Thursday, 28th November 2024

ಮೇಲೊಂದು ಹಣ್ಣಿನ ಸ್ವರ್ಗ ನಿರ್ಮಿಸಲು ಹೊರಡರೇನೋ !

ಸುಪ್ತ ಸಾಗರ

rkbhadti@gmail.com

ಎಂಟು ದಶಕಗಳ ಹಿಂದೆ ಆ ಜಾಗವನ್ನು ನೋಡಿದರೆ ಅದೊಂದು ಬೋಳು ಗುಡ್ಡ. ಕರಾವಳಿ ಭಾಗದ ವಿಚಿತ್ರ ಕಲ್ಲುಗಳನ್ನು ಹಾಸಿ-ಹೊದ್ದುಕೊಂಡು ಮಲಗಿದ್ದ ಆ ದಿಬ್ಬದ ಮೇಲೆ ಕೃಷಿ ಹಾಗಿರಲಿ, ಹುಲ್ಲು ಹುಟ್ಟುವುದೂ ವಿರಳವೇ. ಮಲೆನಾಡು, ಕರಾವಳಿಯ ಭಾಗದಲ್ಲಿ ಕಂಡು ಬರುವ ಜಂಬಿಟ್ಟಿಗೆಯ ಕಲ್ಲುಗಳ ಗಣಿಯಾಗಿತ್ತು ಅದು.

ನೀರನ್ನಂತೂ ಆ ಗುಡ್ಡ ಕಂಡದ್ದೇ ಇಲ್ಲ. ಮಳೆ ಬಿದ್ದಾಗ ಮಾತ್ರ ಒಂದಷ್ಟು ಹಸಿರಾಡು ತ್ತಿದ್ದುದು ಬಿಟ್ಟರೆ, ಬುಕ್ಕೆ, ಪರಗೆ, ಕವಳಿ ಯಂಥ ಚಿಕ್ಕ ಚಿಕ್ಕ ಕಂಟಿಗಳೇ ಅಲ್ಲಿನ ಬಹು ದೊಡ್ಡ ಸಸ್ಯ ಸಂಕುಲ. ಇವತ್ತು ಅದೇ ಜಾಗದಲ್ಲಿ ಇಲ್ಲದ ಹಣ್ಣುಗಳಿಲ್ಲ. ಕಾಣದ ಸಸ್ಯ ವೈವಿಧ್ಯಗಳಿಲ್ಲ. ಬಿದಿರು ಮೆಳೆಯಂತೂ ದಟ್ಟವಾಗಿ ಹಬ್ಬಿ, ಬಿಸಿಲಿನ ಒಂದಿನಿತು ಕಿರಣವೂ ತೂರಿ ಬಂದು ನೆಲ ತಾಕದಂತೆ ಸವಾಲೊಡ್ಡಿ ನಿಂತಿವೆ. ಸುತ್ತೆಲ್ಲ ತಂಪು ತಂಪು. ಹಿಂದೆ ಅಲ್ಲಿ ಕಲ್ಲು ಕಡಿದು, ಜೀವನ ಸವೆಸಿ, ಮುಕ್ಕಾಗಿ ಮುದುಕರಾಗಿ ಮಡಿದ ಕೂಲಿ ಕಾರ್ಮಿಕರ ಮಕ್ಕಳು-ಮೊಮ್ಮಕ್ಕಳೆಲ್ಲ ಇದೀಗ ಆ ತಂಪಿನಡಿಯೇ ದುಡಿದು ಹೊಟ್ಟೆ ತಣ್ಣಗಾಗಿಸಿಕೊಳ್ಳು ತ್ತಿದ್ದಾರೆ.

ಸಮೃದ್ಧ ಬದುಕು ಕಂಡುಕೊಂಡಿದ್ದಾರೆ. ನೂರು ಎಕರೆಯ ಜಾಗದಲ್ಲಿ ಸುತ್ತಮುತ್ತಿನ ನೂರಾರು ಕುಟುಂಬಗಳು ಅನ್ನವನ್ನು ಕಾಣುತ್ತಿವೆ. ಮೂಡುಬಿದಿರೆಯಿಂದ ಕಾರ್ಕಳಕ್ಕೆ ಸಾಗುವ ಹೆದ್ದಾರಿಯ ಪಕ್ಕದಲ್ಲೇ ಇರುವ ಬೆಳುವಾಯಿಯ ಆ ಗುಡ್ಡದ ಮಡಿಲ ‘ಹಣ್ಣುಗಳ ಸಾಮ್ರಾಜ್ಯ’ದಲ್ಲೀಗ ಮೂರು ದಿನಗಳಿಂದ ನೀರವದ್ದೇ ಸಾಮ್ರಾಜ್ಯ. ಅದರ ಅಧಿಪತಿ, ಕಾಯಕಯೋಗಿ  ಡಾ.ಲಿವಿಂಗ್‌ ಸ್ಟನ್ ಚಂದ್ರಮೋಹನ ಸೋನ್ಸ್ -ಡಾ.ಎಲ್.ಸಿ.ಸೋನ್ಸ್ ಮೊನ್ನೆ ಮೊನ್ನೆಯಷ್ಟೇ (ಏಪ್ರಿಲ್ ೫ರ ಬುಧವಾರ) ತಮ್ಮ ೯೦ರ ವಸಂತದಲ್ಲಿ ಬದಕನ್ನು ಮುಗಿಸಿ ಹೊರಟುಬಿಟ್ಟರು.

