Sunday, 5th January 2025

ಮಹಿಳಾ ಮೀಸಲಾತಿಯ ರಾಜಕೀಯ ಪ್ರಹಸನ

ಅಭಿಮತ

ಜಯಶ್ರೀ ಕಾಲ್ಕುಂದ್ರಿ

ವಿಧಾನಸಭೆ ಮತ್ತು ಲೋಕಸಭೆಗಳಿಗೆ ಚುನಾವಣೆಗಳು ಘೋಷಣೆಯಾಗುತ್ತಿದ್ದಂತೆಯೇ, ರಾಜಕೀಯದಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಬೇಕಾಗಿರುವ ವಿಷಯವನ್ನು ಕುರಿತು ರಾಜಕೀಯ ಪ್ರಹಸನವೊಂದು ಆರಂಭವಾಗಿ ಬಿಡುತ್ತದೆ. ರಾಜಕೀಯ
ಪಕ್ಷಗಳ ನಿರ್ದೇಶನದಲ್ಲಿ ಮೂಡಿ ಬರುವ ಈ ಪ್ರಹಸನದಲ್ಲಿ ಸಕಾರಾತ್ಮಕ ಬದಲಾವಣೆ ಮತ್ತು ಫಲಿತಾಂಶಗಳೇನೂ ಕಾಣ ಸಿಗದು.

ವಾಹಿನಿಗಳಲ್ಲಿ, ಮಾಧ್ಯಮಗಳಲ್ಲಿ, ಮಹಿಳೆಯರ ಸಮಸ್ಯೆಗಳ ಪರಿಹಾರಕ್ಕೆ ಅನುಕಂಪ ತೋರುವಂತೆ ಅಭಿನಯಿಸುತ್ತಾ ಗಟ್ಟಿ ದನಿಯಲ್ಲಿ ಮಾತನಾಡುವ ರಾಜಕೀಯ ಪಕ್ಷಗಳು, ಮಹಿಳಾ ಮಸೂದೆ ಅಂಗೀಕಾರದ ವಿಷಯ ಬಂದಾಗ ಜಾಣ ಮೌನಕ್ಕೆ ಶರಣಾಗಿ ಬಿಡುತ್ತವೆ. ಮೀಸಲಾತಿ ತಂದು ನಾವೆಲ್ಲಾ ಮನೆಯಲ್ಲಿ ಕೂತಿರಬೇಕಾ? ನಮ್ಮ ಹೆಂಡತಿಯನ್ನು ರಾಜ ಕೀಯಕ್ಕೆ ಕಳಿಸಿ ನಾವು ಸೌಟು ಹಿಡೀಬೇಕಾ? ಎಂದು ವ್ಯಂಗವಾಡುತ್ತಾ ಪುರುಷ ಜನಪ್ರತಿ ನಿಧಿಗಳು ಒಕ್ಕೊರಲಿನಿಂದ ಪ್ರತಿಭಟಿಸುವಾಗ ಮಹಿಳಾ ಮೀಸಲು ಕರಡು ವಿಧೇಯಕ ತಿರಸ್ಕರಿಸಲ್ಪಡುವುದು ಅನಿವಾರ್ಯವಾಗುತ್ತದೆ.

ಮಹಿಳೆಯರಿಗಾಗಿ ವರ್ಷದಲ್ಲಿ ಒಂದು ದಿನ ಮಹಿಳಾ ದಿನದ ಆಚರಣೆ, ಕೇವಲ ಮಾಧ್ಯಮ ಗಳಿಗೆ, ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್ ಹಾಗೂ ವಾಟ್ಸಾಪ್‌ಗಳಲ್ಲಿ ಮಹಿಳಾಪರ ಲೇಖನ-ಸಂದೇಶಗಳಿಗೆ ಮಾತ್ರ ಮೀಸಲಾದರೆ ಸಾಕೇ? ೧೯೧೦ ರಲ್ಲಿ, ಡೆನ್ಮಾರ್ಕ್‌ನ ಕೋಪ ಹೇಗನ್ ನಲ್ಲಿ ನಡೆದ ಎರಡನೆಯ ಅಂತಾರಾಷ್ಟ್ರೀಯ ಸಾಮಾಜಿಕ ಮಹಿಳಾ ಸಮ್ಮೇಳನದ ಅಧ್ಯಕ್ಷೆಯಾದ ಕ್ಲಾರಾ ಜೆಟ್‌ಕಿನ್ ಅವರು ಮೊದಲಬಾರಿಗೆ ಮಹಿಳೆಯರಿಗೆ ಮತದಾನದ ಹಕ್ಕು ನೀಡಲೇಬೇಕೆಂದು ಪ್ರತಿಪಾದಿಸಿದರು.

