Sunday, 5th January 2025

ಗಾಂಧಾರಿಯ ಪಾತ್ರದಲ್ಲಿ ಚುನಾವಣಾ ಆಯೋಗ

ಸಮಕಾಲೀನ

ಪ್ರಕಾಶ್ ಶೇಷರಾಘವಾಚಾರ್‌

sprakashbjp@gmail.com

ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ರೇವಡಿ ಸಂಸ್ಕೃತಿಯಿಂದ ಯಾವ ಭಯವು ಇಲ್ಲದೆ ಲೇವಡಿ ಮಾಡುತ್ತಿದ್ದಾರೆ. ಆದರೆ ನಮ್ಮ ಚುನಾವಣಾ ಆಯೋಗ ಮಾತ್ರ ‘ನಮ್ಮ ಬ್ರಾಂಡ್ ಅಂಬಾಸಿಡರ್ ಗಾಂಧಾರಿ’ ಎಂದು ಭಾವಿಸಿ ಇಡಿ ವ್ಯವಸ್ಥೆಯು ಹಾಳೆದ್ದು ಹೋಗುತ್ತಿದ್ದರೂ ತಮಗೆ ಸಂಬಂಧಪಡದ ಹಾಗೆ ತೆಪ್ಪಗಿದೆ.

ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ ಟಾಟಾ ಬಿರ್ಲಾ ಜೋಬಿಗೆ ಬಂತು ಜನಗಳ ತಿನ್ನುವ ಬಾಯಿಗೆ ಬಂತು | ಕೋಟ್ಯಧೀಶನ ಕೋಣೆಗೆ ಬಂತು ನಲವತ್ತೇಳರ ಸ್ವಾತಂತ್ರ್ಯ ಬಡವನ ಮನೆಗೆ ಬರಲಿಲ್ಲ ಬೆಳಕಿನ ಕಿರಣ ತರಲಿಲ್ಲ| ಕವಿ ಸಿದ್ದಲಿಂಗಯ್ಯನವರು ಈ ಕವಿತೆ ಬರೆದದ್ದು ೧೯೮೬ರಲ್ಲಿ. ಅಬ್ಬಾ ! ೩೭ ವರ್ಷ ಕಳೆದರೂ ಇದು ಇಂದಿಗೂ ಪ್ರಸ್ತುತವಾಗಿದೆ.

ಸಾರ್, ನಿಮಗೊಂದು ಸಲಾಂ! ಅಬ್ರಹಾಂ ಲಿಂಕನ್ ಅವರು ಪ್ರಜಾಪ್ರಭುತ್ವವನ್ನು ‘ಜನರಿಂದ ಜನರಿಗಾಗಿ ಜನರದೇ ಸರಕಾರ’ ಎಂದು ಐತಿಹಾಸಿಕ ವ್ಯಾಖ್ಯಾನ ನೀಡಿ ದ್ದರು. ಇಡಿ ಪ್ರಜಾಪ್ರಭುತ್ವವನ್ನು ಮೂರು ವಾಕ್ಯ ಗಳಲ್ಲಿ ಬಣ್ಣಿಸಿ ಬಿಟ್ಟಿದ್ದಾರೆ. ಆದರೆ ಇಂದು ಪ್ರಜಾಪ್ರಭುತ್ವ ನಮ್ಮಲ್ಲಿ ಮೂರಾ ಬಟ್ಟೆಯಾಗಿ ಕೂತಿದೆ. ಲಿಂಕನ್ ವರಿಗೆ ಮತ್ತೆ ಬಂದು ಹಾಲಿ ಪ್ರಜಾಪ್ರಭುತ್ವದ ವ್ಯಾಖ್ಯಾನ ಮಾಡಿ ಎಂದರೆ ದುಡ್ಡಿನಿಂದ ದುಡ್ಡಿಗಾಗಿ ದುಡ್ಡಿರು ವವರಿಗಾಗಿ ಎಂದು ಹೇಳುವುದರಲ್ಲಿ ಅನುಮಾನವೇ ಬೇಡ.

