Thursday, 28th November 2024

ಖರ್ಜೂರ ಬೆಳೆದ ದಿವಾಕರ; ಬದುಕು ಬಂಗಾರ

ಸುಪ್ತ ಸಾಗರ

rkbhadti@gmail.com

ಖರ್ಜೂರದಿಂದಲೇ ಬದುಕು ಕಟ್ಟಿಕೊಂಡಿರುವ ದಿವಾಕರ ಅವರ ಎಲ್ಲ ಅಗತ್ಯಗಳನ್ನೂ ಖರ್ಜೂರ ಪೂರೈಸುತ್ತಿದೆ. ರೈತರು ಯಾವುದಾದರೂ ಒಂದು ಬೆಳೆಯನ್ನು ನಂಬಿದರೆ ಅದು ನಮ್ಮ ಅಗತ್ಯವನ್ನು ಪೂರೈಸುವಷ್ಟು ಆದಾಯ ತರುವಂತೆ ಇರಬೇಕು. ಉಳಿದ ಬೆಳೆಗಳು ನಮಗೆ ಬೋನಸ್ ರೀತಿ ಆಗಿರಬೇಕು. ಲೆಕ್ಕಾಚಾರದ ಕೃಷಿಯೇ ರೈತನ ಎಲ್ಲ ಸಮಸ್ಯೆಗಳಿಗೆ ಪರಿಹಾರ.

ಸ್ನಾತಕೋತರ ಪದವೀಧರರೊಬ್ಬರು ಕೃಷಿಯೆಡೆಗೆ ಮುಖ ಮಾಡಿ, ಇಂದು ಖರ್ಜೂರ ಬೆಳೆಯಿಂದಲೇ ಹೆಸರುವಾಸಿ ಯಾಗಿದ್ದಾರೆ. ಯುವ ಕೃಷಿ ಸಾಧಕರಾಗಿ ಹತ್ತಾರು ರೈತರಿಗೆ ಮಾದರಿಯಾಗಿದ್ದಾರೆ. ಕರ್ನಾಟಕದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಖರ್ಜೂರ ಬೆಳೆದು, ಮಾರಾಟಕ್ಕೆ ಕುಯಿಲು ಹಬ್ಬ’ ಎಂಬ ವಿನೂತನ ಪ್ರಯೋಗ ನಡೆಸಿ ಯಶಸ್ವಿ ಯಾದ ಕಥೆಯಿದು.

ನಾಟಕದ ದಕ್ಷಿಣ ತುದಿಯ ಕೋಲಾರ ಜಿ್ಲ್ಲೆಯಲ್ಲಿ ಖರ್ಜೂರದ ಕೋಯ್ಲಿನ ಸುಗ್ಗಿಯೆಂದರೆ ನಂಬಲಿಕ್ಕೆ ಸಾಧ್ಯ ವಾಗುತ್ತಿಲ್ಲ ಅಲ್ಲವೇ? ಆದರೆ ನಂಬಲೇಬೇಕು. ಇದನ್ನು ಸಾಧಿಸಿ ತೋರಿಸಿದವರು ಬೆಂಗಳೂರು ಗ್ರಾಮಾಂತರ ಜಿಯ ಇತಿಹಾಸ ಪ್ರಸಿದ್ಧ ಬೇಗೂರು ಗ್ರಾಮದ ದಿವಾಕರ ಚನ್ನಪ್ಪ. ಸ್ನಾತಕೋತ್ತರ ಪದವಿ ಪಡೆದು ಒಂದೆರಡು ವರ್ಷ ಬೇರೆ ಬೇರೆ ಕಡೆ ಕೆಲಸ ಮಾಡಿದವರು ದಿವಾಕರ. ಭೂಮಿಯ ಕಡೆ ಎಂದೂ ಹೊರಳಿಯೂ ನೋಡಿದವರಲ್ಲ. ಕೃಷಿ ನಂಬಿ ಬದುಕು ಕಟ್ಟಿಕೊಳ್ಳುವುದು ಸಾಧ್ಯವೇ ಇಲ್ಲ ಎಂದೇ ಪ್ರತಿಪಾದಿಸುತ್ತಿದ್ದವರು.

