Sunday, 22nd December 2024

ಮನುಷ್ಯ ವನಜೀವಿ ಮುಖಾಮುಖಿ ಚಿತ್ರಿಸುವ ಚಿತ್ರ

ಶಶಾಂಕಣ

shashidhara.halady@gmail.com

ನಮ್ಮ ನಾಡು, ನಮ್ಮ ದೇಶ, ಅಷ್ಟೇಕೆ ಇಡೀ ಜಗತ್ತು ಇಂದು ನಾನಾ ರೀತಿಯ ಪ್ರಾಕೃತಿಕ ವೈಪರಿತ್ಯಗಳಿಗೆ ಸಾಕ್ಷಿಯಾಗುತ್ತಿದೆ. ಇನ್ನು ಕೆಲವೇ ವರ್ಷಗಳಲ್ಲಿ ಉತ್ತರ ಭಾರತದ ನದಿ ತೀರಗಳಲ್ಲಿ ವಾಸಿಸುತ್ತಿರುವ ಜನರು ನಿರಂತರ ಪ್ರವಾಹದ ಪ್ರಕೋಪವನ್ನು ಎದುರಿಸಬೇಕಾ ದೀತೆಂದು ವಿಜ್ಞಾನಿ ಗಳು ಎಚ್ಚರಿಸುತ್ತಿದ್ದಾರೆ. ಇದಕ್ಕೆ ಮುಖ್ಯ ಕಾಣವಂದರೆ, ಹಿಮಾಲಯದಲ್ಲಿರುವ ಗ್ಲೇಸಿಯರ್‌ಗಳು, ಹಿಮ ತುಂಬಿದ ಕೆರೆಗಳು, ಕಣಿವೆಗಳು ಬಹು ವೇಗವಾಗಿ ಕರಗುತ್ತಿವೆ. ಇಂದು ಹಿಮಾಲಯ ಮತ್ತು ಜಗತ್ತಿನ ಇತರ ಭಾಗಗಳಲ್ಲಿರುವ (ಮುಖ್ಯವಾಗಿ ಉತ್ತರ ಧ್ರುವ ಮತ್ತು ದಕ್ಷಿಣ ಧ್ರುವ) ಹಿಮದ ವಿಶಾಲ ಭಾಗಗಳು ಕರಗುತ್ತಿರುವುದರಿಂದ ಇಂತಹ ಪ್ರಕೋಪಗಳು ಎದುರಾಗಿವೆ.

ಹಿಮಾಲಯದಲ್ಲಿ ಸಹಸ್ರಾರು ವರ್ಷಗಳಿಂದ ಹೆಪ್ಪುಗಟ್ಟಿರುವ ಹಿಮವು, ನಿರೀಕ್ಷೆಗೂ ಮೀರಿದ ವೇಗದಲ್ಲಿ ಕರಗುತ್ತಿದೆ, ತನ್ನೊಂದಿಗೆ ಹಿಮಾಲಯ ಶ್ರೇಣಿಯ ಪರ್ವತ ಭಿತ್ತಿಗಳನ್ನು ಕೊರೆದು ಕೊಂಡು ಬರುತ್ತಿದೆ. ಅಲ್ಲಿನ ನೆಲದ ಮೇಲ್ಮೈಯನ್ನು ಕತ್ತರಿಸಿಕೊಂಡು ಬರುತ್ತಿದೆ. ಇವೆಲ್ಲಕ್ಕೂ ಪ್ರಮುಖ ಕಾರಣವೆಂದರೆ ಗ್ಲೋಬಲ್ ವಾರ್ಮಿಂಗ್ ಅಥವಾ ಭೂಮಿಯ ತಾಪಮಾನದ ಹೆಚ್ಚಳ.ಕಳೆದ ಒಂದೆರಡು ದಶಕಗಳಲ್ಲಿ ವಿಪರೀತ ಏರುಪೇರುಗಳನ್ನು ಕಾಣುತ್ತಿರುವ ಭೂಮಿಯ ತಾಪಮಾನವು, ಒಂದೆಡೆ ಪ್ರಚಂಡ ಚಳಿ ಮತ್ತು ಮಳೆಯನ್ನುಂಟು ಮಾಡುತ್ತಿದ್ದರೆ, ಇನ್ನೊಂದೆಡೆ ವರ್ಷ ವರ್ಷವೂ ಕ್ರಮೇಣ ತಾಪಮಾನವು ಒಂದೊಂದೇ ಡಿಗ್ರಿ ಏರುತ್ತಿದೆ.

