Friday, 20th September 2024

ವೈದ್ಯರು ಸದಾ ವಿದ್ಯಾರ್ಥಿಗಳು ಆಗಿರಬೇಕು: ಡಾ.ಶಂಕರ್‌

ವೈದ್ಯ ವೈವಿಧ್ಯ

drhsmohan@gmail.com

1989 ರಲ್ಲಿ ತರಂಗದಲ್ಲಿ ಪ್ರಕಟವಾದ ವೈದ್ಯಕೀಯ ಸಾಹಿತ್ಯ ಅವಲೋಕನವನ್ನು ಮುಂದುವರಿಸುತ್ತ ಈ ವಾರ ಡಾ.ಪಿ ಎಸ್ ಶಂಕರ್, ಡಾ.ಸಿ ಆರ್ ಚಂದ್ರಶೇಖರ್ ಇವರುಗಳ ಅಭಿಪ್ರಾಯ ಗಮನಿಸೋಣ. ಇಬ್ಬರೂ ಈಗಲೂ ಸಕ್ರಿಯವಾಗಿ ವೈದ್ಯ ಸಾಹಿತ್ಯದಲ್ಲಿ ತೊಡಗಿಕೊಂಡಿದ್ದಾರೆ.

ಕನ್ನಡ ವೈದ್ಯ ಲೇಖಕರಲ್ಲಿ ಡಾ.ಶಂಕರ್ ವೈವಿಧ್ಯಮಯ ಅನುಭವ ಗಳಿಸಿದವರು. ೫೩ ವರ್ಷ ವಯಸ್ಸಿನ ಇವರು ಕಳೆದ ೨೬ ವರ್ಷಗಳಿಂದ ವೈದ್ಯ ಶಾಸ್ತ್ರವನ್ನು ಬೋಧಿಸುತ್ತಿದ್ದಾರೆ. ೧೯೮೨ರಿಂದ ಗುಲ್ಬರ್ಗದ ಎಂ ಆರ್. ಮೆಡಿಕಲ್ ಕಾಲೇಜಿನ ಪ್ರಿನ್ಸಿಪಾಲರು. ಚಿಕ್ಕಂದಿನಿಂದಲೇ ಬರೆಯುವ ಗೀಳು ಬೆಳೆಸಿಕೊಂಡ ಇವರ ಮೊದಲ ಲೇಖನ ೪೦ ವರ್ಷಗಳಲ್ಲಿ ಅದ್ಭುತವಾಗಿ ಮುನ್ನಡೆದ ಹಿಂದಿ ಕಥಾ ಸಾಹಿತ್ಯ! ೧೯೫೧ರಲ್ಲಿ ಪ್ರಜಾವಾಣಿಯಲ್ಲಿ ಪ್ರಕಟ ವಾಯಿತು.

ಕಥೆ, ನಾಟಕ, ಪ್ರವಾಸ ಕಥನ, ಪ್ರಾಣಿಜೀವನ – ಹೀಗೆ ಅವರ ಸಾಹಿತ್ಯ ಪಯಣ ಬೆಳೆದು ಇಲ್ಲಿಯವರೆಗೆ ೧೫೦ಕ್ಕೂ ಹೆಚ್ಚಿನ ಕನ್ನಡ ಲೇಖನಗಳನ್ನೂ ೧೬೦ ಕ್ಕೂ ಮಿಕ್ಕಿದ ವೈದ್ಯ ಸಂಶೋಧನಾ ಪ್ರಬಂಧಗಳನ್ನು ಇಂಗ್ಲಿಷ್‌ ನಲ್ಲಿಯೂ ಬರೆದಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಕನ್ನಡ ವಿಶ್ವಕೋಶದಲ್ಲಿ ೪೭ ಲೇಖನಗಳನ್ನು ಬರೆದಿದ್ದಾರೆ. ೧೯೫೨ರಲ್ಲಿ ಮೊದಲ ಪುಸ್ತಕ ಪ್ರಕಟವಾದಂದಿನಿಂದ ೩೧ ಕನ್ನಡ ಪುಸ್ತಕಗಳನ್ನೂ, ೧೫ ಇಂಗ್ಲಿಷ್ ಪುಸ್ತಕಗಳನ್ನೂ ಹೊರ ತಂದಿದ್ದಾರೆ. ಇಂಗ್ಲೆಂಡ್, ಅಮೆರಿಕಗಳಲ್ಲಿ ಎದೆ ರೋಗಗಳ ಬಗ್ಗೆ ವಿಶೇಷ ತರಬೇತಿ ಪಡೆದ ಇವರು ಡಯಾಜಿನಾನ್ ವಿಷಪ್ರಾಶನ, ಕರ್ನಾಟಕದಲ್ಲಿ ಶ್ವಾಸ ಕೋಶದ ಕ್ಯಾನ್ಸರ್‌ನ ಬಗ್ಗೆ ವಿಶೇಷ ಸಂಶೋಧನೆ ಮಾಡಿದ್ದಾರೆ.

