Friday, 20th September 2024

ಬೇಕು ಉಪಕಾರ ಸ್ಮರಣೆ, ಕೆಲವರಿಗೆ ಇಲ್ಲ ಸೈರಣೆ

ನಾಡಿಮಿಡಿತ
ವಸಂತ ನಾಡಿಗೇರ

ಹೊಸ ಶೈಕ್ಷಣಿಕ ವರ್ಷ ಇದೀಗ ತಾನೇ ಆರಂಭವಾಗುತ್ತಿದೆ. ಎಸ್‌ಎಸ್ಎಲ್‌ಸಿ ಪರೀಕ್ಷೆ ಫಲಿತಾಂಶ ಬಂದು ಎಲ್ಲರೂ ಪಿಯುಸಿಗೆ ಪ್ರವೇಶ ಪಡೆಯುವ ಸಮಯ. ಪ್ರಮುಖ ಕಾಲೇಜುಗಳಲ್ಲಿ ಪ್ರಮುಖ ಕೋರ್ಸ್‌ಗಳಿಗೆ ಡಿಮಾಂಡೋ ಡಿಮಾಂಡು. 95ಕ್ಕೋ, 92 ಪರ್ಸೆಂಟಿಗೂ ಕಟಾಫ್. ಅಲ್ಲಿಂದ ಕೆಳಗಿನವರಿಗೆ, ಅಂದರೆ ಕಡಿಮೆ ಅಂಕ ಗಳಿಸಿದವರಿಗೆ ಅಂಥ ಕಾಲೇಜುಗಳ ಪ್ರವೇಶ ಮರೀಚಿಕೆ.
ಆದರೆ ಅಲ್ಲಿಗೇ ಸೇರಿಕೊಳ್ಳಬೇಕೆಂಬ ಹಂಬಲ ಒಂದಿರುತ್ತದಲ್ಲ. ಆಗ ಎರಡು ಆಯ್ಕೆಗಳು. ಡೊನೇಶನ್ಕೊಡಬೇಕು. ಇಲ್ಲವೆ ಪ್ರಭಾವ ಬಳಸಬೇಕು. ಇಂಥ ಸಂದಿಗ್ಧದಲ್ಲಿ ಸಿಲುಕಿರುವವರೊಬ್ಬರು ತಮ್ಮವರಿಗಾಗಿ ಸೀಟು ದೊರಕಿಸಿಕೊಳ್ಳಲು ಸಂಕೋಚದಿಂದಲೇ ತಮ್ಮ ಗೆಳೆಯರೊಬ್ಬರನ್ನು ಕೇಳುತ್ತಾರೆ. ಅವರು ಕೆಲಸ ಮಾಡಿಸಿಕೊಡುತ್ತೇನೆ ಎಂದರು.

ಒಂದೆರಡು ಕಡೆಯಿಂದ ಪ್ರಯತ್ನ ಮಾಡಿದರು. ಬಗೆಹರಿಯಲಿಲ್ಲ. ಮತ್ತೊಬ್ಬ ಪ್ರಭಾವಿ ವ್ಯಕ್ತಿಯ ಕಡೆಯಿಂದ ಪ್ರಯತ್ನಿಸಿದರು.
ಅವರು ಇವರಿಗಾಗಿ ಅಗತ್ಯವಾದುದನ್ನು ಮಾಡಿದರಾದರೂ ವಾರ ಕಳೆದರೂ ಕಾಲೇಜಿನಿಂದ ಸುದ್ದಿಯೇನೂ ಬರಲಿಲ್ಲ. ಕೊನೆಗೊಮ್ಮೆ ಅಲ್ಲಿಗೇ ಹೋಗಿ ವಿಚಾರಿಸುವಾ ಎಂದು ತೆರಳಿದಾಗ ಸಂವಹನದ ಕೊರತೆಯಿಂದ ವಿಳಂಬ ಆಗಿತ್ತು. ಆದರೆ ಸೀಟು ಸಿಕ್ಕಿತ್ತು. ಅಡ್ಮಿಶನ್ ಆಯಿತು. ಇದೆಲ್ಲ ವಿಷಯವನ್ನು ಆ ಗೆಳೆಯರಿಗೆ ತಿಳಿಸಿದಾಗ ಅವರು ಹೇಳಿದ್ದು : ‘ಯಾರ್ಯಾರಿಗೋ ಏನೇನೊ ಸಹಾಯ ಮಾಡುತ್ತೇವೆ. ನಿಮಗೆ ಇಷ್ಟೂ ಮಾಡದಿದ್ದರೆ ಹೇಗೆ ? ಆದರೆ ಬಹಳ ದಿನಗಳಿಂದ ಕೆಲಸ ಆಗದಿದ್ದಾಗ
ನನನಗೂ ಆತಂಕವಾಗಿತ್ತು’. ಅಂತೂ ಅವರಿಗೆ ಸಾಕಷ್ಟು ಸಲ ಥ್ಯಾಂಕ್ಸ್‌ ಹೇಳಿದೆ.

