ಸುಪ್ತ ಸಾಗರ
rkbhadti@gmail.com
ಅಷ್ಟಕ್ಕೂ ಏಪ್ರಿಲ೧ ರಂದೇ ಮೂರ್ಖರ ದಿನವನ್ನು ಯಾಕಾಗಿ ಆಚರಿಸುತ್ತಾರೆಂಬುದು ಈವರೆಗೆ ಯಾರಿಗೂ ಸ್ಪಷ್ಟವಿಲ್ಲ, ಆ ದಿನದ ನೆಪದಲ್ಲಿ ಯಾರ‍್ಯಾರನ್ನೋ ಯಾಮಾರಿಸುವ, ಕೆಲವೊಮ್ಮೆ ಮೂರ್ಖರ ದಿನದ ಹೆಸರಿನಲ್ಲಿ ಮೋಸ ಮಾಡುವ-ನೋಯಿಸುವ ಮಮದಿಗೂ ಇದರ ಹಿಂದಿನ ಕಾರಣ ಗೊತ್ತಿಲ್ಲ.
ಹಸೀ ಸುಳ್ಳು ಹೇಳುತ್ತಿದ್ದಾರೆಂಬುದು ನಮಗೆ ಗೊತ್ತಿರುತ್ತದೆ. ಆದರೂ ಅವರ ಭಾಷಣವನ್ನು ನಾವು ಇನ್ನಿಲ್ಲದ ಆಸಕ್ತಿಯಿಂದ ಕೇಳುತ್ತಿರುತ್ತೇವೆ. ಮಾತ್ರ ವಲ್ಲ ಅವತ್ತಿಡೀ, ಮರುದಿನವೂ ಮಾಧ್ಯಮಗಳಲ್ಲಿ ಆ ಬಗ್ಗೆಯೇ ಚರ್ಚೆ ನಡೆಯುತ್ತದೆ. ಅದರ ಸಾಧಕ ಬಾಧಕಗಳನ್ನು ಪ್ಯಾನಲಿಸ್ಟ್‌ಗಳು ಅನಲೈಸ್ ಮಾಡುತ್ತಾರೆ. ಅದರ ಪರಿಣಾಮಗಳೇನು ಎಂಬುದರ ಬಗ್ಗೆ ವಿಶ್ಲೇಷಣಾತ್ಮಕ ಬರಹಗಳು ಪುಟಗಟ್ಟಲೆ ಪ್ರಕಟಗೊಳ್ಳುತ್ತವೆ. ಹಾಗೆ ಭಾಷಣ ಮಾಡಿದವರು ದೇಶದ, ನಾಡಿನ ಜನನಾಯಕ ಎಂದೆನಿಸಿಕೊಂಡಿರುವುದರಿಂದ ಅವರ ಮಾತಿಗೆ ಅಷ್ಟೊಂದು ಬೆಲೆ. ಕಾರಣ: ನಿಜವನ್ನೇ ನುಡಿದು, ಅದರಂತೆ ನಡೆಯುವ ನಾಯಕರು ನಮ್ಮ ನಡುವೆ ಕಾಣುತ್ತಿಲ್ಲ.
***
ಇಬ್ಬರಲ್ಲಿ ಇಬ್ಬರೂ ಪೂರ್ಣ ಸಾಚಾ ಅಲ್ಲ ಎಂಬುದು ಬಹಿರಂಗ ಸತ್ಯ. ಹೇಳಿ ಕೇಳಿ ಅದು ರಾಜಕೀಯ. ಈ ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಯಾವೊಬ್ಬ ರಾಜಕಾರಣಿಯನ್ನೂ, ಯಾವುದೇ ಪಕ್ಷವನ್ನು ಪೂರ್ಣ ಪ್ರಾಮಾಣಿಕ ಎಂದು ನಂಬುವ ಸ್ಥಿತಿಯಲ್ಲಿ ಯಾರೂ ಇಲ್ಲ. ಸಿದ್ಧಾಂತಗಳು ಯಾವತ್ತಿಗೋ ಹಳ್ಳಹಿಡಿದು ಹೋಗಿವೆ. ಎಡ, ಬಲಗಳೆಲ್ಲವೂ ಬುಡಮೇಲಾಗಿ ಅಧಿಕಾರದ ಮೇಲಾಟವೇ ಮುಖ್ಯವಾಗಿ ಉಳಿದಿರುವ ಸನ್ನಿವೇಶದಲ್ಲಿ ಒಬ್ಬೊಬ್ಬರು ಒಂದೊಂದು ಪಕ್ಷವನ್ನು ಬೆಂಬಲಿಸುತ್ತ ಕಿತ್ತಾಡುತ್ತೇವೆ. ಮನೆಯಲ್ಲೆ ಗುಂಪುಗಳು, ಊರಲ್ಲೇ ಪಂಗಡಗಳು, ಹಳ್ಳಿ ಹಳ್ಳಿಗಳಲ್ಲಿ ಪಕ್ಷ‘ವಾರ್’ ನಡೆಯುತ್ತಲೇ ಇವೆ. ಕಾರಣ: ಕ್ರಾಂತಿಗೆ ಕಾರಣವಾಗುವ, ಬದುಕಿನ ದಿಕ್ಕನ್ನು ಬದಲಿಸುವ ನೈಜ ಚಳವಳಿಗಳೇ ನಮ್ಮಲ್ಲಿ ಹುಟ್ಟುತ್ತಿಲ್ಲ.
