ಅಲೆಮಾರಿಯ ಡೈರಿ
mehandale100@gmail.com
ಇಲ್ಲಿ ಬರೀ ಈಗಲ್ಲ. ಅನಾಮತ್ತು ಐದಾರು ಶತಮಾನಗಳ ಹಿಂದೆ ಖ್ಯಾತಕವಿಯೊಬ್ಬರು ಕುಸ್ತಿಗೆ ಇಳಿದ ದಾಖಲೆ ಇದೆ. ಇಲ್ಲಿ ನಡೆಯುತ್ತಿದ್ದುದು ಕೇವಲ ಕುಸ್ತಿ ಎಂಬ ಕ್ರೀಡೆಯ ಖಯಾಲಿಯಲ್ಲ. ಆಗಿನಿಂದಲೂ ಮಿಟ್ಟಿಯ ಮೇಲೆ ನಡೆಯುವ ಭಾವನಾತ್ಮಕ,
ಧಾರ್ಮಿಕ ಕಾರ್ಯವಾಗಿ ಪರಿಗಣನೆಗೆ ಬಂದಿದೆಯಲ್ಲದೆ, ಹಾಗೊಂದು ಕಾಲದಲ್ಲಿ ಆರಂಭವಾದ ಸಾಂಪ್ರದಾಯಿಕ ಮತ್ತು ಬಿಗಿ ಹಿಡಿತದ ಕ್ರೀಡೆ ಇಲ್ಲಿ ದಿನವಹಿ ನಡೆಯುತ್ತದೆನ್ನುವ ಮಟ್ಟಿಗೆ ಜನ ಜನಿತವಾಯಿತು.
ಅದಕ್ಕೆ ಸರಿಯಾಗಿ ಇದನ್ನು ಆರಂಭಿಸಿದ್ದ, ಹೀಗೊಂದು ಕ್ರೀಡೆಯನ್ನೂ ಸೇವೆಯಾಗಿ ಪರಿಗಣಿಸಬಹುದಾದ ಸಾಧ್ಯತೆಗೆ ಕುಸ್ತಿ ಯನ್ನು ತೆರೆದ ಮಹಾನುಭಾವನ ಹೆಸರನ್ನೆ ಈ ನೆಲಕ್ಕೆ ಇರಿಸಲಾಯಿತು. ಅದೇ ತುಳಸಿ ಘಾಟ್. ಕಾಶಿ, ವಾರಣಾಸಿ, ಬನಾರಸ್ ಎಂಬೆಲ್ಲ ಚಕ್ರವ್ಯೂಹದಂತಿದ್ದ ಗಲ್ಲಿಗಳ ಅವ್ಯಾಹತವಾದ ಧಾರ್ಮಿಕ ಸ್ಥಳಗಳನ್ನು ಹೊಂದಿರುವ ಹಿಂದೂ ಭಾವಗಳ ಉತ್ಕರ್ಷ ಕಾರಿ ನೆಲದಲ್ಲಿ ಹೆಚ್ಚುವರಿ ಮೈಲೇಜ್ ಇರುವ ದಶಾಶ್ವಮೇಧ ಘಾಟ್ ನಂತರ ಪ್ರಮುಖವಾಗಿ ಜನರನ್ನು ಆಕರ್ಷಿಸುವ ಎರಡು ಪ್ರಮುಖ ಘಾಟಗಳಲ್ಲಿ ತುಳಸಿಘಾಟ್ ಕೂಡ ಒಂದು. ಇನ್ನೊಂದು ಅಸ್ಸಿ ಘಾಟ್.