ಎರಡು ದಶಕಗಳ ಕಾಲ ಒಂದೇ ಕಾಲೇಜಿನಲ್ಲಿ ಕೆಲಸ ಮಾಡಿದ್ದ ಆ ಮಹಿಳೆಗೆ ಇದ್ದಕ್ಕಿದ್ದಂತೆ ದೂರದೂರಿಗೆ ವರ್ಗಾವಣೆ ಆಗಿಬಿಟ್ಟಿತು. ಹೇಗೂ ವರ್ಗವಿಲ್ಲದ ಉದ್ಯೋಗ ಎಂದು ಆ ಊರಲ್ಲೇ ಬದುಕು ಕಟ್ಟಿಕೊಂಡಿದ್ದ ಅವರಿಗೆ ಇದರಿಂದ ದಿಕ್ಕು ತೋಚದಂತಾಯಿತು. ಹೇಗಾದರೂ ಮಾಡಿ ವರ್ಗಾವಣೆ ಕ್ಯಾನ್ಸಲ್ ಮಾಡಿಕೊಳ್ಳಬೇಕೆಂಬ ಪ್ರಯತ್ನ ಆರಂಭವಾಯಿತು. ಆಗ
ಅವರಿಗೊಂದು ಸಹಾಯಹಸ್ತ ದೊರೆಯಿತು. ಅವರು ಸಂಬಂಧಪಟ್ಟವರೊಂದಿಗೆ ಮಾತನಾಡಿದರು. ತಮ್ಮ ಜತೆಗಿರುವವರನ್ನು ಕಳಿಸಿ, ಫಾಲೋ ಅಪ್ ಮಾಡಿಸಿದರು. ಪರಿಣಾಮ ಕೊನೆಗೂ ಆ ಕೆಲಸ ಆಯಿತು.

ಈ ಎರಡೂ ಪ್ರಸಂಗಗಳಲ್ಲಿ ಉದಾಹರಿಸಿದ ವ್ಯಕ್ತಿಗಳ ಸ್ವಭಾವವೇ ಹಾಗೆ. ಸಹಾಯ ಕೇಳಿ ಬಂದವರಿಗೆ, ಅದರಲ್ಲೂ ಗೊತ್ತಿರು ವವವರಿಗೆ ‘ಇಲ್ಲ’ ಎನ್ನರು. ಸೀಟು ಇರಬಹುದು; ಹಣಕಾಸಿನ ನೆರವು ಆಗಬಹುದು ಅಥವಾ ವೈದ್ಯಕೀಯ ಚಿಕಿತ್ಸೆಯ ವಿಷಯ ಆದೀತು. ಎಲ್ಲಕ್ಕೂ ಸೈ. ಅಂದರೆ ಇನ್ನೊಬ್ಬರಿಗೆ ನೆರವಾಗುವುದು ಇವರ ಗುಣಧರ್ಮ. ಇವೆರಡು ಪ್ರಕರಣಗಳ ತಾತ್ಪರ್ಯ ಇಷ್ಟು: ಇವರಿಬ್ಬರೂ ಈ ಕೆಲಸಗಳನ್ನು ಇಷ್ಟೊಂದು ಮುತುವರ್ಜಿ ವಹಿಸಿ, ತಮ್ಮದೇ ಕೆಲಸ ಎಂಬಂತೆ ಶಿರಸಾವಹಿಸಿ ಪಾಲಿಸಬೇಕಾದ ಅಗತ್ಯ ಇರಲಿಲ್ಲ. ಆ ಕೆಲಸಗಳು ಸುಲಭ ಸಾಧ್ಯವಾಗೇನೂ ಆಗಿರಲಿಲ್ಲ. ಔಟ್ ಆಫ್ ದಿ ವೇ ಅಂತಾರಲ್ಲ. ಆ ರೀತಿಯ ಸಹಾಯ ವದು. ಹಾಗೆ ಮಾಡುವ ದರ್ದು ಕೂಡ ಅವರಿಗೆ ಇರಲಿಲ್ಲ. ಆದರೆ ಅವರು ಅದನ್ನು ಸಾಧಿಸಿರುವುದಕ್ಕೆ ಮುಖ್ಯ ಕಾರಣ ಅವರಲ್ಲಿರುವ ನೆರವಾಗುವ ಗುಣ. ಹಾಗೆಂದು ಇವರಂತೆಯೇ ಎಲ್ಲರೂ ಇರುತ್ತಾರೆಂದೇನೂ ಅಲ್ಲ. ಮಾಡ್ತೀನಿ ಮಾಡ್ತೀನಿ ಎಂದು ಅಂಗೈಯಲ್ಲಿ ಆಕಾಶ ತೋರಿಸಿ ನಡುನೀರಿನಲ್ಲಿ ಕೈಬಿಡುವ ಜನರಿಗೇನೂ ಕಡಿಮೆ ಇಲ್ಲ. ಇದೇ ರೀತಿಯ ಸ್ವಭಾವದ ವ್ಯಕ್ತಿ ಎಂದು ಗೊತ್ತಿದ್ದರೂ ನಾನು ಒಬ್ಬರಿಗೆ ಸಹಾಯ ಕಮ್ ಕೆಲಸವೊಂದನ್ನು ಮಾಡುವಂತೆ ಕೇಳಿದ್ದೆೆ.

