ತುಮಕೂರು: ತುಮಕೂರು ಜಿಲ್ಲಾ ಕಾರಾಗೃಹ ಅಧೀಕ್ಷಕಿ ಶಾಂತಮ್ಮ ಅವರನ್ನು ಸರಕಾರ ಶಿವಮೊಗ್ಗದ ಮಹಿಳಾ ಕೇಂದ್ರ ಕಾರಾಗೃಹಕ್ಕೆ ಎತ್ತಂಗಡಿ ಮಾಡಿದೆ.
ಕಳೆದ ಕೆಲವು ದಿನಗಳ ಹಿಂದೆ ತುಮಕೂರು ಜಿಲ್ಲಾ ಕೇಂದ್ರ ಕಾರ್ಯದಲ್ಲಿ ಕೆಲ ಕೈದಿಗಳು ಜಿಲ್ಲಾ ಬಂಧಿಖಾನೆ ಅಧೀಕ್ಷಕಿ ಶಾಂತಮ್ಮ ವಿರುದ್ಧ ಸಾಕಷ್ಟು ಆರೋಪ ಮಾಡುವ ಮೂಲಕ ಜೈಲಿನಲ್ಲಿ ನಡೆಯುತ್ತಿದ್ದ ಅಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ದೂರು ಸಲ್ಲಿಸಿದ್ದರು.
ಈ ಸಂಬಂಧ ಪತ್ರಿಕೆಯಲ್ಲಿ ಕಾರಾಗೃಹದಲ್ಲಿ ಕಾಸು ಕೊಟ್ಟರೆ ಕೆಲಸ ಶೀರ್ಷಿಕೆಯಡಿ ವರದಿ ಪ್ರಕಟ ಗೊಂಡಿತ್ತು.
ಇತ್ತೀಚೆಗೆ ತುಮಕೂರಿಗೆ ಆಗಮಿಸಿದ್ದ ಗೃಹ ಸಚಿವರನ್ನು ಭೇಟಿ ಮಾಡಿದ ಮಾಜಿ ಸಚಿವ ಸೊಗಡು ಶಿವಣ್ಣ ಸಹ ಜೈಲಿನಲ್ಲಿ ನಡೆಯುತ್ತಿದ್ದ ಅಕ್ರಮಗಳ ಬಗ್ಗೆ ಗೃಹ ಸಚಿವರ ಗಮನ ಸೆಳೆದಿದ್ದರು. ಆಡಳಿತದ ಹಿತದೃಷ್ಟಿ ಹಾಗೂ ಶಿಸ್ತು ಕ್ರಮದ ಮೇರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಶಿವಮೊಗ್ಗದ ಮಹಿಳಾ ಕೇಂದ್ರ ಕರಾಗೃಹಕ್ಕೆ ವರ್ಗಾವಣೆ ಮಾಡಿ ಆದೇಶಿಸಿದೆ.
ಶಾಂತಮ್ಮ ಅವರಿಂದ ತೆರವಾದ ಸ್ಥಾನಕ್ಕೆ ಬಳ್ಳಾರಿಯ ಕೇಂದ್ರ ಕಾರಾಗೃಹದಲ್ಲಿ ಸಹಾಯಕ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಮಲ್ಲಿಕಾರ್ಜುನ ಎಸ್ ಮಾಳಿ ಅವರನ್ನು ನೇಮಕ ಮಾಡಿದೆ.