ಆಕೆ ಮಂಡಿಸಿದ ನಿರ್ಣಯ ಸರ್ವಾನುಮತದಿಂದ ಅಂಗೀಕಾರವಾಗಿ, ವಿಶ್ವದೆಲ್ಲೆಡೆ ಮಹಿಳೆಯರಿಗೂ ಮತದಾನದ ಹಕ್ಕು ಸಿಗಲಾರಂಭಿಸಿತು. ಮಹಿಳಾ ಮತದಾರರ ಸಂಖ್ಯೆ ಹೆಚ್ಚಾಗುತ್ತಿದೆ. ಮಹಿಳೆಯರ ನಿರ್ದಿಷ್ಟ ಬೇಡಿಕೆಗಳನ್ನು ಪರಿಣಾಮಕಾರಿ
ಯಾಗಿ ಮಂಡಿಸಬಲ್ಲ ರಾಜಕೀಯ ಸಂಸ್ಕೃತಿ ಅತ್ಯಗತ್ಯವೆಂಬ ಮಾತು ನಿರ್ವಿವಾದ. ಅಕ್ಟೋಬರ್ ೨೦೨೧ರ ವರದಿಗಳ ಪ್ರಕಾರ, ಸಂಸತ್ತಿನಲ್ಲಿ, ಮಹಿಳೆಯರ ಸಂಖ್ಯೆ ಶೇ. ೧೦.೫ ಮಾತ್ರ. ಅಂದರೆ, ೯೦ ಲಕ್ಷ ಮಹಿಳೆಯರನ್ನು ಕೇವಲ ಒಬ್ಬರು ಸಂಸದೆ ಪ್ರತಿನಿಧಿ ಸುತ್ತಾರೆ.

ನಮ್ಮ ಧರ್ಮಗ್ರಂಥಗಳು ಮಹಿಳೆಗೆ ಶಕ್ತಿದೇವತೆಯ ಸ್ಥಾನವನ್ನು ನೀಡಿ ಗೌರವಿಸಿವೆ. ವಿಪರ್ಯಾಸದ ಸಂಗತಿಯೆಂದರೆ, ದೇಶದ ಜನಸಂಖ್ಯೆಯ ಹತ್ತಿರ ಹತ್ತಿರ ಅರ್ಧದಷ್ಟು ಮಹಿಳಾ ಜನಸಂಖ್ಯೆ ಇರುವುದಾದರೂ, ವಿಧಾನಸಭೆ ಹಾಗೂ ಲೋಕಸಭೆಗಳಿಗೆ ಪ್ರತಿನಿಧಿಗಳನ್ನು ಆರಿಸುವ ಸಮಯದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು, ಮಹಿಳಾ ವರ್ಗವನ್ನು ಕಡೆಗಾಣಿಸುತ್ತಿರುವುದು ಪ್ರಜಾ ಪ್ರಭುತ್ವ ದೇಶದಲ್ಲಿ ಆರೋಗ್ಯಕರ ಬೆಳವಣಿಗೆ ಎನಿಸದು. ಸಾಮಾನ್ಯವಾಗಿ ರಾಜಕೀಯ ಕ್ಷೇತ್ರವನ್ನೇ ಪುರುಷ ಪ್ರಧಾನ ವೆನ್ನಲಾಗಿದೆ.