ಆದರೆ, ಅವರ ಬಾಳಲ್ಲಿ ಬೆಳಕು ಮೂಡಿಸಿದ್ದು, ಬಾಳಿನ ದಿಕ್ಕನ್ನೇ ಬದಲಿಸಿದ್ದು, ಕೃಷಿಯಡೆಗೆ ಆಸಕ್ತಿ ಮೂಡುವಂತೆ ಮಾಡಿದ್ದು -ಕೋವೋಕಾನ ಒಂದು ಹುಲ್ಲಿನ ಕ್ರಾಂತಿ’ ಎಂಬ ಹೊತ್ತಗೆ. ಆ ಪುಸ್ತಕ ಬದುಕಿನಲ್ಲಿ ಹೊಂಬೆಳಕು ಮೂಡಿಸಿತು. ಏನಾದರೂ ಮಾಡಿದರೆ ಭೂಮಿಯಲ್ಲಿಯೇ ಮಾಡಬೇಕೆಂಬ ಛಲ ಹುಟ್ಟುಹಾಕಿತು. ಪುಸ್ತಕ ಓದಿದ ಮಾರನೇ ದಿನವೇ ಭೂಮಿಯತ್ತ ಮುಖಮಾಡಿದರು. ತಂದೆ ಯಾವಾಗಲೋ ಖರೀದಿಸಿದ್ದ ಒಂದಷ್ಟು ಭೂಮಿ
ಗೌರಿಬಿದನೂರು ತಾಲೂಕಿನ ಸಾಗಾನಹಳ್ಳಿಯಲ್ಲಿ ಇತ್ತು.

ಬೆಂಗಳೂರು ವಿವಿಯಿಂದ ಎಂಎಸ್ಡಬ್ಲ್ಯೂ ಸ್ನಾತಕೋತ್ತರ ಪದವಿ ಪಡೆದು, ಇಸ್ರೋದಲ್ಲಿ ವಾರ್ಟ ಮ್ಯಾಪಿಂಗ್ ಕೆಲಸ ಮಾಡಿ, ತುಮಕೂರು ವಿವಿಯಲ್ಲಿ ಅತಿಥಿ ಉಪನ್ಯಾಸಕರಾಗಿದ್ದ ದಿವಾಕರ, ಪಿಎಚ್.ಡಿ ಮಾಡುವ ಯತ್ನವನ್ನೂ ಅರ್ಧದಲ್ಲಿಯೇ ಬಿಟ್ಟು ಕೃಷಿಯತ್ತ ಹೊರಳಿದರು. ಭೂಮಿಯಲ್ಲಿಯೇ  ಸಂಶೋಧನೆ ಮುಂದುವರಿಸುವುದಾಗಿ ನಿರ್ಧರಿಸಿದರು. ಇದರ ಫಲವಾಗಿ ಇಂದು ಸಾಗಾನಹಳ್ಳಿಯಲ್ಲಿರುವ ಖರ್ಜೂರದ ತೋಟ ತಲೆ ಎತ್ತಿ ನಿಂತಿದೆ. ದಿವಾಕರರ ಶ್ರಮವನ್ನು ಫಲ ರೂಪದಲ್ಲಿ ನೀಡುತ್ತಿದೆ.