ಅದಕ್ಕವರು, ‘ಅದೇನು ಮಹಾ. ಮಾಡೋಣ. ಅವರು ನಮ್ಮವರೇ. ನಾಳೆನೇ ನಿಮ್ಮ ಕೆಲಸ ಆಯಿತೆಂದು ತಿಳ್ಕೊಳ್ಳಿ’ ಎಂದು ಹೇಳುತ್ತಲೇ ಕಾಲತಳ್ಳಿದರೇ ವಿನಾ ಇದುವರೆಗೂ ಅದು ಆಗಿಯೇ ಇಲ್ಲ. ತೀರ ತಲೆಹೋಗುವ ಅಥವಾ ಅನಿವಾರ್ಯದ ಕೆಲಸ ಅದಾಗಿರಲಿಲ್ಲವಾಗಿ ನಾನೂ ಹೆಚ್ಚಿಗೆ ಕೇಳಲೂ ಹೋಗಲಿಲ್ಲ. ಆದರೆ ಚಿಟಿಕೆ ಹೊಡೆಯುವಷ್ಟರೊಳಗೆ ಕೆಲಸ ಮಾಡುವುದಾಗಿ
ಹೇಳುವ ಇಂಥವರು ಮಾತಿನಲ್ಲೇ ಮಂಟಪ ಕಟ್ಟುವವರು, ಬರಿ ಮಾತಿನ ಮಲ್ಲರು ಎಂಬುದಂತೂ ನಿಜ.

