Friday, 20th September 2024

ಕೋವಿಡ್-19 ಚೇತರಿಕೆ ಮತ್ತು ಸಹಾಯ: ಹೀಗೊಂದು ಚಿಂತನೆ

ಸಂಡೆ ಸಮಯ
ಸೌರಭ ರಾವ್ ಕವಯತ್ರಿ ಬರಹಗಾರ್ತಿ

ಕಳೆದ ಕೆಲವು ತಿಂಗಳುಗಳಲ್ಲಿ ಪ್ರಪಂಚದೆಲ್ಲೆಡೆ ಅನೇಕ ರೀತಿಯ ಅಸಮಾನತೆಗಳನ್ನು ಕೋವಿಡ್ – 19 ಮತ್ತಷ್ಟು ಉಲ್ಬಣ ಗೊಳಿಸಿದೆ. ಭಾರತದಲ್ಲೂ, ಮೊದಲೇ ಇದ್ದ ಅಸಮಾನತೆಗಳನ್ನು, ನಗರ ವ್ಯವಸ್ಥೆಗಳಲ್ಲಿ ರುವ ಬಿರುಕುಗಳನ್ನು ಮತ್ತು ಈ ವ್ಯವಸ್ಥೆಗಳ ಹೊರಗೆ ಬದುಕುತ್ತಿರುವ ಜನ ಹೇಗೆ ಸದ್ಯದ ಪರಿಸ್ಥಿತಿಯನ್ನು ಬಹುಮಟ್ಟಿಗೆ ತಮ್ಮಷ್ಟಕ್ಕೆ ತಾವೇ ಎದುರಿಸುತ್ತಿದ್ದಾರೆ
ಎಂಬುದನ್ನು ಕೋವಿಡ್ ತೋರಿಸಿ ಕೊಟ್ಟಿದೆ.

ರಚನಾತ್ಮಕ ಪ್ರತಿಕ್ರಿಯೆಗಳಲ್ಲಿ ಮತ್ತು ಯೋಜನೆಗಳ ಪ್ರಕ್ರಿಯೆಗಳಲ್ಲಿ ಜನ ಅಗೋಚರ ವಾಗುವುದು ಹೊಸತೇನಲ್ಲ. ಬಹಳಷ್ಟು
ಜನರಿಗೆ ಅನೇಕ ರೀತಿಯ ಅಪಾಯಗಳನ್ನು ಎದುರಿಸುವುದು ದಿನನಿತ್ಯದ ಅನುಭವ – ಸಾಮಾಜಿಕ ಭದ್ರತೆಯ ಕೊರತೆಯಿಂದಾಗಿ ಆರೋಗ್ಯದ ಸಮಸ್ಯೆೆಗಳು, ಆದಾಯ ಮತ್ತು ಆಹಾರ ಭದ್ರತೆಯ ಸಮಸ್ಯೆೆಗಳನ್ನು ಜನ ಯಾವುದೇ ದೃಢವಾದ ವ್ಯವಸ್ಥೆಯ ಸಹಾಯವಿಲ್ಲದೇ ಸ್ವತಃ ನಿಭಾಯಿಸುವುದು – ಸಾಂದರ್ಭಿಕವಾಗಿ ಈ ಅಸಮಾನತೆಗಳು ಬೇರೆಬೇರೆ ರೀತಿಗಳಲ್ಲಿ ಸ್ಪಷ್ಟವಾಗಿ ವ್ಯಕ್ತ ವಾಗುತ್ತವೆ.