***
ಟೀವಿಯಲ್ಲಿ, ನಾನಾ ಮಾಧ್ಯಮಗಳಲ್ಲಿ ಬರುವ ಯಾವುದೇ ಜಾಹೀರಾತುಗಳು ಸಂಪೂರ್ಣ ನಂಬಲರ್ಹವಲ್ಲ ಎಂಬುದು ಗೊತ್ತಿದ್ದದೇ. ಬೆಡಗಿಯರು ಮೈಮಾಟ ಪ್ರದರ್ಶಿಸುತ್ತ ಯಾವ್ಯಾವುದೋ ಕಂಪನಿಯ ಉತ್ಪನ್ನಗಳ ಬಗ್ಗೆ ಪ್ರಚಾರ ನೀಡುತ್ತಿದ್ದಾರೆ. ಒಳ ಉಡುಪು, ಮಹಿಳೆಯರ ನ್ಯಾಪ್‌ಕಿನ್‌ಗಳಿಂದ ಹಿಡಿದು ಹೇರ್ ಆಯಿಲ್‌ನವರೆಗೆ, ಕಡಿಮೆ ಬಡ್ಡಿದರದ ಸಾಲದಿಂದ ಹಿಡಿದು ವಿಮಾನ ಪ್ರಯಾಣದವರೆಗೆ ಎಲ್ಲವಕ್ಕೂ ಜಾಹೀರಾತೇ ನಮಗಿಂದು ಮಾಹಿತಿ ಮಾಧ್ಯಮ. ನಾವು ಏನನ್ನು ಕೊಳ್ಳಬೇಕು, ಹೇಗೆ ಬದುಕಬೇಕು, ಯಾವ ವಸ್ತುಗಳನ್ನು ಬಳಸಬೇಕೆಂಬುದನ್ನು, ಅಷ್ಟೇಕೆ ನಮ್ಮ ಪ್ರವಾಸ, ದಿನಚರಿಗಳನ್ನೂ ನಿರ್ಧರಿಸುವುದು ಇಂದು ಜಾಹೀರಾತುಗಳೇ. ಇಂಥ ಯಾವ ಪ್ರಚಾರ ತಂತ್ರಗಳಿಲ್ಲದಿದ್ದಾಗಲೂ ನಾವು ಅತ್ಯುತ್ಕೃಷ್ಟ ವಸ್ತುಗಳನ್ನು ಕೊಂಡು ಉತ್ತಮವಾ ಗಿಯೇ ಬದುಕಿದ್ದವು. ಹೀಗಿದ್ದರೂ ಇವತ್ತು ಜಾಹೀರಾತಿಲ್ಲದ ದಿನ, ಕ್ಷಣ, ಉತ್ಪನ್ನವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ.
ಕಾರಣ: ಓಡುವ ಯುಗದಲ್ಲಿ ಸ್ವತಂತ್ರ ವಿವೇಚನೆಯೊಂದಿಗೆ ವಸ್ತು, ವ್ಯಕ್ತಿಗಳ ಮೌಲ್ಯ ನಿರ್ಧರಿಸುವ ಶಕ್ತಿಯನ್ನು ನಾವು ಕಳಕೊಂಡಿದ್ದೇವೆ.
