಅದರ ನಿರ್ಮಾಣಕ್ಕೆ ಇನ್ನೂ ಅನೇಕ ಮಹನೀಯರ, ಸಂಘ-ಸಂಸ್ಥೆಗಳ ಪಾಲು ಇದ್ದರೂ ಜಗನ್ನಾಥ ಶೆಣೈ ಮತ್ತು ಅವರ ಸಹೋದರ
ಗೋಪಿನಾಥ ಶೆಣೈ ಅವರ ಪಾಲು ಹೆಚ್ಚಿನದಿರುತ್ತದೆ. ಅದನ್ನು ತಾವಿಟ್ಟುಕೊಳ್ಳದೆ ಅದರ ನಿರ್ವಹಣೆಗಾಗಿ ಅದರ ಪಕ್ಕದಲ್ಲೇ ಇರುವ ನೃಪತುಂಗ ಕನ್ನಡ ಶಿಕ್ಷಣ ಸಂಸ್ಥೆಗೆ ಹಸ್ತಾಂತರಿಸಿರುವುದು ಅವರ ತ್ಯಾಗಮನೋಭಾವಕ್ಕೆ ಸಾಕ್ಷಿ.
ಇವುಗಳ ಜೊತೆಗೆ ಅವರು ನಡೆಸುತ್ತಿರುವ ಶೈಕ್ಷಣಿಕ ಸಂಸ್ಥೆಗಳೂ ಗಮನಾರ್ಹ. ಮೈಸೂರಿನ ಕೆಆರ್‌ಎಸ್. ಮುಖ್ಯ ರಸ್ತೆಯಲ್ಲಿರುವ ಜೆಎಸ್ಸೆಸ್
ಮಹಿಳಾ ಇಂಜಿನಿಯರಿಂಗ್ ಕಾಲೇಜು, ಗೋವಿಂದ ರಾವ್ ಮೆಮೋರಿಯಲ್ ಸ್ಕೂಲ್, ಲಕ್ಷ್ಮೀಪುರಂನ ಬಾಲಕಿಯರ ಶಾಲೆ ಮುಂತಾದುವು ಶೈಕ್ಷಣಿಕ ಕ್ಷೇತ್ರಕ್ಕೆ ನೀಡಿದ ಅನುಪಮ ಕೊಡುಗೆಳು. ೨೦೧೬ರಿಂದ ೨೦೨೦ರವರೆಗೆ ಒಟ್ಟು ೫ ವರ್ಷಗಳ ಕಾಲ ತಮ್ಮ ತಂದೆ- ತಾಯಿಯರ ಹೆರಸಲ್ಲಿ ರಮಾಗೋವಿಂದ ರಾಷ್ಟ್ರೀಯ ಪುರಸ್ಕಾರ ಆಯೋಜಿಸಿ ಭಾರತದ ೨೦ ಅನನ್ಯ ಸಾಧಕರನ್ನು ಗುರುತಿಸಿ ಅವರಿಗೆ ಆ ಪ್ರಶಸ್ತಿಯ ಜೊತೆಗೆ ೮,೦೦,೦೦೦/- ರು.ಗಳನ್ನು ನೀಡಿದ್ದು ಅವರ ದಾನ-ಧರ್ಮ ಮನೋಭಾವಕ್ಕೆ, ಮತ್ತು ಅವರ ಸ್ವಭಾವಕ್ಕೆ ಅನುಗುಣವಾಗಿಯೇ ಇದೆ.
ಯಾರು ತಮ್ಮ ವ್ಯಕ್ತಿ ಸತ್ತ್ವದಿಂದ ಒಂದು ಸಂಸ್ಥೆಯೇ ಆಗಿ ಕೆಲಸ ಮಾಡಿದರೊ, ಸಮಾಜಕ್ಕೆ ಉಪಕಾರಿಗಳಾಗಿ ನಡೆದುಕೊಂಡರೋ ಅಂಥವರನ್ನು ಗುರುತಿಸಿ, ಅವರಿಗೆ ಕೈತುಂಬಾ ಹಣ ನೀಡಿ, ಅವರಿಗಾಗಿಯೇ ಸಮಾರಂಭ ವೊಂದನ್ನು ಏರ್ಪಡಿಸಿ, ಅವರನ್ನು ಸಾವಿರಾರು ಜನರ ಸಮ್ಮುಖ ಗೌರವಿಸಿ, ಸನ್ಮಾನಿಸಿ ಅವರ ವ್ಯಕ್ತಿತ್ವ ಮತ್ತಷ್ಟು ಬೆಳಗುವಂತೆ ಮಾಡಿದ್ದಾರೆ.
ಕಿತ್ತಳೆ ಹಣ್ಣು ಮಾರಾಟದಿಂದ ಬಂದ ಹಣದಿಂದಲೇ ಶಾಲೆಯನ್ನು ಕಟ್ಟಿದ ಹರೆಕಳ ಹಾಜಬ್ಬ, ಪ್ರಾಣಿದಯಾ ಸಂಘದ ಅಧ್ಯಕ್ಷೆ ಸವಿತಾ ನಾಗಭೂಷಣ, ಹಸ್ತಶಿಲ್ಪ ಟ್ರಸ್ಟ್‌ನ ರೂವಾರಿ ವಿಜಯನಾಥ ಶೆಣೈ, ಕುಷ್ಠರೋಗ ಕ್ಲಿನಿಕ್ ತೆಗೆದ ಪ್ರಕಾಶ್ ಬಾಬಾ ಆಮ್ಟೆ, ವುಮೆನ್ ರೈತರ ತಂಡವನ್ನು ನಿರ್ಮಿಸಿದ ಗೋದಾವರಿ ಡಾಂಗೆ, ೧೬ ಕೆರೆಗಳನ್ನು ತೋಡಿ, ಅದರಿಂದ ನೀರನ್ನು ಭರಿಸಿ, ಜಲಯೋಧ ಎಂದೇ ಪ್ರಸಿದ್ಧಿ ಪಡೆದ ಮಂಡ್ಯದ ಕಾಮೇ ಗೌಡ, ಚಿಂತಕ ಲಕ್ಷ್ಮೀಶ ತೋಳ್ಪಾಡಿ, ನೀನಾಸಂ ಸಂಸ್ಥೆ, ಇಡಗುಂಜಿ ಮೇಳ ಹೀಗೆ ಈ ಪುರಸ್ಕಾರವನ್ನು ಪಡೆದವರ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಅವರ ಹುಟ್ಟುಹಬ್ಬದ ಈ ಸಂದರ್ಭದಲ್ಲಿ ಅವರ ಕುರಿತಾದ ಒಂದು ಮಧುರ ನೆನಪು.