ಆದರೆ ಕೋವಿಡ್ ಪರಿಸ್ಥಿತಿಯಲ್ಲಿ ಇರಬಹುದಾದ ವ್ಯತ್ಯಾಸವೆಂದರೆ, ಈಗಾಗಲೇ ಇರುವ ಈ ಎಲ್ಲ ಒತ್ತಡಗಳ ಜೊತೆಗೆ ದೇಶವ್ಯಾಪಿ ಹೆಚ್ಚಾಗಿರುವ ಅನಿಶ್ಚಿತತೆಯ ತಲ್ಲಣ. ಭಾರತದ ನಗರಗಳಲ್ಲಿ ಹೆಚ್ಚುತ್ತಿದ್ದ ಕೋವಿಡ್-19 ಪ್ರಕರಣಗಳ ಸಂಖ್ಯೆೆಗೆ ಪ್ರತಿಕ್ರಿಯೆಯಾಗಿ ಮಾರ್ಚ್2020ರಲ್ಲಿ ಕೇಂದ್ರ ಸರಕಾರ ವಿಪತ್ತು ನಿರ್ವಹಣಾ ಕಾಯ್ದೆ- 2005ಅನ್ನು ದೇಶದೆಲ್ಲೆಡೆ ಜಾರಿಗೊಳಿಸಿತು. ಇಂತಹ
ಜಾಗತಿಕ ಸಾರ್ವಜನಿಕ ಆರೋಗ್ಯ ದುಃಸ್ಥಿತಿ ಮೊದಲನೆಯ ದಲ್ಲದಿದ್ದರೂ, ಸ್ಥಳೀಯ ಸವಾಲುಗಳನ್ನು ಗುರುತಿಸಿ ಹೆಚ್ಚು ಹೆಚ್ಚು ಸಂಖ್ಯೆಯ ಜನರು ತಯಾರಿ ಮತ್ತು ಸಹಾಯದ ಮೂಲಕ ವಿಶ್ವ ಅರೋಗ್ಯ ಸಂಸ್ಥೆಯ ಸಲಹಾಸೂತ್ರಗಳನ್ನು ಪಾಲಿಸುವುದಕ್ಕೆ ಪೂರಕವಾದ ಸಾಂದರ್ಭಿಕ ಕಾರ್ಯನೀತಿ ಪ್ರತಿಕ್ರಿಯೆಗಳ ಕೊರತೆ ಇದ್ದೇ ಇದೆ.

ಕೋವಿಡ್ ಪ್ರತಿಕ್ರಿಯೆಯಾಗಿ, ಜನರಿಗೆ ಯಾವ ಪೂರ್ವ ಮಾಹಿತಿ ನೀಡದೇ, ತಯಾರಿಗೆ ಅವಕಾಶ ಕೊಡದೇ ಅಂತಾರಾಜ್ಯ ಸಂಚಾರಕ್ಕೆ ನಿರ್ಬಂಧ ಹೇರಿ ಇಡೀ ದೇಶದಲ್ಲಿ ಲಾಕ್‌ಡೌನ್ ಜಾರಿಗೊಳಿಸ ಲಾಯಿತು. ಮೊದಲ ದೇಶವ್ಯಾಪಿ ಲಾಕ್ಡೌನ್ ಕಳೆದು ಆರು ತಿಂಗಳ ಮೇಲಾಗಿದ್ದರೂ, ಹಂತಹಂತವಾಗಿ ರಾಜ್ಯಗಳ ಮಟ್ಟದಲ್ಲಿ ಅನ್ಲಾಕ್ ಪ್ರಕ್ರಿಯೆ ನಡೆದಿದ್ದು, ಕೆಲವು ನಗರ ಪ್ರದೇಶ ಗಳಲ್ಲಿ ಪುನಃ ಅನಿಯೋಜಿತ ಲಾಕ್ ಡೌನ್ ‌ಗಳು ನಡೆದು, ಇಷ್ಟಾದರೂ ಹೆಚ್ಚುತ್ತಲೇ ಇರುವ ಸೋಂಕಿತರ ಸಂಖ್ಯೆೆ ಮತ್ತು ಮುಂಬ ರುವ ದಿನಗಳ ಬಗ್ಗೆ ಅನಿಶ್ಚಿತತೆ ಮುಂದುವರೆದೇ ಇದೆ. ಕೋವಿಡ್-19 ಪ್ರತಿಕ್ರಿಯೆಯ ಕ್ರಮಗಳಿಂದ ಸಾರ್ವಜನಿಕ ಅರೋಗ್ಯ ದುಃ
ಸ್ಥಿತಿ ಇನ್ನೂ ಸುಧಾರಿಸದೇ ನಮ್ಮ ದೇಶದ ಬಹುತೇಕ ಜನರಿಗೆ ಮಾನವೀಯತೆಯ ದುಃಸ್ಥಿತಿಯಾಗಿ ಪರಿಣಮಿಸುತ್ತಿದೆ – ಇದಕ್ಕೆ  ಜನ ತೆರುತ್ತಿರುವ ಬೆಲೆಯನ್ನು ಸಮರ್ಪಕವಾಗಿ ಅಳೆಯುವ ಅಗತ್ಯವಿದೆ.