ಅಧಿಕಾರ ದಾಹಿ ರಾಜಕಾರಣಿಗಳು, ಹಾಗೂ ಎಗ್ಗಿಲ್ಲದೆ ದುಡ್ಡು ಮತ್ತು ಉಡುಗೊರೆಗಳನ್ನು ಯಾರೇ ಕೊಟ್ಟರೂ ಮುಗಿಬಿದ್ದು ಪಡೆದು ಮತ ಹಾಕುವ ಭ್ರಷ್ಟರು. ಇಂದು ಪ್ರಜಾಪ್ರಭುತ್ವದ ಆಶಯವನ್ನು ಹಳ್ಳ ಹತ್ತಿಸುತ್ತಿದೆ. 1994ರಲ್ಲಿ ಸುಳ್ಯ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ವಿಧಾನಸಭೆಗೆ ಪ್ರವೇಶಿಸಿದ ಅಂಗಾರ ಅವರು ಅಂದು ಚುನಾವಣಾ ವೆಚ್ಚ ಮಾಡಿದ್ದು ಕೇವಲ ರು.೨೫ಸಾವಿರ ಮಾತ್ರ. 1996ರಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಅಭ್ಯರ್ಥಿ ಅನಂತ ಕುಮಾರ್ ಅವರು ಮಾಡಿದ ವೆಚ್ಚ ರು.೧೫ಲಕ್ಷ ದಾಟಿರಲಿಲ್ಲ. ಹಿಂದೆಲ್ಲ ಚುನಾವಣೆಯ ವೇಳೆ ಅಭ್ಯರ್ಥಿಗಳಾದವರು ತಮ್ಮ ಪಕ್ಷದ ಕಾರ್ಯ ಕರ್ತರಿಗೆ ಕಾಫೀ ಕೊಡಿಸುವುದು, ಅಬ್ಬಾಬ್ಬ ಎಂದರೆ ತಿಂಡಿ-ಊಟ ಕೊಡುವ ಪರಿಪಾಠವಿತ್ತು. ಅದು ನಿಧಾನವಾಗಿ ಬದಲಾಗುತ್ತ ಬೂತಿನಲ್ಲಿ ಕೆಲಸ ಮಾಡುವವರಿಗೆ ಅಥವಾ ಆಟೋದಲ್ಲಿ ಮೈಕ್ ಪ್ರಚಾರ ಮಾಡುವವರಿಗೆ ಅಲ್ಪ ಸಂಭಾವನೆ ಕೊಡಲಾರಂಭಿಸಿದರು.

೮೦ ಮತ್ತು ೯೦ರ ದಶಕದಲ್ಲಿ ಗೋಡೆ ಬರಹ, ಬ್ಯಾನರ್ ಕಟ್ಟೊದು, ಪೋಸ್ಟರ್ ಅಂಟಿಸೋದು ಎಲ್ಲವನ್ನು ಪಕ್ಷದ ಕಾರ್ಯಕರ್ತರೇ ಮಾಡುತ್ತಿದ್ದ ಕಾಲ ವದು. ಬಂಟಿಂಗ್ಸ್ ಬ್ಯಾನರ್ ಕಟ್ಟುವುದಕ್ಕೆ ಪಕ್ಷಗಳ ನಡುವೆ ಪೈಪೋಟಿಯ ಮೇಲೆ ಕೆಲವೊಮ್ಮೆ ಕೈ ಕೈ ಮಿಲಾಯಿಸುವ ಮಟ್ಟಕ್ಕೆ ಹೋಗುತ್ತಿತ್ತು. ಆದರೂ ಯಾರಲ್ಲೂ ಉತ್ಸಾಹ ಕಡಿಮೆ ಯಾಗುತ್ತಿರಲಿಲ್ಲ. ಹಣದ ಪ್ರಭಾವಕ್ಕಿಂತ ಸಾರಾಯಿ ಮೇಲೆಯೇ ಎಲ್ಲರ ದಾಳಿ ನಡೆಯುತ್ತಿದ್ದ ಕಾಲವದು.