ಕಳವಳಕಾರಿ ಸಂಗತಿಯೆಂದರೆ, ಒಂದು ಚುನಾವಣೆಯಿಂದ ಮತ್ತೊಂದು ಚುನಾವಣೆಯವರೆಗೆ ಮಹಿಳಾ ಪ್ರಾತಿನಿಧ್ಯದ ಪ್ರಮಾಣ
ದಲ್ಲಿ ಏರಿಕೆಯ ಗತಿ ಕಾಣುತ್ತಿಲ್ಲ. ಮಹಿಳೆಯರು ರಾಜಕೀಯ ಕ್ಷೇತ್ರವನ್ನು ಪ್ರವೇಶಿಸಲು ಹಿಂಜರಿಯುತ್ತಿರುವುದೇಕೆ? ಮಹಿಳೆಯರು ಮಾತ್ರವಲ್ಲ, ಪ್ರಬುದ್ಧ ಮತ್ತು ಸುಸಂಸ್ಕೃತ ನಾಗರಿಕರೂ ಸಹ ಪ್ರವೇಶಿಸಲು ಹಿಂಜರಿಯುವಂಥ ಪರಿಸ್ಥಿತಿ ರಾಜಕೀಯದಲ್ಲಿ ನಿರ್ಮಾಣವಾಗಿದೆ. ವಾಹಿನಿಯೊಂದರಲ್ಲಿ ನಡೆಸಲಾಗುತ್ತಿದ್ದ ಚರ್ಚೆಯ ಸಮಯ, ವಾಹಿನಿಯ ನಿರೂಪಕರು ಚುನಾವಣಾ
ರಾಜಕೀಯದಲ್ಲಿ ಮಹಿಳಾ ಪ್ರಾತಿನಿಧ್ಯದ ವಿಷಯವಾಗಿ ರಾಜಕೀಯ ನಾಯಕರೊಬ್ಬರನ್ನು ಪ್ರಶ್ನಿಸಿದಾಗ, ರಾಜಕೀಯ ಸುಲಭ ಅಲ್ಲಾರಿ. ಗೆಲ್ಲೋ ಕುದುರೆಗೆ ಚುನಾವಣೆ ಟಿಕೆಟ್ ಸಿಗೋದು ಎಂದು ಪ್ರತಿಕ್ರಿಯಿಸಿದರು.

ಧನಬಲ, ಜಾತಿ ರಾಜಕೀಯ, ಪಕ್ಷಾಂತರ ಪರ್ವ, ಅನುಕೂಲಕ್ಕೆ ತಕ್ಕಂತೆ ಧರ್ಮ ಮತ್ತು ದೇವರು, ವಿರೋಧಿಗಳನ್ನು ಕುರಿತು ಕೀಳುಮಟ್ಟದ ನಿಂದನೆಗಳೇ ಚುನಾವಣೆಯಲ್ಲಿ ಯಶಸ್ಸನ್ನು ಗಳಿಸುವ ಸೋಪಾನಗಳು ಎನ್ನುವುದಾದರೆ, ಮಹಿಳೆಯರು ಗೆಲ್ಲುವುದು ಕಷ್ಟಸಾಧ್ಯವೇ ಸರಿ. ರಾಜಕೀಯದಲ್ಲಿ ಮಹಿಳೆಗೆ ಮೀಸಲಾತಿಯ ಮಾತಂತಿರಲಿ, ರಾಜಕೀಯದಲ್ಲಿ ಉಳಿಯಲು ಅವಕಾಶ ನಿರಾಕರಿಸುವಂಥ ಮನಸ್ಥಿತಿ ಇದು. ಒಂದು ವೇಳೆ ರಾಜಕೀಯ ಪಕ್ಷದ ಟಿಕೆಟ್ ಪಡೆಯುವಲ್ಲಿ ಮಹಿಳೆಯರು ಸಫಲ ರಾದರೂ, ಪಾಳೇಗಾರರಂತೆ ವರ್ತಿಸುವ, ದಬ್ಬಾಳಿಕೆ ನಡೆಸುವ, ವ್ಯತಿರಿಕ್ತ ಧೋರಣೆಯುಳ್ಳ, ಕೀಳು ಮಟ್ಟದ ವೈಯಕ್ತಿಕ ಟೀಕೆ
ಟಿಪ್ಪಣಿಗಳನ್ನು ಮಾಡುವ ಕಾರ್ಯಕರ್ತರೊಂದಿಗೆ ಮತ್ತು ಸಹವರ್ತಿಗಳೊಂದಿಗೆ ಕೆಲಸ ಮಾಡಬೇಕಾಗುವುದರಿಂದ ರಾಜಕೀಯದ ಸಹವಾಸವೇ ಬೇಡ ಎನ್ನುವ ಮಹಿಳೆಯರ ಸಂಖ್ಯೆಯೇ ಜಾಸ್ತಿ.