ಲಾಕ್‌ಡೌನ್ ಆರಂಭದ ವಾರಗಳಲ್ಲಿ, ದಿನಗೂಲಿ ಇಲ್ಲದೇ ಮತ್ತು ನಗರಗಳಲ್ಲಿ ಸಾಮಾಜಿಕ ಭದ್ರತೆ ಇಲ್ಲದೇ, ದೇಶದ ವಿವಿಧೆಡೆ ವಲಸೆಗಾರರು ತಮ್ಮ ತಮ್ಮ ಹಳ್ಳಿಗಳಿಗೆ ಕಾಲ್ನಡಿಗೆಯಲ್ಲೇ ಹೊರಟರು. ವಯಕ್ತಿಕವಾಗಿ ಎದುರಿಸಬೇಕಾದ ಎಲ್ಲ ಅಪಾಯಗಳ ಹೊರತಾಗಿಯೂ ನಡೆದ ಈ ಸಾಮೂಹಿಕ ವಲಸೆಯನ್ನು ಸ್ವಾತಂತ್ರ್ಯಾನಂತರ ದೇಶ ವಿಭಜನೆಗೊಂಡ ಸಮಯದಲ್ಲಿ ನಡೆದ ವಲಸೆಗೆ ಹೋಲಿಸಲಾಗಿದೆ. ಎಷ್ಟೋ ಜನರಿಗೆ ಹಿಂದಿರುಗಲು ತಮ್ಮದೇ ‘ಊರು’ ಎಂದು ಹೇಳಿಕೊಳ್ಳುವಂಥ ಪರಿಸ್ಥಿತಿಯೂ ಇರಲಿಲ್ಲ – ನಗರ ವ್ಯವಸ್ಥೆಗಳು ಇದನ್ನು ಪ್ರಮಾಣೀಕರಿಸದಿದ್ದರೂ, ಒಂದಿಡೀ ಪೀಳಿಗೆಯ ವಲಸೆ ನಗರಗಳನ್ನು ಅವರ ನೆಲೆಯನ್ನಾಗಿ ಮಾಡಿದೆ. ಆದಾಯ ನಷ್ಟ ಮಾತ್ರವಲ್ಲದೇ, ಶಿಶುಪಾಲನೆ, ರೋಗನಿರೋಧಕ ರಕ್ಷಣೆ, ತಾಯಂದಿರ ಆರೋಗ್ಯ, ತ್ಯಾಜ್ಯ ನಿರ್ವಹಣೆಯ ಸಿಬ್ಬಂದಿ ಎದುರಿಸುವ ಅಪಾಯಗಳು, ಮತ್ತು ತಂತ್ರಜ್ಞಾನದ ಲಭ್ಯತೆಯಲ್ಲಿರುವ ಅಸಮಾನತೆಯಿಂದ ಶಿಕ್ಷಣ ಕೈಗೆಟುಕದೇ ಇರುವುದು, ಇನ್ನಿತರ ಸಂಕಷ್ಟಗಳು ಎದುರಾಗಿವೆ.