ಮತದಾನದ ಹಿಂದಿನ ದಿನ ಹಣ ಹಂಚುತ್ತಾರೆ ಎಂದೇ ಗಲಾಟೆ. ಹೀಗಾಗಿ ರಾತ್ರಿಯಲ್ಲ ಸ್ಲಂಗಳ ಸುತ್ತಮುತ್ತ ಕಾವಲು ಕಾಯೋ ಕೆಲಸ ಮಾಡಲಾಗುತ್ತಿತ್ತು.
ಟಿ. ಎನ್. ಶೇಷನ್ ಮುಖ್ಯ ಚುನಾವಣಾಧಿಕಾರಿಯಾಗಿ ಬಂದ ತರುವಾಯ ಚುನಾವಣಾ ಪ್ರಚಾರವು ಮಹತ್ತರ ತಿರುವು ಪಡೆಯಿತು. ಲಂಗೂ ಲಗಾಮಿಲ್ಲದೆ ನಡೆಯುತ್ತಿದ್ದ ಪ್ರಚಾರಕ್ಕೆ ಅಂಕುಶ ಬಿದ್ದಿತ್ತು. ಗೋಡೆ ಬರಹ, ಬ್ಯಾನರ್, ಬಂಟಿಂಗ್ಸ್ ಕಟ್ಟುವುದು ಬಂದ್ ಆಯಿತು.

ಶೇಷನ್ ಇರುವ ತನಕ ಚುನಾವಣಾ ಪ್ರಚಾರ ಮತ್ತು ವೆಚ್ಚಕ್ಕೆ ಕಡಿವಾಣ ಬಿದ್ದು ಮೊದಲ ಬಾರಿಗೆ ರಾಜಕೀಯ ಪಕ್ಷಗಳು ಚುನಾವಣಾ ಆಯೋಗಕ್ಕೆ
ಭಯ ಬೀಳಲು ತೊಡಗಿದ ದಿನವನ್ನು ಜನ ನೋಡಿದರು. 1993ರಲ್ಲಿ ಅಂದಿನ ಪಿ.ವಿ. ನರಸಿಂಹರಾವ್ ನೇತೃತ್ವದ ಕಾಂಗ್ರೆಸ್ ಸರಕಾರವು ಶೇಷನ್ ರವರ ಏಕಚಕ್ರಾಧಿಪತ್ಯಕ್ಕೆ ಬೆದರಿ ಹೋಯಿತು. ದಿನದಿಂದ ದಿನಕ್ಕೆ ಚುನಾವಣಾ ಆಯೋಗದ ಕೈ ಮೇಲಾಗಿ ಸರಕಾರ ತತ್ತರಿಸಿ ಹೋಯಿತು. ಶೇಷನ್ ಅವರ ಅಧಿಕಾರಕ್ಕೆ ಮೂಗುದಾರ ಹಾಕಲು ಆಯೋಗಕ್ಕೆ ಇನ್ನಿಬ್ಬರು ಆಯುಕ್ತರನ್ನು ನೇಮಿಸಿ ಚುನಾವಣಾ ಆಯೋಗವನ್ನು ದುರ್ಬಲಗೊಳಿಸಿ ಶೇಷನ್ ರವರನ್ನು ಹಲ್ಲು ಕಿತ್ತ ಹಾವಂತೆ ಮಾಡಿದರು.

ಚುನಾವಣೆಯ ವೆಚ್ಚ ಒಂದು ಸಮಸ್ಯೆಯಾದರೆ ಈಗ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವವರದು ಮತ್ತೊಂದು ಸಮಸ್ಯೆ. ರೈತ ನಾಯಕ ಪ್ರೊ.ನಂಜುಡ ಸ್ವಾಮಿಯವರು ತಮ್ಮ ಭಾಷಣ ದಲ್ಲಿ ‘ಲಾಬಿ ಮಾಡುವವರು ವಿಧಾನಸಭೆಯ ಹೊರಗೆ ಇದ್ದು ತಮಗೆ ಬೇಕಾದ ಅಭ್ಯರ್ಥಿಗಳ ಮೇಲೆ ಬಂಡವಾಳ ಹೂಡಿ ಗೆಲ್ಲಲು ಸಹಾಯ ಮಾಡುತ್ತಿದ್ದರು. ಆದರೆ ಈಗ ಲಾಬಿಗಳೆ ವಿಧಾನಸಭೆಯನ್ನು ಪ್ರವೇಶ ಮಾಡುತ್ತಿವೆ’ ಎಂದು ಬದಲಾಗುತ್ತಿದ್ದ ವಾಸ್ತವ ರಾಜಕಾರಣಕ್ಕೆ ಅಂದೇ ಕನ್ನಡಿ ಹಿಡಿದಿದ್ದರು. ಇಂದು ಲಿಕ್ಕರ್ ಮಾಫಿಯಾ ಮೂಲೆಗುಂಪಾಗಿದೆ.