ಮತ್ತೊಂದು ವರ್ಗದ ಜನರಿರುತ್ತಾರೆ. ಈ ರೀತಿಯ ಒಂದು ಕೆಲಸ ಆಗಬೇಕಿತ್ತು. ಯಾರೋ ಒಬ್ಬರು -ಮಧ್ಯವರ್ತಿಗಳೇ ಎಂದು ಕೊಳ್ಳಿ – ಹಿಡಿದುಕೊಂಡು ಮಾಡಿ ಮುಗಿಸಿದಾಗ ಮುಂದೊಮ್ಮೆ ಸಿಕ್ಕ ನನ್ನಪರಿಚಿತರೊಬ್ಬರು ಅಯ್ಯೋ. ಅದಕ್ಕೆ ಅಷ್ಟೇಕೆ ದುಡ್ಡು
ಕೊಟ್ಟಿರಿ ? ಅವರ ಬಳಿ ಏಕೆ ಹೋಗಿದ್ದಿರಿ ? ಮೊದಲೇ ಹೇಳಿದ್ದರೆ ನಾನೇ ಮಾಡಿಸಿಕೊಡುತ್ತಿದ್ದೆ’ ಎಂದರು. ಹೀಗೆ ಮೊದಲೇ ಹೇಳಿದ್ದಿದ್ದರೆ ಮಾಡಿಸಿಕೊಡುತ್ತಿದ್ದೆ ಎನ್ನುವಂಥ ಪಾರ್ಟಿಗಳಿಗೆ ನಮ್ಮಲ್ಲಿ ಕೊರತೆ ಇಲ್ಲ. ನಮ್ಮ ಬಂಧುವೊಬ್ಬರಿದ್ದರು. ಯುನಿವರ್ಸಿಟಿಯಲ್ಲಿ ಉದ್ಯೋಗ. ಪರೀಕ್ಷಾ ವಿಭಾಗದಲ್ಲಿದ್ದರು. ಹೀಗಾಗಿ ಏನಾದರೂ ಕೆಲಸ ಎಂದು ಅವರ ಬಳಿ ಹೋಗುವವ ರಿಗೇನೂ ಕೊರತೆ ಇರಲಿಲ್ಲ. ಆದರೆ ಯಾರನ್ನೂ ಅವರು ನಿರಾಸೆಗೊಳಿಸುತ್ತಿರಲಿಲ್ಲ. ತಮ್ಮ ಕೈಲಾದ ಅಥವಾ ಕೈಮೀರಿದ ಸಹಾಯ ಮಾಡಿ ಕಳಿಸುತ್ತಿದ್ದರು. ‘ಹೀಗೇಕೆ ನಿಮಗೆ ಅತಿಯಾದ ಉತ್ಸಾಹ. ಅವರು ಯಾರೋ ಏನೋ. ಗುತ್ತಿಲ್ಲ- ಗುರಿಯಿಲ್ಲ,
ಸಂಬಂಧ ಇಲ್ಲ ಸಾಟಿ ಇಲ್ಲ’ ಎಂದು ಕೇಳಿದರೆ, ಅವರು ನಗುತ್ತಲೇ ಹೇಳುತ್ತಿದ್ದುದು: ‘ಏನೋ ಪಾಪ. ಸಹಾಯ ಕೇಳಿ ಬಂದಿರುತ್ತಾರೆ.

ನಮ್ಮ ಕೈಲಾದುದನ್ನು ಮಾಡಿದರೆ ತಪ್ಪೇನು’ ? ಅವರ ಈ ಮಾತು ಎಷ್ಟೋ ವರ್ಷಗಳಾದರೂ ನನ್ನ ಮನಸಿನಿಂದ ಮರೆಯಾಗಿಲ್ಲ.
ಇದು ಉಪಕಾರ ಮಾಡುವವರ ಅಥವಾ ಮಾಡುವಂತೆ ನಟಿಸುವ, ಇಲ್ಲವೆ ಸರಿಯಾದ ಸಮಯಕ್ಕೆ ಕೈಕೊಡುವಂಥವರ ಕಥೆಯಾಯಿತು. ಇನ್ನು ಕೆಲವರಿರುತ್ತಾರೆ. ಇವರು ಉಪಕಾರ ಮಾಡದಿದ್ದರೆ ಹಾಳಾಗಿ ಹೋಗಲಿ. ಆದರೆ ಅಪಕಾರ ಮಾಡುವಂಥ
ಅಪಾಯಕಾರಿ ಮಂದಿ. ‘ಇವರದು ಮಾತಲ್ಲಿ ಬೆಣ್ಣೆ, ಬಗಲಲ್ಲಿ ದೊಣ್ಣೆ’ ಎಂಬ ಕೆಟಗರಿ. ಸದಾ ಲಕ್ಷ, ಕೋಟಿಯ ಮಾತು. ಅಪ್ಪಟ ಗಿಲೀಟು. ಇವರ ಮಾತಿಗೆ ಮರುಳಾಗಿಯೋ ಅಥವಾ ಸಂಕೋಚಕ್ಕೆ ಕಟ್ಟುಬಿದ್ದೋ ಹಣವನ್ನು ಕೊಟ್ಟರೆ ಮುಗೀತು. ಅದನ್ನು
ವಾಪಸು ಕೊಡುವ ಬಾಬತ್ತೇ ಇಲ್ಲ. ದಿನಬೆಳಗಾದರೆ ಮುಖ ನೋಡಿದರೂ ಇವರಿಗೆ ಆ ಕುರಿತು ಏನೂ ಅನಿಸುವುದೇ ಇಲ್ಲ. ಆದರೆ ಎಲ್ಲೆಡೆ ಇವರ ತತ್ತ್ವ, ವೇದಾಂತ, ದೊಡ್ಡಸ್ತಿಕೆಯ ಮಾತಿಗೇನೂ ಕೊರತೆ ಇರುವುದಿಲ್ಲ.