ಪ್ರತಿ ಬೇಸಿಗೆಯಲ್ಲೂ ಹಿಂದಿನ ವರ್ಷಕ್ಕಿಂತ ಹೆಚ್ಚಿನ ತಾಪಮಾನವನ್ನು ವಿಜ್ಞಾನಿಗಳು ಗುರುತಿಸುತ್ತಿದ್ದಾರೆ, ಜನಸಾಮಾನ್ಯರ ಅನುಭವಕ್ಕೂ ಅದು ಬರುತ್ತಿದೆ. ಇದನ್ನು ತಡೆಯಲು ಏನು ಮಾಡಬೇಕು? ಇದಕ್ಕೆ ಉತ್ತರ ಸರಳ ಮತ್ತು ಸಂಕೀರ್ಣ. ಸರಳ ಉತ್ತರವೆಂದರೆ, ಕಾಡನ್ನು ಉಳಿಸಬೇಕು, ಮರಗಿಡಗಳನ್ನು ಬೆಳೆಸಬೇಕು, ಹುಲ್ಲುಗಾವಲುಗಳನ್ನು ರಕ್ಷಿಸಬೇಕು, ಕುರುಚಲು ಕಾಡನ್ನು ಪೋಷಿಸಬೇಕು. ಆದರೆ, ಈ ಸರಳ ಉತ್ತರಕ್ಕೆ ಪ್ರತಿಯಾಗಿ, ಸಂಕೀರ್ಣ ಉತ್ತರವೂ ಇದೆ. ಏಕೆಂದರೆ ಇದು ಇಂದು ಸರಳ ಸಮಸ್ಯೆ ಅಲ್ಲವಲ್ಲ!

ಮನುಷ್ಯನ ನಾಗರಿಕತೆಯ ನಾಗಾಲೋಟದ ವೇಗವನ್ನು ತಡೆಯುವುದಾದರು ಹೇಗೆ? ಈ ರೀತಿಯ ನಾಗರಿಕತೆಯ ಬೆಳವಣಿಗೆಯಿಂದಾಗಿಯೇ, ಪರಿಸರದ ನಾಶವಾಗುತ್ತಿದೆ, ಅದು ಗೊತ್ತಿದ್ದರೂ, ಅದನ್ನು ತಡೆಯುವುದು ಅಷ್ಟು ಸುಲಭವಿಲ್ಲವಲ್ಲ! ಕಳೆದ ಒಂದೆರಡು ನೂರು ವರ್ಷಗಳಲ್ಲಿ ಕಾಡನ್ನು ಕಡಿದು, ಸಂಪನ್ಮೂಲಗಳನ್ನು ಬಳಸಿ, ಕಲ್ಮಶ ಉಗುಳುವ ತೈಲವನನು ಬಳಸಿ, ಕೆಲವು ದೇಶಗಳು ಅಭಿವೃದ್ಧಿ ಸಾಧಿಸಿವೆ (ಉದಾ: ಅಮೆರಿಕ, ಯುರೋಪಿನ ಹಲವು ದೇಶಗಳು, ರಷ್ಯಾ, ಜಪಾನ್, ಆಸ್ಟ್ರೇಲಿಯಾ ಇ). ಇನ್ನು ಕೆಲವು ದೇಶಗಳು ಬೆಳವಣಿಗೆಯ ಹಾದಿಯಲ್ಲಿವೆ (ಉದಾ: ಭಾರತ, ಚೀನಾ, ದಕ್ಷಿಣ ಅಮೆರಿಕದ ಕೆಲವು ದೇಶಗಳು).

ಇನ್ನೂ ಅಭಿವೃದ್ಧಿಹೊಂದುತ್ತಿರುವ ಬಡ ದೇಶಗಳು ಇದೇ ದಾರಿಯನ್ನು ಅನುಕರಿಸುವ ಪ್ರಯತ್ನ ಮಾಡುತ್ತಿವೆ, ಅಭಿವೃದ್ಧಿಯನ್ನು ಸಾಧಿಸಲು ಹಾತೊರೆಯುತ್ತಿವೆ. ‘ಇದೇ ದಾರಿ’ ಎಂದರೆ, ಕಲ್ಮಶ ಹೊರಸೂಸುವ ತೈಲದ ಬಳಕೆ, ಪ್ರಾಕೃತಿಕ ಸಂಪನ್ಮೂಲಗಳ ನಾಶ ಅಥವಾ ಬಳಕೆ, ಕಾಡಿನ
ನಾಶ, ನದಿಗಳ ನಾಶ – ಇದು ಈ ವರೆಗೆ ಹಲವು ದೇಶಗಳು ತುಳಿದಿರುವ ಅಭಿವೃದ್ಧಿಯ ಮೆಟ್ಟಿಲುಗಳು. ಇದುವರೆಗೆ ಜಗತ್ತು ಅಭಿವೃದ್ಧಿ ಹೊಂದಿ
ರುವುದು, ಈಗ ಅಭಿವೃದ್ಧಿ ಹೊಂದುತ್ತಾ ಇರುವುದು ಇದೇ ಸಿದ್ಧ ಸೂತ್ರಗಳನ್ನು ಬಳಸಿ. ಇದರ ಜತೆ, ಕೆಲವು ದೇಶಗಳು ಅಣುವಿದ್ಯುತ್‌ನ್ನು ಸಹ
ಬಳಸುತ್ತಿವೆ, ಒಂದಲ್ಲಾ ಒಂದು ದಿನ ಅದು ಭಸ್ಮಾಸುರನಾಗಬಹುದು ಎಂಬ ತಿಳಿವಳಿಕೆ ಇದ್ದರೂ.

