೧೬ನೇ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿದ್ದು, ರಾಜ್ಯದಲ್ಲಿ ಬುಧವಾರದಿಂದಲೇ ನೀತಿ ಸಂಹಿತೆ ಜಾರಿಗೆ ಬಂದಿದೆ. ನೀತಿ ಸಂಹಿತೆ ಪ್ರಕಾರ ಯಾವುದೇ ಪಕ್ಷಗಳು ಅಥವಾ ಅಭ್ಯರ್ಥಿಗಳು, ಕಾರ್ಯಕರ್ತರು ಧರ್ಮ, ಜಾತಿ, ಭಾಷೆ ಹಾಗೂ ಸಮುಯದಾಯಗಳ ನಡುವೆ ದ್ವೇಷ ಉಂಟು ಮಾಡುವಂಥ ಯಾವುದೇ ಚಟುವಟಿಕೆಯಲ್ಲಿ ಭಾಗಿಯಾಗುವಂತಿಲ್ಲ.
ಎದುರಾಳಿ ಅಭ್ಯರ್ಥಿಯನ್ನು ವೈಯಕ್ತಿಕವಾಗಿ ನಿಂದಿಸುವಂತಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ. ಆದರೆ ಇಂದಿನ ಚುನಾವಣೆಗಳು ನಡೆಯುತ್ತಿರುವುದೇ ಜಾತಿ, ಧರ್ಮ, ಭಾಷೆ, ಸಮುದಾಯಗಳ ಆಧಾರದ ಮೇಲೆ. ಅಭ್ಯರ್ಥಿಗಳು ಈ ಚಟುವಟಿಕೆಗಳಲ್ಲಿ ನೇರವಾಗಿ ಪಾಲ್ಗೊಳ್ಳದಿದ್ದರೂ ಕಾರ್ಯಕರ್ತರ ಮೂಲಕ ಜಾತಿ, ಧರ್ಮ, ಭಾಷೆಯ ಆಧಾರದ ಮೇಲೆ ಮತ ಕೇಳುವಂತೆ ಪ್ರಚೋದಿಸುತ್ತಾರೆ. ಅಲ್ಲದೆ, ಪರಸ್ಪರರು ವೈಯಕ್ತಿಕ ನಿಂದನೆ ಮಾಡುತ್ತಾರೆ.
ಇಂಹತ ಸನ್ನಿವೇಶದಲ್ಲಿ ಗುಂಪು ಘರ್ಷಣೆ, ಹೊಡೆದಾಟಗಳು ನಡೆದಿರುವುದನ್ನು ಈ ಹಿಂದೆ ನೋಡಿದ್ದೇವೆ. ಅಧಿಕಾರಕ್ಕಾಗಿ
ಸ್ವಾರ್ಥದ ಪರಮಾವಽ ತಲುಪುವ ಬಹುತೇಕ ರಾಜಕಾರಣಿಗಳ ಪರ ನಿಂತು ಹೊಡೆದಾಡಿಕೊಳ್ಳುವ ಕಾರ್ಯಕರ್ತರು ನಿಜವಾಗಿಯೂ ಬಲಿಪಶುಗಳಾಗುತ್ತಾರೆ. ಆದ್ದರಿಂದ ಎಲ್ಲ ಪಕ್ಷಗಳ ಕಾರ್ಯಕರ್ತರು ಜಾಗೃತರಾಗಬೇಕಿದೆ. ವ್ಯಕ್ತಿಗತ ಟೀಕೆಗಿಂತ, ಪಕ್ಷ ಪಂಥಗಳ ಸಮರ್ಥನೆಗಿಂತ ವ್ಯವಸ್ಥೆಯ ಸಂಪೂರ್ಣ ಹಿತ ನಿಮ್ಮ ಮನದಲ್ಲಿರಲಿ. ಚುನಾವಣೆ ಬರುವುದು ೫ ವರ್ಷಕ್ಕೊಮ್ಮೆ. ನಿತ್ಯ ನಿಮ್ಮ ಊರಿನ ಜನರ ಸ್ನೇಹ-ಪ್ರೀತಿ ನಿಮಗೆ ಅವಶ್ಯವಾದದ್ದು. ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯುವ ಎಲ್ಲ ನಾಯಕರೂ ಎಲ್ಲ ಪಕ್ಷಗಳ ಜತೆಗೆ ಒಳ್ಳೆಯ ಸಂಬಂಧ ಕಾಪಾಡಿಕೊಂಡೇ ಬಂದಿರುತ್ತಾರೆ.
ಆದರೆ ಅವರಿಗಾಗಿ ಹೊಡೆದಾಡಿಕೊಳ್ಳುವ ಸಾಮಾನ್ಯ ಜನರು ಮಾತ್ರ ವರ್ಷಾನುಗಟ್ಟಲೇ ದ್ವೇಷವನ್ನು ಮುಂದುವರಿಸಿ ಕೊಂಡು ಹೋಗುತ್ತಾರೆ. ಆದ್ದರಿಂದ ಈ ಬಾರಿ ಚುನಾವಣೆಯ ಹೊಡೆದಾಟಕ್ಕೆ ಕಾರಣವಾಗದೆ, ಚುನಾವಣೆಯನ್ನು ಚುನಾವಣೆಯ ರೀತಿಯಲ್ಲೇ ನೋಡಬೇಕಾದ ಅವಶ್ಯಕತೆ ಇದೆ. ತಮ್ಮ ತಮ್ಮ ಕ್ಷೇತ್ರಗಳಲ್ಲಾಗಬೇಕಾದ ಮೂಲ ಸೌಕರ್ಯಗಳ ಬೇಡಿಕೆ ಇಟ್ಟು ಚುನಾವಣೆ ಎದುರಿಸ ಬೇಕಿದೆ. ಆತ್ಮವಂಚಕರನ್ನು ಗುರುತಿಸಿ ತಿರಸ್ಕರಿಸಬೇಕಿದೆ. ಕನಿಷ್ಠ ಇರುವುದರಲ್ಲಿ
ಉತ್ತಮ ಎಂಬ ವ್ಯಕ್ತಿಗಳನ್ನು ಜನಪ್ರತಿನಿಧಿಗಳಾಗಿ ಆಯ್ಕೆ ಮಾಡಲು ಪ್ರಯತ್ನಿಸಬೇಕಿದೆ. ಪ್ರಜಾಪ್ರಭುತ್ವ ಮೂಲ ಆಶಯದ ಬಗ್ಗೆ ಜಾಗೃತರಾಗಬೇಕಿದೆ.