***
ಸರಕಾರಗಳನ್ನು ಬದಲಿಸುವ ಶಕ್ತಿ, ಸಮಾಜವನ್ನು ತಿದ್ದುವ ನೈತಿಕತೆ, ಹೋರಾಟಗಳನ್ನು ರೂಪಿಸುವ ಕಳಕಳಿ ಮಾಧ್ಯಮಗಳಲ್ಲಿ ಇಲ್ಲವೆಂಬುದು ಯಾವತ್ತಿಗೋ ಮನವರಿಕೆಯಾಗಿದೆ. ಶಿಕ್ಷಣ, ಸಾಹಿತ್ಯ, ಸಂಸ್ಕೃತಿ, ಸಮಾಜ ಇವೆಲ್ಲವನ್ನೂ ಮೀರಿ ಇವತ್ತು ಮಾಧ್ಯಮದ ಬ್ಯುಸಿನೆಸ್ ನಡೆಯುತ್ತಿದೆ. ಆಧುನಿಕ ಸಾಮಾಜಿಕ ಜಾಲತಾಣಗಳ ಯುಗದಲ್ಲಿ ಇವತ್ತು ಪ್ರತಿ ವ್ಯಕ್ತಿಯೂ ಪ್ರತಿಕ್ಷಣವೂ ಸುದ್ದಿಯನ್ನು ಗ್ರಹಿಸುತ್ತಿದ್ದಾನೆ, ತಾನು ಗ್ರಹಿಸಿದ್ದನ್ನು
ಬಿತ್ತರಿಸುತ್ತಿದ್ದಾನೆ. ಆದರೂ ಪೈಪೋಟಿಗೆ ಬಿದ್ದವರಂತೆ ಮಾಧ್ಯಮಗಳು ಚರ್ವಿತಚರ್ವಣಕ್ಕೆ ಇಳಿದಿವೆ. ತಾನು ಬರೆದದ್ದೇ ಸತ್ಯ, ತಾವು ಬಿತ್ತರಿಸಿದ್ದೇ ನಿಜ ಎಂಬುದನ್ನು ಬಿಂಬಿಸಿಕೊಳ್ಳಲು ಕಸರತ್ತು ನಡೆಸಿವೆ. ಎಲ್ಲವನ್ನೂ ವಿಮರ್ಶಿಸುವ, ಎಲ್ಲದಕ್ಕೂ ತೀರ್ಪಿಯ್ಯುವ ಸಮರ್ಥ ಸರ್ವಜ್ಞನಂತೆ ಮೀಡಿಯಾ ಮಂದಿ ವರ್ತಿಸುತ್ತಿದ್ದಾರೆ.
ಕಾರಣ: ವೈಯಕ್ತಿಕ ಮೌಲ್ಯಗಳೊಂದಿಗೆ ಅಧ್ಯಯನ ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದೇವೆ.
***
ಶಾಪ, ವರಗಳ ತಪಃಶಕ್ತಿ ಒತ್ತೊಟ್ಟಿಗಿರಲಿ, ಕನಿಷ್ಠ ಸಾಮಾನ್ಯ ಗೃಹಸ್ಥನ ಅನುಷ್ಠಾನ ಯೋಗ್ಯತೆಯೂ ಸೋ ಕಾಲ್ಡ್ ಸಂತರಲ್ಲಿ ಉಳಿದಿಲ್ಲ. ಆಶೀರ್ವಚನ ವೆಂಬುದು ಬಾಹ್ಯಾಡಂಬರದ ಸೋಗೆಂದು ಆಸ್ತಿಕ ಸಮುದಾಯಕ್ಕೂ ಗೊತ್ತಿದೆ. ಗಲ್ಲಿ ಗಲ್ಲಿಗೊಂದು ಕಾರ್ಪೋರೇಟ್ ಮಠಗಳು ಹುಟ್ಟಿಕೊಳ್ಳುತ್ತಿವೆ. ಜಾತಿಗೊಂದು ಗುರುಗಳು ಪೀಠವೇರುತ್ತಿದ್ದಾರೆ. ಅತ್ಯದ್ಭುತ ಬ್ಯುಸಿನೆಸ್ ತಾಣಗಳಾಗಿ ಮಂದಿರಗಳು ಪರಿವರ್ತನೆಯಾಗುತ್ತಿವೆ. ವ್ಯಕ್ತಿತ್ವ ವಿಕಸನ, ಯೋಗ, ಚಿಕಿತ್ಸೆ, ಸಮಾಧಾನ, ಸಂತೈಕೆಗಳೆಲ್ಲವೂ ಮಿನಿಟ್ ಗಳ ಲೆಕ್ಕಾಚಾರದಲ್ಲಿ ಸೇವೆಗೆ ಸಿಗುತ್ತಿವೆ.