ಇಂಗ್ಲೆಂಡ್, ಫ್ರಾನ್ಸ್, ಇಟಲಿ ಜರ್ಮನಿ ಸ್ವಿಡ್ಜರ್ ಲೆಂಡ್, ಸಿಂಗಾಪುರ, ವ್ಯಾಟಿಕನ್ ಮಲೇಷ್ಯಾ, ಕೀನ್ಯಾ, ತಾಂಜೇನಿಯಾ, ಅಮೆರಿಕ, ಕೆನಡಾ, ಭೂತಾನ್, ರಷ್ಯಾ, ಆಸ್ಟ್ರೇಲಿಯಾ ಹೀಗೆ ಜಗತ್ತಿನ ನಾನಾ ರಾಷ್ಟ್ರಗಳನ್ನು ಸಂದರ್ಶಿಸಿರುವ ಇವರಿಗೆ ೧೯೭೨ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ೭೭ರಲ್ಲಿ ಸೋವಿಯತ್ ಲ್ಯಾಂಡ್ ನೆಹರು ಪ್ರಶಸ್ತಿ, ೧೯೮೪ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ೮೫ರಲ್ಲಿ ಉತ್ತಮ ಶಿಕ್ಷಕರಿಗೆ ಮೀಸಲಾಗಿರುವ ಡಾ. ಬಿ ಸಿ ರಾಯ್ ರಾಷ್ಟ್ರೀಯ ಪ್ರಶಸ್ತಿ ದೊರಕಿದ್ದು ಇವರ ಪ್ರತಿಭೆ, ಆಡಳಿತ ಅನುಭವ, ಕಷ್ಟ ಸಹಿಷ್ಣುತೆ ಮತ್ತು ಸಾಧನೆಗಳಿಗೆ ಸಾಕ್ಷಿ ಎಂದು ಹೇಳಬಹುದು.

