Saturday, 14th December 2024

ರೈತರ ಉಪಕರಣಗಳು ಸಕಾಲಕ್ಕೆ ಸಿಗಲಿ

ರಾಜ್ಯ ಸರಕಾರವು ‘ಹನಿ ನೀರಿನಿಂದ ಅಧಿಕ ಬೆಳೆ’ ಎಂಬ ಧ್ಯೇಯದೊಂದಿಗೆ ರೈತರಿಗೆ ಸಬ್ಸಿಡಿ ದರದಲ್ಲಿ ತುಂತುರು ನೀರಾವರಿ
(ಸ್ಪಿಂಕ್ಲರ್) ಉಪಕರಣಗಳನ್ನು ವಿತರಿಸುವ ಯೋಜನೆಯೊಂದು ಜಾರಿ ಮಾಡಿದೆ. ಈ ಯೋಜನೆಯಡಿಯಲ್ಲಿ ರೈತರಿಗೆ ಶೇ.೯೦ ರಷ್ಟು ಸಬ್ಸಿಡಿಯೊಂದಿಗೆ ತುಂತುರು ನೀರಾವರಿ ಉಪಕರಣಗಳನ್ನು ವಿತರಿಸಬೇಕು.

ಆದರೆ ರಾಜ್ಯದ ಬಹುತೇಕ ತಾಲೂಕುಗಳಲ್ಲಿ ಕಳೆದ ಒಂದು ವರ್ಷದಿಂದ ರೈತರಿಗೆ ತುಂತುರು ನೀರಾವರಿ ಉಪಕರಣಗಳನ್ನು ಪೂರೈಸುತ್ತಿಲ್ಲ. ಇದರಿಂದಾಗಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಮಾರುಕಟ್ಟೆ ಯಲ್ಲಿ ಸ್ಪಿಂಕ್ಲರ್ ಸೆಟ್‌ಗೆ ? ೨೨ ರಿಂದ ? ೨೫ ಸಾವಿರ ದರವಿದೆ. ಹೀಗಾಗಿ ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೃಷಿ ಇಲಾಖೆ ೨೦೧೫-೧೬ ರಿಂದ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಮೂಲಕ ರೈತರಿಗೆ ಶೇ.೯೦ ರಷ್ಟು ಸಬ್ಸಿಡಿ ಯೊಂದಿಗೆ ತುಂತುರು ನೀರಾವರಿ ಉಪಕರಣಗಳನ್ನು ವಿತರಿಸುತ್ತಿದೆ.

ಪ್ರತಿ ತಾಲೂಕಿನಿಂದ ಪ್ರತಿ ವರ್ಷ ೧೦೦೦-೧೨೦೦ ರೈತರು ಸ್ಪಿಂಕ್ಲರ್ ಸೆಟ್‌ಗಾಗಿ ಅರ್ಜಿ ಸಲ್ಲಿಸುತ್ತಾರೆ. ಆದರೆ ಕಳೆದ ಒಂದು ವರ್ಷದಿಂದ ರೈತರಿಗೆ ಸ್ಪಿಂಕ್ಲರ್ ಸಿಗುತ್ತಿಲ್ಲ. ಈ ಹಿಂದೆ ೨.೫ ಇಂಚಿನ ಸ್ಪಿಂಕ್ಲರ್ ಸೆಟ್‌ಗೆ ? ೨೦೭೦ ರು. ಹಾಗೂ ೨ ಇಂಚಿನ ಸ್ಪಿಂಕ್ಲರ್ ಸೆಟ್‌ಗೆ ?  ೧೯೩೨ ರೈತರ ವಂತಿಕೆ ಸರಕಾರದಿಂದ ಶೇ.೯೦ ರಷ್ಟು ಸಬ್ಸಿಡಿ ಪೂರೈಕೆದಾರರಿಗೆ ಸಿಗುತ್ತಿತ್ತು. ಆದರೆ ಈಗ ಸರಕಾರ ೨.೫ ಇಂಚಿನ ಸ್ಪಿಂಕ್ಲರ್ ಸೆಟ್‌ಗೆ ? ೧೮೭೬ ಹಾಗೂ ೨ ಇಂಚಿನ ಸ್ಪಿಂಕ್ಲರ್ ಸೆಟ್‌ಗೆ ? ೧೭೩೪ ರೈತರ ವಂತಿಕೆ ನಿಗದಿ ಮಾಡಿದೆ. ಇದರಿಂದ ಸರಕಾರದಿಂದ ಸಿಗುತ್ತಿದ್ದ ಸಬ್ಸಿಡಿಯೂ ಕಡಿಮೆಯಾಗಿದ್ದರಿಂದ ಪೂರೈಕೆದಾರರು ಉಪಕರಣಗಳನ್ನು ನೀಡಲು ಹಿಂದೆಟು ಹಾಕುತ್ತಿದ್ದಾರೆ.

ರೈತ ಸಂಪರ್ಕ ಕೇಂದ್ರದಲ್ಲಿ ಸಬ್ಸಿಡಿ ದರದಲ್ಲಿ ರೈತರಿಗೆ ವಿತರಿಸುತ್ತಿದ್ದ ಸ್ಪ್ರೇಯರ್‌ಗಳನ್ನು ಕೂಡ ಕಳೆದ ಎರಡು ವರ್ಷಗಳಿಂದ ವಿತರಿಸಿಲ್ಲ. ಆದ್ದರಿಂದ ರೈತರ ಅನುಕೂಲಕ್ಕಾಗಿಯೇ ಇರುವ ಕೃಷಿ ಇಲಾಖೆಯಲ್ಲಿ ರೈತರಿಗೆ ಬೇಕಾದ ಉಪಕರಣಗಳು, ಬೀಜ, ಗೊಬ್ಬರ ಸಕಾಲದಲ್ಲಿ, ಅಗತ್ಯಕ್ಕೆ ಅನುಗುಣವಾಗಿ ವಿತರಿಸುವಂತೆ ಕ್ರಮ ಕೈಗೊಳ್ಳಬೇಕಿದೆ.