ಕೋಲಾರ: ರಾಜ್ಯದಲ್ಲಿ ಯಾರು ಬೇಕಾದರೂ ಮುಖ್ಯಮಂತ್ರಿ ಆಗಲಿ, ಆ ಸ್ಥಾನ ನನಗೆ ಬೇಡ. ಆದರೆ ಕರ್ನಾಟಕ ದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕು ಅಷ್ಟೇ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟನೆ ನೀಡಿದ್ದಾರೆ.
ರಾಜ್ಯ ಕಾಂಗ್ರೆಸ್ ಆಯೋಜಿಸಿದ ಜೈ ಭಾರತ ಸಮಾವೇಶದಲ್ಲಿ ಮಾತನಾಡಿ, ಮುಖ್ಯಮಂತ್ರಿ ಯಾರಾಗಬೇಕೆಂದು ಕಾಂಗ್ರೆಸ್ ನಾಯಕರು ತಲೆ ಕೆಡಿಸಿಕೊಳ್ಳಬೇಡಿ. ರಾಜ್ಯದ ಜನರ ಬಗ್ಗೆ ಮಾತ್ರ ತಲೆಕೆಡಿಸಿಕೊಳ್ಳಿ. ಪಕ್ಷಕ್ಕೆ ಬಹುಮತ ಬಂದಾಗ ಸಿಎಂ ಬಗ್ಗೆ ಶಾಸಕರು ನಿರ್ಧರಿಸುತ್ತಾರೆ. ಈ ಬಿಜೆಪಿ ಸರ್ಕಾರ ತೆಗೆಯದಿದ್ದರೆ ಯಾವುದೇ ಅಭಿವೃದ್ಧಿ ಆಗಲ್ಲ ಎಂದರು.
ಕೋಲಾರದಲ್ಲಿ ಬರಗಾಲಕ್ಕೆ ತುತ್ತಾದ ಜಿಲ್ಲೆ ನೀರಾವರಿಗಾಗಲಿ ಕೃಷಿ ಗಾಗಲಿ ಅಷ್ಟೊಂದು ಮಹತ್ವ ಕೊಡುತ್ತಾ ಇರಲಿಲ್ಲ. ಅನೇಕ ಶಾಸಕರು ಒಗ್ಗಟ್ಟಾಗಿ ಕಾಂಗ್ರೆಸ್ ಸರ್ಕಾರ ಇದ್ದಾಗ ಕೆರೆಗಳನ್ನು ತುಂಬಿಸಿದ್ದು ಕಾಂಗ್ರೆಸ್ ಪಕ್ಷ. ಲಕ್ಷಾಂತರ ಎಕರೆ ಇದರಿಂದ ನೀರಾವರಿ ಆಗುತ್ತಿದೆ ಎಂದರು.
ರೇಷ್ಮೆಗೂ ಪ್ರಸಿದ್ಧ ಬಂಗಾರಕ್ಕೂ ಪ್ರಸಿದ್ಧವಾಗಿರುವ ಜಿಲ್ಲೆಯಿಂದ ಕಾಂಗ್ರೆಸ್ ಪ್ರಚಾರ ಪ್ರಾರಂಭ ಮಾಡಿದ್ದೇವೆ. ಇಲ್ಲಿಂದ ಯಶಸ್ಸು ಖಚಿತವಾಗಲಿದೆ ಎಂದು ಹೇಳಿದ ಖರ್ಗೆ, 40 ಪರ್ಸೆಂಟ್ ಸರ್ಕಾರದ ಮೇಲೆ ಜನ ರೊಚ್ಚಿಗೆದ್ದು ಕಾಂಗ್ರೆಸ್ ಸರ್ಕಾರಕ್ಕೆ ಬೆಂಬಲ ನೀಡುತ್ತಾರೆ. ಸ್ವಯಂ ಪ್ರೇರಿತರಾಗಿ ಜನ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುತ್ತಿರುವುದು ನಮಗೆ ಲಾಭ ಇದೆ ಎಂದರು.