ಪ್ರವಚನ ಮಾಲಿಕೆಗಳಲ್ಲೇ ಪೈಪೋಟಿಗಿಳಿದಿರುವ ಸಂತರ ಪ್ರಭಾವ ದೇಶ ವಿದೇಶಗಳ ಭಕ್ತರ ಸಂಖ್ಯೆಯನ್ನಾಧರಿಸಿ ಅಳೆಯಲಾಗುತ್ತಿದೆ. ಜ್ಞಾನ, ಪಾಂಡಿತ್ಯ, ತಪಸ್ಸು, ಧರ್ಮ ರಕ್ಷಣೆ- ಪ್ರಸಾರ, ಸದ್ಭೋಧನೆಗಳೆಲ್ಲವೂ ಕಾವಿಯ ಜನಪ್ರಿಯತೆಯಲ್ಲಿ ಮುಚ್ಚಿಹೋಗುತ್ತಿದೆ. ರಾಜಕೀಯ ಶಕ್ತಿಗಳಾಗಿ ಧರ್ಮಕೇಂದ್ರಗಳು ನಿಂತಿವೆ.
ಕಾರಣ: ಯಾಂತ್ರಿಕ ಅವಸರದ ಬದುಕಿನಲ್ಲಿ, ವಿಘಟಿತ ಕುಟುಂಬ ವ್ಯವಸ್ಥೆಯಲ್ಲಿ ಮಾನಸಿಕ ಶಾಂತಿ ಮರೀಚಿಕೆಯಾಗಿದೆ.
***
ಕಲಿಯುವ ಸಿಲೆಬಸ್, ಬರೆಯುವ ಪರೀಕ್ಷೆ ಜೀವನದಲ್ಲಿ ಇನ್ನೆಂದೂ ಉಪಯೋಗಕ್ಕೆ ಬಾರದು ಎಂಬುದರ ಬಗ್ಗೆ ಹೆತ್ತವರಿಗಿಂತ ಮಕ್ಕಳಿಗೇ ಚೆನ್ನಾಗಿ ಅರಿವಿದೆ. ಎಷ್ಟೇ ಪ್ರತಿಭಾವಂತರಾಗಿದ್ದರೂ, ಚಿನ್ನದ ಪದಕವನ್ನೇ ಗಳಿಸಿದ ಫಸ್ಟ್‌ರ‍್ಯಾಂಕ್ ರಾಜುಗಳಾದರೂ ಉದ್ಯೋಗ ಎಂಬುದು ಹಣ, ಪ್ರಭಾವವನ್ನೇ ಅವಲಂಬಿಸಿದೆ ಎಂಬುದು ಖಚಿತವಾಗಿದೆ. ಹೀಗಿದ್ದರೂ ನಮ್ಮ ಮಕ್ಕಳು ಫಸ್ಟ್ ರ‍್ಯಾಂಕ್ ಗಳಿಸಲೇಬೇಕು. ಲಕ್ಷಾಂತರ ಸಾಲ ಮಾಡಿ ಸುರಿದಾದರೂ
ಅವರನ್ನು ಸುಸಜ್ಜಿತ ಖಾಸಗಿ ಶಾಲೆಯಲ್ಲೇ ಓದಿಸಬೇಕು.
ಸಿಇಟಿ ರ‍್ಯಾಂಕ್‌ಗಳಿಸಿ ಎಂಜಿನಿಯರಿಂಗ್, ಮೆಡಿಕಲ್ ಸೀಟು ದಕ್ಕಿಸಿಕೊಂಡರೆ ಸಾಧನೆ. ಇನ್ನು ಮಕ್ಕಳಿಗೆ ಆಸಕ್ತಿ ಇದೆಯೋ ಇಲ್ಲವೋ ಗೊತ್ತಿಲ್ಲ, ಆದರೂ ನಮ್ಮ ಪ್ರತಿಷ್ಠೆಗಾದರೂ ಸಂಗೀತ, ಡ್ಯಾನ್ಸ್, ಡ್ರಾಯಿಂಗ್, ಅಬಾಕಸ್, ಕರಾಟೆ, ಕ್ರಿಕೆಟ್ ಹೀಗೆ ಒಂದೈದು ಕೋರ್ಸ್ ಗಳಿಗಾದರೂ ನಮ್ಮ ಮಕ್ಕಳನ್ನು ಸೇರಿಸಬೇಕು. ಬೇಸಿಗೆ ರಜೆಯಲ್ಲಿ ಅಜ್ಜ, ಅಜ್ಜಿಯರ ಜತೆಗೆ ಹಳ್ಳಿಯಲ್ಲಿ ಕಳೆದು ವ್ಯರ್ಥ(?) ಮಾಡುವ ಬದಲು ಕಡ್ಡಾಯವಾಗಿ ಮಕ್ಕಳು ಶಿಬಿರಗಳಿಗೆ
ಹೋಗಬೇಕು. ಕಂಪ್ಯೂಟರ್‌ಗಳನ್ನು ಬಿಟ್ಟು ಬೇರಾವುದೇ ಆಟಗಳ ಹೆಸರಲ್ಲಿ ಬೀದಿಗೆ, ಮೈದಾನಗಳಿಗೆ ಬರುವುದು ನಮ್ಮ ಘನತೆಗೆ ತರವಲ್ಲ.