ದೇಶದೆಲ್ಲೆಡೆ ನಗರಗಳಲ್ಲಿ ಆಹಾರ ಮತ್ತು ವಸತಿಗಾಗಿ ಪರಿಹಾರ ಮೂಲಸೌಕರ್ಯಗಳ ವ್ಯವಸ್ಥೆೆಯನ್ನು ಮಾಡಲಾಗಿದೆ, ಆದರೆ ರಾಜ್ಯಗಳ ಮಟ್ಟದಲ್ಲಿ ಆರ್ಥಿಕ ಹಾಗೂ ವಿತರಣಾ ವಿನ್ಯಾಸಗಳಿಗೆ ಇದೂ ಬಹುದೊಡ್ಡಸವಾಲಾಗಿದೆ. ಗುರುತಿನ ದಾಖಲೆಗಳ ಲಭ್ಯತೆ ಮತ್ತು ವರ್ಗಾವಣೆಯ ಸವಾಲುಗಳಿಂದ ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಬಿರುಕುಗಳಿರುವುದರಿಂದ, ಅದು
ಕಾರ್ಯರೂಪಕ್ಕೆ ಬರುತ್ತಿದ್ದಂತೆಯೇ ಅನೇಕ ಬಡ ದಿನಗೂಲಿ ನಾಗರಿಕರು ಈ ಸೌಕರ್ಯಗಳಿಂದ ವಂಚಿತ ರಾಗಿದ್ದಾರೆ. ಪರಿಹಾರದ ಅಗತ್ಯದ ಅಗಾಧತೆ ಮತ್ತು ವ್ಯವಸ್ಥೆಯಲ್ಲಿರುವ ಅಂತರಗಳನ್ನು ಗುರುತಿಸಿ, ಮೂಲಭೂತ ಪರಿಹಾರಗಳ ಅಗತ್ಯದ ಪೂರೈಕೆಗಾದರೂ ನಾಗರಿಕ ಗುಂಪುಗಳು ನಗರಗಳಲ್ಲಿ ಬೇರೆಬೇರೆ ಪ್ರಮಾಣಗಳಲ್ಲಿ ಕೆಲಸ ನಿರ್ವಹಿಸುತ್ತಿವೆ. ಈ ಪ್ರಯತ್ನ
ಪ್ರತ್ಯೇಕ ವ್ಯಕ್ತಿಗಳು ಮತ್ತು ಸ್ವಯಂಸೇವಕ ಗುಂಪುಗಳು, ಸಂಘ-ಸಂಸ್ಥೆಗಳನ್ನು ಒಳಗೊಂಡಿದೆ – ನಗರಗಳಲ್ಲಿ ಸ್ವಯಂಪ್ರೇರಿತ ನಾಗರಿಕರು, ಸಮುದಾಯ ಪಾಕಶಾಲೆ ಗಳು, ಕಾರ್ಯಕರ್ತರ ಗುಂಪುಗಳು, ಅನೌಪಚಾರಿಕ ವಸಾಹತುಗಳಲ್ಲಿರುವ ನಿವಾಸಿಗಳ ಒಕ್ಕೂಟಗಳು ಮತ್ತು ಮನೆಕೆಲಸದಲ್ಲಿ ಸಹಾಯ ಮಾಡುವ ಕೆಲಸಗಾರರು.

