Monday, 6th January 2025

ಪ್ರಕೃತಿಯ ಶ್ರೇಷ್ಠ ಸೃಷ್ಟಿ ಶಾಲಗ್ರಾಮ, ಭಗವಂತನ ಶಿಲಾರೂಪ

ಸಂಸ್ಕೃತಿ 

ನಂ.ಶ್ರೀಕಂಠ ಕುಮಾರ್‌

ತ್ರೇತಾಯುಗದಲ್ಲಿ ಶ್ರೀರಾಮಚಂದ್ರನು ತನ್ನ ತಂದೆ ದಶರಥ ಮಹಾರಾಜನು ತೀರಿಕೊಂಡಾಗ ಪಲ್ಗುಣಿ ಎಂಬ ನದಿಯ ತಟದಲ್ಲಿ ೧೦೮
ಶಾಲಗ್ರಾಮಗಳನ್ನಿರಿಸಿ ಅದರ ಮುಂಭಾಗದಲ್ಲಿ ಪಿತೃಪಿಂಡ ಪ್ರದಾನ ಮಾಡಿದರೆಂಬುದು ಪುರಾಣದಲ್ಲಿ ಲಭ್ಯ ಸನ್ನಿವೇಶವಾಗಿದೆ.

ಶಾಲಗ್ರಾಮವು ಹಿಂದೂ ಧರ್ಮೀಯರಿಗೆ ಪರಮ ಪವಿತ್ರವಾದ ಪ್ರಕೃತಿ ದತ್ತವಾದ ವಿಶಿಷ್ಟವಾದ ಒಂದು ಶಿಲೆ. ನಮ್ಮ ಮನದ ಭಾವನೆಗಳು ಧನಾತ್ಮಕವಾಗಿರುವಾಗ ಶಾಲಗ್ರಾಮದ ಶಿಲೆಯಿಂದ ಧನಾತ್ಮಕವಾದ ಪ್ರತಿಕ್ರಿಯೆ ಬರುತ್ತದೆ. ಇದು ಭೂಮಂಡಲದಲ್ಲಿರುವ ಅದ್ಭುತ ಭೂಗರ್ಭ ಸಂಪತ್ತು. ಪ್ರತಿಯೊಂದು ದೇವಾಲಯದಲ್ಲೂ ಶಾಲಗ್ರಾಮವು ಇರುವುದು ಸಾಮಾನ್ಯ.

ಮೂಲ ದೇವರಿಗೆ ನಡೆಯುವಂತಹ ಎಲ್ಲಾ ಸೇವೆಗಳು ಶಾಲಗ್ರಾಮಗಳಿಗೂ ಲಭಿಸುತ್ತದೆ. ಶಾಲ ಗ್ರಾಮ ಶುದ್ದತೆಯ ಪ್ರತೀಕ ದೇವರ ವಿಸ್ಮಯ ಸೃಷ್ಟಿ. ಪೂಜೆಯ ಪ್ರಧಾನಾಂಗ ಶಾಲಗ್ರಾಮ. ತೀರ್ಥ ಆಗಬೇಕಾದರೆ ಪೂಜೆಗೆ ಶಾಲಗ್ರಾಮವು ಇರಲೇ ಬೇಕು. ಶಾಲಗ್ರಾಮ ಶಿಲೆಯೇ ಒಂದು ಆಕರ್ಷಣೆಯ
ಸೆಲೆ. ಇದು ನೇಪಾಳ ರಾಷ್ಟ್ರದಿಂದ ಪವಿತ್ರ ಪರ್ವತ ಶ್ರೇಣಿಯಲ್ಲಿ ಶಾಲಗ್ರಾಮ ಎಂಬ ಗ್ರಾಮದ ಮುಖಾಂತರ ಹರಿದು ಬರುವ ಕಾಲಿ ಗಂಡಕೀ ನದಿಯಲ್ಲಿ ಮಾತ್ರ ಲಭ್ಯವಾಗುವ ಅಮೋನಿಯಾಯುಕ್ತ ಪ್ರಾಣಿ ಅವಶೇಷಗಳಿಂದ ಕೂಡಿದ ಶಿಲೆ.