ನಗರಸಭೆ, ಪುರಸಭೆ, ಪಂಚಾಯತ್ ರಾಜ್ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ, ಶೇ. ೫೦ ರಷ್ಟು ಮೀಸಲಾತಿ ದೊರಕಿ, ರಾಜಕಾರಣದಲ್ಲಿ ಮಹಿಳೆಗೆ ಪ್ರಾತಿನಿಧ್ಯ ದೊರೆತರೂ, ಪ್ರಭಾವಶಾಲಿಯಾದ ಪತಿ, ಆಡಳಿತ ನಡೆಸುತ್ತಾ ಪತ್ನಿಯ ಅರಿವಿನ ಕೊರತೆ, ನಿರಕ್ಷರತೆ, ಮುಗ್ಧತೆಗಳನ್ನು ದುರುಪಯೋಗಪಡಿಸಿಕೊಂಡು, ಕೇವಲ ಸೂತ್ರಬೊಂಬೆಯಾಗಿ ಕಾರ್ಯ ನಿರ್ವಹಿಸುವಂತೆ ಆದೇಶಿಸುತ್ತಾನೆ. ಎಷ್ಟೋ ಮನೆಗಳಲ್ಲಿ, ಕುಟುಂಬದ ಸದಸ್ಯರು, ಮಹಿಳೆಗೆ ನಿರ್ದಿಷ್ಟ ವ್ಯಕ್ತಿಗೆ ಮತ ಚಲಾಯಿಸಬೇಕೆಂದು ನಿರ್ದೇಶಿಸುವ ಪ್ರವೃತ್ತಿ ಸಹ ಪ್ರಜಾಪ್ರಭುತ್ವದ ಆಶಯಕ್ಕೆ ತಕ್ಕುದಲ್ಲ.

ಮನೆಯಲ್ಲಿ ಅಡಿಗೆ ಮಾಡಿ, ತನ್ನ ಕುಟುಂಬದ ಜವಾಬ್ದಾರಿ ನಿರ್ವಹಿಸುತ್ತಾ, ಕೇವಲ ಸಹಿ ಹಾಕಲು ಕಚೇರಿಗೆ ಬರಲಿ ಎನ್ನುವ ಪುರುಷ ವರ್ಗವಿದ್ದರೆ, ತನ್ನ ಸಾಮರ್ಥ್ಯವನ್ನು ಮಹಿಳೆ ಹೇಗೆ ತಾನೇ ನಿರ್ವಹಿಸಬಲ್ಲಳು? ಮಾಹಿತಿ ತಂತ್ರಜ್ಞಾನದ ಬಗ್ಗೆ ಮಾಹಿತಿಯ ಕೊರತೆ, ಅನಕ್ಷರತೆ, ಬ್ಯಾಂಕ್ ಸಾಲ ಸೌಲಭ್ಯಗಳ ಬಗ್ಗೆ ಅರಿವಿಲ್ಲದಿರುವದು, ಸಾಂಪ್ರದಾಯಿಕ ಮನೋಭಾವ,
ಅನುಭವದ ಕೊರತೆ, ಮುಕ್ತವಾಗಿ ಸಮಸ್ಯೆಗಳನ್ನು ಹಂಚಿಕೊಳ್ಳಲು ಹಿಂಜರಿಕೆ ಮುಂತಾದವುಗಳು ಮಹಿಳೆಯರನ್ನು ಈ ರಂಗಗಳಲ್ಲಿ ಮುಂದುವರಿಯಲು ಬಿಡದ ತಡೆಗೋಡೆಗಳೆನಿಸಿದರೂ, ಪುರುಷರ ಅಸಹಕಾರ ಮನೋಭಾವವೂ ಈ ಸಮಸ್ಯೆಗೆ ಕಾರಣವಾಗಿದೆಯೆಂಬ ಮಾತನ್ನು ಅಲ್ಲಗೆಳೆಯುವಂತಿಲ್ಲ.

