ನವದೆಹಲಿ: ಜೊಮಾಟೊ ಮಾಲಿಕತ್ವದ ಇ–ಕಾಮರ್ಸ್ ಹೋಮ್ ಡೆಲಿವರಿ ಪ್ಲಾಟ್ಫಾರ್ಮ್ ಬ್ಲಿಂಕಿಟ್ಗೆ ಡೆಲಿವರಿ ಬಾಯ್ಗಳ ಸ್ಟ್ರೈಕ್ನ ಬಿಸಿ ತಾಕಿದೆ.
ಡೆಲಿವರಿ ಶುಲ್ಕ ಕಡಿಮೆಗೊಳಿಸಿದ ಕಾರಣಕ್ಕೆ ಡೆಲಿವರಿ ಬಾಯ್ಸ್ ಕಳೆದ ಮೂರ್ನಾಲ್ಕು ದಿನಗಳಿಂದ ಮುಷ್ಕರ ನಡೆಸುತ್ತಿರುವ ಪರಿಣಾಮವಾಗಿ ದೆಹಲಿ ಹಾಗು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅದರ ಆನ್ಲೈನ್ ಡೆಲಿವರಿ ಸೇವೆ ಬಹುತೇಕ ಸ್ಥಗಿತಗೊಂಡಿದೆ.
ದೆಹಲಿ, ಗುರುಗ್ರಾಮ್, ಫರೀದಾಬಾದ್, ನೋಯ್ಡಾ, ಘಾಜಿಯಾಬಾದ್ ಪ್ರದೇಶಗಳಲ್ಲಿ ಬ್ಲಿಂಕಿಟ್ನ 100ಕ್ಕೂ ಹೆಚ್ಚು ಡಾರ್ಕ್ ಸ್ಟೋರ್ಗಳ (Dark Stores) ಆನ್ಲೈನ್ ಸೇವೆ ಬಂದ್ ಆಗಿದೆ. ಇದರೊಂದಿಗೆ ಈ ಪ್ರದೇಶಗಳಲ್ಲಿ ಬ್ಲಿಂಕಿಟ್ ಡೆಲಿವರಿ ಸೇವೆಯಲ್ಲಿ ಭಾರೀ ವ್ಯತ್ಯಯ ವಾಗಿದೆ.
ದೇಶಾದ್ಯಂತ ಬೆಂಗಳೂರು ಸೇರಿದಂತೆ 20 ನಗರಗಳಲ್ಲಿ ಬ್ಲಿಂಕಿಟ್ ಸುಮಾರು 400 ಡಾರ್ಕ್ ಸ್ಟೋರ್ಗಳನ್ನು ಹೊಂದಿದೆ. ಈಗ ಅರ್ಧದಷ್ಟು ಸ್ಟೋರ್ಗಳು ಡೆಲಿವರಿ ಬಾಯ್ಗಳಿಲ್ಲದೇ ಆನ್ಲೈನ್ ಡೆಲಿವರಿ ಸೇವೆಯನ್ನು ನಿಲ್ಲಿಸಿವೆ.
ಬ್ಲಿಂಕಿಟ್ ಬಹಳ ಶೀಘ್ರ ಸಮಯದಲ್ಲಿ ಡೆಲಿವರಿ ಸೇವೆಗೆ ಹೆಸರಾದ ಇ–ಕಾಮರ್ಸ್ ಕಂಪನಿ. 10 ನಿಮಿಷದಲ್ಲಿ ಡೆಲಿವರಿ ಒದಗಿಸು ತ್ತದೆ. ಜೊಮಾಟೊ, ಸ್ವಿಗ್ಗಿ, ಡುಂಜೋ, ಝೆಪ್ಟೋ ಇತ್ಯಾದಿ ಸಂಸ್ಥೆಗಳಿಗಿಂತ ಬ್ಲಿಂಕಿಟ್ನಲ್ಲಿ ಡೆಲಿವರಿ ಹುಡುಗರಿಗೆ ಹೆಚ್ಚು ಹಣ ಸಿಗುತ್ತದೆ. ವರ್ಷದ ಹಿಂದೆ ಪ್ರತೀ ಡೆಲಿವರಿಗೆ ಶುಲ್ಕವಾಗಿ ಹುಡುಗರು 50 ರೂ ಪಡೆಯುತ್ತಿದ್ದರು. ನಂತರ ಇದು 25 ರುಪಾಯಿಗೆ ಇಳಿಕೆಯಾಯಿತು. ಈಗ ಬ್ಲಿಂಕಿಟ್ ಹೊಸ ಶುಲ್ಕ ವ್ಯವಸ್ಥೆ ಜಾರಿಗೆ ತಂದಿದೆ. ಅದರಲ್ಲಿ ಡೆಲಿವರಿ ಮಾಡಲಾಗುವ ಸ್ಥಳದ ದೂರ ಎಷ್ಟಿದೆ ಎನ್ನುವುದರ ಮೇಲೆ ಶುಲ್ಕ ನಿರ್ಧರಿಸಲಾಗುತ್ತದೆ.
ಹೊಸ ಶುಲ್ಕ ವ್ಯವಸ್ಥೆ ನಿಲ್ಲಿಸಿ, ಹಳೆಯದನ್ನೇ ಮುಂದುವರಿಸುವವರೆಗೂ ತಾವು ಮತ್ತೆ ಡೆಲಿವರಿ ಸೇವೆಗೆ ಬರುವುದಿಲ್ಲ ಎಂದು ಈ ಹುಡುಗರು ಕೆಲಸ ನಿಲ್ಲಿಸಿದ್ದಾರೆ.