ಅಲ್ಲದೇ ಹಿಮವತ್ಪರ್ವತದಲ್ಲಿ ಮತ್ತು ಭೂಗರ್ಭಗಳಲ್ಲಿಯೂ ಸಹ ಅಪರೂಪವಾಗಿ ಶಾಲಗ್ರಾಮವು ಲಭ್ಯವಿದೆ. ಸ್ಕಂದ ಪುರಾಣದ ಅಸುರಖಂಡದ ಕಥೆಯ ಪ್ರಕಾರ ಗಂಡಕೀ ನದಿಯ ಹುಟ್ಟು ಮತ್ತು ಶಾಲಗ್ರಾಮಗಳ ಕಥೆ ಈ ರೀತಿಯಾಗಿದೆ. ಗಂಡಕೀ ಎಂಬ ಸ್ಥಿರ ಮನಸಿನ ಸಾತ್ವಿಕ ಸ್ಥಿತಿಯು ತ್ರಿಮೂರ್ತಿ ದೇವರುಗಳೇ ಅವಳ ಪುತ್ರರಾಗಬೇಕು ಎಂಬ ಅಪೇಕ್ಷೆಯಿಂದ ಹಿಮಾಲಯ ಪರ್ವತದಲ್ಲಿ ಕಠಿಣ ವಾದ ತಪಸ್ಸಿಗೆ ಕೂರುತ್ತಾಳೆ. ಗಂಡಕೀಯ ತಪಸ್ಸಿಗೆ ಮೆಚ್ಚಿದ ತ್ರಿಮೂರ್ತಿಗಳು ಅವಳೆದುರು ಪ್ರತ್ಯೇಕ್ಷಳಾಗಿ ಬೇಕಾದ ವರವನ್ನು ಬೇಡುವಂತೆ ಹೇಳುತ್ತಾರೆ. ಆಗ ಗಂಡಕೀಯು ನೀವು ಮೂವರೂ ನನ್ನ ಮಕ್ಕಳಾಗಿ ಹುಟ್ಟಿ ಭೂಮಿಯ ಸಮಸ್ತ ಜನರನ್ನು ಸುಖೀಗಳನ್ನಾಗಿ ಮಾಡಬೇಕೆಂದು ವರವನ್ನು ಕೇಳುತ್ತಾಳೆ.

ತ್ರಿಮೂರ್ತಿಗಳು ಇದಕ್ಕೊಪ್ಪದೇ ಇದ್ದಾಗ ಗಂಡಕೀಯು ತನ್ನ ಹಠವನ್ನು ಬಿಡುವುದೇ ಇಲ್ಲ. ಹತಾಶಳಾದ ಗಂಡಕೀಯು ಕುಪಿತಗೊಂಡು ತ್ರಿಮೂರ್ತಿ ಗಳ ಸಹಿತಾ ಎಲ್ಲಾ ದೇವರುಗಳು ಹುಳಗಳಾಗಿ ಎಂದು ಶಪಿಸುತ್ತಾಳೆ. ಆಗ ತ್ರಿಮೂರ್ತಿಗಳು ನೀನು ಅವಿವೇಕಿ ಮನುಷ್ಯಳು, ನಿನ್ನ ತಪಸ್ಸಿಗೆ ಮೆಚ್ಚಿ ನಿನ್ನನ್ನು ಅನುಗ್ರಹಿಸಲು ಬಂದಾಗ ನೀನು ನಮ್ಮನ್ನೇ ಶಪಿಸಿದ್ದೀಯ ಆದುದರಿಂದ ನೀನು ಕೃಷ್ಣವರ್ಣದ ಜಡವಾದ ನದಿಯಾಗು ಎಂದು ಪ್ರತಿ ಶಾಪ ನೀಡುತ್ತಾರೆ. ಇದರಿಂದ ಚಿಂತಾಕ್ರಾಂತರಾದ ಇತರೆ ದೇವತೆಗಳು ಶ್ರೀ ಮಹಾವಿಷ್ಣುವಿನ ಮೊರೆ ಹೋಗುತ್ತಾರೆ. ಆಗ ಮಹಾವಿಷ್ಣುವು ನನ್ನ ಇನ್ನೊಂದು ಶಾಪದಿಂದ ಇಬ್ಬರು ಭಕ್ತರು ಜಲರಾಕ್ಷಸರಾಗಿ ಜನ್ಮವೆತ್ತಿದ್ದಾರೆ.