ಇದು ಉಪಕಾರ ಮಾಡಿದವರು, ಅಪಕಾರ ಮಾಡಿದವರ ಕಥೆಯಾದರೆ ಉಪಕೃತರಾದವರು ಉಪಕಾರ ಸ್ಮರಣೆ ಮಾಡುವುದೂ ಒಂದು ಮುಖ್ಯವಾದ ಮಾನವೀಯ ಗುಣ. ಆದರೆ ಅನೇಕ ಸಂದರ್ಭಗಳಲ್ಲಿ ಸಹಾಯ ಪಡೆದುಕೊಂಡವರದು ಹೊಳೆದಾಟಿದ ಮೆಲೆ ಅಂಬಿಗ… ಎಂಬ ಧೋರಣೆ. ನನ್ನ ಸಂಬಂಧಿಕರೊಬ್ಬರಿಗೆ ತುರ್ತಾಗಿ ರೈಲಿನಲ್ಲಿ ರಿಸರ್ವೇಶನ್ ಆಗಬೇಕಾಗಿತ್ತು. ನಾನು ರೈಲ್ವೆ ಸ್ಟೇಷನ್ನಿಗೆ ಹೋಗಿ ಅಲ್ಲಿನ ಪಿಆರ್‌ಒ ಅವರನ್ನು ಭೇಟಿ ಮಾಡಿ ನನ್ನ ಪರಿಚಯವನ್ನೂ, ಬಂದ ಕೆಲಸವನ್ನು ಅರುಹಿದೆ. ಅವರು ಆಯಿತು ಎಂದು ಹೇಳಿದರು. ಟಿಕೆಟ್ ಕನ್ಫರ್ಮ್ ಆಗಿತ್ತು. ಆಯ್ತಲ್ಲ ಮತ್ತಿನ್ನೇನು ಎಂದಿರಾ. ಮುಂದೆಯೇ ಇರೋದು
ಸ್ವಾರಸ್ಯ. ನಾನು ಮರುದಿನ ಮತ್ತೆೆ ಸ್ಟೇಷನ್‌ಗೆ ಹೋದೆ. ಪಿಆರ್‌ಒಗಾಗಿ ಹುಡುಕಾಡಿದೆ. ಸಿಗಲಿಲ್ಲ. ಅಲ್ಲೇ ಕಾದಿದ್ದೆೆ. ಸ್ವಲ್ಪ ಹೊತ್ತಿನ ಬಳಿಕ ಬಂದರು. ನಾನು ಅವರಿಗೆ ನಮಸ್ಕಾರ ಹೇಳಿ, ಟಿಕೆಟ್ ಕನ್ಫರ್ಮ್ ಆದ ವಿಷಯ ತಿಳಿಸಿದೆ. ಥ್ಯಾಂಕ್ಸ್  ಹೇಳೋಣ ವೆಂದು ಬಂದೆ ಎಂದು ಹೇಳಿದೆ. ಅವರಿಗೆ ಆಶ್ಚರ್ಯ.

ಪರವಾಗಿಲ್ಲ ಬಿಡಿ ಅಂದವರೇ ಮತ್ತೊಂದು ವಿಷಯ ಹೇಳಿದರು. ‘ಕೆಲಸ ಆದ ಮೇಲೆ ಅದನ್ನು ತಿಳಿಸಿ ಹೋಗಲು ಬಂದವರು
ಬಹುಶಃ ನೀವೊಬ್ಬರೇ ಇರಬೇಕು.’ ಆಗಲೇ ನನಗೆ ಈ ‘ಕಾಮಾ ಪೂರ್ತೆ ಮಾಮಾ’ ಗಳ ಬಗ್ಗೆ ಗಮನ ಹರಿದಿದ್ದು. ಅದಾದ ಬಳಿಕ ಇದನ್ನು ಸತತವಾಗಿ ಗಮನಿಸುತ್ತಲೇ ಬಂದಿದ್ದೇನೆ. ಬಹಳ ವರ್ಷಗಳ ಹಿಂದಿನ ಮಾತು. ಹುಬ್ಬಳ್ಳಿ ಬಸ್ ಸ್ಟ್ಯಾಂಡಿನ ಬಳಿ ನನಗೊಬ್ಬ ವ್ಯಕ್ತಿ ಎದುರಾದ.

