Saturday, 23rd November 2024

ಏಪ್ರಿಲ್‌ 8ರಂದು ಹೈದರಾಬಾದ್‌ಗೆ ಪ್ರಧಾನಿ ಭೇಟಿ

ಹೈದರಬಾದ್‌ : ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಉದ್ಘಾಟನೆ ಮತ್ತು ಶಂಕು ಸ್ಥಾಪನೆ ನೆರವೇರಿಸಲು ಪ್ರಧಾನಿ ನರೇಂದ್ರ ಮೋದಿ ಏ.8ರಂದು ಹೈದರಬಾದ್‌ಗೆ ಭೇಟಿ ನೀಡಲಿದ್ದಾರೆ.

ಕೇಂದ್ರ ಸರ್ಕಾರ ಸುಮಾರು ₹11,300 ಕೋಟಿ ವೆಚ್ಚದ ಯೋಜನೆಗಳನ್ನು ಹೈದರಬಾದ್‌ ನಲ್ಲಿ ಜಾರಿಗೊಳಿಸಿದೆ.

ಸಿಕಂದರಬಾದ್‌-ತಿರುಪತಿ ನಡುವೆ ವಂದೇ ಭಾರತ್‌ ರೈಲು ವ್ಯವಸ್ಥೆ, ಬಿಬಿನಗರದಲ್ಲಿ ಏಮ್ಸ್‌ ಆಸ್ಪತ್ರೆ ನಿರ್ಮಾಣ ಹಾಗೂ ತೆಲಂಗಾಣ-ಆಂಧ್ರದ ನಡುವೆ ರಾಷ್ಟ್ರೀಯ ಹೆದ್ದಾರಿ ಹೀಗೆ ಹಲವು ಪ್ರಮುಖ ಯೋಜನೆಗಳನ್ನು ಹೈದರಬಾದ್‌ನಲ್ಲಿ ಅನುಷ್ಠಾನ ಗೊಳಿಸಲಾಗಿದೆ. ಈ ಎಲ್ಲ ಯೋಜನೆಗಳ ಉದ್ಘಾಟನೆ ಮತ್ತು ಶಂಕು ಸ್ಥಾಪನೆಗೆ ಪ್ರಧಾನಿ ಹೈದರಬಾದ್‌ಗೆ ಭೇಟಿ ನೀಡಲಿದ್ಧಾರೆ ಎಂದು ಪಿಟಿಐ ವರದಿ ಮಾಡಿದೆ.

ತಿರುಪತಿ ಯಾತ್ರಾತ್ರಿಗಳಿಗೆ ಉಪಯೋಗವಾಗಲೆಂದು ಸಿಕಂದರಬಾದ್‌-ತಿರುಪತಿ ನಡುವೆ ವಂದೇ ಭಾರತ್‌ ರೈಲು ಯೋಜನೆ ಯನ್ನು ಮೂರು ತಿಂಗಳ ಅಲ್ಪಾವಧಿಯಲ್ಲಿ ನಿರ್ಮಿಸ ಲಾಗಿದೆ. ಈ ಯೋಜನೆಗೆ ಸುಮಾರು ₹720 ಕೋಟಿ ಕೇಂದ್ರ ಸರ್ಕಾರ ವ್ಯಯಿಸಿತ್ತು.ಏಪ್ರಿಲ್‌ 8ರಂದ ಈ ರೈಲು ಯೋಜನೆಗೆ ಪ್ರಧಾನಿ ಯಿಂದ ಚಾಲನೆ ದೊರೆಯಲಿದೆ. ಇದೇ ವೇಳೆ 13 ಹೊಸ ಮಲ್ಟಿ-ಮಾಡೆಲ್‌ ಟ್ರಾನ್ಸ್‌ಪೋರ್ಟ್‌ ಸರ್ವೀಸ್‌ ಸೇವೆಗಳಿಗೂ ಚಾಲನೆ ನೀಡಲಿದ್ದಾರೆ.

ಹೈದರಬಾದ್‌ನ ಬಿಬಿನಗರದಲ್ಲಿ ಸುಮಾರು ₹1350 ಕೋಟಿ ವೆಚ್ಚದಲ್ಲಿ ಏಮ್ಸ್‌ ಆಸ್ಪತ್ರೆ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಯೋಜಿಸಿದ್ದು,ಈ ಯೋಜನೆಯ ಶಂಕು ಸ್ಥಾಪನೆಯನ್ನು ಪ್ರಧಾನಿ ಮೋದಿ ಮಾಡಲಿದ್ದಾರೆ. ಇದರ ಜೊತೆಗೆ ₹7,850 ಕೋಟಿ ವೆಚ್ಚದಲ್ಲಿ ತೆಲಂಗಾಣ-ಆಂಧ್ರಪ್ರದೇಶದ ನಡುವೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಈ ಯೋಜನೆಗೂ ಶಂಕು ಸ್ಥಾಪನೆಯನ್ನು ಪ್ರಧಾನಿ ನೆರವೇರಿಸಲಿದ್ಧಾರೆ.

ಹೈದರಬಾದ್‌ ಭೇಟಿ ನಂತರ ಪ್ರಧಾನಿ ನರೇಂದ್ರ ಮೋದಿ ತಮಿಳುನಾಡು ಭೇಟಿ ಮಾಡಲಿದ್ದಾರೆ.