ಈ ಎಲ್ಲಾ ಮಾರ್ಗ, ಪಥ, ಮೆಟ್ಟಿಲುಗಳ ದೂರಗಾಮಿ ಪರಿಣಾಮವೆಂದರೆ, ಪರಿಸರದ ನಾಶ, ಪ್ರಕೃತಿಯ ನಾಶ, ನಮ್ಮ ಸುತ್ತಲಿನ ವಾತಾವರಣದ ನಾಶ. ಇದು ಎಲ್ಲಿಗೆ ಹೋಗಿ ಮುಟ್ಟಬಹುದು ಎಂದರೆ, ಇದೇ ರೀತಿ ಮುಂದುವರಿದರೆ, ಒಂದಲ್ಲಾ ಒಂದು ದಿನ ಭೂಮಿಯು ಮನುಷ್ಯನಿಗೆ ವಾಸ ಯೋಗ್ಯವಾಗದೇ ಇರಬಹುದು! ಇಂತಹ ಅಪಾಯಕಾರಿ ಸಾಧ್ಯತೆಯನ್ನು ತಜ್ಞರು, ವಿಜ್ಞಾನಿ ಗಳು ಊಹಿಸಿ, ನಾಗರಿಕ ಮಾನವನನ್ನು ಎಚ್ಚರಿಸುತ್ತಲೇ ಇದ್ದಾರೆ. ಇದರ ಪರಿಣಾಮವೇ ಇರಬಹುದು, ಈಗ, ‘ಪರಿಸರ ರಕ್ಷಿಸಿ’ ಎಂಬ ಕೂಗು ಅಲ್ಲಲ್ಲಿ ಎದ್ದಿದ್ದೆ. ಕಳೆದ ಒಂದೆರಡು ದಶಕಗಳ ಅವಽಯಲ್ಲಿ ಪರಿಸರ ರಕ್ಷಿಸುವ ವ್ಯಾಪಕ ಪ್ರಯತ್ನವೂ ನಡೆದಿದೆ. ಅದು ಎಷ್ಟು ಯಶ ಕಂಡಿದೆ ಎಂಬುದು ಬೇರೆ ವಿಚಾರ.

ಮಕ್ಕಳಲ್ಲಿ ಪರಿಸರ ಪ್ರಜ್ಞೆಯನ್ನು ಬೆಳೆಸಿದರೆ, ಅವರು ದೊಡ್ಡವರಾದಾಗ, ಪರಿಸರದ ಕುರಿತು ಕಾಳಜಿಯನ್ನು ಬೆಳೆಸಿಕೊಂಡಾರು ಎಂಬ ಉದ್ದೇಶ ದಿಂದ, ನಮ್ಮ ಪಠ್ಯಪುಸ್ತಕಗಳಲ್ಲೂ ಪರಿಸರ ರಕ್ಷಣೆಯ ಪ್ರಾಮುಖ್ಯತೆಯನ್ನು ವಿವರಿಸುವ ಕೆಲವು ಪಾಠಗಳು ಸೇರಿಕೊಂಡಿವೆ. ಆದರೂ, ಆಗಬೇಕಾದದ್ದು ಬಹಳಷ್ಟಿದೆ, ಸರಕಾರವಾಗಲೀ, ಖಾಸಗಿಯವರಾಗಲೀ, ಪರಿಸರ ಉಳಿಸುವ ಏಕೈಕ ದೃಷ್ಟಿಯಿಂದ ಯಾವುದೇ ಬೃಹತ್ ಚಟುವಟಿಕೆಯನ್ನು ಕೈಗೊಂಡಿದ್ದು ಕೇವಲ ಬೆರಳೆಣಿಕೆಯಷ್ಟು.