ಕೃಷಿ ಕ್ಷೇತ್ರವನ್ನೇ ಉಸಿರಾಗಿಸಿಕೊಂಡು, ತಮ್ಮಿಡೀ ಬದುಕನ್ನೇ ಮಣ್ಣಿನ ಕಾಯಕಕ್ಕೆ ಮುಡಿಪಾಗಿಟ್ಟಿದ್ದ ಡಾ.ಸೋನ್ಸ್ ಅವರ ಆ
ಭವ್ಯಾತಿಭವ್ಯ ಹೊನ್ನಿನ ನೆಲವನ್ನು ನಾನು ಕಂಡದ್ದು, ಆರು ವರ್ಷದ ಕೆಳಗೆ. ಕೃಷಿ-ಪರಿಸರಕ್ಕೆ ಮೀಸಲಾದ ಶುದ್ಧ ಕನ್ನಡದ
ಮ್ಯಾಗಜಿನ್ ‘ಹಸಿರುವಾಸಿ’ಯನ್ನು ಆರಂಭಿಸಬೇಕೆಂಬ ಕನಸು ಹೊತ್ತು, ಕೃಷಿಯ ಸಾಧ್ಯತೆ-ಸಾಧಕರ ಬಗೆಗೆ ತಿಳಿಯಬೇಕೆಂದು ರಾಜ್ಯ ಸುತ್ತಲು ಹೊರಟಿದ್ದೆ. ಡಾ. ಸೋನ್ಸ್‌ರ ಹಣ್ಣಿನ ಕೃಷಿಯ ಕುರಿತಾಗಿಯೂ ಅರಿಯಲು, ಕುತೂಹಲದೊಂದಿಗೆ ಏಪ್ರಿಲ್ ೧೮ರ(೨೦೧೭) ಮುಂಜಾನೆ ಮೂಡಬಿದಿರೆಗೆ ಹೋಗಿ ಇಳಿದು, ಅಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ‘ಉತ್ತರಾಧಿಕಾರಿ ’ ವಿವೇಕ್ ಆಳ್ವರ ಗೆಸ್ಟ್‌ಹೌಸ್‌ನ ಆತಿಥ್ಯದಲ್ಲಿ ಒಂದು ದಿನ ಕಳೆದು, ಮರುದಿನ ಬೆಳಗ್ಗೆಯೇ ಹತ್ತಿರದ ‘ಸೋನ್ಸ್ ಫಾರ್ಮ್’ ಸುತ್ತಾಡಿ ಬರಲು
ಹೊರಟಿದ್ದೆ.

ಅಲ್ಲಿಂದ ಬರೋಬ್ಬರಿ ೪೦ ಕಿ.ಮೀ.ದೂರದ ಆ ಫಾರ್ಮ್‌ನ ಗೇಟಿನೆದುರು ನಿಂತಾಗ ಬಿಸಿಲೇರಲಾರಂಭಿಸಿತ್ತು. ಮೊದಲೇ ಕರೆ ಮಾಡಿದ್ದರಿಂದ ನನ್ನ ನಿರೀಕ್ಷೆಯಲ್ಲಿಯೇ ಅವರಿದ್ದಂತಿತ್ತು. ಗೇಟಲ್ಲೇ ಆತ್ಮೀಯವಾಗಿ ಸ್ವಾಗತಿಸಿ, ಕರೆದುಕೊಂಡು ಹೋಗಿ ಅವಲಕ್ಕಿ, ಮಜ್ಜಿಗೆ ಕೊಟ್ಟರು. ಸರಿಸುಮಾರು ಒಂದು ತಾಸು ಹತ್ತಾರು ವಿಷಯಗಳ ಬಗೆಗೆ ಹರಟೆಯ ಬಳಿಕ ಅವರ ಸಹಾಯಕ ರೊಬ್ಬರನ್ನು ಜತೆಗಿಟ್ಟುಕೊಂಡು ತೋಟ ನೋಡಲು ಹೊರಟಿದ್ದಷ್ಟೇ ಗೊತ್ತು. ಹಸುರಿನ ರಾಶಿಯಲ್ಲಿ ನಾಲ್ಕು ತಾಸು ಕಳೆದು ಹೋಗಿದ್ದು ಗೊತ್ತೇ ಆಗಲಿಲ್ಲ. ಕಣ್ಣು ಹಾಯಿಸಿ ದೆಡೆಯಲ್ಲೆಲ್ಲ ಹಸುರೇ ಹಸುರು.