ನೂರಾರು ಖರ್ಜೂರದ ಮರಗಳು ಮೈ ತುಂಬಾ ಗೊನೆಗಳನ್ನು ಹೊತ್ತು ಸಾರ್ಥಕ್ಯದ ಕತೆ ಹೇಳುತ್ತಿವೆ. ತೋಟದ ಖರ್ಜೂರ ಕಿತ್ತು ಬಾಯಿಗಿಟ್ಟರೆ ಅಮೃತದ ರುಚಿ. ಆ ಸವಿ ಕೃಷಿಕನೊಬ್ಬನ ಒಡಲಾಳದ ಕತೆಯನ್ನೂ ಹೇಳುತ್ತದೆ.ಅವರ ಬಾಯ ಕತೆ ಕೇಳಿ… ೨೦೧೦ರಲ್ಲಿ ಮೊದಲ ಬಾರಿಗೆ ನಾನು ಜಮೀನಿಗೆ ಕಾಲಿಟ್ಟದ್ದು. ಏನಾದರೂ ಸಾಧಿಸಬೇಕೆಂದಿದ್ದರೆ ಇಲ್ಲಿಯೇ ಆಗಬೇಕು ಎಂಬ ದೃಢ ಸಂಕಲ್ಪ ಹೊತ್ತಿದ್ದೆ. ಬೇಸಾಯದಲ್ಲಿ ತೊಡಗುವುದಾದರೆ ರಾಸಾಯನಿಕ ಬಳಸದೆ ಕೃಷಿ ಮಾಡಬೇಕು ಎಂದು ಕನಸು ಕಂಡೆ. ನಮ್ಮ ಮನೆಯವರ ಜತೆಗೆ ಕೆಲಸದವರೂ ಸೇರಿದಂತೆ ಎಲ್ಲರೂ ನನ್ನನ್ನು ಆಗ
ಗೇಲಿ ಮಾಡಿದವರೆ.

ಆದರೆ, ನಾನು ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳಲಿಲ್ಲ. ನನ್ನಲ್ಲಿದ್ದ ಛಲ ಒಂದಿಷ್ಟೂ ಕಡಿಮೆ ಆಗಲಿಲ್ಲ. ಕೃಷಿಯಲ್ಲಿ ತೊಡಗಿಸಿಕೊಂಡೆ.’ ಜಮೀನಿನಲ್ಲಿ ಮೊದಲಿಗೆ ಮುಸುಕಿನ ಜೋಳ, ರಾಗಿ ಬೆಳೆಯಲಾಯಿತು. ಇಷ್ಟನ್ನೇ ನಂಬಿದರೆ ಮುಂದೆ ಕಷ್ಟವಾಗಬಹುದು, ಏನಾದರೂ ಹೊಸದು ಮಾಡ ಬೇಕೆಂಬ ಹಂಬಲ ಮೂಡಿತು. ಅದೇ ವೇಳೆಗೆ ಬೆಂಗಳೂರುಕೃಷಿ ವಿವಿಯಲ್ಲಿ ನಡೆದ ಕೃಷಿ ಮೇಳಕ್ಕೆ ಭೇಟಿ ನೀಡಿದೆ. ಅಲ್ಲಿ ತಮಿಳುನಾಡಿನ ಧರ್ಮಪುರಿ ಜಿಲ್ಲೆಯ   ನಿಜಾಮುದ್ದೀನ್ ಎಂಬ ರೈತ ಖರ್ಜೂರ ಬೆಳೆಯ ಪ್ರಾತ್ಯಕ್ಷಿಕೆ ನೀಡಿದರು. ಆಸಕ್ತಿ ಮೂಡಿತು. ತಾನೂ ಈ ಬೆಳೆ ಮಾಡಬಾರದೇಕೆ ಎಂದುಕೊಂಡೆ.’
ಸರಿ ಯಾವುದಕ್ಕೂ ಇರಲಿ ಎಂದು ಆ ರೈತನ ವಿಳಾಸ ಪಡೆದು ಇಟ್ಟುಕೊಂಡಿದ್ದೆ.