ನಿಮ್ಮ ಅಭಿಪ್ರಾಯದಲ್ಲಿ ವೈದ್ಯ ಲೇಖನಗಳ ಬಗ್ಗೆ ಜನರ ನಿರೀಕ್ಷೆ ಏನು?
ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲು ಪ್ರತಿಯೊಬ್ಬರೂ ಶ್ರಮಿಸಬೇಕಾಗಿದೆ. ಆರೋಗ್ಯಕರ ಜೀವನ ಆಯುಷ್ಯ ವರ್ಧನೆಗೆ ಎಡೆ ಮಾಡಿ ಕೊಡು ತ್ತದೆ. ಆರೋಗ್ಯವನ್ನು ಎಲ್ಲ ಜನಾಂಗಗಳೂ ಭಾಗ್ಯವೆಂದು ಪರಿಗಣಿಸಿವೆ. ಅದನ್ನು ಕಾಯ್ದಿರಿಸಿಕೊಳ್ಳಲು ಎಲ್ಲರೂ ಪ್ರಯತ್ನಿಸುತ್ತಿದ್ದಾರೆ. ಜನಪದ ರೋಗ – ನಿರೋಗದ ಬಗೆಗಿನ ತಮ್ಮ ಜ್ಞಾನ ಕ್ಷಿತಿಜಗಳನ್ನು ಹೆಚ್ಚಿಸಿಕೊಳ್ಳಬೇಕೆಂಬ ಅಪೇಕ್ಷೆ ಉಳ್ಳವರಾಗಿದ್ದಾರೆ. ಈ ಬಗೆಯ ಆಸಕ್ತಿಯನ್ನು ಎಲ್ಲ ಜನಪದ ಬಹು ಕಾಲದಿಂದ ಗುರುತಿಸಿಕೊಂಡಿದೆ ಎಂಬುದಕ್ಕೆ ಈ ಗಾದೆಗಳೇ ಉದಾಹರಣೆ: ಐಶ್ವರ್ಯಕ್ಕಿಂತ ಆರೋಗ್ಯ ಉತ್ತಮ, ರೋಗ ಬರುವವರೆಗೂ ಆರೋಗ್ಯದ ಬೆಲೆ ಗೊತ್ತಾಗುವುದಿಲ್ಲ.

ರೋಗದ ಕಹಿಯಿಂದ ಆರೋಗ್ಯದ ಸಿಹಿಯನ್ನು ಮನುಷ್ಯ ಅರಿಯುತ್ತಾನೆ. ಆರೋಗ್ಯದಿಂದಿರುವ ಪ್ರತಿಯೊಬ್ಬ ವ್ಯಕ್ತಿಯೂ ದೊರೆ. ಆರೋಗ್ಯವಂತ
ಮನುಷ್ಯನಿಗೆ ಎಲ್ಲವೂ ಆರೋಗ್ಯ, ಆರೋಗ್ಯ ಒಂದೇ ಸಾವಿರ ಆಶೀರ್ವಾದಕ್ಕೆ ಸಮ, ಆರೋಗ್ಯ ಐಶ್ವರ್ಯದತ್ತ ಹಾಕಿದ ಹೆಜ್ಜೆ. ರೋಗಗಳ ಬಗೆಗೆ ಅವುಗಳ ಪ್ರತಿಬಂಧ, ಚಿಕಿತ್ಸೆ ಬಗೆಗೆ ಜನರು ತಿಳಿದುಕೊಳ್ಳಬೇಕೆಂಬ ಹಂಬಲವುಳ್ಳವರಾಗಿದ್ದಾರೆ.

ಪತ್ರಿಕಾ ಲೇಖನಗಳು, ಪುಸ್ತಕಗಳ ಇತಿ-ಮಿತಿಗಳು ಏನು?