ನಾನು ಅವರ ಆತ್ಮಗಳಿಗೆ ಮೋಕ್ಷವನ್ನಿತ್ತು ಅವರ ಕಳೇಬರಗಳನ್ನು ಪ್ರವೇಶಿಸುತ್ತೇನೆ. ಅವರ ಶವಗಳು ಕೊಳೆತಾಗ ದೇವತೆಗಳಾದ ನೀವು ಎಲುಬಿನ ಮಜ್ಜೆ ಮತ್ತು ಕೊಬ್ಬಿನ ಹುಳಗಳಾಗಿ ಕಳೇಬರದ ಗಟ್ಟಿಭಾಗಗಳ ಒಳಗೆ ಸೇರಿಕೊಳ್ಳಬಹುದು. ನಿಮ್ಮನ್ನು ವಜ್ರಕೀಟಗಳೆಂದು ಕರೆಯುತ್ತಾರೆ.
ನಾನು ಪ್ರವೇಶಿಸುವಂಥ ರಾಕ್ಷಸರ ದೇಹಗಳು ಗಂಡಕೀ ನದಿಯಲ್ಲಿ ಮುಳುಗಿ ನಂತರ ನದಿಯ ಚಕ್ರತೀರ್ಥ ಎಂಬಲ್ಲಿ ಶಾಲಗ್ರಾಮವಾಗಿ ಚಕ್ರರೂಪ ದಲ್ಲಿ ಕಾಣಿಸಿಕೊಳ್ಳುತ್ತೇನೆ. ಹೀಗೆ ಭಗವಂತನೇ ಆ ಶಿಲೆಗಳಲ್ಲಿ ಇದ್ದು ಎಲ್ಲರನ್ನೂಅನುಗ್ರಹಿಸುತ್ತಿದ್ದಾನೆ ಎಂಬುದು ಆಸ್ತಿಕರ ನಂಬಿಕೆ.

ನದಿಯಲ್ಲಿ ಲಭ್ಯವಾಗುವ ಶಾಲಗ್ರಾಮಗಳು ಅತ್ಯಂತ ನುಣುಪಾದುದು ಚಿಕ್ಕಬಿಲ ಅದರೊಳಗೆ ಮನೋಜ್ಞ ರೇಖೋಪರೇಖೆಗಳ ಸುಂದರ ಸುದರ್ಶನ ಗಳು, ತೀರ್ಥ ನೀಡುವ ಶಾಲಗ್ರಾಮ, ಬಂಗಾರ ನೀಡುವ ಶಾಲಗ್ರಾಮ, ರತ್ನಗರ್ಭ ಶಾಲಗ್ರಾಮ ಹೀಗೆ ವಿಭಿನ್ನ, ಚಿತ್ರವಿಚಿತ್ರ ಬಗೆಯ ಸೊಬಗುಗಳು. ಈ ಶಾಲಗ್ರಾಮಗಳಲ್ಲಿ ನಾಮ, ರೂಪ, ಗಾತ್ರ, ರೇಖೆಗಳಿಂದ ಭಗವಂತನ ನಾನಾ ವಿಧದ ಪ್ರತೀಕಗಳನ್ನು ಗುರುತಿಸಲಾಗಿದೆ. ಶಾಲಗ್ರಾಮವನ್ನು ದಿನವೂ ಮುಟ್ಟಿ ಯಾರು ಪೂಜಿಸುವರೋ ಅಂತಹವರ ಕರಸ್ಪರ್ಶವನ್ನು ದೇವತೆಗಳ ಜೊತೆ ಇಂದ್ರನೂ ಬಯಸುತ್ತಾನೆ.