ಕಾರಣ: ಓಡುವ ಕುದುರೆಯ ಬೆನ್ನು ಬಿದ್ದು, ಉದ್ಯೋಗ ಗಳಿಕೆಯಷ್ಟೇ ಶಿಕ್ಷಣದ ಉದ್ದೇಶ ಎಂಬ ನಿರ್ಧಾರಕ್ಕೆ ಬಂದಿದ್ದೇವೆ.
***
ಜೀವನದಲ್ಲಿ ಶಾಂತಿ, ಸಮಾಧಾನ, ನೆಮ್ಮದಿ, ಆರೋಗ್ಯಕ್ಕಿಂತ ಹೆಚ್ಚಿನ ಸುಖ ಹಣದಿಂದ ದಕ್ಕಲು ಸಾಧ್ಯವೇ ಇಲ್ಲವೆಂಬ ಸಾರ್ವಕಾಲಿಕ ಸತ್ಯ ನಮ್ಮೆದುರೇ
ಇದೆ. ಆದರೂ ಹಣದ ಹುಚ್ಚು ಕುದುರೆಯ ಲಗಾಮು ಹಿಡಿಯಲು ಎಲ್ಲವನ್ನೂ ಬಲಿಕೊಡಲು ಸಿದ್ಧರಾಗಿದ್ದೇವೆ. ಹಣ ಗಳಿಸಿದರೆ ಉಳಿದೆಲ್ಲವನ್ನೂ ಅದರಿಂದ ಖರೀದಿಸಬಹುದು ಎಂಬ ಭ್ರಮೆಗೆ ಬಿದ್ದು ಕಾಲದ ಪರಿವೆಯೇ ಇಲ್ಲದೇ ದುಡಿಯುತ್ತಿದ್ದೇವೆ. ಲಕ್ಷಗಟ್ಟಲೆ ಸಂಬಳ ನೀಡುವ ಬಹುರಾಷ್ಟ್ರೀಯ ಕಂಪನಿಗಳೇ ನಮ್ಮ ಯುವಕರ ಆದ್ಯತೆ. ದಿನವಿಡೀ ಕಚೇರಿಯಲ್ಲೇ ಗೇಯುವ ಕತ್ತೆಗಳಾಗಿ ಗಳಿಸಿದ ಹಣವನ್ನು ಹೇಗೆ ವ್ಯಯಿಸಬೇಕೆಂಬುದೇ ತಿಳಿಯದೇ
ಮತ್ತದೇ ನೆಮ್ಮದಿ ಸುಖವನ್ನು ಅರಸಿ ವ್ಯಸನಕ್ಕೀಡಾಗುತ್ತಿದ್ದೇವೆ. ಯಾವುದಕ್ಕಾಗಿ ದುಡಿಯುತ್ತಿದ್ದೇವೋ ಅದರಿಂದ ದೂರವಾಗುತ್ತಿದ್ದೇವೆ.
ಕಾರಣ: ಸ್ವ ಸಾಮರ್ಥ್ಯ, ಸ್ವಾವಲಂಬನೆಯಲ್ಲಿ ನಂಬಿಕೆ ಕಳಕೊಳ್ಳುತ್ತಿದ್ದೇವೆ. ಆತ್ಮ ವಿಶ್ವಾಸ ಕುಸಿಯುತ್ತಿದೆ.