ಈಗೇನಿದ್ದರು ಗಣಿ ಮಾಫಿಯಾ, ರಿಯಲ್ ಎಸ್ಟೇಟ್ ಮಾಫಿಯಾ, ಗುತ್ತಿಗೆದಾರರ ಮಾಫಿಯಾ ಹೀಗೆ ಬದಲಾದ ಆರ್ಥಿಕ ಪರಿಸ್ಥಿತಿಗೆ ತಕ್ಕದಾದ ಮಾಫಿಯಾ ಗಳು ಹುಟ್ಟಿಕೊಂಡು ವಿಧಾನಸಭೆ ಯನ್ನಲಂಕರಿಸುತ್ತಿವೆ. ಈಗ ಹೊಸ ಟ್ರೆಂಡ್, 2023ರ ರಾಜ್ಯದ ವಿಧಾನಸಭಾ ಚುನಾವಣೆಗೆ ಒಂದು ವರ್ಷದ ಮುನ್ನವೇ ಹಾಲಿ ಸದಸ್ಯರು ಮತ್ತು ಆಕಾಂಕ್ಷಿಗಳು ಸಿದ್ಧತೆಯನ್ನು ಜೋರಾಗಿ ಕೈಗೊಳ್ಳುತ್ತಿದ್ದಾರೆ. ಚುನಾವಣೆಯ ಘೋಷಣೆಯಾದ ತರುವಾಯ ದೊರೆಯುವ ಹದಿನೈದು ದಿನದಲ್ಲಿ ಮತದಾರರಿಗೆ ಆಸೆ-ಆಮಿಷ ಒಡ್ಡಲು ಸಾಧ್ಯವಾಗದ ಕಾರಣ ನೀತಿ ಸಂಹಿತೆ ಜಾರಿ ಬರುವ ಮುನ್ನವೇ ಸಾಧ್ಯವಿರುವ ಎಲ್ಲ ಚುನಾವಣಾ ಅಕ್ರಮಗಳನ್ನು ಮಾಡಿ ಮುಗಿಸುತ್ತಿದ್ದಾರೆ.

ಗಾಂಧಿನಗರ ಕ್ಷೇತ್ರದಲ್ಲಿ ಟಿಕೇಟ್ ಆಕಾಂಕ್ಷಿಯೊಬ್ಬ ೩೨ ಕಡೆ ಉಚಿತ ಕ್ಯಾಂಟಿನ್ ತೆರೆದಿzರೆ. ಇಲ್ಲಿ ಕಳೆದ ಆರು ತಿಂಗಳಿನಿಂದ ದಿನನಿತ್ಯ ಉಚಿತ ಅನ್ನ ದಾಸೋಹ ನಡೆಯುತ್ತಿದೆ. ೯೪ರಿಂದ ಸತತವಾಗಿ ಪಕ್ಷಾತೀತವಾಗಿ ಗೆಲ್ಲುತ್ತಿರುವ ಕಾಂಗ್ರೆಸ್ ಶಾಸಕರೊಬ್ಬರು ಮನೆ ಮನೆಗೂ ಕುಕ್ಕರ್ ನೀಡಿದ್ದಾರೆ. ಕಳಪೆ ಕುಕ್ಕರ್ ಕೊಟ್ಟು ಅದು ಸಿಡಿದು, ಕೆಲ ಮಹಿಳೆಯರಿಗೆ ಗಾಯವಾದರೂ ಅದರ ವಿರುದ್ಧ ಯಾರೂ ಸಿಡಿಯಲಿಲ್ಲ. ಅಷ್ಟರಮಟ್ಟಿಗೆ ಅವರು ರಾಜಕೀಯ ದಲ್ಲಿ ಅಜಾತ ಶತ್ರು.