ಅಲ್ಲದೇ ಗರುಡ ಪುರಾಣ, ಪದ್ಮ ಪುರಾಣ, ಅಗ್ನಿ ಪುರಾಣ, ನರಸಿಂಹ ಪುರಾಣ ಹಾಗೂ ವರಾಹ ಪುರಾಣದಲ್ಲೂ ಸಹ ಶಾಲಗ್ರಾಮದ ಸೃಷ್ಟಿಯ ಬಗ್ಗೆ ವಿವರಿಸಲಾಗಿದೆ. ಅನಾದಿಕಾಲದಿಂದಲೂ ಆಸ್ತಿಕರು ಪ್ರಕೃತಿ ದತ್ತವಾದ ಶಿಲೆಯನ್ನು ಪೂಜಿಸುತ್ತಾ ಅದರಲ್ಲಿ ದೇವರ ಸಾನಿಧ್ಯವನ್ನು ಅರಿತುಕೊಂಡು ಪ್ರಕೃತಿಯನ್ನು ಆರಾದಿಸುವ ಕ್ರಮವು ನಡೆದು ಬಂದಿದೆ. ಶಾಲಗ್ರಾಮಗಳು ಸ್ವಾಭಾವಿಕವಾಗಿ ಶ್ರೀ ಮಹಾವಿಷ್ಣುವಿನೊಂದಿಗೆ ಸಂಬಂಧ ಹೊಂದಿದ್ದು ಇವುಗಳನ್ನು ವಿಷ್ಣುವಿನ ಪ್ರತೀಕ ಎಂದು ತಿಳಿಯಲಾಗಿದೆ. ಅದರಲ್ಲೂ ಕೆಲವು ಶಾಲಗ್ರಾಮಗಳು ಶಿವನ ಪ್ರತೀಕವಾದಂತೆ, ಕೆಲವು ಶಾಲಗ್ರಾಮಗಳು ದೇವಿಯ ಅಥವಾ ಲಕ್ಷಿ೫ಯ ಪ್ರತೀಕದಂತೆ, ಸೂರ್ಯನ ಪ್ರತೀಕದಂತೆ, ಇನ್ನೂ ಕೆಲವು ಶಾಲಗ್ರಾಮಗಳು ಗಣಪತಿಯ ಪ್ರತೀಕದಂತೆ ಕಾಣ ಬರುತ್ತದೆ.

ಈ ಶಾಲಗ್ರಾಮವು ಐದು ರೂಪದ ದೇವರುಗಳನ್ನು ಹೊಂದಿ ಅದರ ಪ್ರತೀಕವಾಗಿರುವುದಢರಿಂದಲೇ ಪಂಚಾಯತನ ಪೂಜೆ ನಡೆಸುವಂತಾಯಿತು ಎನ್ನಲಾಗಿದೆ. ನಿತ್ಯ ಒಂದು ಶಾಲಗ್ರಾಮವನ್ನಿಟ್ಟು ಪೂಜಿಸಿದರೆ ತುಂಬಾ ಒಳ್ಳೆಯ ಮತ್ತು ಉತ್ತಮ ಪೂಜಾ ಕಾರ್ಯ, ಆರು ಶಾಲಗ್ರಾಮಗಳನ್ನಿಟ್ಟು ಪೂಜಿಸಿದರೆ ಅದು ಕ್ಷೇತ್ರ ಎಂದೆನಿಸುವುದು, ಹನ್ನೆರಡು ಶಾಲಗ್ರಾಮಗಳನ್ನು ಪೂಜಿಸಿದರೆ ಅದು ಪಾಪ ನಾಶ ಮಾಡುವ ಕ್ಷೇತ್ರವಾಗುವುದು, ನೂರೆಂಟು ಶಾಲಗ್ರಾಮಗಳನ್ನು ಪೂಜಿಸಿದರೆ ಅದು ತೀರ್ಥ ಕ್ಷೇತ್ರವಾಗುವುದು, ಒಂದು ಸಾವಿರ ಮತ್ತು ಅದಕ್ಕೂ ಹೆಚ್ಚು ಶಾಲಗ್ರಾಮಗಳನ್ನು ಪೂಜಿಸಿದರೆ ಅದು ಹರಿಧಾಮ ಎನಿಸುವುದು.