ಸ್ವಲ್ಪ ದಿನಗಳ ಧರ್ಮಪುರಿಗೆ ಹೋಗಿ ನಿಜಾಮುದ್ದೀನ್ ಅವರನ್ನು ಭೇಟಿ ಮಾಡಿ, ಅವರ ತೋಟವನ್ನು ಸುತ್ತಾಡಿ, ಮಾಹಿತಿ ಸಂಗ್ರಹಿಸಿ, ಅಲ್ಲಿಂದಲೇ
೧೫೦ ಖರ್ಜೂರದ ಸಸಿಗಳನ್ನು ತಂದು, ನಮ್ಮ ಜಮೀನಿನಲ್ಲಿ ನೆಟ್ಟೆ. ಇದನ್ನು ಕಂಡ ಮನೆಯವರು ಹಾಗೂ ಸುತ್ತಮುತ್ತಲ ರೈತರು ನನ್ನನ್ನು ಗೇಲಿ
ಮಾಡಲಾರಂಭಿಸಿದರು. ಎಲ್ಲ ಬಿಟ್ಟ ಮಗ ಗಾಂಜಾ ನೆಟ್ಟ’ ಎಂದು ಲೇವಡಿ ಮಾಡಿದರು. ಏನೋ ಹುಡುಗ, ಕೃಷಿ ಗೊತ್ತಿಲ್ಲ, ಈಚಲು ಸಸಿಗಳನ್ನು
ನೆಟ್ಟು ಖರ್ಜೂರ ಎನ್ನುತ್ತಿದ್ದಾನೆ ಪಾಪ’ ಎಂದು ಆಡಿಕೊಂಡವರೇ ಹೆಚ್ಚು. ಆದರೆ, ಇದ್ಯಾವುದನ್ನೂ ನಾನು ತಲೆಗೆ ಹಚ್ಚಿಕೊಳ್ಳಲಿಲ್ಲ.

ನನ್ನಷ್ಟಕ್ಕೆ ನಾನು ಕೆಲಸದಲ್ಲಿ ನಿರತನಾದೆ. ಯಾವಾಗ ಖರ್ಜೂರದ ಗಿಡಗಳು ನಾಲ್ಕನೇ ವರ್ಷಕ್ಕೆ ಫಲ ಕೊಡಲು ಆರಂಭಿಸಿದವೋ ಆಗ ತೆಗಳಿದವರು, ನನ್ನನ್ನು ಹುಚ್ಚ ಎಂದವರೆಲ್ಲರೂ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತಾಯಿತು. ಸಾವಯವ ಪದ್ಧತಿಯ ಬೆಳೆದ ಖರ್ಜೂರದ ರುಚಿಗೆ ಮಾರು ಹೋದರು. ಈಗ ಖರ್ಜೂರ ದಿವಾಕರ ಎಂದೇ ಜನರು ನನ್ನನ್ನು ಗುರುತಿಸಲಾರಂಭಿಸಿದ್ದಾರೆ.’ ಮೊದಲು ಎರಡೂಕಾಲು ಎಕರೆಯಲ್ಲಿ ೨೦೧೧ ರಲ್ಲಿ ದಿವಾಕರ ಅವರು ಖರ್ಜೂರದ ಸಸಿಗಳನ್ನು ನೆಟ್ಟಿದ್ದರು.