ಇದೇ ಗುಡ್ಡದಲ್ಲಿ ಕಲ್ಲು ಕಡಿಯುತ್ತಿದ್ದುದು ಎಂದರೆ ನಂಬಲಿಕ್ಕೇ ಆಗದಷ್ಟು ಬದಲಾವಣೆ. ೭೦-೭೫ ವರ್ಷಗಳಲ್ಲಿ ಸಂಪೂರ್ಣ
ಪೊರೆಕಳಚಿದಂತೆ ರೂಪಾಂತರ ಕಂಡಿತ್ತು ಆ ಪ್ರದೇಶ. ಈ ಪಯಣವನ್ನು ಸ್ವತಃ ಡಾ. ಸೋನ್ಸ್ ವಿವರಿಸತೊಡಗಿದ್ದರು. ಬಿಸಿ ಬಿಸಿ ಕುಚ್ಚಲಕ್ಕಿ ಅನ್ನವನ್ನು ಉಣ್ಣುತ್ತಲೇ ಕೇಳುತ್ತಿದ್ದೆ. ಮೊಟ್ಟ ಮೊದಲು ಅಲ್ಲಿ ಕಾಲಿಟ್ಟದ್ದು ಬಾಸೆಲ್ ಮಿಷನ್ನಿನವರು. ಇಂಥದ್ದೊಂದು ಪ್ರದೇಶವನ್ನು ‘ಕೃಷಿ’ಗಾಗಿ ಆಯ್ಕೆ ಮಾಡಿಕೊಂಡಾಗ ನಕ್ಕವರೇ ಹೆಚ್ಚು. ‘ಮಂಡೆ ಸರಿ ಇದೆಯಾ ಇವರಿಗೆ’ ಎಂದು ಆಡಿಕೊಂಡವರೆಷ್ಟೋ? ಮಳೆಗಾಲದಲ್ಲಿ ಜಂಬಿಟ್ಟಿಗೆ ಮಣ್ಣಿನ ಮೇಲೆ ಬೀಳುವ ಒಂದು ಹನಿಯೂ ಅಲ್ಲಿ ನಿಲ್ಲುತ್ತಿರಲಿಲ್ಲ.

ಅಂತಹ ಪರಿಸ್ಥಿತಿಯಲ್ಲಿ ಡಾ. ಸೋನ್ಸ್‌ರ ತಂದೆ ಆಲ್ರೆಡ್ ಸೋನ್ಸ್ ಅವರು ಇಲ್ಲಿ ಕೃಷಿಯ ಕನಸು ಹೊತ್ತು ಅಡಿಯಿಟ್ಟವರು. ಹಳೆಯದನ್ನು ಮೆಲುಕುತ್ತಿದ್ದರು ಡಾ. ಎಲ. ಸಿ. ಸೋನ್ಸ್. ‘ಶುರುವಿಗೆ ಕನಿಷ್ಠ ನೆಟ್ಟ ಆರೇಳು ತೆಂಗಿನ ಗಿಡಗಳೂ ಏಳಲಿಲ್ಲ. ಹಾಗೆ
ನೋಡಿದರೆ, ಇಂಥ ಕಲ್ಲು ಮಣ್ಣಿನಲ್ಲಿ ತೆಂಗು ಚೆನ್ನಾಗಿ ಬರಬೇಕು. ಕೊನೆಗೆ ಅಪ್ಪ ಹಾಕಿದ್ದು ಅನಾನಸ್ ಸಸಿಗಳನ್ನು. ಅದೇ ಆರಂಭದಲ್ಲಿ ಕೈ ಹಿಡಿದದ್ದು. ಅಲ್ಲಿಂದ ಆರಂಭವಾದ ಪ್ರಯೋಗಗಳು ಇಂದಿಗೂ ನಿಲ್ಲಲಿಲ್ಲ. ೪೬ ಎಕರೆ ಇದ್ದದ್ದು, ಇದೀಗ ನೂರು ಎಕರೆಗೆ ವಿಸ್ತಾರವಾಗಿದೆ.

ಅನಾನಸ್ ಇಂದಿಗೂ ನಮ್ಮ ಮುಖ್ಯ ಬೆಳೆಯೇ. ಅದರ ಜತೆಜತೆಗೆ ಮಾವು, ಚಿಕ್ಕು, ಕರಿಮೆಣಸು, ದಾಲ್ಚಿನ್ನಿ, ಜಾಯಿಕಾಯಿ, ತೆಂಗಿನಕಾಯಿ, ಗೇರು, ಕೊಕ್ಕೊ, ವೆನಿ ಎಲ್ಲವೂ ಬಂದವು. ಅಂಥ ಬೆಳೆ ವೈವಿಧ್ಯದಿಂದ ವರ್ಷವಿಡೀ ನಮ್ಮ -ರ್ಮನ ಅಷ್ಟೂ
ನೌಕರರಿಗೆ ವರ್ಷವಿಡೀ ಕೆಲಸ ಇರುತ್ತದೆ. ಜತೆಗೆ ಲಾಭವೂ. ಈವರೆಗೆ ಕೃಷಿಯಿಂದ ನಷ್ಟ ಎಂಬುದನ್ನೇ ಕಂಡಿಲ್ಲ. ವರ್ಷದಿಂದ ವರ್ಷಕ್ಕೆ ಆದಾಯ ಹೆಚ್ಚುತ್ತಲೇ ಇದೆ’ ಎಂದು ಆರು ವರ್ಷಗಳ ಹಿಂದೆಯೇ ಡಾ. ಸೋನ್ಸ್ ಹೆಮ್ಮೆಯಿಂದ ಹೇಳಿಕೊಂಡಿದ್ದರು.
ವಿದೇಶಿ ಹಣ್ಣುಗಳ ಕೃಷಿ ಆಸಕ್ತಿಯ ಬಗೆಗೆ ಕೇಳಿದ್ದಕ್ಕೆ ಮತ್ತೆ ಹಿಂದಕ್ಕೆ ಜಾರಿದರು ತಾತ.

