Friday, 22nd November 2024

ಯಾತ್ರೆಯಲ್ಲಿ ದೊಡ್ಡ ಜನಸಂಖ್ಯೆ ಸೇರುತ್ತಾರೆಂಬ ಮಾಹಿತಿ ಇರಲಿಲ್ಲ: ಭದ್ರತಾ ಲೋಪಕ್ಕೆ ಕಾಶ್ಮೀರ ಪೊಲೀಸರ ಪ್ರತಿಕ್ರಿಯೆ

ವದೆಹಲಿ: ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ಯಾತ್ರೆ ವೇಳೆ ಭದ್ರತಾ ಲೋಪವಾಗಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಪ್ರತಿಕ್ರಿಯಿಸಿದ್ದು, ಬನಿಹಾಲ್ ಪ್ರದೇಶದಿಂದ ಮೆರವಣಿಗೆಯಲ್ಲಿ ದೊಡ್ಡ ಜನಸಂಖ್ಯೆ ಸೇರುತ್ತಾರೆ ಎಂದು ಯಾತ್ರೆಯ  ಆಯೋಜಕರು ತಿಳಿಸಲಿಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್ ನಾಯಕ ಕೆಸಿ ವೇಣುಗೋಪಾಲ್ ಅವರು ಯಾವುದೇ ಭದ್ರತೆ ಇಲ್ಲ, ಭದ್ರತೆಯಿಲ್ಲದೆ ರಾಹುಲ್ ಗಾಂಧಿಗೆ ಹೋಗಲು ಬಿಡುವುದಿಲ್ಲ. ಅವರು ಯಾತ್ರೆ ಮುಂದುವರೆಸಲು ಬಯಸಿದ್ದರೂ ನಾವು ಅದನ್ನು ಅನುಮತಿಸುವುದಿಲ್ಲ ಹಿರಿಯ ಭದ್ರತಾ ಅಧಿಕಾರಿಗಳು ಇಲ್ಲಿಗೆ ಬರಬೇಕು ಎಂದು ಒತ್ತಾಯಿ ಸಿದ್ದರು.

ಭಾರತ್ ಜೋಡೋ ಯಾತ್ರೆ ಶುಕ್ರವಾರ ಬೆಳಗ್ಗೆ 9.00 ರ ಸುಮಾರಿಗೆ ರಾಂಬನ್ ಜಿಲ್ಲೆಯ ಖಾಜಿಗುಂಡ್‌ನ ಹಳೆಯ ಹೆದ್ದಾರಿಯಿಂದ ಪುನಾರಂಭ ಗೊಂಡಿತು. ಆದರೆ ಅದು ಬನಿಹಾಲ್‌ನ ಖಾಜಿಗುಂಡ್‌ನಲ್ಲಿ ಸ್ಥಗಿತಗೊಂಡಿತು. ಬನಿಹಾಲ್‌ನಿಂದ ಯಾತ್ರೆಯು ಕಾಶ್ಮೀರ ಕಣಿವೆಯನ್ನು ಪ್ರವೇಶಿಸಿ ಅನಂತನಾಗ್ ಜಿಲ್ಲೆಯ ಖಾನಬಲ್ ಪ್ರದೇಶವನ್ನು ತಲುಪಬೇಕಿತ್ತು.

ಪೊಲೀಸ್ ವ್ಯವಸ್ಥೆ ಕುಸಿದಿದೆ, ಜನಸಂದಣಿಯನ್ನು ನಿಯಂತ್ರಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಇದರಿಂದ ನಮ್ಮ ಯಾತ್ರೆಯನ್ನು ಸಿಲ್ಲಿಸಬೇಕಾಯಿತು ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.