ಈ ತುಳಸಿಘಾಟ್ ಮೂಲತಃ ಖ್ಯಾತ ಕವಿ ಸಂತ ಮತ್ತು ರಾಮಾಯಣ ರಚಿಸಿದ ಗೋಸ್ವಾಮಿ ತುಳಸಿ ಹೆಸರು, ತುಳಸಿದಾಸ ಆಗಿ ಉಳಿದಿದ್ದೂ ಅಲ್ಲದೇ ಸಂಪೂರ್ಣ ಜೀವಮಾನ ಪೂರ್ತಿ ನಡೆಯುವಂತೆ ಬೆಳಗಿನ ಕುಸ್ತಿ ಆರಂಭಿಸಿ ಹೊಸ ಸಂಪ್ರದಾಯ ಆರಂಭಿಸಿದ್ದು ದಾಖಲೆ. ಕೊನೆಗೆ ಅವರ ಪರಿಶ್ರಮ ಮತ್ತು ಅಭ್ಯಾಸಕ್ಕೆ ಸಂದ ಗೌರವವಾಗಿ ಇವತ್ತಿನವ ರೆಗೂ ದಿನವೂ ಇಲ್ಲಿ ಬೆಳಗ್ಗೆ ಆರು ಆರೂವರೆಯಿಂದ ಒಂದು ತಾಸು ನಿರಂತರ ಕುಸ್ತಿ ಆಟ ನಡೆಯುತ್ತದೆ. ಅತ್ಯಂತ ಧಾರ್ಮಿಕ ಆಚರಣೆ ಮೂಲಕ ಆರಂಭವಾಗುವ ಕಾರ್ಯಕ್ರಮದಲ್ಲಿ ಅತ್ಯಂತ ಶ್ರದ್ಧೆ ಮತ್ತು ಭಕ್ತಿಯನ್ನು ಮೇಳೈಸಿದ ವ್ರತದಂತೆ ಇದನ್ನು ನಡೆಸಿಕೊಂಡು ಬರಲಾಗುತ್ತಿದೆ.
ತುಳಸಿದಾಸರಿದ್ದ ಈಗಿನ ಮನೆಯಲ್ಲಿ ರಾಮಾಯಣದ ಕುರುಹುಗಳೇನೂ ಇರದೇ ಇದ್ದರೂ ಮೂಲ ರಾಮನ ವಿಗ್ರಹ, ಹನುಮಾನ್ ವಿಗ್ರಹ ಮತ್ತು ಪೂಜಾ ವ್ಯವಸ್ಥೆ ಐನೂರು ವರ್ಷದಿಂದಲೂ ಹಾಗೆಯೇ ಇದೆ ಎನ್ನುತ್ತಾರೆ ಸ್ಥಳೀಯರು. ಮನೆಯ ಮೂಲೆಮೂಲೆಯಲ್ಲ ಸಾವಿರಾರು ಪುಸ್ತಕಗಳ ಕಟ್ಟುಗಳನ್ನು ಪೇರಿಸಿಡಲಾಗಿದೆ. ಯಾವ ಕಾಲದ್ದೋ ಏನೋ..? ಯಾವ ಕಟ್ಟು ಗಳು ಯಾವ್ಯಾವ ಸಾಹಿತ್ಯದ ಹೆಸರಿನಲ್ಲಿ ಏನು ರಹಸ್ಯ ಸೇರಿಸಿಕೊಂಡು ಮುಗುಮ್ಮಾಗಿ ಕುಳಿತಿವೆಯೋ ಗೊತ್ತಿಲ್ಲ.
ಕುಸ್ತಿಯನ್ನೇ ಉಸಿರಾಡುವ ಹುಡುಗರು ಬೆಳಗ್ಗೆ ಐದರ ಮೊದಲೇ ಬಂದು ಸಿದ್ಧತೆ ಆರಂಭಿಸಿರುತ್ತಾರೆ. ದಟ್ಟಿ (ಕೆಂಪು ಬಣ್ಣದ ಲಂಗೋಟಿ) ಬಿಗಿದುಕೊಳ್ಳುತ್ತಾರೆ. ಅತ್ಯಂತ ಶಿಸ್ತಿನಲ್ಲಿ, ಪುರಾತನ ಲಂಗೋಟಿ ಬಿಗಿತದ ಮಾದರಿಯನ್ನೇ ಅನುಸರಿಸುತ್ತಾರೆ ಈಗಲೂ. ಅದಾಗುತ್ತಿದ್ದಂತೆ ಆವೆ ಕೆಂಪುಮಣ್ಣಿನ ನೆಲವನ್ನು ಅಗೆ ಹಾಕುತ್ತಾರೆ. ನೋಡು ನೋಡುತ್ತಿದ್ದಂತೆ ಮೈಯೆಲ್ಲ ಬೆವರು ಹರಿಯುವಂತೆ ನೆಲ ಅಗಿದು ಹಾಕುವ ಕಾರ್ಯ ಜರಗುತ್ತದೆ. ಹಾಗಾಗಿ ಮೊದಲ ಒಂದು ತಾಸಿನಲ್ಲಿ ವಾರ್ಮ್ ಅಪ್ ಕೆಲಸ ಮುಗಿಯುತ್ತಿದ್ದಂತೆ ನಂತರ ಕುಸ್ತಿ ಅಖಾಡ ರೆಡಿ ಆಗುತ್ತದೆ. ಈ ಹೊತ್ತಿಗೆ ಪ್ರವಾಸಿಗರ ಪ್ರವೇಶವಾಗುತ್ತದೆ ಇಲ್ಲಿ. ಇದನ್ನು ಹೆಚ್ಚಾಗಿ ಮೊದಲೇ ಪ್ರತಿಯೊಬ್ಬ ಪ್ರವಾಸಿಯೂ ಪಟ್ಟಿ ಮಾಡಿಕೊಂಡಿರುತ್ತಾನಾದ್ದರಿಂದ ಹೆಚ್ಚಾಗಿ ಬೆಳಗಿನ ಪ್ರವಾಸಕ್ಕೆ ಗಂಗಾಯಾನ
ಮಾಡುವ ಮೊದಲು ನೇರ ಇಲ್ಲಿಗೆ ಬಂದಿಳಿಯುವ ಜನ ನೂರಾರು ಸಂಖ್ಯೆಯಲ್ಲಿ ಕಾಲೂರಿ ನಿಂತು ರಿಂಗಿನ ಸುತ್ತ ಕಾಯುತ್ತಿರು ತ್ತಾರೆ.
ಬಹುಶಃ ಕಾಶಿ ದೇವಸ್ಥಾನ ಹೊರತು ಪಡಿಸಿದರೆ ಬೆಳಗ್ಗೆ ಬೆಳಗ್ಗೆಯೇ ಹೀಗೆ ದಂಡುದಂಡಾಗಿ ಜನ ಸೇರುವ ಸ್ಥಳ ಎಂದರೆ ಕಾಶಿಯಲ್ಲಿ ಇದೇ ಇರಬೇಕು. ಆದರೆ, ಕುಸ್ತಿಯಾಡುವವರಿಗೂ ಗರಡಿ ಮನೆ ಸಜ್ಜು ಮಾಡುವವರಿಗೂ ಹನುಮಾನ್ ಗರಡಿಯ ಈ ಎಲ್ಲ ಸದಸ್ಯರಿಗೆ ಇದಾವುದೂ ಲೆಕ್ಕವಲ್ಲ. ಏನಿದ್ದರೂ ನೇರಾನೇರ ಅವರ ಪಾಡಿಗೆ ಅವರು ಕುಸ್ತಿಮನೆ ಸಜ್ಜುಗೊಳಿಸಿ ಕೊಳ್ಳುವುದರಲ್ಲಿ ನಿರತರಾಗಿರುತ್ತಾರೆ. ಅದರಲ್ಲೂ ಆವೆ ಮಣ್ಣಿನ ಮಿಟ್ಟಿಯನ್ನು ಕಡೆಯುವ ಕೆಲಸದ ಜತೆಗೆ ಅದಕ್ಕೆ ಆಗೀಗ ಚೆಲ್ಲುವ ವಿಶಿಷ್ಟ ಪದಾರ್ಥದ ಕಾಂಬಿನೇಶನ್ನು ಗಮನ ಸೆಳೆಯುತ್ತದೆ.