ಈ ಸಂದರ್ಭದಲ್ಲಿ ಶಿವರಾಮ ಕಾರಂತರು ನೆನಪಾಗುತ್ತಾರೆ. ಉತ್ತರ ಕನ್ನಡ ಜಿಲ್ಲೆಯ ಪರಿಸರವನ್ನು ರಕ್ಷಿಸುವ ಚಳವಳಿಯಲ್ಲಿ (1980ರ ದಶಕ) ನೇರವಾಗಿ ಧುಮುಕಿ, ಪರಿಸರ ರಕ್ಷಣೆಯ ಮಹತ್ವವನ್ನು ಬಹಿರಂಗವಾಗಿ ಸಾರಿದರು. ಈ ಖ್ಯಾತ ಸಾಹಿತಿಯ ಭಾಗವಹಿಸುವಿಕೆಯಿಂದ, ಹಳ್ಳಿ
ಹಳ್ಳಿಗಳಲ್ಲೂ ಪರಿಸರದ ಪ್ರಾಮುಖ್ಯತೆಯ ಜಾಗೃತಿ ಮೂಡಿತು. ಜತೆಗೆ, ಅವರ ಸಾಹಿತ್ಯದಲ್ಲಿ ಮೊದಲಿನಿಂದಲೂ ಪರಿಸರ, ಪ್ರಕೃತಿಯನ್ನು ಅಳವಡಿದ
ಸಾಹಿತಿ ಅವರು. ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕುವ ಮೊದಲೇ ಹಲವು ಕಾದಂಬರಿಗಳನ್ನು ರಚಿಸಿ, ಆ ಪ್ರಕಾರದಲ್ಲಿ ಹೆಸರು ಮಾಡಿದ್ದ ಅವರು,
ಕಾದಂಬರಿಯಂತಹ ಪ್ರಮುಖ ಸೃಜನಶೀಲ ಬರವಣಿಗೆಯ ಜತೆಯೇ, ಹಲವು ಪರಿಸರ ಕಾಳಜಿಯ ಕೆಲಸಗಳನ್ನು ಕೈಗೆತ್ತಿಕೊಂಡಿದ್ದರು.

ಅವರು ನಡೆಸುತ್ತಿದ್ದ ಪುತ್ತೂರಿನ ಬಾಲವನದಲ್ಲೂ ಪರಿಸರ ಕಾಳಜಿಯನ್ನು ಬೆಳೆಸುವ ಕೆಲಸ ನಡೆದಿತ್ತು. 1930ರ ದಶಕದಲ್ಲೇ, ವಿಜ್ಞಾನ ಮತ್ತು ಭೂಗೋಳದ ಕೆಲವು ಪುಸ್ತಕ ಮತ್ತು ಬರಹಗಳನ್ನು ಬರೆದು, ಜನರಲ್ಲಿ ಅದರಲ್ಲೂ ಮುಖ್ಯವಾಗಿ ಮಕ್ಕಳಲ್ಲಿ ಪರಿಸರದ ಕುರಿತು ಅರಿವು ಮೂಡಿಸುವ ಗಂಭೀರ ಪ್ರಯತ್ನ ನಡೆಸಿದ್ದರು. ಅವರೇ ಬರೆದು, ಪ್ರಕಟಿಸಿದ ‘ಚಿತ್ರಮಯ ದಕ್ಷಿಣ ಕನ್ನಡ’ ಎಂಬ ಪುಸ್ತಕಕ್ಕಾಗಿ, ಜರ್ಮನಿಯ ಫೋಟೋಗ್ರೆವೂರ್ ವಿಧಾನದಿಂದ 30ಕ್ಕೂ ಹೆಚ್ಚು ಫೋಟೋಗಳನ್ನು ಮುದ್ರಿಸಿದ್ದರು.

