Thursday, 26th December 2024

ನಮ್ಮ ಕ್ಲಿನಿಕ್ ಗೆ ಶಾಸಕ ಚಾಲನೆ

ತುಮಕೂರು: ಮಹಾನಗರ ಪಾಲಿಕೆ ವ್ಯಾಪ್ತಿಯ ಜಯಪುರ ಹಾಗೂ ದಿಬ್ಬೂರಿನಲ್ಲಿ ಗುರುವಾರ ಶಾಸಕ ಜ್ಯೋತಿಗಣೇಶ್ ನಮ್ಮ ಕ್ಲಿನಿಕ್ ಉದ್ಘಾಟಿಸಿದರು.
ನಂತರ ಮಾತನಾಡಿದ ಶಾಸಕ,  ರಾಜ್ಯ ಸರಕಾರ ಸಾಮಾನ್ಯ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ನಮ್ಮ ಕ್ಲಿನಿಕ್‌ಗಳನ್ನು ಘೋಷಣೆ ಮಾಡಿದ್ದು, ರಾಜ್ಯಾದ್ಯಂತ 400ಕ್ಕೂ ಹೆಚ್ಚಿನ ನಮ್ಮ ಕ್ಲಿನಿಕ್‌ಗಳನ್ನು ಆರಂಭಿಸುತ್ತಿದೆ. ಅದರಲ್ಲೂ ನಗರಕ್ಕೆ 7 ನಮ್ಮ ಕ್ಲಿನಿಕ್ ಕೊಟ್ಟಿರುವುದು ವಿಶೇಷವಾಗಿದೆ ಎಂದರು.
ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಹೊರತುಪಡಿಸಿ ಹೆಚ್ಚುವರಿಯಾಗಿ ನಮ್ಮ ಕ್ಲಿನಿಕ್‌ನ್ನು ನೀಡಲಾಗಿದೆ. ನಗರದ 35 ವಾರ್ಡ್ ಗಳಿಗೆ ಒಟ್ಟು 14 ಆರೋಗ್ಯ ಕೇಂದ್ರಗಳು ಜನರ ಆರೋಗ್ಯ ಕಾಪಾಡಲು ಸದಾ ಕಾರ್ಯನಿರತ ವಾಗಿರುತ್ತವೆ. ಸಾರ್ವಜನಿಕ ಆಸ್ಪತ್ರೆಗೆ ಜ್ವರ, ನೆಗಡಿ, ಕೆಮ್ಮು ಸೇರಿದಂತೆ ಸಣ್ಣಪುಟ್ಟ ಕಾಯಿಲೆಗಳಿಗೆ ಚಿಕಿತ್ಸೆಗಾಗಿ ಬರುತ್ತಿದ್ದ ಜನರ ಸಂಖ್ಯೆ ನಮ್ಮ ಕ್ಲಿನಿಕ್‌ಗಳಿಂದಾಗಿ ಕಡಿಮೆಯಾಗಲಿದೆ ಎಂದು  ಹೇಳಿದರು.
ನಮ್ಮ ಕ್ಲಿನಿಕ್‌ಗಳು ನಗರ ಪ್ರದೇಶದ ಸಮುದಾಯಕ್ಕೆ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಒದಗಿಸುವ ಸದುದ್ದೇಶ ಹೊಂದಿದ್ದು, ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ಹಾಗೂ ನಿರಂತರ ಆರೋಗ್ಯ ಪಾಲನೆಯನ್ನು ಖಾತ್ರಿಪಡಿಸುವ ಮತ್ತು ಕೆಳಹಂತದಿಂದ ಹಾಗೂ ಮೇಲಿನ ಹಂತದ ಸೇವೆಗಳನ್ನು ನೀಡುವ ಆಸ್ಪತ್ರೆಗಳಿಗೆ ರೆಫರಲ್ ಸೇವೆಗಳ ಸಂಪರ್ಕ ಕಲ್ಪಿಸುವ ಉದ್ದೇಶ ಹೊಂದಿದೆ ಎಂದರು.
ಮೇಯರ್ ಪ್ರಭಾವತಿ ಸುಧೀಶ್ವರ್ ಮಾತನಾಡಿ, ರಾಜ್ಯ ಸರಕಸರ ತುಮಕೂರು ಜಿಲ್ಲೆಗೆ 10 ನಮ್ಮ ಕ್ಲಿನಿಕ್ ನೀಡಿದ್ದು, ಅದರಲ್ಲೂ ತುಮಕೂರು ನಗರಕ್ಕೆ 7 ನಮ್ಮ ಕ್ಲಿನಿಕ್ ನೀಡಿರುವುದು ಜನರ ಆರೋಗ್ಯ ಕಾಳಜಿಯ ಪ್ರತೀಕವಾಗಿದೆ. ನಗರದಲ್ಲಿ ಆರಂಭವಾಗುತ್ತಿರುವ ನಮ್ಮ ಕ್ಲಿನಿಕ್‌ಗಳ ಸದುಪಯೋಗವನ್ನು ಜನತೆ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಉಪಮೇಯರ್ ನರಸಿಂಹಮೂರ್ತಿ, ಪಾಲಿಕೆ ಸದಸ್ಯರಾದ ನಯಾಜ್ ಅಹಮದ್, ವೀಣಾ, ಡಿಹೆಚ್‌ಓ ಡಾ. ಮಂಜುನಾಥ್, ಆರ್‌ಸಿಎಚ್ ಅಧಿಕಾರಿ ಡಾ. ಕೇಶವರಾಜು, ಆಂಜಿನಪ್ಪ, ಹೇಮಂತರಾಜು  ಉಪಸ್ಥಿತರಿದ್ದರು.