ಸಾಮಾನ್ಯವಾಗಿ ಮಹಿಳೆಯರು ನಿರ್ಣಯಗಳನ್ನು ಅಪೇಕ್ಷಿಸುವ ಜವಾಬ್ದಾರಿಯುತ ಸ್ಥಾನಗಳನ್ನು ನಿರ್ವಹಿಸುವಲ್ಲಿ ಉತ್ಸುಕತೆ ತೋರುತ್ತಿಲ್ಲವೆಂಬ ಮಾತಿದೆ. ನಮ್ಮ ದೇಶದ ಕುಟುಂಬ ವ್ಯವಸ್ಥೆಯಲ್ಲಿ ಮಗನಿಗೆ ವಂಶೋದ್ಧಾರಕನೆಂಬ ಪಟ್ಟ ಕಟ್ಟಿ ರಾಜಕೀಯ ಪ್ರವೇಶಿಸಲು ಪ್ರೋತ್ಸಾಹಿಸುತ್ತಾರೆ. ಮಗಳಿಗೆ ಮಾತ್ರ ರಾಜಕೀಯವನ್ನು ಪ್ರವೇಶಿಸಲು ಕುಟುಂಬ ವರ್ಗದಿಂದ ನಿರ್ಬಂಧಗಳನ್ನು ವಿಧಿಸಲಾಗುತ್ತದೆ.

ರಾಜಕೀಯ ಪಕ್ಷವೊಂದರ ವಕ್ತಾರೆಯಾಗಿದ್ದ ಮಹಿಳೆಯೊಬ್ಬರ ಮೇಲೆ ಅವರದೇ ಪಕ್ಷದ ಪುರುಷ ಕಾರ್ಯಕರ್ತರು ರೌಡಿಗಿರಿ ಮತ್ತು ದೌರ್ಜನ್ಯಗಳನ್ನು ಮಾಡಿದವರಿಗೆ, ಪಕ್ಷದ ನಾಯಕರು ಶಿಕ್ಷೆ ನೀಡುವ ಮಾತಂತಿರಲಿ, ಅವರಿಗೆ ಪಕ್ಷದಲ್ಲಿ ಹೆಚ್ಚಿನ ಸ್ಥಾನಮಾನ ನೀಡಿರುವುದು ನಿಜಕ್ಕೂ ಖೇದಕರ. ಮಹಿಳೆಯರು ಜನಪ್ರತಿನಿಧಿಗಳಾದರೆ, ಸಕಾರಾತ್ಮಕ ಬದಲಾವಣೆ ಖಂಡಿತ ಸಾಧ. ಮಹಿಳೆಯರು ಪ್ರತಿನಿಧಿಸುತ್ತಿರುವ ಕ್ಷೇತ್ರಗಳಲ್ಲಿ ಹಲವಾರು ಕಾಮಗಾರಿಗಳು ತ್ವರಿತವಾಗಿ ಹಾಗೂ ಪಾರದರ್ಶಕವಾಗಿ ನಡೆಯು
ತ್ತಿವೆ.

ವಾಹಿನಿಯೊಂದರಲ್ಲಿ ಮಹಿಳಾ ಜನಪ್ರತಿನಿಧಿಯೊಬ್ಬರು ತಮ್ಮ ಅನುಭವವನ್ನು ಬಿಡಿಸಿಡುತ್ತಿದ್ದರು. ನಾನು ನನ್ನ ಕ್ಷೇತ್ರದಲ್ಲಿಯೇ ಹೆಚ್ಚು ಸಮಯವಿರುತ್ತೇನೆ. ಜನಸಾಮಾನ್ಯರ ಸಮಸ್ಯೆಗಳನ್ನು ಆಲಿಸಿ, ಸಾಧ್ಯವಾದ ಮಟ್ಟಿಗೆ ಅವುಗಳಿಗೆ ಪರಿಹಾರ ಒದಗಿಸಲು ಪ್ರಯತ್ನಿಸುತ್ತೇನೆ. ಜನರ ಸಹಕಾರ, ಪಕ್ಷದ ಹಿರಿಯರ ಮಾರ್ಗದರ್ಶನ ಸಲಹೆ ಮತ್ತು ಸಹಕಾರಗಳನ್ನು ಪಡೆದು ನನ್ನ ಕೆಲಸಗಳನ್ನು ಮಾಡುತ್ತಿರುವುದರಿಂದ ನನಗೆ ಯಾವ ಅಡ್ಡಿ-ಆತಂಕಗಳು ಎದುರಾಗಿಲ್ಲ ಎಂದು ಹೇಳಿದರು.

