ವಿಶ್ವೇಶ್ವರ ಭಟ್ ಅವರ ಲೇಖನ ಪ್ರೇರಣೆ
ನೈಜ ಕಥೆ ಆಧಾರಿತ
ತುಮಕೂರು: ಸಾಧಕಿ ತನುಜಾಳ ನೈಜ ಕಥೆ ಕುರಿತ ಸಿನಿಮಾ ಫೆ.3ರಂದು(ಇಂದು) ಬಿಡು ಗಡೆಯಾಗಲಿದೆ ಎಂದು ನಿರ್ದೇಶಕ ಹರೀಶ್ ಎಂ.ಡಿ ಹಳ್ಳಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಶ್ವವಾಣಿ ಸಂಪಾದಕರಾದ ವಿಶ್ವೇಶ್ವರ ಭಟ್ ಅವರು ಬರೆದಿದ್ದ ಒಂದು ಲೇಖನದಿಂದ ಪ್ರೇರಣೆಗೊಂಡು ಸಿನಿಮಾ ಮಾಡಿದ್ದೇವೆ. ಅದರ ಸಂಪೂರ್ಣ ಶ್ರೇಯಸ್ಸು ಅವರಿಗೆ ಸಲ್ಲಬೇಕು ಎಂದರು.
ವಿಶ್ವೇಶ್ವರ ಭಟ್, ಮಾಜಿ ಸಿಎಂ ಯಡಿಯೂರಪ್ಪ, ಸಚಿವ ಸುಧಾಕರ್ ಅವರು ಸಿನಿಮಾದಲ್ಲಿ ನಟಿಸಿದ್ದಾರೆ. ಪ್ರತಿಯೊಬ್ಬರ ನಟನೆಯೂ ಸೃಜನಶೀಲಾತ್ಮಕವಾಗಿದೆ. ತನುಜಾ ಪಾತ್ರದಲ್ಲಿ ನಟಿ ಸಪ್ತ ಪವೂರ್ ಅವರು ಅಮೋಘವಾಗಿ ಅಭಿನಯಿಸಿದ್ದಾರೆ. ಹಿರಿಯ ಕಲಾವಿದರು ನಟಿಸಿರುವ ಅತ್ಯುತ್ತಮ ಚಿತ್ರ ಇದಾಗಿದೆ ಎಂದರು.
ಮಕ್ಕಳಿಗೆ ಪ್ರೇರಣೆಯಾಗಿರುವ ತನುಜಾ ಸಿನಿಮಾವನ್ನು ಸರಕಾರ ರಾಜ್ಯದ ಎಲ್ಲಾ ಮಕ್ಜಳಿಗೂ ತೋರಿಸುವ ಪ್ರಯತ್ನ ಮಾಡಬೇಕು. ಕರೋನಾ ಸಂದರ್ಭದಲ್ಲಿ ಹಲವು ಸಮಸ್ಯೆಗಳ ನಡುವೆ ಪರೀಕ್ಷೆ ಬರೆದು ಸಾಧನೆ ಮಾಡಿದ ತನುಜಾಳ ಸ್ಪೂರ್ತಿ ಎಲ್ಲಾ ಮಕ್ಕಳಿಗೂ ಮಾದರಿಯಾಗಿದೆ ಎಂದರು.
ರಾಜ್ಯ, ದೇಶ ಸೇರಿದಂತೆ ನಾನಾ ವಿದೇಶಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ಸಾಮಾಜಿಕ ಸಂದೇಶ ಸಾರುವ ಉತ್ತಮ ಚಿತ್ರ ಜನರ ಮನಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಟಿ ಸಪ್ತ ಪವೂರ್ ಮಾತನಾಡಿ, ನನ್ನ ಜೀವನದಲ್ಲಿ ಮರೆಯಲಾಗದ ಚಿತ್ರ ತನುಜಾ. ಸಮಸ್ಯೆ ನಡುವೆ ಸಿಲುಕಿದ್ದ ವಿದ್ಯಾರ್ಥಿನಿ ಯೋರ್ವಳ ನೈಜ ಕಥೆಯನ್ನು ತೆರೆಯ ಮೇಲೆ ತಂದು ಮಕ್ಕಳಿಗೆ, ಪೋಷಕರಿಗೆ ಪ್ರೇರಣೆ ಮೂಡಿಸುವಲ್ಲಿ ಈ ಸಿನಿಮಾ ಯಶಸ್ವಿ ಯಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಧನಿಯಾ ಕುಮಾರ್, ನಂದನ್ ಮಹಡಿಮನೆ, ಚೇತನ್, ಪ್ರತಾಪ್ ಇತರರಿದ್ದರು.