***
ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ… ಸಂಬಂಧಗಳು ಸಡಿಲಗೊಳ್ಳುತ್ತಿವೆ. ಯುವ ಶಕ್ತಿಗೆ ಸೂಕ್ತ ಮಾರ್ಗದರ್ಶನ ಮಾಡುವ ದೂರದರ್ಶಿತ್ವದ ಕೊರತೆ ಕಾಡುತ್ತಿದೆ. ಹಿರಿಯರು ವೃದ್ಧಾಶ್ರಮ ಸೇರುತ್ತಿದ್ದಾರೆ, ಇಲ್ಲವೇ ಅವರ ವಾಸತಾಣಗಳಾದ ಹಳ್ಳಿಗಳೇ ವೃದ್ಧಾಶ್ರಮಗಳಾಗುತ್ತಿವೆ. ನಗರದ ಭೋಗಜೀವನವೇ ಶ್ರೇಷ್ಠವೆಂಬ ಪರಿಕಲ್ಪನೆ ನಮ್ಮಲ್ಲಿ ಹೊಕ್ಕು ಕುಳಿತಿದೆ. ವಿಘಟಿತ, ವಿದ್ರೋಹಿ ಮನೋಭಾವವೇ ಎಲ್ಲೆಡೆ ವಿಜೃಂಭಿಸುತ್ತಿದೆ. ಕುಟುಂಬ ವ್ಯವಸ್ಥೆ ದಿಕ್ಕುತಪ್ಪಿದೆ. ಡೈವೋರ್ಸ್‌ಗಳೇ ಹಕ್ಕೆಂದು ಪರಿಗಣಿತವಾಗಿ, ಸಮಾನತೆ ಎನಿಸಿಕೊಳ್ಳುತ್ತಿದೆ.
ಆದರ್ಶಗಳು ಕಣ್ಮರೆಯಾಗಿವೆ. ಸಿದ್ಧಾಂತಗಳು ಧೂಳೀಪಟವಾಗುತ್ತಿವೆ. ಸ್ವಾರ್ಥ, ಸ್ವಹಿತವೇ ಜೀವನದ ಬಹುಮುಖ್ಯ ಧ್ಯೇಯವಾಗಿದೆ. ಕುಡಿಯುವ ನೀರು, ಸೇವಿಸುವ ಗಾಳಿಯನ್ನೂ ಕಲುಷಿತಗೊಳಿಸಿಕೊಂಡು, ಇಡೀ ಭೂಮಂಡಲವೇ ನಮ್ಮ ಪಿತ್ರಾರ್ಜಿತ ಆಸ್ತಿಯೆಂದು ಪರಿಭಾವಿಸಿ, ಜೀವಿಗಳ ವಿನಾಶಕ್ಕೆ ಅಡಿಯಿಟ್ಟಿದ್ದೇವೆ. ಅಣ್ವಸಗಳೇ ಬಲವಾಗಿದೆ. ಆಧುನಿಕ ಯೋಜನೆಗಳೇ ಅಭಿವೃದ್ಧಿಯೆನಿಸಿದೆ. ಮೋಜಿನ ಜೀವನದಲ್ಲೇ ಸಾರ್ಥಕ್ಯ ಸಾಽಸುತ್ತಿದ್ದೇವೆ.
ಇಂಥದ್ದೆಲ್ಲದರ ನಡುವೆ ಮತ್ತೊಂದು ಮೂರ್ಖರ ದಿನವನ್ನು ನಿನ್ನೆ ಏಪ್ರಿಲ್ ಒಂದರಂದು ಆಚರಿಸಿದ್ದೇವೆ.
ನಂಬಿಕೆಗಳೇ ಇಲ್ಲದ ಜೀವನದಲ್ಲಿ, ಯಾರನ್ನು ಯಾರು ಮೂರ್ಖರಾಗಿಸಲು ಹೊರಟಿದ್ದೇವೋ ಗೊತ್ತಿಲ್ಲ. ಬೇರೆಯವರು ಹಾಗಿರಲಿ, ನಮ್ಮನ್ನು ನಾವೇ ನಂಬುವ ಸ್ಥಿತಿಯಲ್ಲಿ ಇಲ್ಲದಿರುವಾಗ ಬೇರೆಯವರ ನಂಬಿಕೆಯ ಪ್ರಶ್ನೆ ಎಲ್ಲಿಂದ ಬಂತು? ಪ್ರತಿ ದಿನವೂ, ಪ್ರತಿ ಕ್ಷಣವೂ ಮೂರ್ಖರಾಗುತ್ತಲೇ ಹೊರಟಿ ರುವಾಗ ಇನ್ನೊಂದು ಮೂರ್ಖರ ದಿನದ ಆಚರಣೆಯಲ್ಲಿ ಎಲ್ಲಿ ಉಳಿದೀತು ಅರ್ಥ? ನಮ್ಮ ನಾಯಕರು, ಧಾರ್ಮಿಕ ಮುಖಂಡರು, ಮಾರ್ಗದರ್ಶಕರು, ಚಿಂತಕರು, ಬುದ್ಧಿಜೀವಿಗಳು, ಮಾಲೀಕರು, ನೌಕರರು, ಹಿರಿಯರು, ಕಿರಿಯರು, ಗೆಳೆಯರು, ಒಡನಾಡಿಗಳು, ಬಂಧುಗಳು… ಸುತ್ತೆಲ್ಲ ಇರುವವರೇ ಪರಸ್ಪರ ಮೂರ್ಖರನ್ನಾಗಿಸಿಕೊಳ್ಳುವ ಪೈಪೋಟಿಗೆ ಇಳಿದಿರುವಾಗ ಮತ್ತೊಂದು ಮೂರ್ಖರ ದಿನಕ್ಕೆ ಎಲ್ಲಿಯ ಮಹತ್ವ? ಇವೆಲ್ಲದರ ನಡುವೆ ಏಪ್ರಿಲ್ ಒಂದರ ದಿನದ ಆಚರಣೆ ಏನೇನೂ ಅಲ್ಲ ಬಿಡಿ. ಇದಕ್ಕಿಂತ ನಮ್ಮನ್ನು ಮೂರ್ಖರನ್ನಾಗಿಸಲು ಯಾರಿಂದಲೂ ಸಾಧ್ಯವೇ ಇಲ್ಲ.