ಧರ್ಮಪುರಿಯಿಂದ ತಂದದ್ದು 150 ಸಸಿಗಳನ್ನು. ಅದರಲ್ಲಿ 135 ಸಸಿಗಳು ಈಗ ಮರಗಳಾಗಿ ಬೆಳೆದು ನಿಂತಿವೆ. ಈ ಪೈಕಿ 15 ಸಸಿಗಳು ಗಂಡಾದರೆ ಉಳಿದವು ಹೆಣ್ಣು ಗಿಡಗಳು. ಸಸಿಗಳನ್ನು ಕೊಡುವಾಗಲೇ ನಿಜಾಮುದ್ದೀನ್ ಇವುಗಳಿಗೆ ರಾಸಾಯನಿಕ ಗೊಬ್ಬರ ಹಾಕಿ ಚೆನ್ನಾಗಿ ಬೆಳೆಸಿದರೆ ಮೂರು ವರ್ಷಕ್ಕೇ ಫಸಲು ನೀಡುತ್ತವೆ’ ಎಂದಿದ್ದರು. ಆದರೆ, ಸಾವಯವ ಅಲ್ಲದೇ ಬೇರೆ ಕೃಷಿ ಮಾಡುವುದಿಲ್ಲ ಎಂಬ ಶಪಥ ಮಾಡಿದ್ದರಿಂದಾಗಿ ನಷ್ಟವೇನೂ ಆಗಲಿಲ್ಲ. ನಂಬಿದ ಭೂಮಿ ಕೈ ಕೊಡಲಿಲ್ಲ.

ನಾಲ್ಕನೇ ವರ್ಷ ಬೆಳೆ ನೀಡಲಾರಂಭಿಸಿತು. ಮೊದಲ ವರ್ಷ ೧,೧೨೦ ಕೆ.ಜಿ. ಹಣ್ಣು ದೊರೆಯಿತು. ಎರಡನೇ ವರ್ಷ ೧೫೮೦ ಕೆ.ಜಿ. ಹಣ್ಣು ಬಂದಿದೆ. ಈ ಬಾರಿ ೨ ಟನ್ಗಿಂತಲೂ ಹೆಚ್ಚು ಹಣ್ಣು ದೊರೆತಿದೆ.’ ಎನ್ನುವಾಗು ಸಂತೃಪ್ತಿ ಇಣುಕುತ್ತದೆ. ಮೇಲೆ ಶಾಖ, ಕೆಳಗೆ ತೇವ ಇದ್ದರೆ ಖರ್ಜೂರ ಹುಲುಸಾಗಿ ಬೆಳೆಯುತ್ತದೆ. ಖರ್ಜೂರ ಮರಳುಗಾಡಿನಲ್ಲಿ ಮಾತ್ರ ಬೆಳೆಯುತ್ತದೆ ಎನ್ನುವ ಮಾತು ಸುಳ್ಳು. ಜತೆಗೆ ಖರ್ಜೂರಕ್ಕೆ ನೀರು ಬೇಡವೇ ಬೇಡ ಎಂಬೂದೂ ಮಿಥ್ ಎನ್ನುತ್ತಾರೆ ದಿವಾಕರ.

ನೀರಿಲ್ಲದೆಯೂ ಬಹಳ ಕಾಲ ಖರ್ಜೂರದ ಸಸಿ ಬದುಕುತ್ತವೆ ಎಂಬುದು ನಿಜ. ಆದರೆ ಫಲ ನೀಡಬೇಕು ಎಂದರೆ ನೀರು ಬೇಕೇ ಬೇಕು. ಒಂದು ತೆಂಗಿನ ಸಸಿಗೆ ಎಷ್ಟು ನೀರು ಬೇಕೋ ಅಷ್ಟೇ ನೀರು ಖರ್ಜೂರದ ಸಸಿಗೂ ಬೇಕಾಗುತ್ತದೆ. ಆದರೆ, ತಲೆಯ ಮೇಲೆ ಬಿಸಿಲು ಜಾಸ್ತಿ ಇರಬೇಕಷ್ಟೆ. ಕೋಲಾರ ಮತ್ತು
ಚಿಕ್ಕಬಳ್ಳಾಪುರ ಜಿಗಳಲ್ಲಿ ಇದಕ್ಕೆ ತಕ್ಕನಾದ ವಾತಾವರಣ ಇದೆ. ಇಲ್ಲಿ ಖರ್ಜೂರ ಬೆಳೆಯಬಹುದೆಂಬುದಕ್ಕೆ ಅವರ ತೋಟವೇ ಸಾಕ್ಷಿ.