ನನ್ನ ಪರ್ಸ್ ಕಳವಾಗಿದೆ, ಊರಿಗೆ ಹೋಗಲು ದುಡ್ಡಿಲ್ಲ. ಸಹಾಯ ಮಾಡಿ. ಊರಿಗೆ ಹೋಗುತ್ತಲೇ ಕಳಿಸುತ್ತೇನೆ ಎಂದ. ಆತ ಹಣ ವಾಪಸ್ ಮಾಡುವ ಗ್ಯಾರಂಟಿಯೇನೂ ನನಗೆ ಇರಲಿಲ್ಲವಾದರೂ ಆ ಸಮಯಕ್ಕೆ ಹಣ ಕೊಟ್ಟೆ. ಅದು ವಾಪಸು ಬರಲಿಲ್ಲ
ಬಿಡಿ. ನನ್ನ ಇನ್ನೊಂದು ಅಭ್ಯಾಸವೆಂದರೆ ಆಟೊ, ಕ್ಯಾಬ್‌ನಲ್ಲಿ ಹೋಗುತ್ತಿರುವಾಗ ಡ್ರೈವರ್ ಜತೆ ಮಾತನಾಡುವುದು. ಹೀಗೊಮ್ಮೆ ಆಫೀಸಿನಿಂದ ರಾತ್ರಿ ಮನೆಗೆ ಆಟೊದಲ್ಲಿ ಬರುವಾಗ, ಡ್ರೈವರ್ ತನ್ನ ಕತೆಯನ್ನು ಕಣ್ಣಿಗೆ ಕಟ್ಟುವಂತೆ ಹೇಳಿದ. ನಾನೂ ಕೂಡ ಅದನ್ನು ನಂಬಿ ಆತನಿಗೆ ಒಂದಲ್ಲ ಎರಡಲ್ಲ, ಇಪ್ಪತ್ತು ಸಾವಿರದಷ್ಟು ಹಣ ಕೊಟ್ಟೆ. ಬಲೆಗೆ ಬಿದ್ದಿದ್ದು ಎಂದು
ಆಮೇಲೆ ನನಗೆ ಗೊತ್ತಾಗಿದ್ದು. ಆದರೂ ಸಮಸ್ಯೆಯಿಂದಾಗಿ ವಾಪಸು ಮಾಡಲು ಆಗಿರಲಿಕ್ಕಿಲ್ಲ ಅಂದುಕೊಂಡು ಸುಮ್ಮನಾಗು ತ್ತೇನೆ. ಆದರೆ ಪ್ರಶ್ನೆ ಏನೆಂದರೆ ಇಂಥವರು ದುಡ್ಡು ವಾಪಸ್ ಕೊಡದಿದ್ದರೂ ಪರವಾಗಿಲ್ಲ. ಆದರೆ ‘ಹೀಗ್ಹೀಗೆ ಆಯಿತು’ ಎಂದು ಹೇಳಿದರೂ ಸಾಕು. ಆದರೆ ಹಾಗಾಗುವುದೇ ಅಪರೂಪ.

ರಸ್ತೆೆಯಲ್ಲೋ, ಟ್ರಾಫಿಕ್‌ನಲ್ಲೋ ಸಿಕ್ಕು ‘ಊಟಕ್ಕೆ ದುಡ್ಡಿಲ್ಲ, ಊರಿಗೆ ಹೋಗಲು ಕಾಸಿಲ್ಲ, ಚಿಕಿತ್ಸೆೆಗೆ ಹಣವಿಲ್ಲ’ ಎಂಬಿತ್ಯಾದಿ ಕಾರಣ ಹೇಳಿದ ಎಷ್ಟೋ ಮಂದಿಗೆ ಹಣ ಕೊಟ್ಟಿದ್ದಿದೆ. ಆದರೆ ಅವೆಲ್ಲ ಕೊಟ್ಟವ ಕೋಡಂಗಿ…ಯ ಕಥೆ. ನಾನೊಬ್ಬನೇ ಅಂತಲ್ಲ. ಎಷ್ಟೋ ಜನರಿಗೆ ಈ ಅನುಭವ ಆಗಿರುತ್ತದೆ. ಇಂಥ ಪ್ರಸಂಗಗಳ ಬಗ್ಗೆ ನಮ್ಮ ಸಹೋದ್ಯೋಗಿಯೊಬ್ಬರಿಗೆ ತಿಳಿಸಿದಾಗ
ಅವರು ನಕ್ಕು, ‘ಒಳ್ಳೆಯವರು, ಅವರ ಉದ್ದೇಶ ಒಳ್ಳೆಯದು ಅಂದುಕೊಂಡು ಕೊಡಬೇಕು. ದುರುಪಯೋಗ ಮಾಡಿಕೊಂಡರೆ ಅದು ಅವರ ಹಣೆಬರಹ’ ಎಂದು ಹೇಳಿದರು. ಆ ಮಾತು ಕೂಡ ಇಂದಿಗೂ ನೆನಪಿದೆ.

