ಯುಗಾದಿ ಹಬ್ಬ ಮುಗಿಯುತ್ತಿದ್ದಂತೆ ಮುಂಗಾರು ಪೂರ್ವ ಕೃಷಿ ಚಟುವಟಿಕೆ ಆರಂಭಿಸುವುದು ರಾಜ್ಯ ದಲ್ಲಿ ವಾಡಿಕೆ. ಕಳೆದ ಎರಡು ಮೂರು ದಿನಗಳಿಂದ ಹಲವು ಜಿಲ್ಲೆಗಳಲ್ಲಿ ಅಲ್ಪಸ್ವಲ್ಪ ಮಳೆಯೂ ಆಗಿದೆ. ಹೀಗಾಗಿ ಕೃಷಿಗೆ ಪೂರಕವಾದ ವಾತಾವರಣ ಸೃಷ್ಟಿಯಾಗಿದೆ. ಇನ್ನೊಂದೆಡೆ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಸಮಾರಂಭ, ಸಮಾವೇಶಗಳಲ್ಲಿ ಜನಬೆಂಬಲ ಮತ್ತು ಶಕ್ತಿ ಪ್ರದರ್ಶನಕ್ಕಾಗಿ ರಾಜಕೀಯ ನಾಯಕರು ಗ್ರಾಮೀಣ ಭಾಗದ ಕೂಲಿ ಕಾರ್ಮಿಕರನ್ನೇ ಆಶ್ರಯಿಸಿದ್ದಾರೆ.
ಪ್ರತಿ ಕ್ಷೇತ್ರದಲ್ಲೂ ನಡೆಯುತ್ತಿರುವ ಸಾಲು-ಸಾಲು ಪ್ರಚಾರಗಳು ಮತ್ತು ಸಮಾರಂಭಗಳಿಗೆ ಸ್ಥಳೀಯ ಮುಖಂಡರು ಗ್ರಾಮೀಣ ಪ್ರದೇಶದ ಜನರನ್ನು ಕರೆದೊಯ್ಯುತ್ತಿದ್ದಾರೆ. ಸಮಾವೇಶದ ದಿನಗಳಂದು ಬೂತ್ ಮಟ್ಟದ ಕಾರ್ಯಕರ್ತರು ಕೂಲಿ ಕೆಲಸಕ್ಕೆ ತೆರಳುವ ಗ್ರಾಮಗಳ ಮಹಿಳೆ ಮತ್ತು ಪುರುಷರನ್ನು ತಡೆದು ಅವರಿಗೆ ದಿನಕ್ಕೆ ೨೦೦-?೫೦೦ ಹಣ ನೀಡಿ ತಮ್ಮ ರಾಜಕೀಯ ಕಾರ್ಯಕ್ರಮಕ್ಕೆ ಕರೆದೊಯ್ಯುತ್ತಿದ್ದಾರೆ.
ಜತೆಗೆ ಮಹಿಳೆಯರು ಮತ್ತು ಪುರಷರಿಗೆ ಸೀರೆ, ಬಳೆ, ಪಂಚೆ, ಕುಕ್ಕರ್, ಮದ್ಯ, ಮಾಂಸ ಸೇರಿದಂತೆ ಇನ್ನಿತರ ವಸ್ತುಗಳನ್ನು ನೀಡುವುದಾಗಿ ಆಮಿಷ ಒಡ್ಡುತ್ತಿದ್ದಾರೆ. ವಾರದಲ್ಲಿ ಮೂರ್ನಾಲ್ಕು ದಿನಗಳ ಕಾಲ ರಾಜಕೀಯ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಕೃಷಿ ಕಾರ್ಮಿಕರು ಮನೆಯಲ್ಲಿದ್ದರೂ ಕೂಲಿ ಕೆಲಸಕ್ಕೆ ಹೋಗುತ್ತಿಲ್ಲ. ಚುನಾವಣೆ ಮುಗಿಯುವವರೆಗೂ ಕೂಲಿ ಕೆಲಸಕ್ಕೆ ಹೋಗುವುದೇ ಅನುಮಾನ ಎಂಬಂತ ಸ್ಥಿತಿ ಹಳ್ಳಿಗಳಲ್ಲಿ ಸೃಷ್ಟಿ ಯಾಗಿದೆ.
ಇದರಿಂದಾಗಿ ಗ್ರಾಮೀಣ ಭಾಗದಲ್ಲಿ ಕೂಲಿ ಕಾರ್ಮಿಕರು ಸಿಗದಂತಾಗಿದೆ. ಇದು ರೈತಾಪಿ ವರ್ಗಕ್ಕೆ ತಲೆನೋವಾಗಿದ್ದು, ರಾಜಕೀಯ ನಾಯಕರ ವಿರುದ್ಧ ಹಿಡಿಶಾಪ ಹಾಕುವಂತಾಗಿದೆ. ಕೂಲಿ ಕಾರ್ಮಿಕರಿಗೆ ವಿವಿಧ ರೀತಿಯ ಆಮಿಷಗಳನ್ನು ಒಡ್ಡುತ್ತಿರುವ ರಾಜಕೀಯ ನಾಯಕರು ಗೆದ್ದ ಬಳಿಕ
ಕಾರ್ಮಿಕರತ್ತ ತಿರುಗಿಯೂ ನೋಡುವುದಿಲ್ಲ ಎಂಬುದನ್ನು ಕೃಷಿ ಕಾರ್ಮಿಕರು ಅರ್ಥ ಮಾಡಿಕೊಳ್ಳಬೇಕು. ಹೊತ್ತು ಕೂಳಿ (ಊಟ)ಗಾಗಿ ವರ್ಷದ ಕೂಳನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಮುಂಗಾರುವಿನ ಈ ಸಂದರ್ಭದಲ್ಲಿ ಮೈ ಬಗ್ಗಿಸಿ ಭೂಮಿಯಲ್ಲಿ ದುಡಿದರೆ ಆ ಕುಟುಂಬಕ್ಕೆ ಹೆಚ್ಚಿನ ಆದಾಯ ಬರುವುದರ ಜತೆಗೆ ರಾಜ್ಯದ ಆರ್ಥಿಕ ಸುಧಾರಣೆಗೂ ಕೊಡುಗೆ ಕೊಡುತ್ತೇವೆ ಎಂಬುದನ್ನು ತಿಳಿದುಕೊಳ್ಳಬೇಕು.