ಖರ್ಜೂರದ ಆದಾಯದಿಂದಲೇ ಬದುಕು ಕಟ್ಟಿಕೊಂಡಿರುವ ದಿವಾಕರ ಅವರ ಎಲ್ಲ ಅಗತ್ಯಗಳನ್ನೂ ಖರ್ಜೂರ ಪೂರೈಸುತ್ತಿದೆ. ನಮ್ಮ ರೈತರು ಯಾವುದಾದರೂ ಒಂದು ಬೆಳೆಯನ್ನು ನಂಬಿದರೆ ಅದು ನಮ್ಮ ಅಗತ್ಯವನ್ನು ಪೂರೈಸುವಷ್ಟು ಆದಾಯ ತರುವಂತೆ ಇರಬೇಕು. ಉಳಿದ ಬೆಳೆಗಳು ನಮಗೆ ಬೋನಸ್ ರೀತಿ ಆಗಿರಬೇಕು. ಲೆಕ್ಕಾಚಾರದ ಕೃಷಿಯೇ ರೈತನ ಎಲ್ಲ ಸಮಸ್ಯೆಗಳಿಗೆ ಪರಿಹಾರ ಎನ್ನುವುದು ಅವರ ಅಭಿಮತ. ಖರ್ಜೂರ ಬೆಳೆದಿದ್ದೇನೋ ಆಯಿತು. ಆದರೆ, ಅದಕ್ಕೊಂದು ಮಾರುಕಟ್ಟೆ ಇಲ್ಲದಿzಗ ಮಾರುವುದು ಹೇಗೆ? ಅದಕ್ಕೂ ದಿವಾಕರ ಅವರು ಒಂದು ಪರಿಹಾರ ಹುಡುಕಿಕೊಂಡರು. ಮೊದಲಿಗೆ ಗೆಳೆಯರು, ಹಿತೈಷಿಗಳನ್ನು ತನ್ನ ತೋಟಕ್ಕೆ ಕರೆಸಿ ಕುಯಿಲು ಹಬ್ಬ’ ಮಾಡಲಾರಂಭಿಸಿದರು.

ಮೊದ ಮೊದಲು ೨೦ ರಿಂದ ೩೦ ಜನ ಬರುತ್ತಿದ್ದವರು. ಈಗ ಪ್ರತಿ ಹಬ್ಬದಂದು ಸುಮಾರು ೧೫೦ ರಿಂದ ೨೦೦ ಜನರು ತೋಟಕ್ಕೆ ಭೇಟಿ ನೀಡುತ್ತಾರೆ.
ಇಲ್ಲಿಗೆ ಬರುವ ಜನರು ತಾವೇ ಹಣ್ಣು ಕಿತ್ತು, ರುಚಿ ನೋಡಿ, ತೂಕ ಮಾಡಿ ಮನೆಗೆ ಒಯ್ಯಬಹುದು. ತೋಟದಲ್ಲಿಯೇ ಹಣ್ಣು ತೆಗೆದುಕೊಂಡೆರೆ ಕೆ.ಜಿ.ಗೆ 400 ರೂ. ಮಾತ್ರ ಅದೇ ಬೆಂಗಳೂರಿಗೆ ತಂದು ಕೊಡಬೇಕು ಎಂದರೆ ಸಾಗಣೆ ವೆಚ್ಚ ಭರಿಸಬೇಕಾಗುತ್ತದೆ. ಈವರೆಗೆ ಬೆಳೆದ ಹಣ್ಣುಗಳೆಲ್ಲವೂ ತೋಟ ದಲ್ಲಿಯೇ ಮಾರಾಟವಾಗಿರುವುದು ವಿಶೇಷ. ಕುಯಿಲು ಹಬ್ಬದಂದು ಖರ್ಜೂರ ಕೊಳ್ಳಲಷ್ಟೇ ಜನರು ಬರುವುದಿಲ್ಲ. ದೂರದೂರಿನಿಂದಲೂ ಬರುವ ರೈತರು ಖರ್ಜೂರ ಬೆಳೆಯ ಬಗ್ಗೆ ಇವರಿಂದ ಮಾಹಿತಿ ಸಂಗ್ರಹಿಸುತ್ತಾರೆ.