ಕಾರಣ ಅದು ಕೇವಲ ಮಣ್ಣಲ್ಲ. ಹಲವು ರೀತಿಯ ವಸ್ತುಗಳನ್ನು ದಿನವೂ ಸೇರಿಸುವುದರಿಂದ ವಿಭಿನ್ನ ಬಣ್ಣ ಮತ್ತು ವಾಸನೆಗೆ ತಿರುಗಿರುತ್ತದೆ. ಪ್ರತಿದಿನವೂ ಅಗೆದು ಅದನ್ನು ಹೊರಳಿಸುವ ಮೂಲಕ ಮಣ್ಣಿನ ಅಂಕಣ ಹುಡಿಯಾಗಿ ನಿಲ್ಲುತ್ತದೆ. ಹೀಗೆ ತಯಾರಾಗುವ ಮಣ್ಣಿಗೆ ಮೈಯ್ಯನ್ನು ನೋಯದಂತೆ ತಡೆಯುವ ಶಕ್ತಿ ಇದೆ ಎನ್ನಲಾಗುತ್ತದೆ. ಜತೆಗೆ ಮಣ್ಣಿನಲ್ಲಿ ಬೇವು, ಕಹಿ ಬೇವು, ಹೂಗಳು, ಶದ್ಧ ಶುಂಠಿ, ಅರಿಸಿಣ, ಸಾಸಿವೆ ಎಣ್ಣೆ, ಮೊಸರು ಮತ್ತು ಬೆಣ್ಣೆ, ನಿಂಬೆರಸ ಮತ್ತು ಢಾಳಾಗಿ ವಾಸನೆ ಬರುವಷ್ಟು ಪ್ರಮಾಣದಲ್ಲಿ ಕರ್ಪೂರ ಸೇರಿದಂತೆ ಹಲವು ಆಯುರ್ವೇದ ಮೂಲದ, ಸಲಹೆಯ ಪದಾರ್ಥಗಳನ್ನು ಸೇರಿಸಿರ ಲಾಗುತ್ತದೆ. ಇದರಿಂದ ರೋಗಕ್ಕೆ ಮದ್ದಾಗಿ ಈ ಮಣ್ಣು ಕೆಲಸ ಮಾಡುತ್ತಿರುತ್ತದೆ.
ಬಿದ್ದ ಜಟ್ಟಿಯೂ ಮೈಗೆ ಮಣ್ಣುಜ್ಜಿಕೊಂಡು ಏಳುತ್ತಾನೆಯೇ ಹೊರತಾಗಿ ನೋವಿನ ಮಾತೇ ಆಡಿದ್ದು ಇಲ್ಲವಂತೆ ಇಲ್ಲಿಯವರೆಗೂ. ಎಷ್ಟೇ ಮೇಲಿಂದ ಬಿದ್ದು ಎದ್ದರೂ ಹೀಗೆ ಹಿತವಾಗಿ ಮತ್ತು ಪ್ರಮಾಣ ಭರಿತವಾಗಿ ಬೆರೆತ ಮಣ್ಣಿನಲ್ಲಿರುವ ಅಂಶಗಳ ಕಾರಣ ದೇಹಕ್ಕೆ ಬಾಧೆಯಾಗುವುದೇ ಇಲ್ಲ ಎನ್ನುತ್ತಾರೆ. ನಂತರದಲ್ಲಿ ಹಿರಿಯ ಪೈಲ್ವಾನ್ ನೇತೃತ್ವದಲ್ಲಿ ಕುಸ್ತಿಗಳು ಆರಂಭವಾಗುವ ಮೊದಲು ಸಾಲಾಗಿ ಎಲ್ಲರೂ ಹನುಮಾನ್ ಮತ್ತು ಕಾಶಿ ವಿಶ್ವೇಶ್ವರನ ಪ್ರಾರ್ಥನೆ ಸಲ್ಲಿಸುತ್ತಾರೆ. ನಿರಂತರ ಇಪ್ಪತ್ತು ಜೋಡಿ ಕುಸ್ತಿಗಳು ಆರಂಭವಾಗುತ್ತವೆ.