ಶಾಲಗ್ರಾಮಗಳಲ್ಲಿ ವಿಷ್ಣು ಶಾಲಗ್ರಾಮಗಳು, ಬ್ರಹ್ಮ ಶಾಲಗ್ರಾಮಗಳು ಹಾಗೂ ಮಹೇಶ್ವರ ಶಾಲಗ್ರಾಮಗಳು ಸೃಷ್ಟಿಯಲ್ಲಿರುತ್ತದೆ. ಸಾಕ್ಷಾತ್ ವಿಷ್ಣುವಿನ ಪ್ರತೀಕವಾದ ಈ ಶಿಲೆಯನ್ನು ರಾಮ, ಕೃಷ್ಣ, ನೃಸಿಂಹ, ವರಾಹ, ಕೇಶವ, ವಾಸುದೇವ, ಹಯಗ್ರೀವ, ಮತ್ಸ್ಯ, ಕೂರ್ಮ ಮತ್ತು ವಾಮನ ಎಂದು ವರ್ಗೀಕರಿಸಲಾಗಿದೆ. ಶಾಲಗ್ರಾಮ ಎಂಬ ಅದ್ಭುತ ಸೃಷ್ಟಿಗೆ ಭೂಗರ್ಭ ಶಾಸ್ತ್ರ, ವನಸ್ಪತಿ ಶಾಸ್ತ್ರ, ಆಕಾಶ ವಿಜ್ಞಾನ, ಧ್ವನಿತರಂಗ ಶಾಸ್ತ್ರ, ಜಲದರ್ಶನ ಶಾಸ್ತ್ರ ಮತ್ತು ಸೃಷ್ಟಿ ರಚನಾ ಶಾಸ್ತ್ರ ಹೀಗೆ ಏಳು ಶಾಸ್ತ್ರಗಳ ಸಂಬಂಧವಿದೆ ಎನ್ನಲಾಗಿದೆ. ಅಲ್ಲದೇ ಶಾಲಗ್ರಾಮ ಸಂಬಂಧ ಶೈವ ತಾಂತ್ರಿಕ, ವೈಷ್ಣವ ತಾಂತ್ರಿಕ ಮತ್ತು ಶಾಕ್ತ ತಾಂತ್ರಿಕ ಎಂಬ ಮೂರು ಬಗೆಯ ತಂತ್ರಗಳಿವೆ.

ಶಾಲಗ್ರಾಮ ಚಕ್ರಾಂಕಿತ ನಿತ್ಯವು ಎಲ್ಲಿ ಸನ್ನಿಹಿತವಾಗಿದೆಯೋ ಅಲ್ಲಿ ಮೂರು ಯೋಜನ ಸುತ್ತಲೂ ಭಗವಂತನ ವಿಶೇಷ ಸನ್ನಿಧಾನವಿರುವುದು. ಶಾಲಗ್ರಾಮವನ್ನು ಗೃಹಗಳಲ್ಲಿಯೂ ಇಟ್ಟು ಪೂಜಿಸುವುದರಿಂದ ಸರ್ವ ರೀತಿಯ ಮನೋರಥ ಪಡೆಯಲು ಸಾಧ್ಯ. ಶಾಲಗ್ರಾಮವು ಸನ್ಯಾಸಿಗಳಿಗೂ ಸಹ ಪರಮಪೂಜ್ಯವಾಗಿದೆ. ತೇತ್ರಾಯುಗದಲ್ಲಿ ಶ್ರೀರಾಮಚಂದ್ರನು ತನ್ನ ತಂದೆ ದಶರಥ ಮಹಾರಾಜನು ತೀರಿಕೊಂಡಾಗ ಪಲ್ಗುಣಿ ಎಂಬ
ನದಿಯ ತಟದಲ್ಲಿ ೧೦೮ ಶಾಲಗ್ರಾಮಗಳನ್ನಿರಿಸಿ ಅದರ ಮುಂಭಾಗದಲ್ಲಿ ಪಿತೃಪಿಂಡ ಪ್ರದಾನ ಮಾಡಿದರೆಂಬುದು ಪುರಾಣದಲ್ಲಿ ಲಭ್ಯ ಸನ್ನಿವೇಶ ವಾಗಿದೆ.

ಉಡುಪಿಯ ಕಡೆಗೋಲು ಶ್ರೀಕೃಷ್ಣ, ಪಂಡರಾಪುರದ ಶ್ರೀ ವಿಠಲ ಹಾಗೂ ಬದರಿಕಾಶ್ರಮದ ಶ್ರೀ ಬದರಿನಾಥನ ವಿಗ್ರಹವು ಶಾಲಗ್ರಾಮ ಶಿಲೆಯಿಂದ ಕೆತ್ತಲ್ಪಟ್ಟಿದೆ ಎಂದು ಹೇಳಲಾಗಿದೆ. ಉಡುಪಿಯ ಚಕ್ರಾಂಕಿತವಾದ ಶಾಲಗ್ರಾಮವು ಶ್ರೀ ಕೃಷ್ಣನನ್ನು ರುಕ್ಷಿಣಿದೇವಿಯು ಸ್ವಯಂ ಪೂಜಿಸುತ್ತಿದ್ದು ಯುಗಗಳ ನಂತರ ಅದು ಶ್ರೀಮನ್ಮಧ್ವಾಚಾರ್ಯರಿಗೆ ಉಡುಪಿಯ ಬಳಿ ವಡ ಭಾಂಡೇಶ್ವರದಲ್ಲಿ ದೊಡ್ಡ ಗೋಪೀಚಂದನದಲ್ಲಿ ದೊರೆತು ಮೂರ್ತಿ ಯನ್ನು ಪ್ರತಿಷ್ಠಾಪಿಸಿದರೆಂದು ಐತಿಹ್ಯವಿದೆ. ಬದರಿಕಾಶ್ರಮದ ಶ್ರೀಮನ್ನಾರಾಣಮೂರ್ತಿಯನ್ನು ಹಿಂದೆ ಬೌದ್ಧರು ಕಿತ್ತು ದೇವಾಲಯದ ಮುಂದಿರುವ ಅಲಕಾನದಿಯ ಗರುಡಕುಂಡದಲ್ಲಿ ಕೆಡವಿದಾಗ ಬಹಳ ವರ್ಷಗಳ ಕಾಲ ಪೂಜೆ ಇಲ್ಲದೆ ಇದ್ದು ಜಗದ್ಗುರು ಶ್ರೀ ಆದಿಶಂಕರಾಚಾರ್ಯರು
ಶ್ರೀಮನ್ನಾ ರಾಯಣಮೂರ್ತಿಯನ್ನು ಪತ್ತೆಹಚ್ಚಿ ಮತ್ತೆ ಪ್ರತಿಷ್ಠಾಪಿಸಿದರೆಂದು ಹೇಳಲಾಗುತ್ತದೆ.

ಮಂತ್ರಾಲಯದ ಯತಿಶ್ರೇಷ್ಠ ಶ್ರೀ ರಾಘವೇಂದ್ರಸ್ವಾಮಿಗಳವರು ತಮ್ಮ ಪೂರ್ವ ಜನ್ಮದಲ್ಲಿ ಶ್ರೀ ವ್ಯಾಸರಾಯರಾಗಿದ್ದಾಗ ದೇವರ ಪೂಜೆ ಮಾಡುವ ಸಂದರ್ಭದಲ್ಲಿ ಶಾಲಗ್ರಾಮವನ್ನೇ ತಾಳವಾಗಿ ಬಳಸಿದ್ದರು ಎನ್ನಲಾಗಿದೆ. ಮುಂದಿನ ಅವತಾರದ ಅಂತಿಮದಲ್ಲಿ ಶ್ರೀ ಗುರುರಾಯರು ವೃಂದಾವನಸ್ಥ ರಾದಾಗ ಏಳುನೂರು ಶ್ರೀ ಲಕ್ಷ್ಮೀನಾರಾಯಣ ಶಾಲಗ್ರಾಮಗಳನ್ನು ಇಟ್ಟು ವೃಂದಾವನ ನಿರ್ಮಿಸಲಾಯಿತು ಎಂಬುದೇ ಮಂತ್ರಾಲಯ ಶ್ರೀ ಕ್ಷೇತ್ರದ ವೃಂದಾವನದ ವಿಶೇಷತೆ.