ಇನ್ನು ಮತ್ತೊಂದು ವರ್ಗದವರು ಇರುತ್ತಾರೆ. ಅವರು ಅಪ್ಪಟ ಸ್ವಾರ್ಥಿಗಳು. ಮತಲಬಿಗಳು. ಏರಿದ ಏಣಿಯನ್ನು ಒದೆಯುವಂಥವರು. ಯಾವ ಮುಲಾಜು, ನಾಚಿಕೆ, ಹೇಸಿಗೆ, ಹಿಂಜರಿಕೆಯೂ ಅವರಿಗೆ ಇರುವುದಿಲ್ಲ. ಏನೂ ಇಲ್ಲದವರನ್ನು ಕರೆದು ಕೆಲಸವನ್ನು ಕೊಡಿಸಿರುವ ಮಹಾನುಭಾವರು ಇರುತ್ತಾರೆ. ಆದರೆ ಹೀಗೆ ಸೇರಿಕೊಂಡವರು ಮುಂದೆ ಅವರನ್ನೇ ಅಲ್ಲಿಂದ
ಒಕ್ಕಲೆಬ್ಬಿಸುತ್ತಾರೆ. ಹಿಂದೆಲ್ಲ ಯಾರಾದರೊಬ್ಬರು ಕೆಲಸದ ನಿಮಿತ್ತ ನಗರಕ್ಕೆೆ ಬಂದರೆ ನಿಧಾನಕ್ಕೆ ಅವರ ಕುಟುಂಬದವರನ್ನು,
ಬಂಧು ಬಳಗ, ಗೆಳೆಯರನ್ನು ಕರೆಸಿಕೊಂಡು ಆಶ್ರಯ ಕೊಡುವ ರೂಢಿ ಇತ್ತು. ಆದರೆ ಈಗ ಯಾರೂ ಯಾರನ್ನೂ ಇರಿಸಿಕೊಳ್ಳರು. ಹಾಗೆಯೇ ಯಾರೂ ಇನ್ನೊಬ್ಬರ ಮನೆಯಲ್ಲಿ ಇರಲೊಲ್ಲರು. ಅದೇಕೋ ಮನೆ ದೊಡ್ಡದಾಗುತ್ತಿದೆ. ಆದರೆ ಮನಸ್ಸು ಚಿಕ್ಕದಾಗುತ್ತಿದೆ. ಉಪಕಾರ ಪಡೆಯಲು ಹಿಂಜರಿಯೆವು.

ಸಹಾಯ ಮಾಡಲು ಮುಂದಾಗೆವು. ಇದು ಈ ಧಾವಂತ, ದುಗುಡ, ಅನಿಶ್ಚಿತತೆಯಿಂದ ಕೂಡಿದ ಬದುಕಿನ ಪರಿಣಾಮವೋ ಅಥವಾ ನಾವು ಅಷ್ಟರ ಮಟ್ಟಿನ ಸ್ವಾರ್ಥಿಗಳಾಗುತ್ತಿದ್ದೇವೆಯೋ ಒಂದೂ ಗೊತ್ತಾಗುವುದಿಲ್ಲ. ಪ್ರಾಣಿಗಳೇ ಗುಣದಲಿ ಮೇಲು ಮಾನವನದಕಿಂತ ಕೀಳು ಉಪಕಾರವ ಮಾಡಲಾರ….ಎಂಬ ಹಳೆಯ ಹಾಡು ನೆನಪಾಗುತ್ತದೆ. ಅದು ಎಷ್ಟು ಅರ್ಥಗರ್ಭಿತ,
ಇಂದಿಗೂ ಪ್ರಸ್ತುತ. ಜೀವನದಲ್ಲಿ ಮನುಷ್ಯರಿಗಲ್ಲದೆ ಮರಕ್ಕೆ ಬರುತ್ತವೆಯೇ ಸಮಸ್ಯೆ ? ಎಂಬ ಮಾತಿದೆ.