ಮೊದಲು ಓದು ಆರಂಭಿಸಿದ್ದೆಲ್ಲ ಬೆಳುವಾಯಿಯ ಮಿಷನ್ ಶಾಲೆಯಲ್ಲಿ. ನಂತರ ಮೂಡಬಿದ್ರೆಯ ಜೈನ್ ಹೈಸ್ಕೂಲ್,
ಅಲ್ಲಿಂದ ಮುಂದೆ ಮಂಗಳೂರಿನ ಅಲೋಶಿಯಸ್ ಕಾಲೇಜಲ್ಲಿ ಪದವಿ ಮುಗಿಸಿದ ಮೇಲೆ ಸೋನ್ಸ್ ತಾತನಿಗೆ ಸಸ್ಯ ಶಾಸದಲ್ಲಿ ಇನ್ನಷ್ಟು ಓದಬೇಕೆನಿಸಿತಂತೆ. ಮುಂದೆ ನೇರವಾಗಿ ಅಡ್ಮಿಷನ್ ಪಡೆದದ್ದು, ಅಮೆರಿಕದ ಮೊಂಟಾನಾ ವಿಶ್ವವಿದ್ಯಾಲಯಕ್ಕೆ. ಅಲ್ಲಿ ಐದು ವರ್ಷ ಸಸ್ಯಶಾಸ್ತ್ರದಲ್ಲಿ ಸಂಶೋಧನೆ ಕೈಗೊಂಡು ‘ಡಾಕ್ಟರ್ ಸೋನ್ಸ್’ ಆಗಿ ಮರಳುವಾಗಲೇ ಹೊತ್ತು ತಂದದ್ದು ವಿದೇಶಿ ಹಣ್ಣಿನ ಗಿಡಗಳ ಕನಸನ್ನು.

ತಮ್ಮ ಕರ್ಮಭೂಮಿ ಬೆಳುವಾಯಿಯನ್ನು ಸಸ್ಯಕಶಿಯಾಗಿಸಬೇಕೆಂದು ಹಠ ತೊಟ್ಟರು. ಅಪ್ಪನ ಸೋನ್ಸ್ ಫಾರ್ಮ ಅನ್ನು ಮಾದರಿ ಸಂಶೋಧನಾ ಭೂಮಿಯಾಗಿಸಬೇಕೆಂದು ಯೋಜಿಸಿದರು. ಮುಂದಿನ ೫೦ ವರ್ಷ ಮಣ್ಣಿನ ನಂಟು ಬಿಡದೇ ದುಡಿದರು.
ನೂರಾರು ಪ್ರಯೋಗ, ಸಂಶೋಧನೆಗಳು ನೀರು-ನೆಲಕ್ಕೆ ಸಂಬಂಧಿಸಿ ನಡೆದೇ ಹೋಗಿತ್ತು. ಬೆಳುವಾಯಿ ವಿಶ್ವ ವಿಖ್ಯಾತವಾಗಿ ಬೆಳೆದು ನಿಂತಿತ್ತು.

೧೯೨೦ರ ದಶಕದಲ್ಲಿ ಇವರಪ್ಪ ಸ್ಥಾಪನೆ ಮಾಡಿದ್ದ ಸೋನ್ಸ್ ಫಾರ್ಮ್ ಈಗ ಜಾಗತಿಕ ಸಸ್ಯ ಸಂಶೋಧನಾ ಕೇಂದ್ರ. ಡಾ. ಸೋನ್ಸ್ ನಮ್ಮ ನಡುವೆ ಬದುಕಿದ್ದ ಅತಿಶ್ರೇಷ್ಠ ನೀರು ಹಾಗೂ ಕೃಷಿಯ ವಿಜ್ಞಾನಿ ಎಂಬುದರಲ್ಲಿ ಮತ್ತೊಂದು ಮಾತೇ ಇಲ್ಲ. ಅಲ್ಲೀಗ ದಕ್ಷಿಣ ಅಮೆರಿಕದ ಎಗ್ -ಟ್, ಅಮೆಜಾನ್ ಕಾಡುಗಳಲ್ಲಿನ ಡೀಸೆಲ್ ಟ್ರೀ, ರಂಬುಟಾನ್, ಡುರಿಯನ್, ಲ್ಯಾಂಗ್‌ಸಾಟ್, ಲೊಂಗಾನ್, ಮಲಯ ಸೇಬು, ರಾಂಬಿ, ಅಬಿಯು, ಬಾರ್ಬಡೋಸ್ ಚೆರಿ, ಸುರಿನಾಮ್ ಚೆರಿ, ರಂಗೂನ್ ಚೆರಿ, -ಷನ್ ಹಣ್ಣು,
ಪವಾಡ ಹಣ್ಣು, ಹಾವು ಹಣ್ಣು, ಡ್ರಾಗನ್ ಹಣ್ಣು … ಹೀಗೆ ಹತ್ತಾರು ಜಾತಿಯ, ಹತ್ತಾರು ದೇಶಗಳ ಹಣ್ಣುಗಳು ನಳನಳಿಸುತ್ತಿವೆ.