ಅಸಾಮರ್ಥ್ಯದ ಕೊರತೆಯ ನೆಪವೊಡ್ಡಿ, ಮಹಿಳೆಯನ್ನು ಕಡೆಗಾಣಿಸುವವರು ಮನಗಾಣಬೇಕಾಗಿರುವ ವಿಷಯವೆಂದರೆ, ಅವಕಾಶ, ಅಧಿಕಾರಗಳು ದೊರಕಿದಾಗಲೆಲ್ಲಾ ಮಹಿಳೆಯರು ತಮ್ಮ ಸಾಮರ್ಥ್ಯವನ್ನು ನಿರೂಪಿಸಿದ್ದಾರೆ. ಮಹಿಳೆ- ಪುರುಷ ರಿಬ್ಬರಿಗೂ ಸಮಪಾಲು, ಸಮಬಾಳು ನೀಡಬೇಕೆನ್ನುವ ಮನಸ್ಥಿತಿಗಳು ಹೆಚ್ಚಾಗಿ, ರಾಜಕೀಯದಲ್ಲಿ ಮಹಿಳೆಗೆ ಮೀಸಲಾತಿ ನೀಡಬೇಕೆನ್ನುವ ಮಾತು ಸರ್ವವಿದಿತ. ಕುಟುಂಬದ ಹಿನ್ನೆಲೆ ಮಾತ್ರ ಜನಪ್ರತಿನಿಧಿಯಾಗಲು ಮಾನದಂಡವೆನಿಸದು.

ಸ್ವಸಾಮರ್ಥ್ಯವಿದ್ದವರು ಮಾತ್ರ ರಾಜಕೀಯದಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಬಲ್ಲರು. ಸಮಾಜಮುಖಿ ಚಿಂತನೆಗಳು ಮತ್ತು ಜನಪರ ಕೆಲಸಗಳು ರಾಜಕೀಯದಲ್ಲಿ ಮಹಿಳೆಯರ ಸ್ಥಾನವನ್ನು ಭದ್ರಗೊಳಿಸುತ್ತವೆ. ಮಹಿಳೆಯರ ಆತ್ಮವಿಶ್ವಾಸ, ಸ್ವಾವಲಂಬಿ ಮನೋಭಾವ ಮತ್ತು ರಾಜಕೀಯ ಸಂಕೀರ್ಣತೆಗಳನ್ನು ಅರ್ಥ ಮಾಡಿಕೊಳ್ಳಲು ಸೂಕ್ತ ತರಬೇತಿ ನೀಡಬೇಕು. ರಾಜ್ಯ
ಸರ್ಕಾರ ಮತ್ತು ಕೇಂದ್ರ ಸರ್ಕಾರಗಳೆರಡೂ ವಿಚಾರ ಸಂಕೀರ್ಣಗಳನ್ನೇರ್ಪಡಿಸಿ, ಸ್ಥಳೀಯ ಮಹಿಳಾ ನಾಯಕರನ್ನು
ರಾಜಕೀಯಕ್ಕೆ ಪ್ರವೇಶಿಸಲು ಪ್ರೋತ್ಸಾಹ ನೀಡಬೇಕು.

