ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಮತದಾರರಿಗೆ ಆಮಿಷ ಒಡ್ಡುವ ಕೆಲಸವೂ ಜೋರಾಗಿ ಆಗುತ್ತಿದ್ದು, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಾಯಕರಿಂದ ಮತದಾರರಿಗೆ ಹಣ, ಟಿವಿ, ಕುಕ್ಕರ್ ಮೊದಲಾದ ಉಡುಗೊರೆಗಳನ್ನು ಕೊಡು ತ್ತಿದ್ದಾರೆ. ಗೋಕಾಕ ಕ್ಷೇತ್ರದಲ್ಲಿ ಶಾಸಕ ರಮೇಶ್ ಜಾರಕಿಹೊಳಿ ಅವರು ಪ್ರತಿ ಮತದಾರನಿಗೆ ೬೦೦೦ ರುಪಾಯಿ ನೀಡುವುದಾಗಿ ಬಹಿರಂಗವಾಗಿ ಹೇಳಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮತದಾರರ ಮನೆ ಮನೆಗೆ ಮಿಕ್ಸ್‌ರ್, ಕುಕ್ಕರ್‌ಗಳನ್ನು ಕೊಟ್ಟು, ಗ್ರಾಮಸ್ಥರಿಂದ ‘ಮಂಗಳಾರತಿ’ ಮಾಡಿಸಿ ಕೊಂಡಿದ್ದಾರೆ.
ಹೆಬ್ಬಾಳ ಕ್ಷೇತ್ರದಲ್ಲಿ ಶಾಸಕ ಬೈರತಿ ಸುರೇಶ್ ಅವರು ಮತ ದಾರರಿಗೆ ೩೨ ಇಂಚಿನ ಎಲ್‌ಇಡಿ ಟಿವಿ ವಿತರಣೆ ಮಾಡಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಮತದಾರರಿಗೆ ಜೆಡಿಎಸ್ ಕಾರ್ಯಕರ್ತರು ಪಾತ್ರೆಗಳನ್ನು ಎಸೆದು ಹೋಗಿದ್ದಾರೆ. ಈ ಕುರಿತು ಎಲ್ಲ ಪಕ್ಷಗಳ ಮುಖಂಡರೂ ಪರಸ್ಪರರ ವಿರುದ್ಧ ದೂರನ್ನೂ ದಾಖಲಿಸಿದ್ದಾರೆ.
ಅಲ್ಲದೆ, ಮತದಾರರಿಗೆ ಕೊಡುಗೆ ಕೊಡುವ ಎಲ್ಲ ದೃಶ್ಯಗಳು ಮಾಧ್ಯಮಗಳಲ್ಲಿ ವರದಿ ಯಾಗಿದ್ದರೂ ಈವರೆಗೂ ಚುನಾವಣಾ ಆಯೋಗವಾಗಲಿ, ಲೋಕಾಯುಕ್ತ ಸಂಸ್ಥೆಯಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಸಂವಿಧಾನದ ೩೨೪ ವಿಧಿ ಪ್ರಕಾರ ಮುಕ್ತ, ನ್ಯಾಯಸಮ್ಮತ ಚುನಾವಣೆ ನಡೆಸುವುದು ಚುನಾವಣೆ ಆಯೋಗದ ಕರ್ತವ್ಯ. ಆದರೆ ರಾಜ್ಯದ ಚುನಾವಣೆ ಆಯೋಗ ನೀತಿ ಸಂಹಿತೆ ಜಾರಿಯಾಗುವವರೆಗೂ ಯಾರು ಯಾರಿಗೆ ಏನೇ ಕೊಡುಗೆ ಕೊಟ್ಟರೂ ಸುಮ್ಮನಿ ರುವ ಪರಿಸ್ಥಿತಿ ಇದೆ.
ಅದಕ್ಕೆ ಕಾರಣ, ನೀತಿ ಸಂಹಿತೆ ಜಾರಿಯಾಗುವವರೆಗೂ ಸರಕಾರಿ ಅಧಿಕಾರಿಗಳು ರಾಜ್ಯ ಸರಕಾರದ ಅಣತಿಯಂತೆ ಕೆಲಸ ಮಾಡ ಬೇಕಾಗುತ್ತದೆ. ಹೀಗಾಗಿ ಚುನಾವಣೆ ಅಕ್ರಮ ತಡೆಯಲು ಸಾಧ್ಯವಿಲ್ಲ ಎಂದೇ ಹೇಳಬಹುದು. ಆದ್ದರಿಂದ ಜನರೇ ಚುನಾವಣೆ ಗಳಲ್ಲಿ ಹಣ, ಹೆಂಡ, ಇತರ ಆಮಿಷಗಳಿಗೆ ತಮ್ಮ ಅಮೂಲ್ಯವಾದ ಮತವನ್ನು ಮಾರಿಕೊಳ್ಳುವುದಿಲ್ಲ ಎಂದು ಪ್ರತಿಜ್ಞೆ ಮಾಡಬೇಕಿದೆ.
ಹಣದ ಆಮಿಷ, ಜಾತಿ, ಉಪ ಜಾತಿ, ತೋಳ್ಬಲಕ್ಕೆ ನಮ್ಮ ಮತಗಳು ಮಾರಾಟವಾಗುತ್ತಿರುವುದು ಅಪಾಯದ ಸಂಕೇತ. ಅಂಬೇಡ್ಕರರ ಕೊಡುಗೆಯಿಂದ ಜಗತ್ತಿಗೆ ಮಾದರಿಯಾದ ಪ್ರಜಾಪ್ರಭುತ್ವ ಸಂಸದೀಯ ವ್ಯವಸ್ಥೆ ಹೊಂದಿದ್ದೇವೆ. ಆದರ್ಶ ಸಂಸದೀಯ ವ್ಯವಸ್ಥೆಯನ್ನು ರಕ್ಷಿಸಿ, ಇನ್ನಷ್ಟು ಶಕ್ತಿಯಾಲಿಯಾಗಿ ಬೆಳೆಸಬೇಕಿದೆ.
Read E-Paper click here