ಲೇಖನಗಳು ಒಂದು ವಿಷಯಕ್ಕೆ ಸಂಬಂಧಿಸಿರುತ್ತವೆ. ಒಂದೇ ಲೇಖನದಲ್ಲಿ ಒಂದು ವಿಷಯಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನು ಕೊಡಲಾಗುವು ದಿಲ್ಲ. ಅದು ತುಂಬಾ ದೀರ್ಘವಾಗಿರಬಾರದು. ೧೦ ನಿಮಿಷಗಳಲ್ಲಿ ಓದಿ ಮುಗಿಸುವಂತಿರಬೇಕು. ಹಾಗೆಯೇ ಜನಸಾಮಾನ್ಯರಿಗೆ ಎಷ್ಟು ವಿಷಯಗಳನ್ನು ತಿಳಿಸಬೇಕು ಎಂಬುದರ ಅರಿವು ಲೇಖಕರುಗಳಿಗೆ ಇರಬೇಕು. ಒಂದೇ ಲೇಖನದಲ್ಲಿ ಎಲ್ಲ ವಿಷಯ ಗಳನ್ನು ತಿಳಿಸಲಾಗುವುದಿಲ್ಲ. ಈ ಇತಿಮಿತಿಯನ್ನು ಹಲವು ಲೇಖಕರು ಇನ್ನೂ ತಿಳಿಯಬೇಕಾಗಿದೆ. ಆದರೆ ಪುಸ್ತಕ ವಿಸ್ತಾರವಾದ ಕ್ಯಾನ್‌ವಾಸ್ ಇದ್ದಂತೆ. ಅಲ್ಲಿ ವಿಷಯವನ್ನು ವಿವರವಾಗಿ ಬರೆಯಬಹುದು. ಲೇಖನವಾಗಲೀ ಪುಸ್ತಕವಾಗಲೀ ಅದನ್ನು ಬರೆಯಲು ಬಹಳ ಸಿದ್ಧತೆ ಬೇಕು. ವಿಷಯವನ್ನು ಆಯ್ದು, ಅದಕ್ಕೆ ಸಂಬಂಧಿಸಿದ ಅಂಶಗಳನ್ನು ಸಂಗ್ರಹಿಸಿ ಬರೆಯಬೇಕು. ಅದೊಂದು ಜಾಣ್ಮೆ. ಬರೆಯುತ್ತ ಸಾಗಿದಂತೆ ಅದನ್ನು ಲೇಖಕ ತನ್ನಿಂದ ತಾನೇ ಹೊಂದುತ್ತಾನೆ.

ವೈದ್ಯ – ರೋಗಿಗಳ ನಡುವೆ, ರೋಗದ ಬಗ್ಗೆ ಸಂಭಾಷಣೆ ಸಲಹೆ ಪ್ರತಿಕ್ರಿಯೆಗಳು ಪಾಶ್ಚಾತ್ಯ ದೇಶದಲ್ಲಿರುವಷ್ಟು ನಮ್ಮಲ್ಲಿ ಇಲ್ಲ. ಈ ಬಗ್ಗೆ ನಿಮ್ಮ ಅಭಿಪ್ರಾಯ?

ಪಾಶ್ಚಾತ್ಯ ದೇಶಗಳಲ್ಲಿನ ರೋಗಿಗಳು ನಮ್ಮ ದೇಶದ ರೋಗಿಗಳಿಗಿಂತ ಹೆಚ್ಚು ತಿಳಿವಳಿಕೆ ಹೊಂದಿರುತ್ತಾರೆ ಎಂಬ ಕಲ್ಪನೆ ಸರಿಯಲ್ಲ. ಇಂಗ್ಲೆಂಡ್ ಮತ್ತು ಅಮೆರಿಕೆಯಲ್ಲಿ ನಾನು ರೋಗಿಗಳ ಜತೆ ಮಾಡಿದ ಸಂಭಾಷಣೆಯನ್ನು ಆಧರಿಸಿ ಈ ಮಾತು ಹೇಳುತ್ತಿದ್ದೇನೆ. ನಮ್ಮ ದೇಶದಲ್ಲಿ ಕೂಡ ಪ್ರತಿಯೊಬ್ಬ ರೋಗಿ ಮತ್ತು ಆತನ ಕುಟುಂಬ ವರ್ಗದವರು ರೋಗದ ಬಗೆಗೆ ವಿವರಣೆಯನ್ನು ತಿಳಿಯಬಯಸುತ್ತಾರೆ. ಅದು ಅವರಿಗೆ ಅರ್ಥವಾಗಲಿ, ಆಗದಿರಲಿ ತಮ್ಮ ಅನಾ ರೋಗ್ಯಕ್ಕೊಂದು ಹೆಸರಿಡಿ ಎನ್ನುತ್ತಾರೆ. ರೋಗದ ಅನುಪಾನದ ಬಗ್ಗೆ ತಿಳಿಯ ಬಯಸುತ್ತಾರೆ. ತಮ್ಮ ಅನಾರೋಗ್ಯದ ಕಾರಣ ಮತ್ತು ಚಿಕಿತ್ಸೆಯನ್ನು ತಿಳಿಯಬೇಕು ಎನ್ನುವ ಹಂಬಲ ಎಲ್ಲ ದೇಶಗಳ ಜನರಲ್ಲೂ ಇದೆ.