ಪರಿಹಾರ ಕಾರ್ಯದ ಪ್ರಭಾವದ ಅನಿಶ್ಚಿತತೆಯಿಂದಾಗಿ, ಸಂಪರ್ಕವನ್ನು ವ್ಯಾಪಕಗೊಳಿಸಲು ಮತ್ತು ಅತ್ಯಂತ ತುರ್ತಾಗಿ ನೆರವಿನ ಅಗತ್ಯವಿರುವ ಜನರನ್ನು ಗುರುತಿಸಲು ರಾಜ್ಯ ಈ ಎಲ್ಲ ವ್ಯವಸ್ಥೆಗಳನ್ನೂ ಅವಲಂಬಿಸಿದೆ. ವಸತಿ ಹಕ್ಕುಗಳ ಕಾರ್ಯಕರ್ತರಾದ ಆನಂದ್ ಲಖನ್, ಅಬ್ದುಲ್ ಶಕೀಲ್ ಮತ್ತು ಐಸ್ಯಾಕ್ ಅರುಲ್ ಸೆಲ್ವ ಇಂದೋರ್, ಭೋಪಾಲ್, ಜಬಲ್ಪುರ್, ದೆಹಲಿ ಮತ್ತು ಬೆಂಗಳೂರಿನಲ್ಲಿರುವ ಪರಿಸ್ಥಿತಿಗಳ ಬಗ್ಗೆೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದರೆ ಮತ್ತು ದಿನನಿತ್ಯ ದ ಜೀವನ, ಜೀವನೋಪಾಯ ಮತ್ತು ಸ್ಥಳಾಂತರಗಳಿಗೆ ಸಂಬಂಧಿಸಿದವಿ ವಿಧ ಸವಾಲುಗಳನ್ನು ಗುರುತಿಸಿದ್ದಾರೆ. ನಗರದಿಂದ
ಹಳ್ಳಿಗಳಿಗೆ ಜನ ವಲಸೆ ಹೋಗುವುದು ರಾಷ್ಟ್ರೀಯ ಮತ್ತು ಜಾಗತಿಕ ಮಾಧ್ಯಮಗಳಲ್ಲಿ ದಾಖಲಿಸಲಾಗಿರುವುದರ ಜತೆಗೆ, ಆದಾಯ ವಿಲ್ಲದಿದ್ದರೂ ಬಾಡಿಗೆ ಕಟ್ಟುವ ಸವಾಲುಗಳ ಜೊತೆಗೆ, ಅನೌಪಚಾರಿಕ ವಸಾಹತುಗಳಲ್ಲಿರುವ ನಿವಾಸಿಗಳನ್ನು ವಿಶ್ವ ಮಾನವ ಹಕ್ಕುಗಳ ಕಾಯ್ದೆಯನ್ನು ಉಲ್ಲಂಘಿಸಿ ಹೊರದೂಡುತ್ತಿರುವ ಪ್ರಕರಣಗಳು ಮುಂದುವರಿಯುತ್ತಲೇ ಇವೆ.

ಆದಷ್ಟೂ ಮನೆಯಲ್ಲೇ ಇರಬೇಕು, ತೀರಾ ಅಗತ್ಯವಿದ್ದಾಗ ಮಾತ್ರ ಹೊರಗೆ ಹೋಗಬೇಕು ಎಂಬ ರಾಷ್ಟ್ರೀಯ ಮಟ್ಟದ ಆದೇಶಗಳ ಹೊರತಾಗಿಯೂ, ಮತ್ತು ಕೋವಿಡ್ ಪರಿಸ್ಥಿತಿಯ ಸಮಯದಲ್ಲಿ ಬಾಡಿಗೆ ವಸತಿಯಿಂದ ಜನರನ್ನು ಹೊರಹಾಕುವ ವಿರುದ್ಧ ಇರುವ ಸಲಹಾಸೂತ್ರ ಗಳ ಹೊರತಾಗಿಯೂ ಇದು ನಡೆಯುತ್ತಿದೆ. ಇದಷ್ಟೇ ಅಲ್ಲದೇ, ಆದಾಯವಿಲ್ಲದ ನಿಮಿತ್ತ ರೇಷನ್ನಿನ ಲಭ್ಯತೆಯಿಂದ ಹಿಡಿದು ಕೋವಿಡ್ ಪರಿಸ್ಥಿತಿಯಲ್ಲಿ ಆರೋಗ್ಯ ಸಮಸ್ಯೆಗಳ ನಿರ್ವಹಣೆ – ನೈರ್ಮಲ್ಯ ಮತ್ತು ಅನೌಪಚಾರಿಕ ವಸಾಹತುಗಳಲ್ಲಿ ಪ್ರತ್ಯೇಕತೆಗೆ ಸೌಕರ್ಯ, ತ್ಯಾಾಜ್ಯ ನಿರ್ವಹಣೆ ಮತ್ತು ಸ್ವಚ್ಛತಾ ಕರ್ಮಿಗಳಿಗೆ ರಕ್ಷಣೆಯಂಥಾ ವಿಷಯಗಳು ಗೌರವಯುತ ಜೀವನದ ಹಕ್ಕಿಗೆ ಅಪಾಯವೊಡ್ಡುತ್ತಿವೆ. ಆದಾಯ ಮೂಲದ ನಷ್ಟ ಅನೇಕ ಕ್ಷೇತ್ರಗಳಲ್ಲಾಗುತ್ತಿದ್ದರೂ,  ಅನೌಪಚಾರಿಕ