ಒಮ್ಮೆ ತಮ್ಮ ತೋಟಕ್ಕೆ ಭೇಟಿ ನೀಡಿ ಹಣ್ಣು ಕೊಂಡವರು ಮತ್ತೆ ಅವರೇ ಕುಯಿಲು ಹಬ್ಬದ ಮಾಹಿತಿ ಪಡೆದು ಬರುತ್ತಾರೆ. ಕಾರಣ ಇವರು ಅನುಸರಿಸು ತ್ತಿರುವ ನೈಸರ್ಗಿಕ ಕೃಷಿ ಪದ್ಧತಿ. ಯಾವುದೇ ರಾಸಾಯನಿಕ ಬಳಸದಿರುವುದರಿಂದ ಯಾವುದೇ ಅಡ್ಡ ಪರಿಣಾಮಗಳು ಬೀರುವುದಿಲ್ಲ. ಹೀಗಾಗಿ ಜನರು ಹುಡುಕಿಕೊಂಡು ಬಂದು ಖರೀದಿಸುತ್ತಾರೆ ಎಂದು ಹೆಮ್ಮೆ ಪಡುತ್ತಾರೆ ದಿವಾಕರ. ಖರ್ಜೂರದ ಸಸಿಯಲ್ಲಿ ಗಂಡು ಗಿಡ ಹೂವು ಬಿಡುತ್ತದೆ. ಆದರೆ ಕಾಯಿ ಆಗುವುದಿಲ್ಲ. ಹೆಣ್ಣು ಗಿಡದಲ್ಲಿ ಕಾಯಿ ಬರುತ್ತದೆ. ಗಂಡು ಗಿಡದಲ್ಲಿ ಬಂದ ಹೂವನ್ನು ಒಯ್ದು ಹಾಗೂ ಹೆಣ್ಣು ಗಿಡದಲ್ಲಿ ಬಂದ ಹೂವಿಗೆ ಪರಾಗ
ಸ್ಪರ್ಶ ಮಾಡಬೇಕು. ಪ್ರಾಕೃತಿಕವಾಗಿ ಪರಾಗ ಸ್ಪರ್ಶವಾಗುತ್ತದಾದರೂ ಕೃತಕವಾಗಿಯೂ ಪರಾಗ ಸ್ಪರ್ಶ ಮಾಡಿದರೆ ಬೆಳೆ ಚೆನ್ನಾಗಿ ಬರುತ್ತದೆ ಎಂಬುದು ದಿವಾಕರ ಅವರ ಅನುಭವ.