***
ಅಷ್ಟಕ್ಕೂ ಏಪ್ರಿಲ೧ ರಂದೇ ಮೂರ್ಖರ ದಿನವನ್ನು ಯಾಕಾಗಿ ಆಚರಿಸುತ್ತಾರೆಂಬುದು ಈವರೆಗೆ ಯಾರಿಗೂ ಸ್ಪಷ್ಟವಿಲ್ಲ, ಆ ದಿನದ ನೆಪದಲ್ಲಿ ಯಾರ‍್ಯಾರನ್ನೋ ಯಾಮಾರಿಸುವ, ಕೆಲವೊಮ್ಮೆ ಮೂರ್ಖರ ದಿನದ ಹೆಸರಿನಲ್ಲಿ ಮೋಸ ಮಾಡುವ-ನೋಯಿಸುವ ಮಮದಿಗೂ ಇದರ ಹಿಂದಿನ ಕಾರಣ ಗೊತ್ತಿಲ್ಲ. ಇತಿಹಾಸದ ಬಗೆಗಿನ ಕಲ್ಪನೆಯಂತೂ ಇಲ್ಲವೇ ಇಲ್ಲ. ಎಲ್ಲೋ ಒಂದಷ್ಟು ಮಾಧ್ಯಮದ ಮಂದಿ, ಇತಿಹಾಸಕಾರರು ಮೂರ್ಖರ ದಿನದ ಹಿಂದಿನ ಉದ್ದೇಶವನ್ನು ಊಹಿಸಿದ್ದಾರೆ. ಅವೆಲ್ಲವೂ ಊಹೆಗಳಷ್ಟೇ ಹೊರತು ನಿಖರವಾಗಿ ಇದೇ ಎಂದು ಯಾರೊಬ್ಬರು ಹೇಳುತ್ತಿಲ್ಲ, ಹೀಗಾಗಿ ಅದೂ ಎಲ್ಲರನ್ನು
ಮೂರ್ಖರನ್ನಾಗಿಸಿಕೊಂಡೇ ಬಂದದ್ದೇನೋ.
ಇರಲಿ. ಒಂದು ಮೂಲದ ಪ್ರಕಾರ, ೧೬ನೇ ಶತಮಾನದ ಉತ್ತರಾರ್ಧದಲ್ಲಿ ಹದಿಮೂರನೇ ಪೋಪ್‌ಗ್ರೆಗೊರಿ , ಗ್ರೆಗೋರಿಯನ್ ಕ್ಯಾಲೆಂಡರ್ ಜಾರಿಗೆ ತಂದ. ಆ ಪ್ರಕಾರ ಜನವರಿ ೧ಕ್ಕೆ ವರ್ಷ ಆರಂಭವೆಂದಾಯಿತು. ಇದಕ್ಕೂ ಮೊದಲು ಅಂದರೆ ಜೂಲಿಯನ್ ಕ್ಯಾಲೆಂಡರ್ ಪ್ರಕಾರ ಮಾರ್ಚ್ ವಾರ್ಷಾಂತ್ಯ ಎಂಬುದಿತ್ತು. ಅದರನ್ವಯ ಏಪ್ರಿಲ೧ ಹೊಸವರ್ಷವಾಗಿತ್ತು. ಫ್ರಾನ್ಸ್ ಮೊಟ್ಟ ಮೊದಲಬಾರಿಗೆ ಹೊಸ ಗ್ರೆಗೋರಿಯನ್ ಕ್ಯಾಲೆಂಡರ್ ಅನ್ನು ಅಂಗೀಕರಿಸಿ ತಾದರೂ ಬಹುತೇಕರಿಗೆ ಇದರ ಬಗ್ಗೆ ಅರಿವೇ ಇರಲಿಲ್ಲವಂತೆ. ಇನ್ನು ಅರಿವಿದ್ದವರು ಬದಲಾವಣೆಯನ್ನು ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ಅಂತಹ
ಒಂದು ಗುಂಪು ಏಪ್ರಿಲ್ ೧ರಂದೇ ಹೊಸ ವರ್ಷ ಆಚರಿಸುವುದನ್ನು ಮುಂದುವರಿಸಿತು.