ಕೆಲಸಗಳಲ್ಲಿರುವವರ ಮೇಲೆ ಗಾಢವಾಗಿ ನಕಾರಾತ್ಮಕ ಪರಿಣಾಮ ಬೀರುತ್ತಿದೆ. ಲಾಕ್‌ಡೌನ್ ಸಮಯದಲ್ಲಿ ಕೆಲಸ ಕಳೆದು ಕೊಂಡಿರುವ, ಕೆಲಸ ಮಾಡಿದ್ದರೂ ಸಂಬಳವಿಲ್ಲದ, ಮತ್ತು ಕೋವಿಡ್ ಶ್ರೀಮಂತ ವರ್ಗದ ಮೂಲಕವೇ ಹರಡಿದ್ದರೂ ಅನೌಪ ಚಾರಿಕ ಕಾರ್ಯಕರ್ತರ ವಿರುದ್ಧ ಇರುವ ಪೂರ್ವಾಗ್ರಹಪೀಡಿತ ದೃಷ್ಟಿಕೋನದ ಬಗ್ಗೆ ಬಹುತೇಕ ಕೆಲಸಗಾರರು ವರದಿ ಮಾಡಿ ದ್ದಾರೆ. ಜೀವನೋಪಾಯಕ್ಕೆ ಸಂಬಂಧಪಟ್ಟ ಸಮಸ್ಯೆಗಳಿಗೆ ಕಾರಣ ಹಲವು – ಲಾಕ್‌ಡೌನ್ ಸಮಯದಲ್ಲಿ ಕೆಲಸಕ್ಕೆ ಉಂಟಾದ ಅಡೆತಡೆಗಳು, ಅನ್ಲಾಕ್ ಪ್ರಕ್ರಿಯೆ ನಂತರ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಿರುವುದರಿಂದ ಉಂಟಾಗುತ್ತಿರುವ ಅನಿಶ್ಚಿತತೆ. ಸ್ಥಳೀಯ ಅಧಿಕಾರಿಗಳ ಪ್ರಕಾರ ನಗರಗಳು ಮತ್ತು ಇತರ ಪ್ರದೇಶಗಳಲ್ಲಿ ರಸ್ತೆ ಬದಿಯ ವ್ಯಾಪಾರಿಗಳು ಎದುರಿಸುತ್ತಿರುವ ಸವಾಲುಗಳೇ ಬೇರೆ. ಅನೌಪಚಾರಿಕ ಸಂಚಾರ ವ್ಯವಸ್ಥೆಯ ಅನೇಕ ಆಟೋ ಮತ್ತು ಟ್ಯಾಕ್ಸಿ ಚಾಲಕರು ರಸ್ತೆ ಬದಿಯ ವ್ಯಾಪಾರ ಶುರುಮಾಡಬೇಕೆಂದು ಪರಿಗಣಿಸುತ್ತಿದ್ದಾರೆ.