ನನ್ನ ತೋಟವನ್ನು ನೋಡಿ ತಾವೂ ಖರ್ಜೂರ ಬೆಳೆಯಬೇಕೆಂಬ ಉತ್ಸಾಹದಲ್ಲಿ ಬೆಂಗಳೂರು ಮತ್ತು ಇತರ ಕಡೆಯ ನರ್ಸರಿಯಲ್ಲಿ ಸಿಗುವ ಖರ್ಜೂರ
ಸಸಿಗಳನ್ನು ಕೊಂಡು ಬಹಳಷ್ಟು ಜನ ಮೋಸ ಹೋಗಿದ್ದಾರೆ. ಏಕೆಂದರೆ ಸಸಿಯಾಗಿರುವಾಗ ಯಾವುದು ಹೆಣ್ಣು, ಯಾವುದು ಗಂಡು ಎಂಬುದು
ಗೊತ್ತಾಗುವುದಿಲ್ಲ. ೩-೪ ವರ್ಷದ ನಂತರ ಗಿಡದಲ್ಲಿ ಹೊಂಬಾಳೆ ಬಂದಾಗಲಷ್ಟೇ ಅದು ಗೊತ್ತಾಗುವುದು. ನೂರು ಹೆಣ್ಣು ಗಿಡಗಳಿಗೆ ೧೦ ರಿಂದ ೧೫ ಗಂಡು ಸಸಿಗಳು ಬೇಕಾಗುತ್ತವೆ. ಆದರೆ, ನಮ್ಮ ಅದೃಷ್ಟ ಸರಿ ಇಲ್ಲದಿದ್ದರೆ ನಾವು ಕೊಂಡ ಸಸಿಗಳಲ್ಲಿ ಗಂಡು ಸಸಿಗಳೇ ಹೆಚ್ಚಿದ್ದರೆ ನಷ್ಟ ಗ್ಯಾರಂಟಿ. ನರ್ಸರಿಗಳಲ್ಲಿ ಕೊಳ್ಳುವುದಕ್ಕಿಂತ ಅಂಗಾಂಶ ಕೃಷಿಯಲ್ಲಿ ನಿರ್ದಿಷ್ಟವಾಗಿ ಗಂಡು ಮತ್ತು ಹೆಣ್ಣಿನ ಸಸಿಗಳನ್ನೇ ಅಭಿವೃದ್ಧಿಪಡಿಸಿರುತ್ತಾರೆ.

ಆದರೆ, ಅಲ್ಲಿ ಸಸಿಗಳ ಬೆಲೆ ಹೆಚ್ಚಿರುತ್ತದೆ. ಒಂದು ಸಸಿಗೆ ೩೫೦೦ ರೂ. ಆಗುತ್ತದೆ. ಫಲ ಕೊಡುವುದು ಗ್ಯಾರಂಟಿ.  ಬರೀ ಖರ್ಜೂರ ಬೆಳೆಯಲ್ಲದೆ ಸುಮಾರು ೪ ಎಕರೆ ಜಾಗದಲ್ಲಿ ನಾನಾ ತರಹದ ಹಣ್ಣುಗಳನ್ನು ಬೆಳೆಸಿದ್ದಾರೆ, ಸೀಬೆ, ನೇರಳೆ, ಮೂಸಂಬಿ, ನಿಂಬೆ, ದಾಳಿಂಬೆ, ಚೆಕ್ಕೆ, ಸಪೋಟ, ತೆಂಗು, ಮಾವು, ಹಲಸು, ಸೊಪ್ಪು, ತರಕಾರಿ ಹೀಗೆ ಹತ್ತಾರು ಹಣ್ಣಿಗಳನ್ನು ಬೆಳೆಸಿದ್ದು, ಬರುವ ಹಣ್ಣುಗಳನ್ನು ಸಹ ಯಾವುದೇ ಮಾರುಕಟ್ಟೆಯಲ್ಲಿ ಮಾರಾಟ ಮಾಡದೆ ಗ್ರಾಹಕರನ್ನೇ ತಮ್ಮ ತೋಟದ ಕಡೆಗೆ ಬರಮಾಡಿಕೊಂಡು ಅ ಮಾರಾಟ ಮಾಡುತ್ತಿದ್ದಾರೆ.

ಇದಲ್ಲದೆ, ಆರೂವರೆ ಎಕರೆಯಲ್ಲಿ ಬತ್ತ, ರಾಗಿ, ಸಿರಿಧಾನ್ಯಗಳನ್ನೂ ದಿವಾಕರ ಅವರು ಬೆಳೆಯುತ್ತಾರೆ. ನೀವೂ ಅವರ ತೋಟಕ್ಕೆ ಭೇಟಿ ನೀಡಬೇಕು
ಎನ್ನಿಸುತ್ತಿದ್ದರೆ ದಿವಾಕರ ಅವರನ್ನು ದೂ. ೯೮೪೫೦೬೩೭೪೩ರಲ್ಲಿ ಸಂಪರ್ಕಿಸಿ.