ಆಗ ಕೇಳಿಸುತ್ತದೆ ಒಮ್ಮೆ ಭಾರಿ ದನಿಯಲ್ಲಿ ‘ಜೈ ಬಜರಂಗ ಬಲಿ’ ಎಂಬ ಜಯಘೋಷ. ಎಷ್ಟೆಂದರೂ ಹನುಮಾನ್ ಎಂಬ ವಿಶಿಷ್ಟ ದೇವರು ಜಗತ್ತಿನ ಎಲ್ಲ ಕುಸ್ತಿ ಪೈಲ್ವಾನರ ಆರಾಧ್ಯ ದೈವವಲ್ಲವೇ..? ಹಾಗಾಗಿ ಬೆಳಗಿನ ಆರೇಳು ಗಂಟೆಯಿಂದ ಕೆಲವೊಮ್ಮೆ ಹತ್ತು ಗಂಟೆಯವರೆಗೂ ನಡೆಯುವ ಈ ಜಯಭೇರಿ, ಗೊತ್ತಿಲ್ಲದ ಪ್ರವಾಸಿಗರನ್ನೂ ಅಲ್ಲಿಗೆ ಆಕರ್ಷಿಸುವುದಿದೆ. ಕೆಂಪು ಬಣ್ಣದ ದಟ್ಟಿ ತೊಟ್ಟ ಜಟ್ಟಿಗಳು, ಜಿಮ್ ಬಾಡಿ ಮಾಡಿಕೊಂಡು ಇಲ್ಲೂ ಸಾಂಪ್ರಾದಾಯಿಕ ಕುಸ್ತಿ ಕಲೆ ಹಲವು ಪಟ್ಟುಗಳಿಗಾಗಿ ಸಾಮು ಮಾಡುವವರನ್ನು ನೋಡುವುದೇ ಚೆಂದ. ಮರಿಯಾನೆಗಳಂತೆ ಉರುಳುರುಳಿ ಬೀಳುವ ಆಟಕ್ಕೆ ಜನರ ಚಪ್ಪಾಳೆ ಮತ್ತಿಷ್ಟು ನಶೆ ಏರಿಸುತ್ತಿರುತ್ತದೆ.
ಅದರಲ್ಲೂ ಕುಸ್ತಿಯ ವಿವಿಧ ಡಾವ್ ಮತ್ತು ಪೇಚುಗಳನ್ನು ಹಾಕುವಾಗ ಮುಂದಿನ ಹಂತದ ಕುಸ್ತಿಗೆ ತಯಾರು ಮಾಡುವ
ಹುಡುಗರಿಗಾಗಿ ವಿಶೇಷ ತರಬೇತಿಯೂ ನಡೆಯುತ್ತಿರುತ್ತದೆ. ನಿರಂತರ ಕುಸ್ತಿಪಟುಗಳಿಗೆ ಹೊಸಹೊಸ ಟೆಕ್ನಿಕ್ ಮತ್ತು ಸಾಂಪ್ರ
ದಾಯಿಕ ಶೈಲಿಯಲ್ಲಿ ಆಗುವ ಅನುಕೂಲದ ಆಟ ತಾಸುಗಟ್ಟಲೇ ನಡೆಯುತ್ತಿದ್ದರೆ ಕುಸ್ತಿಯ ರಿಂಗ್ ಹೊರಗೆ ನಿಂತು ನೋಡು ವವರಿಗೆ ರೋಮಾಂಚನ. ಇವತ್ತಿನವರೆಗೂ ಕೇವಲ ತಾವು ಉಳಿಸುತ್ತಾ ಬೆಳೆಸಿಕೊಂಡು ಬಂದಿರುವ ಈ ಕುಸ್ತಿ ಆಟದ ನಿರಂತರತೆ, ನಿರಾತಂಕವಾಗಿ ಬೆಳೆದುಕೊಂಡು ಬಂದಿರುವುದಕ್ಕೆ ಕಾರಣ ಅದರ ಎಡೆಗಿನ ಆಸ್ಥೆ. ವಯಸ್ಸಾದರೂ ಅರವತ್ತರಲ್ಲೂ
ಮೂವತ್ತರಂತೆ ಹುರಿಗಟ್ಟಿ ಹಾರಿ ಹಾರಿ ನಿಲ್ಲುವ ತರಬೇತು ಮಾಡುವ ಶಂರ್ಕ ಗುರೂಜಿ ಆ ಮಟ್ಟಿಗೆ ಪಕ್ಕಾ ಜಗಜಟ್ಟಿಯೇ.