ಮತ್ತೊಬ್ಬ ಶಾಸಕರೊಬ್ಬರು ತಮ್ಮ ಕ್ಷೇತ್ರದ ಮತದಾರರಿಗೆ ಕೇವಲ ೪೦ ಸಾವಿರ ಎಲ್‌ಇಡಿ ಟಿವಿಯನ್ನು ಹಂಚಿದ್ದಾರೆ. ಈ ಉಚಿತ ಉಡುಗೊರೆಯನ್ನು ಕನಿಷ್ಠ ನಲವತ್ತು ಮತದಾರರಾದರೂ ನಿರಾಕರಿಸಿ, ಶಾಸಕರ ಮನಸ್ಸು ನೋಯಿಸಲು ಸಿದ್ಧವಿರಲಿಲ್ಲ ಎಂಬುದು ಗಮನಾರ್ಹ. ಪುಣ್ಯ ಕ್ಷೇತ್ರಗಳಾದ ಮೇಲ್ ಮರವತ್ತೂರು, ಧರ್ಮಸ್ಥಳ, ಕಾಶಿ, ಚಾಮುಂಡಿಬೆಟ್ಟ ಹೀಗೆ ಹಲವಾರು ತೀರ್ಥಕ್ಷೇತ್ರಗಳಿಗೆ ಬಹುತೇಕ ವಿಧಾನಸಭಾ ಕ್ಷೇತ್ರದಿಂದ ಸಾವಿರಾರು ಜನ
ಉಚಿತ ಪ್ರವಾಸ ಕೈಗೊಂಡಿದ್ದಾರೆ. ಇದರ ಜೊತೆ ಶ್ರೀವಾಸ ಕಲ್ಯಾಣ, ಗಿರಿಜಾ ಕಲ್ಯಾಣಗಳು ಅದ್ದೂರಿಯಾಗಿ ನಡೆಯುತ್ತಿವೆ. ಕೆಲವು ಅದೃಷ್ಟವಂತರಿಗೆ ವಿದೇಶ ಪ್ರವಾಸದ ಭಾಗ್ಯವೂ ದೊರೆತಿದೆ.

ಶಾಲಾ ಫೀಸು ಸ್ಕೂಲ್ ಬ್ಯಾಗ್ ಮತ್ತು ಪುಸ್ತಕ, ನೂರಾರು ಮಹಿಳೆಯರಿಗೆ ಸೀಮಂತ ಕಾರ್ಯಕ್ರಮ ಇವೆಲ್ಲ ಟಿಪ್ಸ್ ಇದ್ದ ಹಾಗೆ ಕೊಟ್ಟಿದ್ದಾರೆ. ಈ ಎಲ್ಲ ಜನಸೇವೆ ಪಕ್ಷಾತೀತವಾಗಿ ನಡೆಯುತ್ತಿದೆ. ಅನೇಕ ವಿಧಾನ ಸಭಾಕ್ಷೇತ್ರದಲ್ಲಿ ಸಾವಿರಾರು ಕುಟುಂಬಗಳು ಕಳೆದ ಆರು ತಿಂಗಳಿಂದ ದಿನಸಿ ಅಂಗಡಿಗೆ ತಲೆಯಿಟ್ಟು ಮಲಗಿಲ್ಲವಂತೆ. ಆ ಪಾಟಿ ಉಚಿತ ದಿನಸಿ ಕಿಟ್‌ಗಳ ಶೇಖರಣೆ ಮತ್ತು ವಿತರಣೆಯಾಗಿದೆ. ಇನ್ನೂ ಊರ ಹಬ್ಬಕ್ಕೆ ಬಾಡೂಟ ಬೇಕೇ ಬೇಕು. ರಾಜ್ಯೋತ್ಸವಕ್ಕೆ ಮ್ಯೂಸಿಕಲ್ ನೈಟ್ ಕಡ್ಡಾಯ. ಅಣ್ಣಮ್ಮ ದೇವಿ, ಮಾರಮ್ಮ, ಅಂಕಾಳಮ್ಮ ಬಂದಾಗ ಅನ್ನ ಸಂತರ್ಪಣೆ ಇಲ್ಲ ಅಂದರೆ ಹೇಗೆ? ಜನಪ್ರಿಯ ಚಿತ್ರ ಬಿಡುಗಡೆಯಾದರೆ ಸಾವಿರಾರು ಜನರಿಗೆ ಉಚಿತ ಟಿಕೆಟ್ ಭಾಗ್ಯವೂ ಉಂಟು.

