Thursday, 24th October 2024

ತೆಲಂಗಾಣ ಮುಖ್ಯಮಂತ್ರಿ ಪುತ್ರಿಗೆ ಸಮನ್ಸ್‌ ಜಾರಿ

ಹೈದರಾಬಾದ್‌: ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್ ಅವರ ಪುತ್ರಿ ಹಾಗೂ ಬಿಆರ್‌ಎಸ್‌ ಶಾಸಕಿ ಕೆ. ಕವಿತಾ ಅವರಿಗೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ಜಾರಿ ಮಾಡಿದ್ದಾರೆ.

ಮಾರ್ಚ್‌ 9ರಂದು ದೆಹಲಿಯ ಇ.ಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಎರಡು ದಿನಗಳ ಹಿಂದೆ ಕವಿತಾ ಅವರಿಗೆ ಆಪ್ತರಾದ ಉದ್ಯಮಿ, ಸೌತ್‌ ಗ್ರೂಪ್‌ ಕಂಪನಿ ಮಾಲೀಕ ಅರುಣ್‌ ರಾಮ ಚಂದ್ರ ಪಿಳೈ ಅವರನ್ನು ಬಂಧಿಸಿ ಇ.ಡಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು.

ಅರುಣ್‌ ರಾಮಚಂದ್ರ ಅವರು ಕವಿತಾ ಸೇರಿದಂತೆ ವೈಎಸ್‌ಆರ್‌ ಕಾಂಗ್ರೆಸ್‌ ಶಾಸಕ ಶ್ರೀನಿವಾಸಲು ರೆಡ್ಡಿ, ಉದ್ಯಮಿ ಶರತ್‌ ರೆಡ್ಡಿ ಅವರೊಂದಿಗೆ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಸಂಪರ್ಕ ಹೊಂದಿದ್ದಾರೆ ಎಂದು ಇ.ಡಿ. ಅಧಿಕಾರಿಗಳು ಹೇಳಿದ್ದಾರೆ.

ಮುಂಬರುವ ಸಂಸತ್‌ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಬೇಕು ಎಂದು ಒತ್ತಾಯಿಸಿ ಮಾರ್ಚ್ 10ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಇದರ ಮುನ್ನಾ ದಿನವೇ ಕವಿತಾ ಅವರನ್ನು ಇ.ಡಿ ವಿಚಾರಣೆಗೆ ಕರೆದಿದೆ.