ಇಷ್ಟೆಲ್ಲ ಹಗಲು ಹನ್ನೆರಡು ತಾಸು ಕುಸ್ತಿ ಆಡಿ ದಣಿದ ಮೇಲೆ ದೇಹಕ್ಕೊಂದು ಶಕ್ತಿ, ಕಾಳಜಿ, ವಾಗಾತಿ ಬೇಕಲ್ಲ. ಅದಕ್ಕಾಗಿ ಅರ್ಧ ಗಂಟೆ ಅ ಎಣ್ಣೆ ಮಸಾಜ್ ನಡೆಯುವುದೂ ಇದೆ. ಅದಕ್ಕಾಗಿಯೇ ಜನಗಳಿzರೆ. ಇಲ್ಲಿ ಕುಸ್ತಿ ಆಡುವವರು ಹೆಚ್ಚೆಂದರೆ ಎರಡು ಡಝನ್ ಇzರು. ಆದರೆ ಈ ಇತರೆ ಸರ್ವೀಸು ಮತ್ತು ಅದರ ಮೇಲೆ ಅವಲಂಬಿಸಿ ಜೀವನ ನಡೆಸುತ್ತಿರುವವರ ಸಂಖ್ಯೆ ಇಪ್ಪತ್ತು ಡಝನ್ ಇರಬಹುದು. ಹೀಗೆ ಸವರಿ ನುಣಿದು ಮೈಯ್ಯನ್ನೆಲ್ಲ ಉರು ಹೊಡೆದಂತೆ ತಿಕ್ಕಿ ಕಳಿಸುವ ಮಸಾಜ್ ಭೈಯ್ಯಾಗಳಿzರೆ. ಇಲ್ಲಿ ಬೆಳಬೆಳಗ್ಗೆಯೇ ಒಂದ್ನಾಲ್ಕಾರು ಜನರಾದರೂ ಸಿಕ್ಕೇ ಸಿಗುತ್ತಾರಾದ್ದರಿಂದ ಮತ್ತು ಜಟ್ಟಿಗಳ ಸೇವೆ, ತುಳಸಿ ಘಾಟ್ ಆಕರ್ಷಣೆ ಕಾರಣ ಹೆಚ್ಚಿನ ದರಕ್ಕೆ ಕಿರಿಕಿರಿ ಮಾಡುವುದಿಲ್ಲ.
ಬೇರೆ ಕಡೆಯಲ್ಲಿ ಇಂತಿಷ್ಟೆಂದು ಇದ್ದರೂ ಈ ಗರಡಿ ಮನೆಯವರ ಸಹವಾಸ ಎನ್ನುವ ಕಾರಣಕ್ಕೆ ಸುಮನೆ ಅಷ್ಟಿಷ್ಟು ಪಡೆದು, ನಿಂತ ಪ್ರವಾಸಿಗರಲ್ಲೂ ಎರಡ್ಮೂರು ಜನ ಗ್ರಾಹಕರನ್ನು ಕುದುರಿಸಿಕೊಂಡೂ ಹೋಗುತ್ತಾರೆ. ಹೀಗೆ ಮಸಾಜು, ನೀರು, ಸುತ್ತ ನಿಂತ ಚಾಯ್ವಾಲಗಳು, ಸಮೋಸೆಯವರು, ಜಿಲೇಬಿ ಎತ್ತಿಟ್ಟುಕೊಂಡು ಬಂದು ಮಾರುವವರು, ಅಫ್ ಕೋರ್ಸ್ ಕಾಶಿಗೆ ಹೋದ ಮೇಲೆ
ಅಲ್ಲ ಗಲ್ಲಿಗಲ್ಲಿ ಕಾರ್ನರ್ನಲ್ಲಿರುವ ಚಹ ಕುಡಿದು ಮಜ ಉಡಾಯಿಸದಿದ್ದರೆ ನಿಮ್ಮ ಪುಣ್ಯ ಪ್ರಾಪ್ತಿ ಪೂರ್ತಿಯಾಗಲಿಕ್ಕಿಲ್ಲ ಇದು ನನ್ನ ನಂಬಿಕೆ.