ಆ ಫೋಟೋಗಳ ಗುಣಮಟ್ಟವು, ಈಗಿನ ಆಧುನಿಕ ಯುಗದ ಫೋಟೋ ಗುಣಮಟ್ಟಕ್ಕೆ ಸಮಾನ ಎನಿಸಿತ್ತು. ಅಲ್ಲಿನ ಫೊಟೋಗಳ ಪೈಕಿ, ಆರೆಂಟು
ಫೋಟೋಗಳು ನಮ್ಮ ನಾಡಿನ ಬೆಟ್ಟ, ಜಲಪಾತ, ಕಾಡು, ಕಡಲ ಕಿನಾರೆ, ವನ್ಯಪ್ರಾಣಿಗಳನ್ನು ಬಿಂಬಿಸುತ್ತಿದ್ದವು. ಅವುಗಳನ್ನು ನೋಡಿದ ಮಕ್ಕಳು ಪ್ರಕೃತಿ ಪ್ರೀತಿ ಬೆಳೆಸಿಕೊಳ್ಳಲಿ ಎಂಬ ಆಶಯ ಅವರದ್ದು. ಆ ಕಾಲದಲ್ಲೇ, ಪಶ್ಚಿಮ ಘಟ್ಟಗಳ ಹಲವು ಜಲಪಾತಗಳನ್ನು ಕಂಡು, ಅಲ್ಲಿಗೆ ಚಾರಣ ಮಾಡಿ, ಅವುಗಳ ಭೂಪಟವನ್ನು ರಚಿಸಿ, ಮುದ್ರಿಸಿದ್ದರು! ಕೊಡಚಾದ್ರಿ, ಕುದುರೆಮುಖ, ಕುಮಾರ ಪರ್ವತದಂತಹ ಗಿರಿ ಶಿಖರಗಳಿಗೆ 1920ರ ದಶಕದಲ್ಲೇ, ಅಂದರೆ, ಇಂದಿಗೆ ಸುಮಾರು ೧೦೦ ವರ್ಷಗಳ ಮುಂಚೆ ಚಾರಣ ಮಾಡಿ, ಅಲ್ಲಿನ ಜೀವವೈವಿಧ್ಯವನ್ನು ದಾಖಲಿಸಿ, ಆ ಕುರಿತು ಬರೆದು ಪ್ರಕಟಿಸಿದ್ದರು.

ಕನ್ನಡ ಸಾಹಿತ್ಯದಲ್ಲಿ ಪರಿಸರದ ಕುರಿತು ವ್ಯಾಪಕ ವಾಗಿ ಬರೆದವರಲ್ಲಿ ಅಗ್ರಗಣ್ಯರೆಂದರೆ ಪೂರ್ಣಚಂದ್ರ ತೇಜಸ್ವಿ ಮತ್ತು ಬಿ.ಜಿ.ಎಲ್.ಸ್ವಾಮಿ. ಇವರಿಬ್ಬರಿಗಿಂತಲೂ ಸುಮಾರು ಅರ್ಧ ಶತಮಾನದ ಮುಂಚೆಯೇ ಪರಿಸರವನ್ನು ಸಾಹಿತ್ಯದಲ್ಲಿ ಅಡಕಗೊಳಿಸಿದವರು ಶಿವರಾಮ ಕಾರಂತರು. ಅವರು ಬರೆದ ಹಲವು ಕಾದಂಬರಿಗಳಲ್ಲಿ, ಬೆಟ್ಟ, ಕಾಡು, ಪರಿಸರ, ನದಿಗಳು ಪ್ರಧಾನವಾಗಿ ಬರುತ್ತವೆ. ಮಾನವ ಮತ್ತು ವನ್ಯಜೀವಿಯ ಮುಖಾಮುಖಿ
ಯನ್ನು ಎಷ್ಟು ಚೆನ್ನಾಗಿ ತಮ್ಮ ಕೃತಿಯಲ್ಲಿ ಅವರು ಅಳವಡಿಸಬಲ್ಲರು ಎಂಬುದಕ್ಕೆ ಅವರ ‘ಬೆಟ್ಟದ ಜೀವ’ ಕಾದಂಬರಿ ಒಂದು ಉತ್ತಮ ಉದಾಹರಣೆ.

ಕನ್ನಡದ ಪ್ರಮುಖ ಕಾದಂಬರಿಗಳಲ್ಲಿ ಒಂದಾಗಿರುವ ‘ಬೆಟ್ಟದ ಜೀವ’ ಪ್ರಕಟಗೊಂಡದ್ದು 1934 ರಲ್ಲಿ, ಅಂದರೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕುವ ೧೩ ವರ್ಷಗಳಿಗೂ ಮುಂಚೆ. ‘ಪರಿಸರವಾದ’ ಎಂಬ ಪರಿಕಲ್ಪನೆಯು ನಮ್ಮ ದೇಶದಲ್ಲಿ ರೂಢಿಗತಗೊಳ್ಳುವ ಬಹಳ ಮುಂಚೆಯೇ, ಕಾರಂತರು ಪರಿಸರಪ್ರಧಾನವಾದ ‘ಬೆಟ್ಟದ ಜೀವ’ ರಚಿಸಿದರು ಎಂಬುದು ಒಂದು ವಿಸ್ಮಯ, ಅದ್ಭುತ! ಕಾಡಿನ ಮೂಲೆಯಲ್ಲಿ, ವನ್ಯಜೀವಿಗಳ ಹಾವಳಿಯನ್ನು ದಿನನಿತ್ಯವೂ ಎದುರಿಸುತ್ತಾ, ಗೋಪಾಲಯ್ಯ ಮತ್ತು ಶಂಕರಿ ದಂಪತಿ ಅಲ್ಲೇ ಮನೆ ಕಟ್ಟಿಕೊಂಡು, ಕೃಷಿ ನಡೆಸುತ್ತಾ ಬದುಕು ಕಟ್ಟಿಕೊಳ್ಳುವುದು ಈ ಕಾದಂಬರಿಯ ಪ್ರಮುಖ ಥೀಂ. ಮುನುಷ್ಯನ ಜೀವನ ಪ್ರೀತಿಯ ಅದಮ್ಯ ಪ್ರತೀಕವಾಗಿ ಈ ಕಾದಂಬರಿಯ ನಾಯಕ ಗೋಪಾಲಯ್ಯ ಕಾಣಿಸುತ್ತಾನೆ.

