ಇಂಡಿ: ಶಿಶು ಅಭಿವೃದ್ದಿ ಇಲಾಖೆಯಿಂದ ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ ಹಾಗೂ ಗರ್ಭಿಣಿ ಸ್ತ್ರೀಯರಿಗೆ ಪೌಷ್ಠಿಕ ಆಹಾರ ಕಡಿಮೆ ಪ್ರಮಾಣ ದಲ್ಲಿ ಸರಬರಾಜು ಮಾಡುತ್ತಿದ್ದು, ಕೂಡಲೆ ಸಂಬಂಧಿಸಿದ ಇಲಾಖೆಯ ಅಧಿಕಾರಿಯ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ದಸಂಸ ಮುಖಂಡರು, ಕಾರ್ಯಕರ್ತರು ಬುಧವಾರ ಪಟ್ಟಣದ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿ ಮುಂದೆ ಧರಣಿ ನಡೆಸಿ ದರು.
ಧರಣಿ ಉದ್ದೇಶಿಸಿ ಮಾತನಾಡಿದ ದಸಂಸ ತಾಲೂಕು ಸಂಚಾಲಕ ರಮೇಶ ನಿಂಬಾಳಕರ,ಪ್ರತಿ ತಿಂಗಳು ಇಂಡಿ ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ ವಿತರಣೆ ಮಾಡುತ್ತಿರುವ ರೇಷನ್‌ದಲ್ಲಿ ಶೇ.೪೦ ರಷ್ಟು ಆಹಾರ ಧಾನ್ಯ ಗಳನ್ನು ಕಡಿತ ಮಾಡಿ ವಿತರಣೆ ಮಾಡುತ್ತಿರುವುದನ್ನು ಸಾಲೋಟಗಿ ಗ್ರಾಮದಲ್ಲಿ ರೇಷನ್ ವಿತರಣೆ ಮಾಡುವ ವಾಹನ ಸಮೇತ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೆ ಅಧಿಕಾರಿಗಳು ಕಡಿಮೆ ರೇಷನ್ ವಿತರಣೆ ಮಾಡು ತ್ತಿರುವುದನ್ನು ವಿಚಾರಣೆ ಮಾಡದೇ ರೇಷನ್ ತುಂಬಿದ ವಾಹನ ಮಧ್ಯವರ್ತಿಗಳ ಮಾತು ಕೇಳಿ ತೆಗೆದುಕೊಂಡು ಹೊಗಿದ್ದಾರೆ. ಆಹಾರ ವಿತರಣೆ ಮಾಡುವ ಅಧಿಕಾರಿ ಸುಧಾಕರ ಅವರನ್ನು ಕೇಳಿದರೆ ಹಾರಿಕೆಯ ಉತ್ತರ ನೀಡು ತ್ತಾರೆ. ತಾಲೂಕು ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ಸಹ ಸರಿಯಾಗಿ ಸ್ಪಂಧಿಸದೆ, ಸಮಸ್ಯೆ ಪರಿಹರಿಸುವ ಕೆಲಸ ಮಾಡಿರುವುದಿಲ್ಲ ಎಂದು ಆರೋಪಿಸಿದರು.
ತಾಲೂಕಿನ ಬಡ ಮಕ್ಕಳಿಗೆ ಹಾಗೂ ಗರ್ಭಿಣಿ ಮಹಿಳೆಯರಿಗೆ ನೀಡಬೇಕಅದ ಪೌಷ್ಠಿಕ ಆಹಾರವನ್ನು ಅಧಿಕಾರಿಗಳು, ಮಧ್ಯವರ್ತಿಗಳು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಕೂಡಲೆ ಸಿಡಿಪಿಒ ಅವರನ್ನು ವಜಾ ಮಾಡಬೇಕು. ಅಂಗನವಾಡಿ ಕೇಂದ್ರಗಳಿಗೆ ವಿತರಣೆ ಮಾಡುವ ರೇಷನ್ ಹಾಗೂ ತತ್ತಿಯ ವಿತರಣೆಯನ್ನು ತನಿಖೆಗೆ ಒಳಪಡಿಸಬೇಕು. ನಮ್ಮ ಬೇಡಿಕೆ ಈಡೇರದಿದ್ದರೆ ಮುಂಬರುವ ದಿನದಲ್ಲಿ ಮತ್ತೇ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಡಿಎಸ್‌ಎಸ್ ಮುಖಂಡರಾದ ರೇವಣಸಿದ್ದ ಮಸಳಿಕೇರಿ,ರಾಮಚಂದ್ರ ದೊಡಮನಿ,ಬಾಬು ಗುಡಮಿ,ರಮೇಶ ನೀಲನಾಯಕ, ಶ್ರೀಕಾಂತ ಗುಡಮಿ, ಹುಚ್ಚಪ್ಪ ತೆಲಗ, ಶಂಕರ ತಳಕೇರಿ, ಆಕಾಶ ಪರಶೆನವರ, ಶಿವರಾಜ ತಳಕೇರಿ, ಪ್ರಕಾಶ ಗಾಯಕವಾಡ, ಕಲ್ಲಪ್ಪ ಅಂಜುಟಗಿ, ಮಿಲಿ0ದ ಹೊಸಮನಿ, ಆಕಾಶ ನಿಂಬಾಳಕರ, ರವಿ ಕಾಂಬಳೆ, ಜಗದೀಶ ಕಾಂಬಳೆ, ಖಾಜಪ್ಪ ನಾದ, ವಿಠಲ ಹೊಸಮನಿ, ಸಚೀನ ಹರಿಜನ, ರಮೇಶ ತಳಕೇರಿ, ರಾಹುಲ ಸಾಲೋ ಟಗಿ, ಕೃಷ್ಣಾ ಮಂದೋಲಿಕರ ಮೊದಲಾದವರು ಧರಣಿಯಲ್ಲಿ ಇದ್ದರು.