ಕೇವಲ ದಕ್ಷಿಣ ಕನ್ನಡ(ಅವಿಭಜಿತ), ಕರ್ನಾಟಕಕ್ಕೆ ಅಲ್ಲ, ಭಾರತದ ಕೃಷಿ ಕ್ಷೇತ್ರಕ್ಕೇ ಇಂಥವೆಲ್ಲ ವಿದೇಶಿ ಹಣ್ಣುಗಳನ್ನು ಪರಿಚಯಿಸಿದವರೇ ಸೋನ್ಸ್ ತಾತ. ವಿಮಾನದ ಮೂಲಕ ವಿದೇಶದ ಹಣ್ಣಿನ ಗಿಡಗಳನ್ನು ತರಿಸಿ ಅವುಗಳನ್ನು ನೆಟ್ಟು ಬೆಳೆಸಿದ್ದೇನು ಸಣ್ಣ ಸಾಹಸವಲ್ಲ. ಎಲ್ಲವೂ ಈ ನೆಲದಲ್ಲಿ ಬೆಳೆಯುತ್ತದೆ ಎಂಬ ಗ್ಯಾರಂಟಿ ಇಲ್ಲ. ಬೆಳೆದರೂ ಚಟಕ್ಕೆ ಬೆಳೆದುಕೊಳ್ಳ ಬೇಕಷ್ಟೇ, ಲಾಭವನ್ನಂತೂ ತಂದುಕೊಡಲಿಕ್ಕಿಲ್ಲ ಎಂಬ ಕಾಲದಲ್ಲಿ ಸೋನ್ಸ್ ಹಿಂದೆ ಮುಂದೆ ನೋಡದೇ ಪ್ರಯೋಗಕ್ಕಿಳಿದಿದ್ದರು.
ವಿದೇಶದಿಂದ ಪ್ರತಿಯೊಂದು ಹೊಸ ಸಸ್ಯ ತರಿಸುವಾಗ, ಕ್ವಾರಂಟೈನ್ ನಿಯಮಗಳ ಪಾಲನೆ ಮಾಡಿ, ಅದನ್ನು ಇಲ್ಲಿನ ವಾತಾವರಣಕ್ಕೆ ಹೊಂದಿಸುವಾಗ, ಆನಂತರ ಅದನ್ನು ಕಾಪಾಡಿ, ಬೆಳೆಸಿ, ಅಭಿವೃದ್ಧಿಪಡಿಸುವಾಗ ಪಟ್ಟ ಪಾಡು ಅವರೊಬ್ಬರಿಗೇ ಗೊತ್ತು.

ಇಲ್ಲೇ ಬೇರೆ ಊರಿನ, ಬೇರೆ ಸಂಸ್ಕೃತಿಯ ಹೆಣ್ಣು ತಂದು ಮನೆಯಲ್ಲಿ ಹೊಂದಿಕೊಳ್ಳುವುದೇ ಕಷ್ಟವಿರುವಾಗ ಎಲ್ಲಿಯದೋ
ಹಣ್ಣಿನ ಗಿಡವನ್ನು ಇಲ್ಲಿ ನೆಟ್ಟು ಬೆಳೆಸುವುದು ಸುಲಭವೇ? ಒಂದು ಕಾಲದಲ್ಲಿ ಭಾರತದ ಮಣ್ಣಿನಲ್ಲಿ ಬೆಳೆಯಲು ಸಾಧ್ಯವೇ ಇಲ್ಲ ಎಂದು ನಂಬಿದ್ದ ವೆನಿಲಾ, ಡ್ರಾಗನ್‌ಗಳು ಇವತ್ತು ನಮ್ಮ ರೈತರ ಪಾಲಿಗೆ ಅತ್ಯಂತ ಲಾಭದಾಯಕ ವಾಣಿಜ್ಜಿಕ ಬೆಳೆ. ಇಂಥ ಹೆಸರೇ ಕೇಳಿರದ ಹಣ್ಣುಗಳನ್ನು ವಿದೇಶದಿಂದ ಬೆಳುವಾಯಿಗೆ ತರಿಸಿ ನೆಟ್ಟದ್ದಷ್ಟೇ ಅಲ್ಲ, ಅವು ನಮ್ಮಲ್ಲಿ ಚೆನ್ನಾಗಿ ಬರುತ್ತವೆ ಎಂಬುದನ್ನು ತಾವು ಕಂಡುಕೊಂಡ ಮೇಲೆ, ಸಸ್ಯಗಳನ್ನು ಅಭಿವೃದ್ಧಿ ಮಾಡಿ, ರೈತರಿಗೆ ಹಂಚಿದರು. ಅಷ್ಟಾದರೆ ಸಾಕೆ? ಬೆಳೆದ ಹಣ್ಣುಗಳು ರೈತನ ಹೊಟ್ಟೆ ತುಂಬಿಸಬೇಕಲ್ಲವೇ? ಮತ್ತೆ ಪ್ರಯೋಗಕ್ಕಿಳಿದರು.