ಗೋಪಾಲಯ್ಯನ ಬದುಕಿನ ಹೋರಾಟವನ್ನು, ಬೆಟ್ಟಗಳ ನಡುವೆ ಇಷ್ಟಪಟ್ಟು ಜೀವಿಸುವ ಪರಿಯನ್ನು ಬರೆಯುತ್ತಲೇ, ಕಾರಂತರು ಈ  ಕಾದಂಬರಿ ಯಲ್ಲಿ ಪ್ರಕೃತಿಯನ್ನು, ಪ್ರಕೃತಿಯ ವ್ಯಾಪಾರಗಳನ್ನು ಪ್ರಧಾನವಾಗಿ ಬಿಡಿಸಿಟ್ಟಿರುವ ಪರಿ ಒಂದು ಪುಟ್ಟ ವಿಸ್ಮಯ. ತೇಜಸ್ವಿಯವರು 1970ರ ದಶಕದಲ್ಲಿ ‘ಕರ್ವಾಲೋ’ ಕಾದಂಬರಿಯನ್ನು ರಚಿಸುವ ತನಕ, ಕನ್ನಡ ಕಾದಂಬರಿಯೊಂದರಲ್ಲಿ, ಇಷ್ಟು ವ್ಯಾಪಕವಾಗಿ, ವಿವರವಾಗಿ, ಪ್ರಧಾನವಾಗಿ ಪರಿಸರದ ವ್ಯಾಪಾರಗಳನ್ನು ನಿರೂಪಿಸಿದ ಕೃತಿ ಇನ್ನೊಂದಿಲ್ಲ. (ಬಿ.ಜಿ.ಎಲ್.ಸ್ವಾಮಿಯವರ ‘ಹಸುರು ಹೊನ್ನು’ ಕೃತಿಯನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು.) ೧೯೩೪ರಷ್ಟು ಮುಂಚೆಯೇ, ಪರಿಸರ, ಪ್ರಕೃತಿ, ವನ್ಯಜೀವಿಗಳನ್ನು ‘ಬೆಟ್ಟದ ಜೀವದಲ್ಲಿ’ ಕಾರಂತರು ಸಶಕ್ತವಾಗಿ, ಅರ್ಥಪೂರ್ಣವಾಗಿ ಅಳವಡಿಸಿರುವ ವಿಚಾರವು ಕನ್ನಡ ಸಾಹಿತ್ಯಲೋಕದ ಬೆರಗುಗಳಲ್ಲಿ ಒಂದು.