ಇದರಿಂದ ಆಕ್ರೋಶಗೊಂಡ ಹೊಸ ಕ್ಯಾಲೆಂಡರ್ ಅನುಯಾಯಿಗಳು ಹಳೆಯದನ್ನು ಹಳಿಯಲು ಏಪ್ರಿಲ್ ೧ಕ್ಕೆ ‘ಮೂರ್ಖರ ದಿನ’ದ ಪಟ್ಟ ಕಟ್ಟಿರಲಿಕ್ಕೂ ಸಾಕು. ಅಥವಾ ಹಳೆ ಕ್ಯಾಲೆಂಡರ್‌ನವರೇ ಹೊಸ ವರ್ಷದ ಸಂಭ್ರಮ ಹೆಚ್ಚಿಸಲು ಹೀಗೆ ಪ್ರೀತಿಪಾತ್ರರನ್ನು ಮೂರ್ಖರನ್ನಾಗಿ ಮಾಡಿ, ತಮಾಷೆ ಮಾಡಿ ದಿನ ಕಳೆಯುವ ಸಂಪ್ರದಾಯ ಜಾರಿಗೆ ತಂದಿರಲೂ ಬಹುದು. ಬದುಕೇ ಯಾಂತ್ರಿಕವಾಗಿಬಿಟ್ಟಿದೆ. ಸಂಬಂಧಗಳು ಸಡಿಲಾಗಿ ಹೋಗಿವೆ. ಸ್ನೇಹಿತರೊಂದಿಗೆ ಮನದುಂಬಿ ನಗುವುದನ್ನು ಮರೆತಿದ್ದೇವೆ. ಕುಟುಂಬಸ್ಥರೊಂದಿಗೆ ಕುಳಿತು ಹರಟುವುದನ್ನು ಬಿಟ್ಟಿದ್ದೇವೆ. ಬದುಕನ್ನು ಸಂಬಾಳಿಸುವುದೇ ಜೀವಮಾನದ ಸಾಧನೆ ಎಂಬಂತಾಗಿಬಿಟ್ಟಿದೆ. ಹಾಸ್ಯವೆಂಬುದು ಹಾಸ್ಯಾಸ್ಪದ ಎಂಬಂತಾಗಿಬಿಟ್ಟಿರುವಾಗ ನಮ್ಮನ್ನು ನೋಡಿ ಬೇರೆಯವರು ನಗುವಂತಾಗುವ ಬದಲು, ನಮ್ಮನ್ನು ನಾವೇ ಹಾಸ್ಯ ಮಾಡಿಕೊಂಡು ನಗುವುದನ್ನು ರೂಢಿಸಿಕೊಳ್ಳುವುದು ಉತ್ತ. ಹೇಗೂ ಇರಲಿ, ನೋವು ನುಂಗಿ ನಗಲಿಕ್ಕಾದರೂ ಒಂದು ದಿನ ನಿಗದಿಯಾಗಿದೆ ಎಂಬ ಸಮಾರಂಭದಲ್ಲಿ ಮನಸು ತುಂಬ ನಕ್ಕು ಹಗುರಾಗೋಣ.
ಹಾಗೊಂದು ಸಕಾರಾತ್ಮಕ ಭಾವವನ್ನು ಜೀವನದಲ್ಲಿ ತುಂಬಿಕೊಳ್ಳೋಣ. ಮೂರ್ಖರನ್ನಾಗಿಸುವ ನೆಪದಲ್ಲಾದರೂ ಸ್ನೇಹಿತರು, ಬಂಧುಗಳು, ಆತ್ಮೀಯ ರನ್ನು ನೆನಪಿಸಿಕೊಂಡು ಒಂದು ಫೋನ್ ಕರೆ, ಮೆಸೆಜ್ ಮಾಡಿ ಸಂಬಂಧವನ್ನು ಜೀವಂತವಾಗಿಟ್ಟುಕೊಳ್ಳೋಣ.