ತಮ್ಮ ತೋಟದ ಉತ್ಪನ್ನಗಳ ಮೌಲ್ಯವರ್ಧನೆ ಮಾಡಿದರು. ಅದಕ್ಕೆ ಮಾರುಕಟ್ಟೆಯನ್ನು ತೋರಿಸಿದರು. ಹತ್ತಾರು ಜಾತಿಯ ಹಣ್ಣುಗಳ ತಿರುಳನ್ನು ಸಂಸ್ಕರಣೆ ಮಾಡಿ ಅವುಗಳ ಪಲ್ಪ್, ಜ್ಯೂಸ್, ಜಾಮ್ ಮೊದಲಾದವುಗಳನ್ನು ತಯಾರಿಸಿ ಕೃಷಿ ಉತ್ಪನ್ನಗಳಿಗೆ ಬಹುದೊಡ್ಡ ಮಾರ್ಕೆಟ್ ಹುಡುಕಿದರು. ಬೆಳೆಯ ಬಗ್ಗೆ ಮಾಹಿತಿ ನೀಡಲಿಕ್ಕೆಂದೇ ರೈತರಿಗೆ, ಅಧ್ಯಯನಾಸಕ್ತರಿಗೆ, ಕೃಷಿ ವಿಜ್ಞಾನಿಗಳಿಗೆ ತಮ್ಮ ತೋಟವನ್ನೇ ಅಧ್ಯಯನ ಕೇಂದ್ರವಾಗಿಸಿ, ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸಿದರು. ಜನ ಬರಲಾಂಭಿಸಿದರು. ಅವರ ಆಸಕ್ತಿ ಗಮನಿಸಿ ದರು. ವಾರಾಂತ್ಯದಲ್ಲಿ ಸೋನ್ಸ್ ಫಾರ್ಮ್ ಪ್ರವಾಸಿ ತಾಣವಾಗತೊಡಗಿತು.

ಸ್ವಲ್ಪವೂ ಬೇಸರಿಸಿಕೊಳ್ಳಲಿಲ್ಲ ತಾತ. ಅವರಿಗಾಗಿಯೇ ಸೂಕ್ತ ಏರ್ಪಾಟು ಮಾಡಲಾರಂಭಿಸಿದರು. ತಮ್ಮ ತೋಟದ ಒಂದು ಮೂಲೆಗೆ ತೋಟಕ್ಕೆ ಬರುವವರಿಗಾಗಿಯೇ ನೆರಳು ಒದಗಿಸಲು ಬಿದಿರು ಮೆಳೆಗಳನ್ನುಬೆಳೆಸಿದರು. ಬರುವರಿಗೆ ಬಾಯಾರಿಕೆ, ಹಸಿವು ನೀಗಿಸಲು ವ್ಯವಸ್ಥೆ ಕೈಗೊಂಡರು. ದೇಶ-ವಿದೇಶಗಳಿಂದ ಬರುವ ಅಧ್ಯಯನಾಕಾಂಕ್ಷಿಗಳಿಗೆ ಉಳಿದುಕೊಳ್ಳಲು ಸುಸಜ್ಜಿತ ಅತಿಥಿಗೃಹ ಕಟ್ಟಿದರು. ಕೇವಲ ಕೃಷಿಕರಷ್ಟೇ ಅಲ್ಲ, ಇದೀಗ ಮೂಡಬಿದಿರೆಯ ಸಾವಿರಕಂಬದ ಬಸದಿ ಮತ್ತು ಕಾರ್ಕಳದ ಗೋಮಟೇಶ್ವರನ ನೋಡಲು ಬರುವ ಮಂದಿಗೂ ಇನ್ನೊಂದು ಪಿಕ್ನಿಕ್, ಪ್ರವಾಸಿ ತಾಣವಾಗಿ ಸೋನ್ಸ್ ಫಾರ್ಮ್ ಅಭಿವೃದ್ಧಿ ಹೊಂದಿದೆ.

ಡಾ. ಸೋನ್ಸ್ ಅವರ ಕೃಷಿಯ ಮಾದರಿಗಳೇ ವಿಭಿನ್ನ. ಅವರು ಹೇಳುತ್ತಿದ್ದ ಪ್ರಕಾರ ತೋಟದ ಮಣ್ಣಿಗೆ ಸೂಕ್ತ ಬೆಳೆಗಳನ್ನು ಗುರುತಿಸಿಕೊಳ್ಳುವ ಕಾರ್ಯ ರೈತರಿಂದ ಮೊದಲು ಆಗಬೇಕು. ಯಾವತ್ತಿಗೂ ಒಂದೇ ಬೆಳೆಯನ್ನು ನೆಚ್ಚಿಕೊಳ್ಳದೆ ವರ್ಷವಿಡೀ ಆದಾಯ ಕೊಡಬಲ್ಲ ವಿಭಿನ್ನ  ಕಾಲದ, ಮೂರ್ನಾಲ್ಕು ಬೆಳೆ ಬೆಳೆಯಬೇಕು. ಒಂದೇ ಪದ್ಧತಿ ಕೂಡ ಸರಿಯಲ್ಲ. ಹೊಸ ಪ್ರಯೋಗಗಳೇ ಸುಸ್ಥಿರ, ಸ್ವಾವಲಂಬಿ ಕೃಷಿಗೆ ಆಧಾರ. ಇಷ್ಟೆಲ್ಲದರ ನಂತರವೂ ರೈತ ತನ್ನ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮಾಡುವುದನ್ನು ಕಲಿಯದಿದ್ದರೆ, ಅವಕಾಶ ಬಳಸಿ ಹೊಸ ಆದಾಯ ಮೂಲಗಳನ್ನು ಹುಟ್ಟು ಹಾಕಿಕೊಳ್ಳದಿದ್ದರೆ ಎಷ್ಟೇ ಒಳ್ಳೆಯ
ಕೃಷಿ ಮಾಡಿದರೂ ಪ್ರಯೋಜನವಿಲ್ಲ.