ರಾತ್ರಿ ಹೊತ್ತು ಕಾಡಿನ ನಡುವಿನ ರಸ್ತೆದಾರಿಯಲ್ಲಿ ದಾರಿತಪ್ಪುವ ಕಾದಂಬರಿಯ ನಿರೂಪಕರು, ದಟ್ಟಡವಿಯ ನಡುವಿನ ಕೆಳಬೈಲು ಎಂಬಲ್ಲಿ ವಾಸಿಸುವ ಗೋಪಾಲಯ್ಯನವರ ಮನೆಗೆ ಹೋಗುತ್ತಾರೆ. ಮುಂದಿನ ನಾಲ್ಕಾರು ದಿನ ಅಲ್ಲೇ ತಂಗುವ ನಿರೂಪಕರು, ಆ ಸುತ್ತಲಿನ ಜಲಪಾತಗಳ, ಅಬ್ಬಿಗಳ, ತೊರೆಗಳ, ಹೊಳೆಗಳ ಸೌಂದರ್ಯಕ್ಕೆ ಮಾರು ಹೋಗುತ್ತಾರೆ, ಅಲ್ಲಿನ ಹಸಿರ ಸಿರಿಯನ್ನು ಕಂಡು ಬೆರಗಾಗುತ್ತಾರೆ, ಹೊಳೆಯ ಶೀತಲ ನೀರಿನಲ್ಲಿ ಸ್ನಾನ ಮಾಡುತ್ತಾರೆ, ಕಾಡಿನ ನಡುವೆ ವಾಸಿಸುವ ಜನರನ್ನು ಅನಿವಾರ್ಯವಾಗಿ ಕಾಡುವ ಜ್ವರವನ್ನು ಅನುಭವಿಸುತ್ತಾರೆ, ಜತೆಜತೆಗೇ, ಕಾಟುಮೂಲೆ ಎಂಬ, ಇನ್ನೂ ದಟ್ಟವಾದ ಅರಣ್ಯ ಪ್ರದೇಶದ ನಡುವೆ ಇರುವ ಮತ್ತೊಂದು ಮನೆಯನ್ನು ಕಂಡು ಅಚ್ಚರಿಗೆ ಒಳಗಾಗುತ್ತಾರೆ. ಈ ಕಾಟುಮೂಲೆಯ ವಿಶೇಷವೆಂದರೆ, ಮಂಗಗಳೇ ಬೀಜ ಪ್ರಸಾರ ಮಾಡಿ ಬೆಳೆಸಿದ ಅಡಿಕೆ ಮರಗಳ ತೋಟ! ಆ ತೋಟಕ್ಕೆ, ಮನೆಯ ಹತ್ತಿರಕ್ಕೆ ಆನೆಗಳ ಹಿಂಡು ಬರುವುದು ತೀರಾ ಸಾಮಾನ್ಯ!

ಮೇಯಲು ಬಿಟ್ಟ ಹಸು, ಎತ್ತುಗಳನ್ನು ಹುಲಿಗಳು ಹಿಡಿದು ತಿನ್ನುವುದು ಮಾಮೂಲಿ ಸುದ್ದಿ. ಅದರ ಜತೆಯಲ್ಲೇ ಆ ಬೆಟ್ಟ ಗುಡ್ಡಗಳ ಮೋಹಕ ಸೌಂದರ್ಯವು ನಿರೂಪಕರನ್ನು ಸೆರೆಹಿಡಿಯುತ್ತದೆ, ಅಲ್ಲೇ ಉಳಿದುಕೊಂಡರೆ ಹೇಗೆ ಎಂಬ ಹಗಲುಗನಸನ್ನು ಕಾಣುವಂತೆಯೂ ಮಾಡುತ್ತದೆ.
ಈ ಕಾಡಿನ ನಡುವಿನ ಬದುಕಿನಲ್ಲಿ, ಹಸುವನ್ನು ಹಿಡಿಯುವ ಹುಲಿಯನ್ನು ಬಲೆಗೆ ಬೀಳಿಸುವ ಸಾಹಸದ ಕೆಲಸಕ್ಕೆ ನಿರೂಪಕನು ಸಾಕ್ಷಿಯಾಗುತ್ತಾನೆ.
ಗೋಪಾಲಯ್ಯ ಮತ್ತು ಇತರ ಸಹಾಯಕರು ಮರದ ಬೋನನ್ನು ತಯಾರಿಸಿ, ಅದರೊಳಗೆ ನಾಯಿಯನ್ನು ಕಟ್ಟಿ, ಹುಲಿಯನ್ನು ಬೋನೊಳಗೆ
ಕೆಡಹುವ ಸಾಹಸವೂ, ಕಾದಂಬರಿಯ ಪ್ರಮುಖ ವಿದ್ಯಮಾನಗಳಲ್ಲಿ ಒಂದು.