2018 ಮೊದಲು ಚುನಾವಣೆ ಗೆದ್ದರೆ ಮಾತ್ರ ಕಾರ್ಯಕರ್ತರಿಗೆ ಸಿಹಿ ಊಟದ ಸಮಾರಂಭ ಇರುತ್ತಿತ್ತು. ಈಗ ಹಾಗಲ್ಲ, ಚುನಾವಣೆ ಆರು ತಿಂಗಳು ಮೊದಲೇ ಭರ್ಜರಿ ಬಾಡೂಟ ಅಥವಾ ಮುಳಬಾಗಲು, ದಾವಣಗೆರೆ ದೋಸೆ, ತಟ್ಟೆ ಇಡ್ಲಿ ಮುಂತಾದ ವಿವಿಧ ರುಚಿಕರ ತಿಂಡಿಗಳ ಸಮಾರಾಧನೆ ಆಗ್ಗಾಗ್ಗೆ ನಡೆಯು ತ್ತಿರುತ್ತದೆ. ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ರೇವಡಿ ಸಂಸ್ಕೃತಿಯಿಂದ ಯಾವ ಭಯವು ಇಲ್ಲದೆ ಲೇವಡಿ ಮಾಡುತ್ತಿದ್ದಾರೆ. ಆದರೆ ನಮ್ಮ ಚುನಾವಣಾ ಆಯೋಗ ಮಾತ್ರ ‘ನಮ್ಮ ಬ್ರಾಂಡ್ ಅಂಬಾಸಿಡರ್ ಗಾಂಧಾರಿ’ ಎಂದು ಭಾವಿಸಿ ಇಡಿ ವ್ಯವಸ್ಥೆಯು ಹಾಳೆದ್ದು ಹೋಗುತ್ತಿದ್ದರೂ ತಮಗೆ ಸಂಬಂಧಪಡದ ಹಾಗೆ ತೆಪ್ಪಗಿದೆ.

ಚುನಾವಣಾ ನೀತಿ ಸಂಹಿತೆ ಜಾರಿಗೆ ಬರುವ ಮುನ್ನ ಉಚಿತ ಕೊಡುಗೆ ವಿತರಣೆ ತಡೆಯಲು ಕಾನೂನಿನ ತೊಡಕಿದ್ದರೆ ಅದಕ್ಕೆ ಪರಿಹಾರ ಹುಡುಕುವ ಕೆಲಸವಾದರು ಮಾಡಬೇಕಿತ್ತು. ಕಂಡು ಕಾಣದಂತಿರುವುದು ಶೋಚನೀಯ. ನೋವಿನ ಸಂಗತಿಯೆಂದರೆ, ಹೀಗೆ ಉಚಿತವಾಗಿ ಕೊಡುವುದನ್ನು ಮತದಾರರು ಮುಗಿ ಬಿದ್ದು ಪಡೆದುಕೊಳ್ಳುವ ಮುನ್ನ ಇವರೆಲ್ಲ ಯಾಕಾಗಿ ಇಷ್ಟು ಹಣವನ್ನು ನೀರಿನಂತೆ ಚಲ್ಲುತ್ತಿದ್ದಾರೆ? ಎಲ್ಲಿಂದ ಈ ಪಾಟಿ ಹಣ ತಂದು ಹಂಚುತ್ತಿದ್ದಾರೆ? ಚುನಾವಣೆಗೆ ಮುನ್ನವೇ 30ರಿಂದ 40ಕೋಟಿ ವೆಚ್ಚ ಮಾಡುತ್ತಿರುವವರು ಗೆದ್ದ ಮೇಲೆ ಆ ಹಣವನ್ನು ಹೇಗೆ ಸಂಪಾದಿ
ಸಬಹುದು ಎಂಬುದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ನಾಳೆ ನಮ್ಮ ಕ್ಷೇತ್ರದ ಅಭಿವೃದ್ಧಿ ಹೆಸರಲ್ಲಿ ನಮ್ಮ ತೆರಿಗೆ ಹಣ ಲೂಟಿಯಾಗಿ ನಮ್ಮ ಕಾಲ ಮೇಲೆ ನಾವೇ ಚಪ್ಪಡಿ ಹಾಕಿಕೊಳ್ಳುತ್ತಿದ್ದೇವೆ ಎಂಬ ಪರಿಜ್ಞಾನವು ಇಲ್ಲದೆ, ಬರೋದೆಲ್ಲ ಬರಲಿ ಎಂಬ ಕೆಟ್ಟ ಮನಃಸ್ಥಿತಿಯಲ್ಲಿದ್ದಾರೆ.