ಅಷ್ಟರ ಮಟ್ಟಿಗೆ ಅಲ್ಲಲ್ಲಿನ ಪ್ರತಿತಿರುವಿನಲ್ಲೂ ನಿಲ್ಲಿಸಿಕೊಂಡ ಚಹದ ಟೊಕ್ಳಿಗಳು ಫೇಮಸ್ಸು. ಜೊತೆಗೆ ಸಂಜೆ ಏಳೂವರೆಗೆ ಬಾಗಿಲು ಹಾಕುವ ಸಿಖ್ಖಾ ಸಮೋಸ ಮತ್ತು ಥಂಡೈ ಎನ್ನುವ ಪೇಯ ಅಹಾ.. ಕಾರಣ ಈ ಕುಸ್ತಿ ಪೈಲ್ವಾನಗಳು ಅಷ್ಟು ಬೆವರಿಳಿಸಿದ ಮೇಲೆ ಕುಡಿಯುವ ಪೇಯ ಕೂಡಾ ಥಂಡೈ ಎಂದೇ ಹೆಸರಾಗಿದ್ದು, ಅದನ್ನೆ ಭಾಂಗ್ ಎಂದೂ ಜನ ಕರೆಯುತ್ತಾರಾದರೂ ಅಸಲಿಗೆ
ಅದು ನೈಜವಾದ ತೀರ ನಶೆಕಾರಿ ಭಾಂಗ್ ಅಲ್ಲವೇ ಅಲ್ಲ.
ಭಾಂಗ್ ಎಂದರೆ ನಶೆ ಏರಿಸುವ ಕುಡಿತವೇ ಎಂದು ಪರಿಗಣಿಸಲಾಗುತ್ತದೆಯಾದರೂ ದಿನವೂ ಕುಸ್ತಿಯ ಕ್ರೀಡೆ ಮತ್ತು ಅಭ್ಯಾಸ ಮುಗಿಯುವ ಹೊತ್ತಿಗೆ ಇಲ್ಲ ಅಷ್ಟೇ ಹೊತ್ತು ಇವರಿಗಾಗಿ ಭಾಂಗ್ ತಯಾರಿಸುವ ಒಂದು ತಂಡವೇ ಕೆಲಸ ಮಾಡುತ್ತಿರುತ್ತದೆ. ಇತ್ತ ಕನಿಷ್ಠ ಇಪ್ಪತ್ತು ಇಪ್ಪತೈದು ಜನರು ಕೆಂಪು ಮಣ್ಣಿನ ಅಂಗಳದಲ್ಲಿ ಹುಡಿ ಹಾರಿಸುತ್ತಿದ್ದರೆ, ಅತ್ತ ಹತ್ತನ್ನೆರಡೂ ಜನರ ತಂಡ ಭಾಂಗ್ ಅರೆಯುತ್ತಿರುತ್ತಾರೆ. ಶುದ್ಧ ಹಸುವಿನ ಹಾಲನ್ನು ನೊರೆ ನೊರೆಯಾಗಿ ಕಾಯಿಸುತ್ತ, ತಿರುವುತ್ತಿದ್ದರೆ, ಅದಕ್ಕೆ ಬದಾಮಿ, ಗುಲಾಬಿ, ಮೆಣಸು, ಏಲಕ್ಕಿ, ಕೇಸರಿ, ತುಪ್ಪ, ಬೆಲ್ಲ(ಸಕ್ಕರೆ ಉಪಯೋಗಿಸುವಂತಿಲ್ಲ) ಮತ್ತು ಒಣ ದ್ರಾಕ್ಷಿ ಸೇರಿಸಿ ಹುರಿಯುತ್ತಿರುತ್ತಾರೆ.
ಜತೆಗೆ ರುಚಿಗೆ ಮತ್ತು ಆರೋಗ್ಯಕ್ಕೆ ಹಿತವಾಗುವಷ್ಟೇ ಪ್ರಮಾಣದ ನಶೆ, ಗಸಗಸೆ ಸೇರಿಸಿ ಬಿಸಿಬಿಸಿ ನೊರೆ ಹಾಲು ಆಚೆಗೆ ತೆಗೆದರೆ ಎಂಥವರೂ ಕುಡಿಯಲು ಹಾತೊರೆಯಬೇಕು ಹಾಗಿರುತ್ತದೆ. ಹೀಗೆ ಬೆಳಗ್ಗೆನೆ ಬಣ್ಣದ ಬದುಕನ್ನು ತೋರುವ ತುಳಸಿ ಘಾಟ್ನಲ್ಲಿನ ಕುಸ್ತಿಯ ಮಸ್ತಿಯ ಮೋದವನ್ನು ಅನುಭವಿಸಬೇಕೆಂದರೆ ಒಂದಷ್ಟು ಅಲೆಮಾರಿಯಾಗಿ ತಿರುಗುವ ಆಸ್ಥೆಗೆ ಮಾತ್ರ ಸಾಧ್ಯ.