ಲೇಖನ ಮತ್ತು ಪುಸ್ತಕಗಳಿಂದ ನೀವು ನಿರೀಕ್ಷಿಸುವ ಬದಲಾವಣೆಗಳು ಯಾವುವು?
ಈ ಶತಮಾನದ ಕೊನೆಗೆ ಎಲ್ಲರಿಗೂ ಆರೋಗ್ಯ ದೊರಕಿಸಿಕೊಡುವ ಪ್ರಯತ್ನದಲ್ಲಿ ನಾವೆಲ್ಲ ಭಾಗಿಯಾಗಿದ್ದೇವೆ. ವೈದ್ಯನ ಬರವಣಿಗೆ ಈ ದಿಸೆಯಲ್ಲಿ
ಮಹತ್ವದ ಪಾತ್ರ ವಹಿಸುತ್ತದೆ. ಜನಸಾಮಾನ್ಯರಿಗೆ ಆತ ಆರೋಗ್ಯಕರ ಜೀವನದ ಸೂತ್ರಗಳನ್ನು ತಿಳಿಸಿಕೊಡಬೇಕು. ನಮ್ಮ ದೇಹಾರೋಗ್ಯದ ರಕ್ಷಣೆ ನಮ್ಮ ಕರ್ತವ್ಯವೆನಿಸಬೇಕು. ಸಾಂಕ್ರಾಮಿಕ ರೋಗಗಳ ವಿರುದ್ಧ ಲಸಿಕೆ, ಎದೆ ಹಾಲು ಕೊಡುಗೆಯ ಮಹತ್ವ, ವಾಂತಿಭೇದಿಗೆ ಜೀವನ ಜಲ ನೀಡಿಕೆ, ಸಮತೋಲನ ಆಹಾರ, ವ್ಯಾಯಾಮ, ದೇಹದ ತೂಕವನ್ನು ವಯೋಮಾನಕ್ಕೆ ಅನುಗುಣವಾಗಿ ಕಾಯ್ದಿರಿಸುವಿಕೆ, ಧೂಮಪಾನ ಮದ್ಯಪಾನಗಳ ದುಷ್ಪರಿಣಾಮಗಳು,
ದೇಹದಲ್ಲಿ ಗೋಚರಿಸುವ ಅಸಹಜ ಕಾರ್ಯ ಕ್ರಿಯೆಗಳ ಬಗ್ಗೆ ವೈದ್ಯಕೀಯ ಪರೀಕ್ಷೆಗೆ ಒಳಪಡುವುದು, ಉದ್ಯೊಗ ಮತ್ತು ಕೌಟುಂಬಿಕ ಜೀವನದ ತೊಂದರೆಗಳನ್ನು ಮನೋಬಲ, ಶಕ್ತಿ ಮತ್ತು ಜಾಣ್ಮೆಯಿಂದ ನಿಭಾಯಿಸುವ ವಿಧಾನ – ಮೊದಲಾದ ವಿಷಯಗಳ ಬಗ್ಗೆ ತಿಳಿವಳಿಕೆ ನೀಡಬೇಕು. ಆರೋಗ್ಯ ಕರ ಜೀವನದ ಸೋಪಾನಗಳನ್ನು ಎಲ್ಲರೂ ಸರಿಯಾಗಿ ಏರಲು ಅಗತ್ಯವಾದ ಸಲಹೆಗಳನ್ನು ಪುಸ್ತಕಗಳಿಂದ ನಿರೀಕ್ಷಿಸಲಾಗುತ್ತದೆ.