ಮಹಿಳಾ ಪ್ರತಿನಿಧಿಗಳಿಗೆ ಸುರಕ್ಷಿತ ವಾತಾವರಣವೊಂದನ್ನು ಸೃಷ್ಟಿಸಬೇಕು. ಮಹಿಳಾ ಪ್ರತಿನಿಧಿಗಳನ್ನು ಕುರಿತು ಕೆಳಮಟ್ಟದ ಟೀಕೆ ಟಿಪ್ಪಣಿ ಮತ್ತು ಅಸಂಸ್ಕೃತವಾಗಿ ವರ್ತಿಸುವವರಿಗೆ ಉಗ್ರ ದಂಡನೆಯಾಗಬೇಕು. ಶಿಬಿರ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಮಗನ ಹಾಗೆ ಮಗಳೂ ಸಹ ರಾಜಕೀಯವನ್ನು ಪ್ರವೇಶಿಸಲು ಅರ್ಹಳೆಂಬುದನ್ನು ನಿರೂಪಿಸಬೇಕು. ಮಹಿಳೆಗೆ ಮನೆ ಕೆಲಸ ಮತ್ತು ರಾಜಕೀಯ ಜವಾಬ್ದಾರಿಗಳ ನಿರ್ವಹಣೆಯನ್ನು ನಿಭಾಯಿಸುವಲ್ಲಿ, ಕುಟುಂಬದ ಸದಸ್ಯರು ಸಹಕಾರ ನೀಡಬೇಕು. ರಾಜಕೀಯದಲ್ಲಿ ಮಹಿಳೆಯರ ಸಾಧನೆಗಳಿಗೆ ಮನ್ನಣೆ ನೀಡಿ ಗೌರವಿಸಬೇಕು.

ಮೀಸಲಾತಿ ಇದ್ದರಷ್ಟೇ ಮಹಿಳಾ ಪ್ರಾತಿನಿಧ್ಯ ಹೆಚ್ಚಲು ಸಾಧ್ಯವೆಂಬುದು ಸರ್ವವಿದಿತ. ಕೇವಲ ಕೌಟುಂಬಿಕ ಹಿನ್ನೆಲೆ ಮಾತ್ರ ವಲ್ಲ, ವಿಭಿನ್ನ ಕ್ಷೇತ್ರಗಳ ಮತ್ತು ವಿಭಿನ್ನ ಹಿನ್ನೆಲೆಯ ಮಹಿಳಾ ಜನಪ್ರತಿನಿಽಗಳು ಶಾಸನಸಭೆಗಳನ್ನು  ಪ್ರವೇಶಿಸು ವಂತಾಗಬೇಕು. ಗ್ರಾಮೀಣ ಮಹಿಳೆಯರಿಗೆ ಸೂಕ್ತ ವೈದಕೀಯ ಸೌಲಭ್ಯ, ಅತ್ಯಾಚಾರಿಗಳಿಗೆ ಉಗ್ರ ದಂಡನೆ, ದೌರ್ಜನ್ಯ ಗಳಕ್ಕೊಳಗಾದ ಮಹಿಳೆಯರಿಗೆ ಕಾನೂನಿನ ನೆರವು ಮುಂತಾದ ಕಲ್ಯಾಣ ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಠಾನ ವಾಗಬೇಕಾದರೆ ಪ್ರಜಾಪ್ರತಿನಿಧಿಗಳ ಸಭೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯವನ್ನು ಶೇ.೩೩ಕ್ಕೆ ಹೆಚ್ಚಿಸಬೇಕೆಂಬ ಸದಾಶಯವನ್ನು ಸಾಕಾರಗೊಳಿಸ ಬೇಕಾಗಿದೆ. ಸೀವಾದದ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಾ, ತಮ್ಮ ಸ್ವಂತ ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳ ಲಿಚ್ಛಿಸುವ ಪುರುಷರ ಮನಸ್ಥಿತಿ ಬದಲಾಗಬೇಕು. ಶಾಸನಸಭೆಗಳಲ್ಲಿ ಮಹಿಳೆಯರ ಪ್ರತಿನಿಧಿತ್ವ ಹೆಚ್ಚಾದರೆ ಮಾತ್ರ ಪುರುಷರ ಧೋರಣೆ ಮತ್ತು ಭಾವನೆಗಳು ಬದಲಾಗಲೂ ಸಾಧ್ಯ.