ಮನುಷ್ಯ ಮತ್ತು ವನ್ಯಜೀವಿಗಳ ಮುಖಾಮುಖಿಯ ಪ್ರಖರ ಉದಾಹರಣೆ ಇದು. ಬೋನಿನಲ್ಲಿ ಬಿದ್ದ ಹುಲಿಯನ್ನು ಗೋಪಾಲಯ್ಯ, ದೇರಣ್ಣ ಮೊದಲಾ ದವರು ಬಂದೂಕು ಚಲಾಯಿಸಿ ಸಾಯಿಸಿದ ಘಟನೆಯಂತೂ ಮೈನವಿರೇಳಿಸುವಂತಹದ್ದು. ಗುಂಡೇಟು ತಿಂದು ಬೋನಿನಲ್ಲೇ ಸತ್ತುಬಿದ್ದ ಹುಲಿಯ ಬಾಲವನ್ನು ಮುಟ್ಟಿ ನೋಡುವ ನಿರೂಪಕನಿಗೆ, ಅಷ್ಟರಿಂದಲೇ ಎದೆ ಡವ ಡವ ಎನ್ನುತ್ತದೆ. ಹಾಗಿದ್ದಾಗ, ಆ ಕಾಡಿನಲ್ಲೇ ವಾಸಿಸಿ, ಪ್ರತಿ ದಿನ ಎಂಬಂತೆ ಹುಲಿಯ ಘರ್ಜನೆಯನ್ನು ಕೇಳುತ್ತಾ, ತಮ್ಮ ಹಸುಗಳನ್ನು ರಕ್ಷಿಸಿಕೊಳ್ಳುತ್ತಾ ಜೀವನ ನಡೆಸುವ ಗೋವಿಂದಯ್ಯ, ದೇರಣ್ಣ, ಬಟ್ಯ, ನಾರಾಯಣ ಮೊದಲಾದವರ ದಿನಚರಿ ಹೇಗಿದ್ದರಬಹುದು! ಕಾಟುಮೂಲೆಯ ಮನೆ ಮತ್ತು ಅಡಿಕೆ ತೋಟಕ್ಕೆ ಆನೆಗಳು ಬಾರದಂತೆ ಕಂದಕ ತೋಡುವ ಽರರು ಅಲ್ಲಿನ ಜನರು. ಆದರೇನು ಮಾಡುವುದು, ಆ ರೀತಿ ಕಂದಕ ತೋಡಿ ಕಬ್ಬು ನೆಟ್ಟಾಗ, ಕಂದಕದ ದಾರಿಯನ್ನು ಅತ್ತ ಬಿಟ್ಟು, ಇನ್ನೊಂದು ಕಡೆ ಹರಿಯು ತ್ತಿದ್ದ ಹೊಳೆಯನ್ನು ದಾಟಿ ಬರುವ ಆನೆಗಳ ಹಿಂಡು, ಕಬ್ಬಿನ ಗದ್ದೆಯನ್ನು ಪೂರ್ತಿ ತಿಂದು, ನಾಚಾರ ಮಾಡುತ್ತವೆ! ಆ ನಂತರ ಗೋಪಾಲಯ್ಯ ಅಲ್ಲ ಕಬ್ಬು ಬೆಳೆಯುವುದನ್ನೇ ಬಿಟ್ಟುಬಿಟ್ಟರು!

1934ರಲ್ಲಿ ಪ್ರಕಟಗೊಂಡ ‘ಬೆಟ್ಟದ ಜೀವ’ ಕಾದಂಬರಿಯು, 1930ರ ದಶಕದ ಪಶ್ಚಿಮ ಘಟ್ಟಗಳ ನಡುವಿನ ಬದುಕನ್ನು ಬಿಂಬಿಸುತ್ತದೆ. ನಂತರದ ದಶಕಗಳಲ್ಲಿ ಆ ಪ್ರದೇಶದ ಮತ್ತು ಒಟ್ಟೂ ನಮ್ಮ ರಾಜ್ಯದ ಅರಣ್ಯ ಸಾಕಷ್ಟು ನಾಶಗೊಂಡಿತು; ಕೆಲವು ಕಡೆ ರಬ್ಬರ್ ಬೆಳೆ ವ್ಯಾಪಕವಾಯಿತು. ವಿಶಾಲ ಪ್ರದೇಶಗಳು ನಾಶಗೊಂಡವು, ಡ್ಯಾಂ ಮತ್ತು ಇತರ ಉದ್ದೇಶಗಳಿಗೆ ತಮ್ಮನ್ನು ತಾವೇ ತ್ಯಾಗ ಮಾಡಿಕೊಂಡವು. ಭೂ ತಾಪಮಾನ ಹೆಚ್ಚಳಕ್ಕೆ ಕಾರಣವಾಗುವ ಹಲವು ವಿದ್ಯಮಾನಗಳು ನಡೆದವು, ನಿರಂತರವಾಗಿ ನಡೆಯುತ್ತಲೇ ಇವೆ.

ಇಂತಹ ಸಂದರ್ಭದಲ್ಲಿ, ಪರಿಸರ ಪ್ರಧಾನ ವಸ್ತು ವಾಗಿರುವ ‘ಬೆಟ್ಟದ ಜೀವ’ ಕಾದಂಬರಿಯನ್ನು ಓದುವ ಮೂಲಕ, ಅಂದಿನ ಕಾಡು, ಬೆಟ್ಟಗಳ
ಸ್ಥಿತಿಯನ್ನು ನಾವು ಅರಿಯಬಹುದು, ಮನುಷ್ಯ ಮತ್ತು ವನ್ಯಜೀವಿಗಳ ಮುಖಾಮುಖಿಯ ಮಜಲುಗಳನ್ನು ಗಮನಿಸಬಹುದು.