Saturday, 23rd November 2024

ಮಾಯಸಂದ್ರ ಗ್ರಾಮದಲ್ಲಿ ಮತದಾನ ಜಾಗೃತಿ ಜಾಥಾ ವಿಶೇಷ ಕಾರ್ಯಕ್ರಮ

ತುರುವೇಕೆರೆ: 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯು ಮುಂಬರುವ ಮೇ 10ರಂದು ನಡೆಯಲಿದ್ದು, ಸಾರ್ವಜನಿಕರು ನಿರ್ಭಯವಾಗಿ ತಮ್ಮ ಮತವನ್ನು ಚಲಾಯಿಸಬೇಕೆಂದು ತುರುವೇಕೆರೆ ವಿಧಾನಸಭಾ ಕ್ಷೇತ್ರ 130ರ ಚುನಾವಣಾಧಿಕಾರಿಗಳಾದ ಎಂ.ಎನ್.ಮಂಜುನಾಥ್ ಮನವಿ ಮಾಡಿದರು.

ತುರುವೇಕೆರೆ ತಾಲೂಕಿನ ಮಾಯಸಂದ್ರ ಗ್ರಾಮದಲ್ಲಿ ತಡ ದಿನವಾದ ಬುಧವಾರ ಸಂಜೆ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ವತಿಯಿಂದ “ಮತದಾನ ಜಾಗೃತಿ ಜಾಥಾ” (ಮೇಣದ ದೀಪ ಹಚ್ಚಿ ಹೆಜ್ಜೆ ಇಡುವ ಮೂಲಕ) ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಶೇಕಡ 100%ರಷ್ಟು ಮತದಾನ ಮಾಡಿಸುವ ಸಲುವಾಗಿ ಮತದಾರರಿಗೆ ನಮ್ಮ ಮತದ ಹಕ್ಕಿನ ಪ್ರಾಮುಖ್ಯತೆಯನ್ನು ತಿಳಿಸಬೇಕೆಂಬ ಉದ್ಧೇಶದಿಂದ, ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಮತದಾನದ ಅರಿವನ್ನು ಮೂಡಿಸಲು ಹಲವಾರು ಇಲಾಖೆಗಳ ಸಹಯೋಗದೊಂದಿಗೆ ಸಾರ್ವಜನಿಕವಾಗಿ ಪ್ರಚಾರಪಡಿಸುತ್ತಾ, ಒಂದೊಳ್ಳೆ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಸಂಬಂಧ ಮತದಾರರು ಯಾವುದೇ ಆಮಿಷಕ್ಕೆ ಒಳಗಾಗದೆ, ನಿರ್ಭಯವಾಗಿ ಮತ್ತು ನಿರ್ಭೀತವಾಗಿ ತಮ್ಮ ಮತವನ್ನು ಚಲಾಯಿಸಿ, ಮತದಾನವು ಪವಿತ್ರವಾಗಿದ್ದು, ತಮ್ಮ ಹಕ್ಕು ಮತ್ತು ತಮ್ಮ ಮತವನ್ನು ಮಾರಿಕೊಳ್ಳಬೇಡಿ, ತಮಗೆ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಅವಕಾಶ ಸಿಗುವಂತಹ ಸಮಯ ಇದಾಗಿದೆ, ಮುಂಬರುವ ಮೇ 10ರಂದು ಮತದಾನವನ್ನು ಮಾಡುವ ಮೂಲಕ ಎಲ್ಲ ವಯಸ್ಕರು ತಪ್ಪದೆ ಮತದಾನ ಮಾಡಿ ತಾಲೂಕಿನಲ್ಲಿ ನೂರರಷ್ಟು ಮತದಾನಕ್ಕೆ ಸಹಕರಿಸಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ವೈ.ಎಮ್. ರೇಣುಕುಮಾರ್. ಇ.ಓ. ಸತೀಶ್ ಕುಮಾರ್. ಕಂದಾಯ ಇಲಾಖೆಯ ತಾಲೂಕು ಕಚೇರಿ, ನಾಡಕಚೇರಿ, ಸಿಬ್ಬಂದಿಗಳು, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು, ಮತ್ತು ಹಲವಾರು ತಾಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಸ್ಥಳೀಯ ಸ್ತ್ರೀ ಶಕ್ತಿ ಸಂಘದ ಸದಸ್ಯರು, ಗ್ರಾಮಸ್ಥರು, ಉಪಸ್ಥಿತರಿದ್ದರು.