ಶಾಲಗ್ರಾಮದ ಮೂಲ ಲಕ್ಷಣ ಪದ್ದತಿ, ಶಾಲಗ್ರಾಮ ಶಿಲಾ ಪರೀಕ್ಷಣಾ ಪದ್ದತಿ ಮತ್ತು ಸಂಪೂರ್ಣ ವೈಷ್ಣವ ವಿಧಿ ಪಾಠದ ಅರ್ಥವನ್ನು ತಿಳಿಸಲು ಯದುವಂಶದ ಮಹಾರಾಜ ಮೂರನೇ ಕೃಷ್ಣರಾಜ ಒಡೆಯರ್ ರವರು ಸಂಸ್ಕೃತದಲ್ಲಿ ಶ್ರೀತತ್ವನಿಧಿ ಗ್ರಂಥವನ್ನು ಸವಿಸ್ತಾರವಾದ ಒಂಭತ್ತು
ಅದ್ಯಾಯಗಳಲ್ಲಿ ರಚಿಸಿದ್ದಾರೆ ಎನ್ನಲಾಗಿದೆ. ಶಾಲಗ್ರಾಮದ ನಿತ್ಯ ಪೂಜೆಯಲ್ಲಿ ಕೇವಲ ನೀರು ಅಥವಾ ಹಾಲನ್ನು ಅಭಿಷೇಕ ಮಾಡಿ ಮುಟ್ಟಿ ತುಳಸೀದಳಗಳನ್ನಿಟ್ಟು ಅದರ ನೀರನ್ನು ಪ್ರಾಶನ ಮಾಡುವುದರಿಂದ ಆರೋಗ್ಯ, ಸಕಲ ಅಭೀಷ್ಟಗಳು ನೆರವೇರಿ ಹಾಗೂ ಮೋಕ್ಷ
ದಾಯಕವಾಗು ವುದು.

ಶಾಲಗ್ರಾಮದ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು, ತಪ್ಪು ತಿಳುವಳಿಕೆಯನ್ನು ಮನಸ್ಸಿನಿಂದ ಹೋಗಲಾಡಿಸಿ ಮೂಢನಂಬಿಕೆಯಿಂದ ಹೊರಬರಬೇಕು. ನಿರಾಸಕ್ತಿಯಿಂದ ನಾಸ್ತಿಕರಾಗಿ ತಲೆಮಾರಿನಿಂದ ಬಂದ ಈ ಅಮೂಲ್ಯ ಶ್ರೇಷ್ಠ ಸಂಪತ್ತನ್ನು ದೇವಸ್ಥಾನಗಳಿಗೆ ಒಪ್ಪಿಸಿ ಅಥವಾ ನದಿ ನೀರಿನಲ್ಲಿ ಬಿಟ್ಟು ಕಾಲಾನಂತರ ಪರಿತಪಿಸಿದವರೂ ಉಂಟು. ವಿದ್ವಾಂಸ ಪಡುಪೇಟೆ ಸತೀಶ್ ಕುಮಾರ್ ರವರು ಗಂಡಕೀ ನದಿಯ ಸರಹದ್ದಿನಲ್ಲಿ ಯಾತ್ರೆ ಮಾಡಿ ಶಾಲಗ್ರಾಮದ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ಶಾಲಗ್ರಾಮ ಸಂಪುಟ ಎಂಬ ಅದ್ಭುತ ಗ್ರಂಥವನ್ನು ರಚಿಸಿ ಆಸ್ತಿಕರಿಗೆ ಮಾರ್ಗದರ್ಶನ ಮಾಡಿರುವುದು ಸಂತಸದ ಸಂಗತಿ.

 
Read E-Paper click here