ಚಮ್ಮಾರರು, ಮೆಹಂದಿ ಕಲಾವಿದರು, ಹಬ್ಬಗಳ ಸಮಯದಲ್ಲಿ ಕಾಣಿಸಿಕೊಳ್ಳುವ ದೇವರ ಪ್ರತಿಮೆಗಳನ್ನು ರೂಪಿಸುವ ಕಲಾವಿ ದರು ನಗರಗಳಲ್ಲಿ ಅನ್ಲಾಕ್ ಪ್ರಕ್ರಿಯೆ ಮುಂದುವರಿದಿದ್ದರೂ ಕೆಲಸ ಪುನರಾರಂಭಿಸುವುದು ಕಷ್ಟವಿದೆ. ‘ಔಪಚಾರಿಕ’ ಸಂಸ್ಥೆ ಗಳಲ್ಲಿ ಅನೌಪಚಾರಿಕವಾಗಿ (ತಾತ್ಕಾಲಿಕ/ಪಾರ್ಟ್ ಟೈಮ್/ಕಾಂಟ್ರಾಕ್ಟ್‌) ಉದ್ಯೋಗದಲ್ಲಿರುವ ಎಷ್ಟೋ ಜನ ಕೆಲಸ ಕಳೆದು ಕೊಳ್ಳುತ್ತಿದ್ದಾರೆ. ಮನೆಕೆಲಸಗಳಿಗೆ ಸಹಾಯ ಮಾಡುವವರು, ಅದರಲ್ಲೂ ಹೆಂಗಸರು, ಕೆಲಸಕ್ಕೆ ಮರಳುವುದಕ್ಕೆ ಮತ್ತು ಸರಿಯಾಗಿ ಸಂಬಳ ಪಡೆಯುವುದಕ್ಕೆೆ ಕಷ್ಟ ಪಡುತ್ತಿದ್ದಾರೆ. ಸಮಯ ಕಳೆದಂತೆ ಈ ಪರಿಸ್ಥಿತಿ ಬದಲಾಗಬಹುದು ಎಂದು ಕೆಲವರು ನಂಬಿ ದರೂ, ಅನೇಕರು ಆದಾಯಕ್ಕಾಗಿ ಬೇರೆ ಕೆಲಸ ಗಳನ್ನು ಹುಡುಕುತ್ತಿದ್ದಾರೆ.

ಕೇಂದ್ರ ಸರಕಾರ ಘೋಷಿಸಿರುವ ಆರ್ಥಿಕ – ಪ್ಯಾಕೇಜ್, ರೇಷನ್, ಉಚಿತ ಧಾನ್ಯ ಪೂರೈಕೆ, ರಸ್ತೆ ಬದಿ ವ್ಯಾಪಾರಕ್ಕೆ ಮತ್ತು ಬಾಡಿಗೆ ಸಂಕೀರ್ಣಗಳ ವಸತಿಗೆ ಸಾಲದ ವ್ಯವಸ್ಥೆ ಮಾಡುವ ಮೂಲಕ ಅನೌಪಚಾರಿಕ ಉದ್ಯೋಗಸ್ಥರು ಮತ್ತು ವಲಸಿಗರನ್ನು ಪ್ರಸ್ತಾಪಿಸಿ ದ್ದರೂ, ಅದನ್ನು ಕೂಲಂಕಷವಾಗಿ ನೋಡಿದಾಗ ಈ ವ್ಯವಸ್ಥೆಯಲ್ಲಿ – ಮಾಹಿತಿಯ ಕೊರತೆ ಮತ್ತು ಗುರುತಿನ ದಾಖಲೆಗಳಿಲ್ಲ
ದಿರುವವರನ್ನು ಗುರುತಿಸುವ ಸವಾಲುಗಳು ಮತ್ತು ಆರ್ಥಿಕವಾಗಿ ಹಿನ್ನಡೆ ಅನುಭವಿಸುತ್ತಿರುವ ಜನರನ್ನು ಸಾಲದ ಒತ್ತಡಕ್ಕೆ ತಳ್ಳುವ ಅಪಾಯದಂಥ ಕೊರತೆಗಳಿರುವುದು ಕಂಡುಬರುತ್ತದೆ.