ಹೀಗೆ ಕೇವಲ ಉಪದೇಶ ಕೊಡುತ್ತಿರಲಿಲ್ಲ ಅವರು. ಲಾಭದಾಯಕ ಕೃಷಿ ಮಾಡುವುದು ಹೇಗೆ ಎಂಬುದರ ಬಗ್ಗೆ ಸ್ವತಃ ತಮ್ಮ ವಿಸ್ತಾರವಾದ ತೋಟದಲ್ಲಿ ಮಾಡಿ ತೋರಿಸಿದ್ದಾರೆ ಡಾ ಸೋನ್ಸ್.  ಪ್ರಯೋಗಗಳನ್ನು ಕೊನೆಯವರೆಗೂ ಅವರು ನಿಲ್ಲಿಸಿದವರಲ್ಲ. ಯಾವುದೋ ಸಸಿಗೆ ಇನ್ಯಾವುದೋ ಹಣ್ಣಿನ ಗಿಡವನ್ನು ತಂದು ಕಸಿ ಮಾಡಿದರು. ಹೊಸ ತಳಿಗಳನ್ನುಅಭಿವೃದ್ಧಿಪಡಿಸಿದರು. ಎಲ್ಲವನ್ನೂ ವೈಜ್ಞಾನಿಕವಾಗಿ ಪಾಲಿಸಿದರು. ದೇಸಿ ಕೃಷಿ-ವೈಜ್ಞಾನಿಕ ಕೃಷಿ ಎರಡನ್ನೂ ಬೆಸೆದರು. ತಾಂತ್ರಿಕತೆಯನ್ನು ಮೈಗೂಡಿಸಿದರು.

ಸಾವಯವ ಕೃಷಿಯನ್ನೂ ಅಳವಡಿಸಿದರು. ಒಟ್ಟಾರೆ ಎಂದಿಗೂ ಭೂಮಿ ಹಿಂದಿನಂತೆ ಬರಡಾಗದಂತೆ ಕಾಪಿಟ್ಟುಕೊಂಡು
ಬಂದರು. ಹೀಗೆ ಅನಾನಸು ಕೃಷಿಯಲ್ಲಿ ಕೈಗೊಂಡ ಪ್ರಯೋಗಗಳು ರಾಷ್ಟ್ರೀಯ ದಾಖಲೆ ಬರೆಯಿತು. ಅವತ್ತು ಅವರ ಫಾರ್ಮ್‌ನಲ್ಲಿ ತಿಂದ ಅನಾನಸಿನ ರುಚಿ ಹಾಗೂ ಸಿಹಿಯನ್ನು ನಾನಂತೂ ಜೀವನದಲ್ಲಿ ಎಲ್ಲೂ ಕಂಡಿರಲಿಲ್ಲ. ಇದನ್ನು ರಾಷ್ಟೀಯ ಕೃಷಿ ಮಿಷನ್ ಸಹ ಒಪ್ಪಿಕೊಂಡಿರುವಾಗ ನಮ್ಮದೇನು? ಹದಿನೆಂಟು ತಿಂಗಳಿಗೆ ಫಲ ಕೊಡುವ ತೆಂಗಿನ ಮರ,
ಹತ್ತಾರು ತಳಿಗಳ ಬಾಳೆ ಹಣ್ಣು, ಹಸಿರು ಅಡಕೆ, ಕಾಳುಮೆಣಸಿನ ವೈವಿಧ್ಯ, ರಸ ತುಂಬಿದ ನಿಂಬೆ, ಜಾಬೋಟಿ ಕಾಬಾ ಎಂಬ ವಿಶೇಷ ದ್ರಾಕ್ಷಿ, ನೂರಾರು ಔಷಧಿಯ ಸಸ್ಯಗಳು, ರಸಭರಿತ ಮಾವು, ಲೆಕ್ಕಕ್ಕೆ ಸಿಗದಷ್ಟು ತಳಿಯ ಪೇರಳೆ, ಅದೇನೋ ಡೀಸೆಲ್ ಮರವಂತೆ, ಎಲ್ಲೂ ಕಾಣದಷ್ಟು ಎತ್ತರಕ್ಕೆ ಬೆಳೆಯುವ ಬಿದಿರು, ಮಕಾಡಾಮಿಯ ನಟ್, ಪಪ್ಪಾಯ, ನೇರಳೆ, ಸಪೋಟ…
ಹೀಗೆ ಸೋನ್ಸ್ ಫಾರ್ಮನಲ್ಲಿ ಈಗ ಏನಿಲ್ಲ? ಕೃಷಿ ಎಂದ ಮೇಲೆ ನೀರಿರಲೇಬೇಕು.