ಈ ಕಾಲದಲ್ಲಿ ಬಡವರು, ಮಧ್ಯಮ ವರ್ಗದವರು ಅಷ್ಟೇಕೆ ಶ್ರೀಮಂತರು ಸಹಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಕನಸನ್ನು ಕೂಡ ಕಾಣಲು ಸಾಧ್ಯವಿಲ್ಲದಾಗಿದೆ. ಇಂದು ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಸಾಧ್ಯವಿರುವುದು ಭಾರೀ ಶ್ರೀಮಂತರು, ರಿಯಲ್ ಎಸ್ಟೇಟ್ ಅಥವಾ ದೊಡ್ಡ ಉದ್ದಿಮೆ
ದಾರರು ಮಾತ್ರ ಎಂಬಂತಾಗಿದೆ. ಬಡವನ ಕಷ್ಟದ ಅನುಭವ ಗೊತ್ತೇ ಇಲ್ಲದವರು, ಜನಸಾಮಾನ್ಯರ ಭವಣೆಯನ್ನು ಕಂಡೇ ಇಲ್ಲದವರು, ಮಧ್ಯಮ ವರ್ಗದವರ ಪರದಾಟದ ಅರಿವೇ ಇಲ್ಲದ ಆಗರ್ಭ ಶ್ರೀಮಂತರ ದಂಡೇ ವಿಧಾನಸಭೆ ಪ್ರವೇಶಿಸಲು ಇಂದು ತುದಿಗಾಲಲ್ಲಿ ನಿಂತಿದೆ. ಸಜ್ಜನರು ಆಯ್ಕೆ ಯಾಗುವುದಿಲ್ಲ ಎಂಬ ನಿರಾಶಾವಾದವನ್ನು ನಾನು ಮುಂದಿಡುತ್ತಿಲ್ಲ.

ಅನೇಕ ಶಾಸಕರು ತಮ್ಮ ಸಾಧನೆಯ ಆಧಾರದ ಮೇಲೆ ಈಗಲೂ ಗೆಲ್ಲುತ್ತಾರೆ. ಆದರೆ ನಿಧಾನವಾಗಿಯಾದರು ನಿಶ್ಚಿತವಾಗಿ ಅವರ ಸಂಖ್ಯೆ ಕುಸಿಯುತ್ತಿರು ವುದು ಕಳವಳಕಾರಿಯಾದ ಸಂಗತಿ. ಹನುಮಂತನಿಗೆ ಅವನ ಶಕ್ತಿಯನ್ನು ನೆನಪಿಸಬೇಕಾಗಿತ್ತು. ಹಾಗೆಯೇ ಈ ಹಣದ ಹೊಳೆಯನ್ನು ನಿಯಂತ್ರಿಸಬೇಕಾದ ಚುನಾವಣಾ ಆಯೋಗಕ್ಕೆ ಅವರ ಅಧಿಕಾರವನ್ನು ನೆನಪು ಮಾಡಿ ಕೊಡಬೇಕಾದ ಕಾಲವು ಬಂದಿದೆ. ಹಣದ ಪ್ರಾಬಲ್ಯವನ್ನು ಕಡಿಮೆ ಮಾಡುವ ಗುರುತರ ಜವಾಬ್ದಾರಿ ರಾಜಕೀಯ ಪಕ್ಷಗಳಿಗೆ ಮತ್ತು ಬಹು ಮುಖ್ಯವಾಗಿ ಉಚಿತ ಕೊಡುಗೆ ನಿರಾಕರಿಸಿ ನಮ್ಮ ಮತ ಯೋಗ್ಯರಿಗೆ ಮಾತ್ರ ಎಂಬ ಸಂದೇಶ ರವಾನೆ ಮಾಡಬೇಕಾದ ಕರ್ತವ್ಯ ಪ್ರಬುದ್ಧ ಮತದಾರರು ಮಾಡಬೇಕಾಗಿದೆ. ಪರಿಸ್ಥಿತಿಯು ಕೈಮೀರುವ ಮುನ್ನ ಎಚ್ಚೆತ್ತುಕೊಂಡು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಉಳಿಸುವ ಹೊಣೆಗಾರಿಕೆ ಪ್ರತಿಯೊಬ್ಬ ಮತದಾರರ ಮೇಲಿದೆ ಎಂಬುದನ್ನು ಮರೆಯಬಾರದು.