ನಾವು ಸಾಕಷ್ಟು ಸಂದರ್ಭಗಳಲ್ಲಿ ಇನ್ನೊಬ್ಬರ ಸಹಾಯ ಪಡೆಯಬೇಕಾಗುತ್ತದೆ. ಹಾಗೆಯೇ ಸಂದರ್ಭ ಬಂದರೆ ಮತ್ತೊಬ್ಬರಿಗೆ ನೆರವಾಗಬೇಕಾಗುತ್ತದೆ. ಆದರೆ ಪಡೆಯುವಾಗ ಇರುವ ಉಮೇದು ಕೊಡುವುದಕ್ಕೆ ಇರುವುದಿಲ್ಲ. ಹಾಗೆಂದು ಎಲ್ಲರಿಗೂ ಕೊಡಲು ಅಥವಾ ಯಾವುದಾದರೂ ರೀತಿಯಲ್ಲಿ ಸಹಾಯ ಮಾಡಲು ಸಾಧ್ಯವಾಗದಿರಬಹುದು. ಆದರೆ ನೆರವನ್ನುನೆನಪಿಸಿಕೊಳ್ಳುವ ಗುಣವಾದರೂ ಇರಬೇಕಲ್ಲವೆ. ನಮ್ಮಲ್ಲಿ ಈಗ ಅದಕ್ಕೂ ತತ್ವಾರ ಬಂದಿದೆ.

ಪರೋಪಕಾರಕ್ಕಾಗಿಯೇ ಮರಗಳು ಫಲ ಕೊಡುತ್ತವೆ; ನದಿಗಳು ಹರಿಯುತ್ತವೆ; ಹಸುಗಳು ಹಾಲು ಕೊಡುತ್ತವೆ; ಪರೋಪಕಾರ ಕ್ಕಾಗಿಯೇ ನನ್ನ ದೇಹ ಇರುವುದು. ಹೀಗೊಂದು ಸುಭಾಷಿತವಿದೆ. ಮೊದಲಿನ ಮೂರು ಫಲಾಪೇಕ್ಷೆ ಇಲ್ಲದೆಯೇ ಇತರರಿಗೆ ಅಂದರೆ ನಮಗೆ ನೆರವಾಗುವುದುಂಟು. ಆದರೆ ಮಾನವರ ವಿಷಯದಲ್ಲಿ ಇದೇ ಮಾತನ್ನು ಹೇಳುವುದು ಕಷ್ಟ. ಏಕೆಂದರೆ
ನಮಗೆ ಪಡೆಯುವುದು ಚೆನ್ನಾಗಿ ಗೊತ್ತು. ಆದರೆ ಕೊಡುವುದು ಗೊತ್ತಿಲ್ಲ. ಅಥವಾ ಕನಿಷ್ಠ ಉಪಕಾರ ಸ್ಮರಣೆಯ ಅಭ್ಯಾಸವೂ ಇಲ್ಲ. ಹಾಗೆಂದು ಇದೇನೂ ಹೊಸದಲ್ಲ. ಎರಡೂ ವರ್ಗದ ಜನರು ಮೊದಲೂ ಇದ್ದರು ಈಗಲೂ ಇದ್ದಾರೆ. ಆದರೆ ಈಗೀಗ ಉಪಕಾರವ ಮಾಡಲಾರ… ಬದುಕಿದರೆ ಸೈರಿಸಲಾರ.. ಎಂಬುವವವರ ಸಂತತಿ ಹೆಚ್ಚಾಗುತ್ತಿರುವುದೇ ಬೇಸರದ ವಿಷಯ.

ನಾಡಿಶಾಸ್ತ್ರ
ಹೇಳದೆ ಮಾಡುವವನು ಉತ್ತಮ
ಹೇಳಿ ಮಾಡುವವನು ಮಧ್ಯಮ
ಹೇಳಿಯೂ ಮಾಡದವನು ಅಧಮ
ಸಹಾಯ ಪಡೆದು ಉಪಕಾರ ಸ್ಮರಣೆ
ಮಾಡದವನು ಅಧಮಾಧಮ