ಆದರೆ ಆ ಗುಡ್ಡದಲ್ಲಿ ಅಷ್ಟು ಬೃಹತ್ ಪ್ರಮಾಣದ ಕೃಷಿಗೆ ಅಗತ್ಯ ಜಲಸಂಪನ್ಮೂಲ ಇರಲಿಲ್ಲ. ದೀರ್ಘವಾಗಿ ಯೋಚಿಸಿ, ಕೊನೆಗೆ ಸಮೀಪ ಮದಕದ ಕಡಲಕೆರೆ ಜೀರ್ಣೋದ್ಧಾರಕ್ಕೆ ನಿರ್ಧರಿಸಿದರು. ಅದಕ್ಕೊಂದು ಸಾಮೂಹಿಕ ಪ್ರಯತ್ನದ ಸ್ವರೂಪ ಕೊಟ್ಟರು.
ಭೂಗರ್ಭಶಾಸ್ತಜ್ಞರನ್ನು ಕರೆಯಿಸಿ ವಾಟರ್ ಡಿವೈನಿಂಗ್ ಮಾಡಿಸಿದರು. ಆದರೆ ನಿರೀಕ್ಷಿತ ಫಲ ಕೊಡದೇ ಹೋದಾಗ ಸ್ವತಃ ವಾಟರ್ ಡಿವೈನಿಂಗ್ ಅನ್ನು ಕಲಿತು, ಪರಿಣತಿ ಸಾಧಿಸಿ ಪ್ರಯೋಗಕ್ಕಿಳಿದರು.

ಕಲಿತದ್ದನ್ನು ತಮ್ಮೊಳಗೇ ಇಟ್ಟುಕೊಳ್ಳದೇ ತಾವೇ ತಂತಿ ಹಿಡಿದು ಸುತ್ತಮ್ತುಲಿನ ಜನರಿಗೆ ನೀರಿನ ಸೆಲೆ ಗುರುತಿಸಿಕೊಟ್ಟರು. ಇಸ್ರೇಲ್‌ನ ವಿಶ್ವ ನೀರಾವರಿ ಸಮ್ಮೇಳನಕ್ಕೆ ಹೋಗಿ ಬಂದು, ಅಲ್ಲಿನ ಮಾದರಿಯನ್ನು ಇಲ್ಲೂ ಪ್ರಯೋಗಿಸಿದರು. ಕೃಷಿಯ ಜತೆಗೆ ಸಾಮಾಜಿಕವಾಗಿಯೂ ತಮ್ಮನ್ನು ತಾವು ತೊಡಗಿಸಿಕೊಂಡರು. ಕೃಷಿ ಮತ್ತು ಆರೋಗ್ಯದ ಕುರಿತು ಜಾಗೃತಿ ಮೂಡಿಸಲು ಅಪ್ಪನ ಹೆಸರಲ್ಲಿ ‘ಆಲ್ರೆಡ್ ಸೋನ್ಸ್ ಫೌಂಡೇಶನ್’ ಸ್ಥಾಪಿಸಿದ್ದರು.

ಕೃಷಿ ಮ್ಯೂಸಿಯಂ ಒಂದನ್ನು ಸ್ಥಾಪಿಸಿ, ಅದರಲ್ಲಿ ಆಧುನಿಕ ಹಾಗೂ ಪುರಾತನ ನೂರಾರು ಕೃಷಿ ಉಪಕರಣಗಳನ್ನು ಸಂಗ್ರಹಿಸಿಟ್ಟಿದ್ದರು. ಅದಿನ್ನೂ ಅಧಿಕೃತವಾಗಿ ಉದ್ಘಾಟನೆಯಾಗಿರಲಿಲ್ಲ. ಅದಕ್ಕೊಂದು ವ್ಯವಸ್ಥಿತ ರೂಪ ಕೊಡುತ್ತಿದ್ದರು. ಅವರ ಬಗ್ಗೆ ಸ್ವತಃ ಕೃಷಿ ವಿಜ್ಞಾನಿ, ಹಿರಿಯ ಮಿತ್ರ ನರೇಂದ್ರ ರೈ ದೇರ್ಲ ಅವರು ಬರೆದಿರುವ ಪುಸ್ತಕ ‘ಸೋನ್ಸ್ ಫಾರ್ಮ್’  ಬಿಡುಗಡೆಗೆ ಸಿದ್ಧವಾಗಿತ್ತು.

ಇನ್ನೇನು ವಾರದಲ್ಲಿ ಅದು ನಮ್ಮೆಲ್ಲರ ಕೈಗೆ ಸಿಗಬೇಕಿತ್ತು. ಎಲ್ಲಕ್ಕಿಂತ ಹೆಚ್ಚಾಗಿ (ಸಾಯುವ) ಹಿಂದಿನ ದಿನವಷ್ಟೇ ಅವರು ೮೯ ಮುಗಿಸಿ ೯೦ಕ್ಕೆ ಕಾಲಿಟ್ಟಿದ್ದರು. ಕನಿಷ್ಠ ನೂರು ವರ್ಷ ಅವರು ಬದುಕಬೇಕಿತ್ತು. ಏಕೆಂದರೆ ಇನ್ನೂ ನೂರಾರು ಕನಸು ಅವರ ಕಣ್ಣಲ್ಲಿತ್ತು. ಅಷ್ಟರಲ್ಲಿ ಕಣ್ಮುಚ್ಚಿಬಿಟ್ಟರು. ಮೇಲೊಂದು ಹಣ್ಣಿನ ಸ್ವರ್ಗ ನಿರ್ಮಿಸುವ ಜರೂರತ್ತಿತ್ತೇನೋ?

ಸೋನ್ಸ್ ಫಾರ್ಮ್ ಸಂಪರ್ಕಕ್ಕೆ ದೂರವಾಣಿ; ೦೮೨೫೮- ೨೩೬೨೬೧