ಈ ಹಿನ್ನೆಲೆಯಲ್ಲಿ, ನಗರಗಳಲ್ಲಿರುವ ಕಾರ್ಯಕರ್ತರು ಈ ಎಲ್ಲಾ ಸವಾಲುಗಳನ್ನು ಪರಿಗಣಿಸಿ ಪರಿಹಾರ ಮತ್ತು ಚೇತರಿಕೆಗೆ ಸ್ಥಳೀಯವಾಗಿ ಪರಿಣಾಮಕಾರಿಯಾಗಬಲ್ಲ ಉತ್ತರಗಳ ಬಗ್ಗೆೆ ಚಿಂತನೆ ನಡೆಸಿದ್ದಾರೆ. ದೆಹಲಿಯಲ್ಲಿ ಗಲಭೆಯಿಂದ ಪರಿಣಾಮ ಕ್ಕೊಳಗಾದ ಹೆಂಗಸರು ಸಣ್ಣ ಕೈಗಾರಿಕೆಗಳಿಗೆ ಪಿಪಿಇ ಕಿಟ್‌ಗಳ ನಿರ್ಮಾಣದಲ್ಲಿ ತೊಡಗಿದ್ದಾರೆ. ಇಂದೋರಿನಲ್ಲಿ ಸಾಬೂನು ತಯಾರಿಸುವ ಹಲವಾರು ತಂತ್ರಜ್ಞಾನ ಗಳನ್ನು ಹಂಚಿಕೊಳ್ಳುವ ಹೊಸ ದಾರಿಗಳನ್ನು ಹುಡುಕುತ್ತಿದ್ದಾರೆ. ಬೆಂಗಳೂರಿನಲ್ಲಿ,
ಸ್ವಸಹಾಯ ಗುಂಪುಗಳ ಮಾದರಿಯಲ್ಲಿ ಸಂಕಷ್ಟದಲ್ಲಿರುವ ಜನರಿಗೆ ಆರ್ಥಿಕ ಸಹಕಾರ ಸಂಸ್ಥೆಗಳ ಜೊತೆ ಸಂಪರ್ಕ ಕಲ್ಪಿಸುವ ಪ್ರಯತ್ನ ನಡೆದಿದೆ. ದೇಣಿಗೆ ಸಹಾಯ ಹಿಂದೆಸರಿಯುತ್ತಿದ್ದಂತೆ, ಪರಿಹಾರ ಮತ್ತು ಜೀವನೋಪಾಯವನ್ನು ಸುಸ್ಥಿರ ವಾಗಿರಿಸಬಲ್ಲ ತುರ್ತು ಅಗತ್ಯಗಳನ್ನು ಪೂರೈಸಲು – ವ್ಯವಸ್ಥಿತ ಬದಲಾವಣೆ ಮತ್ತು ನಗರದ ಸಾಮಾಜಿಕ ರಕ್ಷಣೆಯನ್ನು ಕಾಯ್ದುಕೊಂಡು ಯೋಜನೆಗಳನ್ನು ರೂಪಿಸಬೇಕಾಗುತ್ತದೆ. ಈ ವರ್ಷ ಮುಂದೆ ಬರುವ ಬದಲಾವಣೆಗಳ ಸಾಧ್ಯತೆಯನ್ನು ತೋರಿಸಿದೆ ಎನ್ನುವು ದಾದರೆ, ಬದಲಾವಣೆಯ ಮುಂದಾಳತ್ವ ವಹಿಸುವವರು ಜನರ ಧ್ವನಿಯನ್ನು, ಅವರ ಅಗತ್ಯ ಮತ್ತು ಹಕ್ಕುಗಳನ್ನು ಕೋವಿಡ್ ಚೇತರಿಕೆ ಕಾರ್ಯಗತಿಯ ಕೇಂದ್ರಬಿಂದುವನ್ನಾಗಿ ಮಾಡಿಕೊಳ್ಳಬೇಕು.

ಇಂಡಿಯನ್ ಇನ್ಸ್ಟಿಟ್ಯೂಟ್ ಫಾರ್ ಹ್ಯೂಮನ್ ಸೆಟಲ್ಮೆಂಟ್ಸ್‌‌ನಲ್ಲಿ ಸಂಶೋಧಕಿಯಾಗಿರುವ ರುಚಿಕಾ ಲಾಲ್, ವಸತಿ ಹಕ್ಕುಗಳ ಕಾರ್ಯಕರ್ತರಾದ ಆನಂದ್ ಲಖನ್, ಅಬ್ದುಲ್ ಶಕೀಲ್ ಮತ್ತು ಐಸ್ಯಾಕ್ ಅರುಲ್ ಸೆಲ್ವ ಅವರ ಒಳನೋಟದ ಸಹಾಯದಿಂದ ಬರೆದಿರುವ ಲೇಖನದ ಅನುವಾದ.